Saturday, March 29, 2014

ಆದಿ ಕವಿ ಪಂಪನ ಪ್ರೀತಿಯ ಬನವಾಸಿಯಲ್ಲಿ , ಕೋಟೆ ಇತ್ತಂತೆ ...... !!!

ಬನವಾಸಿಗೆ  ಸ್ವಾಗತ


ನಮಸ್ಕಾರ  ಗೆಳೆಯರೇ , ಮೊದಲು ನಿಮಗೆ  ಯುಗಾದಿ ಹಬ್ಬದ  ಶುಭಾಶಯಗಳು, "ಜಯ ನಾಮ ಸಂವತ್ಸರ " ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಶುಭ ತರಲಿ. ಬೇವೂ ಬೆಲ್ಲಾ  ಮಿಳಿತದ ಜೀವನದ  ಹಾದಿ ಯುಗಾದಿಯ ಸಂಭ್ರಮದಲ್ಲಿ ಜಯದ ಹಾದಿಯಾಗಿ ಪರಿವರ್ತನೆ ಆಗಲಿ ಎಂದು ಹಾರೈಸುತ್ತೇನೆ .


   ಕಳೆದ ಸಂಚಿಕೆಯಲ್ಲಿ    "ಮತ್ತೊಮ್ಮೆ ಶಿರಸಿಯ ನೆನಪು ..... !!ಶಿರಸಿಯವರೇ ನಿಮ್ಮ ಊರಿನ ಬಗ್ಗೆ ಹೆಮ್ಮೆ ಪಡಿ" . ಎಂಬ ಲೇಖನ ಬರೆದಿದ್ದೆ,  ಅಚ್ಚರಿ ಮೂಡಿಸುವಂತೆ ನಿಮ್ಮೆಲ್ಲರ ಒಳ್ಳೆಯ  ಪ್ರೋತ್ಸಾಹ ಸಿಕ್ಕಿದೆ.  ಬಹಳಷ್ಟು ಜನ ಶಿರಸಿಯವರು  ಕರೆ ಮಾಡಿ ತಮ್ಮ ಸಂತಸ ಹಂಚಿಕೊಂಡಿದ್ದು   ಖುಷಿಯಾಯಿತು . ಈಗ ಮತ್ತೊಂದು ವಿಚಾರಕ್ಕೆ  ಹೋಗೋಣ ಬನ್ನಿ , ಶಿರಸಿಯ ಸಮೀಪದ  ಐತಿಹಾಸಿಕ   ಊರಿನ ಬಗ್ಗೆ  ಹಾಗು ಅಲ್ಲಿನ ಕೋಟೆಯ ಬಗ್ಗೆ ಸಿಕ್ಕ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ . ಬನ್ನಿ ನಿಮಗೆ ಸ್ವಾಗತ.


ಬನವಾಸಿ  ಮಧುಕೇಶ್ವರ ಸ್ವಾಮಿ


 ಬನವಾಸಿ  ನಮ್ಮ ಕನ್ನಡ ನೆಲದ ಒಂದು  ಅದ್ಭುತ  ಪುರಾತನ ಊರು ,  ಕಳೆದ ಎರಡು ವರ್ಷದ ಹಿಂದೆ  ಹರ್ಷ ಹೆಗ್ಡೆ  ಜೊತೆಗೆ  ಬನವಾಸಿಯ  ಪ್ರಥಮ  ದರ್ಶನ ಆಗಿತ್ತು,  ನನ್ನ ಪಯಣದ ಹಾದಿಯ ಬಗ್ಗೆ ಸಿಕ್ಕ ಅಲ್ಪ ಮಾಹಿತಿಯನ್ನು  ಆಧರಿಸಿ ಈ ಊರಿನ ಬಗ್ಗೆ  ಹಿಂದೆ ನನ್ನ ಬ್ಲಾಗ್ ನಲ್ಲಿ  ಬರೆದಿದ್ದೆ ೧] http://nimmolagobba.blogspot.in/2012/10/9.html  ,
 ೨] http://nimmolagobba.blogspot.in/2012/10/10.html   ಆದರೂ ತೃಪ್ತಿ ಸಿಕ್ಕಿರಲಿಲ್ಲ, ಅಲ್ಲೇ ದೇವಾಲಯದ ಸಮೀಪ ಗೋಡೆಯ ಮೇಲೆ ಬನವಾಸಿ ಕೋಟೆ  ಎಂದು ಬರೆದಿದ್ದ ಬಗ್ಗೆ  ಕೇಳಲಾಗಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ, ಆದರೆ ಹುಡುಕಾಟ ನಿಲ್ಲಲಿಲ್ಲ, ಕೊನೆಗೂ ಬನವಾಸಿ ಕೋಟೆ ಬಗ್ಗೆ ಅಧಿಕೃತ ಎನ್ನುವಂತಹ  ಮಾಹಿತಿ  ದೊರಕಿದೆ .ಬನವಾಸಿಯ  ಉಪಗ್ರಹ ಚಿತ್ರ


