Monday, April 27, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......14 "ದೇವಿಸರ" ವೆಂಬ ಪ್ರೀತಿಯ ನಂದಗೋಕುಲದಲ್ಲಿ ವೇಣುಗೋಪಾಲ ಕಾಣಿಸಿದದೇವಿಸರದಲ್ಲಿ  ಕಂಡ ಒಂದು ನೋಟ


ಶಿರಸಿಯ  ಸತ್ಕಾರ್ ಹೋಟೆಲ್ನಲ್ಲಿ   ನಗುತ್ತಿದ್ದ ಮಸಾಲೆ ದೋಸೆಗಳನ್ನು ಹಸಿದ ಹೊಟ್ಟೆಗಳು  ಆದರದಿಂದ  ಸ್ವಾಗತಿಸಿದವು . ಬೆಳಗ್ಗಿನಿಂದ  ಅಲೆದಾಡಿದ್ದ ನಾವು  ದೇವಿಸರ ದ   ಪ್ರಕಾಶಣ್ಣನ    ಮನೆಗೆ  ಹೊರಟೆವು .  ಈ  ದೇವಿಸರ  ಉತ್ತರ ಕನ್ನಡ ಜಿಲ್ಲೆಯ   ಸಿದ್ದಾಪುರ ತಾಲೂಕಿನ  ಒಂದು ಗ್ರಾಮ, ಆದರೆ  ಇಲ್ಲಿನ ಜನ  ಮಕ್ಕಳ  ವಿಧ್ಯಾಭ್ಯಾಸ ಹಾಗು ತಮ್ಮ  ಅವಶ್ಯಕತೆಗಳಿಗೆ  ಒಡನಾಟ ಇಟ್ಟು  ಕೊಂಡಿರೋದು  ಶಿರಸಿ ಪಟ್ಟಣ ಜೊತೆಯಲ್ಲಿ,   ಆದ ಕಾರಣ  ಈ ಊರು ಶಿರಸಿ  ತಾಲೂಕಿಗೆ  ಸೇರಿದ್ದು ಅನ್ನಿಸಿಬಿಡುತ್ತದೆ .


ನಂದಗೋಕುಲ  ಈ ಮನೆ


 ನಮ್ಮ  ಪ್ರಕಾಶ್ ಹೆಗ್ಡೆ  ಹುಟ್ಟಿ ಬೆಳೆದ    ದೇವಿಸರದಲ್ಲಿ   ಎರಡನೇ ದಿನದ  ವಾಸ್ತವ್ಯ  ನಮ್ಮದು , ಬೆಳಗ್ಗಿನಿಂದ  ಅಲೆದು  ಬಂದ  ನಮಗೆ ಪ್ರೀತಿಯ  ಆದರದ  ಆತಿಥ್ಯ ಇಲ್ಲಿ.    ಈ ಮನೆಯಲ್ಲಿ   ಪ್ರೀತಿಸುವ  ಹೃದಯಗಳ  ಒಂದು ಸುಂದರ ಸಂಸಾರವಿದೆ , ಬಂದ  ಕಷ್ಟಗಳನ್ನು  ತಮ್ಮ ತುಂಟ  ನಗೆಯ ಮೂಲಕ  ಎದುರಿಸಿ  ಇಂದು ಮನೆಯಲ್ಲಿ   ಸಂತಸದ  ನೆಮ್ಮದಿ  ಕಾಣುತ್ತಿರುವ  ಕುಟುಂಬ ಇದು .   ಈ  ಊರನ್ನು ನೋಡುತ್ತಿದ್ದಂತೆ  ಈಗಲೇ ಹೀಗೆ    ತುಂಟಾಟ  ಆಡುವ  ಈ ಪ್ರಕಾಶ್ ಹೆಗ್ಡೆ  ಚಿಕ್ಕ ವಯಸ್ಸಿನಲ್ಲಿ  ಏನೇನು  ತಂಟೆ  ಮಾಡಿ  ಮನೆಯವರನ್ನು   ಪೇಚಿಗೆ  ಸಿಕ್ಕಿಸಿರಬಹುದು  ಎಂಬುದನ್ನು  ಕಲ್ಪಿಸಿಕೊಂಡು ನನಗೆ ನಾನೇ ನಕ್ಕೆ ,  ಮನೆಗೆ ಬಂದ  ನನ್ನ ಜೊತೆ ಬಹಳ ಬೇಗ   ಆತ್ಮೀಯವಾಗಿ  ಹೊಂದಿಕೊಂಡಿದ್ದು  ಈ ನಮ್ಮ  ನಾಗೇಶಣ್ಣ ,    ಯಾಕೋ ಇವರದು ನಮ್ಮ  ಮೊದಲ ಸಲದ  ಭೇಟಿ ಅನ್ನಿಸಲಿಲ್ಲ ,  ಬಹಳ ಬೇಗ  ಇವರ ಬಗ್ಗೆ ನನಗೆ   ಗೌರವ ಪೂರ್ವಕ  ವಿಶ್ವಾಸ ಬೆಳೆದು ಬಿಟ್ಟಿತು ,  ಇನ್ನು   ಪತಿಗೆ  ತಕ್ಕ ಪತ್ನಿ ನಮ್ಮ  ನಗುಮುಖದ  ವನಿತಾ ಅತ್ತಿಗೆ,   ಬಾಲಣ್ಣ  ಅಂತಾ ಕರೆದಾಗ   ನನ್ನ ಒಡ ಹುಟ್ಟಿದ ಸಹೋದರಿಯ ವಾತ್ಸಲ್ಯ  ಕಂಡೆ .  ಇನ್ನು ಇವರ ಮಗ  ಗಣಪತಿ  ನಾವು ಭೇಟಿಕೊಟ್ಟ ಸಮಯದಲ್ಲಿ  ಜ್ವರದಿಂದ ಬಳಲುತ್ತಿದ್ದ   ಹೆಚ್ಚಿಗೆ  ಬೆರೆಯಲು ಆಗಲಿಲ್ಲ, ಆದರೆ  ಜ್ವರದಲ್ಲೂ  ನಗು ಮುಖದಿಂದ  ಅಮ್ಮನಿಗೆ ಸಹಾಯ ಮಾಡಿದ್ದ ,  ಇಷ್ಟೇ ಅಲ್ಲಾ  ಆ ಮನೆಯಲ್ಲಿ ಸ್ವಾತಿ ಎಂಬ ಸೈಲೆಂಟ್  ಹುಡುಗಿ ಇದೆ ,  ಬಹಳ ಬುದ್ದಿವಂತ  ಹುಡುಗಿ ಇದು  , ನಗು ನಗುತ್ತಾ  ಅಮ್ಮನ ನೆರಳಾಗಿ  ಸಹಾಯ ಮಾಡುತ್ತಾ   ಮನೆಯ ತುಂಬಾ  ಖುಷಿಯನ್ನು  ಹಂಚುತ್ತಾಳೆ .  ಇವರೆಲ್ಲರಿಗೆ  ಅಮ್ಮನ  ಪ್ರೀತಿಯ ಆಶಿರ್ವಾದದ  ಬೆಂಬಲ ಇದೆ. ಇಂತಹ ಮನೆಯಲ್ಲಿ  ಅಪರಿಚಿತ ನಾನು  ಎಂಬ ಭಾವನೆ ಹೇಗೆ ಬರಲು ಸಾಧ್ಯ ಹೇಳಿ .ಪ್ರೀತಿ ತುಂಬಿದ ಮನಗಳ ದರ್ಶನ

