Tuesday, December 25, 2012

ನಮ್ಮ ಹತ್ತಿರದಲ್ಲೆ ನಡೆದಿತ್ತು ಒಂದು ಜೀವಿಯ ಕಗ್ಗೊಲೆ .......!!! ಶಿಂಷಾ ಕಾಡಿನ ಅಲೆದಾಟ ....೦೩


ನನಗೂ ಯೋಗ ಬರುತ್ತೆ ಅಂತೂ ಈ ನಾಯಿಮರಿ.


ಮಾರನೆಯ ದಿನ ಮುಂಜಾನೆಯ ಪಕ್ಷಿಗಳ ಸುಪ್ರಬಾತಕ್ಕೆ ಎಚ್ಚರವಾಗಿ ಹೊರಗೆ ಬಂದು ನೋಡಿದರೆ  ನಮ್ಮ ರೂಮಿನ ಎದುರಿಗಿದ್ದ ಸುರಗಿ ಮರದಲ್ಲಿ ಕುಳಿತ ಎರಡು  ಹಕ್ಕಿಗಳು ಸುಪ್ರಬಾತ  ಹಾಡಿದ್ದವು, ಮತ್ತಷ್ಟು ಮುಂದೆ ಬಂದು  ಗೋಲ್ ಘರ್ ನಲ್ಲಿ ನೋಡಿದರೆ ನಮ್ಮ ರವಿಂದ್ರ ಯೋಗಾಸನ ಮಾಡುತ್ತಿದ್ದ  ಅವನ ಪಕ್ಕದಲ್ಲಿ ರೆಸಾರ್ಟ್ ನವರು ಸಾಕಿದ್ದ ಮುದ್ದು ನಾಯಿ ಮರಿ  ಅವನ ಪಕ್ಕದಲ್ಲಿ  ತಾನೂ ಅವನಂತೆ ಮೈ ಬಗ್ಗಿಸಿ ಯೋಗಾಸನ ಮಾಡಿತ್ತು...............................!!!!! ಮುಂಜಾನೆ ಮಬ್ಬು ಬೆಳಕಿನಲ್ಲಿ ಆ ಮುದ್ದು ನಾಯಿ ಮರಿ ರವಿಂದ್ರ ಹಾಕಿದ ಯೋಗಾಸನದ  ವಿವಿಧ ಆಸನಗಳನ್ನು ಅನುಕರಿಸುತ್ತಾ ತಾನೂ ಯೋಗ ಮಾಡ್ತೀನಿ ನೋಡಿ ಅಂತಾ  ಸಾಬೀತು ಪಡಿಸಿತ್ತು.  ಇದನ್ನು ನೋಡುತ್ತಾ   ಬಹಳ ಹೊತ್ತು ಕಳೆದಿದ್ದೆ.ಗೋಲ್ ಘರ್ 


