ಸಿರ್ಸಿ ಹಳೆಯ ಬಸ್ ನಿಲ್ದಾಣ. |
ಬಾರೋ ಮಹಾರಾಜ ಬಂದ್ಯಾ !!! ಎಷ್ಟು ವರ್ಷಾ ಆಗಿತ್ತು ನಿನ್ನ ನೋಡಿ? ಅಂತಾ ಉಪಚಾರ ಮಾಡಿ ಬಿಸಿ ಬಿಸಿ ಕಾಫಿ ಕೊಟ್ಟು. ಸ್ವಲ್ಪ ಹೊತ್ತು ಮಲಗು ಅಂದಳು. ..............ಆಗ ವೇಳೆ ಬೆಳಿಗ್ಗೆ ಆರು ಘಂಟೆ ಆಗಿತ್ತು. ..............................!!!! ಹಾಗೆ ಮಲಗಿದೆ ನಿದ್ದೆ ಬರಲಿಲ್ಲ , ಮನೆಯ ಸುತ್ತ ತೋಟದಲ್ಲಿನ ಮರಗಳಿಂದ ಮುಂಜಾವಿನ ಚಿಲಿಪಿಲಿ ಹಕ್ಕಿಗಳ ಗಾನ , ಹಿತವಾಗಿತ್ತು. ಕೇಳುತ್ತಾ ರಾತ್ರಿ ಪ್ರಯಾಣದ ಆಯಾಸ ಮಾಯವಾಗಿತ್ತು. ಮನದಲ್ಲಿ ಹೊಸ ಚೈತನ್ಯ ಮೂಡುತ್ತಿತ್ತು. ಯಾಕೋ ಕಾಣೆ ಶಿರಸಿಯ ಇತಿಹಾಸ ತಿಳಿಯಲು ಮನ ಹಾ ತೊರೆಯುತ್ತಿತ್ತು.
ಸಿರ್ಸಿ ಮಾರಿಕಾಂಬೆ ಜಾತ್ರೆ ಮಾಳದಲ್ಲಿ ದರ್ಶನ ನೀಡಿದ್ದು ಹೀಗೆ. |
ನನಗೆ ಇದೊಂದು ಕೆಟ್ಟ ಕುತೂಹಲ, ಯಾವುದೇ ಊರಿಗೆ ಬಂದರೂ ಅಲ್ಲಿನ ಇತಿಹಾಸ ಜಾಲಾಡುವ ಆಸೆ , ಈ ಆಸೆ ಹಲವು ಸಾರಿ ಫಜೀತಿ ತಂದಿದೆ ಆದರೂ ಇಲ್ಲಿಗೆ ಬರುವ ಮೊದಲು "ಇಟ್ಟಿಗೆ ಸಿಮೆಂಟ್ " ಪ್ರಕಾಶ್ ಹೆಗ್ಡೆ ಸೇರಿದಂತೆ ಹಲವರನ್ನು ಶಿರಸಿಯ ಇತಿಹಾಸ ತಿಳಿಸಲು ಪೀಡಿಸಿದ್ದೆನಾದರೂ , ನನಗೆ ತಿಳಿಸಲು ಅವರುಗಳಿಗೆ ತಿಳಿದಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಗುವ ಆಸೆ ಕಾರಣಾಂತರದಿಂದ ತಪ್ಪಿ ಹೋಯಿತು. ಅಂತರ್ಜಾಲದಲ್ಲಿ ತಡಕಾಡಿದರೂ ಪ್ರಯೋಜನ ವಾಗಲಿಲ್ಲ. ಅರೆ ಈ ಊರು ತನ್ನ ಇತಿಹಾಸವನ್ನೇ ಜಗತ್ತಿಗೆ ಬಿಟ್ಟುಕೊಡುತ್ತಿಲ್ಲವಲ್ಲಾ ಎನ್ನುವ ವಿಸ್ಮಯ ನನಗೆ ಆದರೂ ತಣಿಯದ ದಾಹ ಹುಡುಕುತ್ತಲೇ ಹೊರಟೆ. ಹತ್ತಿರದಲ್ಲೇ ಐತಿಹಾಸಿಕವಾಗಿ ಮೆರೆದಿದ್ದ ಬನವಾಸಿ, ಸೋಂದೆ ಊರುಗಳ ಸನಿಹದಲ್ಲಿದ್ದ ಶಿರಸಿ ಅಷ್ಟಾಗಿ ಅಂದಿನ ದಿನದಲ್ಲಿ ಪ್ರಾಮುಖ್ಯತೆ ಹೊಂದಿರಲಿಲ್ಲವೇನೋ ಅನ್ನಿಸುತ್ತದೆ. ಅಥವಾ ಈ ಊರು ಅಂದು ಒಂದು ಕುಗ್ರಾಮ ಆಗಿರಬಹುದು.ಈ ಊರನ್ನು, ಶತವಾನರು, ಚುತು ವಂಶಸ್ಥರು , ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಬನವಾಸಿ ಕದಂಬರು, ವಿಜಯನಗರ ರಾಜರು, ತಲಕಾಡಿನ ಗಂಗರು, ಪಲ್ಲವರು, ಹೊಯ್ಸಳರು, ಸೋಂದಾ ಅರಸರು, ಮೈಸೂರಿನ ಅರಸರು, ಶ್ರೀ ರಂಗ ಪಟ್ಟಣದ ಹೈದರ್ ಹಾಗು ಅವನ ಮಗ ಟಿಪ್ಪೂ , ಮತ್ತೆ ಮೈಸೂರ ಅರಸರು, ನಂತರ ಬ್ರಿಟೀಷರು ಆಡಳಿತ ನಡೆಸಿದ್ದಾರೆ.. ಆದರೆ ಅಂದು ಈ ಊರು, ಆರ್ಥಿಕವಾಗಿಯೂ, ಆಡಳಿತ ಹಿತದೃಷ್ಟಿ ಯಿಂದ, ಬನವಾಸಿ ಹಾಗು ಸೋಂದೆ ಯಷ್ಟು ಪ್ರಾಮುಖ್ಯತೆ ಪಡೆಯಲಿಲ್ಲ ಹಾಗಾಗಿ ಅಂದಿನ ದಿನದಲ್ಲಿ ಈ ಊರಿನ ಇತಿಹಾಸ ಹೆಚ್ಚಾಗಿ ಕಾಣಲು ಸಿಗುವುದಿಲ್ಲ ಈ ಊರಿನ ಇತಿಹಾಸದ ಬಗ್ಗೆ ಯಾವುದೇ ಶಾಸನ, ಲಿಖಿತ ದಾಖಲೆಗಳ ಮಾಹಿತಿ ಹಾಲಿ ಇರುವುದಿಲ್ಲ , ಬನವಾಸಿಯ, ಹಾಗು ಸೋಂದೆ ಇತಿಹಾಸ ಹೇಳುವಾಗಲೂ ಶಿರಸಿಯ ಬಗ್ಗೆ ಎಲ್ಲೂ ಉಲ್ಲೇಖ ಇರುವುದಿಲ್ಲ.ಈ ಬಗ್ಗೆ ಬಹಳಷ್ಟು ಸಂಶೋಧನೆ ಅಗತ್ಯವಿದೆ. "ವಿಚಿತ್ರವೆಂದರೆ ಉತ್ತರಪ್ರದೇಶ ರಾಜ್ಯದ ಮೊರಾದಾಬಾದ್ ಜಿಲ್ಲೆಯಲ್ಲಿ ಸಿರ್ಸಿ ಎಂಬ ಹೆಸರಿನ ಮತ್ತೊಂದು ಪಟ್ಟಣ ಇದೆ" ಈ ಸಿರ್ಸಿಗೂ ನಮ್ಮ ನಾಡಿನ ಶಿರಸಿಗೂ ಯಾವುದಾದರೂ ಐತಿಹಾಸಿಕ ಸಂಬಂಧ ಇದೆಯೇ ಎಂಬ ಬಗ್ಗೆ ಸಂಶೋಧನೆ ಅಗತ್ಯವಿದೆ.