ಇನ್ನು  ದೇವಿಸರಕ್ಕೆ ಬಂದಮೇಲೆ   ನಾಗೇಶಣ್ಣ  ಸಿಕ್ಕ ಮೇಲೆ  ಪ್ರಕಾಶ್ ಹೆಗ್ಡೆ ಹಂಗೇಕೆ ಅಂತಾ  ಮೆಲ್ಲಗೆ ಜಾರಿಕೊಂಡು ,  ನಾಗೇಶಣ್ಣ ನ ಹತ್ತಿರ ಹರಟೆ ಹೊಡೆಯ ತೊಡಗಿದೆ, ಅಲ್ಲಿನ ಮಳೆ ,  ಬೆಳೆ , ವ್ಯವಸಾಯ  ಪದ್ಧತಿ,  ಕೃಷಿಗೆ ಬಳಸುವ ಸಲಕರಣೆ ,  ಜಾನುವಾರುಗಳ   ಬಗ್ಗೆ  , ಹಾಗು  ಅಲ್ಲಿನ ಆಚಾರ ವಿಚಾರಗಳ ಕುರಿತು  ಅವರಿಂದ ಮಾಹಿತಿ ಪಡೆದೆ , ಎಲ್ಲಾ ವಿಚಾರಗಳಲ್ಲಿ  ಅವರ ಜ್ಞಾನ  ಕಂಡು  ಬೆಕ್ಕಸ ಬೆರಗಾದೆ .    ಹಳ್ಳಿಯ ಜೀವನದ  ಬಗ್ಗೆ  ಇನ್ನೊಬ್ಬ ಹಳ್ಳಿ ಜೀವನ ಕಂಡವ  ಬೆರೆತಾಗ  ಇಂತಹ ವಿಚಾರಗಳ ವಿನಿಮಯ  ಆಗುತ್ತದೆ ,  ಹಾಗೆ  ಎಲ್ಲರೊಡನೆ   ಮಾತನಾಡುತ್ತಾ  ಮನೆ ತುಂಬಾ ಅಡ್ದಾಟ ನಡೆಸಿದ್ದ  ನನಗೆ ಒಂದು ಕಡೆ ಇಸ್ಪೀಟ್ ಪ್ಯಾಕ್ ಕಣ್ಣಿಗೆ  ಬಿತ್ತು , ಅಣ್ಣಾ  ಇದು ಅಂದೇ , ಓ ಅದಾ  ಆಡೋಕೆ ಬರುತ್ತಾ  ಅಂದರು   ಬನ್ನಿ  ಸ್ವಲ್ಪ ಹೊತ್ತು  ಆಡೋಣ  ಅಂತಾ  ಕುಳಿತೆವು ,  ಮೊದ ಮೊದಲ ಎರಡು  ಆಟ  ನನ್ನದೇ ಗೆಲುವು  , ಜಂಬದ  ಮುಖ ಹೊತ್ತು   ಆಡಿದೆ , ನಂತರ  ಸತತವಾಗಿ  ಸುಮಾರು ಹತ್ತು ಆಟಗಳ  ಸೋಲು ,  ತುಂಟ ನಾಗೇಶಣ್ಣ    ನಗು ನಗುತ್ತಾ  ತುಂಟಾಟ  ಮಾಡುತ್ತಾ  ನನ್ನ ಮೊದಲ ಜಯದ  ಹಮ್ಮು ಕೊಚ್ಚಿಕೊಂಡು  ಹೋಗುವಂತೆ ಮಾಡಿದ್ದರು .  ಅಂದು ರಾತ್ರಿ ಭರ್ಜರಿ ರುಚಿಯಾದ  ಅಡಿಗೆ  ವನಿತಾ ಅತ್ತಿಗೆ  ಕೈನಿಂದ   , ಚಪ್ಪರಿಸಿ  ಉಂಡೆವು ಎಲ್ಲರೂ ,   ಟಿ .ವಿ . ಎಂಬ ಭೂತದ ಕಾಟವಿಲ್ಲದೆ , ಮೊಬೈಲ್  ನೆಟ್ವರ್ಕ್  ಇಲ್ಲದೆ  ಕಾರಣ   ಫೋನ್ ಕರೆಗಳ  ಉಪಟಳ  ಇಲ್ಲದೆ ನೆಮ್ಮದಿಯಾಗಿ  ಹರಟೆ ಹೊಡೆಯುತ್ತಾ  ಕುಳಿತೆವು,  ಹಾಗೆ ಯಾವಾಗ ನಿದ್ರಾದೇವಿಯ ಮಡಿಲಿಗೆ ಸೇರಿದೆವೋ  ಅರಿವಾಗಲಿಲ್ಲ,
ವೇಣುಗೋಪಾಲ  ದೇಗುಲದ ಮುಂಭಾಗ
 ದೇಗುಲದ ಒಳಗಡೆ  ಕಂಡ ದೃಶ್ಯ ಎಚ್ಚರವಾದಾಗ  ಹಕ್ಕಿಗಳ ಇಂಪಾದ ಚಿಲಿಪಿಲಿ  ಗಾನ,  ಕೇಳಿಸಿತು  , ಮನೆಯಿಂದ ಹೊರಗೆ  ಬಂದಾಗ ತಂಗಾಳಿಯ  ಹಿತವಾದ  ಅನುಭವ,  ಮಂಜಿನ  ತೆರೆಯಲ್ಲಿ ಮಸುಕು ಮಸುಕಾಗಿ  ಕಾಣುವ ಹಳ್ಳಿಯ ನೋಟ  ಇವುಗಳು ಮನ ಸೂರೆಗೊಂಡವು .  ನಿನ್ನೆ ಮಾತನಾಡುವಾಗ   ದೇವಿಸರದಲ್ಲಿ  ಒಂದು ವೇಣುಗೋಪಾಲ  ದೇಗುಲ  ಇದ್ದು   ಅಲ್ಲಿ ಅಭಿಷೇಕ ಮಾಡಲು  ಪ್ರಕಾಶಣ್ಣ ಹಾಗು ನಾಗೇಶಣ್ಣ   ವ್ಯವಸ್ಥೆ ಮಾಡಿದ್ದರು,  ಜೊತೆಗೆ  ದೇಗುಲವನ್ನು ನನಗೆ ತೋರಿಸಬೇಕೆಂಬ  ಅವರ ಆಸೆ  ಕಂಡು  ಅಚ್ಚರಿಯಾಯಿತು . ಅದರಂತೆ ಮುಂಜಾನೆಯೇ  ಶ್ರೀ  ವೇಣುಗೋಪಾಲನ ದರ್ಶನ ಪಡೆಯಲು  ತೆರಳಿದೆವು .  ದೇಗುಲದ ಹೊರಭಾಗ ನೋಡಿ  ಇದೇನಿದು  ಯಾವುದೋ ಮನೆಗೆ  ಕರೆತಂದು  ದೇಗುಲ ಅನ್ನುತ್ತಿದ್ದಾರೆ ಅಂದುಕೊಂಡೆ ಆದರೆ ನನ್ನ ಅನಿಸಿಕೆ ತಪ್ಪಾಗಿತ್ತು,  ಮನೆಯ ಒಳಗಡೆ    ಭಕ್ತಿ ತುಂಬಿದ   ವಾತಾವರಣ ನಿರ್ಮಾಣ ಆಗಿತ್ತು.
ದೇವಿಸರದ    ಶ್ರೀ ವೇಣುಗೋಪಾಲ  ಸ್ವಾಮೀ  ಮೂಲ ವಿಗ್ರಹ 

