ಬನ್ನಿ ನಮ್ಮ ಜೊತೆ |
ನಮಸ್ಕಾರ ಬಹಳ ದಿನಗಳ ನಂತರ ಭೇಟಿ ನಮ್ಮದು, ಈ ಸರಕು ಬಹಳ ತಿಂಗಳಿನದು , ಹೌದು ಸಾರ್ ಹಳೆಯ ಅಕ್ಕಿ ಯಿಂದ ಮಾಡಿದ ಅನ್ನ ಬಹಳ ರುಚಿ ನಿಮಗೆ ಗೊತ್ತಲ್ಲ, , ಹಾಗೆ ನನ್ನ ಪ್ರವಾಸದ ನೆನಪು ಕೂಡ ಸುಮಾರು ಒಂದೂವರೆ ವರ್ಷದ್ದು , ಬನ್ನಿ ಜಾರೋಣ ನೆನಪಿಗೆ
ಒಂದು ದಿನ ಮನೆಯಲ್ಲಿ ಕುಳಿತವನಿಗೆ ಯಾಕೋ ಬೇಸರ, ಮೂಲೆಯಲ್ಲಿ ಕುಳಿತಿದ್ದ ಕ್ಯಾಮರ ಮುನಿಸಿಕೊಂಡಿತ್ತು, ಬಾರಯ್ಯ ಎಲ್ಲಾದರೂ ಹೋಗೋಣ ಅಂತಾ ಮಗನನ್ನು ಕರೆದರೆ ನನಗೆ ಪರೀಕ್ಷೆ ಇದೆ ಬರಲ್ಲಾ ಎಂಬ ಉತ್ತರ, ಹೆಂಡತಿ ಅಯ್ಯೋ ಅವನಿಗೆಪರೀಕ್ಷೆ ಇದ್ಯಂತೆ ನಾನು ಬರಲ್ಲಾ ಅಂತಾ ಅವಳಿಗೆ ಪರೀಕ್ಷೆ ಬಂದಂತೆ ಆಡಿದಳು , ಇನ್ನು ಅಮ್ಮ ಪಾಪ ನೀನು ಎಲ್ಲಾದರು ಹೋಗಿ ಬಾ ಮನಸಿಗೆ ಖುಷಿಯಾಗುತ್ತೆ, ಅನ್ನುತ್ತಾ ಪ್ರೇರಣೆ ನೀಡಿದರು, ಅಮ್ಮನ ಮಾತಿಗೆ ನನ್ನ ಪತ್ನಿ ಮಗನ ಹಿಮ್ಮೇಳ ಬೇರೆ, ಎಲ್ಲರೂ ಸೇರಿ ನನ್ನನ್ನು ಆಚೆ ಕಳುಹಿಸಲು ಪ್ಲಾನ್ ಮಾಡಿದಂತೆ ಅನ್ನಿಸಿತು, ಹ ಹ ಆದರೆ ಆದರ ಹಿಂದೆ ಎಲ್ಲರಿಗೂ ನನ್ನ ಬಗ್ಗೆ ಕಾಳಜಿ ಇತ್ತು,
ಗಿರಿ ಶಿಖರ ದ ಒಂದು ನೋಟ ಕ್ಯಾಮರದಲ್ಲಿ |
ಎಲ್ಲಿಗೆ ಹೋಗೋದು ಅನ್ನುತ್ತಾ ಯೋಚಿಸುತ್ತಾ ಇರಲು , ನಮ್ಮ ಗಿರೀಶ್ ಸೋಮಶೇಖರ್ ನೆನಪಾಗಿ ಫೋನ್ ಮಾಡಿದರೆ ಸಾರ್ ಬಹಳ ಖುಷಿಯಾಗುತ್ತೆ ಸಾರ್ ನಿಮಗೆ ಹೇಗೂ ಎರಡನೇ ಶನಿವಾರ, ಭಾನುವಾರ ಸೇರಿ ಎರಡುದಿನ ರಜೆ ಇರುತ್ತೆ ಬನ್ನಿ ನಾನೂ ನಿಮ್ಮ ಜೊತೆ ಬರುವೆ ಎಂಬ ಪ್ರೀತಿಯ ಆಮಂತ್ರಣ, ಕೊಟ್ಟರು
ಕಟ್ ಮಾಡಿದ್ರೆ ಗಿರೀಶ್ ನನ್ನ ಭೇಟಿ ಹಾಸನ ನಗರದ ಬಸ್ ನಿಲ್ದಾಣದಲ್ಲಿ , ನಗುಮುಖದಿಂದ ಬಂದವರು ಜೊತೆ ಗೂಡಿದರು, ಗೆಳೆಯನ ಹೊತ್ತ ಗೆಳೆಯನ ಕಾರು ಸಕಲೇಶಪುರಕ್ಕೆ ಓಡಿತು, ದಾರಿ ಸವೆಸುತ್ತಾ ಎರಡು ದಿನದಲ್ಲಿ ನೋಡಬೇಕಾದ ಸ್ಥಳಗಳ ಬಗ್ಗೆ ಒಂದು ಪಟ್ಟಿ ಸಿದ್ದಪಡಿಸಿದೇವು, ಮೊದಲು ಲಗ್ಗೆ ಇಟ್ಟ ಸ್ಥಳ ಅದ್ಭುತವಾದ ಇತಿಹಾಸವನ್ನು ತನ್ನೊಳಗೆ ಅಡಗಿಸಿಕೊಂಡ ಸಕಲೇಶಪುರದ ಮಂಜರಾಬಾದ್ ಕೋಟೆಗೆ .
