Sunday, April 19, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......13 "ಅಣ್ಣಾ ಇದು ಯಾಣ ಕಣಣ್ಣಾ "



ಯಾಣ ದಲ್ಲಿ ಕಂಡ  ಮಾನವ ಮುಖ


ಸಂಧ್ಯಾ ಭಟ್ ಮನೆಯಲ್ಲಿನ  ಊಟ ಮಾಡಿ  ಮಂಜುಗುಣಿ ಕ್ಷೇತ್ರ ದರ್ಶನ ಮಾಡಿದ ನಾನೂ ಹಾಗು ಪ್ರಕಾಶ್ ಹೆಗ್ಡೆ   ನಿಗದಿತ ಕಾರ್ಯಕ್ರಮದಂತೆ  "ಯಾಣ " ಅಥವಾ  "ಏಣ"  ಕಡೆಗೆ ಹೊರಟೆವು . ಈ ಯಾಣ  ಎಂಬ ತಾಣ ದ ಬಗ್ಗೆ ನನಗೆ ಮೊದಲಿಂದಾ ಕುತೂಹಲ ,  ಹಲವಾರು ಕನ್ನಡ  ಚಿತ್ರಗಳಲ್ಲಿ ನೋಡಿದ್ದೇ , ಕೆಲವೊಮ್ಮೆ  ಅಂತರ್ಜಾಲದ  ತಾಣಗಳಲ್ಲಿ ನೋಡಿದ ಯಾಣ  ದ ಚಿತ್ರಗಳು  ನನಗೆ ಹಾಲಿವುಡ್  ಚಿತ್ರಕ್ಕೆ ಹಾಕಿದ  ಸೆಟ್ ನಂತೆ  ಕಾಣುತ್ತಿತ್ತು,  ಯಾಣ  ನೋಡುವ ಹಲವು ಪ್ರಯತ್ನ ನನಗೆ  ಸಮಯದ ಅಭಾವದಿಂದ  ತಪ್ಪಿ ಹೋಗಿತ್ತು . ಮತ್ತೊಮ್ಮೆ ಯಾಣ  ನೋಡಲು ಹೋದವ  ಸಮಯ ಸಾಲದೇ ಗೆಳೆಯನ ನೆರವಿನಿಂದ ಭೀಮನೇರಿ ಗುಡ್ಡ ತಲುಪಿದ್ದೆ ಅದನ್ನೇ ನೋಡಿ ಖುಶಿಪಟ್ಟಿದ್ದೆ .  ಮುಂದೆ ಇದರ ನೋಟವನ್ನು   ಶ್ರೀ  ಸುರೇಶ ಹೆಬ್ಳಿಕರ್  ರವರ  "ಆಗಂತುಕ "  ಹಾಗು  ಸುನಿಲ್ ಕುಮಾರ್ ದೇಸಾಯಿ ಯವರ  "ನಮ್ಮೂರ ಮಂದಾರ ಹೂವೆ"  ಚಿತ್ರಗಳಲ್ಲಿ  ಅದ್ಭುತವಾಗಿ ಸೆರೆಹಿದಿರುವ   ಸುಂದರ ನೋಟವನ್ನು ಅನುಭವಿಸಿದ್ದೆ   ಎಲ್ಲರೂ ಹೇಳುತ್ತಿದ್ದರೆ ಯಾಣ  ನೋಡುವ ಬಯಕೆ  ಹೆಚ್ಚಾಗುತ್ತಿತ್ತು .  ಹೀಗೆ ನನ್ನ ಯಾಣ  ನೋಡುವ ಆಸೆ  ಹಾವು ಏಣಿ ಆಟ  ಆಡಿ ಕೊನೆಗೊಮ್ಮೆ ನಮ್ಮ ಪ್ರಕಾಶ್ ಹೆಗ್ಡೆ  ಜೊತೆ  ಯಾಣ  ನೋಡುವ ಅವಕಾಶ  ಸಿಕ್ಕಿತು.