  ಗರುಡ ದೇವನ ಮೂರ್ತಿ  ದೇವಿಸರದ  ಈ ದೇಗುಲದ   ಶ್ರೀ ವೇಣುಗೋಪಾಲ ಮೂರ್ತಿ  ಬಹಳ ಮುದ್ದಾಗಿದ್ದು,  ನೋಡುತ್ತಿದ್ದರೆ  ನೋಡುತ್ತಲೇ ಇರಬೇಕು ಅನ್ನಿಸುತ್ತದೆ , ಮೂರ್ತಿಯ  ಶೈಲಿ ಹೊಯ್ಸಳ  ಶಿಲ್ಪಿ ಕಲೆ ಹೋಲುತ್ತಿದ್ದು , ಪ್ರಭಾವಳಿಯಲ್ಲಿ  ವಿಷ್ಣುವಿನ ದಶ ಅವತಾರಗಳನ್ನು ಕೆತ್ತಲಾಗಿದೆ, ಎರಡೂ ಕೈಗಳಲ್ಲಿ ವೇಣು ಹಿಡಿದು  ಮಂದ ಹಾಸ ಬೀರುತ್ತಾ ಇರುವ  ಶ್ರೀ ವೇಣುಗೋಪಾಲ ಮೂರ್ತಿ ಇದು , ಇನ್ನು ಕಾಲ  ಬಳಿ  ಗೋವು ಹಾಗು ಗೋಪಿಕಾ ಸ್ತ್ರೀಯರ  ಬಳಗವನ್ನು ಕಾಣಬಹುದು ,    ಮೂರ್ತಿ ನಿಂತಿರುವ ಪೀಠದಲ್ಲಿ   ಮುಖ್ಯ ಪ್ರಾಣ  ಹನುಮನ  ಮೂರ್ತಿ ಇದೆ ,   ಹಾಗೆ ಈ  ಮೂರ್ತಿಯ  ಮುಂದೆ ಸ್ವಲ್ಪ ದೂರದಲ್ಲಿ  ಸುಂದರವಾದ ಗರುಡ ದೇವನ  ವಿಗ್ರಹ ಕಾಣಬಹುದು .  ಈ ದೇವಾಲಯದ ವಿಗ್ರಹಗಳು  ಪುರಾತನ ಅನ್ನುವುದು  ನಿಜವಾದರೂ , ಇದನ್ನು ಪ್ರತಿಷ್ಟಾಪನೆ ಮಾಡಿದ್ದು ಯಾರು ಎಂದು ತಿಳಿದು ಬರೋದಿಲ್ಲ,ಊರಿಗೆ ಬಂದ  ಅತಿಥಿಗೆ  ಪ್ರೀತಿಯ   ಆತ್ಮೀಯತೆಯ ದರ್ಶನ ಇಲ್ಲಿದೇವಾಲಯವನ್ನೊಮ್ಮೆ ಅವಲೋಕಿಸುತ್ತಾ ನಡೆದೇ   ಪೂಜೆಗೆ  ಸಿದ್ದತೆ ನಡೆದಿತ್ತು,  ಅಲ್ಲಿನ ಭಕ್ತರು   ದೇಗುಲದಲ್ಲಿ ತಮ್ಮದೇ ಆದ ಕೆಲಸ ಮಾಡಿ ದೇವರ ಪೂಜೆಯಲ್ಲಿ ಪಾಲ್ಗೊಂಡು ಧನ್ಯತೆ ಮೆರೆದಿದ್ದರು,  ಅಲ್ಲಿದ್ದವರಿಗೆ ನನ್ನ ಪರಿಚಯ ಮಾಡಿಕೊಟ್ಟರು ಪ್ರಕಾಶಣ್ಣ ,  ಮತ್ತದೇ ಆತ್ಮೀಯ  ಮನಸುಗಳ  ದರ್ಶನ, ಮುಗುಳ್ನಗೆಯ  ಸ್ವಾಗತ, ಮೈಸೂರು ಎಂದ  ತಕ್ಷಣ  ಮತ್ತಷ್ಟು ಆತ್ಮೀಯತೆ  ತೋರಿ  ಆದರಿಸಿದರು .


