Tuesday, April 8, 2014

ಎಲೆಕ್ಸನ್ನು ಸಾ ಎಲೆಕ್ಸನ್ನು ......!! ಇದರ ಒಳಗೈತೆ ಬಾರಿ ಕನೆಕ್ಸನ್ನು ....!!! [ ಕಾಲ್ಪನಿಕ ಕಥೆ]


ಎಲೆಕ್ಸನ್ ಅಂದ್ರೆ  ಮುದ್ದೆ ತಿಂದಂಗೆ  





{ಮೊದಲ ವಿಚಾರ ಗೆಳೆಯರೇ   ಇಲ್ಲಿ ಬರೆದಿರುವುದು ಒಂದು ಸಂಪೂರ್ಣ  ಕಾಲ್ಪನಿಕ ಕಥೆ ಯಾವುದೇ ಘಟನೆಗೆ ,ಅಥವಾ  ಯಾವುದೇ ಪಕ್ಷಕ್ಕೆ ಈ ವಿಚಾರ ಸಂಬಂಧ ಪಟ್ಟಿರುವುದಿಲ್ಲಾ }



ಇಡೀ  ದೇಸಕ್ಕೆ  ಎಲೆಕ್ಸನ್ನು  ಬತ್ತದೆ ಅನ್ನೋ ಗಾಳಿ ಬೀಸ್ತು , ಇನ್ನು ನಮ್ಮ ದುರಾಸೆ ಪುರಕ್ಕೆ ಬರ್ದೇ ಇದ್ದಾತೆ , ಅಂಗೆ ಬೀಸೆ  ಬುಡ್ತು  ಎಲೆಕ್ಸನ್ನು ಗಾಳಿ ...! ಇನ್ನೆರ್ಡ್ ಮೂರು  ತಿಂಗಳಲ್ಲಿ   ಎಲೆಕ್ಸನ್ನು  ಬತ್ತದೆ  ಅನ್ನೋ ಸುದ್ದಿ .

 ಊರ ಲೀಡರುಗಳೆಂಬ ಕೆಲವು  ಜನ ಮೂಲೆಲಿದ್ದ  ಬಿಳೀ ಪಂಚೆ , ಜುಬ್ಬಾ  ಎಲ್ಲಾ  ತೊಳೆದು ಇಸ್ತ್ರೀ ಮಾಡಿ, ದುರಾಸೆ ಪುರದ  ಕಪಿಲೆ ಬಾವೀಲಿ  ಸ್ನಾನ ಮಾಡ್ಕಂಡು   ಫಳ ಫಳಾ  ಅಂತಾ ಹೊಳೀತಾ  ನಲಿಯಲು ಸುರು ಮಾಡುದ್ರು .

  ಇಡೀ  ಊರಿಗೆ ಎಲೆಕ್ಸನ್  ಜ್ವರಬಂದ ಮ್ಯಾಕೆ  ನಮ್ಮ  ಗೊಣ್ಣೆ ಗೋಪಣ್ಣನಿಗೆ ಬರ್ದೇ ಇದ್ದಾತೆ ., ಅವಂಗೂ ಸುರು ಆಯ್ತು. ಅಯ್ಯೋ ನಿಮಗೆ ನಮ್ಮ ದುರಾಸೆ ಪುರದ ಗೊಣ್ಣೆ ಗೋಪಿ  ಗೊತ್ತಿಲ್ವಾ ??

 ರೀ ಇವನ ಪರಿಚಯ ಇಲ್ಲಾಂದ್ರೆ  ಬಾಳಾ ಕಷ್ಟಾ , ದುರಾಸೆ ಪುರದ  ಪ್ರತೀ  ಘಟನೆಯಲ್ಲೂ ಇವನ ಹೆಸರಿಲ್ಲಾ ಅಂದ್ರೆ  ಅದು ಪಂಕ್ಸನ್ನೆ ಅಲ್ಲಾ ಕಣ್ರೀ,  ಪ್ರೈಮರಿ  ಸ್ಕೂಲ್ನಲ್ಲಿ  ಒಂದನೇ ಕ್ಲಾಸಿಂದ  ಎರಡನೇ ಕ್ಲಾಸ್ ವರೆಗೆ  ಚಡ್ಡೀ ಹಾಕಳ್ದೆ , ಯಾವಾಗಲೂ ಗೊಣ್ಣೆ ಸುರಿಸಿಕೊಂಡು ಓಡಾಡುತ್ತಾ ಇದ್ದ  ದಲ್ಲಾಳಿ  ಹಿಕ್ಮತ್ತೈಯ್ಯನ ಒಬ್ಬನೇ ಮಗ  ನಮ್ಮ ನಾಯಕ "ಗೊಣ್ಣೆ ಗೋಪಿ " ಶಾಲೆಗೇ ಬರುವ   ಹೈಕಳಿಂದ  ತಿಂಡಿ  ವಸೂಲಿ ಮಾಡೋದು ಇವನ ಚಾಳಿ , ಕೊಡದೆ ಇದ್ದ ಮಕ್ಕಳಿಗೆ  "ಚುರುಕಿನ ಸೊಪ್ಪಿನ  ಸೇವೆ " ಮಾಡುತ್ತಿದ್ದವ , ಸ್ವಾತಂತ್ರ್ಯ ದಿನಾಚರಣೆಗೆ  ಶಾಲಾ ಮಕ್ಕಳಿಗೆ ನೀಡಲು ತಂದಿದ್ದ ಸಿಹಿ ತಿಂಡಿಯನ್ನು  ಹೈಜಾಕ್  ಮಾಡಿದ್ದ ಪುಣ್ಯಾತ್ಮ,  ಪ್ರೌಡ ಶಾಲೆಯಲ್ಲಿ ಸ್ಕೊಲ್ ಮಾನಿಟರ್  ಆಗೋಗೆ  ಮೇಷ್ಟ್ರುಗೆ  ಅಡ್ಜಸ್ಟ್  ಮಾಡಿಕೊಂಡು  ಮಾನಿಟರ್ ಆಗಿ ಮೆರೆದಿದ್ದವ, ಅದ್ಯಾಕೋ  ಕಾಣೆ ದುರಾಸೆಪುರದ ಭಾಂದವ್ಯ ಬಿಡಲಾಗದೆ  ಹತ್ತನೇ ಕ್ಲಾಸ್ ನಲ್ಲಿ ಡುಮ್ಕಿ ಹೊಡೆದು , ರಾಜಕೀಯ ಸೇರ್ಬುಟ್  ದಾರಿ ಕಂಡ್ಕಂದ .