ಭೈರವೇಶ್ವರ  ಶಿಖರ

ಯಾಣ  ಕಡೆ ಹೊರಟ  ನಮ್ಮ ಕಾರು  ಚಲಿಸಿದ ತಕ್ಷಣ  ಬೀಸಿದ ತಂಗಾಳಿಗೆ   ನಮ್ಮ ದೇಹಗಳು  ವಿಶ್ರಾಂತಿಗೆ ಅಣಿಯಾಗಿ ಬಿಟ್ಟವು , ನಿದ್ರೆಯು ಗಾಳ  ಹಾಕಲು  ಹೊಂಚುಹಾಕಿತ್ತು,  ಆದರೆ ನಮ್ಮ ಪ್ರಕಾಶ್ ಹೆಗ್ಡೆ ತುಂಟ  ಮಾತುಗಳು ಬರುತ್ತಿದ್ದ   ನಿದ್ದೆಯನ್ನು ಹೊಡೆದು ಓಡಿಸಿದವು  .  ಅಲ್ಲಾ ಬಾಲಣ್ಣ  ಆ  "ಹಣಮಂತ"   ನಮ್ಮ ಜೊತೆ ಬಂದಿದ್ರೆ  ಮತ್ತೆ ಚೆನ್ನಾಗಿತ್ತು , ಎಂದು ಹೇಳುತ್ತಿದ್ದರೆ   ಆ "ಹಣಮಂತ"   ಎಂಬ ಪದದ ಉಚ್ಚಾರಣೆ ಕೇಳಿಯೇ  ನಗೆ ಉಕ್ಕಿ ಬಂದಿತು, ಇನ್ನು  ಶಿರಸಿಯಲ್ಲಿ ಪ್ರಕಾಶ್ ಹೆಗ್ಡೆ ಓದುತ್ತಿದ್ದಾಗ  ಅವರ ಕಾಲೇಜಿಗೆ   ಕಡಲ ತೀರದ ಭಾರ್ಗವ ಶಿವರಾಮ ಕಾರಂತರ  ಕರೆತರುವಬಗ್ಗೆ   ಶಿವರಾಮ ಕಾಂತರನ್ನು   ಭೇಟಿಯಾಗಲು    ಹೋಗಿ  ಅಲ್ಲಿ  ನಡೆದ  ಘಟನೆಯ   ವಿಚಾರವನ್ನು  ರಸವತ್ತಾಗಿ ಹಾಸ್ಯಮಯವಾಗಿ  ಹೇಳುತ್ತಿದ್ದರೆ  ಒಂದು ಹೊಸ ಲೋಕದೊಳಗೆ ಹೊಕ್ಕ ಅನುಭವ. ವಿಚಾರ ತಿಳಿಯುತ್ತಾ  ನಗುತ್ತಾ ಯಾಣ  ತಲುಪಿದ್ದೆ ತಿಳಿಯಲಿಲ್ಲ .


ಶೀರ್ಷಿಕೆ ಸೇರಿಸಿ


ಬನ್ನಿ ಯಾಣ  ಬಗ್ಗೆ ತಿಳಿಯೋಣ , ಈ ಬ್ಲಾಗ್ ಬರಹ  ಬರೆಯುವ ಮೊದಲು ಯಾಣ  ಬಗ್ಗೆ  ಹಲವು ಮಾಹಿತಿ  ಜಾಲಾಡಲು ತೊಡಗಿದೆ,  ಶಿರಸಿಯ  ಮಿತ್ರ  ನಮ್ಮ ಶಿರಸಿ  ಪತ್ರಿಕೆಯ  ಸಂಪಾದಕ  ಶ್ರೀ  ಎಮ್. ಆರ್ . ಸಚಿನ್   ಯಾಣ  ಬಗ್ಗೆ ತಮ್ಮ ಪತ್ರಿಕೆಯಲ್ಲಿ  ಸಾಕ್ಕಷ್ಟು ಮಾಹಿತಿ  ನೀಡಿದ್ದಾರೆ , http://sirsi.info/epaper/34th-edition/Default.aspx&ab08/sirsi-siri-page-bi-8-1.html  ಈ ಮಾಹಿತಿಯನ್ನು  ಒಪ್ಪಬಹುದಾಗಿದೆ , ಆದರೆ  ನನಗೆ ಅಚ್ಚರಿಯಾಗಿದ್ದು  ವಿಕಿಪಿಡಿಯಾ , ಹಾಗು ಕಾಮತ್  ಪೋಟ್ ಪುರಿ  ತಾಣದಲ್ಲಿನ  ಒಂದು ಮಾಹಿತಿ ಬಗ್ಗೆ  ಹಾಗು ಗೆಜತೀರ್  ನಲ್ಲಿನ ಮಾಹಿತಿ ಬಗ್ಗೆ  , ಈ ಎಲ್ಲಾ ತಾಣಗಳಲ್ಲಿ ಹಾಗು ಪುಸ್ತಕಗಳಲ್ಲಿ  ಯಾಣ  ಪ್ರದೇಶವನ್ನು  ೧೮೦೧ ರಲ್ಲಿ  ಬುಕನನ್  ಅವರು  ಸರ್ವೇ ಕಾರ್ಯ ನಡೆಸಿದರು ಎಂದು ಹೇಳಲಾಗಿದೆ  ಮಾಹಿತಿ ಇಲ್ಲಿದೆ ನೋಡಿ http://en.wikipedia.org/wiki/Yana,_India

History

Dr Francis Buchan, a British official of the East India Company, surveyed the site in 1801. At that time, according to his reports, there was a population of more than ten thousand in and around this place. Over the years, people have migrated to other regions to pursue their vocations. At present, the place is inhabited by only a few families, one of them being the Pujari ("Priest") family.[1] With 16 k.m. trek, Yana was a trekkers delight during 20th Century and when a popular movie was shot here and all weather road made which provides easy access, the place became famous and attracts thousands of tourists every week.[9]



