Sunday, September 15, 2013

ಪಿರಿಯಾಪಟ್ಟಣದಲ್ಲೊಂದು ಸಾಹಿತ್ಯದ ದಾರಿದೀಪ ..... !! ೧೭೫ ಮನೆ ಮನೆ ಕವಿಗೋಷ್ಠಿ ನಡೆಸಿದ ಕೀರ್ತಿ ಇವರದು .... !!!

ಮನೆ ಮನೆ ಕವಿಗೋಷ್ಟಿಗೆ  ಬರ್ತೀರಾ ....??
ನಮಸ್ಕಾರ ಗೆಳೆಯರೇ  ಇಂದಿನಿಂದ  ಹಾಸನ ಚಿಕ್ಕಮಗಳೂರಿನ  ಪ್ರವಾಸದ ಹಳೆಯ ನೆನಪಿನ ಅನುಭವ ಬರೆಯಬೇಕಾಗಿತ್ತು, ಆದರೆ ಇಲ್ಲೊಬ್ಬ  ಆತ್ಮೀಯರ    ಬಗ್ಗೆ  ಬರೆಯಲೇ ಬೇಕಾದ ಕಾರಣ  ಪ್ರವಾಸ ಸಂಚಿಕೆ  ಮುಂದೆ ಹೊಯಿತು. ಬನ್ನಿ ಇಲ್ಲೊಬ್ಬ ಅದ್ಭುತ ವ್ಯಕ್ತಿ ಪರಿಚಯ ಮಾಡಿಕೊಡುತ್ತೇನೆ

ನಮ್ಮ ಸುತ್ತ ಮುತ್ತ  ಅನೇಕ ವ್ಯಕ್ತಿಗಳು ಇರುತ್ತಾರೆ , ಅವರಲ್ಲಿ ಕೆಲವರು ತಮ್ಮದೇ ವಿಶೇಷವಾದ  ಹಾದಿಯಲ್ಲಿ ಸಾಗಿ ಗುಟ್ಟಾಗಿ    ಸಮಾಜಕ್ಕೆ ವಿಶಿಷ್ಟವಾದ  ಕೊಡುಗೆ ನೀಡುತ್ತಿರುತ್ತಾರೆ ,ಆದರೆ  ತಮಗೆ ಪ್ರಚಾರ ಬಯಸುವುದಿಲ್ಲ, ಇಂತಹ ಸಾಲಿಗೆ ಸೇರುವವರು  ಶ್ರೀ  ಕಂಪಲಾಪುರ ಮೋಹನ್,   ಇವರ  ಹುಟ್ಟೂರು  ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ  ಕಂಪಲಾಪುರ ಗ್ರಾಮ, ದಲ್ಲಿ ಜನಿಸಿದ ಅವರು ವಿಧ್ಯಾಭ್ಯಾಸ  ಮುಗಿಸಿ, ಪತ್ರಿಕೊಧ್ಯಮದ ಕಡೆ ನಡೆದರು , ಕೆಲವು ಪತ್ರಿಕೆಗಳಿಗೆ  ವರದಿಗಾರರಾಗಿ  ಜೊತೆಗೆ ತಮ್ಮದೇ  ಪತ್ರಿಕೆ  ಆರಂಭಿಸಿ  ತನ್ನ ಹಾದಿಯಲ್ಲಿ  ಮುನ್ನಡೆದರು .


