Wednesday, December 19, 2012

ಆ ರಾತ್ರಿ ಕಂಡಿತ್ತು ಒಂದು ವಿಶೇಷ !!!!ಶಿಂಷಾ ಕಾಡಿನ ಅಲೆದಾಟ ....೦೨

ಪೈಪ್ ಲೈನ್  ಹಾದಿ.


ಕಳೆದ ಸಂಚಿಕೆಯಲ್ಲಿ ಶಿಂಷಾ ಕಾಡಿನಲ್ಲಿ ಮೊದಲ ಹಂತದ  ಟ್ರೆಕಿಂಗ್  ಅನುಭವ ನಿಮ್ಮೊಂದಿಗೆ ಹಂಚಿಕೊಂಡೆ. ಬನ್ನಿ  ನಂತರದ ಕಥೆ ಓದುವಿರಂತೆ. ಮಧ್ಯಾಹ್ನದ ಊಟ ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದ ನಾವು ಸಂಜೆ ತಿರುಗಾಟಕ್ಕೆ ಸಿದ್ಧರಾದೆವು.ಅಷ್ಟರಲ್ಲಿ ನನ್ನ ನೆಂಟ ರಾಘು ನಮ್ಮ ಜೊತೆ ಸೇರಿಕೊಂಡ [ ಇವನು ಶಿಂಷಾ ಊರಿನಲ್ಲಿಯೇ ಹುಟ್ಟಿ ಬೆಳೆದದ್ದು]  ಊರಿನ ವಿಶೇಷ ತೋರಿಸಲು ಕರೆದುಕೊಂಡು  ಹೊರಟ  . ಮೊದಲು ನಮ್ಮ ಕಾರುಗಳು ಹೊರಟದ್ದು ಶಿಂಷಾ ಕಡೆಯಿಂದ ತೊರೆ ಕಾಡನ  ಹಳ್ಳಿಗೆ ಸಾಗಿದ್ದ  ಕಾವೇರಿ ಪೈಪ್ ಲೈನ್ ಮಾರ್ಗ  ದೆಡೆಗೆ. ಹೌದು ಅಲ್ಲಿ   "ಉಲಬ ಹಳ್ಳ" ದ ಬಳಿ ಸುಂದರ ಪರಿಸರ ಇದೆ.  ಸಂಜೆ ವೇಳೆ ಪಕ್ಷಿ  ವೀಕ್ಷಣೆಗೆ ಅಲ್ಲಿಗೆ  ನಾವು ತೆರಳಿದೆವು.ಉಲಬ ಹಳ್ಳ ದ ಪರಿಸರ 

ಅಲ್ಲಿದ್ದ ತೊರೆಯ ಸಮೀಪ ಕೆಲವು ಗೌಜುಗ ಹಕ್ಕಿಗಳ ಗೂಡು ಕಾಣಿಸಿತು. ಸುತ್ತಲ ಪರಿಸರ ಮುದ ನೀಡಿತು. ಹಾಗೆ ಸಾಗಿದ ನಾವು ಅಲ್ಲಿಂದ ಹಿಂತಿರುಗಿ  ಶಿಂಷಾ ಪುರದ  ನೀರು ಸಂಗ್ರಹಾಗಾರಕ್ಕೆ ತಲುಪಿದೆವು.ಅದನ್ನು " ಫೋರ್ ಬೇ" ಎನ್ನತ್ತಾರೆ. ನೆಲದಿಂದ ಎತ್ತರದ ಗುಡ್ಡ ಏರಿದೊಡನೆ  " ಫೋರ್ ಬೇ"ಗೋಚರಿಸಿತು . ಇಲ್ಲಿ ಸಂಗ್ರಹಿಸಿದ ನೀರನ್ನು ಮತ್ತೆ ಪಂಪ್ ಮಾಡಿ ಪೈಪಿನ  ಮೂಲಕ ನೀರನ್ನು ತೊರೆ ಕಾಡನ ಹಳ್ಳಿಯಲ್ಲಿರುವ   ಬೆಂಗಳೂರು ನೀರು ಸರಬರಾಜು ಕೇಂದ್ರಕ್ಕೆ ತೆಗೆದುಕೊಂಡು ಹೋಗುತ್ತಾರೆ.