ಮೋಹಿನಿ ಶಿಖರ ಅಥವಾ  ಚಂಡಿಕ ಶಿಖರ


 ಇವುಗಳ ಮಾಹಿತಿ ಆಧರಿಸಿ  1807 ಪ್ರಕಟಗೊಂಡ   ಡಾಕ್ಟರ್ ಫ್ರಾನ್ಸಿಸ್  ಬುಕನನ್  ಅವರ A JOURNEY  FROM MADRAS THROUGH  MYSORE  CANARA AND MALABAAR ಪುಸ್ತಕ  ತಡಕಾಡಲು  ಸಿಕ್ಕ ಮಾಹಿತಿ ಪ್ರಕಾರ ಬುಕನನ್  ಅವರು ೧೮ ಫೆಬ್ರವರಿ ೧೮೦೧ ರಿಂದ ೧೮ ಮಾರ್ಚ್ ೧೮೦೧ ರವರೆಗೆ  ಭಟ್ಕಳ , ಹೊನ್ನಾವರ, ಗೋಕರ್ಣ, ಅಂಕೋಲಾ , ಸದಾಶಿವ ಘಡ ,  ಯೆಲ್ಲಾಪುರ , ಸೋಂದ ,ಶಿರಸಿ , ಬನವಾಸಿ   ಯಲ್ಲಿ ಪ್ರವಾಸ ಮಾಡಿ ನಂತರ ಚಂದ್ರಗುತ್ತಿ ಗೆ ತೆರಳುತ್ತಾರೆ . ಈ ಅವಧಿಯಲ್ಲಿ  ದಿನಾಂಕ ೧೪ - ೦೨ ೧೮೦೧ ರಿಂದ ೧೬ -೦೨ -೧೮೦೧ ರವರೆಗೆ  ಶಿರಸಿ, ೧೬ -೦೨ ೧೮೦೧ ರಿಂದ ೧೮-೦೨-೧೮೦೧ ರವರೆಗೆ  ಎರಡುದಿನ ಬನವಾಸಿಯಲ್ಲಿ  ಕಳೆಯುತ್ತಾರೆ ,  ಯಾಣ  ಸುತ್ತ ಮುತ್ತ ಲಿನ ಪ್ರದೇಶ ಅಳತೆ ಮಾಡಿದ ಬಗ್ಗೆ ಎಲ್ಲಿಯೂ ಉಲ್ಲೇಖ  ಇಲ್ಲಾ , ಆದರೆ ನಮ್ಮ  ಮಾಹಿತಿ ತಾಣಗಳು ಹಾಗು ಪುಸ್ತಕಗಳು    ೧೮೦೧ ರಲ್ಲಿ  ಬುಕನನ್  ಅವರು ಸರ್ವೇ  ಮಾಡಿಸಿದರು ಅನ್ನುತ್ತಿವೆ , ಯಾವುದನ್ನು ನಂಬ ಬೇಕು .  ಅರ್ಥಾ  ಆಗಲಿಲ್ಲ ಹಾಗಾಗಿ ಡಾಕ್ಟರ್ ಫ್ರಾನ್ಸಿಸ್  ಬುಕನನ್  ಅವರ  ಪುಸ್ತಕ  ಓದಿದ ನಂತರ  ಅದನ್ನು ಆಧರಿಸಿ  ಡಾಕ್ಟರ್ ಫ್ರಾನ್ಸಿಸ್  ಬುಕನನ್ ಯಾಣ  ಕ್ಕೆ ಬಂದಿಲ್ಲ  ಹಾಗು ವಿಕಿ ಪಿಡಿಯಾ , ಹಾಗು ಇತರ ಮಾಹಿತಿ ತಾಣಗಳ  ಮಾಹಿತಿ ತಪ್ಪೆಂಬ  ತೀರ್ಮಾನಕ್ಕೆ  ಬಂದೆ . ಬುಕನನ್  ಅವರ A JOURNEY  FROM MADRAS THROUGH  MYSORE  CANARA AND MALABAAR   ಎಂಬ ಮೂರು  ಸಂಪುಟಗಳಲ್ಲಿ  ಯಾರು ಬೇಕಾದರೂ ಹುಡುಕಬಹುದಾಗಿದೆ , ಬಹುಷಃ  ನನ್ನ ಮಾಹಿತಿ ಸರಿ ಇಲ್ಲದಿದ್ದಲ್ಲಿ  ಆಧಾರ ನೀಡ ಬಹುದಾಗಿದೆ.