ಮೊದಲು ಇವನ ಚತುರತೆ  ಕಂಡ , "ಕೋಡಂಗಿ " ಪಕ್ಸದ  ಮುಖಂಡ  ಕಪ್ಪೆ ಸ್ವಾಮೀ  ಇವನನ್ನು  ಯುವ ಮುಖಂಡ ನಾಗಿ ಬೆಳೆಸಿದರು , ಅವರ ಗರಡಿಯಲ್ಲಿ ಪಳಗಿದ  ಈತ ಎಲ್ಲಾ ವರಸೆ ಕಲಿತ.  ಯಾವುದೇ ಸಮಾರಂಭಕ್ಕೆ  ಜನರನ್ನು ಜಮಾವಣೆ ಮಾಡೋದ್ರಲ್ಲಿ  ಇವನು ಭಾರಿ ನಿಸ್ಸೀಮ ಆಗಿಬಿಟ್ಟ . ಇಂತಿರ್ಪ ಗೊಣ್ಣೆ ಗೋಪಿ ಗೆ ಈ ಚುನಾವಣಾ ನಿರ್ವಹಣೆ ಜವಾಬ್ದಾರಿ ಬಂದೆ ಬಿಟ್ಟಿತು . ದುರಾಸೆ ಪುರದಲ್ಲಿ  ತನ್ನ ಅಧ್ಯಕ್ಸತೆಯಲ್ಲಿ ಎಲೆಕ್ಸನ್  ಪೂರ್ವ ಸಿದ್ದತಾ ಸಭೆಯನ್ನು  ಕರೆದೆ ಬಿಟ್ಟ .

 ನೆರದಿದ್ದ  ತನ್ನ ಪಟಾಲಂ ಗಳಿಗೆ ಹೇಳುತ್ತಾ , "ನೋಡ್ರಪ್ಪಾ,  ನಿಮಗೆಲ್ಲಾ   ಗೊತ್ತಿದ್ದಂಗೆ ಈಗ ಎಲೆಕ್ಸನ್ನು ಬತ್ತಾ  ಅದೇ , ಇಡೀ  ದೇಸವೇ  ಎಲೆಕ್ಸನ್ನು ಇಚಾರದಲ್ಲಿ ಮುಳಗದೇ .    ನಮ್ಮ ದುರಾಸೆ ಪುರದ ಎಲೆಕ್ಸನ್ ಬಗ್ಗೆ ನಮ್ ಪಕ್ಸದ ಮುಖಂಡರು  ಬೋ ಆಸೆ  ಮಡಿಕಂಡವ್ರೆ , ಸತಾಯ ಗತಾಯ  ಇಲ್ಲಿ ಗೆಲ್ಲೇ ಬೇಕೂ ಅಂತಾ ಏಳವ್ರೆ  ನಿಮ್ಮ ನೆಮ್ಕಂಡು  ಆಯ್ತು ಅಂತಾ  ಒಪ್ಕಂಡ್ ಬಂದಿವ್ನಿ , ಏನ್   ಯೋಳ್ರಪ್ಪಾ , ಹೆಂಗ್ ಮಾಡೂದು "?, ಅಂತಾ ಕಿಡಿ ಹಚ್ಚಿ ಬಿಟ್ಟ .

ಸಭೆಯಲ್ಲಿ ಗುಸು ಗುಸು  ಪಿಸು ಪಿಸು ಶುರು ಆಯ್ತು,  "ಏನ್ ಎಲೆಕ್ಸನ್ನು ಮಾಡಾಕಾಯ್ತದೆ ,  ರೇಟು ಏರ್ಕಂಡ್ ಕೂತದೆ, ಕುಂತರೂ ಕಾಸು ನಿಂತರೂ ಕಾಸು , ಬೊ  ಕಸ್ಟಾ ಕಣಪ್ಪಾ , ಸವಾಸ, ಅದ್ಸರೀ  ಏನಂತೆ , ನಮ್ಮೂರ ಬಜೇಟು , ದುರಾಸೆ ಪುರದಲ್ಲಿ  ಹತ್ರ ಹತ್ರ   ಲಕ್ಶ   ಓಟವೇ ," ಅಂತಾ ಗಣೇಸ ಬಾಯ್ಬುಟ್ಟ .

ಗೊಣ್ಣೆ  ಗೋಪಿ ಮಾತಾಡಿ , ಲೇ  ದುರಾಸೆ ಪುರದಲ್ಲಿ ಎಲೆಕ್ಸನ್ ಗೆ ಅಂತಾ ಎಲ್ಲಾ ಯವಸ್ತೆ ಆಗದೆ , ಆ ದುಗ್ಗಾಣಪ್ಪ ಅವ್ರು   ತೀರ್ಥ  ಯವಸ್ತೆ  ಮಾಡ್ತೀನಿ ಅಂತಾ  ಯೆಳವ್ರೆ , ಪ್ರಚಾರಕ್ಕೆ ಅಂತಾ  ಹೊಸ ಬಟ್ಟೆ ಹೊಲಿಸಿಕೊಳ್ಳಲು  ನಮ್  ಗುಂಪಿನ ಎಲ್ರುಗೂ ತಲಾ ಐದೈದು ಸಾವ್ರಾ  ಕೊಟ್ಟವ್ರೆ, ಉಳಿಕೆ ಖರ್ಚು  ಏನ್ ಬತ್ತದೆ ಅಂತಾ ನಮ್ಮನೆ  ಕೇಳ್ತಾ ಅವ್ರೆ , ಅದ್ಕೆ ನಾನು ನಮ್ ಕಾರ್ಯಕರ್ತರ ಕೇಳಿ ಯೋಳ್ತೀನಿ  ಅವರಿಗೆ  ಯೋಳಿ ಬಂದಿವ್ನಿ  ,  ಇವತ್ತು  ನಿಮ್ಮೆಲ್ರ  ಕರ್ದೀವ್ನಿ ,  ಅದೇನ್ ಯೋಳ್ರಪ್ಪಾ  ಈಗ . ಅಂದು  ಎಲ್ಲರ ಕಡೆಗೆ  ನೋಡಿದ .