 ಮುಂದೆ ಸಾಗಿದ ನನಗೆ   ಸುತ್ತ ಮುತ್ತ ಇದ್ದ ಸುರುಗಿ ಮರಗಳಿಂದ ಹಕ್ಕಿಗಳ ಚಿಲಿಪಿಲಿ ನಾದ ಕೇಳುತ್ತಲೇ ಇತ್ತು. ಅಷ್ಟರಲ್ಲಿ  ಎಲ್ಲರೂ ಒಟ್ಟಿಗೆ ಗೋಲ್ ಘರ್ ನಲ್ಲಿ ಸೇರಿದೆವು, ಮುಂಜಾವಿನ ತಣ್ಣನೆ ಗಾಳಿಯಲ್ಲಿ ಬಿಸಿ ಬಿಸಿ ಕಾಫಿಯ ಸೇವನೆ ಆಯಿತು, ಮನೆಯಲ್ಲಿ ಒಂದೇ ಕಪ್  ಕಾಫಿ ಹೀರುತ್ತಿದ್ದ ನಾನು  ಆ ತಣ್ಣನೆಯ  ಗಾಳಿಯ ಚಳಿಗೆ ಒಟ್ಟಿಗೆ ಮೂರು ಕಪ್  ಹೀರಿದೆ . ಬಿಸಿ ಕಾಫಿ ದೇಹ ದೊಳಗೆ ಇಳಿದು  ಮುಂದಿನ ಕಾರ್ಯಕ್ಕೆ ಚೈತನ್ಯ ನೀಡಿತು.   ಸರಿ ನಮ್ಮ ಕ್ಯಾಮರ ಹಿಡಿದು  ಸ್ವಲ್ಪ ದೂರ ಅಡ್ಡಾಡಿ ಬರೋಣ ಅಂತಾ ರೆಸಾರ್ಟ್ ಪಕ್ಕದಲ್ಲಿ   ಹೊರಟೆವು. ಸ್ವಲ್ಪ ದೂರ ಹೋದ ನಮಗೆ ಎದುರಾಗಿ ಒಬ್ಬ ವ್ಯಕ್ತಿ ಬಂದರು. ಅವರು ನಿನ್ನೆ ರಾತ್ರಿ  ರೆಸಾರ್ಟಿಗೆ ಬಂದೆನೆಂದು ಪರಿಚಯ ಮಾಡಿಕೊಂಡರು., ಆಗಲೇ ಕಾಡಿನಲ್ಲಿ ಒಂದು ಸುತ್ತು ಅಲೆದಾಡಿ ಬಂದಿದ್ದರು.  ಹಾಗೆ ಪರಿಚಯದ ನಡುವೆ  ನಿನ್ನೆ ರಾತ್ರಿ ನೋಡಿ ಒಂದು ಜೀವಿ ಸತ್ತು ಬಿದ್ದಿದೆ ನಮಗೆ ಗೊತ್ತೇ ಆಗಿಲ್ಲಾ ಅಂದರು. ನಮಗೆ ಅಚ್ಚರಿ  , ಅವರೇ ಮುಂದು ವರೆದು  ನಮ್ಮನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋದರು.

ಹತ್ಯೆ ನಡೆದಿದ್ದ ಜಾಗದ ಪ್ರದೇಶ 

ದಟ್ಟ ಕಾಡಿನ ಹಾದಿಯ ನೋಟ 

 ಹೌದು ನಾವಿದ್ದ ಜಾಗದಿಂದ ಕೆಲವೇ ಅಡಿಗಳ  ಅಂತರದಲ್ಲಿ  ಆ ಘಟನೆ ನಡೆದಿತ್ತು. ಕಳೆದ ರಾತ್ರಿ  ಬಹಳ ಸಮಯ ನಾವು ಹೊರಗೆ ಕುಳಿತು  ಹರಟೆ ಹೊದೆದಿದ್ದೆವು, ಕ್ಯಾಂಪ್ ಫೈರ್  ಹಾಕಿದ್ದರೂ  , ನಾವಿದ್ದ ಜಾಗದ ಅತೀ ಸನಿಹದಲ್ಲಿ  ಸದ್ದಿಲ್ಲದೇ  ಈ ಜೀವಿಯ ಹತ್ಯೆ ಆಗಿತ್ತು.ಒಂದು ವೇಳೆ ಕೆಟ್ಟ ಕುತೂಹಲದಿಂದ ರಾತ್ರಿ ನಾವೇನಾದರೂ  ನಮ್ಮ ಜಾಗ ಬಿಟ್ಟು ಹೊರಗೆ ಅಡ್ಡಾಡಲು ಬಂದಿದ್ದರೆ   ಬಹುಷಃ ನಮ್ಮ ಕಥೆಯೂ ಹೀಗೆ  ಆಗುತ್ತಿತ್ತು  ಅನ್ನಿಸುತ್ತದೆ. ಆದರೆ ಕಾಡಿನಲ್ಲಿ ಇವೆಲ್ಲಾ  ಸ್ವಾಭಾವಿಕವಾಗಿ ನಡೆಯುವ ಸಾಮಾನ್ಯ ಘಟನೆಗಳಷ್ಟೇ.  ನಾವೂ ಸಹ ಕುತೂಹಲದಿಂದ  ಕಾಡಿನ ಹಾದಿಯಲ್ಲಿ ನಡೆದೆವು, ಹತ್ಯೆ ನಡೆದಿದ್ದ ಜಾಗ ಹತ್ತಿರವಾಗಿತ್ತು.


