ಬುರುಡೆ ಕ್ಯಾಂಪು |
ಕಳೆದ ಸಂಚಿಕೆಯಲ್ಲಿ ಗುಂಡಾಲ್ ಅಣೆಕಟ್ಟಿನಿಂದ ಬುರುಡೆ ಹಾದಿಯ ಅನುಭವಗಳನ್ನು ಓದಿ ಮೆಚ್ಚಿದ್ದೀರಿ , ಬನ್ನಿ ಮುಂದೆ ಸಾಗೋಣ ............... ಗುಂಡಾಲ್ ನಿಂದ ಬಂದ ನಮಗೆ ಈ ಬುರುಡೆ ಕ್ಯಾಂಪ್ ನಲ್ಲಿ ಇಂದಿನ ವಾಸ್ತವ್ಯ ಆಗಿತ್ತು.ನಮ್ಮ ಲಗೇಜುಗಳನ್ನು ಕಾರಿನಿಂದ ಇಳಿಸಿ , ತಂದಿದ ರೇಶನ್ , ಹಾಗು ರೆಡಿ ಟು ಈಟ್ ನ ಕೆಲವು ಸಾಮಗ್ರಿಗಳನ್ನು ಅಲ್ಲಿನ ಸಿಬ್ಬಂದಿಗಳ ಕೈಗೆ ಹಸ್ತಾಂತರಿಸಿದೆವು. ಅಲ್ಲಿನ ಸಿಬ್ಬಂದಿಗೆ ನಾವು ಬರುವ ಮಾಹಿತಿ ಮೊದಲೇ ತಿಳಿದಿದ್ದ ಕಾರಣ. ನಮಗೆ ಆ ತಾಣದಲ್ಲಿ ರೂಂ ಗಳನ್ನು ಒದಗಿಸಿದರು. ಆಯಾಸವಾಗಿ ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದ ನಮಗೆ ತಿನ್ನಲು ಬಿಸ್ಕತ್ತು , ಮಿಕ್ಸ್ಚರ್ ಹಾಗು ಟೀ ತಂದ ಒಬ್ಬ ಸಿಬ್ಬಂದಿ ಸಾ ತಗಳಿ, ಅಂತಾ ತಂದಿಟ್ಟರು. ತಂದಿಟ್ಟ ಕಪ್ಪುಗಳ ಮೇಲೆ ಅರಣ್ಯ ಇಲಾಖೆಯ ಮುದ್ರೆ ಹಾಗು ಹುಲಿಯ ಚಿತ್ರ ನೋಡಿ ಸಂತಸವಾಯಿತು.
ಕಪ್ಪಿನ ಮೇಲೂ ವನ್ಯ ಜೀವಿ ಚಿತ್ರ |
ಬಹಳ ಖುಷಿಯಿಂದ ಇದನ್ನು ತಿಂದು ಮುಗಿಸಿದ ನಾವು ಅಲ್ಲಿನ ಸುತ್ತ ಮುತ್ತ ಪರಿಸರ ಪರಿಚಯ ಮಾಡಿಕೊಳ್ಳಲು ಕ್ಯಾಮರ ಹೊತ್ತು ನಡೆದೆವು. ಬನ್ನಿ ಇಲ್ಲಿನ ಪರಿಸರ ಪರಿಚಯ ಮಾಡಿಕೊಳ್ಳೋಣ.
