Sunday, January 6, 2013

ಯಾರ್ರೀ ಮದ್ದೂರ್ , ಬೆಂಗಳೂರ್ ............!!! ಕಾಲಾಯ ತಸ್ಮೈ ನಮಃ .


ಚಿತ್ರ ಕೃಪೆ ಅಂತರ್ಜಾಲ 


ಅದೊಂದು ದಿನ ಕಾರ್ಯ ನಿಮಿತ್ತ ಮಳವಳ್ಳಿ ಗೆ ಹೋಗಿದ್ದೆ.  ಕಾರ್ಯ ಮುಗಿಸಿ  ವಾಪಸ್ಸು ಬರಲು ಬಸ್ ನಿಲ್ದಾಣಕ್ಕೆ ಬಂದೆ. ಅದೇನೋ ಕಾಣೆ ಅವತ್ತು ಮೈಸೂರಿನ ಕಡೆಗೆ ತೆರಳುವ ಬಸ್ಸುಗಳು ಮಾಯವಾಗಿದ್ದವು. ಸರಿ ಇನ್ನೇನು ಎನ್ನುವಷ್ಟರಲ್ಲಿ ಮಳವಳ್ಳಿ ಯಲ್ಲಿ ನನ್ನ ಜೊತೆ ಓದುತ್ತಿದ್ದ ಬಾಲ್ಯದ ಗೆಳೆಯನೊಬ್ಬ ಸಿಕ್ಕ.  ಅದು ಇದು ಮಾತಾಡುತ್ತಾ ನಿಂತೆವು. ಅಷ್ಟರಲ್ಲಿ ಒಂದು ಖಾಸಗಿ ಬಸ್ಸು ಕೊಳ್ಳೆಗಾಲದಿಂದ ಬೆಂಗಳೂರಿಗೆ ತೆರಳಲು ಮಳವಳ್ಳಿ ಬಸ್ ನಿಲ್ದಾಣಕ್ಕೆ ಬಂತು. ಖಾಸಗಿ ಬಸ್ಸುಗಳು ಬಂದರೆ ಅದರ  ಏಜೆಂಟರುಗಳು  ಪರಾಕು ಹೇಳಲು ತೊಡಗುತ್ತಾರೆ. ಈ ಬಸ್ಸು ಬಂದಾಗಲೂ  ಯಾರ್ರೀ ಮದ್ದೂರ್, ಬೆಂಗಳೂರ್ , ಮದ್ದೂರ್ ಬೆಂಗಳೂರ್  ಅಂತಾ ನಾಲ್ಕಾರು ಏಜೆಂಟ್ ಗಳು   ಕೂಗಲು ತೊಡಗಿದರು . ನನ್ನ ಗೆಳೆಯ ಅಲ್ಲಿ ಕೂಗುತ್ತಿದ್ದ ಒಬ್ಬನನ್ನು ತೋರಿಸಿ , ಲೋ ಬಾಲು  ಅವನು ನಿನಗೆ ಗೊತ್ತಿಲ್ವಾ?? ಅಂದಾ. ಸರಿಯಾಗಿ ಗುರುತು ಸಿಗಲಿಲ್ಲ  , ಇಲ್ಲಾ ಕಣೋ ಗುರುತು ಸಿಗಲಿಲ್ಲಾ ಅಂದೇ .
 ಲೇ ಗುಗ್ಗು  ಅವನು ಅದೇ ನಮ್ಮ  ಸ್ಕೂಲಿನಲ್ಲಿ ಓದುತ್ತಿದ್ದ  ಅದೇ  "ಬೊಂಬಾಟ್  ಸುರೇಶ"  [ ಹೆಸರು ಬದಲಿಸಲಾಗಿದೆ] ಕಣೋ 

ಆ ಹೌದಾ  ಲೇ ಅವನ್ಯಾಕೋ ಹಿಂಗಾದ  ??? ಅಂತಾ ಉದ್ಗಾರ ಹೊರಟಿತು ನನ್ನಿಂದಾ

ಅದೇ ಕಣೋ   "ಕಾಲಾಯ  ತಸ್ಮೈ ನಮಃ"  ಅದೇ ನಿನಗೆ ಗೊತ್ತಲ್ವಾ ಅವನು ಹೈಸ್ಕೂಲಿನಲ್ಲಿ ಹೆಂಗೆ ಮೆರೀತಿದ್ದ ಅಂತಾ ಈಗ ನೋಡು ಅವನ ಗತಿ, ಅಂತಾ ನಿಟ್ಟುಸಿರು ಬಿಟ್ಟ.

