Sunday, December 2, 2012

ಇವ್ರೇ ಒಂದ್ರುಪಾಯಿ ಕೊಡ್ತೀರಾ .........!!!!

ಬಹಳ ವರ್ಷಗಳ ಮಾತು  ನಾನು ಅವಾಗ  ಮಳವಳ್ಳಿ ಯಲ್ಲಿ ಕೆಲಸ ಮಾಡುತ್ತಿದ್ದೆ.  ಪ್ರತಿನಿತ್ಯ  ಮೈಸೂರಿನಿಂದ   ಮಳವಳ್ಳಿ  ಗೆ ಹೋಗಿ  ಬರುತ್ತಿದ್ದೆ.  ಪ್ರತಿ ನಿತ್ಯ  ಬಸ್ಸುಗಳು ನಿಗದಿತ ಸಮಯಕ್ಕೆ ಬಾರದ  ಕಾರಣ , ಮಳವಳ್ಳಿ  ಬಸ್ ನಿಲ್ದಾಣದ  ಸುತ್ತ ಮುತ್ತ ನಡೆಯುತ್ತಿದ್ದ ಘಟನೆಗಳು  ನನಗೆ  ಹೊತ್ತು ಕಳೆಯಲು ಸಹಾಯ ಮಾಡುತ್ತಿದ್ದವು . ಬನ್ನಿ ಅಂತಹ ಒಂದು ಘಟನೆಯನ್ನು  ನಿಮ್ಮೊಂದಿಗೆ ಹಂಚಿ ಕೊಳ್ಳುತ್ತೇನೆ .


ಒಂದು ದಿನ ಮಧ್ಯಾಹ್ನದ  ಸುಡು ಬಿಸಿಲಿನಲ್ಲಿ  ಮೈಸೂರಿಗೆ ತೆರಳಲು  ಬಸ್ಸಿಗೆ ಕಾಯುತ್ತಿದ್ದೆ.   ಸುಮಾರು ಹೊತ್ತು ಕಳೆದರೂ ಬಸ್ಸು ಬರಲಿಲ್ಲ . ಕಾಯಲು ನಿಂತು ಸುಮಾರು ಎರಡು ಘಂಟೆಗಳು ಕಳೆದಿತ್ತು.  ಬಸ್ಸಿಗೆ  ಕಾಯ್ದ  ಸಮಯದಲ್ಲಿ ನಾನು ಮೈಸೂರು ಸೇರಬಹುದಾಗಿತ್ತು. ಹೌದು ಮೈಸೂರಿನಿಂದ  ಮಳವಳ್ಳಿ ಗೆ ಒಂದು ಘಂಟೆ ಪಯಣ ಅಷ್ಟೇ , ಆದರೆ ರಸ್ತೆ ಸರಿಯಿಲ್ಲದ ಕಾರಣ ಒಂದು ಘಂಟೆ ಯಿಂದ ಒಂದೂ ಕಾಲು ಘಂಟೆ ಅವಧಿ  ತಗಲುತ್ತಿತ್ತು .ಬಸ್ಸು ಸಿಗದೇ ಕೋಪದಲ್ಲಿ  ಬಾಲ ಸುಟ್ಟ ಬೆಕ್ಕಿನಂತೆ   ಆಕಡೆ ಯಿಂದ ಈ ಕಡೆಗೆ  , ಈ ಕಡೆ ಯಿಂದ ಆ ಕಡೆಗೆ  ಅಡ್ದಾಡುತ್ತಿದ್ದೆ. ನನ್ನ ಕೋಪಕ್ಕೆ ಮೇಲಿಂದ ಸೂರ್ಯ ಕೆಂಡ ಸುರಿಯುತ್ತಿದ್ದ.  ಆಗಲೇ ಪಿತ್ತ ಕೆರಳಿತ್ತು.  ಅಷ್ಟರಲ್ಲಿ ಕೇಳಿಬಂತು  ಒಂದು ಶಬ್ದ ...................!!!

" ಇವ್ರೇ  ಒಂದ್ರುಪಾಯಿ  ಕೊಡಿ "....................................!