ನಕ್ಷತ್ರ ಆಕಾರದಲ್ಲಿ ನಿರ್ಮಿತವಾದ ಕೋಟೆ ಗೂಗಲ್ ನಲ್ಲಿ ಕಂಡಂತೆ |
ಹೌದು ಬಹಳ ದಿನಗಳಿಂದ ಈ ಕೋಟೆ ನೋಡಬೇಕೆಂಬ ಆಸೆ ಇತ್ತು, ಹಿಂದೆ ಒಮ್ಮೆ ಬಂದಿದ್ದರೂ ಕ್ಯಾಮರ ಇಲ್ಲದೆ ಯಾವ ಚಿತ್ರವೂ ನನ್ನಲ್ಲಿ ಇರಲಿಲ್ಲ. ನಮ್ಮ ದೇಶದ ತಂತ್ರಜ್ಞಾನ ದಲ್ಲಿ ಮಹತ್ತರ ಪಾತ್ರ ವಹಿಸಬೇಕಾದ ಈ ಕೋಟೆ ತನ್ನ ಇತಿಹಾಸವನ್ನು ಬಿಟ್ಟು ಕೊಡದೆ ಹಸಿರ ಮರೆಯಲ್ಲಿ ಕೇವಲ ಪಿಕ್ನಿಕ್ ಜಾಗವಾಗಿ ಮಲಗಿದೆ.
ಶ್ರೀ ರಂಗಪಟ್ಟಣ ಆಳುತ್ತಿದ್ದ ಟಿಪ್ಪೂ ಸುಲ್ತಾನ 1784 ರ ಸುಮಾರಿನಲ್ಲಿ ಮಂಗಳೂರು ಪ್ರಾಂತದಲ್ಲಿ ಎದ್ದ ದಂಗೆ ಅಡಗಿಸಿ ಬರುವಾಗ ಈ ಆಯಕಟ್ಟಿನ ಪ್ರದೇಶದಲ್ಲಿ ರಕ್ಷಣೆ ಉದ್ದೇಶ ವ್ಯಾಪಾರಿ ಉದ್ದೇಶಕ್ಕಾಗಿ ಈ ನಕ್ಷತ್ರಾಕಾರದ ಕೋಟೆಯನ್ನು ಕಟ್ಟಿಸಿದನೆಂದು ತಿಳಿದು ಬರುತ್ತದೆ, ಇದರ ನಿರ್ಮಾಣ 1785 ರಲ್ಲಿ ಪ್ರಾರಂಭವಾಗಿ 1792 ರಲ್ಲಿ ಮುಕ್ತಾಯಗೊಂಡಿದೆ . 1792 ರಿಂದ ಇಂದಿನವರೆಗೂ ಸುಮಾರು ಎರಡು ಶತಮಾನ ಕಳೆದರು ನಿಸರ್ಗದ ಎಲ್ಲಾ ಬಗೆಯ ಸವಾಲು ಗಳನ್ನ ಎದುರಿಸಿ ನಿಂತಿದೆ .
ಮಂಜರಬಾದ್ ಕೋಟೆ ಕೊಡಗು ಹಾಗು ಮಂಗಳೂರು ಪ್ರಾಂತಕ್ಕೆ ಹೆಬ್ಬಾಗಿಲಿನಂತೆ ಆಗಿತ್ತು. |
ಅಂದಿನ ಐತಿಹಾಸಿಕ ರಕ್ಷಣೆಯ ದೃಷ್ಟಿಯಿಂದ ಬಹಳ ಆಯಕಟ್ಟಿನ ಜಾಗದಲ್ಲಿದ್ದ ಕೋಟೆ ಇದು, ಟಿಪ್ಪೂ ಸುಲ್ತಾನನಿಗೆ ತಲೆ ನೋವಾಗಿದ್ದ ಮಂಗಳೂರು, ಮಡಿಕೇರಿ ಪ್ರಾಂತದ ಮೇಲೆ ಹಿಡಿತ ಸಾಧಿಸಲು ಹಾಗು ಮಂಗಳೂರು ಮೂಲಕ ತನ್ನ ವ್ಯಾಪಾರ ವಹಿವಾಟನ್ನು ಮಾಡಲು ಅನುಕೂಲವಾಗುವಂತೆ ವ್ಯಾಪಾರ ಸಾಮಗ್ರಿಗಳನ್ನು , ರಕ್ಷಣೆಗಾಗಿ ಮದ್ದು ಗುಂಡುಗಳನ್ನು ಸಂಗ್ರಹ ಮಾಡಲು ಅನುಕೂಲವಾಗಿತ್ತು ಈ ಕೋಟೆ . ಬಯಲುಸೀಮೆ , ಯಿಂದ ಮಲೆನಾಡು , ಕರಾವಳಿ ಪ್ರದೇಶಕ್ಕೆ ಹೆಬ್ಬಾಗಿಲಿನಂತೆ ಈ ಕೋಟೆ ಕಾರ್ಯನಿರ್ವಹಣೆ ಮಾಡಿರುವುದು ಕಂಡು ಬರುತ್ತದೆ. ಈ ಕೋಟೆಯ ರಚನೆ ಹಿಡಿದೆ ಅಂದರೆ ವೈರಿಗಳ ಚಲನ ವಲನ ವೀಕ್ಷಣೆ ಹಾಗು ಅವರನ್ನು ಹತ್ತಿಕ್ಕಲು ಅನುಕೂಲವಾಗುವಂತೆ ವೈಜ್ಞಾನಿಕವಾಗಿ ಈ ಕೋಟೆ ನಿರ್ಮಾಣ ಆಗಿದೆ.
