|
ಮಂಜುಗುಣಿ ದೇವಾಲಯದ ಪ್ರವೇಶ ದ್ವಾರ |
ಕಳೆದ ಸಂಚಿಕೆಯಲ್ಲಿ ನಮ್ಮ ಪುಟ್ಟ ತಂಗಿ ಸಂಧ್ಯಾ ಭಟ್ ಮದುವೆಯ ನಿಶ್ಚಿತಾರ್ಥ ಬರೆದದ್ದು ನಿಮಗೆ ಗೊತ್ತಿದೆ, ಅಲ್ಲಿಂದ ಹೋರಟ ನಾನೂ ಹಾಗು ಪ್ರಕಾಶ್ ಹೆಗ್ಡೆ ಅಂದುಕೊಂಡಿದ್ದ ಮೊದಲಿನ ಕಾರ್ಯಕ್ರಮದಂತೆ ಯಾಣ ನೋಡಲು ಹೋಗಬೇಕಿತ್ತು, ಆದರೆ ಸಂಧ್ಯಭಟ್ ಮನೆಯಲ್ಲಿ ಕಾರ್ಯಕ್ರಮದ ವೇಳೆ ಸನಿಹದಲ್ಲೇ ಮಂಜುಗುಣಿ ಇದೆ ಅದನ್ನು ನೋಡಿ ಬಹಳ ಚೆನ್ನಾಗಿದೆ ಎಂಬ ಸಲಹೆಗಳನ್ನು ಹಲವರು ನೀಡಿದರು .ನಮಗೂ ಅಚ್ಚರಿ ಸರಿ ನೋಡೇ ಬಿಡುವ ಎಂದು ಸನಿಹದಲ್ಲೇ ಇದ್ದ ಮಂಜುಗುಣಿ ಕ್ಷೇತ್ರದಕಡೆ ತೆರಳಿದೆವು .
ನಮ್ಮ ಕನ್ನಡ ನಾಡೆ ಹಾಗೆ ನಿಮಗೆ ಅರಿವಿಲ್ಲದಂತೆ ಹಲವು ಕೌತುಕಗಳನ್ನು ಒಳಗೊಂಡಿರುತ್ತದೆ , ನಮಗೆ ಇಲ್ಲಿ ಆದದ್ದೂ ಇದೆ, ನನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ಈ ಕ್ಷೇತ್ರದ ಬಗ್ಗೆ ಕೇಳಿರಲಿಲ್ಲ, ಆದರೆ ಇಲ್ಲಿಗೆ ಬಂದ ಮೇಲೆ ಪರಿಚಯವಾದ ಕ್ಷೇತ್ರವಿದು, ಮೊದಲ ಭೇಟಿಯಲ್ಲೇ ಯಾಕೋ ಇಲ್ಲಿನ ಪ್ರಶಾಂತತೆ ಮನಕ್ಕೆ ಮುದ ನೀಡಿತು . ಹಾಗೆ ದೇವಾಲಯದ ಒಳಗೆ ಹೋಗಿ ದೇವರ ದರ್ಶನ ಪಡೆದು ಪುನೀತರಾದೆವು, ಜೊತೆಯಲ್ಲಿ ಮನದಣಿಯ ಕ್ಯಾಮರದಿಂದ ಚಿತ್ರಗಳನ್ನು ಕ್ಲಿಕ್ಕಿಸಿ ಖುಷಿಪಟ್ಟೆವು . ನಂತರ ಮನೆಗೆ ಬಂದು ಈ ಕ್ಷೇತ್ರದ ಬಗ್ಗೆ ಅಂತರ್ಜಾಲದಲ್ಲಿ ನೋಡಿದರೆ ...... ಇಲ್ಲಿಯೂ ಲೊಟ್ಟೆ ಯಾವ ಮಾಹಿತಿಯೂ ಸಹ ಇಲ್ಲಾ, ಆದರೆ ಛಲ ಬಿಡದೆ ಹಳೆಯ ಗೆಜೆತೀರ್ ಗಳನ್ನೂ ಹುಡುಕಲು ಹಲವಾರು ಮಾಹಿತಿ ದೊರಕಿತು.