ಅಲ್ಲೇ ಇದ್ದಾ  ಕ್ಯಾತ  ,  ಅಲ್ಲಾ ಕಣಣ್ಣಾ , ಅವ್ರಿಗೆ  ಗೊತ್ತಿಲ್ವೆ, ಖರ್ಚು ಎಂಗದೆ ಅಂತಾ , ನಮ್ ದುರಾಸೆ ಪುರ ಬಾಳ  ದೊಡ್ಡ ಊರು,  ಸುಮಾರು   ಒಂದು ಲಕ್ಸ  ವೋಟವೆ,  ಮನೆ ಮನೆ  ಸುತ್ತಿ  ಬಿಸ್ಲಲ್ಲಿ   ಎಲ್ಲಾ  ಜನಗಳ್  ತಾವ್ ಓಟ್  ಕೇಳೂಕ್  ಓದ್ರೆ ,  ಕೆಲವ್ರು , ಏನ್ ಕೊಟ್ಟೀರಿ ಅಂತಾರೆ . ಆಗ್ಲೇ "ದಗಲ್ಬಾಜಿ " ಪಕ್ಸದವ್ರು ,  ಜನಗಳ್ಗೆ  ಪರಸಾದ ತೀರ್ಥ ಕೊಡೂಕೆ , ರೆಡಿ ಆಯ್ತಾವ್ರೆ , ಇನೂ ಎಲೆಕ್ಸನ್  ಯಾವತ್ತೂ ಅಂತಲೇ ಗೊತ್ತಿಲ್ಲಾ, ಆಗ್ಲೇ ಎಲ್ಲರ ಮನೆ ಗೆ ಅವರ ಪಕ್ಸದ ಬಾವುಟದ ಜೊತ್ಗೆ   ಐನುರ್ ರುಪಾಯಿ   ಕೊಟ್ಟವರಂತೆ , ಅದ್ಕೆ ಮೆಗಲ್ ಕೇರಿ  ಜನ  ಗದ್ದೆ ಕೆಲಸಕ್ ಬರಾಕಿಲ್ಲಾ ಅಂತಾ  ಕೂತವೆ . ಇನ್ನು ನಾಮು ಅವರ ಸರೀ  ಮಾಡ್ಕದೆ  ಓದ್ರೆ , ಇಪ್ಪತ್ಸಾವ್ರಾ ವೋಟು  ನಾಮ , ಆಯ್ತದೆ .  ಅದ್ಕೆ  ಮ್ಯಾಲ್ನವರ್ಗೆ   ಯೋಳಿ ಸರಿಯಾಗಿ  ಬಜೆಟ್  ಕೊಡೂಕೆ , ಅಂದು ಮಾತನ್ನು ಹೊಸ ದಿಕ್ಕಿಗೆ ತಿರುಗಿಸಿದ.

ಈ ಮಾತನ್ನು ಕೇಳಿ  ಗೊಣ್ಣೆ ಗೋಪಿ   ಬೆಚ್ಚಿ ಬಿದ್ದ ,  ಇವರ ಪಕ್ಷಕ್ಕಿಂತ  ಬೇರೆ ಪಕ್ಷದವರು  ಬೇಗ ಶುರು ಮಾಡಿದ್ರೆ  ಜನಗಳ  ಮನ ಒಲಿಕೆ  ಕಷ್ಟಾ ಆಗುತ್ತಿತ್ತು. ಅದಕ್ಕೆ ನಿನ್ನೆ ತಾನೇ ಇವನಿಗೆ   "ಕೋಡಂಗಿ " ಪಕ್ಸದ ಮುಖಂಡ  ಕಪ್ಪೆ ಸ್ವಾಮೀ  ಇವನಿಗೆ  ಹತ್ತು ಲಕ್ಷದ  ಮುಂಗಡ ನೀಡಿದ್ದರು.  ಇದು ಇವರಿಗೆ ತಿಳಿದರೆ ನನ್ನ ಮಟ್ಟಾ  ಹಾಕ್ತಾರೆ ಅಂತಾ ತಿಳಿದು, ಯೋಚಿಸಿದವಂತೆ ನಾಟ್ಕಾ ಮಾಡಿ ಸ್ವಲ್ಪ ಹೊತ್ತು ಬಿಟ್ಟು ನೋಡ್ರಪ್ಪಾ,  ಇನ್ನೂ ಪಕ್ಸದವ್ರಿಂದ ಕಾಸ್ ಬಂದಿಲ್ಲಾ , ಆದ್ರೆ ಪಕ್ಸ್ದ  ಮರ್ವಾದೆ ಪಶ್ನೆ , ಅದ್ಕೆಯಾ  ನಾನು ಒಂದು ಪಿಲಾನ್  ಮಾಡಿವ್ನಿ  . ಎಂಗಾರು ಮಾಡಿ ನಮ್ಮ ಚಿಕಪ್ಪನ ತಾವು  ಎರಡು ಲಕ್ಷ ತತ್ತೀನಿ,  ಮೊದಲ್ನೇ  ಆಟ ನಂದೆ ಸುರು ಆಗ್ಲಿ. ಲೇ  ಗಣೇಸ  ನಮ್ಮೂರ ದ್ಯಾವ್ರ್ಗೆಪೂಜೆ  ಮಡಿಕಳುಮ ಕಲಾ  ,  ಆ ಪೂಜಾರಪ್ಪನ ಕರಿ  ಮೊದ್ಲು, ಬಂದವರೆಲ್ಲರಿಗೂ ಸೀ ಊಟ  ಮೊದ್ಲು ಆಕ್ಸಿ,  ಮುಂದಿನ ವಾರ  ಊರ್ ಒರ್ಗಿರೋ ದ್ಯಾವ್ರ ಪೂಜೆ ಮಡೀಕಂದು   ಎಲ್ರಿಗೂ ಬಾಡೂಟ  ಜೊತೆಗೆ  ಔಸ್ತಿ[ ಹೆಂಡಾ]    ಕೊಡುಮ , ಅಂತಾ ಹೇಳ್ದಾ,

ಹಾಗು ಹೀಗೂ ಮುಗಿದ ಸಭೆಯಲ್ಲಿ  ಪಕ್ಸದಿಂದ ಹೆಚ್ಚಿನ ಕಾಸು ಪಡೆಯಲು ತೀರ್ಮಾನ ಆಯ್ತು. ಮಾರನೆಯ ದಿನ ದೇವಾಲಯದ  ತಮ್ಮಡಪ್ಪ ಗಳನ್ನೂ ಕರೆಸಿ, ಅವರಿಗೆ ತಲಾ ಐದು ಸಾವಿರ ಕೊಟ್ಟ  ಗೊಣ್ಣೆ ಗೋಪಿ , ಸ್ವಾಮೀ ಪೂಜೆ  ಜೋರಾಗಿ ನಡೆಸಿ , ಅಲಂಕಾರ ಜೋರಾಗಿ ಇರಲಿ, ನಮ್ ಪಕ್ಸದ  ಮುಖಂಡರು  ಬತ್ತಾರೆ , ಊರಿನ ಮರ್ವಾದೆ  ಕಾಪಾಡೋ ಜಾವಾಬ್ದಾರಿ  ನಿಂದೆ ಅಂದಾ , ಮುಂದೆ ಇನ್ನೂ   ನಿಮಗೆ ಯವಸ್ತೆ ಮಾಡ್ತೀನಿ ,  ಹಾಲಲ್ಲಾದರೂ ಹಾಕಿ  ನೀರಲ್ಲಾದರೂ  ಹಾಕಿ ಅಂದು  ಅಡ್ಬಿದ್ದ .  ಖುಷಿಯಿಂದ ಹಣ ಪಡೆದ ಅವರು, ನೀವೇನು ಯೋಚನೆ ಮಾಡ್ಬ್ಯಾಡಿ ಗೋಪಣ್ಣ  , ಮುಂದಿನದು ನಾವ್ ನೋಡ್ಕತೀವಿ, ಬುಡಿ  ಅಂದರು .