ಯಾಣ  ಭೈರವೇಶ್ವರ  ಶಿಖರದ  ತಳದಲ್ಲಿ  ದೇವಾಲಯ


 ಹಲವು  ಶತಮಾನಗಳ  ಹಿಂದೆಯೇ ಶ್ರೀ  ವಾಧಿರಾಜರು  ಇಲ್ಲಿಗೆ ಭೇಟಿ ಕೊಟ್ಟ ನಂತರ   ಯಾಣ  ಮಾಹಿತಿ  ತಿಳಿದು ಬಂದದ್ದು    ಶ್ರೀ ವಾಧಿರಾಜರು  ರಚಿಸಿರುವ   ತೀರ್ಥ ಪ್ರಬಂಧದಲ್ಲಿ   ಈ  ಪ್ರದೇಶವನ್ನು ಏಣ  ಭೈರವ ಕ್ಷೇತ್ರ ಎಂದು ಕರೆದು  

" ಯಸ್ಯ  ಭೈರವನಾದೇನ  ವಿದ್ರವಂತ್ಯ ಘರಾಶಯಹ "   "ಏಣ  ಇವ  ಭಾಯಾನ್ನಿತ್ಯಂ ತಂ  ನತೋS ಸ್ಮ್ಯೇ ಣ  ಭೈರವಂ "  

ಎಂದು   ಭಕ್ತಿಯಿಂದ  ಪ್ರಬಂಧ  ರಚಿಸಿ  ದಾಖಲೆ ಮಾಡಿದ್ದಾರೆ . ಯಾಣ  ಕುರಿತು  ಬಟ್ಟಲೆಶ್ವರ  ಬರೆದ ಕೌಶಿಕ  ರಾಮಾಯಣದಲ್ಲಿ ಉಲ್ಲೇಖವಿದೆ ,     ಯಾಣ   ಕುಮಟ ತಾಲೂಕಿನ  ಒಂದು ಕಂದಾಯ ಗ್ರಾಮ ಕುಮಟಾದಿಂದ  ೨೪ ಕಿಲೋಮೀಟರು  ಶಿರಸಿಯಿಂದ  ೪೫ ಕಿಲೋಮೀಟರು , ಈಗ ಇಲ್ಲಿಗೆ ತಲುಪಲು  ಸರಿಯಾದ ರಸ್ತೆಗಳು ಆಗುತ್ತಿದ್ದು  ಶಿರಸಿ ಕಡೆಯಿಂದ ಹೋದರೆ  ನಡೆಯುವ  ಹಾದಿ ಕಡಿಮೆ ಆಗುತ್ತದೆ,  ಕುಮಟ ಕಡೆಯಿಂದ ಬಂದರೆ  ಕಡಿದಾದ ಮೆಟ್ಟಿಲು ಏರಿ ಬರಬೇಕು .   ಯಾಣ  ದಲ್ಲಿ  ಸುಮಾರು ೬೧   ಶಿಲಾ ಶಿಖರಗಳು ಇದ್ದು  ಇದರಲ್ಲಿ  ಭೈರವೆಶ್ವರ  ಶಿಖರ  ೧೨೦ ಮೀಟರ್  ಹಾಗು  ಮೋಹಿನಿ ಶಿಖರ  ಅಥವಾ ಚಂಡಿಕಾ ಶಿಖರ  ೯೦ ಮೀಟರ್  ಎತ್ತರವಿದೆ , ಉಳಿದ  ೫೯  ಶಿಲಾ ಶಿಖರಗಳು  ಸಣ್ಣದಾಗಿದ್ದು  ಇಲ್ಲಿನ ದಟ್ಟ  ಕಾಡಿನಲ್ಲಿ  ಅಡಗಿಕೊಂಡಿವೆ . ಈ ಪ್ರದೇಶದಲ್ಲಿ  ಹುಟ್ಟುವ  ಚಂಡಿ ಹೊಳೆ   ಅಘನಾಶಿನಿ  ನದಿಯಲ್ಲಿ ಸೇರುತ್ತದೆ ..