ಮಾರಿಕಾಂಬಾ ದೇವಾಲಯದ ಒಂದು ಚಿತ್ರ |
ಶಿರಸಿಯ ಇತಿಹಾಸ ಗೋಚರಿಸುವುದು ಹದಿನೇಳನೆ ಶತಮಾನದಲ್ಲಿ ಸೋಂದಾ ರಾಜ ಇಮ್ಮಡಿ ಸದಾಶಿವ ರಾವ್ ನಿರ್ಮಿಸಿದರೆಂದು ಹೇಳಲಾಗುವ ಮಾರಿಕಾಂಬೆ ದೇವಾಲಯದ ಮೂಲಕವೇ. ಸ್ವಾತಂತ್ರ್ಯಾ ನಂತರ ಆರ್ಥಿಕವಾಗಿ ಬೆಳವಣಿಗೆ ಕಂಡು ತನ್ನ ನೆಲದಲ್ಲಿ ಅಡಿಕೆ, ವಿಳ್ಳೆದೆಲೆ , ಏಲಕ್ಕಿ, ಮೆಣಸು, ಇವುಗಳನ್ನು ಬೆಳೆದು, ತನ್ನ ಸ್ಥಾನ ಗಳಿಸಿಕೊಂಡಿತು, ಶಿರಸಿಯು ಇಂದು ಉತ್ತರ ಕನ್ನಡ [ ಕಾರವಾರ ] ಜಿಲ್ಲೆಯ ಒಂದು ಪ್ರಮುಖ ತಾಲೂಕು ಹಾಗು ವಾಣಿಜ್ಯ ಕ್ಷೇತ್ರ, "ಪತ್ರಕರ್ತ ", "ಜನಮಾಧ್ಯಮ ", ಹಾಗೂ "ಲೋಕಧ್ವನಿ" ಎಂಬ ಮೂರು ಸ್ಥಳೀಯ ಪತ್ರಿಕೆಗಳು ಸಿರಸಿಯ ಸುತ್ತ ಮುತ್ತಲಿನ ಸುದ್ದಿ ಗಳನ್ನೂ ಪ್ರಕಟಿಸುತ್ತಾ ಜನರ ಧ್ವನಿಗಳಾಗಿವೆ . ಇನ್ನು ಸಿರಸಿಯ ವಿಶೇಷ ಹೋಳಿಗೆ, ತೊಡದೇವು ದೋಸೆ, ಕಡುಬು , ಜಿಲೇಬಿ ಬಾಯಲ್ಲಿ ನೀರು ಬರಿಸುತ್ತಿದ್ದರೆ, "ಅಪ್ಪೆ ಹುಳಿ" ಮುಂತಾದ ಹವ್ಯಕ ಅಡಿಗೆಗಳು ರುಚಿಯಾಗಿ ನಿಮ್ಮ ನಾಲಿಗೆಯನ್ನು ಮುದಗೊಳಿಸುತ್ತವೆ .ಇಲ್ಲಿನ ಮಾವು, ಹಾಗು ಹಲಸಿನ ಹಣ್ಣುಗಳು ಹಾಗು ಅವುಗಳಿಂದ ಮಾಡುವ ಖಾದ್ಯ ಬಾಯಲ್ಲಿ ನೀರು ತರಿಸುವುದು ಸುಳ್ಳಲ್ಲ.