 ಬನ್ನಿ ನಮ್ಮ  "ಬೊಂಬಾಟ್  ಸುರೇಶ"ನ ಪರಿಚಯ ಮಾಡಿಕೊಡುತ್ತೇನೆ.  ಈ ಸುರೇಶ  ನಮ್ಮ ಜೊತೆ ಅದೇ ಹೈಸ್ಕೂಲಿನಲ್ಲಿ ಓದುತಿದ್ದ ಒಂದು ವರ್ಷದ ಹಿರಿಯ,ಆ ದಿನಕ್ಕೆ  ನಮ್ಮ ಹೈಸ್ಕೊಲಿನ ಹೀರೋ ಅಂತಾನೆ ಹೇಳಬಹುದು.

ನಮ್ಮ ಬೊಂಬಾಟ್ ಸುರೇಶನ ತಂದೆ  ವ್ಯಾಪಾರಿಯಾಗಿದ್ದು  ಅನಕ್ಷರಸ್ತರು ಒಬ್ಬ ಮಗ ವಿದ್ಯೆ  ಕಲಿಯದೇ  ತನ್ನ ಜೊತೆ ಅಂಗಡಿ ನಡೆಸುತಿದ್ದ, ಇನ್ನು ಕಿರಿಯ ಮಗ  ಇವನಾದರೂ  ಚೆನ್ನಾಗಿ ಓದಿ  ಮುಂದೆ ಬರಲಿ ಅಂತಾ ಇವನಿಗೆ ಮುದ್ದಿನಿಂದ ಕೇಳಿದಷ್ಟು ಹಣ ಕೊಟ್ಟು ಸ್ಕೂಲಿಗೆ ಕಳುಹಿಸುತ್ತಿದ್ದರು. ಇವನಿಗೆ  ಎಲ್ಲಿಂದಾ  ಅಷ್ಟು ದುಡ್ಡು ಬರುತ್ತಿತ್ತೋ ಕಾಣೆ  ಐವತ್ತು, ನೂರು  ರೂಪಾಯಿ ಲೆಕ್ಕಾ ಇರಲಿಲ್ಲ . ಆದರೆ ಈ ಪುಣ್ಯಾತ್ಮಾ ಅಂದಿಗೆ ಹೈಸ್ಕೂಲಿನ ದಾದಾ ಆಗಿದ್ದ. ಬೆಳಿಗ್ಗೆ ಒಂದು ಡ್ರೆಸ್ಸು, ಮಧಾಹ್ನ ಒಂದು ಡ್ರೆಸ್ಸು ಹಾಕಿ ಕೊಂಡು ಹುದುಗಿಯರನ್ನು   ಚುಡಾಯಿಸುತ್ತಾ,  ಮಜಾ ಮಾಡುತ್ತಿದ್ದ. ಈ ವಾರ  ಬಿಡುಗಡೆಯಾದ  ಹೊಸ ಚಲನ ಚಿತ್ರಗಳಲ್ಲಿ  ಕಾಣುವ ಹೊಸ ತರಹದ  ಡ್ರೆಸ್ ಗಳನ್ನ   ಮುಂದಿನ ವಾರದೊಳಗೆ ಹಾಕಿಕೊಂಡು ಬರದಿದ್ದರೆ  ಅವನಿಗೆ ನಿದ್ದೆ ಬರುತ್ತಿರಲಿಲ್ಲ  ಯಾವ ಬಣ್ಣದ ಡ್ರೆಸ್ ಹಾಕಿದರೂ ಅದಕ್ಕೆ ಮ್ಯಾಚ್ ಆಗುವ ಬಣ್ಣ ಬಣ್ಣದ ಬೂಟು, ವಾಚುಗಳನ್ನು   ಹಾಕುತ್ತಿದ್ದ.  ಕಿರಿಯ ಮಗ ಎಂಬ ಪ್ರೀತಿಯಿಂದ ಇವೆಲ್ಲಕ್ಕೂ ಅವರ ಮನೆಯಲ್ಲಿ ಎಲ್ಲಕ್ಕೂ  ಮಾಫಿ ಇತ್ತು. ಬಹುಷಃ   ಕಾಲೇಜು ಹಂತದಲ್ಲಿ  ಆಡುವ ಆಟಗಳನ್ನು ಹೈಸ್ಕೂಲ್ ಹಂತದಲ್ಲಿಯೇ  ಆಡಿ  ಮುಗಿಸಿದ್ದ ಈ ಭೂಪ.ಆ ಕಾಲಕ್ಕೆ ಬಹಳ  ಅಡ್ವಾನ್ಸ್ ಆಗಿದ್ದ ಈ ಹುಡುಗ . ಮೊದಲೇ ಅದು ಗಂಡು ಹಾಗು ಹೆಣ್ಣು ಮಕ್ಕಳು ಜೊತೆಯಾಗಿ ಕಲಿಯುತ್ತಿದ್ದ ಶಾಲೆ, ಇವನ ಆಟೋಟಗಳಿಗೆ ಕಡಿವಾಣವೇ ಇರಲಿಲ್ಲ .ಇವನ ಜೊತೆ ಯಾವಾಗಲೂ ಒಂದಷ್ಟು ಹುಡುಗರ  ದಂಡೆ ಇರುತ್ತಿತ್ತು. ಇವನು ರಾಜ ನಂತೆ  ಅವರಿಂದ ಸೇವೆ ಪಡೆಯುತ್ತಿದ್ದ.ಇವನು ನೀಡುವ ಕಾಸಿನಿಂದ  ಆ ಹುಡುಗರು ಇವನನ್ನು ಬಾಸ್ ಅಂತಿದ್ದರು .ಇವನ ಬೈಕ್ ಶೋಕಿ  ಆಗಲೇ ಹೆಸರುವಾಸಿಯಾಗಿತ್ತು. ಇವನ ಬಿಂದಾಸ್ ಜೀವನ ಶೈಲಿ ನೋಡಿ ಹೈಕಳು "ಬೊಂಬಾಟ್ ಸುರೇಶ "ಅಂತಾ ಕರೆಯಲು ಶುರುಮಾಡಿದ್ದರು.