ಯಾಣ  ಎಂಬ ಮಾಯಾಲೋಕ


ಈ ಜಾಗಕ್ಕೆ ಮೋಹಿನಿ ಬಸ್ಮಾಸುರ   ಘಟನೆ  ನಡೆದ  ಜಾಗವೆಂದು ಹೇಳುತ್ತಾರೆ . ಭಾಸ್ಮಾಸುರನಿಗೆ  ವರ ಕೊಟ್ಟ ಶಿವ  ಅದನ್ನು  ತನ್ನ  ಮೇಲೆ ಪರೀಕ್ಷೆ ಮಾಡಲು  ಮುಂದಾದ  ಭಾಸ್ಮಾಸುರನಿಂದ ತಪ್ಪಿಸಿಕೊಳ್ಳಲು  ಯಾಣ  ದಲ್ಲಿ  ಅಡಗಿದ್ದನೆಂದೂ , ನಂತರ ವಿಷ್ಣು ಮೋಹಿನಿ ರೂಪ ತಾಳಿ  ಈ ತಾಣದಲ್ಲಿಯೇ ಭಸ್ಮಾಸುರನನ್ನು  ಭಸ್ಮ ಮಾಡಿದ ಕಾರಣ  ಇಲ್ಲಿನ ಮಣ್ಣು  ಇಂದಿಗೂ ಭಸ್ಮ ದಂತೆ  ಕಂಡು ಬರುವುದಾಗಿ ಹೇಳುತ್ತಾರೆ .  ಈ ಜಾಗದಲ್ಲಿ ಶಿವನು  ಅಡಗಿದ ಕಾರಣ ಭೈರವ  ಶಿಖರ ,  ವಿಷ್ಣು  ಮೋಹಿನಿ ರೂಪ ತಾಳಿ ಭಸ್ಮಾಸುರನನ್ನು  ನಿಗ್ರಹ ಮಾಡಿದ  ಕಾರಣ   ಮೋಹಿನಿ ಶಿಖರ  ಎಂಬ ಹೆಸರು ಬಂತೆಂದು ಹೇಳುತ್ತಾರೆ . ಇಲ್ಲಿನ ಗುಹೆಯಲ್ಲಿನ  ಆಲಯದಲ್ಲಿ ಒಂದು ಶಿವಲಿಂಗ ಇದ್ದು  ಅದನ್ನು    ಭೈರವೇಶ್ವರ  ಎಂದು ಕರೆಯಲಾಗಿದೆ,  ಈ ಶಿವಲಿಂಗದ ಮೇಲೆ  ಗುಹೆಯಲ್ಲಿ ಜಿನುಗುವ ಜಲ  ಯಾವಾಗಲು  ಲಿಂಗಕ್ಕೆ ಅಭಿಷೇಕ  ಮಾಡುತ್ತಿರುತ್ತದೆ . ಇದನ್ನು ಗಂಗೊದ್ಭವ  ಎಂದು ಕರೆಯುತ್ತಾರೆ.  ಇದರ ದಕ್ಷಿಣದಲ್ಲಿ ಚಂಡಿಕಾ ಹಾಗು ದುರ್ಗಾ ಮೂರ್ತಿಗಳಿವೆ .  ಶಿವರಾತ್ರಿಯಲ್ಲಿ ಇಲ್ಲಿ ವಿಶೇಷ ಜಾತ್ರೆ ಇರುವುದಾಗಿ ತಿಳಿದು  ಬಂತು , ಶಿವರಾತ್ರಿ ಯಲ್ಲಿ ಇಲ್ಲಿನ ದಂಡಿತೀರ್ಥ ದಲ್ಲಿ ಮಿಂದು  ಯಾಣ ದಲ್ಲಿನ ಭೈರವೆಶ್ವರನ  ದರ್ಶನ ಪಡೆದು  ದಂಡಿ ತೀರ್ಥವನ್ನು  ಗೋಕರ್ಣಕ್ಕೆ  ತೆಗೆದುಕೊಂಡು ಹೋಗಿ  ಅಲ್ಲಿನ ಮಹಾಬಲೇಶ್ವರನಿಗೆ ಅಭಿಷೇಕ  ಮಾಡಿದರೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇಲ್ಲಿನ ಜನರ ಪದ್ದತಿಯಾಗಿದೆ ..



ಯಾಣದ  ಗುಹೆಗಳ ವಿಸ್ಮಯ  ಕರ್ನಾಟಕ ನಕ್ಷೆ


ವಿಸ್ಮಯ  ಲೋಕ

ವಿಸ್ಮಯ ನೋಟ


ಬನ್ನಿ  ಭೈರವೆಶ್ವರನಿಗೆ  ಪ್ರದಕ್ಷಿಣೆ ಹಾಕೋಣ ಇಲ್ಲಿನ ಬೈರವೇಶ್ವರ  ಗುಹೆಗೆ ಪ್ರದಕ್ಷಿಣೆ ಬರಲು ನಿಸರ್ಗ ನಿರ್ಮಿತ   ಕಲ್ಲಿನ ಬೆಟ್ಟಗಳ ಸಂದಿನಲ್ಲಿ ಒಂದು  ಪಥ  ಮಾಡಲಾಗಿದೆ, ಇಲ್ಲಿ ಪ್ರವಾಸಿಗಳು ಬರೀ ಕಾಲಿನಿಂದ  ಪ್ರದಕ್ಷಿಣೆ ಹಾಕಲು  ತಿಳಿಸಲಾಗಿದೆ,  ಸುಮಾರು  ಎರಡು ಕಿಲೋಮೀಟರು  ಸುತ್ತಳತೆಯ  ಕಡಿದಾದ  ಸ್ವಲ್ಪ ಕಷ್ಟ ಪಡುವ ಹಾದಿ ಇದು , ಆದರೆ ನೀವು ಪ್ರದಕ್ಷಿಣೆ ಹಾಕುತ್ತಾ   ಬಂಡೆಯಿಂದ ಬಂಡೆಗೆ  ತೆರಳುತ್ತಾ   ತೆರಳುವಾಗ  ನಿಮಗೆ ಅನೇಕ ವಿಸ್ಮಯಗಳು ಕಾಣುತ್ತವೆ ಅದನ್ನು ಗಮನಿಸುವ  ತಾಳ್ಮೆ ಇರಬೇಕು ಅಷ್ಟೇ , ಸ್ವಲ್ಪ ಸಹನೆಯಿಂದ ಗಮನಿಸಿದರೆ  ನಿಮಗೆ  ಮರೆಯಲಾಗದ ಅನುಭವ ಇಲ್ಲಿ ಸಿಗುತ್ತದೆ .