ಬನವಾಸಿ ಶಿರಸಿ ತಾಲೂಕಿನ ಒಂದು ಹೋಬಳಿ ಕೇಂದ್ರ , ಶಿರಸಿ ಯಿಂದ ೨೨ ಕಿ. ಮಿ . ದೂರವಿದೆ, ಬನವಾಸಿ ಯ ಉಲ್ಲೇಖ ಮಹಾಭಾರತದಲ್ಲಿ  "ವನವಾಸಿಕ"  ಎಂಬ ಹೆಸರಿನಿಂದ ಕರೆಯಲಾಗಿದೆ, ಕೆಲವು ಶ್ರೀ ಲಂಕೆಯ ಬೌದ್ಧ  ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ  ಅಶೋಕ ಚಕ್ರವರ್ತಿ  ಬೌದ್ಧ ಮತ ಸ್ವೀಕಾರ ಮಾಡಿದ ನಂತರ    ರಖಿತ  ಎಂಬ ಬೌದ್ಧ ಸನ್ಯಾಸಿ ಯನ್ನು   ಬನವಾಸಿಗೆ  ಕಳುಹಿಸಿರುವುದಾಗಿ ಹೇಳಲಾಗಿದೆ .  ಚುಟು ವಂಶಸ್ಥ  ರಾಜರ  ಆಳ್ವಿಕೆಯನ್ನೂ   ಸಹ ಈ ಊರು  ಕಂಡಿದೆ .. ಕದಂಬರ ಕಾಲದಲ್ಲಿ "ಜಯಂತಿ ಪುರ ಅಥವಾ ವೈಜಯಂತಿ " ಎಂಬ ಹೆಸರಿನಿಂದ ಮೆರೆದ ಊರು ಬನವಾಸಿ, ಆದಿ ಕವಿ ಪಂಪ  ರಚಿಸಿದ  "ವಿಕ್ರಮಾರ್ಜುನ ವಿಜಯ"   ದಲ್ಲಿ, ಹಾಗು ಚಾಮರಸನ " ಪ್ರಭುಲಿಂಗ ಲೀಲೆ" ಯಲ್ಲಿ  ಬನವಾಸಿಯ  ವರ್ಣನೆ  ಇದೆ .ಮಧುಕೇಶ್ವರ ದೇವಾಲಯದ  ನಕ್ಷೆ [ ಚಿತ್ರ ಕೃಪೆ ಗೆಜೆಟ್ ]