ಚಿತ್ರ ಕೃಪೆ ಅಂತರ್ಜಾಲ 

ಇಂತಹ ನಮ್ಮ ಹೀರೋ ಹಿಂಗ್ಯಾಕೆ ಆದಾ ?? ಎನ್ನುವ ಅಚ್ಚರಿ ಆಯಿತು, ನನ್ನ ಗೆಳೆಯ ಲೇ ಬಾರಲೇ ನಿನ್ನ ಫ್ರೆಂಡ್ ಬಂದವನೇ ಮಾತಾಡಿಸುವಂತೆ  ಅಂತಾ ಅಲ್ಲೇ "ಯಾರ್ರೀ ಮದ್ದೂರ್, ಬೆಂಗಳೂರ್ , ಮದ್ದೂರ್ ಬೆಂಗಳೂರ್ ಅಂತಾ ಕೂಗುತ್ತಿದ್ದ "ಬೊಂಬಾಟ್ ಸುರೇಶ "ನನ್ನು  ಕರೆದುಕೊಂಡು ಬಂದಾ  , ನನ್ನನ್ನು ನೋಡಿ  ಸುರೇಶ ಒಮ್ಮೆಲೇ  ಗರ ಬಡಿದಂತೆ ಆಗಿದ್ದ  ಕಣ್ಣಲ್ಲಿ ನೀರು ತುಂಬಿ ಕೊಂಡು ನಿಂತಾ. ಅವನನ್ನು ಸಮಾಧಾನ ಮಾಡಿ ಅಲ್ಲಾ ಕಣೋ ಸುರೇಶ ಏನೋ ಇದು ನೀನು ಹೀಗೆ !! ಇದೆಲ್ಲಾ  ಏನುಕಥೆ? ಅಂತಾ ಕೇಳಿದೆ .  ಬಾ ಕಾಫಿ ಕುಡಿಯೋಣ ಬಹಳ ದಿನಗಳ ಭೇಟಿ ನಮ್ಮದು ಅಂತಾ ಅಲ್ಲೇ ಇದ್ದ ಒಂದು ಹೋಟೆಲ್  ಗೆ ಹೋದೆವು.