ಬುರುಡೆ ಕ್ಯಾಂಪ್ ಅನ್ನೋದು ದಟ್ಟ ಕಾಡಿನ ನಡುವೆ ಇರುವ ಒಂದು ಬಂಗಲೆ 1941 ರಲ್ಲಿ ನಿರ್ಮಾಣವಾದ ಇದು ಹಿಂದೆ ರಾಜ ಮಹಾರಾಜರು ಇಲ್ಲಿ ಬಂದು ಉಳಿಯುತ್ತಿದ್ದರು ಎಂದು ಕಂಡು ಬರುತ್ತದೆ . ಹಾಲಿ ಈ ಬಂಗಲೆ ಅರಣ್ಯ ಇಲಾಖೆಗೆ ಸೇರಿದ್ದು ಇದನ್ನು ಕಾಡು ಕಳ್ಳರ ನಿಯಂತ್ರಣ ಕೇಂದ್ರವನ್ನಾಗಿ ಮಾಡಿ ಕೊಳ್ಳಲಾಗಿದೆ. ಬಂಗಲೆಯ ಸುತ್ತಾ ಆನೆಗಳ ಹಾವಳಿ ತಡೆಗಟ್ಟಲು ಕಂದಕ ನಿರ್ಮಿಸಿದ್ದು , ರಾತ್ರಿವೇಳೆ ಇಲ್ಲಿ ಯಾವಾಗಲೂ ಬೆಂಕಿ ಉರಿಯುತ್ತಿರುತ್ತದೆ.ಇಲ್ಲಿನ ಸಂಪರ್ಕ ವೈರ್ಲೆಸ್ ಮೂಲಕ ಮಾತ್ರ ಸಾಧ್ಯ ಯಾವುದೇ ಮೊಬೈಲ್ ಇಲ್ಲಿ ಕನೆಕ್ಟ್ ಆಗಲ್ಲ. ಹಾಗಾಗಿ ನೀವು ನಾಗರೀಕ ಪ್ರಪಂಚದಿಂದ ಯಾವುದೇ ಸಂಪರ್ಕ ಸಾಧಿಸಲಾರಿರಿ. ಇನ್ನು ಇಲ್ಲಿನ ಬಂಗಲೆಯೋ , ಕಾಡಿನಲ್ಲಿಯ ವಿಸ್ಮಯವೇ ಸರಿ ಬನ್ನಿ ಪರಿಚಯ ಮಾಡಿಕೊಳ್ಳೋಣ. ಇಲ್ಲಿಗೆ ಬಂದೊಡನೆ ನಿಮ್ಮನ್ನು ಸ್ವಾಗತಿಸುವುದು ಒಂದು ಮರದ ಹೊರ ಆವರಣದ ವರಾಂಡ
ಬನ್ನಿ ನಿಮಗೆ ಸ್ವಾಗತ |
ಬಹು ಚಟುವಟಿಕೆಗಳ ತಾಣ ಈ ವರಾಂಡ |
ವರಾಂಡ ದಿಂದ ಕಾಣುವ ಕಾಡಿನ ಸೊಬಗು. |
ಒಳಗೆ ಹೊಕ್ಕರೆ ನಿಮಗೆ ಅದರ ಸೌಂದರ್ಯದ ಅರಿವಾಗುತ್ತದೆ. ಹೌದು ಇಲ್ಲಿ ಇರುವವರೆಗೂ ನಿಮಗೆ ಈ ವರಾಂಡ ಊಟದ ಮನೆ, ವಿಶ್ರಾಂತಿ ತಾಣ , ನಿಮ್ಮ ಬಹಳಷ್ಟು ಚಟುವಟಿಕೆಗಳ ತಾಣ ವಾಗಿಬಿಡುತ್ತದೆ. ಮುಂಜಾನೆ ಎದ್ದು ಇಲ್ಲಿ ಕುಳಿತರೆ ನಿಮಗೆ ಕಾಡಿನ ಸೊಬಗು ಕಣ್ಣಿಗೆ ಕಟ್ಟುತ್ತದೆ. ಬಂಗಲೆಯ ಸುತ್ತಾ ಮರದ ಜಾಲರಿಯಂತಹ ಕಟ್ಟೆ ಕಟ್ಟಿದ್ದು ಬಂಗಲೆಯ ಸೊಬಗನ್ನು ಹೆಚ್ಚಿಸಿದೆ. ಒಳಗಡೆ ಎರಡು ರೂಂಗಳು ಇದ್ದು , ಒಂದು ಹಾಲ್ ಇದೆ. ಮೂರೂ ಜಾಗದಲ್ಲಿ ಮರದ ಮಂಚ ಹಾಕಿ ಉಳಿಯಲು ಅನುಕೂಲ ಮಾಡಿದ್ದಾರೆ. ಆದರೆ ನೆನಪಿರಲಿ, ಇಲ್ಲಿಗೆ ಟಿ.ವಿ., ಕರೆಂಟು ಯಾವುದೂ ಇಲ್ಲಾ , ಇತ್ತೀಚಿಗೆ ಎಲ್.ಈ.ಡಿ.ಬಲ್ಬುಗಳನ್ನು ಹಾಕಿ ಸೌರ ಶಕ್ತಿಯಿಂದ ಒಳಗಡೆಗೆ ಬೆಳಕು ಕಲ್ಪಿಸಲಾಗಿದೆ. ಆದರೆ ಜಾಸ್ತಿ ಬೆಳಕು ನಿಮಗೆ ಸಿಗದಂತೆ ಜಾಣ್ಮೆ ವಹಿಸಿದ್ದಾರೆ.