ಯಾಣ  ದಲ್ಲಿ  ಪ್ರದಕ್ಷಿಣೆ   ನಡೆಸಿದ ಪ್ರಕಾಶ್ ಹೆಗ್ಡೆ

  ಹರನ ಜೊತೆ ಇಲ್ಲಿ ಹರಿಯೂ ಇದ್ದಾನೆ 

ನಾನೂ ಹಾಗು ಪ್ರಕಾಶಣ್ಣ  ಈ ವಿಸ್ಮಯ ಅನುಭವಿಸುತ್ತಾ   ಪ್ರದಕ್ಷಿಣೆ ಹಾಕುತ್ತಾ ನಡೆದೆವು . ಒಮ್ಮೆಲೇ ಗುಹೆ ಕಳೆದು ಹೊರ ಪ್ರಪಂಚಕ್ಕೆ ಬಂದರೆ  ಕಡಿದಾದ  ಬಂಡೆ  ಇಳಿದು  ಜಾರುವ  ಕಡಿದಾದ ಮಣ್ಣಿನ  ಗುಡ್ಡ ಇಳಿಯ ಬೇಕಾಯಿತು  ಮೊದಲೇ ತಲೆಯ ಮೇಲೆ ಸೂರ್ಯ  ಕೆಂಡದ ಮಳೆ  ಸುರಿಸಿದ್ದ  ಅದರ ಜೊತೆ ಪಾದ ರಕ್ಷೆ ಇಲ್ಲದ ಬರೀ ಕಾಲಿನಲ್ಲಿ    ಬಿಸಿಯಾದ  ನುರುಜುಕಲ್ಲು  ಮಣ್ಣು  ಹಾಗು ಮುಳ್ಳು ತುಂಬಿದ ಹಾದಿಯಲ್ಲಿ ನಡೆಯುವಷ್ಟರಲ್ಲಿ ಹೈರಾಣಾಗಿದ್ದೆವು , ಕಷ್ಟಪಟ್ಟು ಪ್ರದಕ್ಷಿಣೆ ಮುಗಿಸಿ  ಅಲ್ಲೇ ಇದ್ದ  ಒಂದು  ಪುಟ್ಟ ದೇಗುಲದ ಬಳಿ  ಕುಳಿತೆವು . ವಿಶ್ರಾಂತಿ ಪಡೆದು ನೋಡಿದರೆ ಅಲ್ಲಿ  ಒಂದು ಮುದ್ದಾದ  ವೇಣುಗೋಪಾಲ  ಮೂರ್ತಿಯ ದರ್ಶನ ಆಯ್ತು .   ನಂತರ   ನಮ್ಮ ಪ್ರದಕ್ಷಿಣೆ ಮುಗಿಸಿ  ಉರಿಬಿಸಿಲಿನ ತಾಪ ದಿಂದ   ಮತ್ತಷ್ಟು ಬಸವಳಿದು  ಅಲ್ಲೇ ಇದ್ದ ಅಂಗಡಿಯಿಂದ  ತಣ್ಣನೆ  ಶರಬತ್ತು  ಕುಡಿದು  ಮತ್ತಷ್ಟು  ವಿಶ್ರಾಂತಿ ಪಡೆದೆವು .