ಹೋಟೆಲ್ ನಲ್ಲಿ ತನ್ನ ವಿಚಾರ ಬಿಚ್ಚಿಟ್ಟ  ಸುರೇಶ,ನೋಡು ಬಾಲೂ ನಿನಗೆ ಗೊತ್ತಲ್ಲಾ ನಾನು ಹೇಗೆ ಇದ್ದೆ ಅಂತಾ , ಹಾಗೆ ಮೆರೆದ ನಾನು  ಹತ್ತನೇ ಕ್ಲಾಸ್  ಡುಮ್ಕಿ ಹೊಡೆದೆ. ನೀವೆಲ್ಲಾ ಮುಂದೆ ಹೋದಿರಿ. ಎಷ್ಟು ಸರಿ ಕಟ್ಟಿದರೂ ಪಾಸಾಗಲಿಲ್ಲ  , ನಿನಗೆ ಗೊತ್ತಲ್ಲಾ  ಆ ಹುಡುಗಿ ಅವಳನ್ನು ಬಹಳ ಪ್ರೀತಿಸುತ್ತಿದ್ದೆ ,  ಅವಳಿಗಾಗಿ  ಬಹಳ ದುಡ್ಡು ಖರ್ಚು  ಮಾಡಿದೆ  ಆದರೆ ಅವಳ ಅಪ್ಪಾ ಅಮ್ಮಾ  ನಮ್ಮದೇ ಪಂಗಡ ಆದರೂ ನನಗೆ ಆ ಹುಡುಗಿಯನ್ನು ಕೊಡಲಿಲ್ಲ , ನಾನು ಹತ್ತನೇ ಕ್ಲಾಸ್ ಡುಮ್ಕಿ ಎನ್ನುವ  ಕಾರಣ ನೀಡಿ  ಅವಳಿಗೆ ಬೇರೆ ಮದುವೆ  ಮಾಡಿದರು. ಅಷ್ಟರಲ್ಲಿ ನನ್ನ ಅಣ್ಣಾ ಅತ್ತಿಗೆ ಹಾಗು ಅಪ್ಪನೊಡನೆ ಜಗಳ ಆಗಿ ನನ್ನ ಪಾಲಿನ ಆಸ್ತಿಯನ್ನು  ಭಾಗ ಮಾಡಿಸಿದೆ.  ನನ್ನ ಪಾಲಿಗೆ ಲಕ್ಷಾಂತರ ಮೌಲ್ಯದ  ಆಸ್ತಿ ಹಾಗು ಹಣ ಬಂತು .ಆಗ ಶುರು ಆಯ್ತು  ಮತ್ತೊಂದು ಲವ್ವು,  ಒಬ್ಬಳು ಟೀಚರು ಗುರು ತುಂಬಾ ಚೆನ್ನಾಗಿದ್ದಳು,  ಅವಳನ್ನು ರಾಣಿ  ತರಹ  ಮೆರೆಸಿದೆ, ಕೈಯ್ಯಲಿದ್ದ ಲಕ್ಷಾಂತರ ಹಣ ಎರಡು ವರ್ಷದಲ್ಲಿ ಖಾಲಿಯಾಗಿತ್ತು.   ಹಣ ಖಾಲಿಯಾದ ನಂತರ ಅವಳು ಒಬ್ಬ ಇಂಜಿನಿಯರ್ ನ ಮದುವೆಯಾಗಿ ಈ ಊರನ್ನೇ ತೊರೆದಳು.  ಹಣ ಕಳೆದುಕೊಂಡ ನಾನು  ಯಾರಿಗೂ ಬೇಡವಾದೆ  , ಅಪ್ಪಾ ಇದೆ ಕೊರಗಿನಲ್ಲಿ ಪ್ರಾಣ ಬಿಟ್ಟ, ಅಣ್ಣಾ ಅತ್ತಿಗೆ,  ದೂರಮಾಡಿದರು. ವಿಧ್ಯೆ ಇಲ್ಲದ ನನಗೆ  ಯಾವ ಕೆಲಸ ಸಿಗುತ್ತೆ ಗುರು, ಸ್ವಲ್ಪ ದಿನ ಬೆಂಗಳೂರಿನ  