ಮೊದಲನೇ ಸೀ ಊಟದ ಪೂಜೆಗೆ  "ಕೋಡಂಗಿ ಪಕ್ಸ" ದ ರಾಜ್ಯ ಮುಖಂಡರೆ  ದಾವಿಸಿ ಬಂದ್ರು,  ಬಂದ  ಮುಖಂಡರನ್ನು  ಅದ್ದೂರಿಯಾಗಿ ಮೆರವಣಿಗೆ ಮೂಲಕ  ,  ಇಸ್ಕೂಲ್  ಹೈಕಳ ಕೈಲಿ ಬ್ಯಾಂಡ್ ಭಾರಿಸುತ್ತಾ , ದೇವಾಲಯಕ್ಕೆ ಕರೆ ತಂದು  ದೇವರ ಮುಂದೆ ನಿಲ್ಲಿಸಿ  ದೊಡ್ಡ ಹಾರಾ ಹಾಕಿಸಿ , ಶಾಲು ಹೊದಿಸಿ,  ಸನ್ಮಾನ ಮಾಡಿ , ಸುಮಾರು ಇಪ್ಪತ್ತು ಸಾವಿರ ಜನರನ್ನು ಕರೆಸಿ  ಇವರ ಭಾಷಣ  ಕೇಳುವಂತೆ ಮಾಡಿದ್ದ .   ಅವತ್ತು ರಾತ್ರಿ ಅಲ್ಲೇ ಇದ್ದ  ಅತಿಥಿ ಗೃಹದಲ್ಲಿ  ಅದ್ದೂರಿಯಾಗಿ  ಬಾಡೂಟ ಹಾಗು ಎಣ್ಣೆ ಸಮಾರಾಧನೆ  ಮಾಡಿದ   ,   ಚುನಾವಣಾ ಘೋಷಣೆಗೆ ಮೊದಲೇ  ಗೊಣ್ಣೆ ಸಿದ್ದ ಮಾಡಿದ್ದ  ಸಿದ್ದತೆ ನೋಡಿ ಖುಷಿ ಪಟ್ಟ ಇವರು, " ಗೋಪಣ್ಣ  ಯೊಸ್ನೆ  ಮಾಡ ಬ್ಯಾಡ ಮೊದಲು  ಪಕ್ಸ ಗೆಲ್ಲಿಸು ಆಮೇಲೆ ನಿನ್ನ  ಸೂಕ್ತವಾಗಿ ಗೌರವಿಸುತ್ತೇವೆ  ಅಂದರು  ಜೊತೆಯಲ್ಲಿದ್ದವರಿಗೆ  ನೋಡ್ರಯ್ಯ   ಗೋಪಣ್ಣ ನಿಗೆ  ಬೇಕಾದ ಫಂಡ್ ಕೊಡಿ ಕಡಿಮೆ ಮಾಡ್ಬೇಡಿ" ಅಂತಾ ಫಾರ್ಮಾನ್ ಹೊರಡಿಸಿದರು .

ಮಾರನೆಯ ದಿನದಿಂದ ಗೊಣ್ಣೆ ಗೋಪಿ  ಆಟ   ಶುರು ಆಯ್ತು.ಎರಡು ಮೂರು  ದಿನ ಬಿಟ್ಟು  ದುರಾಸೆ ಪುರದ ಪಕ್ಕದಲ್ಲಿ  ಒಂದು ಚಿತ್ರದ ಶೂಟಿಂಗ್ ನಡೆಯುತ್ತಿತ್ತು, ಅಲ್ಲಿದ್ದ  ಪ್ರಖ್ಯಾತ ನಟಿ  ಮೋಹಿನಿ ಯನ್ನು ಭೇಟಿ ಮಾಡಿ  ಆಕೆ ನಡೆಸುತ್ತಿದ್ದ   ಸಂಸ್ಥೆಗೆ  ಸುಮಾರು ಮೂವತ್ತು ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿ,  ನಿಮಗೆ   ಸನ್ಮಾನ ಮಾಡ್ತೀನಿ ಅಂತಾ ಕರೆದು ಕೊಂಡು  ಬಂದು  ಊರ ತುಂಬಾ ಮೆರವಣಿಗೆ ಮಾಡಿಸಿ  ದೊಡ್ಡ ಕಾರ್ಯಕ್ರಮ ಮಾಡಿ ಊರವರ ಎದುರು ದೊಡ್ಡ ಮನುಷ್ಯನಂತೆ ಪೋಸ್ ಕೊಡುತ್ತಾ ಸಾಗಿದ,  ತನ್ನನ್ನು ವಿರೋಧಿಸುತ್ತಾ  ಇದ್ದ  ಕೆಲ ಊರ  ಹಿರಿಯರ ಕರೆದು ಮೋಹಿನಿ ಕೈಲಿ ಸನ್ಮಾನ  ಮಾಡಿಸಿ ಅವರನ್ನೂ ಬುಟ್ಟಿಗೆ ಹಾಕಿಕೊಂಡ ,  ನಂತರ  ತಾನೇ ಮುಂದೆ ನಿಂತು ಮೋಹಕ ನಟಿ ಮೋಹಿನಿ ಗೆ ಸನ್ಮಾನಮಾಡಿ ಅವಳಿಗೊಂದು ದುಭಾರೀ ಸೀರೆ, ಶ್ರೀ  ಗಂಧದ  ಮೂರ್ತಿ ನೀಡಿದನು,  ಅದನ್ನು ಸ್ವೀಕರಿಸಿದ ನಟಿ ದೇಣಿಗೆ ಪಡೆದ ಮುಲಾಜಿಗೆ  ಒಳಪಟ್ಟು   ನಮ್ಮ ಗೊಣ್ಣೆ ಗೋಪಿಯನ್ನು ಹೀರೋ ಎಂಬಂತೆ  ಹೊಗಳಿ  ಆಗಸ  ತೋರಿದಳು  . ಅವಳ ಜೊತೆ ಹಲ್ ಕಿರಿಯುತ್ತಾ  ಫೋಟೋ ತೆಗೆಸಿಕೊಂಡ  ಗೊಣ್ಣೆ ಗೋಪಿ   ಇದೆಲ್ಲವೂ ಸರಿಯಾಗಿ ಪತ್ರಿಕೆಗಳಲ್ಲಿ ಬರುವಂತೆ ಮಾಡಲು   ಅಲ್ಲಿನ  ಸ್ಥಳೀಯ  ಪೇಪರ್  ಏಜೆಂಟ್  ಗಳೊಂದಿಗೆ ವಿಶ್ವಾಸದಿಂದ ಇದ್ದ.