ಹತ್ಯೆಯಾದ ಜೀವಿಯ  ದೇಹದ ಒಂದು ಭಾಗ 

ಜೀವಿಯ ಒಳ ಕವಚ.


ಹತ್ಯೆಯ ಜಾಗ ಸನಿಹ ಬರುತ್ತಿದ್ದಂತೆ  ಕೆಟ್ಟ ವಾಸನೆ ಬರುತ್ತಿತ್ತು,  ಮತ್ತಷ್ಟು  ಹತ್ತಿರ ಹೋದ ನಮಗೆ  ಕಂಡಿದ್ದು  ಭೀಕರವಾಗಿತ್ತು.  ಮೊದಲು ನಮಗೆ  ಕಂಡಿದ್ದು ಸುತ್ತಾ ಚೆಲ್ಲಾಡಿ ಹೋಗಿದ್ದ ಕೆಲವು ದೇಹದ ಭಾಗಗಳು. ನಂತರ  ನಮಗೆ ಕಂಡಿದ್ದು  ಬಿದ್ದಿದ್ದ ಚಿಪ್ಪು ಹಂದಿಯ  ದೇಹದ ಭಾಗ, ಹೌದು ಅಲ್ಲಿ  ಒಂದು ಚಿಪ್ಪು ಹಂದಿಯನ್ನು   ಚಿರತೆ ತಿಂದು ಹಾಕಿತ್ತು. . ಆಗ ಕಂಡ ದೃಶ್ಯ  ಹೆದರಿಕೆ ಉಂಟು ಮಾಡಿತ್ತು. ಪೆಂಗೊಲಿನ್  ಅಥವಾ  ಚಿಪ್ಪು ಹಂದಿ ಯನ್ನು  ಆ ರಾತ್ರಿ ಹೊಂಚು ಹಾಕಿ  ಒಂದು ಚಿರತೆ ಬೇಟೆಯಾಡಿ  ತಿಂದಿತ್ತು.


ಚಿಪ್ಪು ಹಂದಿ ಅಥವಾ ಪೆಂಗೊಲಿನ್ [ ಚಿತ್ರ ಕೃಪೆ ಅಂತರ್ಜಾಲ]
ಚಿಪ್ಪು ಹಂದಿ  ಅಪಾಯದಿಂದ ತಪ್ಪಿಸಿಕೊಳ್ಳುವ ಉಪಾಯ 

ಚಿಪ್ಪು ಹಂದಿಯ  ಬಿಲ 

ಸಾಮಾನ್ಯವಾಗಿ ಈ ಚಿಪ್ಪು ಹಂದಿ ತುಂಬಾ ನಾಚಿಕೆ ಸ್ವಭಾವದ ಪ್ರಾಣಿ, ದೇಹದ ರಚನೆ ಮೇಲುಭಾಗದಲ್ಲಿ  ಚಿಪ್ಪುಗಳಿಂದ ಕೂಡಿದ್ದು, ಬಹಳ ಗಟ್ಟಿಯಾಗಿದೆ,  ಎಂತಹ ಗಟ್ಟಿ ಕಲ್ಲನ್ನು ಎತ್ತಿ ಹಾಕಿದರೂ  ತಡೆಯುವ ಶಕ್ತಿ  ಮೇಲಿನ ಚಿಪ್ಪು ಹೊಂದಿದೆ. ಜೊತೆಗೆ ಕೆಳಭಾಗ  ಬಹಳ ಮೃದುವಾಗಿದ್ದು  ಯಾವುದೇ ಪ್ರಾಣಿ ಸುಲಭವಾಗಿ ಈ ಭಾಗದಲ್ಲಿ  ದಾಳಿ ಮಾಡಿ ಇವುಗಳನ್ನು ಕೊಲ್ಲಬಹುದು . ಕೆಲವೊಮ್ಮೆ ಕಾಡು ಪ್ರಾಣಿಗಳು ಇದನ್ನು ಬೇಟೆಯಾಡಲು ಬಂದರೆ  ಇದು  ತನ್ನ ದೇಹವನ್ನು ಮಡಿಸಿಕೊಂಡು ವೃತ್ತಾಕಾರವಾಗಿ  ಸುರುಳಿ ಸುತ್ತಿ ಕೊಳ್ಳುತ್ತದೆ . ಆಗ ಇದನ್ನು ಯಾವ ಕಡೆ  ನೋಡಿದರೂ ಬರಿ ಚಿಪ್ಪಿನ ಭಾಗ ಕಾಣುತ್ತದೆ, ಈ ಚಿಪ್ಪಿಗೆ  ಹುಲಿ, ಚಿರತೆ, ಸಿಂಹಗಳು   ಪಂಜದಿಂದ ಹೊಡೆದರೂ ಏನೂ ಆಗುವುದಿಲ್ಲ ,   ಈ ಜೀವಿ  ಸಾಮಾನ್ಯವಾಗಿ ನೆಲದಲ್ಲಿ ಬಿಲಗಳನ್ನು  ತೋಡಿಕೊಂಡು  ಬಿಲಗಳಲ್ಲಿ ವಾಸ ಮಾಡುತ್ತದೆ. . ಇದು ಕೀಟ ಭಕ್ಷಕ ಪ್ರಾಣಿ.  ಆದರೆ ದುರದೃಷ್ಟ ವಶಾತ್  ಇಲ್ಲಿ  ಚಿರತೆಗೆ ಬಲಿಯಾಗಿತ್ತು,ಚಿಪ್ಪು ಹಂದಿಯನ್ನು ಚಿರತೆ ತಿಂದಿರುವ ಒಂದುನೋಟ 