ಶಿಂಷಾ ಫೋರ್ ಬೇ ಯಾ ಒಂದು ನೋಟ 

ಶಿಂಷಾ ಫೋರ್ ಬೇ  ಮತ್ತೊಂದು ನೋಟ.

ಒಂದು ಗುಡ್ಡದಲ್ಲಿ  ಆಳವಾದ ಹಾಗು ವಿಶಾಲವಾದ ಒಂದು ಕೃತಕ  ಸರೋವರ ನಿರ್ಮಿಸಿದ್ದು  ಅದರಲ್ಲಿ ನೀರನ್ನು ಸಂಗ್ರಹ ಮಾಡುವ  ಜಾಣ್ಮೆಗೆ ತಲೆದೂಗಿದೆವು. ಹಾಗೆ ಅಲ್ಲಿನ ಶಾಂತವಾದ ವಾತಾವರಣ ಮನಸಿಗೆ ಹಿಡಿಸಿತು. ಅಷ್ಟರಲ್ಲಿ ಪಡುವಣ ದಿಕ್ಕಿನಲ್ಲಿ  ಸೂರ್ಯ ಅಸ್ತಮಿಸಲು ಹೊರಟಿದ್ದ.  ನಾವಿದ್ದ ಜಾಗದಲ್ಲಿ ಸೂರ್ಯಾಸ್ತ ನೋಡುವ ಒಳ್ಳೆಯ ಅವಕಾಶ ನಮಗೆ ಸಿಕ್ಕಿತು.
ಸೂರ್ಯನ  ಚಿತ್ತಾರದ ವೈಭವ.

ಮೋಡ ಗಳೊಂದಿಗೆ ಸೂರ್ಯನ ಕಣ್ಣಾಮುಚ್ಚಾಲೆ.
ಸೂರ್ಯಾಸ್ತದ ವಿಸ್ಮಯ ನೋಟ.


ಹೊನ್ನಿನ ಚೆಂಡಿನಂತೆ ಕಾಣುತ್ತಿದ್ದ ಸೂರ್ಯ   ಚಲುವಿನ  ಚಿತ್ತಾರ ಬಿಡಿಸಿದ್ದ, ಆಗಸದ ಅಂಗಳದಿ ಕರಿ ಮೋಡಗಳ  ಜೊತೆಗೆ ಕಣ್ಣಾಮುಚ್ಚಾಲೆ  ಆಡುತ್ತಾ ಆಗಸದಿ ಹೊನ್ನಿನ ರಂಗು ಚೆಲ್ಲಿ  ಸುಂದರ ವಿಸ್ಮಯ ಲೋಕ ತೆರೆದಿಟ್ಟ.  ಅನತಿ ದೂರದಲ್ಲಿ ಹಾದುಹೋಗಿದ್ದ  ಅಧಿಕ ಶಕ್ತಿಯ ವಿದ್ಯುತ್ ಮಾರ್ಗದ ದೊಡ್ಡ ಕಂಬಗಳ ಹಿಂದೆ ಸೂರ್ಯ  ಬಂದಾಗ  ಅದೊಂದು ಕಲಾಕೃತಿಯಂತೆ  ಕಂಡು ಬಂತು.ಸೂರ್ಯಾಸ್ತ ನೋಡುತ್ತಾ ನಮ್ಮನ್ನೇ  ನಾವು ಮರೆತಿದ್ದೆವು.
ಬಾನಿನ ಸೋರ್ರ್ಯನ ಕಂಡ ಭುವಿಯ ರವೀಂದ್ರ ಹಾಗು ವೇಣು 