ಪ್ರದಕ್ಷಿಣೆ ಮಾಡುವ  ಹಾದಿಯಲ್ಲಿ ಸಿಗುವ ಗುಹೆಯ ನೋಟ


ಯಾಣ  ದಲ್ಲಿ  ವಿಹಾರ ಮಾಡಲು   ಮೊದಲನೆಯದಾಗಿ  ದೇಹದಲ್ಲಿ ಸಾಕಷ್ಟು  ಶಕ್ತಿ  ಬೇಕು , ನೀವು ಬೆಳಿಗ್ಗೆ  ಅಥವಾ ಸಂಜೆವೇಳೆ ಇಲ್ಲಿಗೆ ತೆರಳಿದರೆ ಉತ್ತಮ, ಬೇಸಿಗೆಯಲ್ಲಿ  ಖಂಡಿತಾ  ಬಿಸಿಲಿನ ತಾಪ ಹೆಚ್ಹಾಗಿ  ಇದ್ದು  ದೇಹಕ್ಕೆ  ಕಷ್ಟಾ ಆಗುತ್ತದೆ,  ಮಳೆಗಾಲದಲ್ಲಿ  ಇಲ್ಲಿ  ಜಿಗಣೆ ಅಥವಾ ಉಂಬಳಿ  ಕಾಟ ಇರುತ್ತದೆ . . ಇದೆಲ್ಲವನ್ನು  ಹೊರತುಪಡಿಸಿ ಸ್ವಲ್ಪ ಕಷ್ಟ ಪಟ್ಟರೆ  ನಿಮಗೆ  ಈ ತಾಣ  ಬಹಳ ಒಳ್ಳೆಯ ಅನುಭವ ನೀಡುತ್ತದೆ . ಈ ತಾಣ ಏನಾದ್ರೂ ನಮ್ಮ ನಾಡಿನಲ್ಲಿ ಇಲ್ಲದೆ  ಬೇರೆ ಯೂರೋಪ್ ಅಥವಾ ಅಮೇರಿಕ ದೇಶಗಳಲ್ಲಿ  ಇದ್ದಿದ್ದರೆ  ಈ ಜಾಗ  ವಿಶ್ವ ಪ್ರಸಿದ್ಧಿ ಯಾಗುತ್ತಿತ್ತು. ಯಾಣ  ಎಂಬ ವಿಸ್ಮಯ ಲೋಕದ ಅನುಭವ ಪಡೆದ ನಾವು    ಯಾಣಕ್ಕೆ  ಭಕ್ತಿಯ ನಮನ ಅರ್ಪಿಸಿ  ಕೊಳಗಿ ಬೀಸ್  ಹನುಮನ ದರ್ಶನ ಪಡೆದು   ಮೂಲಕ   ಶಿರಸಿಯಕಡೆ  ದೌಡಾಯಿಸಿದೆವು . [ಕೊಳಗಿಬೀಸ್ ಬಗ್ಗೆ ಈಗಾಗಲೇ ಬರೆದಿದ್ದೇನೆ  http://nimmolagobba.blogspot.in/2012/11/13.html ]  ಕಟ್ ಮಾಡಿದರೆ   ಶಿರಸಿಯ    ಸತ್ಕಾರ್ ಹೋಟೆಲ್ ನಲ್ಲಿ ಮಸಾಲೆ ದೋಸೆ  ನಮ್ಮ  ಮುಂದೆ ಕುಳಿತು ನಗುತ್ತಿದ್ದವು .









7 comments:

Srikanth Manjunath said...

ಯಾಣ ಒಂದು ವಿಭಿನ್ನ ಸ್ಥಳ.. ಮಾಮೂಲಿ ಯಾತ್ರ ಸ್ಥಳಗಳಿಗಿಂತ ವಿಭಿನ. ಮೈಯಲ್ಲಿ ಸೊಕ್ಕಿದ್ದರೆ ಯಾಣ ರೊಕ್ಕವಿದ್ದರೆ ಗೋಕರ್ಣ ಎನ್ನುವ ಗಾದೆಯಂತೆ ನಿಜಕ್ಕೂ ತ್ರಾಸದಾಯಕ ಸ್ಥಳ.
ಯಾಣದ ಗಗನ ಚೂಪಿ ಶಿಖರಾಗ್ರ ತರಹ ನೀವು ಕೊಟ್ಟಿರುವ ಮಾಹಿತಿಗಳು ಮೊನಚು ಹಾಗು ಖಚಿತ. ಇಷ್ಟವಾಗುತ್ತದೆ. ನಾ ಈ ಸ್ಥಳಕ್ಕೆ ಮೂರು ಬಾರಿ ಭೇಟಿ ಕೊಟ್ಟಿದ್ದೇನೆ. ಇತಿಹಾಸದ ಬಗ್ಗೆ ಅರಿವಿರಲಿಲ್ಲ. ಬರಿ ಪ್ರಕೃತಿ ಸೌಂದರ್ಯ ನೋಡಿ ಕುಶಿ ಪಟ್ಟಿದ್ದೆ. ಈಗ ಒಂದು ಪೂರ್ಣ ಚಕ್ರವಾಯಿತು. ಸ್ಥಳ ಪುರಾಣ, ಜೊತೆಯಲ್ಲಿ ಪ್ರಕೃತಿ ದರ್ಶನ ಎರಡು ಸಿಕ್ಕಿತು.