ಎಲ್ಲಿಎನಾದ್ರೆ ನಮಗೇನು
ನಾವೂ ಸುತ್ತ ಮುತ್ತ  ಚಿರತಯ ಹೆಜ್ಜೆ ಗುರುತಿಗೆ  ಹುಡುಕಾಟ ಮಾಡಿದೆವು, ಆದರೆ ಆ ಪ್ರದೇಶದಲ್ಲಿ  ಹುಲ್ಲು ಬೆಳೆದು ನಿಂತಿದ್ದ  ಕಾರಣ ನಮಗೆ ಹೆಚ್ಚಿನ  ಗುರುತು ಸಿಕ್ಕಲಿಲ್ಲ , ಕಾಡಿನಲ್ಲಿ ಒಮ್ಮೊಮ್ಮೆ ಸಿಗುವ ಇಂತಹ ನೋಟಗಳು  ನಮ್ಮ ಧೈರ್ಯವನ್ನು ಕೆಣಕುತ್ತವೆ,  ಭೀಕರ ದೃಶ್ಯ ನೋಡಿದ ನಾವು,  ವಾಪಸ್ಸು  ನಮ್ಮ ರೆಸಾರ್ಟಿಗೆ  ಬಂದೆವು  ಅಲ್ಲೇ ಇದ್ದ ಒಂದು ಸುರಗಿ ಮರದಲ್ಲಿ  ಎರಡು ಪಿಳಾರಕ  ಹಕ್ಕಿಗಳು  ಮರದಲ್ಲಿ ಸರಸವಾದುತ್ತಿದ್ದವು .........!! ಪಾಪ  ಅವುಗಳಿಗೆ  ಹತ್ತಿರದಲ್ಲಿ ನಡೆದಿದ್ದ ಘಟನೆ ಗೊತ್ತೇ ಇರಲಿಲ್ಲ  .....................!!! 

8 comments:

ಗಿರೀಶ್.ಎಸ್ said...

ಏನೆಲ್ಲಾ ಅನುಭವಗಳು ಆಗ್ತಾವೆ ಸರ್ ನಿಮಗೆ... ಆ ಹಂದಿಯ ಫೋಟೋಗಳು ಬಹಳ ಕರ್ಕಶವಾಗಿದೆ... ಮುಂದುವರೆಸಿ ನಿಮ್ಮ ಕಾಡಿನ ಪಯಣವನ್ನು...

Srikanth Manjunath said...