ಶಿರಸಿಯ ದೇವಿಕೆರೆ |
ಇದನ್ನೆಲ್ಲಾ ಹೇಳುತ್ತಾ ನಿಂತಲ್ಲೇ ನಿಂತು ಬಿಟ್ಟೆ ಕ್ಷಮಿಸಿ, ಬನ್ನಿ ನನ್ನ ಪುರಾಣಕ್ಕೆ , ಮಲಗಿದ್ದವ ಹಕ್ಕಿಗಳ ಗಾನ ಕೇಳುತ್ತಾ ಆಯಾಸ ಪರಿಹರಿಸಿಕೊಂಡು , ಸಿದ್ಧನಾದೆ. ನನ್ನ ಸೋದರತ್ತೆ "ಬಾರೋ ಬೇಗ ತಿಂಡಿ ಆರಿಹೊಗುತ್ತೆ" ಅಂತಾ ಕರೆದಳು. {ಇವಳು ನಮ್ಮ ಕುಟುಂಬ ದಿಂದ ಸುಮಾರು ಮೂವತ್ತು ವರ್ಷಗಳ ಹಿಂದೆ, ಇಲ್ಲಿನ ಹವ್ಯಕ ಹುಡುಗನನ್ನು ವಿವಾಹವಾಗಿ ಸಿರ್ಸಿಗೆ ಬಂದು ನೆಲಸಿದ್ದಾಳೆ, ಪತಿಯೂ ಅಷ್ಟೇ ಶಿರಸಿಯಲ್ಲಿ ಬಹಳ ಕಾಲದಿಂದಲೂ ಪ್ರಸಿದ್ದ ವೈಧ್ಯರು "ಕೊಪ್ಪಳ್ ಡಾಕ್ಟರ್ " ಅಂತಾನೂ ಕರೀತಾರೆ. ದೇವಿಕೆರೆ ಬಳಿ ಇವರ ದವಾಖಾನಿ ಇದೆ, ಮಗ ಹಾಗು ಸೊಸೆ ಯೂ ಸಹ ವೈಧ್ಯರೆ ಅವರೂ ಸಹ ಸಿರಸಿಯ ಲ್ಲೇ ಇದ್ದಾರೆ.} ನಾನೂ ಬೇಗ ನನ್ನ ನಿತ್ಯ ಕರ್ಮಗಳನ್ನು ಮುಗಿಸಿ ತಿಂಡಿಯ ತಟ್ಟೆಯ ಮುಂದೆ ಹಾಜರು, ಬಿಸಿ ಬಿಸಿ ದೋಸೆ ತಿನ್ನಲು ಕೊಡುತ್ತಾ "ಲೋ ಇವತ್ತು ಎಲ್ಲೂ ಅಲೆಯಲು ಹೋಗಬೇಡ ಮನೆಯಲ್ಲೇ ಇರು ನಿನ್ನ ಜೊತೆ ಬಹಳ ಮಾತಾಡೋದು ಇದೆ " ಅಂತಾ ಹೇಳಿದಳು, ನಾನು "ನೋಡೇ ನಾಗು , ನನಗೆ ಸ್ವಲ್ಪ ಕೆಲಸವಿದೆ, ದಯವಿಟ್ಟು ತಪ್ಪು ತಿಳಿಯ ಬೇಡ ರಾತ್ರಿ ಖಂಡಿತ ನಿಮ್ಮೆಲ್ಲರ ಜೊತೆ ಊಟ ಮಾಡಿ ಹರಟೆ ಹೊಡೆಯುತ್ತೇನೆ" ಅಂದೇ, ಪಾಪಿ ಅಪರೂಪಕ್ಕೆ ಮನೆಗೆ ಬಂದು ಅಲೆಯೋಕೆ ಹೋಗ್ತೀಯ ಅಂತಾ ಪ್ರೀತಿಯ ಶಾಪ ಹಾಕಿದಳು. ಶಾಪದ ಪ್ರೀತಿಯಲ್ಲಿ ಸುಮಾರು ಆರು ರುಚಿ ರುಚಿಯಾದ ದೋಸೆಗಳು ತೆಂಗಿನ ಕಾಯಿ ಚಟ್ನಿಯೊಂದಿಗೆ ಹೊಟ್ಟೆ ಸೇರಿ ಸದ್ಗತಿ ಪಡೆದಿದ್ದವು. ಜೊತೆಗೆ ಬಿಸಿ ಕಷಾಯ . ಹಬೆಯಾಡುತ್ತಾ ಹೊಟ್ಟೆ ಸೇರಿತ್ತು.