ಯಾವುದೋ ಅಪಾರ್ಟ್ಮೆಂಟಿನಲ್ಲಿ  ಗೆಟ್ ಕೀಪರ್ ಆಗಿದ್ದೆ, ಅಲ್ಲಿ ನೀಡುತ್ತಿದ್ದ  ಎರಡು ಸಾವಿರ ಸಾಲದೇ ಮತ್ತೆ ಇಲ್ಲೇ ಬಂದೆ  , ನನ್ನ ಪರಿಸ್ಥಿತಿ ನೋಡಿ ಅವನು ಆ ರಾಜೇಂದ್ರ ಅವರ ಎಲ್ಲಾ ಬಸ್ಸುಗಳ  ಏಜೆಂಟು ಅಂತಾ  ನೇಮಕ ಮಾಡಿದ್ದಾನೆ, ಕಳೆದ ಎರಡು ವರ್ಷಗಳಿಂದಾ  ಈ ಕೆಲಸ ಗುರು ಏನೋ ಊಟ ಬಟ್ಟೆಗೆ  ನಡೀತಾ ಇದೆ, ಈ  ಬಸ್ ನಿಲ್ದಾಣದಲ್ಲೇ ಕಳೆದ ವರ್ಷ  ಒಂದು ದಿನ ಸಿಕ್ಕ ಒಬ್ಬ ಅನಾಥ ಮಹಿಳೆ ಯನ್ನು ಯಾವುದೇ ಕುಲ ವಿಚಾರಿಸದೆ  ಮದುವೆ  ಆದೆ, ಕೆಲವು ಗೆಳೆಯರು  ಸಹಾಯ ಮಾಡಿ  ಆಶ್ರಯ ಮನೆ ಕೊಡಿಸಿದರು.  ಈಗ ಒಂದು ಪುಟ್ಟ ಮಗು ಆಗಿದೆ.  ನನ್ನ ಗತ ಕಾಲದ ತಪ್ಪುಗಳನ್ನು  ಆ ಮಗುವಿನ ಮುಖ ನೋಡುತ್ತಾ  ಮರೆಯುತ್ತಿದ್ದೇನೆ. ನನ್ನ ಹೆಂಡತಿ  ಅಕ್ಕ ಪಕ್ಕದ ಮಕ್ಕಳಿಗೆ ಪಾಠ  ಹೇಳಿಕೊಡುತ್ತಾಳೆ   ಅವಳೂ ಪಿ.ಯೂ.ಸಿ.ವರೆಗೆ ಓದಿದ್ದಾಳೆ  ಹೆಂಗೋ ಜೀವನ ನಡೀತಾ ಇದೆ ಅಂತಾ  ಹೇಳಿ ನಿಟ್ಟುಸಿರು ಬಿಟ್ಟ.  
ಅಬ್ಬಬ್ಬಾ  ಎನ್ನಿಸುವಂತಾ ನನ್ನ ಗೆಳೆಯ ಸುರೇಶನ  ಜೀವನ ಕಥೆ ಕೇಳಿ ಕಣ್ತುಂಬಿ ಬಂತು. ಅಷ್ಟರಲ್ಲಿ ಮತ್ತೊಂದು ಅವನ ಮಾಲಿಕರ   ಬಸ್ಸು ಬಂತು .  ಗುರು ನಿನ್ನ ನೋಡಿ ಬಹಳ ಖುಷಿಯಾಯಿತು  ನಿನ್ನ ಫೋನ್ ನಂಬರ್ ಕೊಡು ಅಂತಾ ಅದನ್ನು ಪಡೆದು ಹೊರಟ ,  ಹೋಗುವಾಗ ಆ ಹೋಟೆಲ್ ನವರಿಗೆ ಯೋ ಅವರ ಹತ್ರ ದುಡ್ಡು  ಈಸ್ಗ ಬ್ಯಾಡ . ಅಂತಾ ಓಟ  ಕಿತ್ತಾ. ಅವನು, ಹೋಟೆಲ್ ನವರು ನಮ್ಮ ಬಿಲ್ಲನ್ನು ತೆಗೆದುಕೊಳ್ಳದೆ ಹೋದರು.

