Friday, March 21, 2014

ಮತ್ತೊಮ್ಮೆ ಶಿರಸಿಯ ನೆನಪು ..... !!ಶಿರಸಿಯವರೇ ನಿಮ್ಮ ಊರಿನ ಬಗ್ಗೆ ಹೆಮ್ಮೆ ಪಡಿ .




ಯಾಕೋ   ಶಿರಸಿಗೆ  ಬರೋದಿಲ್ವಾ  ನೀನು , ಅಂದ್ಲು   ಹೂ ಕಣೆ ಆಗಿಲ್ಲಾ, ಬರ್ತೀನಿ ಮೊದಲು ನೀನು ಹುಶಾರಾಗು ಅಂದೇ,  ಹೌದು ಅನಾರೋಗ್ಯದ ಕಾರಣ ವಿಶ್ರಾಂತಿಗಾಗಿ  ಮೈಸೂರಿನಲ್ಲಿ  ಇರುವ ನನ್ನ ಶಿರಸಿ  ಸೋದರತ್ತೆ  ನಾಗು, [ ನಾಗಲಕ್ಷ್ಮಿ ] ಹಾಗು ನನ್ನ ನಡುವೆ ನಡೆದ ಸಂಭಾಷಣೆ , ಮತ್ತೊಮ್ಮೆ ಶಿರಸಿ ಬಗ್ಗೆ ಯೋಚಿಸಲು  ಪ್ರೇರಣೆಯಾಯಿತು, ಲೋ ಶಿರಸಿ ಜಾತ್ರೆ ಇದೆ  ಹೋಗಿ ಬಾ  ಕಳೆದ ಸಾರಿ ಬಂದು ನಮ್ಮ ಮನೆಯಲ್ಲಿ ಸರಿಯಾಗಿ ನಿಲ್ಲದೆ ಅಲೆದಾಡಿದ ಭೂಪ ನೀನು , ಅಲ್ಲಿಗೆ ಫೋನ್ ಮಾಡ್ತೀನಿ  ಹೊರಡು ಮಾರಾಯ ಅಂದ್ಲು,  ಅಲ್ಲಮ್ಮಾ  ಈಗ ಆಗೋಲ್ಲಾ  ಮತ್ತೊಮ್ಮೆ ಪ್ರಯತ್ನಿಸುವೆ  ಬಿಡು, ಮೊದಲು ನಿನ್ನ ಆರೋಗ್ಯ ನೋಡಿಕೋ , ಆಮೇಲೆ ಖಂಡಿತಾ ಬರ್ತೀನಿ ಅಂದೇ,

ಹೌದಲ್ವಾ  ಎರಡು ವರ್ಷದ ಹಿಂದೆ ಗುರುಮೂರ್ತಿ ಹೆಗ್ಡೆ  ಸಹೋದರನ ಮದುವೆ ನೆಪದಲ್ಲಿ  ಶಿರಸಿಯಲ್ಲಿ ಅಲೆದದ್ದು,  ಹಿಂದಿನ ಶಿರಸಿ ಭೇಟಿ ಬಗ್ಗೆ  ಬರೆದ ಸರಣಿ ಲೇಖನ  [೧] http://nimmolagobba.blogspot.in/2012/09/1.html ೨] http://nimmolagobba.blogspot.in/2012/09/2_30.html   ೩] http://nimmolagobba.blogspot.in/2012/10/12.html   ಹಾಗೆ   ಬರೆದ  ಪ್ರವಾಸ ಸರಣಿಗೆ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು ಬಿಡಿ ] ನನ್ನ ಪ್ರೀತಿಯ  ತಮ್ಮನಂತಹ  ಗೆಳೆಯ ಹರ್ಷ ಹೆಗ್ಡೆ  ನನ್ನ ಜೊತೆಗೆ ಅಲೆದಾಡಿ ಶಿರಸಿ ತಾಲೂಕಿನ ದರ್ಶನ ಮಾಡಿಸಿದ್ದು  ಮತ್ತೊಮ್ಮೆ ಕಣ್ಣ ಮುಂದೆ  ಹಾದು ಹೋಯಿತು, ಮತ್ತೆ ನನ್ನ  ಬಿಡುವಿಲ್ಲದ ಕೆಲಸದಲ್ಲಿ ಮುಳುಗಿ ಹೋದೆ . ಆದರೆ ನಿನ್ನೆ ಅಪರೂಪಕ್ಕೆ  ಮನೆಗೆ ಬಂದ ಗೆಳೆಯನೊಬ್ಬ ಮರೆಯಲಾರದ  ಪುಸ್ತಕಗಳ  ಉಡುಗೊರೆ ಕೊಟ್ಟ, ಅದರಲ್ಲಿ ನೋಡಿದರೆ ರಾಶಿ ರಾಶಿ ಮಾಹಿತಿ  , ಊಟವನ್ನೂ ಮರೆತು  ಓದಲು ಕುಳಿತೆ , ಯಾವುದೋ ಲೋಕಕ್ಕೆ ಕರೆದೊಯ್ಯುವ  ಪುಸ್ತಕಗಳು ಅವು.  ಅದರಲ್ಲಿ ಶಿರಸಿಯ ಬಗ್ಗೆ  ಸಿಕ್ಕ ಮಾಹಿತಿ ನನ್ನ  ಆಸಕ್ತಿಯನ್ನು ಕೆರಳಿಸಿತು .