ಶಿರಸಿಯ ಬೀದಿಯಲ್ಲಿ ಸಿಕ್ಕ ಉರುಮಾರಮ್ಮಗಳು |
ಅಷ್ಟರಲ್ಲಿ ನನ್ನ ಮೊಬೈಲ್ಗೆ ಒಂದು ಕರೆ ಬಂದು ........!!! "ಬಾಲೂಜಿ ಇನ್ನು ಹತ್ತು ನಿಮಿಷಕ್ಕೆ ನಿಮ್ಮ ನೆಂಟರ ಮನೆಯ ಬಳಿ ಬರುತ್ತೇನೆ ರೆಡಿ ಇರಿ ಹೊರಟು ಬಿಡೋಣ ನನ್ನ ಬೈಕಿನಲ್ಲಿ " ಅಂತಾ ನಮ್ಮ "ಆರ್ಕುಟ್ ತಾಣದ ಗೆಳೆಯ ಹರ್ಷಾ ಹೆಗ್ಡೆ " ಸೂಚನೆ. ನನ್ನ ಅತ್ತೆ "ಯಾರೋ ಅದು? ಅಂದಳು" "ಹರ್ಷ ಹೆಗ್ಡೆ ಅಂತಾ ಕಣೆ " ನನ್ನ ಸ್ನೇಹಿತರು ಅಂದೇ, ಸರಿ ಸರಿ ನಿನಗೇನೂ ಯಾವ ಮರಳು ಗಾಡಿಗೆ ಹೋದರೂ ಯಾರಾದ್ರೂ ಸಿಗ್ತಾರೆ ಕಣಪ್ಪಾ ಅಂತಾ ಸಂತಸದ ಮಾತುಗಳನ್ನು ಆಡಿದಳು.ಅಷ್ಟರಲ್ಲಿ ಮನೆಯ ಹೊರಗೆ ಬೈಕ್ ಸದ್ದಾಗಿ ಹೊರಗೆ ಬಂದೆ ಬೈಕಿನ ಮೇಲೆ ನಗು ನಗುತ್ತಾ ನಿಂತಿದ್ದಾ ಆ ಹುಡುಗ.