|
ಬನ್ನಿ ನಿಮಗೆ ಸ್ವಾಗತ |
ಬನ್ನಿ ಮಂಜುಗುಣಿಯ ವಿಚಾರ ತಿಳಿಯೋಣ , ಮೊದಲಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮಂಜುಗುಣಿ ಎಂಬ ಊರುಗಳು ಇವೆ , ಮೊದಲನೆಯದು ಅಂಕೋಲಾ ತಾಲೂಕಿನ ಗಂಗಾವಳಿ ನದಿಯ ದಡದಲ್ಲಿರುವ ಮಂಜುಗುಣಿ , ಇಲ್ಲಿಯೂ ಸಹ ಗಣಪತಿ, ಜಟ್ಟಿಗ ಹಾಗು ಕಣ್ಣಮ್ಮ ದೇಗುಲಗಳು ಇವೆ , ಅಲ್ಲಿರುವ ಬೆಟ್ಟದ ಮೇಲೆ ಗೆರುಸೊಪ್ಪೆಯ ಅರಸ ಕ್ರಿಷ್ಣ ದೇವರಸನ ಶಾಸನವಿದೆ , ಇದು ಹದಿನಾರನೇ ಶತಮಾನದ್ದೆಂದು ತಿಳಿದು ಬರುತ್ತದೆ .
ನಂತರ ಎರಡನೆಯ ಮಂಜುಗುಣಿ ಶಿರಸಿ ತಾಲ್ಲೂಕಿನದು , ಶಿರಸಿಯಿಂದ ೨೬ ಕಿಲೋಮೀಟರು ದೂರದಲ್ಲಿದೆ , ಶಿರಸಿ ಕುಮಟ ಮುಖ್ಯ ರಸ್ತೆಯಲ್ಲಿ ಸಾಗಿದರೆ ನಿಮಗೆ ೨೨ ಕಿಲೋಮೀಟರು ನಂತರ ಒಂದು ಸೂಚನೆಕಲ್ಲು ಸಿಗುತ್ತದೆ ಅಲ್ಲಿಂದ ಒಳಗಡೆ ಬಲಕ್ಕೆ ತಿರುಗಿ ಸಾಗಿದರೆ ೪ ಕಿಲೋಮೀಟರು ನಂತರ ನಿಮಗೆ ಸಿಗುವ ಕ್ಷೇತ್ರವೇ ಈ ಮಂಜುಗುಣಿ .
|
ಅಮೂಲ್ಯವಾದ ತೀರ್ಥ ಪ್ರಬಂಧ ಈಗ ತಟ್ಟೆ ರೂಪದಲ್ಲಿ ಬಂದಿದೆ |
ಉತ್ತರಕನ್ನಡದ ಶಿರಸಿಯ ಸೋಂದಾ ಶ್ರೀ ಮದ್ ವಾಧಿರಾಜರು ನೆಲಸಿದ್ದ ಪುಣ್ಯ ಕ್ಷೇತ್ರ , ಅವರು ತಾವು ಸಂದರ್ಶನ ಮಾಡಿದ ಪುಣ್ಯ ಕ್ಷೇತ್ರಗಳ ವಿವರ ನೀಡಿ ಅಲ್ಲಿನ ವಿಶೇಷತೆಗಳನ್ನು ಹೊಗಳಿ ರಚಿಸಿದ ಕೃತಿಯೇ "ತೀರ್ಥ ಪ್ರಬಂಧ " . ವಾಧಿರಾಜರು ತಾವು ನೆಲಸಿದ್ದ ಪ್ರದೇಶದಿಂದ ನಾಲ್ಕೂ ದಿಕ್ಕುಗಳಿಗೂ ಪ್ರವಾಸ ಕೈಗೊಂಡು ಹಲವಾರು ಪುಣ್ಯ ಕ್ಷೇತ್ರಗಳನ್ನು ಸಂದರ್ಶನ ಮಾಡುತ್ತಾರೆ , ಆ ಸಮಯದಲ್ಲಿ ತಮಗೆ ಕಂಡು ಬಂದ ಅನುಭವಗಳ ಮಾಲಿಕೆಯನ್ನು ತೀರ್ಥ ಪ್ರಬಂಧ ಎಂಬ ಹೆಸರಿನಿಂದ ಬರೆದು ಲೋಕದ ಮುಂದಿಟ್ಟಿದ್ದಾರೆ . ಅಚ್ಚರಿ ಎಂದರೆ ಬನವಾಸಿ, ಶಾಲ್ಮಲಾ ನದಿ, ವರದ ನದಿ, ಮಂಜುಗುಣಿ , ಯಾಣ ಮುಂತಾದ ಪ್ರದೇಶಗಳ ಬಗ್ಗೆ ಹಲವು ಶತಮಾನಗಳ ಹಿಂದೆಯೇ ದಾಖಲೆ ಮಾಡಿದ್ದಾರೆ . ಹಾಗೆಯೇ ಮಂಜುಗುಣಿಯ ವೆಂಕಟೇಶ ಕೈಯಲ್ಲಿ ಬಿಲ್ಲು ಬಾಣ ಹಿಡಿದವನು , ಮೃಗಗಳ ಬೇಟೆಗಾಗಿ ಇಲ್ಲಿಗೆ ಬಂದವನು ಎನ್ನತ್ತಾರೆ .