ಶ್ರೀ ವೇಣುಗೋಪಾಲ ನಿಗೆ ಮಂಗಳಾರತಿ
ನಸುಕಿನ ಸುಂದರ ನಿಶ್ಯಬ್ಧ  ವಾತಾವರಣ,  ಸುತ್ತಲಿನ ನೋಟಕ್ಕೆ  ಮಂಜಿನ ತೆಳುವಾದ  ತೆರೆ , ಹಿತವಾದ ತಂಗಾಳಿ , ದೇಗುಲದೊಳಗೆ   ಸ್ಪಷ್ಟವಾದ  ಮಂತ್ರಗಳ  ಘೋಷಣೆ  , ಗಂಟೆಯ ನಿನಾದ , ಹಕ್ಕಿಗಳ ಗಾಯನ   ಇಡೀ ವಾತಾವರಣ  ಭಕ್ತಿಯಿಂದ ತುಂಬಿತ್ತು,    ದೇವಿಸರದ  ಶ್ರೀ  ವೇಣುಗೋಪಾಲ ನಿಗೆ ಮುಂಜಾನೆಯ  ಪೂಜೆ ಕಾರ್ಯ ಶುರು ಆಗಿತ್ತು . ಸುಂದರ ಮೂರ್ತಿಗೆ  ಅಭಿಷೇಕ  ನಡೆಸಿ  ಭಕ್ತಿಯಿಂದ  ಮಂತ್ರ ಹೇಳುತ್ತಾ  ಮಂಗಳಾರತಿ  ಮಾಡಿದರು ಅಲ್ಲಿನ ಅರ್ಚಕರು .  ಹೆಚ್ಚು ಜನರಿಲ್ಲದ  ಆ ದೇಗುಲದಲ್ಲಿ   ನಿರ್ಮಲ ವಾತಾವರಣದಲ್ಲಿ   ಶ್ರೀ ವೇಣುಗೋಪಾಲ  ಸ್ವಾಮಿಯ ದರ್ಶನ  ಪಡೆದ ನಾವು ಧನ್ಯರಾದೆವು. ಆದರೆ ಮನವು  ಈ ದೇಗುಲದ ಇತಿಹಾಸ ಅರಿಯಲು ತವಕ ಪಡುತ್ತಿತ್ತು,  ದೇಗುಲದ ಸುತ್ತಾ ಕಣ್ಣಾಡಿಸಿದೆ  ಯಾವುದೇ ಶಾಸನ, ಇತಿಹಾಸದ ಕುರುಹು ಕಂಡು ಬರಲಿಲ್ಲ,   ಬನವಾಸಿಯ ಮಧುಕೇಶ್ವರ , ಯಾಣದ  ಭೈರವೇಶ್ವರ, ಸಹಸ್ರಲಿಂಗ, ಹೀಗೆ ಹೆಚ್ಚಾಗಿ ಶಿವನ   ಆಲಯ ಗಳೇ  ಹೆಚ್ಚಾಗಿ   ಕಂಡು ಬರುವ   ಈ ಪ್ರದೇಶಗಳಲ್ಲಿ   ಮುತ್ತಿನಕೆರೆ ಶ್ರೀನಿವಾಸ , ಮಂಜುಗುಣಿ  ವೆಂಕಟರಮಣ  ಸ್ವಾಮೀ, ಹಾಗು  ದೇವಿಸರದ  ಶ್ರೀ ವೇಣುಗೋಪಾಲ ದೇಗುಲಗಳು  ಗಮನ ಸೆಳೆಯುತ್ತವೆ,  ಮುತ್ತಿನ ಕೆರೆ ಹಾಗು ಮಂಜುಗುಣಿ ದೇಗುಲಗಳಿಗೆ  ಇತಿಹಾಸದ ಬಗ್ಗೆ  ಅಧಾರ ಸಿಕ್ಕಿವೆ , ಆದರೆ ಈ ದೇವಿಸರದ   ಶ್ರೀ ವೇಣುಗೋಪಾಲ ದೇಗುಲದ ಬಗ್ಗೆ  ಸಂಶೋದನೆ ಅಗತ್ಯವಿದೆ ಅನ್ನಿಸಿತು.  ಪೂಜೆ ಮುಗಿಸಿದ ನಾವು ಅಲ್ಲಿಂದ  ಮನೆಯ ಕಡೆ ಹೊರಟೆವು .ಅದ್ಸರೀ  ನೀವು ಯಾರು ...?  ಅಂದಿತ್ತು ಈ ಎಳೇ ಕರು