 ಯಾರ್ರೀ ಮದ್ದೂರ್, ಬೆಂಗಳೂರ್ , ಮದ್ದೂರ್ ಬೆಂಗಳೂರ್ ಅಂತಾ ಕೂಗಲು  ಶುರು ಮಾಡಿದ  ಅದನ್ನು ನೋಡುತ್ತಾ  ಭಾರವಾದ ಮನಸಿನಲ್ಲಿ ಅವನಿಗೆ ವಿದಾಯ ಹೇಳಿ  ಮೈಸೂರಿನ ಬಸ್ಸಿನೆಡೆಗೆ ನಡೆದೇ. ಗೆಳೆಯ ಹೇಳಿದ ಮಾತು ನಿಜ ಕಾಲಾಯ ತಸ್ಮೈ ನಮಃ. ಅಂತಾ ಕಣ್ಣು ಮುಚ್ಚಿ ಕುಳಿತೆ.


8 comments:

ಚಿನ್ಮಯ ಭಟ್ said...

ಬಾಲು ಸರ್..
ಚೆನಾಗಿದೆ..
ನಿಜ ...ದುಡ್ಡಿದೆ ಅಂತಾ ಏನೇನೋ ಮಾಡಕ್ಕೆ ಹೋಗ್ಬಾರ್ದು...
ಇಷ್ಟ ಆಯ್ತು ...
ಬರೆಯುತ್ತಿರಿ:)..
ಹಾಂ ಅದು ಒಂದು ರೂಪಾಯಿ ನೋಟು ನೋಡ್ದೇ ಸುಮಾರು ದಿನ ಆಗಿತ್ತು...ಕಾಣಿಸಿದ್ದಕ್ಕಾಗಿ ವಂದನೆಗಳು..
ನಮಸ್ತೆ

Srikanth Manjunath said...

ನಗುವಾಗ ಎಲ್ಲ ನೆಂಟರು...ಅಳುವಾಗ ಎಲ್ಲ ಬೇರೆ...ಇದು ಒಂದು ಚಿತ್ರದ ಹಾಡು...ನಡೆಯುವ ವಯಸ್ಸಿನಲ್ಲಿ ಹಾರಲು ಹೋಗಿ ಬಿದ್ದು..ಇತ್ತಕಡೆ ಹಾರಲು ಆಗದೆ.ನಡೆಯಲು ಆಗದೆ ಇರುವ ಅನೇಕ ಉದಾಹರಣೆಗಳಿವೆ...ಒಂದು ಸಮಾಧಾನದ ಸಂಗತಿ ಎಂದರೆ...ಆರಂಭಿಕ ಜೀವನದಲ್ಲಿ ಎಡವಿದರೂ ಅದರಿಂದ ಪಾಠ ಕಲಿತು ಜೀವನದಲ್ಲಿ ಪಾಸಾದ ಬೊಂಬಾಟ್ ಸುರೇಶ ಅವರು ನಿಜಕ್ಕೂ ಉತ್ಸಾಹ ತುಂಬುತ್ತಾರೆ..ಎಲ್ಲೋ ಕೆರೆ, ಬಾವಿ, ಮರ ನೋಡಿಕೊಳ್ಳುವ ದಡ್ಡ ನಿರ್ಧಾರ ತೆಗೆದುಕೊಳ್ಳದೆ ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುತ್ತಿರುವ ಅವರ ಉತ್ಸಾಹದ ಜೀವನಕ್ಕೆ ಒಂದು ಚಪ್ಪಾಳೆ ನನ್ನ ಕಡೆಯಿಂದ...ಸುಂದರ ಬರಹ ಸರ್

Badarinath Palavalli said...

ಇಂತವನೇ ಉಢಾಫೆ ರಾಜ ನಮ್ಮ ಸ್ಕೂಲಿನಲ್ಲೂ ಇದ್ದ ಈಗ ಏನಾಗಿದ್ದಾನೋ?