|
ಸುಂದರ ದೇವಾಲಯ ದರ್ಶನ |
ಲಭ್ಯವಾದ ಪುರಾಣಿಕ ಮಾಹಿತಿ ಪ್ರಕಾರ ತಿರುಪತಿಯಿಂದ ವೆಂಕಟರಮಣ ಬೇಟೆಯಾಡುತ್ತಾ , ವಿಹಾರ ಮಾಡುತ್ತಾ ಈ ಮಂಜುಗುಣಿ ಕ್ಷೇತ್ರಕ್ಕೆ ಬಂದು ನೆಲೆಸಿದನೆಂದು ಹೇಳಲಾಗುತ್ತದೆ . ಹಾಗಾಗಿ ಈ ದೇವರನ್ನು ಬೇಟೆ ವೆಂಕಟರಮಣ ಎಂದೂ ಸಹ ಕರೆಯಲಾಗಿದೆ. ಚಳಿಗಾಲದಲ್ಲಿ ಇಲ್ಲಿ ದಟ್ಟನೆಯ ಮಂಜು ಮುಸುಕುವ ಕಾರಣ ಈ ಪ್ರದೇಶಕ್ಕೆ ಮಂಜುಗುಣಿ ಎಂದು ಕರೆಯಲಾಗಿದೆ . ಈ ದೇವಾಲಯವು ವಿಜಯನಗರ ಶೈಲಿಯಲ್ಲಿದ್ದು ಅಂದಿನ ಕಾಲದ್ದು ಎಂದು ನಿಖರವಾಗಿ ಹೇಳಲು ಯಾವುದೇ ಶಾಸನ ಆಧಾರಗಳು ಇಲ್ಲ , ವಾದಿರಾಜರು ಈ ಕ್ಷೇತ್ರಕ್ಕೆ ಭೇಟಿಕೊಟ್ಟು ಈ ದೇವಾಲಯದ ಬಗ್ಗೆ ಹೇಳಿರುವ ಕಾರಣ ಈ ದೇವಾಲಯ ವಿಜಯನಗರ ಕಾಲಕ್ಕೂ ಬಹಳ ಹಿಂದಿನದು ಎಂದು ತಿಳಿಯಬಹುದಾಗಿದೆ . ಸೋಂದಾ ಅರಸರು ಈ ದೇವಾಲಯವನ್ನು ದುರಸ್ತಿ ಮಾಡಿದ ಬಗ್ಗೆ ಹೇಳಲಾಗುತ್ತದೆ ಆದರೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲ .
|
ಕಲ್ಲಿನಲ್ಲಿ ಚಂದದ ಚಿತ್ತಾರದೊಡನೆ ಮಾಹಿತಿ |
|
ದೇವಾಲಯದ ಮುಂದೆ ಕಂಡುಬರುವ ಗರುಡ ದೇವ |
ದೇವಾಲಯ ಸುಂದರವಾಗಿದ್ದು ಮುಖಮಂಟಪ, ನವರಂಗ, ಆರಾಧನ ಮಂಟಪ, ಹಾಗು ಗರ್ಭಗೃಹ ಗಳನ್ನೂ ಹೊಂದಿದೆ . ನವರಂಗ , ಆರಾಧನ ಮಂಟಪ , ಗರ್ಭಗೃಹಗಳು ಮೊದಲೇ ಇದ್ದವೆಂದೂ ನಂತರ ಮುಖಮಂಟಪ ನಂತರ ನಿರ್ಮಾಣ ವಾಯಿತೆಂದೂ ಹೇಳಲಾಗಿದೆ . ಮುಖ ಮಂಟಪದ ಕಂಬಗಳ ಮೇಲೆ ವಿಷ್ಣು ಭಕ್ತರ ಹಾಗು ಸಂತರ ಕೆತ್ತನೆ ಕಾಣ ಬಹುದಾಗಿದೆ , ಹಾಗು ನವರಂಗದ ಹೊರಗಡೆ ಕಲ್ಲಿನ ಗೋಡೆಗಳಲ್ಲಿ ರಾಮಾಯಣದ ಸುಂದರ ದೃಶ್ಯಗಳನ್ನು, ಶೇಷಶಯನ , ಗೋಪಾಲಕೃಷ್ಣ , ಗಣಪತಿ, ನರಸಿಂಹ , ಮಾರುತಿ, ಮುಂತಾದ ದೇವರುಗಳ ರೂಪಗಳನ್ನು ಕೆತ್ತಲಾಗಿದೆ . ನವರಂಗದ ಪ್ರವೇಶ ದ ಹಾದಿಯಲ್ಲಿ ಗರುಡ ಹಾಗು ಹನುಮನ ಮೂರ್ತಿಗಳನ್ನು ಕಡೆಯಲಾಗಿದೆ .
|
ಮಂಜುಗುಣಿ ವೆಂಕತರಮಣ |
|
ತಿರುಮಲ ಯೋಗಿಗಳು |
ಇನ್ನು ಬನ್ನಿ ಮೂಲ ಮೂರ್ತಿಯ ದರ್ಶನ ಮಾಡೋಣ ಸಾಮಾನ್ಯವಾಗಿ ವೆಂಕಟೇಶ್ವರನ ಬೃಹದ್ ಮೂರ್ತಿಯ ದರ್ಶನ ಮಾಡಿರುವವರಿಗೆ , ಇಲ್ಲಿನ ಮುದ್ದಾದ ಪುಟ್ಟ ಮೂರ್ತಿ ವಿಸ್ಮಯವೇ ಸರಿ . ಕಪ್ಪು ಶಿಲೆಯಲ್ಲಿ ಮುದ್ದಾಗಿ ನಿರ್ಮಿಸಲಾಗಿದೆ, ನಾಲ್ಕು ಕೈಗಳಲ್ಲಿ ಮೇಲಿನ ಎರಡು ಕೈಗಳಲ್ಲಿ ಶಂಖ , ಚಕ್ರ, ಕೆಳಭಾಗದ ಎರಡು ಕೈಗಳಲ್ಲಿ ಬಿಲ್ಲು ಭಾಣ ಧರಿಸಿದ ಮೂರ್ತಿ ಇದು, ಪೌರಾಣಿಕವಾಗಿ ಈ ಮೂರ್ತಿಯ ಪ್ರತಿಷ್ಟಾಪನೆಯನ್ನು ಶ್ರೀ ತಿರುಮಲ ಯೋಗಿಗಳು ಮಾಡಿದರೆಂದು ತಿಳಿದುಬರುತ್ತದೆ. ವೆಂಕಟರಮಣನ ಗುಡಿಯ ನೈಋತ್ಯ ದಿಕ್ಕಿನಲ್ಲಿ ಸುಂದರವಾದ ಪದ್ಮಾವತಿ ಅಮ್ಮನವರ ಗುಡಿ ಇದೆ .