ಅಚ್ಚರಿಯಿಂದ  ತಲೆಯೆತ್ತಿ ನೋಡಿದೆ. ಎದುರಿಗೆ ನಿಂತಿದ್ದ  ಒಬ್ಬ ದಡೂತಿ  ಅಜಾನುಬಾಹು ವ್ಯಕ್ತಿ.  ಎಣ್ಣೆಗೆಂಪು  ಮೈಬಣ್ಣ ಹಸಿರು ಚೆಡ್ಡಿ, ಹಸಿರು ಅಂಗಿ, ಎತ್ತರದ ನಿಲುವು, ಅಗಲದ ಮುಖ  ಗಡ್ಡ ದರಿಸಿತ್ತು, ನೋಡಲು ಕಟ್ಟು ಮಸ್ತಾಗಿದ್ದ. ಹೆಗಲಿನಿಂದ ಒಂದು ಬ್ಯಾಗು  ನೇತಾಡುತ್ತಿತ್ತು. ಅದರಲ್ಲಿ ಯಾವುದೋ ಕಾಗದಗಳು ಇಣುಕಿ ನೋಡುತ್ತಿದ್ದವು, ಇಂತಹ ವ್ಯಕ್ತಿಗೆ ದುಡ್ಡು ಕೊಡುವುದಾ......?  ಮತ್ತೆ ಕೋಪ ಬಂದು  ನಾನು ಅವನನ್ನು ಕುರಿತು....." ಚಿಲ್ಲರೆ ಇಲ್ಲ ಮುಂದೆ ಹೋಗಪ್ಪಾ "............ಅಂದೇ.

 ಅವನೂ ಸಹ  ಭಾವನಾ ರಹಿತನಾಗಿ    "ಪರವಾಗಿಲ್ಲ  ಒಂದ್ರುಪಾಯಿ  ಕೊಡಿ  ಇವ್ರೇ"  ಅಂದಾ .

"ರೀ  ಒಂದ್ಸಾರಿ ಹೇಳುದ್ರೆ  ಅರ್ಥಾ ಆಗಲಿಲ್ಲವ  ಚಿಲ್ರೆಯಿಲ್ಲ ಮುಂದೆ ಹೋಗಿ"............... ಅಂದೇ

ಅದು ಅವನ ಮುಂದೆ ಯಾವ ಪರಿಣಾಮವೂ  ಬೀರಲಿಲ್ಲ. .........ಹಾಗೆ ನನ್ನನ್ನೇ   ದುರುಗುಟ್ಟಿ  ನೋಡುತ್ತಾ  ಮತ್ತೆ ಮತ್ತೆ  ಒಂದ್ರುಪಾಯಿ  ದುಡ್ಡು ಕೊಡಲು  ಪೀಡಿಸಿದ.  ನನಗೋ ಒಳ್ಳೆಯ ಪೀಕಲಾಟ  ಶುರು ಆಯಿತು.  ಒಂದು ಕಡೆ ಬಸ್ಸು  ಬಾರದ ಬಗ್ಗೆ  ಕೋಪ, ಜೊತೆಗೆ ತಲೆಯ ಮೇಲೆ ಸೂರ್ಯದೇವನ ಪ್ರತಾಪ, ಇದರ ಜೊತೆಗೆ  ಎದುರಿಗೆ ಇವನ  ಆಲಾಪ   ಇವುಗಳ ಜೊತೆಗೆ  ನನ್ನ ಎಗಾಟ  ಸಾಗಿತ್ತು.  ಇವನನ್ನು ನಿವಾರಿಸಿಕೊಳ್ಳದೆ  ಮುಕ್ತಿ ಯಿಲ್ಲ ವೆಂದು ತಿಳಿದು  ಚಿಲ್ಲರೆ ಇಲ್ಲದ ಕಾರಣ   ಐದು ರುಪಾಯಿ ನೋಟನ್ನು   ಅವನ ಕೈಗಿತ್ತೆ .  ಕೈಗೆ ಐದು ರುಪಾಯಿ ನೋಟು  ಬಂದ ಕೂಡಲೇ ಬೆಚ್ಚಿದ ಅವನು  ಅದನ್ನು ನನ್ನ ಕೈಗೆ ವಾಪಸ್ಸು ಕೊಟ್ಟು  "ಒಂದ್ರುಪಾಯಿ ಮಾತ್ರ ಕೊಡಿ"   ಅಂದಾ  , ......!!! ಜೇಬಿನಲ್ಲಿ ಚಿಲ್ಲರೆ ಇಲ್ಲದ ನಾನು  ಹಾಳಾಗಲಿ ಅಂತಾ ಐದು ರುಪಾಯಿ ಕೊಟ್ಟರೆ  ಇವ ಅಲ್ಲೂ ತನ್ನ ವರಸೆ ತೋರಿಸಿ ಗೋಳು ಹುಯ್ದು ಕೊಳ್ಳುತ್ತಾನಲ್ಲಾ  ಅಂತಾ ಸಿಟ್ಟು ನೆತ್ತಿಗೇರಿತು.  .".ಯೋ  ಬಾರಯ್ಯಾ ಇಲ್ಲಿ.........ಆಟಾ ಆಡ್ತಿಯಾ ನನ್ನ ಜೊತೆ  ...................... ಮರ್ಯಾದೆಯಾಗಿ ಇದನ್ನ ತಗೊಂಡು ಜಾಗಾ ಖಾಲಿ ಮಾಡು  ಇಲ್ಲಾಂದ್ರೆ................."   ಅಂತಾ  ...............ಸಿಟ್ಟಿನಿಂದ  ಅವನನ್ನು ಹೊಡೆಯಲು ಹೋದೆ.  ಅವನು ನನ್ನ ರೋಷಾ ವೇಷ  ಕಂಡು ನಾನು ಕೊಟ್ಟಿದ್ದ  ಐದು ರುಪಾಯಿ ಬಿಟ್ಟು ...... ಅಲ್ಲಿಂದ ಶಾಂತತೆಯಿಂದ ನಿಧಾನವಾಗಿ  ಮತ್ತೊಬ್ಬರ  ಬಳಿ  ಹೋದ  ............!!!!!


ಎಲಾ ಇವನ......!   ನನ್ನ ಜೊತೆ  ಆಟಾ  ಆಡಿ  ಮತ್ತೊಬ್ಬರನ್ನು  ಕೆರಳಿಸಲು ಹೋಗುತ್ತಿದ್ದಾನೆ  ....ಅಂತಾ  ಆನಿಸಿ , ಅವನನ್ನೇ ನೋಡುತ್ತಿದ್ದೆ.  ಅಲ್ಲಿಯೂ ಸಹ ಅವನ ಡೈಲಾಗು  ಶುರು ಆಯ್ತು.

"ಇವ್ರೇ  ಒಂದ್ರುಪಾಯಿ  ಕೊಡಿ" ............................ ಅಂತಾ  ಅಲ್ಲಿದವರನ್ನು ಕೇಳಿದ.

ಅಲ್ಲಿದ್ದವರು  ತಮ್ಮ ಜೇಬಿನಲ್ಲಿದ್ದ  ಪೆನ್ನು  ತೆಗೆದು ಒಂದು  ಪೇಪರ್  ತೋರಿಸಿ  ," ಬಾ ಯಜಮಾನ  ಇಲ್ಲಿ ನಿನ್ನ ಸಹಿ ಮಾಡು  ನಿನಗೆ ಈ ಪೆಟ್ಟಿಗೆ ತುಂಬಾ  ದುಡ್ಡು ಕೊಡ್ತೀನಿ"  ಅಂತಾ  ಪೇಪರ್ ಅನ್ನು ಅವನ ಹತ್ತಿರ ನೀಡಿ ಪೆನ್ ಕೊಡಲು ಹೋದರು.

ಅದನ್ನು ನೋಡಿದವೇ ಅವನು ಜೋರಾಗಿ ಅರಚುತ್ತಾ  ಅಲ್ಲಿಂದ  ಓಟ ಕಿತ್ತ.  ನನಗೋ ಇದನ್ನು ನೋಡಿ ಅಚ್ಚರಿ ,  ಅಲ್ಲಾ ಇದೇನಪ್ಪಾ  ಈಯಪ್ಪ  ಅವನನ್ನ ಇಷ್ಟು ಸುಲಭವಾಗಿ   ಅಟ್ಟಿ ಬಿಟ್ಟರಲ್ಲ  ಅನ್ನಿಸಿ  ,  ಅವರಲ್ಲಿಗೆ ನಗುತ್ತಾ  ಹೋದೆ.
"ಅದೇನು ಮ್ಯಾಜಿಕ್  ಮಾಡಿದ್ರೀ  ಅವನು ಯಾಕೆ  ಓಡಿಹೋದ  ...  .....!!! "ಅಂದೇ