ಕೋಟೆಯ ಹೆಬ್ಬಾಗಿಲು |
ಕೋಟೆ ವಿಶೇಷವಾಗಿದ್ದು ಇದರಲ್ಲಿ ಇಂಡೋ ಸಾರ್ಸೆನಿಕ್ ಶೈಲಿಯ ಕಲೆ ಅನಾವರಣಗೊಂಡಿದ್ದು , ಸೂಕ್ಷ್ಮವಾಗಿ ಗಮನಿಸಿದರೆ ಕೋಟೆಯ ಹಲವು ಬಾಗಿಲುಗಳ ಕಾಮಾನಿನ ಮೇಲೆ ಸುಂದರ ಕಲೆ ಅನಾವರಣ ಆಗಿರುವುದನ್ನು ಗಮನಿಸಬಹುದು, ಇನ್ನೊಂದು ವಿಶೇಷ ಎಂದರೆ ಈ ಕೋಟೆಯ ನಿರ್ಮಾಣದಲ್ಲಿ ಗಾರೆ ಗಚ್ಚು, ಚಪ್ಪೆ ಇಟ್ಟಿಗೆ , ಕಲ್ಲು, ಮರ ಇಷ್ಟರ ಉಪಯೋಗ ಮಾತ್ರ ಆಗಿದೆ, ಕಬ್ಬಿಣದ ಉಪಯೋಗ ಬಹಳ ಕಡಿಮೆ ಆಗಿದೆ, ಕಮಾನು ಗಳ ನಿರ್ಮಾಣ ದಲ್ಲಿಯೂ ಸಹ ಕಬ್ಬಿಣದ ಉಪಯೋಗ ಆಗಿಲ್ಲ, ಚಪ್ಪಟೆಯಾದ ಇಟ್ಟಿಗೆ, ಗಾರೆ ಗಚ್ಚುವಿನಿಂದ ಕಮಾನುಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಇದರಲ್ಲಿ ಫ್ರೆಂಚ್ ತಂತ್ರಜ್ಞರ , ಹಾಗು ಸ್ಥಳೀಯ ತಂತ್ರಜ್ಞರ ಸಂಯೋಗದಲ್ಲಿ ತಾಂತ್ರಿಕವಾಗಿ ಬಲಿಷ್ಠ ಕೋಟೆ ರೂಪ ತಳೆದಿದೆ . ಕಟ್ಟಡ ತಂತ್ರಜ್ಞಾನ , ವಿನ್ಯಾಸ , ನಿರ್ಮಾಣ , ಜೊತೆಗೆ ಪರಿಸರ ನಿರ್ವಹಣೆ ಬಗ್ಗೆ ಇದನ್ನು ಉತ್ತಮ ಉದಾಹರಣೆ ಎಂದು ಪರಿಗಣಿಸಿ ಸಂಶೋಧನೆ ನಡೆಸ ಬೇಕಾಗಿದೆ .
ಮಂಜರಾಬಾದ್ ಕೋಟೆಗೆ ಇರುವ ಮೆಟ್ಟಿಲುಗಳು |
ಸಕಲೇಶಪುರದಿಂದ ಮಂಗಳೂರು ಹೆದ್ದಾರಿಯಲ್ಲಿ ಸಕಲೇಶಪುರದಿಂದ ಏಳು ಕಿಲೋಮೀಟರು ಕ್ರಮಿಸಿದರೆ ತಿರುವು ಸಿಗುತ್ತದೆ , ಅಲ್ಲಿಂದ ಸಾಗುವ ಕಾಲು ಹಾದಿಯಲ್ಲಿ ಕ್ರಮಿಸಿದರೆ ನಿಮಗೆ ಮೆಟ್ಟಿಲುಗಳ ದರ್ಶನ ಆಗುತ್ತದೆ, ಮೆಟ್ಟಿಲು ಹತ್ತಿ ಹೊರಟರೆ ನೀವು ಒಂದು ಬೆಟ್ಟದ ಮೇಲೆ ಸಮತಟ್ಟಾದ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ ೩೨೪೦ ಅಡಿ ಎತ್ತರದಲ್ಲಿರುತ್ತೀರಿ
ಅಲ್ಲಿದೆ ಈ ಮಂಜರಾಬಾದ್ ಕೋಟೆ, ಮಲೆನಾಡಿನ ಮಂಜಿನಿಂದ ಆವರಿಸುವ ಪ್ರದೇಶದಲ್ಲಿರುವ ಕಾರಣ ಇದನ್ನು ಮಂಜರಬಾದ್ ಎಂದು ಕರೆದರೂ ಎನ್ನುತ್ತಾರೆ. ಬನ್ನಿ ಮುಂದೆ ಹೋಗೋಣ
ಕೋಟೆಗೆ ತೆರಳುವ ಹಾದಿ |
ಸ್ಮಾರಕಗಳ ಬಳಕೆ ಇಂತಹ ಕಾರ್ಯಕ್ಕಾಗಿ ಮಾತ್ರ |