|
ನನ್ನನ್ನು ಒಮ್ಮೆ ನೋಡಿಬಿಡಿ |
|
ರಥ ದರ್ಶನ |
ಗುಡಿಯ ದರ್ಶನ ಮಾಡುತ್ತಾ ಯಾವುದೋ ಲೋಕ ಹೊಕ್ಕಂತೆ ಆಯಿತು, ದೇಗುಲದ ಹೊರಗೆ ಬಂದ ನಮಗೆ . ದೇವಾಲಯದ ಮುಂಭಾಗ ಕಲ್ಲಿನ ಆಮೆಯ ದರ್ಶನ ಆಯಿತು , ಹಾಗೆ ಮುಂದೆ ಬಂದರೆ ಸುಂದರವಾದ ರಥ ದರ್ಶನ ಆಯಿತು, ಚೌಕಾಕ್ರುತಿಯ ರಥದಲ್ಲಿ ವಿಷ್ಣುವಿನ ವಿವಿಧ ಅವತಾರಗಳ ದರ್ಶನ ಕಾಣುತ್ತದೆ . ನಾವು ಹೋಗಿದ್ದ ದಿನಕ್ಕೆ ಸ್ವಲ್ಪ ಹತ್ತಿರದಲ್ಲೆ ಮಂಜುಗುಣಿ ಯ ರಥೋತ್ಸವ ಇರುವುದಾಗಿ ತಿಳಿದು ಬಂತು ,
|
ಆದಿ ಮಂಜುಗುಣಿಯ ಕೊಳ |
|
ದೇವಾಲಯದ ಪಕ್ಕದಲ್ಲಿ ಇರುವ ಕೊಳ |
ಮಂಜುಗುಣಿಯಲ್ಲಿ ಎರಡು ಸುಂದರವಾದ ಪುಷ್ಕರಿಣಿಗಳು ಇವೆ , ಬಹಳ ಸ್ವಚ್ಚವಾಗಿ ನಿರ್ವಹಣೆ ಮಾಡಲಾಗಿದೆ, ಆದಿ ಮಂಜುಗುಣಿ ಎಂದು ಕರೆಯುವ ಸ್ಥಳದಲ್ಲಿ ಇರುವ ಒಂದು ಪುಷ್ಕರಿಣಿ ಬಹಳ ದೊಡ್ಡದಿದ್ದು ಸುಂದರವಾಗಿದೆ, ಇಲ್ಲಿ ಒಂದು ಮಾರುತಿ ದೇವಾಲಯ ಇದೆ. ಅಘನಾಶಿನಿ ನದಿ ಇಲ್ಲಿ ಹುಟ್ಟುತ್ತದೆ ಎಂದು ಹೇಳುತ್ತಾರೆ . ಪ್ರತೀವರ್ಷ ಚೈತ್ರ ಪೂರ್ಣಿಮೆಯಲ್ಲಿ ಮಂಜುಗುಣಿಯಲ್ಲಿ ರಥೋತ್ಸವ ನಡೆಸಲಾಗುತ್ತದೆಂದು ತಿಳಿದು ಬಂತು . . ಈ ಕ್ಷೇತ್ರ ದರ್ಶನ ದಿಂದ ಹೊಸ ವಿಚಾರ ತಿಳಿದು ಬಂತು , ನಾವು ಇಲ್ಲಿಗೆ ಬಾರದೆ ಹಾಗೆ ಮುಂದೆ ಹೋಗಿದ್ದರೆ ನಮಗೆ ಒಂದು ಪ್ರದೇಶದ ಪರಿಚಯ ಆಗುತ್ತಿರಲಿಲ್ಲ . ಇದಕ್ಕಾಗಿ ಸಲಹೆ ನೀಡಿ ನಮ್ಮನ್ನು ಇಲ್ಲಿಗೆ ಕಳುಹಿಸಿದ ಎಲ್ಲರಿಗೂ ಮನದಲ್ಲಿ ವಂದಿಸುತ್ತಾ ನಮ್ಮ ಪಯಣ ಮುಂದು ವರೆಸಿದೆವು . ಮುಂದಿನ ಪಯಣ ......... "ಅಣ್ಣಾ ಇದು ಯಾಣ ಕಣಣ್ಣಾ "
6 comments:
ತೀರ್ಥ ಪ್ರಬಂಧ ಕನ್ನಡದಲ್ಲೂ ಬಂದಿರಬಹುದು. ಅಥವ ಕೃತಿಯೇ ಕನ್ನಡದ್ದೂ ಆಗಿರಬಹುದು. ಖಂಡಿತ ಹುಡುಕಿ ಓದುತ್ತೇನೆ.