ಮೂವತ್ತು ವರ್ಷಗಳ ಸಂಭ್ರಮ

ಪಿರಿಯಾಪಟ್ಟಣ  ತಾಲೂಕಿನಲ್ಲಿ   ಜನಪರ ಕಾರ್ಯಕ್ರಮ  ಹಮ್ಮಿಕೊಂಡು  ಸ್ಥಳೀಯ  ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ  ಪರಿಹರಿಸುವ ನಿಟ್ಟಿನಲ್ಲಿ  ಮುನ್ನಡೆದು  ತಮ್ಮದೇ  ಒಂದು  "ದಾರಿ ದೀಪ " ವಾರ ಪತ್ರಿಕೆ ಪ್ರಾರಂಭ ಮಾಡಿದರು, ಇದರ ಮೊದಲ ಸಂಚಿಕೆ ಬಿಡುಗಡೆ  ೧೯೮೩ ರ ಸೆಪ್ಟೆಂಬರ್ ೧೫ ರಂದು ಅಂದಿನ ಜನಪ್ರೀಯ ಕನ್ನಡ ಮೇರು ನಟ  ವಿಷ್ಣುವರ್ಧನ್  ಬಿಡುಗಡೆ  ಮಾಡಿದರು . ಅಂದಿನಿಂದ ಇಂದಿನ ವರೆಗೆ  ನಿರಂತರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ತಾಲೂಕಿನ ಜನರ ವಿಶ್ವಾಸಕ್ಕೆ ಪಾತ್ರವಾಯಿತು ಈ ಪತ್ರಿಕೆ. ಯಾರ ಪರವೂ ನಿಲ್ಲದೆ , ಹಣಕ್ಕಾಗಿ ಪತ್ರಿಕೋಧ್ಯಮ ಮಾಡದೆ ತನ್ನ  ಸ್ವಂತಿಕೆ ಉಳಿಸಿಕೊಂಡ  ಮೋಹನ್  ಜನರ ಪ್ರೀತಿಯ ಗೆಳೆಯರಾದರು , ಇಂದು ಈ ಪತ್ರಿಕೆ ತನ್ನ ಮೂವತ್ತೊಂದನೇ ವರ್ಷದ ಸಂಭ್ರಮವನ್ನು  ಆಚರಿಸಿಕೊಳ್ಳುವ  ಶುಭ ದಿನದತ್ತ ಮುನ್ನುಗ್ಗಿದೆ .


ಪ್ರೀತಿಯ ಗೆಳೆಯನ  ಚಿತ್ರ  ಮೋಹನ್ ರವರ ಮನೆಯಲ್ಲಿ

ಪತ್ರಿಕಾರಂಗದಲ್ಲಿ  ಛಾಪು ಮೂಡಿಸಿದ ಕಂಪಲಾಪುರ ಮೋಹನ್  ಕಣಗಾಲ್ ಪುಟ್ಟಣ್ಣ , ಕಣಗಾಲ್ ಪ್ರಭಾಕರ ಶಾಸ್ತ್ರಿ , ಕುಣಿಗಲ್ ನಾಗ ಭೂಷಣ , ಮುಂತಾದ ಇನೂ ಬಹಳಷ್ಟು ಜನ ಚಲನಚಿತ್ರರಂಗದ  ಹಾಗು ವಿವಿಧ ಕ್ಷೇತ್ರಗಳ ಗಣ್ಯರ  ಆತ್ಮೀಯ ಗೆಳೆಯ ಕೂಡ ಹೌದು,  ಕೆ. ಮೋಹನ್ ರಾವ್  ಎಂದು ಕರೆಸಿಕೊಳ್ಳುತ್ತಿದ್ದ  ಇವರನ್ನು ಪುಟ್ಟಣ್ಣ ಕಣಗಾಲ್ ರವರು  "ಲೇ ಮೋಹನ  ನೀನು  ಕಂಪಲಾಪುರ ಮೋಹನ್  ಅಂತ  ಗುರುತಿಸಿಕೋ" ಎಂದು ಸಲಹೆ ನೀಡಿ ಇವರನ್ನು ಕಂಪಲಾಪುರ  ಮೋಹನ್ ಎಂದು ಗುರುತಿಸಿಕೊಳ್ಳಲು ಪ್ರೇರಣೆ ನೀಡಿದರು, ಇವರ ಹಾಗು ಪುಟ್ಟಣ್ಣ ಕಣಗಾಲರ  ಸ್ನೇಹ  ಬಹಳ ಪ್ರಸಿದ್ದಿ ಪಡೆದಿತ್ತು,  "ದೊಡ್ಡೇರಿ ವೆಂಕಟ ಗಿರಿ ರಾಯರ"  ಕಾದಂಬರಿ  "ಅವದಾನ" ವನ್ನು  ಪುಟ್ಟಣ್ಣ ಅವರಿಗೆ ನೀಡಿ  , ಅದನ್ನು  ಓದುವಂತೆ ಒತ್ತಾಯ ಪೂರ್ವಕವಾಗಿ ತಿಳಿಸಿ   ಅದನ್ನು  "ಅಮೃತ ಗಳಿಗೆ"  ಎಂಬ ಚಿತ್ರ  ಮಾಡಲು ಪ್ರೇರಣೆ  ನೀಡುತ್ತಾರೆ, ಕಣಗಾಲ್ ಪುಟ್ಟಣ್ಣ ರವರ  ನೋವಿನ ದಿನಗಳಲ್ಲಿ  ಅವರಿಗೆ ಬೆಂಬಲವಾಗಿ ನಿಂತು  ಗೆಳೆತನ ಮೆರೆಯುತ್ತಾರೆ  ಈ ಮೊಹನ್. ಇವರ ಬತ್ತಳಿಕೆಯಲ್ಲಿ  ಕನ್ನಡ ಚಿತ್ರರಂಗದ ಹಲವು ಘಟನೆಗಳ  ಅದ್ಭುತ  ಮಾಹಿತಿಗಳಿವೆ .