"ಅಯ್ಯೋ ಇವಂದಾ ದೊಡ್ಡ ಕಥೆ ಬಿಡೀ ಸಾರ್  ..............".ಅಂದರು.  ಅಷ್ಟರಲ್ಲಿ  ಮೈಸೂರಿನ  ಬಸ್ಸು ಬಂತು  ಅಲ್ಲಿದ್ದ ಎಲ್ಲರೂ  ಗುದ್ದಾಡುತ್ತಾ  ಬಸ್ಸಿನೊಳಗೆ  ನುಗ್ಗಿ  ನಮ್ಮ  ಶಕ್ತ್ಯಾನುಸಾರ  ಬಸ್ಸಿನಲ್ಲಿ  ಟಾಮ್  ಅಂಡ್  ಜೆರ್ರಿ  ಆಟಾ ಆಡಿ  ಸೀಟ್  ಸಂಪಾದನೆ ಮಾಡಿಕೊಂಡೆವು.  ಆ  ದಡಿಯ  ವ್ಯಕ್ತಿಯನ್ನು ಓಡಿಸಿದವರು ನನ್ನ ಪಕ್ಕದಲ್ಲೇ ಬಂದು "ಸಾರ್  ಇಲ್ಲಿ ಯಾರಾದ್ರೂ ಬರ್ತಾರ?"  ಅಂತಾ ಹಲ್ಲು ಗಿಂಜುತ್ತಾ  ನಿಂತಿದ್ದರು. ನಾನೂ ಸಹ ಇಲ್ಲಾ ಬನ್ನಿ ಕುಳಿತು ಕೊಳ್ಳಿ ಅಂತಾ ಪಕ್ಕದಲ್ಲಿ ಜಾಗ ಬಿಟ್ಟೆ . ಪಕ್ಕದಲ್ಲಿ ಕುಳಿತ ಅವರು  ಆ  ದಡಿಯ  ವ್ಯಕ್ತಿಯ  ಪುರಾಣ ಬಿಚ್ಚಿಟ್ಟರು.

"ಅವನಿದ್ದಾನಲ್ಲಾ ಸಾರ್ ಅವರ ಊರು  ದುಗ್ಗನಹಳ್ಳಿ ಅಂತಾ , ಭಾರಿ ಸಿರಿವಂತರ  ಮನೆ ಸಾರ್  , ಜಮೀನು, ಆಳು , ಕಾಳು , ದುಡ್ಡು  ಮಸ್ತಾಗದೆ .ಈವಯ್ಯನೂ  ಕಾಲೇಜು ಒದವ್ನೆ ........, ಆದರೆ ಇವರ ಅಪ್ಪ ಸತ್ತ ಮೇಲೆ ಇವನ ಅಣ್ಣಾ ತಮ್ಮಂದಿರು  ಇವನಿಗೆ ಬೆದರಿಕೆ ಹಾಕಿ  ಹೊಡೆದು  ಕಾಗದ ಪತ್ರಕ್ಕೆ ಸಹಿ ಪಡೆದು ಆಸ್ತಿ ಹೊಡೆಯಲು   ಸಂಚುಮಾಡಿದರು.  ಇವನು  ಸಹ ಅದೇ ವಿಚಾರದಲ್ಲಿ   ಹಲವಾರು ಭಾರಿ ನೋವನ್ನು ತಿಂದು  ಬುದ್ದಿಯ ಸ್ವಾಧೀನ ಕಳೆದು ಕೊಂಡು  ಹಿಂಗಾಗವ್ನೆ ..........ಯಾರ್ನೂ ನಂಬಾಕಿಲ್ಲಾ  ಈ ಆಸಾಮಿ, ಅದಕ್ಕೆ ಪೆನ್ನು ಕಾಗ್ದಾ  ಕಂಡ್ರೆ  ಹಾವು ಕಂಡಂಗೆ  ಆಡ್ತಾನೆ  ಸಾ..........".ಅಂದ್ರೂ. ನನಗೆ ಈ ಕಥೆ ಕೇಳಿ  ಅವನ ಬಗ್ಗೆ ಮನ ಕರಗಿತು.  .....ಕಿಟಕಿ ಯಿಂದ   ತೂರಿಬಂದ  ತಂಗಾಳಿ ಕಣ್ಣಿಗೆ  ನಿದ್ದೆಯ ಕೊಡುಗೆ ನೀಡಿತು............ಧಣಿದ ದೇಹ  ಮಲಗಿತು.ಎಚ್ಚರವಾದಾಗ  "ಯಾರೀ ಹಾರ್ಡಿಂಗ್ ಸರ್ಕಲ್  ಇಳಿಯುವವರು  ಬನ್ರೀ ಬೇಗಾ"......... ಅಂತಾ ಕಂಡಕ್ಟರ್  ಕೂಗಿದ ಶಬ್ದ ಕೇಳಿಸಿ. ತಡಬಡಾಯಿಸಿ  ಇಳಿದೆ...........ಅದರೂ ಆ ವ್ಯಕ್ತಿಯ  ಬಗ್ಗೆ ಮನಸು ಕೊರೆಯುತ್ತಲೇ ಇತ್ತು.....................!!!!!