ಅಲ್ಲಿಂದ ತೆರಳಿದ ನಾವು ಕತ್ತಲೆಯ ಹಾದಿಯಲ್ಲಿ  ಸುತ್ತ ಮುತ್ತಲ ಕಾಡಿನಿಂದ ಯಾವುದಾರು ಪ್ರಾಣಿ  ಹೊರಬಂದು ಕಂಡಿತೇನೋ  ಎಂಬ ಆಸೆಯಿಂದ  ಅದ್ದಾಡಿದೆವು  ಉ ಹೂ  ಯಾವುದೇ ಪ್ರಯೋಜನ ಆಗಲಿಲ್ಲ.  ಹಾಳಾಗಿ ಹೋಗ್ಲಿ ಅಂತಾ ಶಾಪ ಹಾಕುತ್ತಾ  ನಮ್ಮ ರೆಸಾರ್ಟ್ಗೆ  ಬಂದೆವು .ಆಗಸದಿ ಚಂದ್ರನ ಚೂರು 

ಕತ್ತಲಲ್ಲಿ  ಬೆಂಕಿಯ ಜ್ವಾಲೆಯ  ನರ್ತನ.


ನಾವಿದ್ದ ಜಾಗದಲ್ಲಿ  ಕತ್ತಲಿತ್ತು, ಕಗ್ಗತ್ತಲ ಜಾಗದಲ್ಲಿ ಯಾವುದೇ ಬೆಳಕಿರಲಿಲ್ಲ  ಆಗಸದಿ ಚಂದ್ರನ ಚೂರು   ಟೋಪಿಯಂತೆ ಕಾಣುತ್ತಿತ್ತು.  ಊಟ ಮಾಡಲು ಅಣಿಯಾಗುತ್ತಿದ್ದೆವು  ಅಷ್ಟರಲ್ಲಿ  ಹಲಗೂರಯ್ಯ  ಪ್ರತ್ಯಕ್ಷನಾಗಿ ಕ್ಯಾಂಪ್ ಫೈರ್  ಹಾಕಿದ. ಸುತ್ತಲ ಕತ್ತಲ ಪ್ರಪಂಚದಲ್ಲಿ  ಚುಮು ಚುಮು ಚಳಿಗೆ  ಕ್ಯಾಂಪ್ ಫೈರಿನ  ಬೆಂಕಿಯ ಕಾವು ಮುದ ನೀಡಿತು. ಹೊಟ್ಟೆಗೆ  ಭರ್ಜರಿ ಊಟ  ಸಿಕ್ಕಿತು. ಅಷ್ಟರಲ್ಲಿ ರೆಸಾರ್ಟ್ ಮಾಲೀಕ ವಿಜಯ್ ಬಂದು ಸಾರ್  ರಾತ್ರಿ ಸಫಾರಿ ಹೋಗ್ತೀರಾ ?? ಜೀಪ್ ರೆಡಿ ಇದೆ ಅಂದರು,  ಆ ಜೀಪನ್ನು ಏರಿ ಶಿಂಷಾ ಗೇಟ್  ನಿಂದ  ಜೆ.ಎಲ್. ಆರ್. ಕಡೆಗೆ ಸಾಗಿದ್ದ ಕಾಡಿನ ಹಾದಿಯಲ್ಲಿ ಹೊರಟೆವು.ಇಂಡಿಯನ್ ನೈಟ್ ಜಾರ್ ಪಕ್ಷಿ 