ಒಮ್ಮೆ ಎದೆ ಝಲ್ ಎನ್ನುತ್ತದೆ..ಸನಿಹದಲ್ಲೇ ಭೀಕರ ಬೇಟೆ ನಡೆದಿದ್ದರೂ ತನ್ನ ಹಸಿವನ್ನೇ ಮಾತ್ರ ತೀರಿಸುಕೊಳ್ಳುವಷ್ಟು ತಿಂದು ಯಾರಿಗೂ ತೊಂದರೆ ಕೊಡದೆ ಹೋದ ಆ ಕಾಡು ಮಿಕ ತನ್ನ ಪಾಡಿಗೆ ಹೋಗಿದೆ..ಕಾಡಿನ ಅನುಭವಗಳು ನಿಜಕ್ಕೂ ರಮಣೀಯವಾಗಿರುತ್ತದೆ ಎಂಟೆದೆ ಬೇಕು....ಸುಂದರ ಲೇಖನ...ಒಮ್ಮೆ ನಿಮ್ಮ ಜೊತೆ ಕಾಡು ನೋಡುವ ಆಸೆ ಬಲಗೊಳ್ಳುತ್ತಿದೆ!!!

Santosh Hegde Ajjibal said...

tumba channagide sir

ಚಿನ್ಮಯ ಭಟ್ said...

ಯಪ್ಪಾ ಸಾರ್..
ಏನಿದು ನ್ಯಾಷನಲ್ ಜಿಯೋಗ್ರಫಿ ಚಾನಲ್ಲಿಗೆ ಯಾವಾಗ ಸೇರಿದಿರಿ??? ಹಾಹಾ...
ಭಯ ಹುಟ್ಟಿಸುವ ಚಿತ್ರಗಳು..
ಒಂದು ಹೊಸ ಪ್ರಾಣಿಯ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು..
ಬರೆಯುತ್ತಿರಿ,ಓದುವುದೊಂದೇ ನಮ್ಮ ಕೆಲಸ...
ಸುಯ್ಯ್..
ನಮಸ್ತೆ :)

ಜಲನಯನ said...

ಪೆಂಗೊಲಿನ್ ಇರುವೆಗಳನ್ನು ತನ್ನ ಉದ್ದನೆಯ ಅಂಟುದ್ರವ ಸ್ರವಿಸುವ ನಾಲಗೆಯ ಮೂಲಕ ಹಿಡಿದು ತಿನ್ನುತ್ತೆ ಅಂತ ಕೇಳಿದ್ದೆ... ಚನ್ನಾಗಿದೆ ಕಾಡಿನ ಕಥನ ಬಾಲು,,

M.D.subramanya Machikoppa said...

ಮುಂದೆ???

ಸಂಧ್ಯಾ ಶ್ರೀಧರ್ ಭಟ್ said...

ಭಯಂಕರ ಕಥಾನಕ ಸರ್, ಒಮ್ಮೊಮ್ಮೆ ಎದೆ ಧಸ್ ಎನ್ನುವಂತೆ ಮಾಡುತ್ತೀರಿ.. ಫೋಟೋಗಳನ್ನು ನೋಡಿದದ್ರೆ ಉಗುಳು ನುಂಗುವಂತೆ ಆಗುತ್ತೆ.. ಮತ್ತೆ ಪೆಂಗೊಲಿನ್ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದ್ದೀರಿ

Badarinath Palavalli said...

ನಾಯಿಯ ಯೋಗಾಸನ! ಸೂಪರ್ರೂ.

ಚಿಪ್ಪು ಹಂದಿ ಎಂದರೆ ಮುಟ್ಟಿದೊಡನೆ ಉಂಡೆಯಾಕಾರದಲ್ಲಿ ಸುತ್ತಿಕೊಳ್ಳುತ್ತದೆ ಎಂದು ಕೇಳಿದ್ದೆ, ನಿಮ್ಮ ಚಿತ್ರಗಳಿಂದ ಅದು ಅರ್ಥವಾಯಿತು.

ಚಿರತೆಯ ಹೆಜ್ಜೆ ಗುರುತು ಹಿಡಿದು ಸಾಗುವಾಗ ಆ ಚಿರತೆಯೂ ನಿಮ್ಮ ಹೆಜ್ಜೆ ಗುರುತು ಹಿಡಿದು ಹಿಂದಿನಿಂದ ಬಂದಿದ್ದರೇ!

ಮತ್ತೊಮ್ಮೆ ಸುಂದರ ಸಾದೃಶ್ಯ ಲೇಖನ ಆಸ್ವಾದಿಸಿದ ಅನುಭವವಾಯಿತು.

೪ ಯಾವಾಗ ದೇವರೂ?