 



ಅರೆ ಈ ಊರಿನ ಬಗ್ಗೆ ಇಷ್ಟೆಲ್ಲಾ ಇದೆಯಾ ಅನ್ನಿಸಿತು. ಹಲವು  ಪುಸ್ತಕಗಳ ಹುಡುಕಾಟದಲ್ಲಿ ಸಿಕ್ಕ ಮಾಹಿತಿಗಳನ್ನು  ನಿಮ್ಮ ಜೊತೆ ಹಂಚಿಕೊಳ್ಳಲು  ಖುಶಿಯಾಗುತ್ತಿದೆ. ಮೊದಲಿಗೆ ಬನ್ನಿ "ಶಿರಸಿ " ಊರಿನ ಹೆಸರಿಗೆ  ಒಂದು ಆಸಕ್ತಿ ಇರುವ ವಿಚಾರವಿದೆ . ಶಿರಸಿ ತಾಲೂಕಿನ ಸಿದ್ದಾಪುರದ  ಬಳಿ  ಇರುವ "ತಮಡಿ  ಕಲ್ಲಳ್ಳ" ಎಂಬ ಜಾಗದಲ್ಲಿ ಇರುವ ವೀರಗಲ್ಲಿನಲ್ಲಿ  ಶಿರಸಿ ಎಂಬ ಹೆಸರು ಹೇಗೆ ಬಂತು ಎಂಬ ಬಗ್ಗೆ ಕ್ರಿ. ಶ ೧೧೫೦  ರಲ್ಲಿನ ಒಂದು ಶಾಸನ  ಇರುವುದಾಗಿ ಹೇಳಲಾಗಿದೆ , ಅದರಲ್ಲಿ ಶಿರಸಿ ಎಂಬ ಹೆಸರು ಹಾಗು ಅಲ್ಲಿ ನಡೆದ ಒಂದು ಯುದ್ದದ  ಬಗ್ಗೆ ಮಾಹಿತಿ ನೀಡಿ, "ಶಿರಸೇ" ಎಂದು ಶಿರಸಿಯನ್ನು ಕರೆಯುತ್ತಿದ್ದ ಬಗ್ಗೆ ಮಾಹಿತಿ ನೀಡಿದೆ .  ಶಿರಸೇ ಎಂಬ ಹೆಸರು  ಶಿರಿಶ ಅಥವಾ ಸಿರ್ಸಾಲ   ಮರದಿಂದ ಉದ್ಭವವಾದ ಹೆಸರೆಂದೂ , ಅದನ್ನು ಕನ್ನಡ ಭಾಷೆ ಯಲ್ಲಿ ''ಬಾಗೆ''  ಮರವೆಂದು ಹೇಳುವುದಾಗಿ ತಿಳಿಸಲಾಗಿದೆ . ಬಾಗೆ ಮರಕ್ಕೂ ಶಿರಸಿ ಊರಿಗೂ ಏನು ಸಂಬಂಧ ಎಂಬ ಬಗ್ಗೆ ಹೆಚ್ಚಿನ  ಸಂಶೋದನೆ  ಆಗಬೇಕಾಗಿದೆ .