ಕತ್ತಲ ಹಾದಿಯಲ್ಲಿ ಸಾಗಿದ್ದ ಜೀಪು, ನಿಶ್ಯಬ್ಧವಾಗಿ ಕುಳಿತಿದ್ದ ನಾವು  , ಯಾವುದಾದರು ವನ್ಯ ಜೀವಿ ಕಂಡೀತೆ ಎಂಬ  ಕಾತರ, ಇವೆಲ್ಲಾ  ಜೀಪಿನೊಡನೆ ಸಾಗಿದ್ದವು. ಇಲ್ಲಿಗೆ ಬರುವ ಮೊದಲು ದಿನ ನಿತ್ಯಾ ಪತ್ರಿಕೆಗಳಲ್ಲಿ  ಇಲ್ಲಿ  ಆನೆಗಳು ಮಾಡಿದ ಅವಾಂತರದ ವರಧಿ ಓದಿದ್ದ ನನಗೆ   ಇವತ್ತು ಆನೆಗಳು ಸಿಗಲಿ ಎಂಬ ಬಯಕೆ ಇತ್ತು.  ಆದರೆ ನಮ್ಮ ನಸೀಬಿಗೆ ಯಾವುದೇ ವನ್ಯ ಜೀವಿ ನೋಡುವ ಬಾಗ್ಯ ಇರಲಿಲ್ಲ . ಕತ್ತಲ ಸೀಳಿಕೊಂಡು ಜೀಪು ಕಾಡಿನಲ್ಲಿ ಸಾಗಿತ್ತು. ಮುಂದೆ ಕುಳಿತಿದ್ದ ನನಗೆ  ಹಾದಿಯಲ್ಲಿ ಒಂದು ಹಕ್ಕಿ ಜೀಪಿನ ಲೈಟ್  ಬೆಳಕಿಗೆ ಹೆದರಿ  ರಸ್ತೆಯ ನಡುವೆ ಮುದುರಿ  ಕುಳಿತಿದ್ದುದನ್ನು   ಕಂಡು ಜೀಪ್ ನಿಲ್ಲಿಸಲು ಹೇಳಿದೆ  , ಸುತ್ತ ಮುತ್ತ ಗಮನಿಸಿ  ಮೆತ್ತಗೆ ಜೀಪಿನಿಂದ ಇಳಿದೆವು, ಹತ್ತಿರ ಹೋಗಿ ನೋಡಿದರೆ ಈ ಅಪರೂಪದ ಹಕ್ಕಿ  ಕಂಡು ಬಂತು. ಅದೇ  "ಇಂಡಿಯನ್ ನೈಟ್ ಜಾರ್ ಅಥವಾ ಕುರುಡುಗಪ್ಪಟ ಹಕ್ಕಿ"  ಈ ಅಪರೂಪದ ಹಕ್ಕಿ ಗೂಡು ಕಟ್ಟುವುದಿಲ್ಲ,ಫೆಬ್ರವರಿ ಯಿಂದ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವರೆಗೆ ನೆಲದ ಮೇಲೆ ಸಣ್ಣ ಗುಳಿ ಮಾಡಿ  ಅದರಲ್ಲಿ ಮೊಟ್ಟೆ ಇಟ್ಟು  ಮರಿ ಮಾಡುತ್ತವೆ.  ತುಂಬಾ  ಅಪರೂಪದ ನಾಚಿಕೆ ಸ್ವಭಾವದ ಹಕ್ಕಿ ಇದು. ನಮ್ಮ ಕ್ಯಾಮರಾ ಕಣ್ಣಿಗೆ ಸೆರೆಯಾಯಿತು. ಮನಸಿಗೆ ಸ್ವಲ್ಪ ಸಮಾಧಾನ ಆಯಿತು, ಬಹಳ ದೂರ ಬಂದಿದ್ದ ನಾವು ಮತ್ತೆ ವಾಪಸ್ಸು ನಮ್ಮ ರೆಸಾರ್ಟ್ ಗೆ ತಲುಪಿದೆವು. ಇದರ ನೆನಪಿನಲ್ಲೇ  ಮಲಗಿದೆವು,. ದಣಿದಿದ್ದ  ದೇಹ  ನಿದ್ರಾದೇವಿಯ ಆಸರೆ ಬಯಸಿ ಮಲಗಿತು.ಮುಂಜಾವಿನ ಸುಪ್ರಬಾತ ಹಾಡಿದ ಹಕ್ಕಿಗಳು.


ನಾನೂ ಯೋಗಾ ಮಾಡ್ತೀನಿ ಅಂದಿತ್ತು ಮುದ್ದು ನಾಯಿಮರಿ.