 ಬನವಾಸಿ ಎಂದರೆ ಶ್ರೀ  ಮಧುಕೆಶ್ವರ  ಸ್ವಾಮಿಯ  ಉಲ್ಲೇಖ  ಇರಲೇಬೇಕು .  ಮಧುಕೇಶ್ವರ  ದೇವಾಲಯದ ಬಗ್ಗೆ ಹಲವಾರು  ಮಾಹಿತಿಗಳಿವೆ,  ಕದಂಬರ ಕಾಲದಲ್ಲಿ ಈ ದೇವಾಲಯ ಇಟ್ಟಿಗೆಯಿಂದ ನಿರ್ಮಿತವಾಗಿ , ನಂತರ  ಕಲ್ಲಿನಿಂದ  ನಿರ್ಮಾಣ ಮಾಡಲಾಗಿದೆಯೆಂದು ಕೆಲವು ಇತಿಹಾಸ ತಜ್ಞರು ಹೇಳುತ್ತಾರೆ.   ಈ ದೇವಾಲಯದ ಬಗ್ಗೆ  ಪ್ರಾಚ್ಯವಸ್ತು ತಜ್ಞರ ಅಭಿಪ್ರಾಯ ಹೀಗಿದೆ, ಮೂಲತಹ ಈ ದೇವಾಲಯ ವಿಷ್ಣು ದೇವಾಲಯ ಆಗಿತ್ತೆಂದೂ ಕಾಲಾನಂತರ ಇದನ್ನು  ಪರಿವರ್ತಿಸಿ  ಶಿವ ದೇವಾಲಯವಾಗಿಸಲಾಗಿದೆ, ಎಂದು ಹೇಳಲಾಗುತ್ತದೆ ,ಮಾಹಿತಿ ಏನಾದರೂ ಇರಲಿ ಕೆಲವು ಶತಮಾನಗಳಿಂದ ಇಲ್ಲಿ ಮಧುಕೇಶ್ವರ ನೆಲೆಸಿರುವುದು ನಿಜ.ಮೊದಲು ಯಾವುದೇ ರಾಜ ಧರ್ಮ ಬದಲಾವಣೆ ಮಾಡಿದರೆ   ದೇವಾಲಯಗಳ  ರೂಪದಲ್ಲಿಯೂ ಸಹ  ಸಹಜವಾಗಿ  ಬದಲಾವಣೆ ಆಗುತ್ತಿತ್ತು, ಅದನ್ನು ಪ್ರಜೆಗಳೂ ಸಹ ಒಪ್ಪಿಕೊಳ್ಳುತ್ತಿದ್ದರು.ಪುರಾಣ ಕಾಲದಲ್ಲಿ ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಹಾಗು ಕೈಟಭ ಎಂಬ ದೈತ್ಯರನ್ನು ಮಹಾವಿಷ್ಣು  ಸಂಹರಿಸಿದನಂತೆ. ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಹಾಗು ವರದಾ ನದಿಯ ಇನ್ನೊಂದು ದಡದಲ್ಲಿರುವ ಆನವಟ್ಟಿಯಲ್ಲಿ ಕೈಟಭೇಶ್ವರ ದೇವಾಲಯಗಳು ಅನಂತರದಲ್ಲಿ ನಿರ್ಮಾಣವಾದವು.ಈ ದೇವಾಲಯ ಮೂಲತಹ  ಕದಂಬರ ಕಾಲದಲ್ಲಿ ನಿರ್ಮಾಣವಾಗಿ, ನಂತರ ಚಾಲುಕ್ಯ, ಹಾಗು ಸೋಂದೆ ಅರಸರ ಕಾಲದಲ್ಲಿ  ನವೀಕೃತಗೊಂಡಿದೆ , ಈ ಅರಸರುಗಳೇ ತಮ್ಮ ಕಾಲದಲ್ಲಿ ಹೊಸದನ್ನು ಸೇರ್ಪಡೆ  ಮಾಡಿದ್ದಾರೆ . ದೇವಾಲಯದಲ್ಲಿ, ಇಂದ್ರ, ಅಗ್ನಿ, ಪಾಂಡುರಂಗ, ವಿಶ್ವೇಶ್ವರ , ವರದೇಶ್ವರ , ಹವಲಿ ಮಧುಕೇಶ್ವರ , ಯಮ, ಕೇದಾರೇಶ್ವರ, ಚಿಂತಾಮಣಿ ಗಣಪತಿ, ನಿರುತಿ, ದುಂಡಿರಾಜ ಗಣಪತಿ, ಲಕ್ಷ್ಮೀನರಸಿಂಹ ಸ್ವಾಮಿ, ರಾಮೇಶ್ವರ, ಬಸವಲಿಂಗೇಶ್ವರ ,, ವಾಯು, ಸೂರ್ಯ ನಾರಾಯಣ, ಅರ್ಧಗಣಪತಿ, ಪರಶುರಾಮ, ಆಧಿಶೇಷ ,ಕೇಶವ, ಕುಬೇರ, . ಈ ದೇವಾಲಯದ ಕೆಲವು ಶಿವ ವಿಗ್ರಹಗಳನ್ನು ೧೭೫೩ ರಲ್ಲಿ ಸೋಂದ ಸದಾಶಿವರಾಯ  ಅರಸರು ಸ್ಥಾಪಿಸಿದರೆಂದು ತಿಳಿಯುತ್ತದೆ.     