ಕ್ಯಾಂಪಿನ ಹಿಂಬಾಗದ ನೋಟ. |
ಹಾಗೆ ಹಿಂದುಗಡೆ ಬಂದರೆ ನಿಮಗೆ ಎರಡು ರೂಂ ನೈಸರ್ಗಿಕ ಉಪಯೋಗಕ್ಕಾಗಿ ಇದೆ. ಅಲ್ಲೂ ಸಹ ಒಂದು ಚಿಕ್ಕ ವರಾಂಡ ಇದೆ. ಮೆಟ್ಟಿಲು ಇಳಿದರೆ ನಿಮಗೆ ಎದುರು ಕಾಣಸಿಗುವುದೇ ಅರಣ್ಯ ಸಿಬ್ಬಂದಿ ವಿಶ್ರಾಂತಿ ಗೃಹ ಹಾಗು ಅಡಿಗೆ ಮನೆ , ಹೌದು ಇಲ್ಲಿನ ಸಿಬ್ಬಂದಿ ಅಂದರೆ ಫಾರೆಸ್ಟ್ ವಾಚರ್ಸ್ , ಗಾರ್ಡ್ಸ್ ಇಲ್ಲೇ ಉಳಿದು ಹಗಲು ರಾತ್ರಿ ಕರ್ತವ್ಯ ನಿರ್ವಹಣೆ ಮಾಡುತ್ತಾರೆ. ಅವರ ಆಹಾರಕ್ಕೆ ಪ್ರತೀ ಮೂರು ದಿನ ಅಥವಾ ವಾರಕ್ಕೊಮ್ಮೆ ಕೊಳ್ಳೆಗಾಲದಿಂದ ರೇಶನ್ ಸರಬರಾಜು ಆಗುತ್ತದೆ. ಇಲ್ಲಿಗೆ ಕರ್ತವ್ಯಕ್ಕೆ ಬಂದ ಸಿಬ್ಬಂದಿ ತನ್ನ ಸಂಸಾರ ವನ್ನು ಮರೆತು ಕಾಡಿನ ಈ ಜಾಗದ ಸುತ್ತ ಮುತ್ತ ಇರುವ ಕಾಡನ್ನು ಸಂರಕ್ಷಿಸಬೇಕಾದ ಹೊಣೆ ಹೊತ್ತಿದ್ದಾರೆ. ಈ ಬಂಗಲೆಗೆ ಅಡಿಗೆಯವರು ಇಲ್ಲದ ಕಾರಣ ಇವರೇ ಅಡಿಗೆ ಬಟ್ಟರು , ನಮಗೂ ಸಹ ತಮ್ಮ ಕೈಚಳಕದಿಂದ ತಮ್ಮ ಕರಾಮತ್ತು ತೋರಿದರು. ಇನ್ನು ಜೀವ ಜಲ ನೀರು ವ್ಯವಸ್ಥೆ ಇಲ್ಲಿಗೆ ಇಲ್ಲಾ, ಸುಮಾರು ಎರಡು ಕಿ.ಮಿ ದೂರದಲ್ಲಿರುವ ಒಂದು ಜರಿಯಿಂದ ನೀರು ತರಬೇಕು. ನಾವೂ ಸಹ ಅರಣ್ಯ ಸಿಬ್ಬಂಧಿ ಜೊತೆ ಕಾರಿನಲ್ಲಿ ಹೋಗಿ ದಟ್ಟ ಕಾಡಿನ ನಡುವೆ ಹರಿಯುತ್ತಿದ್ದ ಜರಿಯಿಂದ ಸುಮಾರು ಆರು ದೊಡ್ಡ ಕ್ಯಾನುಗಳಲ್ಲಿ ನೀರನ್ನು ತಂದೆವು. ಕೆಲವೊಮ್ಮೆ ನೀರನ್ನು ತರಲು ತೆರಳುವ ಇವರಿಗೆ ವನ್ಯ ಜೀವಿಗಳ ದರ್ಶನ ಆಗುವುದಾಗಿ ತಿಳಿದು ಬಂತು. ನೀರನ್ನು ಹೊತ್ತು ತಂದ ನಾವು ಮತ್ತೊಮ್ಮೆ ಕಾಫಿ ಹೀರಿ ಅಲ್ಲೇ ಇದ್ದ ಒಬ್ಬ ವಾಚರ್ ರೊಂದಿಗೆ ಸ್ವಲ್ಪ ಕಾಡಿನ ಚಾರಣಕ್ಕೆ ಹೊರಡಲು ಸಿದ್ದವಾಗುತ್ತಿದ್ದೆವು.