 ಮಾರನೆಯ ದಿನ ಮುಂಜಾನೆಯ ಪಕ್ಷಿಗಳ ಸುಪ್ರಬಾತಕ್ಕೆ ಎಚ್ಚರವಾಗಿ ಹೊರಗೆ ಬಂದು ನೋಡಿದರೆ  ನಮ್ಮ ರೂಮಿನ ಎದುರಿಗಿದ್ದ ಸುರಗಿ ಮರದಲ್ಲಿ ಕುಳಿತ ಎರಡು  ಹಕ್ಕಿಗಳು ಸುಪ್ರಬಾತ  ಹಾಡಿದ್ದವು, ಮತ್ತಷ್ಟು ಮುಂದೆ ಬಂದು  ಗೋಲ್ ಘರ್ ನಲ್ಲಿ ನೋಡಿದರೆ ನಮ್ಮ ರವಿಂದ್ರ ಯೋಗಾಸನ ಮಾಡುತ್ತಿದ್ದ  ಅವನ ಪಕ್ಕದಲ್ಲಿ ರೆಸಾರ್ಟ್ ನವರು ಸಾಕಿದ್ದ ಮುದ್ದು ನಾಯಿ ಮರಿ  ಅವನ ಪಕ್ಕದಲ್ಲಿ  ತಾನೂ ಅವನಂತೆ ಮೈ ಬಗ್ಗಿಸಿ ಯೋಗಾಸನ ಮಾಡಿತ್ತು...............................!!!!!

6 comments:

manu said...

ಚೆನ್ನಾಗಿದೆ ನಿಮ್ಮ ಟ್ರೆಕಿಂಗ್ ಅನುಭವ ಆಮೇಲೆ ನನಗೆ ನಾಯಿಮರಿಯ ಯೋಗದ ಫೋಟೋ ತುಂಬಾ ಇಷ್ಟ ಆಯಿತು ಬಲು ಸರ್

Ashok.V.Shetty, Kodlady said...

ಬಾಲೂ ಸರ್,

ನಿಮ್ ಜೊತೆ ನಾನು ಕೂಡ ಹೋಗಿ ಬಂದೆ....ಚೆನ್ನಾಗಿತ್ತು ಈ ಟ್ರಿಪ್ ಸರ್.....ತುಂಬಾ ಮಜಾ ಮಾಡಿದೆ..ಸಂತೋಷ ಪಟ್ಟೆ .......ಧನ್ಯವಾದಗಳು ನನ್ನನ್ನು ನಿಮ್ ಜೊತೆ ಸುತ್ತಿಸಿದ್ದಕ್ಕೆ .....ಸುಂದರ್ ಫೋಟೋಗಳನ್ನು ತೆಗೆಸಿದ್ದಕ್ಕೆ.............

ಸೂಪರ್ ಪ್ರವಾಸ ಕಥನ .....ಮುಂದಿನ ಬಾರಿ ಎಲ್ಲಿಗೆ ಕರ್ಕೊಂಡ್ ಹೋಗ್ತೀರಾ????

Srikanth Manjunath said...

ಶಿಂಷಾಪುರದ ಪೈಪ್ ಲೈನ್ ಹಾದಿಯ ಚಿತ್ರ ಸೊಗಸಾಗಿದೆ..ಕೊಳವೆಯಿಂದ ಸಾಗರಕ್ಕೆ ಪರಿಚಯಿಸಿದ ರೀತಿ ಸಿನಿಮಾದಲ್ಲಿ ನಾಯಕನ್ನು ತೋರುವ ಪರಿ ನೆನಪಿಗೆ ಬಂದಿತು. ಅಗಾಧವಾದ ಜಲರಾಶಿ, ಸೂರ್ಯಾಸ್ತ ಚಿತ್ರಗಳು, ಅದರಲ್ಲೂ ಮೋಡಗಳ ಕೆಳಗೆ ಇಳಿಯುತ್ತಿರುವ ಸೂರ್ಯನ ಬೆಂಕಿ ಚೆಂಡು ಸೊಗಸಾಗಿ ಮೋದಿ ಬಂದಿದೆ. ಒಂದು ಸುಂದರ ಅರಣ್ಯ ಪ್ರದೇಶದಲ್ಲಿ ಸುತ್ತಾಡಿದ ಅನುಭವ ತಣ್ಣಗೆ ಆಯಿತು..
ಸುಂದರ ಕಥನ..ಅಭಿನಂದನೆಗಳು

Badarinath Palavalli said...