 ಚುನಾವಣಾ ಘೋಷಣೆಗೆ ಇನ್ನೇನು ಸಮಯ ಹತ್ತಿರ ಆಗುತ್ತಿತ್ತು, ತನ್ನ ಅಂತಿಮ ಟ್ರಂಪ್ ಕಾರ್ಡ್ ಊರ ಹೊರಗಿನ ದ್ಯಾವ್ರ ಪೂಜೆ ಸಿದ್ದತೆ  ಶುರು ಮಾಡಿದ, ಪೂಜೆಯ ದಿನ ದುರಾಸೆ ಪುರದ ತುಂಬೆಲ್ಲಾ  ಬಾಡೂಟದ ಘಮ ಘಮ  ಸುವಾಸನೆ ಹರಡಿ  ಹಲವು ಮುಖಂಡರು ಅವರ ಪಟಾಲಂ ಗಳನ್ನೂ ಎಳೆದು ತಂದಿತ್ತು . ಜೊತೆಗೆ  ಹಿಂದಿನ ದಿನ ಬಂದಿದ್ದ ತೀರ್ಥದ ಲಾರಿ  ಹಲವರ  ನಿದ್ದೆ ಕೆಡಿಸಿತ್ತು .   ಮಾರನೆ ದಿನ ದೇವರ ಪೂಜೆ ಅದ್ದೂರಿಯಾಗಿ   ಮಾಡಲಾಯಿತು  ,   ಬಂದಿದ್ದ ಸಾವಿರಾರು ಜನರಿಗೆ ಮಧ್ಯಾಹ್ನ   ಬಾಡೂಟ ಮಾಡಿಸಿ,   ಕೆಲವರಿಗೆ ಎಣ್ಣೆ ಹೊಡೆಸಿ,   ತೃಪ್ತಿ ಪಡಿಸಿದ್ದ  ರಾಜಧಾನಿಯಿಂದ  ಬಂದಿದ್ದ  ಆರ್ಕೆಸ್ಟ್ರಾ  ತಂಡದವರು   ಜನರನ್ನು ರಂಜಿಸುತ್ತಿದ್ದರು, ಇತ್ತಾ  ನಮ್ಮ ಗೊಣ್ಣೆ ಗೋಪಿ ತನ್ನ ಎಲೆಕ್ಸನ್  ಬಜೆಟ್ ತಯಾರಿ ನಡೆ ಸಿದ್ದ. ಇಷ್ಟೆಲ್ಲಾ  ಆಗ್ತಾ ಇದ್ದಂತೆ ಚುನಾವಣಾ ದಿನಾಂಕ  ಘೋಷಣೆ ಆಗಿಬಿಟ್ಟಿತು , ಎಲ್ಲ ಪಾರ್ಟಿಯವರು ಮೈಕೊಡವಿ ಎದ್ದು  ಕುಂತರು .

 ಚುನಾವಣಾ ಪೂರ್ವದಲ್ಲೇ  ತನ್ನದೇ ಆದ ರೀತಿಯಲ್ಲಿ ಪ್ಲಾನ್ ಮಾಡಿ ತನ್ನ ಪಕ್ಷದವರ ಸಹಕಾರ ಪಡೆದು ದುರಾಸೆಪುರದಲ್ಲಿ  ತನ್ನದೇ ಆದ  ಅಲೆ ಏಳುವಂತೆ  ಮಾಡಿದ್ದ, ಊರಲ್ಲಿ ಎಲ್ಲರ ಬಾಯಲ್ಲೂ ನಮ್ಮ ಗೊಣ್ಣೆ ಗೋಪಿ ಬಗ್ಗೆಯೇ ಮಾತುಗಳು, ಹೀಗಾಗಿ  ದುರಾಸೆ ಪುರದಲ್ಲಿ  ಗೊಣ್ಣೆ ಗೋಪಿ ಬೆಂಬಲ ಪಡೆದ ಅಭ್ಯರ್ಥಿ ಗೆಲ್ಲೋದು ಗ್ಯಾರಂಟೀ ಅನ್ನೋದು  ಮಾತಾಯ್ತು. ಈ ನಡುವೆ  ನಮ್ಮ ಗೊಣ್ಣೆ ಗೋಪಿಯ ಸೆೆಳೆಯಲು ಹಲವು ಪಾರ್ಟಿಗಳು ಮುಂದಾದವು,  ಎಲ್ಲರಿಗೂ  ಸಮಾಧಾನದ  ಉತ್ತರ ಹೇಳಿ, ತನ್ನ ಬೆಳೆಸಿದ ಪಾರ್ಟಿಯ  ಮುಖ್ಯಸ್ತರನ್ನು ಭೇಟಿ  ಮಾಡಲು ಹೊರಟ .

ಕೋಡಂಗಿ ಪಕ್ಸದ  ಮುಖಂಡರು ಇವನನ್ನು  ನಗುಮುಖದಿಂದ  ಸ್ವಾಗತಿಸಿ   ,  ಗೋಪಣ್ಣ  , ದುರಾಸೆ ಪುರದಲ್ಲಿ ನಮ್  ಪಕ್ಸದ  ಕ್ಯಾಂಡಿಡೇಟ್  ಗೆಲ್ಲಿಸ ಬೇಕೂ ಕಣಪ್ಪಾ, ನೀನು ಬಹಳ ಚೆನ್ನಾಗಿ  ಆಗ್ಲೇ ತಯಾರಿ ಮಾದ್ಕಂಡಿರೋದು  ಬಹಳ ಒಳ್ಳೆದಾಯ್ತು , ಅಂದ್ರು , ಆದ್ರೆ ಹಣದ ವಿಚಾರವೇ ಬರ್ತಿಲ್ಲಾ, ಗೊಣ್ಣೆ ಗೋಪಿ   ಎಲಾ  ಎಲಾ ,  ಇವಯ್ಯ  ಕಾಸಿನ ಇಚಾರ ಎತ್ತುತ್ತಿಲ್ಲವಲ್ಲಾ ಅಂತಾ  ಯೋಚಿಸಿ,  ಅಯ್ಯೋ ಬುಡಿ ಸಾ  ಅದೆಲ್ಲಾ ಏನ್ ಮಹಾ , ಇನ್ನೂ ಮಾಡೋದು  ಬಾಳ  ಐತೇ , ಅಂದಾ,  ಏನಾದ್ರೂ ಮಾಡಪ್ಪಾ,  ಆದ್ರೆ  ನಮ್ ಪಕ್ಸ ಗೆಲ್ಲೋ ಹಾಗೆ ಮಾಡು ಅಂದು ಮುಖಂಡರು .  ಇದ್ಯಾಕೋ ಸರಿಯಿಲ್ಲಾ ಅನ್ನಿಸಿ ತಾನೇ ಹಣದ ಬಗ್ಗೆ ಪ್ರಸ್ಥಾಪ  ಮಾಡಿದ .