ಡಾಕ್ಟರ್ ಫ್ರಾನ್ಸಿಸ್ ಬುಕನನ್   ಎಂಬ ಬ್ರಿಟೀಷ್ ಅಧಿಕಾರಿ ತನ್ನ ಮಲಬಾರ್ , ಮೈಸೂರು ಹಾಗು ಕೆನರಾ  ಪ್ರಾಂತದ ಪ್ರವಾಸದಲ್ಲಿ ೧೮೦೧ ರ ಮಾರ್ಚ್ ೧೪ ಹಾಗು ೧೫ ರಂದು ಶಿರಸಿಯಲ್ಲಿ ಉಳಿದು ಅಲ್ಲಿನ ವಿಶೇಷತೆ  ಬಗ್ಗೆ ತನ್ನ ಡೈರಿಯಲ್ಲಿ ದಾಖಲಿಸಿದ್ದಾನೆ, ಅವನು ಭೇಟಿ ನೀಡಿದ ಸಮಯದಲ್ಲಿ ಶಿರಸಿ ಒಂದು ಸಣ್ಣ ಹಳ್ಳಿ  ಯಾಗಿತ್ತು, ಜೊತೆಗೆ ಅದು "ಸೋಂದ   ತಹಸಿಲ್ದಾರ್ " ಅವರ ಅಧಿಕೃತ  ನಿವಾಸ ಸ್ಥಳವಾಗಿತ್ತು . ೧೮೫೯ ರಲ್ಲಿ  ಶಿರಸಿ ಎಂದು ಈ ತಾಲೂಕನ್ನು ಕರೆದು ತಾಲೂಕು ಕೇಂದ್ರವನ್ನಾಗಿ ಮಾಡಲಾಯಿತು, ೧೯೫೬ ರಲ್ಲಿ  ಇದನ್ನು ಉಪವಿಭಾಗ ಕೇಂದ್ರವನ್ನಾಗಿ   ಉನ್ನತೀಕರಣ ಮಾಡಲಾಯಿತು .  ಹಿಂದಿನ ಕಾಲದಲ್ಲಿ ಶಿರಸಿಯಲ್ಲಿ ಕೋಟೆ ಇದ್ದು ಅದನ್ನು  ಸೊಂದೆಯ  ರಾಮಚಂದ್ರ ನಾಯಕ [ ೧೬೦೨-೧೬೧೦] ನಿರ್ಮಿಸಿ, ಈ ಊರನ್ನು  "ಚೆನ್ನಪಟ್ಟಣ"  ವೆಂದು ಕರೆಯುತ್ತಾನೆ .  ಈ ಊರಿನ ಅತ್ಯಂತ  ಹಳೆಯ ದೇವಾಲಯ  ವಿಜಯನಗರ ಕಾಲದ  ಗಣಪತಿ ಹಾಗು ಶಂಕರ ದೇವಾಲಯ ಎಂದು ತಿಳಿದುಬರುತ್ತದೆ ಅಂದಿನ ಕಾಲಕ್ಕೆ ಶಂಕರ ದೇವಾಲಯ ಶಿಥಿಲಾವಸ್ತೆ ಕಂಡಿತ್ತು, ಅದರ ಸಮೀಪವಿದ್ದ ಕೊಳವನ್ನು  "ಶಂಕರ ತೀರ್ಥ"  ಎಂದು ಕರೆಯಲಾಗುತ್ತಿತ್ತು. ಆ ನಂತರದ ಕಾಲದಲ್ಲಿ ನಿರ್ಮಾಣ ಗೊಂಡವು ಮಾರಿಕಾಂಬ, ವೀರಭದ್ರ, ಈಶ್ವರ , ಹಾಗು ಪಾರ್ಶ್ವನಾಥ ಬಸದಿ  , ಮಾರಿಕಾಂಬ ದೇವಾಲಯ ನಿರ್ಮಾಣ ೧೬೮೯ ರ ಕಾಲದಲ್ಲಿ ಆಯಿತು,  ಶಿರಸಿಯಿಂದ ಹಾನಗಲ್ ಕಡೆಗೆ ಹೋಗುವ ಹಾದಿಯಲ್ಲಿನ  ಒಂದು ಕೊಳದ ಬಳಿ  ಒಂದು ಎಂಟು ಅಡಿಯ ದೇವಿಯ ಕಟ್ಟಿಗೆಯ ಮೂರ್ತಿ ಸಿಕ್ಕುತ್ತದೆ. ಆ ಸಮಯದಲ್ಲಿ  ಶಿರಸಿಯು ಒಂದು ಕುಗ್ರಾಮವಾಗಿ ಸೋಂದೆ ರಾಜರ ಆಡಳಿತಕ್ಕೆ ಒಳಪಟ್ಟಿರುತ್ತದೆ.  ಆಗ  ಸೋಂದೆ ರಾಜರಾಗಿದ್ದ "ಇಮ್ಮಡಿ ಸದಾಶಿವರಾಯ " [1678-1718,] ರ  ಕಾಲದಲ್ಲಿ ಅವರ ಅನುಮತಿ ಪಡೆದು  1689 ರಲ್ಲಿ ಶಿರಸಿಯ "ಮಾರಿಕಾಂಬೆ"  ಯ  ದೇವಾಲಯ ನಿರ್ಮಾಣ ಮಾಡುತ್ತಾರೆ. "ಮಾರಿಕಾಂಬೆ"  ಯನ್ನು ಗ್ರಾಮ ದೇವತೆಯಾಗಿ ಸ್ವೀಕರಿಸಿದ ಶಿರಸಿ ಗ್ರಾಮದ  ಭಕ್ತರು  ತಮ್ಮ  ಯಜಮಾನರುಗಳ  ನೇತೃತ್ವದಲ್ಲಿ ದೇವಾಲಯದ ಆಡಳಿತ ನಡೆಸಿಕೊಂಡು ಬರುತ್ತಾರೆ. 1850 ರಿಂದ 1875 ರವರೆಗಿನ ಬ್ರಿಟೀಶ್  ಆಡಳಿತ  ಅವಧಿಯಲ್ಲಿ  ದೇವಾಲಯಕ್ಕೆ ದೇವಾಲಯಕ್ಕೆ ಗರ್ಭಗುಡಿ, ಚಂದ್ರ ಶಾಲೆ, ಗೋಪುರ , ಮಹಾದ್ವಾರ  ಮುಂತಾದವುಗಳನ್ನು ನಿರ್ಮಾಣ  ಮಾಡಿದ್ದಾರೆ.ಮಾರಿಕಾಂಬೆ  ದೇಗುಲದ  ಸಮೀಪದಲ್ಲಿ  ತ್ರಯಂಬಕೇಶ್ವರ  ದೇವಾಲಯವಿದೆ . ಜೊತೆಗೆ ಇಲ್ಲೇ ಸಮೀಪದಲ್ಲಿ ಎರಡು  ಹನುಮಾನ್ ದೇವಾಲಯಗಳೂ ಸಹ ಇವೆ.