4 comments:

ಪೂರ್ಣಿಮಾ( ಭೂಮಿ ) said...

yehlarnu nambhardu antha navu gatti adrae kehlaommae avara bhaggae tilidaga namagae gotilladanthae nammannu maetthagae madibitirthae alwa sir???

ಚಿನ್ಮಯ ಭಟ್ said...

ಬಾಲು ಸರ್,
ನಿಜ ಬಸ್ ಸ್ಟ್ಯಾಂಡಿನಲ್ಲಿ ಸಿಗುವವರನ್ನು ಎಷ್ಟು ನಂಬುವುದೋ ಬಿಡುವುದೋ ತಿಳಿಯುವುದೇ ಕಷ್ಟ...ನಿಜವಾಗಿ ತೊಂದರೆಯಿರುವವರು ಕೆಲವರು,ನಾಟಕದವರು ಹಲವರು....
ಹಾಂ ನಾನೂ ಒಂದು ಸಲ ಅಮ್ಮನ ಹತ್ತಿರ ಬೈಸಿಕೊಂಡಿದ್ದೆ...ಮೊದಲ ಬಾರಿಗೆ ನಾನು ಒಬ್ಬನೇ ಶಿರಸಿಗೆ ಹೋಗಿದ್ದೆ...ಬಹುಷಃ ಒಂಬತ್ತನೇ ತರಗತಿಯಲ್ಲಿರಬೇಕು ಆಗ...ಕೊಟ್ಟಿದ್ದು ನೂರು ರೂಪಾಯಿ...ವಾಪಸ್ ಬರುವಾಗ ಐದು ರಸ್ತೆಯ ಬಸ್ ಸ್ಟಾಪಿನಲ್ಲಿ(ಈಗ ಅರ್ಧ ಕಿಲೋಮೀಟರು ಎಲ್ಲಿ ನಿಂತರೂ ಬಸ್ ಸ್ಟಾಪು ಅಲ್ಲಿ!!!) ಬಸ್ಸಿಗೆ ಕಾಯುತ್ತಾ ನಿಂತವನಿಗೆ ಒಬ್ಬರು ಭಿಕ್ಷೆ ಬೇಡುವವರು ಒಂದೇ ಕಣ್ಣಿದ್ದವರು ಕಾಣಿಸಿದರು ಎಂದು ಕೈಲಿದ್ದ ಎಲ್ಲ ದುಡ್ಡನ್ನೂ ಕೊಟ್ಟು ಬಂದಿದ್ದೆ ಬಸ್ಸು ಚಾರ್ಜಿಕೊಂದಿಟ್ಟುಕೊಂಡು...ಅಮ್ಮ ಮನೆಯಲ್ಲಿ "ಮಾಣಿ ಹಿಂಗಿದ್ರೆ ಬಸ್ ಸ್ಟ್ಯಾಂಡಿನಲ್ಲಿ ಒಂದುಸಾವಿರ ರೂಪಾಯಿ ಕೊಟ್ರ್ರು ಖರ್ಚ್ ಮಾಡ್ತೆ" ಎಂದು ಬೈದಿದ್ದರು...