ಸಾ ನಮ್ ಲೀಡ್ರೂ  ಕಪ್ಪೆ ಸ್ವಾಮಿಗಳು  ಆಶೀರ್ವಾದ  ಮಾಡಿದ್ದರಿಂದ  ಇಲ್ಲಿಗಂಟಾ ಏಗ್ದೆ , ಇನ್ಮುಂದೆ ಬೋ ಕಷ್ಟಾ  ಸಾ, ಆಗಾಕಿಲ್ಲ. ಕೊಟ್ಟ ಹತ್ತು ಲಕ್ಸ ನಮ್ಮದುರಾಸೆ ಪುರಕ್ಕೆ ಹತ್ತು ದಿನಕ್ಕೆ  ಸಾಕಾಲಿಲ್ಲ, ನಾನೇ ಅಲ್ಲಿ ಇಲ್ಲೇ ಸಾಲ ಸೋಲ ಮಾಡಿ ಪಕ್ಸದ ಮಾನಾ ಕಾಪಾಡಕ್ಕೆ   ಹತ್ತು ಲಕ್ಸ  ಹಾಕಿವ್ನಿ . ದಯವಿಟ್ಟು, ಮೊದ್ಲು ನಂ ಹತ್ತ ಲಕ್ಶ ಕೊಡಿ,  ಆಮ್ಯಾಕೆ ನಿಮಗೆ ಗೊತ್ತಲ್ಲಾ  ಎಲೆಕ್ಸನ್   ಇನ್ನು   ಒಂದು ತಿಂಗಾ  ಅದೇ ಅಲ್ಲಿಗಂಟಾ  ಜನಗಳ ನಮ್ಮ ಕೈಯ್ಯಲ್ಲಿ ಮಾಡಿಕೋ ಬೇಕು , ಇಲ್ಲಾಂದ್ರೆ  ದಗಲ್ ಬಾಜಿ ಪಕ್ಸದವರು  ನಮ್ ಪಿಲಾನ್ ಉಲ್ಟಾ  ಮಾಡ್ತಾರೆ ಅಷ್ಟೇಯ  ಅಂದ.

ಎಷ್ಟು ಬೇಕಾಗುತ್ತೆ  ಗೋಪಣ್ಣ  ದುರಾಸೆ ಪುರದ ಎಲೆಕ್ಸನ್ ಗೆ?  ಅಂದ್ರು ಮುಖಂಡರು, ನಿಮಗೆ ಗೊತ್ತಲ್ಲಾ ಸಾ,  ಇನ್ನು ಬೊ ಕೆಲ್ಸಾ ಆಗ್ಬೇಕ್  ಅಂದಾಜು   ಎಲ್ಡ್ ಕೋಟಿ  ಬಜೆಟ್ ಕೊಡಿ , ಉದ್ದಾ ತುಂಡಾ ಆಮ್ಯಾಕೆ ನೋಡುವಾ , ಅಂದಾ,

ಬೆಚ್ಚಿ ಬಿದ್ದ  ಮುಖಂಡರು,  ಏನಪ್ಪಾ ಗೋಪಣ್ಣ , ಭಾರಿ ದುಬಾರಿ ಆಯ್ತು ನಿನ್ನ ಬಜೆಟ್ , ನಮ್ ಪಕ್ಸದ ಮುಖಂಡರು  ದುರಾಸೆ ಪುರಕ್ಕೆ ಅಂತಾ  ಐವತ್ತು ಲಕ್ಷ  ಬಜೆಟ್ ನಿಗದಿ ಮಾಡಿದ್ದಾರೆ , ನೀನು ನೋಡಿದ್ರೆ ಆಕಾಶ  ತೊರಿಸುತ್ತಿ  ಅಂದ್ರು .

ಗೊಣ್ಣೆ ಗೋಪಿ  :-) ಓ ಬುಡಿ ಇದಾಗದ್ ಕೆಲ್ಸಾ , ಯಾಕೋ  ಬಜೆಟ್ ಸರಿಯಾಗಿ   ಕೊಡೋಕೆ  ಹಿಂಜರಿತಾ ಇದ್ದೀರಿ,  ಮ್ಯಾಲ್ನವರ್ ತಾವ್ ನಾನೇ ಮಾತಾಡ್ತೀನಿ ಅಂದಾ ,

ಇವನು ಮೇಲಿನವರ ಜೊತೆ ಮಾತಾಡಿದ್ರೆ  ನನ್ನ ಬಣ್ಣ ಬಯಲಾಗುತ್ತೆ ಎಂದು ಅಂಜಿದ  ಮುಖಂಡರು , ಒಂದು ನಿಮಿಷ ಇರು  ಗೋಪಣ್ಣ, ನಾನೇ ನಿನ್ನ ಪರವಾಗಿ ಮೇಲಿನವರ ಜೊತೆ ಮಾತಾಡುತ್ತೇನೆ ಅಂದು ಫೋನ್ ಮಾಡಿದಂತೆ ನಟಿಸಿ , ನೋಡಪ್ಪಾ  ಮೇಲಿನವರನ್ನು ಸಮಾಧಾನ ಮಾಡಿ  ನಿನಗೆ ಒಂದು ಕೋಟಿ  ಕೊಡಿಸ ಬಲ್ಲೆ ಅಷ್ಟೇ  ಅಂದ್ರು .

ಒಗ್ಲಿ ಬುಡಿ ಸಾ ನಮ್ ನಮ್ಮಲ್ಲಿ ಯಾಕೆ ಜಗಳಾ ,  ನಮ್ ಹೈಕ್ಳಾ , ಒಂದು ಮಾತು ಕೇಳ್ತೀನಿ ಅವು ಹೂ ಅಂದ್ರೆ  ಸರಿ ಇಲ್ಲಾಂದ್ರೆ  , ತಪ್ಪು ತಿಳಕಾ ಬ್ಯಾಡಿ , ಅಂದಾ ಗೊಣ್ಣೆ ಗೋಪಿ . ಹೊರಡಲು  ಎದ್ದುನಿಂತಾ ...!

ಇವನ ಮಾತು ಬೇರೆ ದಿಕ್ಕಿಗೆ ತಿರುಗಿದ್ದನ್ನು ಕೇಳಿ ಮುಖಂಡರು  ಏನು  ಗೋಪಣ್ಣ , ಯಾಕಪ್ಪಾ  ಕೋಪ ಮಾಡ್ಕಂಡೆ  ಕುಂತ್ಕೋ  ಮಾರಾಯ  ಮಾರಾಯ  ಅಂದು, ಇದ್ಯಾಕೆ  ಗೋಪಣ್ಣ   ಏನೋ ಹೊಸ ಮಾತು  ಬರ್ತಾ ಇದೆ ಇವತ್ತು ಅಂದರು .