ಬೊಂಬಾಟ್ ಸುರೇಶನ ಕಥನ ಕಣ್ಣು ತೆರೆಸುವಂತಿದೆ.

ಆದರೂ ಪಾಪ ಕಡೆಯಲಿ ಹೆಣ್ಣು ಗಳಿಗೆ ಜೀವಕೊಟ್ಟನಲ್ಲ, ತಿದ್ದಿದ್ದಾನೇ ಅನಿಸಿತು.

UMESH VASHIST H K. said...

ದುಡ್ಡಿದ್ದಾಗ ... ಕೆಲವರಿಗೆ ಮನುಷ್ಹ್ಯತ್ವ ಇರಲ್ಲ ...... ಆಮೇಲೆ ಕರುಣಾ ಮಯಿ ಗಳಾಗ್ತಾರೆ , ಬಡವರನ್ನ ನೋಡಿದ್ರೆ ಆಗ ಪಾಪ ಅನ್ನಿಸುತ್ತೆ ... ಯಾಕೆ ಅಂದ್ರೆ ಅವರೂ ಹಾಗೆ ಆಗಿರ್ತಾರಲ್ಲ

UMESH VASHIST H K. said...

ದುಡ್ಡಿದ್ದಾಗ ... ಕೆಲವರಿಗೆ ಮನುಷ್ಹ್ಯತ್ವ ಇರಲ್ಲ ...... ಆಮೇಲೆ ಕರುಣಾ ಮಯಿ ಗಳಾಗ್ತಾರೆ , ಬಡವರನ್ನ ನೋಡಿದ್ರೆ ಆಗ ಪಾಪ ಅನ್ನಿಸುತ್ತೆ ... ಯಾಕೆ ಅಂದ್ರೆ ಅವರೂ ಹಾಗೆ ಆಗಿರ್ತಾರಲ್ಲ

ಮನಸು said...

ಹುಫ್ಹ್ಹ್ಹ್ಹ್ ದೇವಾ ಸ್ವಲ್ಪ ಎಡವಿದರೆ ಜೀವನದ ದಿಕ್ಕೇ ಬದಲಾಗುತ್ತದೆ.ನಮ್ಮ ಕೈ ಆಡುತ್ತಿದ್ದರೆ ನಾಡೆಲ್ಲಾ ನೆಂಟರು.. ಬುದ್ಧಿವಂತರಾಗಬೇಕು ಇಲ್ಲವಾದರೇ ಇದೇ ಗತಿ. ನಿಮ್ಮ ಸ್ನೇಹಿತರ ಜೀವನ ಇನ್ನಾದರು ಸುಖವಾಗಿರಲಿ

Ittigecement said...

ಬಾಲಣ್ಣ...

ಹೃದಯ ತುಂಬಿ ಬಂತು...

ಓದುವ ಕಾಲದಲ್ಲಿ ಓದದೆ ನಾನೂ ಕೂಡ ಜಾರಿ ಬಿದ್ದಿದ್ದೆ....
"ನಗುವವರ ಮುಂದೆ ಎಡವಿ ಬಿದ್ದಿದ್ದೆ"

ಎದ್ದು ಬಂದಿದ್ದು ನನ್ನ ಪುಣ್ಯ...

ಹದಿ ಹರೆಯದ ಆ ವಯಸ್ಸಿನಲ್ಲಿ ಎಚ್ಚರಿಕೆಯಿಂದ ಇದ್ದರೆ ಮುಂದೆ ಬಾಳು ಚೆನ್ನಗಿರುತ್ತದೆ..

ನಿಮ್ಮ ಈ ಕಥೆಯನ್ನು ನಮ್ಮನೆಯವರೆಲ್ಲರಿಗೆ ಓದಿ ಹೇಳಿದೆ...

ಆಶೀಷನಿಗೂ ಹೇಳಿದೆ...

ಚಂದದ ಬರಾಹಕ್ಕೆ ನಮ್ಮೆಲ್ಲರ ಅಭಿನಂದನೆಗಳು ಬಾಲಣ್ಣ....

ಸಂಧ್ಯಾ ಶ್ರೀಧರ್ ಭಟ್ said...

nice...