 ಶಿರಸಿಯಲ್ಲಿ ಜೈನ ಬಸದಿ ಗಳೂ ಸಹ ಇವೆ  ಬಸ್ತಿ ಗಲ್ಲಿಯಲ್ಲಿನ  ಪಾರ್ಶ್ವನಾಥ ಬಸದಿ ಐತಿಹಾಸಿಕವಾದದ್ದು,  ಇದನ್ನು ೧೮೦೦ ರರಲ್ಲಿ "ಆಲೂರ್ ಪದ್ಮಪ್ಪ"   ಎಂಬುವರು  ಸ್ಥಾಪಿಸುತ್ತಾರೆ . ಮತ್ತೊಂದು ಸುಮಾರು ಒಂದು ನೂರುವರ್ಷದ ಬಸದಿ  ಖಾಸಗಿ ಮಿಲ್  ಸಮೀಪವಿದೆ , ಇಲ್ಲಿನ ಕಲ್ಲಿನ  ಮೂರ್ತಿ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲ, ಶಿರಸಿಯಲ್ಲಿ "ಉನ್ನಿ ಮಠ", ಬಣ್ಣದ ಮಠ,[ ಚೌಕಿ ಮಠ]  ಹಾಗು "ಶಾಂತ ವೀರ ಸ್ವಾಮೀ ಮಠ" ಇವುಗಳು  ಬಹಳ ಕಾಲದಿಂದಲೂ ನೆಲಸಿವೆ. ಮೂರು ಮಸೀದಿಗಳು   ಸುಲ್ತಾನ್  ಎ  ಹನೀಫಿ , ಮದೀನ ಹನೀಫಿ, ಹಾಗು ಅಹಲೇ ಹದೀಸ  ನೆಲೆ ಕಂಡಿವೆ . ೧೮೭೭ ರಲ್ಲಿ ಸುಲ್ತಾನ್ ಶರೀಫ್ ಎಂಬ  ಟಿಪ್ಪುವಿನ  ಸಾಮಂತ   ಶಿರಸಿಯ "ಚನ್ನಪಟ್ಟಣ   ಬಜಾರ್ "  ನಲ್ಲಿ   "ಅಹಲೇ ಹದೀಸ " ಮಸೀದಿ ನಿರ್ಮಿಸಿದ್ದು ಇದು ಶಿರಸಿ ಟಿಪ್ಪುವಿನ  ಆಡಳಿತಕ್ಕೆ  ಒಳಪಟ್ಟ ಬಗ್ಗೆ ಮಾಹಿತಿ ನೀಡುತ್ತದೆ .  ಶಿರಸಿಯಲ್ಲಿ ೧೮೪೮ ರಲ್ಲಿ ರೋಮನ್ ಕ್ಯಾಥೊಲಿಕ್  ಚರ್ಚ್  ನಿರ್ಮಾಣವಾಯಿತು ಅದನ್ನು  ಸಂತ ಅಂತೋನಿ ಚರ್ಚ್  ಎಂದೂ ಸಹ ಕರೆಯುತ್ತಾರೆ. ಬ್ರಿಟೀಷರ ಒಂದು ಸೈನಿಕ ಪಡೆ ಇಲ್ಲಿ ನೆಲೆಗೊಂಡಿತ್ತು ಹಾಗಾಗಿ ಶಿರಸಿ ಬ್ರಿಟೀಶ್ ಸೈನಿಕ ಕೇಂದ್ರವೂ ಸಹ ಆಗಿತ್ತು.  ೧೮೩೧ ರಲ್ಲಿ ಬ್ರಿಟೀಷರ ವಿರುದ್ದ  ಶಿರಸಿಯಲ್ಲಿ ದಂಗೆ ಆಗಿತ್ತೆಂದು  ಮಾಹಿತಿಯಿಂದ   ತಿಳಿಯುತ್ತಿದೆ , ಶಿರಸಿ ಕುಮಟಾ ರಸ್ತೆಯಲ್ಲಿ ಮೂರು ಕಿ.ಮಿ ದೂರದ ಕಲ್ಕುಣಿ  ಎಂಬಲ್ಲಿ ಸೋಮೇಶ್ವರ ದೇವಾಲಯವಿದ್ದು  ಅಲ್ಲಿರುವ ಸಂಸ್ಕೃತ  ಶಾಸನ ಹಾಗು ಮಹಾಸತಿ  ಕಲ್ಲು ಇರುವುದಾಗಿ ತಿಳಿದು ಬರುತ್ತದೆ. ಒಟ್ಟಿನಲ್ಲಿ ಶಿರಸಿ ಪಟ್ಟಣ  ಎಲ್ಲಾ  ಧರ್ಮಗಳಿಗೂ  ಆಶ್ರಯ  ನೀಡಿತ್ತು .