ವಿಶಿಷ್ಟ ಪುಟ್ಟ ವೆಂಕಟರಮಣ ಗ್ರಾಮ್ಯ ಶೈಲಿಯಲ್ಲಿ ಮುದ್ದಾಗಿದೆ.
ಚಿತ್ರಗಳೆಲ್ಲವೂ ಚೆನ್ನಾಗಿವೆ, ಮುಖ್ಯವಾಗಿ ಆಮೆ.
ಉತ್ತಮ ಮಾಹಿತಿಯ ಬರಹ. ನವರಾತ್ರಿ ಸಮಯದಲ್ಲಿ ಶಿರಸಿಗೆ ಹೋಗುವ ಕಾರ್ಯಕ್ರಮವಿದೆ. ಆವಾಗ ಹೋಗಬೇಕು.
namgu adara gotha aaitu tumbha thanks sundra taana
ಮಂಜುಗುಣಿಯ ಬಗ್ಗೆ ನಾ ಬರೆದ ಎರಡು ಲೇಖನಗಳ ಕೊಂಡಿ
http://sirsi.info/manjuguni-temple/
http://sirsi.info/epaper/36th-edition/Default.aspx&ab08/sirsi-siri-page-bi-8-1.html.
ಮಂಜುಗುಣಿ ಈ ಪ್ರದೇಶದ ಹೆಸರು ನನ್ನ ಗಮನಕ್ಕೆ ಬಂದಾಗಿಂದ ಒಂದು ವಿಚಿತ್ರ ಕುತೂಹಲ ಕಾಡಿತ್ತು.. ಕಳೆದ ವರ್ಷ ಈ ಪ್ರದೇಶಕ್ಕೆ ಕಾಲಿಟ್ಟಾಗಾ ಏನೋ ಒಂದು ಸಂತಸ ನನ್ನಲ್ಲಿ ಮನೆಮಾಡಿತ್ತು..
ಸುಂದರ ಮಾಹಿತಿಗಳ ಖಣಜ ನೀವು.. ಪ್ರತಿಯೊಂದನ್ನು ಒರೆಗೆ ಹಚ್ಚಿ ನೋಡುವ ನಿಮ್ಮ ಶೈಲಿ ಪ್ರತಿಲೇಖನದಲ್ಲೂ ಇಣುಕುತ್ತದೆ. ಮಂಜು ಕವಿದಾಗ ಮಂಜುಗುಣಿಯನ್ನು ನೋಡುವ ಬಯಕೆ ಇದೆ.
ಎಲ್ಲಿ ಹೆಕ್ಕುತ್ತೀರಾ ಈ ಮಾಹಿತಿಗಳನ್ನು ಸೂಪರ್ ಸರ್ಜಿ.. ಇತಿಹಾಸಕ್ಕೆ ನಿಮ್ಮ ಮೇಲೆ ಅಪರಿಮಿತ ಪ್ರೀತಿ ಅದಕ್ಕೆ ನಿಮ್ಮ ಕಡೆ ಹರಿದು ಬರುತ್ತಲೇ ಇರುತ್ತದೆ ..
ಬಾಲೂ ಸರ್ ಅಂದರೆ ಬಾಲೂ ಸರ್ ಸೂಪರ್
ಪ್ರವಾಸ ಕಥನ ಮತ್ತು ಪುಣ್ಯಕ್ಷೇತ್ರಗಳ ನಿಮ್ಮ ಸಚಿತ್ರ ವಿವರಣೆ ಖಂಡಿತಾ ಒಂದು ಪುಸ್ತಕ ರೂಪದಲ್ಲಿ ಹೊರಬರಲು ಕನ್ನಡಿಗರ ಕೈ ಸೇರಲು ಯೋಗ್ಯವಾದ ವಸ್ತು ಬಾಲು...ಈ ಬಗ್ಗೆ ಗಂಭೀರವಾಗಿ ಆಲೋಚಿಸಿ.
Post a Comment