ಕಾಡಿನ ನಡುವೆ ಸೈಕಲ್ಲಿನಲ್ಲಿ ಡ್ಯೂಟಿ |
ಬಂಗಲೆಯ ಸಮೀಪದ ಕಾಲು ಹಾದಿಯಲ್ಲಿ ಒಬ್ಬ ವ್ಯಕ್ತಿ ರಭಸದಿಂದ ಸೈಕಲ್ಲಿನಲ್ಲಿ ನಮ್ಮ ಕಡೆ ಬದು ಇಳಿದ , ವಿಚಿತ್ರ ವಾಗಿದ್ದ ಆತನನ್ನು ನೋಡಿ ಅಚ್ಚರಿಯಾಯಿತು. ದಟ್ಟ ಕಾಡಿನಲ್ಲಿ ಭಯವಿಲ್ಲದೆ ಸೈಕಲ್ಲಿನಲ್ಲಿ ಸುತ್ತುವ ಈ ಮನುಷ್ಯನನ್ನು ಪರಿಚಯ ಮಾಡಿಕೊಟ್ಟರು. ಆ ವ್ಯಕ್ತಿಯೂ ಸಹ ಅರಣ್ಯ ಇಲಾಖೆಯ ವಾಚರ್ ಎಂಬುದಾಗಿ ತಿಳಿಯಿತು.
ಕಾಡಿನ ಚಾರಣಕ್ಕೆ ಮಾರ್ಘ ದರ್ಶಿ ಹಾಗು ರಕ್ಷಕ ಇವರೇ. |
ದಟ್ಟ ಕಾನನದ ಸೌಂದರ್ಯ . |
ಇನ್ನು ಚಾರಣಕ್ಕೆ ನಮ್ಮನ್ನು ಕರೆದುಕೊಂಡು ಒಬ್ಬರು ಹೊರಟರು.ಸುಂದರ ನಿಶ್ಯಬ್ದದ ಕಾಡಿನಲ್ಲಿ ನಾವೂ ಮಾತಿಲ್ಲದೆ ಅವರನ್ನು ಹಿಂಬಾಲಿಸಿದೆವು , ದಟ್ಟ ಕಾಡಿನ ನಡುವೆ ಸುಮಾರು ಆರು ಕಿ.ಮಿ. ಚಾರಣ ಮಾಡಿ ಅಲ್ಲೇ ಇದ್ದ ಬಂಡೆಗಳಿಂದ ಕೂಡಿದ್ದ ಸಣ್ಣ ಬೆಟ್ಟ ಏರಿ ನಿಸರ್ಗ ಸೌಂದರ್ಯ ನೋಡುತ್ತಾ ಸುಮಾರು ಅರ್ಧ ಘಂಟೆ ಕಳೆದೆವು
ಬಿಳಿಗಿರಿ ಬೆಟ್ಟದ ಶ್ರೇಣಿ |
ನಾವು ನಿಂತಿದ್ದ ಜಾಗದಿಂದ ಬಿಳಿಗಿರಿ ಬೆಟ್ಟದ ಶ್ರೇಣಿ ಸುಂದರವಾಗಿ ಗೋಚರಿಸಿತ್ತು. ಆಗಲೇ ಸೂರ್ಯ ಅಸ್ತಂಗತ ನಾಗಿ ಮಬ್ಬು ಕಟ್ಟಲು ಕವಿಯಲು ಶುರುವಾಗಿತ್ತು, ನಮ್ಮ ಚಾರಣ ವಾಪಸ್ಸು ಸಾಗಿತ್ತು.ಸುಮಾರು ಕತ್ತಲೆಯಲ್ಲಿ ಕಾಡಿನ ನಡುವೆ ಎಡವುತ್ತಾ, ಬೀಳುತ್ತಾ, ನಡೆಯುತ್ತಾ, ಸಾಗು ಸುಮಾರು ಮುಕ್ಕಾಲು ಘಂಟೆ ನಡೆದು ಬುರುಡೆ ಬಂಗಲೆ ಹೊಕ್ಕೆವು,
ರಾತ್ರಿಗೆ ಅಡಿಗೆ ಮಾಡಿಕೊಟ್ಟ ಗೆಳೆಯರು . |