ಇಷ್ಟೆಲ್ಲಾ ಇರುವ ಶಿರಸಿಯಲ್ಲಿ ನಡೆದ  ಐತಿಹಾಸಿಕ ಘಟನೆ  ಇಲ್ಲಿದೆ ನೋಡಿ ಆಗ ನಮ್ಮ ದೇಶದಲ್ಲಿ  "ಮಹಾತ್ಮಾ ಗಾಂಧೀ ಜಿ"  ಯವರ ಅಲೆ ಎದ್ದಿದ್ದ ಕಾಲ..ಗಾಂಧೀಜಿ ತತ್ವಗಳು ಹಳ್ಳಿ ಹಳ್ಳಿಗೂ ಮುಟ್ಟುತ್ತಿದ್ದವು,ಇವುಗಳಿಂದ  ಪ್ರಭಾವಿತರಾಗಿ  ಹಲವು ಜನ ಅಹಿಂಸಾ ವಾದದತ್ತ  ಸಮಾಜವನ್ನು ಕೊಂಡೊಯ್ಯಲು ಪ್ರಯತ್ನಿಸಿದರು . ಆಗ ಶಿರಸಿಯಲ್ಲಿ ಕಾಣಿಸಿದವರೆ  ಎಸ.ಏನ್.ಕೆಶ್ವಿನ್ [S.N Keshwain] ರವರು ಮೊದಲು ಶಿರಸಿಯ ಮಾರಿಕಾಂಬೆ ದೇವಾಲಯದಲ್ಲಿ ಪ್ರಾಣಿ ಬಲಿ  ನಿಲ್ಲಿಸಲು  ನಿರ್ಧರಿಸಿದರು.ಜೊತೆಗೆ ಅಂದಿನ ದಿನಗಳಲ್ಲಿ  ಇವರೇ ದೇವಾಲಯದ ಮುಖ್ಯ ಟ್ರಸ್ಟಿ ಆಗಿದ್ದರು,  ಇವರ ಜೊತೆ ಸಾಥ್ ನೀಡಿದ್ದು ಮತ್ತೊಬ್ಬ   ಗಾಂಧೀವಾದಿಯಾಗಿದ್ದ  ಶ್ರೀ ವಿಟ್ಟಲ್ ರಾವ್  ಹೊದಿಕೆ   {vitthal rao hodike} .ವೃತ್ತಿಯಿಂದ ಉಪಾಧ್ಯಾಯರಾಗಿದ್ದ ಶ್ರೀ ವಿಟ್ಟಲ್ ರಾವ್  ಹೊದಿಕೆ   ರವರು ಪ್ರಾಣಿ ಬಲಿ   ವಿರುದ್ಧ ಜನ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಹೊತ್ತರು. S.N Keshwain   ರವರು ಪ್ರಾಣಿ  ಬಲಿಗೆ ತಂದಿದ್ದ  ಕೋಣವನ್ನು  ಬಲಿ ಕೊಡುವ ದಿನದ  ಹಿಂದಿನ  ರಾತ್ರಿ ಅಪಹರಿಸಿ  , ಬಲಿಯನ್ನು ತಪ್ಪಿಸುತ್ತಾರೆ. ಕೋಪಗೊಂಡು ಗಲಾಟೆ ಮಾಡಲು ಸಿದ್ದವಾಗಿದ್ದ  ಅಪಾರ ಸಂಖ್ಯೆಯ  ಭಕ್ತರನ್ನು ತನ್ನ ಅಸಾಧ್ಯ  ಧೈರ್ಯ  ಹಾಗು ಜಾಣ್ಮೆಯಿಂದ ಸಮಾಧಾನ ಪಡಿಸಿ ಮೊದಲ ಹೆಜ್ಜೆ ಇಡುತ್ತಾರೆ. 1933 ರಲ್ಲಿ  ಮಹಾತ್ಮಾ ಗಾಂಧೀಜಿ ಯವರು ಶಿರಸಿಗೆ ಆಗಮಿಸಿದಾಗ  ಶಿರಸಿಯ ಮಾರಿಕಾಂಬೆ ದೇಗುಲದಲ್ಲಿ ಪ್ರಾಣಿ ಬಲಿ ನೀಡುವ ವಿಚಾರ ತಿಳಿದು  ಆ ದೇವಾಲಯಕ್ಕೆ ಬರಲು ನಿರಾಕರಿಸುತ್ತಾರೆ. ಇದರಿಂದ ನೊಂದ ಶಿರಸಿಯ ನಾಗರೀಕ ಜನತೆ ಮಾರಿಕಾಂಬೆ ದೇವಾಲಯದಲ್ಲಿ ಪ್ರಾಣಿ ಬಲಿ ಕೊಡುವುದನ್ನು  ನಿಲ್ಲಿಸಲು ಮನಸು ಮಾಡಿ  ಅದರಲ್ಲಿ ಯಶಸ್ವಿಯಾಗುತ್ತಾರೆ.