ಮೆಟ್ಟಿಲು ಹತ್ತಿ ಮಣ್ಣಿನ ಹಾದಿಯಲ್ಲಿ ನಡೆದ ನಾವು ಮುಂದೆ ಬಂದೆವು , ಅಲ್ಲಿಯೇ ಸಮೀಪದಲ್ಲಿ ಪ್ರವಾಸದ ನೆಪದಲ್ಲಿ ಬರುವ ನಮ್ಮವರು ಮಾಡುವ ಕೆಲಸದ ಗೋಚರವಾಯಿತು, ಹೌದು ನಾನು ಪ್ರತಿ ಪ್ರವಾಸಿ ತಾಣದಲ್ಲಿಯೂ, ಐತಿಹಾಸಿಕ ತಾಣಗಳಲ್ಲಿ ,ನೋಡುವ ದೃಶ್ಯ ಇಲ್ಲಿ ಮತ್ತೆ ಗೋಚರಿಸಿತು, ಇಂತಹ ಜಾಗಗಳು ಹೆಂಡ ಕುಡಿಯಲು, ಮೊಜುಮಾಡಲು , ಜೂಜಾಡಲು , ಅನೈತಿಕ ಚಟುವಟಿಕೆ ನಡೆಸಲು ಉತ್ತಮವಾದ ಜಾಗಗಳೆಂದು ನಮ್ಮ ನಾಗರೀಕ ಸಮಾಜದ ಪ್ರಭುಗಳು ನಿರ್ಧರಿಸಿ ಇಂತಹ ಕಾರ್ಯ ಮಾಡುತ್ತಾರೆ, ಅವಿಧ್ಯಾವಂತರ ಜೊತೆ ಆಧುನಿಕ ಪ್ರಪಂಚದ ಹೈ ಟೆಕ್ ವಿಧ್ಯೆ ಕಲಿತ ನಾವುಗಳೂ ಸಹ ಹೀಗೆ ನಡೆದುಕೊಂಡು ನಮ್ಮ ನಾಡಿಗೆ, ಸಂಸ್ಕೃತಿಗೆ ಪ್ರತಿನಿತ್ಯ ಅವಮಾನ ಮಾಡುತ್ತಿದ್ದೇವೆ .
ಹೆಬ್ಬಾಗಿಲಿನಲ್ಲಿ ಕಲೆಯ ಅನಾವರಣ |
ಕೋಟೆಯ ಕೀ ಪ್ಲಾನ್ ಇಲ್ಲಿದೆ ನೋಡಿ |
ಮುಂದೆ ಹೋರಟ ನಮ್ಮನ್ನು ಸುಂದರ ಕಲೆಯನ್ನು ಹೊತ್ತ ಹೆಬ್ಬಾಗಿಲು ಸ್ವಾಗತಿಸಿತು, ಹೌದು ಹೆಬ್ಬಾಗಿಲ ಕಮಾನಿನ ಮೇಲೆ ಸುಂದರ ಇಂಡೋ ಸಾರ್ಸೆನಿಕ್ ಶೈಲಿಯ ಕಲೆ ಅನಾವರಣ ಆಗಿತ್ತು, ಇಂತಹದೆ ಕಲೆಗಳನ್ನು, ಶ್ರೀರಂಗಪಟ್ಟಣ, ಮೈಸೂರಿನ ಸ್ಮಾರಕಗಳಲ್ಲಿ ಕಾಣಬಹುದು . ಹೆಬ್ಬಾಗಿಲು ಒಳಗೆ ಹೊಕ್ಕ ನನ್ನ ಕ್ಯಾಮರ ಒಮ್ಮೆ ಎಲ್ಲಾ ಕಡೆ ತಡಕಾಡಿತು, ಅರೆ ನನ್ನ ನೆತ್ತಿಯ ಮೇಲೆ ಇತ್ತು ಒಂದು ನಕ್ಷತ್ರ , ಅಚ್ಚರಿಯಿಂದ ಗಮನವಿಟ್ಟು ನೋಡಿದೆ, ಹೆಬ್ಬಾಗಿಲ ಚಾವಣಿ ಮೇಲೆ ಮೂಡಿಸಲಾಗಿತ್ತು, ಮಂಜರಾಬಾದ್ ಕೋಟೆಯ ವಿವರವಾದ ಕೀ ಪ್ಲಾನ್ , ಅಬ್ಬ ಎಂತಹ ಜನ ಸಾರ್ ಅಂದಿನವರು, ಆಲ್ವಾ, ಬಹುಷಃ ಇನ್ಯಾವರೀತಿ ಯಿಂದಲೂ ಎರಡು ಶತಮಾನ ಕಳೆದರೂ ಅಳಿಸಿ ಹೋಗದ ಒಂದು ಕೀ ಪ್ಲಾನ್ ಅನ್ನು ಹೀಗೆ ಸಂರಕ್ಷಿಸಲು ಅನುಕೂಲ ಆಗುವಂತೆ ರಚಿಸಿದ್ದಾರೆ. ಮನದಲ್ಲೇ ಅವರಿಗೆ ವಂದಿಸಿ ಮುಂದೆ ಹೊರಟೆವು
ಕೋಟೆಯ ಒಳ ಆವರಣ ಮ್ಯಾಗಜಿನ್ ಹೌಸ್ |
ಕೋಟೆಯ ಒಳ ಆವರಣ ನೀರು ಸಂಗ್ರಹಣೆ ಕೊಳ |
ಕೋಟೆಯ ಒಳ ಆವರಣಕ್ಕೆ ಬಂದ ನಮಗೆ ಕೋಟೆಯ ಒಳ ಸನ್ನಿವೇಶ ಗೋಚರ ಆಯಿತು, ಮದ್ದಿನ ಮನೆ , ಜನಗಳು ಉಳಿಯಲು ಅನುಕೂಲ ಆಗುವ ಗೃಹಗಳು, ವ್ಯಾಪಾರ ಸಾಮಗ್ರಿ ಶೇಖರಣೆ ಗೆ ಅನುಕೂಲ ವಾಗುವ ಕೋಣೆಗಳು , ನೀರು ಸಂಗ್ರಹಣೆಗೆ ಕೋಟೆಯ ಮದ್ಯ ಭಾಗದಲ್ಲಿ ಕೊಳ , ಸುತ್ತಲೂ ಅಬೇಧ್ಯ ಗೋಡೆಗಳು, ಕಾವಲು ಬುರುಜು, ಎಲ್ಲವನ್ನು ಅಲ್ಲಿ ದರ್ಶಿಸಿದೆವು. ಹಸಿರ ಸಿರಿಯ ನಡುವೆ ಈ ಕೋಟೆ ತನ್ನದೇ ಶೈಲಿಯಲ್ಲಿ ಮೆರೆದಿತ್ತು.