ಮಧು ಕೇಶವರ ದೇವಾಲಯ ಪಕ್ಷಿ ನೋಟ

ಈ ದೇವಾಲಯದಲ್ಲಿ   ಸೋಂದಾರಾಜ್ಯದ ಒಂದನೇ ಸದಾಶಿವ ನಾಯಕರು ನೀಡಿರುವ ಕಲ್ಲಿನ ಸುಂದರ ಕೆತ್ತನೆಯ ಮಂಚ ವಿದೆ , ಅದನ್ನು ಆಸ್ಥಾನ ಮಂಟಪ ಎನ್ನುತ್ತಾರೆ . ಸುಂದರ ದೇವಾಲಯ  ವಿವರವಾಗಿ ನೋಡಲು ಕನಿಷ್ಠ ಒಂದು ವಾರ ಬೇಕಾಗುತ್ತದೆ,  ಈ ದೇವಾಲಯದಲ್ಲಿ  ಮಯೂರ ವರ್ಮ, ಪಂಪ ಮಹಾ ಕವಿ,  ಎಲ್ಲೆಲ್ಲಿ ನಡೆದಾದಿರಬಹುದು  ಎಂಬುದನ್ನು ಕಲ್ಪಿಸಿಕೊಳ್ಳಲು  ಮನ ಹಾ ತೊರೆಯುತ್ತದೆ.  ಭಾರತ ಖಂಡದ   ಎರಡನೇ ಪ್ರಾಚೀನ ನಗರ ಎಂದು  ವಾರಣಾಸಿ ನಂತರ  ಹೊಗಳಿಕೆ  ಕಂಡ ಬನವಾಸಿ  ಕೋಟೆ ಯನ್ನು ಹೊಂದಿದ್ದ ಬಗ್ಗೆ   ಹೆಮ್ಮೆ ಯಾಗುತ್ತದೆ.


ಜಲದುರ್ಗ  ವೆಂಬ ಬಗ್ಗೆ ಉಪಗ್ರಹ ಚಿತ್ರ

ಬನವಾಸಿಯನ್ನು  "ಜಲದುರ್ಗಾ" ವೆಂದು ಹಿಂದೆ ಕರೆಯಲಾಗಿದೆ ಅಚ್ಚರಿಯೆಂದರೆ  ಬನವಾಸಿಯ ಊರಿನ ಮೂರುಕಡೆ  ವರದ ನದಿಯ  ಹರಿಯುವಿಕೆ ಇದೆ  ಸ್ವಾಭಾವಿಕವಾಗಿ  ಈ ಊರನ್ನು ಮುತ್ತಿಗೆ ಹಾಕಲು  ವೈರಿಗಳು  ವರದಾ ನದಿಯನ್ನು ದಾಟಿ  ಕೊಂಡೆ ಬರಬೇಕಾಗಿತ್ತು, ಆದರೆ ಅ ಕಾಲದಲ್ಲಿ ಸದಾ ತುಂಬಿ ಹರಿಯುತ್ತಿದ್ದ ವರದ ನದಿಯನ್ನು ದಾಟುವುದು ಅಷ್ಟು ಸುಲಭ ಆಗಿರಲಿಲ್ಲ,  ಹಾಗಾಗಿ ಈ ಊರನ್ನು ಜಲದುರ್ಗಾ ಎಂದು ಕರೆದಿರುವುದು  ಸರಿಯಾಗಿದೆ. ಇಷ್ಟರ ಜೊತೆಗೆ  ಬನವಾಸಿ ಕೋಟೆ ಹೊಂದಿದ್ದ ಬಗ್ಗೆ ರಾಜ್ಯ ಗೆಜೆಟ್ ನಲ್ಲಿ  ಕೋಟೆಯ ನಕ್ಷೆ ನೀಡಲಾಗಿದ್ದು,  ಅಚ್ಚರಿ ಎನಿಸಿತು. ಕೋಟೆಯ ನಕ್ಷೆಯಲ್ಲಿ  ಬನವಾಸಿಯ ಪ್ರಮುಖ   ಸ್ಥಳಗಳ  ವಿವರ ನೀಡಲಾಗಿದೆ .  ವೈಜ್ಞಾನಿಕ ಆವಿಷ್ಕಾರ  ಅಷ್ಟಾಗಿ ಇಲ್ಲದ ಆ ದಿನಗಳಲ್ಲಿ  ಅಚ್ಚುಕಟ್ಟಾಗಿ   ನಕ್ಷೆಯನ್ನು ರಚಿಸಿರುವುದು  ಹೆಮ್ಮೆಯ ವಿಚಾರ .