ಹೂ ಸಾ  ಕಮಂಗಿ ಪಕ್ಸದ ಕೆಲವರು  ಆಗ್ಲೇ ಬಂದವರೆ  ದುರಾಸೆ ಪುರದಲ್ಲಿ ಅವರ   ಕ್ಯಾಂಡಿಡೇಟ್   ಪರವಾಗಿ ಬಂದ್ರೆ  ಐದು ಕೊಡ್ತೀನಿ ಅಂತಾ ಅವ್ರೆ , ಆದ್ರೆ ನಮ್ಮ ಪಕ್ಸದ  ಮಾನ ಮುಖ್ಯ ಅಲ್ವೇ . ಅದಕ್ಕೆ ತಮ್ ತವ ಬಂದು ಈ ಬಿಕ್ಸೆ ಬೇಡ್ತಾ ಇವ್ನೀ  . ಅಂದಾ ಗೊಣ್ಣೆ ಗೋಪಿ.

ಇದ್ಯಾಕೋ ಕೈ ಕೊಡೊ ಅಸಾಮಿ ಅಂದುಕೊಂಡ  ಮುಖಂಡರು , ಅಲ್ಲಾ ಗೋಪಣ್ಣ, ನಿಮ್ಮಂತಾ  ನಿಷ್ಠಾವಂತರನ್ನು   ನಮ್ಮ  ಕೋಡಂಗಿ ಪಕ್ಷ ಕಳೆದು ಕೊಳ್ಳೋಕೆ  ರೆಡಿ ಇಲ್ಲಪ್ಪಾ,  ಅದರಲ್ಲೂ ನೀನು ನಮ್ಮ ಪಕ್ಸದ  ಆಸ್ತಿ ಇದ್ದಹಾಗೆ ,  ತಡಿ ಈಗಲೇ ಇದನ್ನು ಇತ್ಯರ್ಥ   ಮಾಡೋಣ, ಅಂತಾ,  ಗೊಣ್ಣೆ ಗೋಪಿಯನ್ನು   ಒಳ ಕೋಣೆಗೆ ಕರೆದು ಕೊಂಡು  ಹೊದ್ರು.






ಸಧ್ಯ  ನಮ್ ಪರ್ಪಂಚದಲ್ಲಿ ಎಲೆಕ್ಸನ್  ಇಲ್ಲಾ 



ಒಳಗಡೆ ಡೀಲ್  ಶುರು  ಆಯ್ತು, "ನೋಡು ಗೋಪಣ್ಣ  ನೀನೂ ಬಹಳ ವರ್ಷದಿಂದ ಪಕ್ಷಕ್ಕಾಗಿ ದುಡಿದೆ , ನಿನ್ನ ಬಗ್ಗೆ ನನಗೂ ಕನಿಕರ ಇದೆ,  ಒಂದು ಕೆಲ್ಸಾ ಮಾಡು  ಇವತ್ತೇ ರಾಜ್ಯ ಮುಖಂಡರನ್ನು ಇಬ್ಬರೂ ಭೇಟಿ ಯಾಗೋಣ , ನೀನು ದುರಾಸೆ ಪುರದ ಎಲೆಕ್ಸನ್ ಬಜಟ್  ಹತ್ತು  ಕೋಟಿ  ಕೇಳು,  ಹಾಗು ಹೀಗೂ ಎಳೆದಾಡಿ  ಏಳು ಕೋಟಿಗೆ  ನಿಲ್ಲೋಹಾಗೆ ನಾನು ನೋಡ್ಕೋತೀನಿ , ಅದರಲ್ಲಿ  ಮೂರು ಖರ್ಚು ಮಾಡು  ಉಳಿದ ನಾಲ್ಕರಲ್ಲಿ   ಇಬ್ಬರೂ ಸಮವಾಗಿ ಹಂಚಿಕೊಳ್ಳೋಣ ," ಏನಂತೀಯೇ ಅಂದ್ರು .

ಈಗ ಬೆಚ್ಚಿ ಬೀಳುವ ಸರದಿ  ಗೊಣ್ಣೆ ಗೋಪಿಯದಾಗಿತ್ತು , ಅಂದೇ ಮುಖಂಡರ ಬಳಿ  ಇಬ್ಬರೂ  ತೆರಳಿ , ದುರಾಸೆ ಪುರದ ಎಲೆಕ್ಸನ್ ಬಜೆಟ್  ಏಳುಕೋಟಿಗೆ  ನಿಗದಿ ಪಡಿಸಿಕೊಂಡರು . ಚುನಾವಣಾ ಹಣಾಹಣಿ   ಆಯಿತು, ನಮ್ಮ ಗೊಣ್ಣೆ ಗೋಪಿ ಎಲೆಕ್ಸನ್ ಗಾಗಿ ಸ್ಥಳೀಯ  ಗುತ್ತಿಗೆದಾರರು, ವ್ಯಾಪಾರಿಗಳು, ಮುಂತಾದ ಕುಳ ಗಳಿಂದ  ಹಣ ಸಂಗ್ರಹಿಸಿ, ಅದ್ದೂರಿ ಚುನಾವಣೆ  ತಯಾರಿ ಮಾಡಿದ,  ಗೊಣ್ಣೆ ಗೋಪಿಯ ಶಿಷ್ಯ ಕೋಟಿ ಪ್ರತಿ ದಿನ  ಇಂತಿಷ್ಟು ಹಣ ಪಡೆದು   ಹಣದ ಹೊಳೆಯಲ್ಲಿ ತೇಲಾಡಿದರು ಬಡ ಜನರು , ಕೂಲಿಕಾರರು,  ಮಧ್ಯಮ ವರ್ಗದವರು  ಗೊಣ್ಣೆ ಗೋಪಿಯ  ಎಲೆಕ್ಸನ್ ಕೊಡುಗೆ ಮುಲಾಜಿಗೆ ಬಿದ್ದು ಮತ ಚಲಾಯಿಸಿದರು , ದೊಡ್ಡ ಮನುಷ್ಯರು  ಎಲೆಕ್ಸನ್ ನಲ್ಲಿ ಮತ ಹಾಕದೆ  ತಮ್ಮ ಸಿರಿವಂತಿಕೆ ಗತ್ತು ತೋರಿದರು, ಚುನಾವಣಾ ಫಲಿತಾಂಶ ನಿರೀಕ್ಷೆಯಂತೆ  ಬಂದು  ಕೋಡಂಗಿ ಪಕ್ಸದ  ಕ್ಯಾಂಡಿಡೇಟ್  ಗೆದ್ದರು .