ಅ ಹೌದು ಅಲ್ಲಿದ್ದ ಮದ್ದು ಸಂಗ್ರಹಣ ಮನೆ [ ಮ್ಯಾಗಜಿನ್ ಹೌಸ್ ] ಬಗ್ಗೆ ವಿಚಾರದ ಅರಿವಿಲ್ಲದ ಕೆಲವು ಪ್ರವಾಸಿಗಳ ಚೆಲ್ಲಾಟಕ್ಕೆ ಬಲಿಯಾಗಿತ್ತು,ಈ ಮದ್ದಿನ ಮನೆಯ ವಿಶೇಷ ಎಂದರೆ ಯಾವುದೇ ಹವಾಮಾನ ಏರಿತಗಳನ್ನು ತಡೆದುಕೊಂಡು ಮದ್ದು ಗುಂಡುಗಳನ್ನು ಸಂರಕ್ಷಣೆ ಮಾಡಲು ಇಂತಹ ಮನೆಗಳ ನಿರ್ಮಾಣ ಆಗಿದೆ, ಪಿರಮಿಡ್ ಆಕೃತಿಯಲ್ಲಿ ರಚನೆಯಾಗಿರುವ ಇವುಗಳ ಒಳಗೆ ಹೊಕ್ಕರೆ ನಿಮಗೆ ಹವಾ ನಿಯಂತ್ರಿತ ಕೋಣೆಯ ಅನುಭವ ಆಗುತ್ತದೆ, ಚಳಿಗಾಲದಲ್ಲಿ ಕೊರೆಯುವ ಚಳಿಯಲ್ಲೂ ಬೆಚ್ಚನೆ ಅನುಭವ ನೀಡುವ ಇವು, ಬೇಸಿಗೆಯಲ್ಲಿ ಉರಿ ಬಿಸಿಲನ್ನು ನಿಗ್ರಹಿಸಿ ತಣ್ಣನೆಯ ಅನುಭವ ನೀಡುತ್ತವೆ, ಮಳೆಗಾಲದಲ್ಲಿ ಶೀತದಿಂದ ರಕ್ಷಣೆ ನೀಡುವ ಈ ಮದ್ದಿನ ಮನೆಯ ವಿಶೇಷ , ಇಂತಹ ಸುಮಾರು ಮದ್ದಿನ ಮನೆಗಳನ್ನು ಶ್ರೀ ರಂಗ ಪಟ್ಟಣ ಕೋಟೆಯ ಒಳಗೆ ಕಾಣಬಹುದು, ನಿರ್ಮಾಣ ಕ್ಷೇತ್ರದಲ್ಲಿ ಇಂದಿಗೂ ಇಂತಹ ಹವಾನಿಯಂತ್ರಿತ ಮದ್ದಿನ ಮನೆಗಳು ಇಂದಿನ ತಾಂತ್ರಿಕತೆಗೆ ಸವಾಲಾಗಿ ನಿಂತಿವೆ . ಸುಮಾರು ಒಂದು ಘಂಟೆಗೂ ಹೆಚ್ಚು ಹೊತ್ತು ಅಲ್ಲಿ ಕಳೆದ ನಾವು ಮುಂದಿನ ಹಾದಿ ಹಿಡಿಯಲು ಇತಿಹಾಸದ ಕೋಟೆಯಿಂದ ಹೊರಗೆ ಬಂದೆವು .