ಮತ್ತೊಮ್ಮೆ ಮೊದಲ ವರುಷವಿರಬೇಕು ಇಂಜಿನಿಯರಿಂಗಿನಲ್ಲಿ....ಕಡೂರಿನಲ್ಲಿ ಒಬ್ಬ ವೃಧ್ಧರು ಬಸ್ಸಿಗೆ ಖರ್ಚು ಕೇಳುತ್ತಿದ್ದರು "ಸರಿ" ಎಂದು ೧೦ ರೂ ಕೊಟ್ಟಿದ್ದೆ...ಮತ್ತೆ ಸುಮಾರು ಹದಿನೈದು ದಿನದ ಬಳಿಕ ವಾಪಸ್ಸು ಬರುವಾಗ ಅದೇ ವ್ಯಕ್ತಿ ತರಿಕೆರೆಯಲ್ಲಿ ಸಿಕ್ಕದ್ದ...ಅಂದು "ತರಿಕೆರೆಗೆ ಹೋಗಬೇಕು ಸ್ವಾಮಿ"ಎಂದವನು,ಇಂದು "ಕಡೂರಿಗೆ ಹೋಗಬೇಕು" ಎನ್ನುತ್ತಿದ್ದ ಅಷ್ಟೇ...ಎಸ್ಟು ನಿಜವೋ ಸುಳ್ಳೋ ಗೊತ್ತಾಗಲಿಲ್ಲ...ಸುಮ್ಮನೆ ಯಾಕೋ ನೆನಪಾಯಿತು ಹೇಳಿದೆ......

ಚೆನಾಗಿದೆ...ಬರೆಯುತ್ತಿರಿ..
ನಮಸ್ತೆ...:)

bilimugilu said...

Balu Sir,
obbobbara jeevanada hinde ondondu kathe... ayyo aniside... hegiddavarella hegaagihogtaare!!!!
Roopa

Srikanth Manjunath said...

ಜೀವನದಲ್ಲಿ ನಡೆಯುವ ಘಟನೆಗಳು ಆಜಾನುಭಾಹುಗಳನ್ನು ಕುಬ್ಜರನ್ನಾಗಿ ಮಾಡಿ ಬಿಡುತ್ತವೆ..ನಿಮ್ಮ ಲೇಖನ ಓದಿದ ತಕ್ಷಣ ನನಗೆ ಚಂದವಳ್ಳಿ ತೋಟದ ಆರಂಭಿಕ ದೃಶ್ಯ ಕಣ್ಣಿಗೆ ಬಂದು ಬಿಡ್ತು...
"ಪಾಲಾಗಿ ಹೋಗ್ತೀರಾ?....ಹಾಳಾಗಿ ಹೋಗ್ತೀರಾ ಕಣ್ರೋ..." ಎನ್ನುತ್ತಾ ಮುರಿದು, ಉರಿದು ಹೋದ ಮನೆಯೊಳಗೇ ಹೋಗಿ ಕೂರುತ್ತಾರೆ..ಕಲಾಕೇಸರಿ ಉದಯಕುಮಾರ್..
ಆಸ್ತಿ ಪಾಸ್ತಿ ಒಂದು ತುಂಬು ಕುಟುಂಬವನ್ನು ಗಾಜಿನಂತೆ ಒಡೆದು ಚೂರಾಗಿಸುತ್ತೆ..ಸುಂದರ ಮನಸಿನ ಮನುಜರಿಗೆ ಆಘಾತವನ್ನು ತಡೆದುಕೊಳ್ಳಲಾರದೆ ಹುಚ್ಚು ಮನಸ್ಸಿನ ಜೀವಿಗಳಾಗಿ ಸಾವಿನ ದಿನಕ್ಕೆ ಹತ್ತಿರವಾಗುತ್ತ ಸಾಗುತ್ತಾರೆ..ಮನೋಜ್ಞ ಲೇಖನ...ಮನಸಿಗೆ ಬಹಳ ಘಾಸಿ ಮಾಡುವ ಅನುಭವ.. ಹಂಚಿಕೊಂಡದ್ದಕ್ಕೆ ಧನ್ಯವಾದಗಳು