ಪ್ರೀತಿಯ ಗೆಳೆಯ ಹರ್ಷ ಹೆಗ್ಡೆ |
ಹರ್ಷ ಹೆಗ್ಡೆ ನನಗೆ ಆರ್ಕುಟ್ ತಾಣದ ಗೆಳೆಯ ವಯಸ್ಸಿನಲ್ಲಿ ನನಗಿಂತಾ ಸುಮಾರು ಇಪ್ಪತ್ತು ವರ್ಷ ಚಿಕ್ಕವನು , ಆರ್ಕುಟ್ ಸಾಮಾಜಿಕ ತಾಣದ ಮೂಲಕ ಪರಿಚಯವಾಗಿ , ಗೆಳೆತನ ಬೆಳೆಯಿತು. ಒಮ್ಮೆ ಮೈಸೂರಿಗೆ ಗೆಳೆಯರೊಡನೆ ಬಂದು ನನ್ನ ಜೊತೆ ಇದ್ದ ಸ್ವಲ್ಪ ಸಮಯದಲ್ಲೇ ಖುಷಿಪಟ್ಟು ಹೋಗಿದ್ದ , ನಾನೂ ಸಿರ್ಸಿಗೆ ಬರುವ ವಿಚಾರ ತಿಳಿದು ತಾನೂ ನನ್ನ ಜೊತೆ ಸುತ್ತಲು ತಯಾರಾಗಿ ಬಂದಿದ್ದ, ಸುತ್ತಲು ಕಾರು ಮಾಡೋಣ ಎಂದರೂ ಕೇಳದೆ ತನ್ನ "ಯಮಹಾ ಬೈಕ್" ತಂದು , ಇಡೀ ಪ್ರವಾಸದಲ್ಲಿ ನನಗೆ ಅವಕಾಶವನ್ನೇ ಕೊಡದೆ ಎರಡು ದಿನ ಪೆಟ್ರೋಲ್ ಸಹಿತ ತಾನೇ ಹಾಕಿಸಿಕೊಂಡು ಸುತ್ತಾಡಿಸಿ ಸಿರಸಿಯ ಪರಿಚಯ ಮಾಡಿಕೊಟ್ಟ ಪ್ರೀತಿಯ ತಮ್ಮ , ವಯಸಿನ ಅಂತರ ವಿಲ್ಲದೆ ಬೆರೆತು ಎರಡು ದಿನ ಶಿರಸಿ ತಾಲೂಕಿನ ಸುತ್ತಾಟದಲ್ಲಿ ನನ್ನ ಜ್ಞಾನ ದಾಹ ಇಂಗಿಸಿದ . ಮುಂದೆ ಈ ತಮ್ಮನೇ ನನಗೆ ಶಿರಸಿಯ ದರುಶನ ಮಾಡಿಸಿ ತಾನು ಸಂತಸ ಪಟ್ಟ, ವಯಸ್ಸಿನ ಹುಡುಗಾಟಿಕೆ, ಹುಮ್ಮಸ್ಸು, ಜೊತೆಗೆ ತನ್ನ ಊರನ್ನು ತೋರಿಸುವ ಹೆಮ್ಮೆಯ ಮುಖಭಾವ ಹೊಂದಿದ್ದ ಹುಡುಗ ಅವನು." ಸಾರ್ ನಿಮ್ಮ ಪ್ಲಾನ್ ಏನಾದರೂ ಇದೆಯಾ ??" ಎಂದಾ, ನಾನು" ಇಲ್ಲಾ ಹರ್ಷ "ಕೊಳ್ಗೀ ಬೀಸ್ " ನಲ್ಲಿ ನಾಳೆ ವಿವಾಹ ಕಾರ್ಯಕ್ರಮ ಇದೆ ಆದ್ರೆ ಇವತ್ತು ಎಷ್ಟು ಒಳ್ಳೆಜಾಗ ನೋಡ ಬಹುದು ಅಷ್ಟನ್ನು ನೋಡೋಣ ನಿಮಗೆ ತೊಂದರೆ ಆಗದಂತೆ " ಅಂದೇ. ಸಾರ್ ದಯವಿಟ್ಟು ಸಂಕೋಚ ಬೇಡ ಬನ್ನಿ ಹೊರಡೋಣ ಎನ್ನುತ್ತಾ ......ತನ್ನ ಬೈಕನ್ನು ಸ್ಟಾರ್ಟ್ ಮಾಡಿದ ಪ್ರೀತಿಯ ತಮ್ಮ.............!!! ಬೈಕು ಜೋರಾಗಿ ಮುನ್ನುಗ್ಗುತ್ತಿತ್ತು.........ಅಂಕು ಡೊಂಕು ರಸ್ತೆಯಲ್ಲಿ ............
ಸಹಸ್ರ ಲಿಂಗ ಕ್ಷೇತ್ರ |
."ಸಹಸ್ರ ಲಿಂಗ" ಕ್ಷೇತ್ರ ದೆಡೆಗೆ ...........!!!