ಹಾದಿ ಬದಿಯಲ್ಲಿನ ಅಂಗಡಿಗಳು |
ಕೋಟೆಯಿಂದ ಮುಖ್ಯ ರಸ್ತೆಗೆ ಬಂದ ನಾವು ಕಂಡ ದೃಶ್ಯ ಒಮ್ಮೆ ನಗು ಬರಿಸಿತ್ತು, ಅತ್ತಾ ಇತಿಹಾಸ ನರಳುತ್ತಿದ್ದರೆ, ಇತ್ತ ಅದರ ಚಿಂತೆ ಇಲ್ಲದೆ ಸಮಾಜ ಯಾಂತ್ರಿಕ ಬದುಕಿನಲ್ಲಿ ಮುಳುಗಿ ಹೋಗಿತ್ತು, ಮಂಗಳೂರು, ಸಕಲೇಶ ಪುರ ರಸ್ತೆಯಲ್ಲಿ ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ವಾಹನಗಳು ಹರಿದಾಡುತ್ತಿದ್ದವು , ಅತ್ತ ಪ್ರವಾಸಿಗಳಿಗೆ ಕಾಯುತ್ತಾ ಕುಳಿತ ಅಂಗಡಿಯವರು ತಮ್ಮದೇ ಲೋಕದಲ್ಲಿ ಮುಳುಗಿದ್ದರು,
ಸದ್ದಿಲ್ಲದೇ ಜಾಗ ಖಾಲಿ ಮಾಡಿದ ನಾವು ಕಲ್ಲಿನಲ್ಲಿ ಕಲೆಯ ಅರಳಿಸಿ ಮೆರೆದಿಹ ಐತಿಹಾಸಿಕ ಊರಿಗೆ ಬಂದೆವು ನಮ್ಮನ್ನು ಸ್ವಾಗತ ಕೋರಿದ್ದು ಈ ಕಲ್ಲಿನ ಕುಟ್ಟಾಣಿ. ................................. ಕಲೆಯ ಸಾಮ್ರಾಜ್ಯದೊಳಗೆ ಹೋಗುತ್ತಿದ್ದ ನನಗೆ ರೋಮಾಂಚನ ಶುರು ಆಗಿತ್ತು. ................ ಮುಂದೆ???? ಎರಡನೇ ಕಂತಿನಲ್ಲಿ ಜೊತೆಯಾಗೊಣ
12 comments:
ಇದು ಒಂದು ಸುಂದರ ಕೋಟೆ.. (ಇದನ್ನು ಒಮ್ಮೆ ಭೇಟಿ ಮಾಡಿದಾಗ ನನ್ನ ಮಡದಿಯ ಒಂದು ಸುಂದರ ಚಿತ್ರವನ್ನು ಸೆರೆ ಹಿಡಿದಿದ್ದೆ.. ) ಮಾಹಿತಿಗೆ ತಡಕಾಡುತ್ತಿದ್ದೆ. ನಿಮ್ಮ ಬ್ಲಾಗ್ನಲ್ಲಿ ಬರುತ್ತೆ ಎನ್ನುವ ಕಾತುರತೆ ಇತ್ತು. ಸಂಪೂರ್ಣ ಮಾಹಿತಿ ಲಭ್ಯವಿದೆ ನಿಮ್ಮ ಬ್ಲಾಗ್ ನಲ್ಲಿ. ಒಂದು ಸುಂದರ ಸ್ಮಾರಕ ಮಾರಣಾಂತಿಕ ಸ್ಥಿತಿಗೆ ಬರಲು ಅಥವಾ ಪ್ರವಾಸಿಗರಿಗೆ ಸುರಕ್ಷಿತವಲ್ಲದ ತಾಣವಾಗಲು ನಾಗರೀಕ ಪ್ರಭುಗಳ ಸಹಕಾರ ಖಂಡಿತ ಇದೆ. ಸುಂದರಚಿತ್ರಗಳು , ಸುಂದರ ನಿರೂಪಣೆ ಮತ್ತೆ ಮುಂದಿನ ಭೇಟಿಯಲ್ಲಿ ಹೇಗೆ ಹೇಗೆ ತೆಗೆಯಬೇಕು ಎನ್ನುವ ಮಾಹಿತಿ ನಿಮ್ಮ ಲೇಖನದಲ್ಲಿ ಇದೆ. ಸೂಪರ್ ಸರ್ಜಿ.. ಗಿರಿಶಿಖರದ ಒಡೆಯನ ಜೊತೆಯಲ್ಲಿ ನಮ್ಮೆಲ್ಲರೊಳಗೆ ಒಬ್ಬರಾದ ನಿಮ್ಮ ಮುಂದಿನ ಕಂತಿಗೆ ಕಾಯುತ್ತಿರುವೆ..
ಬಾಲಣ್ಣ...
ನಮ್ಮ ಇತಿಹಾಸದ ಬಗೆಗೆ ನಮಗೆ ಪ್ರಜ್ಞೆಯೇ ಇಲ್ಲ...
ನಾನು ಗಲ್ಫ್ ದೇಶದಲ್ಲಿರುವಾಗ ..
ಅವರು
ಬಹಳ ಹೆಮ್ಮೆಯಿಂದ ಎಪ್ಪತ್ತೈದು... ನೂರು ವರ್ಷಗಳ ಇತಿಹಾಸವನ್ನು ಹೇಳಿಕೊಳ್ಳುತ್ತಿದ್ದರು..
ಅಲ್ಲಿನ ಮ್ಯೂಸಿಯಮ್ ಗಳಲ್ಲಿ ಅವರು ಉಪಯೋಗಿಸುವ ವಸ್ತುಗಳನ್ನು ಇಟ್ಟಿದ್ದರು..
ಎಪ್ಪತ್ತೈದು ವರ್ಷಗಳ ಇತಿಹಾಸ..
ನನ್ನಜ್ಜನ ಅಂಗಿಯನ್ನು ನಾವಿಟ್ಟುಕೊಂಡು ಹೆಮ್ಮೆ ಪಡುವ ಹಾಗೆ... !
ನಮ್ಮದು ಸಾವಿರಾರು ವರ್ಷಗಳ ಇತಿಹಾಸ !
ನಮಗೆ ಇತಿಹಾಸದ ಮಹತ್ವ ಗೊತ್ತಿಲ್ಲ ಅಷ್ಟೆ... !
ನಿಮ್ಮ ಕುತೂಹಲಕ್ಕೆ...
ಹುಡುಕಾಟದ ಮನೋಭಾವಕ್ಕೆ ನಮ್ಮೆಲ್ಲರ ಪ್ರೀತಿಯ ಜೈ ಹೋ !