ಶಿರಸಿಯ  ಪುರಸಭೆ  ೧೮೬೬ ರಲ್ಲಿ ಅಸ್ತಿತ್ವಕ್ಕೆ ಬರುತ್ತದೆ. ೧೮೮೫ ರಲ್ಲಿ  ಪುರಸಭೆಗೆ ಪ್ರಥಮವಾಗಿ ಚುನಾವಣೆ  ನಡೆದು ಆರು ಜನ ಪುರಸಭ ಸದಸ್ಯರು ಆಯ್ಕೆಯಾಗುತ್ತಾರೆ. ೧೮೮೯-೯೦ ನೆ ಸಾಲಿನಲ್ಲಿ ಶಿರಸಿಯಲ್ಲಿ ಮನೆ ಕಂದಾಯ ನಿಗಧಿ ಮಾಡಲು ಪುರಸಭೆ  ಪ್ರಾರಂಭಿಸುತ್ತದೆ . ೧೯೬೨-೬೩ ನೆ ಸಾಲಿನಲ್ಲಿ ಶಿರಸಿಯ ಪಟ್ಟಣ ವ್ಯಾಪ್ತಿ ಹೆಚ್ಚಿಸಲು  "ಮರಾಟಿ ಕೊಪ್ಪ " ಬಡಾವಣೆ  ನಿರ್ಮಾಣ ಆಗುತ್ತದೆ .  ೧೯೬೯ ರಲ್ಲಿ ಶಿರಸಿಗೆ ಕುಡಿಯುವ ನೀರು ಯೋಜನೆ ಶುರುವಾಗಿ, ಪಟ್ಟಣದಿಂದ ಎಂಟು ಕಿ.ಮಿ  ದೂರದಲ್ಲಿರುವ "ಕೆಂಗ್ರೆ ನಾಲೆ " ಯಿಂದ ಪಟ್ಟಣಕ್ಕೆ ಕುಡಿಯುವ ನೀರು ತರಲಾಗುತ್ತದೆ . ಶಿರಸಿಯ ಪಂಡಿತ್ ಕಾಟೇಜ್  ಆಸ್ಪತ್ರೆ  ೧೮೬೬ ರಲ್ಲಿ  ಪ್ರಾರಂಭವಾಯಿತು . ೧೯೬೫ ರಲ್ಲಿ ಇದನ್ನು ಸರ್ಕಾರದ ವಶಕ್ಕೆ  ನೀಡಲಾಯಿತು . ೧೯೪೯ ರ ವರೆಗೂ ಶಿರಸಿಯಲ್ಲಿ  ವಿದ್ಯುತ್ ದೀಪ ಇರಲಿಲ್ಲ, ಕೆನರಾ ಪವರ್ ಸಪ್ಲೈ ಕಂಪನಿ  ಸಹಯೋಗದೊಂದಿಗೆ ೧೯೫೦-೫೧ ರಲ್ಲಿ  ಶಿರಸಿ ಪಟ್ಟಣಕ್ಕೆ   ವಿದ್ಯುತ್ ದೀಪಗಳ  ಆಗಮನವಾಗುತ್ತದೆ.  ಇವಿಷ್ಟೂ ಶಿರಸಿ ಪಟ್ಟಣದ ಬೆಳವಣಿಗೆಯ  ಪ್ರಮುಖ ಹಂತಗಳು . ಮುಂದೊಮ್ಮೆ  ಇವುಗಳು ಮರೆತು ಹೋಗುವ ಮುನ್ನ  ಇವುಗಳನ್ನು ನೆನಪಿತ್ತು ಕೊಳ್ಳುವ ಕಾರ್ಯ ನಮ್ಮೆಲ್ಲರದಾಗಬೇಕು .