ಅಲ್ಲೇ ಇದ್ದ ಅರಣ್ಯ ಇಲಾಖೆಯ ಗೆಳೆಯರು ಅಡಿಗೆ ತಯಾರಿ ಮಾಡಿದ್ದರು, ನಾವೂ ಸಹ ಅಲ್ಲಿಗೆ ತೆರಳಿ ಅಡಿಗೆಯ ಸಹಾಯಕರಾದೆವು, ಅನ್ನಾ , ಚಪಾತಿ , ಅವರೆಕಾಳಿನ ಸಾರು, ಮಜ್ಜಿಗೆ ಇತ್ಯಾದಿ ಮಾಡಿ ಪ್ರೀತಿಯಿಂದ ನೀಡಿದರು. ಊಟ ಮುಗಿದಾಗ ರಾತ್ರಿ ಎಂಟು ಘಂಟೆ , ಬೆಳಕಿಲ್ಲದ ರಾತ್ರಿಯಲ್ಲಿ ಬೆಂಕಿಯಮುಂದೆ ಕುಳಿತು ಹರಟೆ ಹೊಡೆಯುತ್ತಾ ಸ್ವಲ್ಪ ಹೊತ್ತು ಕಳೆದೆವು. ಮರುದಿನ ಹೋಗಬೇಕಾದ ಜಾಗಗಳ ಬಗ್ಗೆ ಮಾಹಿತಿ ತಿಳಿಯುತ್ತಾ "ಹೊನ್ನ ಮೇಟಿ ಕಲ್ಲು " ಬೆಟ್ಟಕ್ಕೆ ಹೋಗುವುದೆಂದು ತೀರ್ಮಾನಿಸಿದೇವು . ಹಾಗೆ ಕಾಡಿನ ಸಿಬ್ಬಂದಿಗಳು ನಮಗೆ ವೀರಪ್ಪನ್ ಜೊತೆ ತಾವು ಕಳೆದ ದಿನಗಳನ್ನು ಸವಿಸ್ತಾರವಾಗಿ ತಿಳಿಸುತಿದ್ದರು. ಹೌದು ಇವರಲ್ಲಿ ಕೆಲವರನ್ನು ಇಲ್ಲಿಂದ ವೀರಪ್ಪನ್ ಸುಮಾರು ಹತ್ತೊಂಭತ್ತು ದಿನಗಳ ಕಾಲ ಅಪಹರಿಸಿ ಇಟ್ಟುಕೊಂಡಿದ್ದ ,ಹಾಗುನಂತರ ಬಿಡುಗಡೆ ಮಾಡಿದ್ದ ವಿಚಾರಗಳನ್ನು ಅಪಹರಣ ಗೊಂಡಿದ್ದ ವ್ಯಕ್ತಿಯಿಂದ ಕೇಳುತ್ತಿದ್ದರೆ ರೋಮಾಂಚನವಾಗುತ್ತಿತ್ತು.ಇಲ್ಲಿಗೆ ಬಂದ ನಂತರ ಇಲ್ಲಿ ಕಾಡುಗಳ್ಳ ವೀರಪ್ಪನ್ ನನ್ನು ಸ್ವಲ್ಪ ದಿನ ಇಟ್ಟಿದ್ರು ಅಂತ ಗೊತ್ತಾಯ್ತು!![ಈ ಬಗ್ಗೆ ಹಲವು ಅಂತರ್ಜಾಲಗಳಲ್ಲಿ ವೀರಪ್ಪನ್ ಹಾಗು ಈ ಪ್ರದೇಶದ ನಂಟಿನ ಬಗ್ಗೆ ಮಾಹಿತಿ ಹರಿದಾಡ್ತಿದೆ ] ವೀರಪ್ಪನ್ ಹಿಡಿಯೋಕೆ ಯಾಕೆ ಅಷ್ಟು ಕಷ್ಟ ಆಯ್ತು ಅಂತ ಇಲ್ಲಿಬಂದ್ರೆ ಗೊತ್ತಾಗುತ್ತೆ!! ನಾವೋ ಪಾಪ ಪೋಲಿಸ್ ನವರನ್ನು ಹಾಗು ಎಸ.ಟಿ.ಎಫ್ ನವರನ್ನು ಆ ಕಾಲದಲ್ಲಿ ಬೈದಿದ್ದ ಬಗ್ಗೆ ಪಶ್ಚಾತ್ತಾಪ ಪಟ್ವಿ ,ಇಲ್ಲಿನ ದಟ್ಟ ಕಾಡಿನಲ್ಲಿ ಕಗ್ಗತ್ತಲೆಯಲ್ಲಿ ಕಾಡು ಪ್ರಾಣಿಗಳ ನಡುವೆ ವೀರಪ್ಪನ್ ಹಿಡಿಯುವುದು ನಾವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.