ನಕ್ಷತ್ರ ಆಕಾರದಲ್ಲಿ ನಿರ್ಮಿತವಾದ ಕೋಟೆ ಅದ್ಭುತವಾಗಿದೆ ಸಾರ್.
ಆಗಿನ ಕಾಲದ ಮೂಲವಸ್ತುಗಳ ಬಳಕೆಯಲ್ಲಿದ್ದ ನಿಯತ್ತೇ ಈ ಕೋಟೆಯ 2 ಶತಮಾನಗಳ ಉಳಿಕೆಗೆ ಕಾರಣ.
'ಮಲೆನಾಡಿನ ಮಂಜಿನಿಂದ ಆವರಿಸುವ ಪ್ರದೇಶದಲ್ಲಿರುವ ಕಾರಣ ಇದನ್ನು ಮಂಜರಬಾದ್' ಎನ್ನುತ್ತಾರೆ interesting.
ಸ್ಮಾರಕಗಳನ್ನು ಮಲೀನಗೊಳಿಸುವ ಕಿಡಿಗೇಡಿಗಳಿಗೆ ನಮ್ಮ ದಿಕ್ಕಾರವಿದೆ.
ಮುಂದಿನ ಕಾಂತಿನ ನಿರೀಕ್ಷೆಯಲ್ಲಿ...
ಅಂದಹಾಗೆ ಕನ್ಯಾಪಿತೃಗಳಿಗಾಗಿ ನಮ್ಮ ಸುಂದರ Girish Somashekar ಅವರ ಒಂದು ಮುದ್ದಾದ ಚಿತ್ರವೂ ಈ ಬರಹದಲ್ಲೇ ಇದೆ.
ಬಾಲು ಸರ್ ಸೊಗಸಾದ ಲೇಖನ ಮತ್ತು ಚಿತ್ರಗಳು..
ಈ ಕೋಟೆ ನೋಡಲು ಪ್ರೇರೆಪಿಸುತ್ತವೆ..ಧನ್ಯೋಸ್ಮಿ..
ಅಬ್ಬಾ...ಬಾಲೂ ಸರ್..
ಏನೆಂದು ಹೆಸರಿಡಲಿ ಈ ಛಂದ ಅನುಭವಕೆ :)..
ಬಿಡುಗಡೆಗೆ ಕಾಯುತ್ತಿದ್ದ ಚಲನಚಿತ್ರದ ಮೊದಲ ಶೋ ನೋಡಿದ ಅನುಭವ ನನಗ್ಎ ಇವತ್ತು...
ತುಂಬಾ ತುಂಬಾ ತುಂಬಾ ದಿನದಿಂದ ಕಾಯುತ್ತಿದ್ದ ಪ್ರವಾಸಮಾಲಿಕೆಯಿದು...ನಿಮ್ಮ ಪ್ರವಾಸ ಕಥನದ ಗಮ್ಮತ್ತೇ ಬೇರೆ ಬಿಡಿ..ಛಂದದ ಚಿತ್ರಗಳು,ಅದೆಲ್ಲೋ ಪಾತಾಳಗರಡಿಯಿಂದ ಎದ್ದು ಬಂದು ಕಣ್ಣೆದುರೇ ನಮ್ಮ ನೆಲವನ್ನು ಅದ್ಭುತ ನಾಡಾಗಿಸುವ ಇತಿಹಾಸದ ಮಾಹಿತಿಗಳು,ಅಲ್ಲಲ್ಲಿ ನುಸುಳಿಬರುವ ತುಂಟತನದ ಗುಳ್ಳೆಗಳು..ನಿಮ್ಮ ಈ ಶೈಲಿಗೊಂದು ಸಲಾಂ...
ಹಮ್...ಇತಿಹಾಸದ ದೃಷ್ಟಿಯಿಂದ ಮಹತ್ವದ ಜಾಗಗಳನ್ನು ನೋಡುವುದಕ್ಕೂ ಒಂದು ವಿದ್ಯೆ ಬೇಕೇನೋ...ನಮ್ಮಂಥವರ ಬರಿಗಣ್ಣಿಗೆ ಆಹ್ ಅದ್ಭುತ ಎಂದೋ, ಛೇ ಹಾಳು ಮಾಡಿದರು ಎಲ್ಲಾ ಎಂದೋ ಕಾಣಬಹುದಷ್ಟೇ,ಇಲ್ಲಿ ನೋಡಿದರೆ ಅವುಗಳ ಸ್ಪಷ್ಟ ,ನಿಖರ ಮಾಹಿತಿಯಿದೆ..ಇವನ್ನು ಉಳಿಸಿ ಎಂಬ ಕಳಕಳಿಯಿದೆ...
ಧನ್ಯವಾದ ಅಂತೂ ಹೇಳ್ಳೇ ಬೇಕು...ಬರೆಯುತ್ತಿರಿ ಎನ್ನುವುದೇ ನಮ್ಮ ಕೋರಿಕೆ :)
ನಮಸ್ತೆ :)
ಸೊಗಸಾಗಿದೆ. ಸುರಕ್ಷತೆಗಿಂತ ಜಾಸ್ತಿಯಾಗಿ ಮದ್ದುಗುಂಡುಗಳನ್ನು ಹಾಳಾಗದಂತೆ ಇಡುವುದರಲ್ಲಿ ಪಿರಮಿಡ್ಡಿನ ಅಂಶ. ನಿಮ್ಮ ಬ್ಲಾಗ್ ಓದಿದ್ದು ಅಲ್ಲಿಗೆ ಹೋದ ಅನುಭೂತಿ.