ಹೀಗಾಗಿ ಶಿರಸಿಯ ಬಗ್ಗೆ  ಎಷ್ಟೊಂದು ವಿಚಾರಗಳು  ನಮ್ಮ ಸುತ್ತ  ಹರಡಿವೆ, ಕರ್ನಾಟಕದ  ಐತಿಹಾಸಿಕ ಹಿನ್ನೆಲೆ ಹೊಂದಿದ ಈ ಊರು ಬ್ರಿಟೀಷರ ಕಾಲದಲ್ಲಿ  '' ಶ್ರೀ ಗಂಧದ  ಕೋಟಿ ''  ಇಲ್ಲಿದ್ದು  ಈ ಊರು  ಸಿರಿಗಂಧದ  ಪರಿಮಳ ನೀಡಿದ ಊರಾಗಿತ್ತು . ಶಿರಸಿ  ನನಗೆ  ಜನುಮ ನೀಡಿದ ಊರು ಅಲ್ಲದಿದ್ದರೂ ಯಾವ ಕಾರಣಕ್ಕೋ  ನನಗೆ ಅರಿವಿಲ್ಲದಂತೆ   ಕಾಡುತ್ತದೆ,  ಅರೆ ಹೊರಗಿನವನಾದ ನನಗೆ ಇಷ್ಟು  ಹೆಮ್ಮೆಯಾದರೆ  ಇನ್ನು  ನಿಮಗೆ  ಎಷ್ಟು ಹೆಮ್ಮೆ ಆಗುತ್ತೆ ಆಲ್ವಾ ..? ಅದಕ್ಕೆ ಹೇಳಿದ್ದು ಶಿರಸಿಯವರೇ ನಿಮ್ಮ ಊರಿನ ಬಗ್ಗೆ ಹೆಮ್ಮೆ ಪಡಿ .    



ಈ ಲೇಖನದಲ್ಲಿ  ನನಗೆ ದೊರೆತ ಅದಿಕೃತ ಮಾಹಿತಿ ಅಷ್ಟೇ ಇದೆ.  ಯಾರಾದರು ಹೆಚ್ಚಿನ ಮಾಹಿತಿ ಇದ್ದಲ್ಲಿ, ಇಲ್ಲಿರುವ ಮಾಹಿತಿ ತಪ್ಪಾಗಿದ್ದಲ್ಲಿ,  ಮಾಹಿತಿ ಹಾಗು ದಾಖಲೆ ನೀಡಿದರೆ ಅದನ್ನು ಸರಿಪಡಿಸಲು ಸಹಕಾರಿಯಾಗುತ್ತದೆ. ಅಲ್ಲಿಯವರೆಗೆ ಈ ಮಾಹಿತಿ  ಸತ್ಯವೆಂದು ತಿಳಿಯಬಹುದಾಗಿದೆ .ತಾಳ್ಮೆ ಯಿಂದ ಓದಿದ ನಿಮಗೆ ಥ್ಯಾಂಕ್ಸ್




8 comments:

Srikanth Manjunath said...

ಒಂದು ಊರಿನ ಬಗ್ಗೆ ಇತಿಹಾಸ ಅಗೆದಷ್ಟು ಹೊರಗೆ ಬರುತ್ತದೆ.. ಗಂಧದ ಪರಿಮಳ ತೇದಷ್ಟು ಘಮಗುಟ್ಟುವಂತೆ ಮಾಹಿತಿಗಳು ಮೊಗೆದಷ್ಟು ಮಧುರ ಎನ್ನಿಸುತ್ತದೆ. ಬ್ಲಾಗ್ ಲೋಕದ ಸಂಪರ್ಕ ದೊರೆಯದೆ ಇದ್ದರೂ ಈ ಸ್ಥಳ ಜಲಪಾತಗಳ ನಾಡು ಎಂದು ಹೆಸರಾಗಿದ್ದ ಕಾರಣ ಮನಸ್ಸೆಳೆಯುತ್ತಿತ್ತು.. ಆದ್ರೆ ಮನೆ ಮನ ತುಂಬಿದ ಅನೇಕ ಪುಟ್ಟ ಪುಟ್ಟ ತಂಗಿಯರು.. ಸ್ನೇಹಿತರು ಈ ನಾಡಿನಿಂದ ಸಿಕ್ಕವರು ಅನ್ನುವ ಕಾರಣಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ.

ಸುಂದರ ಮಾಹಿತಿ ಬಾಲೂ ಸರ್.. ಓದಿ ಮರೆತು ಮತ್ತೆ ಅದರ ಬಗ್ಗೆ ಮಾತಾಡುವಾಗ ಎಲ್ಲೋ ಓದಿದ್ದ ನೆನಪು ಎಂದು ಇಲ್ಲದ ತಲೆ ಮತ್ತು ಕೂದಲನ್ನು ಕೆರೆಯುವ ಪರಿಸ್ಥಿತಿ ಬರಲಾರದು ನಿಮ್ಮ ಈ ಸುಂದರ ಮಾಹಿತಿ ಖಣಜ ಓದಿದಾಗ. ನಿಮ್ಮ ಇತಿಹಾಸ ತಿಳಿಯುವ ಹಸಿವು ಅದನ್ನು ಹಂಚುವ ರೀತಿ.. ನೀವು ಬರಿ ನಮ್ಮೊಳಗೇ ಒಬ್ಬ ಬಾಲೂ ಅಲ್ಲ.. ನಾವೆಲ್ಲರೂ ನಿಮ್ಮೊಳಗೆ ಅನ್ನುವ ಭಾವ ಬರಿಸುತ್ತದೆ..

ಹೃದಯಪೂರ್ವಕ ಅಭಿನಂದನೆಗಳು.. ಮತ್ತು ಧನ್ಯವಾದಗಳು

ಚಿನ್ಮಯ ಭಟ್ said...