ಬನವಾಸಿಯ ಕೋಟೆ ನಕ್ಷೆ [ ಚಿತ್ರ ಕೃಪೆ ಗೆಜೆಟ್ ]ಬನವಾಸಿಯ ಕೋಟೆ  ಭದ್ರವಾಗಿ ವರದ ನದಿಯ ದಡವನ್ನೂ ಸೇರಿದಂತೆ  ನಿರ್ಮಾಣ  ಗೊಂಡಿತ್ತು, ಮಣ್ಣಿನ ಇಟ್ಟಿಗೆಯ ನಿರ್ಮಾಣದ ಆ ಗೋಡೆ ಭದ್ರವಾಗಿ ಬನವಾಸಿಯನ್ನು ರಕ್ಷಣೆ  ಮಾಡಿತ್ತು . ಕೋಟೆಯ ಒಳಗಡೆ ಹಲವು ಶಾಸನಗಳು ದೊರಕಿದ್ದು, ಆಧಿ ಮಾಧವ, ಸರಸ್ವತಿ, ಕಾರ್ತಿಕೇಯ  ಮೂರ್ತಿಗಳು  ಸಿಕ್ಕಿವೆ. ಪೇಟೆ ಮರಿಯಮ್ಮ ಬಯಲು ಬಸವಣ್ಣ ದೇಗುಲಗಳ ಜೊತೆಗೆ  ಎರಡು ಮಸೀದಿಗಳೂ ಸಹ  ಇದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಕಂಚುಗಕೇರಿ ಬಳಿ ಹನುಮನ  ದೇವಾಲಯ, ವಿತ್ತೆಂದು ಪುರಾವೆ ಸಿಕ್ಕಿದೆ. ಆದಿ ಬನವಾಸಿಯು ಈಗಿರುವ ಬನವಾಸಿಯ  ವರದ ನದಿಯ ಸೇತುವೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದ್ದ ಬಗ್ಗೆ ಆದಿ ಮಧುಕೇಶ್ವರ  ದೇಗುಲ ಸಾಕ್ಷ್ಯ ನೀಡುತ್ತಿದೆ .ಬನವಾಸಿಯ ಮತ್ತೊಂದು ಅಚ್ಚರಿ ಎಂದರೆ ಕ್ಯಾತ ಕಥೆಗಾರ   ಹರ್ಡೇಕರ್ ಮಂಜಪ್ಪ  ಅವರ  ಜನ್ಮ ಸ್ಥಳ, ಇವರ ಬಗ್ಗೆ ತಿಳಿಯಲು http://en.wikipedia.org/wiki/Hardekar_Manjappa  ಲಿಂಕಿಗೆ ಹೋಗಿ  , ಹಾಗು ಬನವಾಸಿ ಯಲ್ಲಿ ದತ್ತಾತ್ರೇಯ ಯೋಗೇಂದ್ರ ಹಾಗು ದಾಮೊದರಾನಂದ ಸರಸ್ವತಿ  ಎಂಬ ಇಬ್ಬರು  ಸಂತರು  ನೆಲೆಸಿದ್ದರೆಂದು  ತಿಳಿಯುತ್ತದೆ . ಇಂತಹ ಬನವಾಸಿಯನ್ನು , ಆದಿ ಕವಿ ಪಂಪನ ಬನವಾಸಿಯನ್ನು  ಅರಿಯದೆ  ನಾವು ಕನ್ನಡಿಗರೆಂದು  ಹೇಳಿಕೊಳ್ಳುವುದು  ಎಲ್ಲಿಯ ನ್ಯಾಯ ಅಲ್ಲವೆ?.  ಕನ್ನಡಿಗನಾಗಿ ಹುಟ್ಟಿ ಒಮ್ಮೆಯಾದರೂ ಈ ಬನವಾಸಿಯನ್ನು  ದರ್ಶಿಸದೆ ಹೋದರೆ  ಈ ನೆಲವನ್ನು  ಸ್ಪರ್ಶಿಸದೆ  ಹೋದರೆ  ಏನು ಫಲ ಸ್ವಾಮೀ?,  ಅಯ್ಯಾ ಬನವಾಸಿ ಪ್ರಜೆಗಳೇ   ಇಲ್ಲಿ  ಹುಟ್ಟಿದ ನೀವೆಷ್ಟು ಪುಣ್ಯವಂತರು   ಅನ್ನಿಸುತ್ತದೆ.  ಶಿರಸಿಯ ತಾಲೂಕಿನ ಹೆಮ್ಮೆಯ ಜಾಗವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿದಲ್ಲಿ  ಬನವಾಸಿಯ ಮೆರುಗು ಹೆಚ್ಚುವುದು, ಬನವಾಸಿಯ ಬಗ್ಗೆ ಅಧ್ಯಯನ  ಮಾಡಲು ಇಲ್ಲಿ   ಒಂದು ಅಧ್ಯಯನ ಕೇಂದ್ರ  ಸ್ಥಾಪಿಸಿದರೆ , ಆದಿ ಕವಿ ಪಂಪನ  ಮಾತಿಗೂ  ಮರ್ಯಾದೆ ಕೊಟ್ಟಂತೆ ಆಗುತ್ತದೆ .  '' ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ"   ಎಂಬ  ಮಾತು  ಸತ್ಯ ಸತ್ಯ ಸತ್ಯ . ಇದಕಾಗಿಯಾದರೂ ಶಿರಸಿ ಹಾಗು ಬನವಾಸಿಯ  ಜನಗಳೇ ಹೆಮ್ಮೆಪಡಿ . 