ವಾತ್ಸಲ್ಯ  ತೋರಿದ ಅತ್ತಿಗೆಮುಂಜಾನೆಯ ಮಂಜಿನ  ಹೊದಿಕೆಯಲ್ಲಿ  ದೇವಿಸರ  ಗ್ರಾಮ   ಮಲಗಿತ್ತು, ಸೂರ್ಯನ ಕಿರಣಗಳು ಮಂಜಿನ  ತೆರೆಯಲ್ಲಿ ತೂರಿಬಂದು  ಭೂಮಿಗೆ ಬೆಳಕಿನ  ಚಿತ್ತಾರದ  ಸಿಂಚನ  ಮಾಡುತ್ತಿದ್ದವು . ದೇಗುಲದಿಂದ  ಆಗಮಿಸಿದ ನಾನು  ಅಲ್ಲೇ ಇದ್ದ ಕೊಟ್ಟಿಗೆಯಲ್ಲಿ ಕಂಡ  ಈ ಎಳೆಕರುವನ್ನು ನೋಡಿ  ಒಳಗೆ ಬಂದೆ ಮುದ್ದಾದ ಈ ಕರು  ಅಚ್ಚರಿಯಿಂದ  ನನ್ನತ್ತ  ಮುಗ್ಧ ನೋಟ ಬೀರಿತು,    ಅಷ್ಟರಲ್ಲಿ   ಬಾಲಣ್ಣ  ಬನ್ನಿ   ತಿಂಡೀ  ತಿನ್ನೋಣ ಎಂಬ   ಪ್ರಕಾಶಣ್ಣ ನ ಕರೆ ಬಂತು   , ಅಡಿಗೆ ಕೋಣೆ  ಹೊಕ್ಕ ನನಗೆ  ವನಿತಾ ಅತ್ತಿಗೆ  ಬಿಸಿ ಬಿಸಿ ದೋಸೆ  ಸಿದ್ದ ಪಡಿಸುತ್ತಾ, ಬನ್ನಿ ಬಾಲಣ್ಣ   ಎನ್ನುತ್ತಾ  ಬಿಸಿ ಬಿಸಿ ದೋಸೆಯನ್ನು  ಕಾವಲಿಯಿಂದ   ನನ್ನ ಎಲೆಗೆ  ದಾಟಿಸಿದರು,  ಹೊರಗಡೆ ಮಂಜಿನ  ಮಳೆಯ  ಚಳಿಯ ಸಿಂಚನದ ಅನುಭವ ಪಡೆದ ನನಗೆ ಒಳಗಡೆ  ಬಿಸಿ ಬಿಸಿ ದೋಸೆಯ ರುಚಿಯಾದ  ದೋಸೆ,  ಅದಕ್ಕೆ  ಜೋನಿ ಬೆಲ್ಲಾ,  ಉಪ್ಪಿನಕಾಯಿಯ  ಸಾಥ್  ಬೇರೆ,  ಆಹಾ  ಆಹಾ ಎನ್ನುತ್ತಾ  ಯಾವುದೇ ಸಂಕೋಚವಿಲ್ಲದೆ  ತೃಪ್ತಿಯಾಗುವಷ್ಟು  ದೋಸೆಗಳನ್ನು ಸ್ವಾಹ  ಮಾಡಿದ್ದಾಯ್ತು,  ನಗು ಮುಖದ ವನಿತಾ  ಅತ್ತಿಗೆ ವಾತ್ಸಲ್ಯ  ಬೆರೆಸಿ ಮಾಡಿದ್ದ  ಈ ದೋಸೆಗೆ  ಶರಣಾಗಿತ್ತು ನನ್ನ ಹಸಿವು .ಅಣ್ಣಾ ತಮ್ಮಾ  ಸೇರಿದಾಗ  ತುಂಟಾಟ  ಗ್ಯಾರಂಟೀ 