ನಾವಿದ್ದ ಪ್ರದೇಶದಲ್ಲಿ ಕಗ್ಗತ್ತಲೇ ನೋಟ |
17 comments:
ಸುಂದರ ಚಿತ್ರಗಳೇ ಕಥೆ ಹೇಳುತ್ತಿದೆ. ಒಳ್ಳೆಯ ಕಥನ ಸರ್. ಮುಂದಿನ ಸಂಚಿಕೆಯ ನಿರೀಕ್ಷೆಯಲ್ಲಿ.
ಫೋಟೋಗಳಂತೂ ತುಂಬಾ ಚೆನ್ನಾಗಿದೆ..
ಸುಂದರ ಚಿತ್ರಗಳು ಹಾಗು ವಿವರಣೆ...
@ ಈಶ್ವರ ಭಟ್ .ಕೆ.:-) ನೆನಪಿನ ಪುಟಗಳ ನೆನಪಿನ ಜೊತೆಯಲ್ಲಿ ಪಯಣಿಸುತ್ತಿರುವ ನಿಮಗೆ , ಹಾಗು ನಿಮ್ಮ ಪ್ರೀತಿ ಮಾತಿಗೆ ಥ್ಯಾಂಕ್ಸ್.
@ಮೌನ ರಾಗ :-) ಅನಿಸಿಕೆಗೆ ವಂದನೆಗಳು.
Waiting to know your next journey...
@ಗಿರೀಶ್ .ಎಸ :-) ಹ ಹ ಹ ಗಿರೀಶ್ ಥ್ಯಾಂಕ್ಸ್. ಅದು ನನಗೂ ಗೊತ್ತಿಲ್ಲಾ .
ಬಾಲಣ್ಣ,
ಚಿತ್ರಗಳು ಮತ್ತು ಬರಹ ಬಹು ಮಾಹಿತಿ ಪೂರ್ಣ, ೬ ಕಿಮಿ ಚಾರಣ ನನಗಂತೂ ಬಿಲ್ಕುಲ್ ಸಾಧ್ಯವಿಲ್ಲ ಬಿಡಿ. ಯಾಕಂದ್ರೆ I'm a living ash pot! :-D
ದರಿಧ್ರ ನಾಗರೀಕತೆಯ ಸಂಪರ್ಕವಿಲ್ಲದೆ ಕಾಡಿನ ನಡುವೆ ಇಂಥಹ ಸ್ವರ್ಗದಲ್ಲಿ ಇದ್ದು ಬಂದ ನೀವೇ ಭಾಗ್ಯವಂತರು.
ವೀರಪ್ಪನ್ ಬಗ್ಗೆ ನೀವು ಉಲ್ಲೇಖಿಸಿದ್ದು ಅಕ್ಷರಸಹ ಸತ್ಯ!
ಮುಂದಿನ ಕಂತಿಗೆ ಕಾಯುತ್ತೇವೆ.
ಸುಂದರ ಚಿತ್ರ ಸಹಿತ ಮಾಹಿತಿಪೂರ್ಣ ವಿವರಣೆ. ಬರಹ ಚೆನ್ನಾಗಿ ಮೂಡಿಬಂದಿದೆ ಬಾಲು ಸರ್..