ಬ್ಲಾಗ್ ಮಿತ್ರರೆಲ್ಲರಿಗೂ  ಮತ್ತೊಮ್ಮೆ ಜಯನಾಮ ಸಂವತ್ಸರದ  ಶುಭಾಶಯಗಳು, ನಿಮ್ಮ  ಒಳ್ಳೆಯ ಕನಸುಗಳು ನನಸಾಗಲಿ , ನಿಮ್ಮ ಕುಟುಂಬದ ಎಲ್ಲರಿಗೂ ಸಂತಸದ ಜೀವನ  ಸಿಗಲಿ, ಎಲ್ಲರಿಗೂ ಶುಭವಾಗಲಿ .  ಎಂದು ಪ್ರೀತಿಯಿಂದ ಹಾರೈಸುತ್ತೇನೆ . ಮುಂದಿನ ಸಂಚಿಕೆಯಲ್ಲಿ ಮತ್ತೆ ಸಿಗೋಣ , ಬೈ ಬೈ7 comments:

Badarinath Palavalli said...
This comment has been removed by the author.
Badarinath Palavalli said...

ವರದ ನದಿ ತಟದಿ ನಿರ್ಮಿಸಿದ್ದ ಕೋಟೆಯ ಬಗ್ಗ ಒಳ್ಳೆಯ ಸಂಶೋದನಾ ಲೇಖನ ಪ್ರಸ್ತುತ ಪಡೆಸಿದ್ದೀರ.
ತಮ್ಮ ಶ್ರಮಕ್ಕೆ ನಾವೆಲ್ಲ ಅಭಾರಿಗಳು. ಸ್ವೀಕರಿಸಿರಿ ಈ ಸಲಾಮು...

ಹಿಂದೊಮ್ಮೆ ನಿಮಗಾಗಿಯೇ ಬರೆದ ಈ ಕ ನನ್ನ ಕವಿತೆ ತಮ್ಮ ಈ ಲೇಖನಕ್ಕೆ ಮರು ಇನಾಮು...

'ಇತಿಹಾಸ ತಜ್ಞ'...