ನಾಗರೀಕತೆಯ ಸ್ವಾರ್ಥಕ್ಕೆ ಕಾಡ ನಡುವೆ ಸೀಳಿ ಹರಿದ ಪೈಪ್ ಲೈನ್ ಹಾದಿ ಅನಿವಾರ್ಯ ಆದರೂ ಅಮಾನವೀಯ ಅಲ್ಲವೇ ಸಾರ್?

ಬೆಂಗಳೂರಿಗೆ ಎಲ್ಲಿಂದ ನೀರು ಬರುತ್ತದೆ ಎನ್ನುವುದು ನನಗೆ ಅರ್ಧಂಬರ್ಧ ಗೊತ್ತಿತ್ತು, ನೀವೀಗ ನನಗೆ ಪೂರ ಮಾಹಿತಿ ಕೊಟ್ಟಿರಿ.

"ಸೂರ್ಯಾಸ್ತದ ವಿಸ್ಮಯ ನೋಟ" ಕ್ಯಾಫ್ಷನ್ ಕೊಟ್ಟಿರುವ ಚಿತ್ರದಲ್ಲಿ ಸೂರ್ಯನ ಮುಂದೆ ಹೈ ಟೆನ್ಷನ್ ಮಾರ್ಗವಿದ್ದು, ಸೂರ್ಯನು ಮನುಜ ನಾನೇ ನಿನ್ನ ಅಪಾರ ಮುಗಿಯದ ಶಕ್ತಿ ಮೂಲವಾಗಿರುವಾಗ ನೀನು ಮತಿ ಹೀನನಾಗಿ ವಿದ್ಯುತ್ ಹುಡುಕುತ್ತಾ ಹೊರಟೆಯಲ್ಲ ಎನ್ನುವಂತಿದೆ!

ನೈಟ್ ಸಫಾರಿ ವ್ಯರ್ಥವಾಗದೆ ಒಳ್ಳೆಯ ಚಿತ್ರವೇ ಸಿಕ್ಕಿದೆ.

ಇದಂತು ನನಗೆ ಬಲು ನೆಚ್ಚಿಗೆಯಾಯ್ತು ಒಳ್ಳೆಯ ಚಿತ್ರ:
"ನಾನೂ ಯೋಗಾ ಮಾಡ್ತೀನಿ ಅಂದಿತ್ತು ಮುದ್ದು ನಾಯಿಮರಿ".

೩ನೇ ಭಾಗಕ್ಕೆ ಕಾಯುತ್ತಿದ್ದೇವೆ ಜಗತ್ ಸಂಚಾರಿಗಳೇ...

ಚಿನ್ಮಯ ಭಟ್ said...

ಬಾಲು ಸರ್..ಇವತ್ತು ನೋಡಿದೆ ನಿಮ್ಮ ಬ್ಲಾಗನ್ನು...
ಆ ಸೂರ್ಯ ಮುಳುಗುವ ಚಿತ್ರವಂತೂ ತುಂಬಾ ಸೊಗಸಾಗಿದೆ...
ಜೊತೆಗೆ ಆ ಬೆಂಕಿಗ ಚಿತ್ರವೂ ಕೂಡಾ...
ಮುಂದುವರೆಯಲಿ ಪ್ರಯಾಣ..
ಬರ್ತಿವೀ ನಾವೂ ನಿಮ್ ಹಿಂದೆನೆ,....
ನಮಸ್ತೆ.

ಚಿನ್ಮಯ ಭಟ್ said...

ಬಾಲು ಸರ್..ಇವತ್ತು ನೋಡಿದೆ ನಿಮ್ಮ ಬ್ಲಾಗನ್ನು...
ಆ ಸೂರ್ಯ ಮುಳುಗುವ ಚಿತ್ರವಂತೂ ತುಂಬಾ ಸೊಗಸಾಗಿದೆ...
ಜೊತೆಗೆ ಆ ಬೆಂಕಿಗ ಚಿತ್ರವೂ ಕೂಡಾ...
ಮುಂದುವರೆಯಲಿ ಪ್ರಯಾಣ..
ಬರ್ತಿವೀ ನಾವೂ ನಿಮ್ ಹಿಂದೆನೆ,....
ನಮಸ್ತೆ.