ಬಾಲು ಸರ್...
ಏನೆಂದು ಹೆಸರಿಡಲಿ ಈ ಚಂದ ಅನುಭವಕೆ...

"ಧನ್ಯೋಸ್ಮಿ " ಅಷ್ಟೇ...ಇನ್ನೇನು ಹೊಳೆಯುತ್ತಿಲ್ಲ...
ಚೆನ್ನಪಟ್ಟಣ ಬಜಾರ ಎಂದು ಕರೆಯುವುದು ಗೊತ್ತಿತ್ತೇ ಹೊರತು ಇದರ ಹಿಂದಿನ ಚರಿತ್ರೆ ಗೊತ್ತಿರಲಿಲ್ಲ....

ಈ ಲೇಖನ ಓದಿ ನನಗನ್ನಿಸಿದ್ದು ಇಷ್ಟೇ..
"ಶಿರಸಿಯವರಾಗಿ,ಶಿರಸಿಯನ್ನು ಪ್ರೀತಿಸುವವರಾಗಿ ಇದನ್ನು ಓದದಿದ್ದರೆ ಶಿರಸಿಯ ಬಗ್ಗೆ ಏನನ್ನೋ ಕಳೆದುಕೊಂಡಂತೆ.."

ಧನ್ಯವಾದ
ಧನ್ಯವಾದ
ಧನ್ಯವಾದ...

Santosh Hegde Ajjibal said...

Baalu sir

lekhana tumba channagide danyavaadagalu

Badarinath Palavalli said...

ಶಿರಸಿಯು ಮೊದಲಿಂದಲೂ ತನ್ನ ಐತಿಹ್ಯಕ್ಕೆ ಪ್ರಸಿದ್ದಿ ಹೊಂದಿದ ಕ್ಷೇತ್ರ.
ಶಿರಸಿ ಮತ್ತು ಅದರ ಸುತ್ತಮುತ್ತಲಿನ ಕ್ಷೇತ್ರಗಳ ಬಗ್ಗೆ ಒಳ್ಳೆಯ ಸಮಗ್ರ ಪ್ರವೇಶ ಲೇಖನವಿದು.
ಕೆಶ್ವಿನ್ ಅವರ ಕಾಳಜಿ ಮೆಚ್ಚತಕ್ಕದ್ದು.
ಇಂತಹ ಒಳ್ಳೆಯ ಲೇಖನಕ್ಕಾಗಿ ತಮಗೆ ಮಾರಿಕಾಂಬೆಯ ಸಂಪೂರ್ಣ ಆಶೀರ್ವಾದವಿದೆ.

Unknown said...

ಬಾಲಣ್ಣಾ...
ಶಿರಸಿ ಅನ್ನೋ ಹೆಸರನ್ನಾ ಯಾರೇ ಹೇಳಿದ್ರೂ ಕಿವಿ ನೆಟ್ಟಗಾಗುತ್ತೆ ನಂಗೆ...ನನ್ನೂರು ಶಿರಸಿಯ ಪಕ್ಕದ ಊರಾದ್ರೂ ಇದ್ದಿದ್ದು ಇರೋದು ಎಲ್ಲವೂ ಶಿರಸಿಯೇ..ನಿಜ್ವಾಗ್ಲೂ ಶಿರಸಿಯ ಬಗ್ಗೆ ಇರೋ ಈ ಯಾವ ಇತಿಹಾಸವೂ ಗೊತ್ತಿರಲಿಲ್ಲ ನಂಗೆ!!

ಥಾಂಕ್ಸ್ ಫಾರ್ ದಿಸ್ ವಂಡರ್ ಫುಲ್ ಗಿಫ್ಟ್ :)
ಶಿರಸಿಯವಳು ಅನ್ನೋ ಹೆಮ್ಮೆಯಿಂದ...
ಖುಷಿಯಾಯ್ತು

Nagaraj said...

super article sir. sirsi avne aadroo, sirsi bagge thumba information gottirlilla. Thanks for sharing and it was really a worth read .

Regards
Nagaraj Hegde

bilimugilu said...

Gud1 Balu Sir,
Charitrena bagedu aredu nammellarigoo tiLisuva nimma ee kaayaka bahala ishtavaagide :)....
Vistaaravaagide maahiti, heLida reethi... thank you balu sir.

ಪದ್ಮಾ ಭಟ್ said...

ಬಾಲೂ ಸರ್...
ಶಿರಸಿಯ ಬಗ್ಗೆ ಓದುತ್ತ ಓದುತ್ತ ತುಂಬಾ ಖುಷಿಯಾಗಿದ್ದಂತೂ ಹೌದು..ಇತಿಹಾಸದ ಪುಟಗಳನ್ನು ನಿಮ್ಮ ಬ್ಲಾಗಿನಲ್ಲಿಯೇ ಓದೋ ಸಂಭ್ರಮ ನೋಡಿ..