@ ಬದರಿನಾಥ್ ಪಲವಳ್ಳಿ:-)ಸರ್. ಏನಿಲ್ಲಾ ಗೆಳೆಯರೊಡನೆ ಇಂತಹ ಪರಿಸರದಲ್ಲಿ ಎಷ್ಟು ದೂರ ನಡೆಯಬಹುದು. ನೀವು ನಡೆಯಬಲ್ಲಿರಿ.ಇಂತಹ ಜಾಗಗಳಿಗೆ ಬಂದೊಡನೆ ಹಿತವಾದ ಶುದ್ದ ಗಾಳಿ,ದೇಹದೊಳಗೆ ಹೊಕ್ಕಿ ಚೈತನ್ಯ ನೀಡುತ್ತದೆ.ಇಂದಿನ ಪಟ್ಟಣಗಳು ನಾವೇ ಸೃಷ್ಟಿಸಿಕೊಂಡ ನರಕಗಳು ತಾನೇ ?? ನಿಮ್ಮ ಪ್ರೀತಿಯ ಅನಿಸಿಕೆಗೆ ಧನ್ಯವಾದಗಳು
@ಓ ಮನಸೇ, ನೀನೇಕೆ ಹೀಗೆ...? :-) ಸಹೋದರಿಯ ಪ್ರೀತಿ ಮಾತಿಗೆ ಜೈ ಹೋ , ಮುಂದಿನ ಸಂಚಿಕೆಗಳಲ್ಲೂ ಜೊತೆಯಾಗಿ ಸಾಗಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ.
ಬಾಲು ಸರ್,
ಇಂಟರೆಸ್ಟಿಂಗ್ ಆಗಿದೆ...ಚಿತ್ರಗಳೂ ಸೂಪರ್....ಅವುಗಳಿಗೆ ಪೂರಕವಾದ ವಿವರಣೆ......ಮುಂದಿನ ಭಾಗಕ್ಕಾಗಿ ಕಾಯುತಿದ್ದೇನೆ..
@ashokkodlady:-) ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್ ಸರ್ , ಮುಂದಿನ ಸಂಚಿಕೆಯಲ್ಲಿಯೂ ಜೊತೆಯಾಗಿರಿ.
ಬಾಲು ನಿಮ್ಮ ಕೈಗೆ ಕ್ಯಾಮರಾ ಬಂದಮೇಲೆ...ನಿಮ್ಮ ಲೇಖನದ ಮೌಲ್ಯ ಹೆಚ್ಚಾಗಿದೆ... ಅಥವಾ ನಿಮ್ಮ ಚಿತ್ರದ ಭಾವ ಹೆಚ್ಚಾಗಿದೆ ಎನ್ನಲೇ...?? ಬೇಡ ಒಂದಕ್ಕೊಂದು ಪೂರಕ ಲೇಖನ ಎನ್ನಬಹುದು...
@ ಅಜಾದ್ ಸರ್ {ಜಲನಯನ}:-) ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು, ಹ ಹ ಹ ಕ್ಯಾಮರ ಕೈಗೆ ಬಂದು ಹದಿನೈದು ವರ್ಷ ಆಯಿತು.ನಿಮ್ಮ ಮಾತು ಒಂದುರೀತಿ ನಿಜ ,ಕೆಲವೊಮ್ಮೆ ಒಂದು ಚಿತ್ರ ಸಾವಿರ ವಿಚಾರ ತಿಳಿಸುತ್ತದೆ.ಮುಂದಿನ ಸಂಚಿಕೆಗೆ ಜೊತೆಯಾಗಿರಿ.
ಆಪ್ತ ಮತ್ತೂ ರೋಚಕ ವಿವರಣೆ..
ಬಾಲು ಸರ್,
ಬುರುಡೆ ಕ್ಯಾಂಪು, ಅದರೊಳಗಿನ ವಿನ್ಯಾಸ ಅಲ್ಲಿನ ಸಿಬ್ಬಂದಿ ನಿಮಗೆ ಸಹಕರಿಸಿದ ರೀತಿ...ಅಲ್ಲಿ ನಿಮ್ಮ ಸುತ್ತಾಟವನ್ನು ಓದುತ್ತಿದ್ದರೆ ನಾವು ಅಲ್ಲಿದ್ದಂತೆ ಭಾಸವಾಗಿ ಥ್ರಿಲ್ ಅನ್ನಿಸುತ್ತಿದೆ...ಮುಂದಿನ ಸಂಚಿಕೆಯನ್ನು ಓದುತ್ತೇನೆ
@ ಶಿವೂ.ಕೆ.:-) ನಿಮ್ಮ ಪ್ರೀತಿಮಾತಿಗೆ ಥ್ಯಾಂಕ್ಸ್.
Post a Comment