-msh
ಮಂಜರಾಬಾದಿನ ಕೋಟೆ ಪ್ರವಾಸ ಕಥನ ಅತ್ಯುತ್ತಮವಾಗಿ ಮೂಡಿ ಬಂದಿದೆ...
ನಿಜ ನಮ್ಮ ಇತಿಹಾಸದ ಬಗ್ಗೆ ನಮಗೆ ಅರಿವು ಕಾಳಜಿ ಬಹಳ ಕಮ್ಮಿ, ಎಂಥ ಜಾಗವೇ ಆದರೂ ಅದು ಕಡೆಗೆ ಜನರ ಮೋಜು ಮಸ್ತಿ ಕುಡಿತ ಕುಣಿತ ಮೆರೆತಗಳಿಗೆ ಮೂಕ ಸಾಕ್ಷಿಯಾಗಬೇಕಾದ ದೈನ್ಯ ಪರಿಸ್ಥಿತಿ....
ಹಿಂದಿನ ಕಾಲದವರ ವೈಙ್ಞಾನಿಕತೆಗೆ, ತಾಂತ್ರಿಕ ಙ್ಞಾನಕ್ಕೆ ಕನ್ನಡಿ ಹಿಡಿದಿದೆ ಈ ಲೇಖನ...
ಸುಂದರ ಚಿತ್ರಗಳೊಡನೆ ನಿರೂಪಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ... ಮುಂದಿನ ಭಾಗಕ್ಕಾಗಿ ಕಾಯುತ್ತಿರುತ್ತೇವೆ...
wow... Super anna..:) itihaasavannu eshtu chennaagi kattikodteeraa... adbhuta.. nodale bekada placegala list nalli idannoo serisikondiddene.. karedukondu hoguva javabdari nimmadu..:)
ಸುಂದರ ಚಿತ್ರ-ಬರಹ. ನಿಮ್ಮ ಇತಿಹಾಸದ ಕಣ್ಗೆಲಸ ಸೊಗಸಾಗಿದೆ. ಒಂದು ಪ್ರಶ್ನೆ, ಟಿಪೂ ಸತ್ತಿದ್ದು ೧೭೯೯ರಲ್ಲಿ. ಈ ಕೋಟೆ ಪೂರ್ಣಗೊಂಡಿದ್ದು ೧೭೯೨ರಲ್ಲಿ. ಅಂದರೆ ಟಿಪ್ಪೂವಿನ ಕಾಲದಲ್ಲಿ ಇದನ್ನು ಉಪಯೋಗಿಸಲಿಲ್ಲವೇ?
@ manjunath kollegala :-) ನಿಮ್ಮ ಪ್ರಶ್ನೆಗೆ ಉತ್ತರ ನಿಮ್ಮ ಪ್ರಶ್ನೆಯಲ್ಲೇ ಇದೆ,1792 ರಿಂದ 1799 ರವರೆಗೆ ಈ ಕೋಟೆ ಉಪಯೋಗದಲ್ಲಿತ್ತು, ಮೈಸೂರಿನ ಅಂತಿಮ ಯುದ್ದದಲ್ಲಿ ಟಿಪ್ಪು ಮಡಿದ ನಂತರ ಇದರ ಬಳಕೆ ಕಡಿಮೆಯಾಗಿ ನಂತರ ಇದನ್ನು ನಿರ್ಲಕ್ಷಿಸಲಾಗಿದೆ
wah! ವಾಹ್.... ಸು೦ದರ ಐತಿಹಾಸಿಕ ತಾಣಕ್ಕೊ೦ದು ಬೇಟಿಕೊಟ್ಟ ಅನುಭವ, ನಿಮ್ಮ ಲೇಖನ ಹಾಗು ಚಿತ್ರಗಳು. ಬಾಲು ಸರ್ ಹಾಗು ಗಿರೀಶ್ - ಪುಣ್ಯವ೦ತರು ನೀವು.
ನಮ್ಮೊಡನೆ ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು. ಮು೦ದಿನ ಕ೦ತಿಗಾಗಿ ಕಾದು ಕುಳಿತಿರುವ ನಿಮ್ಮ ಅಭಿಮಾನಿ......
ಸೂಪರ್ ಬಾಲಣ್ಣ ,
ಈ ಸಕಲೇಶಪುರ ಫೋರ್ಟ್ ನಾ ನಾನೂ ನೋಡಬೇಕೆಂದಿದ್ದೆ ಮೊನ್ನೆ ಮೊನ್ನೆ ಸ್ನೇಹಿತೆಯರಲ್ಲಿ ..ಆದರೆ ನೀವಿದನ ಪೂರ್ತಿಯಾಗಿ ತೋರಿಸಿಬಿಟ್ರಿ ನಂಗಿಲ್ಲಿಂದಲೇ ..
ಥಾಂಕ್ ಯು :)
ತುಂಬಾ ಉಪಯುಕ್ತ ಮಾಹಿತಿಗಳಿವೆ ಎಂದಿನಂತೆ .
ಅಂದ ಹಾಗೆ ಗಿರೀಶ್ ಜೊತೆಗಿನ ಈ ಪಯಣ ಕಾಫೀ ನಾಡಿನ ಕಡೆಗೂ ಮುಂದುವರೆಯುತ್ತೆ ಅನ್ನೋ ನಿರೀಕ್ಷೆಯಲ್ಲಿ ....
Post a Comment