ಪ್ರಜಾಪ್ರಭುತ್ವದ  ಮೆರವಣಿಗೆ 



ನಮ್ಮ ಗೊಣ್ಣೆ ಗೋಪಿ ಎಲೆಕ್ಸನ್ನು ಗೆದ್ದ ಖುಷಿಯಲ್ಲಿ  ನಗು ನಗುತ್ತಾ , ತನ್ನ ಮನೆಯಲ್ಲಿ  ಈ ಎಲೆಕ್ಸನ್ನಿನಲ್ಲಿ  ತನಗೆ ಬಂದ  ಲಾಭ ಲೆಕ್ಕಾ ಹಾಕಿದ,  ಸುಮಾರು  ಆರು ತಿಂಗಳಲ್ಲಿ  ಖರ್ಚು ಕಳೆದು ಸುಮಾರೋ  ಮೂರು  ಕೋಟಿ  ಲಾಭ ಬಂದಿತ್ತು,   ಅಲ್ಲೇ ಇದ್ದ ಅವರ ಅಪ್ಪನ ಫೋಟೋ ಮುಂದೆ  ಬಂದು ಹಣ ತೋರಿಸುತ್ತಾ ,

'' ನೋಡಿದ್ಯಾ ಅಪ್ಪಾ,  ನೀನು ಬದುಕಿರೋವಾಗ , ನನ್ನನ್ನು ಸರಿಯಾಗಿ ಓದಲಿಲ್ಲಾ, ಅಂತಾ  ಮನೆಗೆ  ಬಂದವರ ಎದುರಿಗೆ ಅವಮಾನ ಮಾದುತ್ತಿದ್ದೆ.  ಈಗ ನೋಡು ಹತ್ತನೇ ಕಿಲಾಸ್   ಡುಮ್ಕಿ  ಹೊಡೆದ ಮಗ  ಕೇವಲ ಆರು ತಿಂಗಳಲ್ಲಿ  ಮೂರು ಕೋಟಿ  ಸಂಪಾದನೆ ಮಾಡವ್ನೆ ,  ಇನ್ನು  ನಮ್ ಸರ್ಕಾರ ಬತ್ತದೆ ನಂದೆ ದುನಿಯಾ , ತಿಳಕಾ , ಒಗ್ಲಿ ಬುಡು ಅಪ್ಪಾ  ನಿನ್ ಎಸ್ರಲ್ಲಿ  ಒಂದು ಕಲ್ಯಾಣ ಮಂಟಪ  ಕಟ್ಟುಸ್ತೀನಿ  ಬುಡು ''ಅಂತಾ ಹೇಳಿ  ಭಕ್ತಿ ಯಿಂದ ಕೈ ಮುಗಿದ. ಫೋಟೋದ ಒಳಗಿಂದ  ಗೊಣ್ಣೆ ಗೋಪಿಯ     ಪಿತಾಶ್ರೀ ಹಿಕ್ಮತ್ತಯ್ಯ ಅಸ್ತು ಅಸ್ತು ಅನ್ತಿದ್ದ.ಇತ್ತ ಪ್ರಜಾ ಪ್ರಭುತ್ವ  ಸುಸ್ತೂ ಸುಸ್ತೂ  ಅಂತಿತ್ತು .






8 comments:

bilimugilu said...

ellede kOdangi pakshada abhyarthigaLa haavaLi.....
ivattina report odthidde Balu Sir, candidategaLa criminalgaL history obbariginta obbaradu!
Bharathadantha suvarna Deshavanna aaLoke aLisoke inthavaranne naavu aayke maaDi maaDI bitkondu bandideevi!! nishtaavantharige, praamanikarige mundu barodakke swartha rajakaranigaLu bitte illa!! Idanna etti nillisi horaadoke saamanya praje sath-praje aagogidaane, taanu - tanna samsaara - tana hind mund irovru chennagidre saaku.

Badarinath Palavalli said...

ಗೊಣ್ಣೆ ಸಿದ್ದನ ಪುರಾಣ ವೈನಾಗೈತೆ!
ನಮ್ ಹಳ್ಳೀ ರಾಜಕೀಯ ದಿಲ್ಲೀಗಿಂತ ದೊಡ್ದು ಸಾ, ಯಾವಾನ್ಗೂ ಅರ್ಥ ಆಗಾಂಗಿಲ್ಲ.
ಗ್ರಾಮೀಣ ಭಾಷಾ ಸೊಗಡು, ಭರಪೂರ ಹಾಸ್ಯ ಮತ್ತು ಸಮಕಾಲೀನ ವಿಚಾರ ಮಂಡನೆಗೆ ಪೂರ್ಣ ಅಂಕಗಳು.

Unknown said...

Pramanikate etthiDidre praaNakke aapattiruvaaga saamaanya praje sathpraje agodralli tappidya???

Unknown said...

Pramanikate etthiDidre praaNakke aapattiruvaaga saamaanya praje sathpraje agodralli tappidya???

ಜಲನಯನ said...

ಬಾಲು ವೈನಾಗಿತೆ... ನಿಮ್ಮ ಗೊಣ್ಣೆ ಸಿದ್ದನ ಮಾತು ಕೇಳಿ...ನಮ್ಮಲ್ಲಿ ಗೊಣ್ಣೆ ಎಂಕ್ಟನ ವಿಷಯ ನೆನಪಾಯ್ತು...
ಎಲೆಕ್ಸನ್ನು ಕನೆಕ್ಸನ್ನು ಅಳ್ಳಿಗೆ ಒಸ್ದಲ್ಲಾ...

Srikanth Manjunath said...

ಇಂದಿನ ರಾಜಕೀಯದ ಸಚಿತ್ರ ವಿವರ ..,ಬೆಂದ ಮನೆಯಲ್ಲಿ ಹಿರಿದದ್ದೇ ಲಾಭ ಅನ್ನುವ ಹಾಗೆ.. ಅವರು ಇವರು ಎಲ್ಲರೂ ಮಾಡಿಕೊಳ್ಳುತ್ತಾರೆ.. ಮಂಗಗಳಾಗುವುದು ಮತ ಹಾಕಿದವರು ಮಾತ್ರ. ಲೇಖನ ಲಹರಿ ಸೂಪರ್ ಸರ್ಜಿ

ಸುಬ್ರಮಣ್ಯ said...

ವೈನಾಗದೆ ಕಣಣ್ಣಾ.

ಮನಸು said...

ಬೋ ಪಸಂದಾಗೈತೆ ಬುಡಿ... ಎಲೆಕ್ಷ್ಸನ್ ನಲ್ಲಿ ಜನ ಏನ್ ಮಾಡ್ತ್ವಾರೇ ಅಂತಾ ಗೊತ್ತಾಯ್ತು. ಈ ಗೊಣ್ಣೆ ಸಿದ್ದ ಬಾಳಾ ಚಾಲಾಕಿ ಇದಾನೆ