ಅಂತೂ ಇಂತೂ ನಮ್ಮ ವಾಸ್ತವ್ಯದ  ಕೊನೆ ಘಟ್ಟ  ತಲುಪಿದೆವು ,   ಎಲ್ಲಾ  ಕಾರ್ಯ ಸುಸೂತ್ರವಾಗಿ ಮುಗಿಸಿ, ನಮ್ಮ ಊರುಗಳಿಗೆ  ವಾಪಸ್ಸು  ಹೊರಡಲು ಸಿದ್ದವಾಗುತ್ತಿದ್ದೆವು ..  ಮೊದಲೇ ಎಲ್ಲಾ  ಸಿದ್ದವಾಗಿದ್ದ  ನನ್ನ ಲಗ್ಗೇಜ್  ಕಾರಿನ ಡಿಕ್ಕಿ ಸೇರಿಕೊಂಡಿತು .  ಹಾಗೆ ಮಾತನಾಡುತ್ತಾ  ನಮ್ಮ ನಾಗೇಶಣ್ಣ   ಮದುವೇ ಮಂಟಪಗಳನ್ನು  ಅಂದವಾಗಿ ಮಾಡಿ ಸಿಂಗರಿಸುವ ವಿಚಾರ ಬಂತು ,  ನನಗೆ  ಅಚ್ಚರಿ ...!ಈ  ಅಣ್ಣನಿಗೆ ಬರದ ಇರುವ  ಕೆಲಸ ಯಾವುದು ಅಂತಾ...? , ಅಷ್ಟರಲ್ಲಿ ಬಾಲಣ್ಣ , ತನ್ನ  ಬೈಕ್  ಸಂಪೂರ್ಣ ಕಳಚಿ  ತಾನೇ ಜೋಡಿಸುತ್ತಾರೆ  ಅಂತಾ  ಪ್ರಕಾಶಣ್ಣ  ಹೇಳಿದಾಗ  ನಿಜಕ್ಕೂ  ಅಚ್ಚರಿ ಪಟ್ಟೆ ,   "ಹಣದಾಸೆಗಾಗಿ  ಗೊತ್ತಿಲ್ಲದ ಕೆಲಸವನ್ನು   ಗೊತ್ತು ಎಂದು ಪೋಸ್  ಕೊಡುವ ಜನ ಒಂದು ಕಡೆ  ಮತ್ತೊಂದು ಕಡೆ  ಯಾರ ಹಂಗೂ ಇಲ್ಲದೆ  ತನಗೆ ತಾನೇ  ಹಲವು ಕೆಲಸಗಳನ್ನು ಕಲಿತು  ಆ ಕೆಲಸವನ್ನು  ಹಣಕ್ಕಾಗಿ   ಬಳಸದೆ   ಆತ್ಮ ತೃಪ್ತಿಗಾಗಿ ಮಾಡುತ್ತಾ   ಇರುವ ಇಂತಹ ನಾಗೇಶಣ್ಣ  ಒಂದುಕಡೆ  " ಇದೊಂತರಾ  ವಿಸ್ಮಯದ ವಿಚಾರ ಅನ್ನಿಸಿತು ಅಷ್ಟರಲ್ಲಿ ನಾಗೇಶಣ್ಣ ಕಾಗದದ  ಚಿತ್ತಾರದ  ಹಾರ ಮಾಡಿಕೊಂಡು ಬಂದರು  ನನ್ನ ಕೋರಿಕೆಯಂತೆ  ತಮ್ಮ ಪ್ರಕಾಶ್ ಹೆಗ್ಡೆ ಜೊತೆ ಫೋಟೋ  ತೆಗೆಸಿಕೊಳ್ಳಲು  ಒಪ್ಪಿ  ಪೋಸ್  ಕೊಟ್ಟರು .ನಂದಗೋಕುಲದ  ಪ್ರೀತಿಯೊಳಗೆ  ನಿಂದ  ಆ ಕ್ಷಣ
ಎಲ್ಲಾ ಸಿದ್ದತೆ  ನಡೆಸಿ ಮನೆಯವರೆಲ್ಲರನ್ನೂ ಮತ್ತೊಮ್ಮೆ ಆತ್ಮೀಯವಾಗಿ ಮಾತನಾಡಿಸಿ  ಅವರಿಗೆ ಕೃತಜ್ಞತೆ  ತಿಳಿಸಿ,  ಪ್ರಕಾಶ್ ಹೆಗ್ಡ ತಾಯಿಯವರ  ಆಶೀರ್ವಾದ ಪಡೆದು  , ಸಂತೋಷಗೊಂಡೆ  , ಎರಡು ದಿನ ಇವರುಗಳ ಪ್ರೀತಿಯ ನಂದಗೋಕುಲದಲ್ಲಿ  ನಲಿದಾಡಿದ ನನಗೆ ಇದೊಂದು ಮರೆಯಲಾರದ  ಅನುಭವ ನೀಡಿತು . ಎಲ್ಲರ  ಶುಭ ಹಾರೈಕೆಗಳೊಂದಿಗೆ   ಮುಂದೆ ಹೊರಟೆವು .   ದೇವಿಸರದ   .  ಗಡಿಯತ್ತ ನಮ್ಮ ಕಾರು ತೆರಳುತ್ತಿತ್ತು .