ಗುಹೆಯೊಳಗಿನ ಚಿತ್ರಗಳು ಸೂಪರ್ ಇವೆ.. ನೋಡುಗರ ನೋಟಕ್ಕೆ ತಕ್ಕಂತೆ ಯಾಣ ಎನ್ನುವಂತೆ ಕರುನಾಡಿನ ನಕ್ಷೆ ಸುಂದರ. ಪ್ರತಿ ಚಿತ್ರಗಳು ಒಂದು ಕಥೆಯನ್ನೇ ಹೇಳುತ್ತದೆ

ಸೂಪರ್ ಬಾಲು ಸರ್ ಇನ್ನೊಂದು ಅಸ್ತ್ರ ನಿಮ್ಮ ಬತ್ತಳಿಕೆಯಿಂದ ಹೊರಬಿದ್ದಿದೆ

Badarinath Palavalli said...

Prakash Hegde​​ ಅವರು ಶಿವರಾಮ ಕಾರಂತರನ್ನು ಭೇಟಿಯಾದದ್ದು ಮತ್ತು ಅವರನ್ನು ಕರೆತಂದ ವಿಚಾರವನ್ನು ಬ್ಲಾಗ್ ಬರಹವಾಗಿ ಬರೆಯಲು ವಿನಂತಿಸಿಕೊಳ್ಳುವೆ.

೧೮೦೧ ರಲ್ಲಿ ಬುಕನನ್ ಅವರು ಸರ್ವೇ ಕಾರ್ಯ ನಡೆಸಿದರು ಎಂದು ನಾನೂ ಓದಿಕೊಂಡಿದ್ದೆ. ಅದು ತಪ್ಪಾದ ವಿವರವೆಂದು ಈಗ ಅರಿವಾಯಿತು. ಅವರ ಪುಸ್ತಕದ ಮಾಹಿತಿಯೇ ಅಧಿಕೃತ.

ಶ್ರೀ ವಿದ್ಯಾ ತೀರ್ಥರ ವಾಧಿರಾಜರ ತೀರ್ಥ ಪ್ರಬಂಧದ ಸಿ.ಡಿ. ನಾನು ಕೊಳ್ಳಬೇಕಿದೆ.

ಬೈರವೇಶ್ವರನ ಕರುಣೆ ಯಾಣ ನೋಡದ ನನಗೂ ಲಭಿಸಲಿ. ಚಿತ್ರಗಳೆಲ್ಲ ಅಮೋಘವಾಗಿವೆ. ಮುಖ್ಯವಾಗಿ ಬೆಳಕಿನ ಕೋಲು.

'ಯಾಣ ದಲ್ಲಿ ವಿಹಾರ ಮಾಡಲು ಮೊದಲನೆಯದಾಗಿ ದೇಹದಲ್ಲಿ ಸಾಕಷ್ಟು ಶಕ್ತಿ ಬೇಕು' ಎಂಬ ತಮ್ಮ ಮಾತು ಸತ್ಯ.

ಸುಬ್ರಮಣ್ಯ said...

ಚಂದದ ಬರಹ, ಚಂದದ ಚಿತ್ರಗಳು.

Manjunatha Kollegala said...

ಸುಂದರ ಚಿತ್ರ-ಬರಹ

Unknown said...

ಯಾಣದ ಬಗ್ಗೆ ತಮಗೆ ಕೇವಲ ಸ್ವಲ್ಪ ಮಾತ್ರ ಗೊತ್ತು. ಯಾಣವೆಂಬ ಶಿಲಾಗುಹೆ ಮತ್ತು ದೇವಸ್ಥಾನ, ಕಲ್ಲಿನ ಮೇಲೆಯೂ ನೀರಿನ ಾಕರ ಹೀಗೆ ಕೆಲವು ಮಾತ್ರ ಹೊರಜಗತ್ತಿಗೆ ತಿಳಿದಿದೆ. ಆದರೆ ಅನೇಕ ನಿಗೂಢತೆಗಳನ್ನೂ ಯಾಣ ಒಳಗೊಂಡಿದೆ. ಯಾಣದಲ್ಲಿ ಅನೇಕ ಸುಂದರ ಪಾತರಗಿತ್ತಿಗಳ ಚಂದದ ಲೋಕವಿದೆ. ಸುಂದರ ನದಿ ಇದೆ. ಯಾಣದಂತಹ ಇನ್ನೂ ಹಲವಾರು ಶಿಲಾಸೌಧಗಳು ದಟ್ಟ ಕಾಡಿನಲ್ಲಿ ಅವಿತಿದೆ. ಅಪರೂಪದ ಪ್ರಾಣಿ, ಪಕ್ಷಿ, ಕೀಟ, ಗಿಡಮೂಲಿಕೆ ಹೀಗೆ ಅನೇಕ ಕೌತುಕಗಳ ಗೂಡು ಯಾಣ

dinesh maneer said...

great info,admire your observations

Unknown said...

ತುಂಬಾ ಚನ್ನಾಗಿ ಬರೆದಿದ್ದೀರಿ.....