ಮಮ್ಮಲ ಮರುಗುವನು
ಬನವಾಸಿಯಲಿ ಅಲೆವಾಗ
ಪಂಪ ಮಯೂರನ
ಕುರುಹೂ ತಾಕದೇ ತಾನು,
ಹುಡುಕಿ ಕೊಡಬೇಕವನೇ
ಸುಂದರ ಮಧುಕೇಶ್ವರ

ಆ ರಂಗನಾಥನೇ ಬಲ್ಲ
ಶ್ರೀರಂಗಪಟ್ಟಣವದೇಕೆ
ಅವಜ್ಞ ತಾಣವೀಗ?
ಹೆಜ್ಜೆ ಹೆಜ್ಜೆಗು ಅಲ್ಲಿ
ಟಿಪ್ಪುವಿನ ಗತ ಚರಿತೆ
ಮೂಕ ಭಾವಗೀತೆ

ಅಂತೆಯೇ ಬೆಂಗಳೂರು
ಗಗನ ಚುಂಬಿಯ ಅಡಿಗೆ
ಯಾವುದೋ ವೀರಗಲ್ಲು,
ಕಬ್ಬನ್ ನೆನೆವರೇ ಇಲ್ಲ
ಮುಚ್ಚಿದೆವು ಕೆರೆ ಕಟ್ಟೆ
ಮಂಟಪವು ಪಾಲಿಕೆ ಗುರುತು

ಎಲ್ಲಿಯದೋ ದೊರೆ ಗಾಥೆ
ಬೋಧಿಸುವ ಪಠ್ಯ ಕ್ರಮ
ಕಲಿಸದು ನೆಲದ ಧರ್ಮ,
ಅಂತ ವಿಸ್ಮರಿತ ಐತಿಹ್ಯಗಳ
ಸಿಕ್ಕು ಬಿಡಿಸಲು ಕುಳಿತ
ಇಲ್ಲೊಬ್ಬ ಇತಿಹಾಸತಜ್ಞ

ಬುದ್ಧಿಗೇಡಿಯ ತಿಕ್ಕಲಿಗೆ
ಹಾಳು ಹಂಪೆ ಹಳೇ ಬೀಡು
ಮಿಕ್ಕ ಸ್ಮಾರಕಗಳ ಮಾರಕರು
ನಾವೇ ಅಸಲು ಘಜ್ನಿಗಳು
ಹೊಸಕುವೆವು ಗುರುತುಗಳೂ…

- ಬದರಿನಾಥ ಪಲವಳ್ಳಿ

Tara Shylendra said...

Atyuttama maahiti. Kannadigara hemmeya banavaasiya bagge ishtu chandada lekhana bareda nimage dhanyavaadagalu. Nimagu, kutumbadavarigu yugaadi habbada shubhaashayagalu.

ಚಿನ್ಮಯ ಭಟ್ said...

ಬದರಿ ಸರ್ ಉಡುಗೊರೆ ಕೊಟ್ಟ ಮೇಲೆ ಇನ್ನೇನು ಉಳಿದಿದೆ ಕಮೆಂಟಿಗೆ ???...
ಧನ್ಯವಾದಗಳು ಬಾಲು ಸರ್ ಅಷ್ಟೇ :)...
ನಮ್ಮೂರಿನ ಕಂಪು ಹರಡಿಸುತ್ತಿರುವ ನಿಮಗೆ ನಾವು ಅಭಾರಿ :)

Pradeep Rao said...

ಬನವಾಸಿಯ ಬಗ್ಗೆ ಉತ್ತಮ ವೈಙ್ಞ್ನಾನಿಕ ಐತಿಹಾಸಿಕ ಲೇಖನ. ತುಂಬಾ ಖುಷಿಯಾಗುತ್ತದೆ ಕನ್ನಡನಾಡಿನ ಇಂಥ ಸ್ಥಳಗಳ ಹಿರಿಮೆ ಗರಿಮೆ ಅರಿಯಲು!

prashasti said...

ಸಖತ್ತಾದ ಸಂಶೋಧನಾತ್ಮಕ ಬರಹ ಬನವಾಸಿಯ ಬಗ್ಗೆ. ಬನವಾಸಿಗೆ ಹಿಂದಿನ ಸಲ ಹೋದಾಗ ನಾನೂ ಅದರ ಬಗ್ಗೆಯೊಂದು ಪುಟ್ಟ ಲೇಖನ ಬರೆದಿದ್ದು ನೆನಪಾಯ್ತು :-)

prashasti said...

http://prashasti-prashantavanam.blogspot.in/2013/03/blog-post.html