ಗ್ರಾಮದ  ರಕ್ಷಕ  ಮೂರ್ತಿಯೇ ಇದು ಗೊತ್ತಾಗಲಿಲ್ಲ

ಇನ್ನೇನು ತಿರುವು  ಪಡೆಯಬೇಕು ಅಷ್ಟರಲ್ಲಿ ನನ್ನ ಕಣ್ಣಿಗೆ ಒಂದು  ಕಲ್ಲು ಕಂಡು ಬಂತು , ಅದಕ್ಕೆ ಪೂಜೆ ಸಹ ಮಾಡಿದ್ದರು, ಹೊರಡುವ ಆತುರದಲ್ಲಿದ್ದ  ನಮಗೆ ಹೆಚ್ಚಿನ  ಸಮಯ ಇರಲಿಲ್ಲ ,  ಅದರ ಒಂದು ಚಿತ್ರ ತೆಗೆದು  ಮುಂದಿನ ಸಾರಿ ಬಂದಾಗ  ವಿವರ  ತಿಳಿಯೋಣ ಅಂತಾ  ಮುಂದೆ ಹೊರಟೆ , ಆ ಮೂರ್ತಿಯೂ ಸಹ  ಈಗಲೇ ಎಲ್ಲಾ   ವಿಚಾರ ಸಿಕ್ಕಿ ಬಿಟ್ರೆ ನೀನು ಮತ್ತೆ ಬರೋಲ್ಲಾ, ಅದಕ್ಕೆ ಬಾ ಮುಂದಿನ  ಸಾರಿ  ನನ್ನ ವಿಚಾರ  ತಿಳಿಯೋವಂತೆ ಎನ್ನುತ್ತಾ ನನ್ನನ್ನು  ಬೀಳ್ಕೊಟ್ಟಿತು .  ದೇವಿಸರದ  ಪ್ರೀತಿಯ ಅನುಭವ  ಅನುಭವಿಸಿ , ಪ್ರಕಾಶ್ ಹೆಗ್ಡೆ  ಅವರ  ಭಾವನವರ  ಹೊಸ ಮನೆಯ  ಕಟ್ಟಡದ  ಕಾರ್ಯ ವೀಕ್ಷಿಸಿ , ಶಿರಸಿಗೆ ಬಂದು ಮಾರಿಕಾಂಬೆ ದರ್ಶನ  ಪಡೆದು  ಹೊರಟೆವು .  ಅಣ್ಣಾ ಪ್ರಕಾಶಣ್ಣ  ಯಾವ ಕಡೆಯಿಂದ ಹೋಗೋದು  ಅಂದೇ .....?   ಹ ಬಾಲಣ್ಣ  ಯಾಕದೆ ಹೋಗ ಬಹುದು   ಅಂತಾ ಯೋಚಿಸ್ತೀನಿ ತಾಳಿ ಅಂದರು  ............!    ಶಿರಸಿಯ  ಮಾರಿಕಾಂಬ  ದೇಗುಲದ ಬಳಿ ನಿಂತು   ಯಾವ ಕಡೆಯಿಂದ   ಊರಿಗೆ ವಾಪಸ್ಸ್ ಹೋಗೋದು ಅಂತಾ  ಯೋಚಿಸುತ್ತಾ  ನಿಂತೆವು ....!


9 comments:

bilimugilu said...

prakashji yavara ooru thorisidri :) avara mane - allina jana - avara manasugalu haagu nimma blog/vivarane ellavoo Superb!!!
Jothege naavu iddeveno annisithu. Too gud.

sachin sirsi said...

ಚೆಂದದ ನಿರೂಪಣೆ

Srikanth Manjunath said...


ಯಶೋದೆಗೆ ಗಾಬರಿ ಆಯಿತು.. ಎಲ್ಲಾರೂ ಹೇಳುತ್ತಾ ಇದ್ದರು ಕೃಷ್ಣ ಮಣ್ಣು ತಿಂದಿದ್ದಾನೆ ಅಂಥಾ.. ಅದನ್ನು ನೋಡಲು ಬಂದ ಯಶೋದೆ ಕೃಷ್ಣನಿಗೆ ಬಾಯಿ ತೆಗೆ ಎಂದಾಗ.. ದೊಡ್ಡದಾಗಿ ಬಾಯಿ ತೆಗೆಯುತ್ತಾನೆ ಕೃಷ್ಣ.. ಇಡಿ ಬ್ರಹ್ಮಾಂಡವೆ ಅದರೊಳಗೆ ಕಾಣುತ್ತದೆ. .

ಹಾಗೆಯೇ ಸುಮಾರು ೪೦೦ ಕಿಮಿಗಳಷ್ಟು ದೂರದಲ್ಲಿರುವ ಪ್ರಕಾಶಣ್ಣ ಅವರ ತವರೂರರನ್ನು ನಿಂತಲ್ಲಿಯೇ ಕೂತಲ್ಲಿಯೇ ತೋರಿಸಿಬಿಟ್ಟಿರಿ.

ಪ್ರಕಾಶಣ್ಣ ಅವರನ್ನು ನೋಡಿದಾಗ ಅವರ ಮನೆಯಲ್ಲಿನ ಅಂತಃಕರಣ ತುಂಬಿರುವ ಮನವೂ ಅರಿವಾಗುತ್ತದೆ ಇದೆಲ್ಲ ಅವರ ಪೂರ್ವಜರಿಂದ ಬಂದ ಬಳುವಳಿ.

ಎಷ್ಟು ಸೊಗಸಾಗಿ ಎಲ್ಲವನ್ನೂ ಎಲ್ಲರನ್ನೂ ಬಣ್ಣಿಸಿದ್ದೀರ. ಮನದಲ್ಲಿನ ಮಾತು ಅಕ್ಷರವಾದಾಗ ಮಾತ್ರ ಇಂಥಹ ಜಾದೂ ಸಾಧ್ಯ.

ನಾನೂ ಅಲ್ಲಿನ ಪರಿಸರ, ಪ್ರೀತಿ ವಿಶ್ವಾಸಗಳನ್ನು ಸವಿಯುವ ಅವಕಾಶಕ್ಕೆ ಕಾಯುತ್ತಿದ್ದೇನೆ.

ಸುಂದರ ಲೇಖನ.. ಮನಮುಟ್ಟಿತು ಬಾಲೂ ಸರ್

ಮನಸು said...

ನಾವು ಆ ಸ್ಥಳಕ್ಕೆ ಹೋಗಲೇ ಬೇಕು ಎಂದೆನಿಸುವಷ್ಟು ಚೆಂದದ ನಿರೂಪಣೆ... ಪ್ರಕಾಶಣ್ಣ ಅವರ ಕುಟುಂಬ ಊರು ಎಲ್ಲದರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

Harini Narayan said...

ಗ್ರಾಮೀಣ ವಾತಾವರಣವನ್ನು ಸಹಜವಾಗಿ ಚಿತ್ರಿಸಿದ್ದೀರಿ ಬಾಲೂ. ವನಜತ್ತಿಗೆ ಕೆಳಗೆ ಕುಳಿತು ದೋಸೆ ಹಾಕುವ ಸ್ಟೈಲ್ ನೋಡಿ ಅಲ್ಲಿಯೇ ಕುಳಿತುಕೊಳ್ಳುವ ಆಸೆಯಾಯ್ತು. ಏಣಿ ನೋಡಿದೊಡನೆ ಮನೆಯ ಮಾಡು ಹತ್ತಿ ಹಾರಾಡಬೇಕೆನ್ನಿಸಿತು. ಹಿಂದೊಮ್ಮೆ ಇದನ್ನು ಓದಿದ್ದೆ ಎನಿಸುತ್ತಿದೆ.

Badarinath Palavalli said...

ದೇವಿಸರ ಊರಿನ ಹೆಸರೇ ಬಲು ಮುದ್ದಾಗಿದೆ, ಥೇಟ್ ಪ್ರಕಾಶಣ್ಣನಂತೆಯೇ.

ನಾಗೇಶಣ್ಣನವರ ಪ್ರೀತಿಯ ಕುಟುಂಬ ಎಂದಿಗೂ ನೆಮ್ಮದಿಯಾಗಿರಲಿ.

ಈ ಸರ್ತಿ ನನ್ನ ಜೊತೆ ಇಸ್ಪೀಟ್ ತಟ್ಟಿ, ಗೆಲುವು ನಿಮ್ಮದೇನೆ...

ದೇವಿಸರದ ಶ್ರೀ ವೇಣುಗೋಪಾಲ ಸ್ವಾಮೀ ಮೂಲ ವಿಗ್ರಹ ಅಪ್ಪಿ ಮುದ್ದಾಡುವಷ್ಟು ಮುದ್ದಾಗಿದೆ.

ನಾಗೇಶಣ್ಣನಂತಹ ಗೊತ್ತಿರುವವರು ತುಂಬು ಕೊಡದಂತೆ ತುಳುಕರು. ಸಲಾಂ...

ಬೆಳಗಿನ ದೋಸೆಗೆ ಕಾಂಬಿನೇಷನ್ನೂ, ಊಟದ ಮೆನುವನ್ನೂ ಬರೆದುಕೊಡಬೇಕಿತ್ತು. ನಮ್ಮಂತ ತಿಂಡಿಪೋತರು ಬಾಯಿ ಚಪ್ಪರಿಸಿಕೊಂಡು ಓದುತ್ತಿದ್ದೆವು...

ಮನೆಯ ವಾತಾವರಣದಲ್ಲೇ ಪ್ರಶಾಂತತೆ ಮನೆ ಮಾಡಿದೆ.

ಚಿತ್ರಗಳೂ ಅಪರೂಪವಾಗಿವೆ.

prashasti said...

ಚೆಂದದ ಲೇಖನ. ನಾನೇ ಹೋಗ್ಬಂದಂಗೆ ಆಯ್ತು ದೇವೀಸರಕ್ಕೆ

Santhosh Kumar said...

ದೇವಿಸರದ ನಾಗೇಶಣ್ಣ ಮಂಗನ ಓಡಿಸುವ ಗನ್ನು ರೂಪಿಸಿರುವ ವಿಷಯ ನಿಮ್ಮ ಹಿಂದಿನ ಬ್ಲಾಗ್ ಬರಹದಲ್ಲಿ ಕೊಟ್ಟಿದ್ದೀರಿ. ಈ ಗನ್ನು ಅವರು ತಯಾರಿಸಿ ಬೇಕಾದವರಿಗೆ ಕೊಡುತ್ತಾರೆಯೇ? ಇದ್ದರೆ ಆ ಗನ್ನಿನ ಬೆಲೆ ಎಷ್ಟು? ಮತ್ತು ಅವರ ಪೂರ್ಣ ವಿಳಾಸ ಹಾಗೂ ಫೋನ್ ನಂಬರ್ ಕೊಟ್ಟರೆ ಬೇಕಾದವರಿಗೆ ಅನುಕೂಲವಾದೀತು. ನಮ್ಮಲ್ಲಿ ಮಂಗಗಳ ಉಪದ್ರ ವಿಪರೀತ. - ಶಂಕರ ಭಟ್, ಪುತ್ತೂರು, ದಕ್ಷಿಣ ಕನ್ನಡ

Lalitharaju Raju said...

ಮಾಹಿತಿಗಾಗಿ ಧನ್ಯವಾದಗಳು.