ಸಾಹಿತ್ಯ ಸಾಧನೆಗೆ  ಕನ್ನಡದ  ಪೂಜಾರಿ  ಹಿರೆಮಗಳೂರ್ ಕಣ್ಣನ್ ಅವರಿಂದ  ಸನ್ಮಾನ

ಹಲವು ವಿಚಾರಗಳ ಅನುಭವ  ಹೊಂದಿದ  ಕಂಪಲಾಪುರ ಮೋಹನ್  ಸಾಹಿತ್ಯ ಸೇವೆಯಲ್ಲೂ  ಮುಂದು, ಸ್ವತಃ  ಕವಿ ಯಾಗಿರುವ ಇವರು ಹನಿ ಕವಿತೆಗಳನ್ನು  ಬರೆಯುತ್ತಾರೆ, ಲಘು ಹಾಸ್ಯ ದಾಟಿಯ ಇವರ  ಹನಿ ಕವಿತೆಗಳು ಇವರ ಗೆಳೆಯರಿಗೆ  ಅಚ್ಚುಮೆಚ್ಚು . ಸಾಹಿತ್ಯ ಸೇವೆ ಮಾಡಲು ಹೊರಟ ಇವರು  ಪಿರಿಯಾಪಟ್ಟಣ ವನ್ನು  ಕೇಂದ್ರವಾಗಿ ಇಟ್ಟುಕೊಂಡು  ಕವಿಗಳ ಗುಂಪನ್ನು  ಕಟ್ಟಿಕೊಂಡರು ,ಸ್ಥಳೀಯ  ಕವಿಗಳ ಜೊತೆಗೆ  ದೂರದ ಊರಿನ ಕವಿಗಳೂ ಸಹ  ಈ ಗುಂಪಿನೊಳಗೆ  ಸೇರಿಕೊಂಡರು,  ಪ್ರತೀ ತಿಂಗಳು  ಕವಿಗಳ ಗುಂಪಿನೊಂದಿಗೆ  "ಮನೆ ಮನೆ  ಕವಿ ಗೋಷ್ಠಿ "   ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಮನೆ ಮನೆ ಕವಿಗೋಷ್ಠಿ ಎಂದರೆ  ಕವಿಗಳು ಗುಂಪಾಗಿ  ಒಂದು ಭಾನುವಾರ ದಂದು ಒಂದು ಮನೆ , ಅಥವಾ ಒಂದು ಸ್ಥಳ ದಲ್ಲಿ ಒಟ್ಟಿಗೆ ಸೇರಿ ಕವಿತಾ ವಾಚನ ಮಾಡುವುದು  , ಒಟ್ಟಿಗೆ ಊಟ ಮಾಡುವುದು, ಹರಟೆ ಹಾಸ್ಯ  , ರಸ ಪ್ರಶ್ನೆ ,  ಮುಂತಾದ  ಚಟುವಟಿಕೆಗಳು , ಇದರಲ್ಲಿ ಭಾಗವಹಿಸುವ  ಎಲ್ಲರಿಗೂ  ನೆನಪಿನ ಕಾಣಿಕೆ , ಪ್ರಶಂಸಾ ಪತ್ರ ಮುಂತಾದವುಗಳನ್ನು  ವಿವಿಧ ಕ್ಷೇತ್ರಗಳ ಗಣ್ಯರಿಂದ ಕವಿತೆ ವಾಚಿಸಿದವರಿಗೆ ಕೊಡಿಸುವ  ಕಾರ್ಯವನ್ನು ಕಂಪಲಾಪುರ ಮೋಹನ್  ಮಾಡಿದರು . ಮೊದಲು ಈ ಮನೆ ಮನೆ ಕವಿಗೋಷ್ಠಿ  ಕಾರ್ಯಕ್ರಮ ನಡೆಸಲು  ಸಾರ್ವಜನಿಕರಿಂದ  ಅಷ್ಟೊಂದು ಪ್ರೋತ್ಸಾಹ ಸಿಗದೇ ,  ಕೆಲವರು  "ಈ ವಯ್ಯನಿಗೆ ಕೆಲ್ಸಾ ಇಲ್ಲಾ  , ಮನೆ ಮನೆ ಕಪಿ  ಗೋಷ್ಠಿ ಮಾಡ್ತಾನಂತೆ"  ಅಂತಾ  ಅವಹೇಳನ  ಮಾಡಿದ್ದೂ ಉಂಟು. ಆದರೂ ದೃತಿಗೆಡದೆ  ತನ್ನ ಛಲದಿಂದ  ಕೆಲವೊಮ್ಮೆ  ಪ್ರಾಯೋಜಕರು ಸಿಗದಿದ್ದರೂ ತಾನೇ   ಸ್ವಂತ ಹಣ ಹಾಕಿ ಕಾರ್ಯಕ್ರಮ ನಿಲ್ಲದಂತೆ  ಮುನ್ನಡೆಸಿದ್ದಾರೆ ..  ಮೊದಲು ಕಷ್ಟ ಎದುರಿಸಿ   ಮುನ್ನಡೆಸಿದ  ಶ್ರೀ ಕಂಪಾಲಾ ಪುರ ಮೋಹನ  ನೇತೃತ್ವದ   ಮನೆ ಮನೆ ಕವಿಗೋಷ್ಠಿ  ನಂತರ   ಜಿಲ್ಲೆಗಳಿಗೂ  ವ್ಯಾಪಿಸಿ  ಅಲ್ಲಿಗೆ ಕವಿಗಳ ಹಿಂಡನ್ನು  ಬಸ್ಸಿನ ಮೂಲಕ  ಕರೆದೊಯ್ದು  ತಮ್ಮ ಹಿರಿಮೆ ಸಾದಿಸಿದ್ದಾರೆ.  ಮಡಿಕೇರಿ, ನಾಗಮಂಗಲದ ಬೆಳ್ಳೂರು, ಚಾಮರಾಜನಗರ, ಮೈಸೂರು,  ಇನ್ನೂ ಬಹಳಷ್ಟು  ಕಡೆ ಇವರ  ಕವಿ ಬಳಗ  ತೆರಳಿ ಮನೆ  ಮನೆ ಕವಿಗೋಷ್ಠಿ  ನಡೆಸಿದೆ . ಇಂದು ಈ ಮನೆ ಮನೆ ಕವಿಗೋಷ್ಠಿ  ೧೭೫  ಕಾರ್ಯಕ್ರಮ  ನೀಡಿ  ಮುನ್ನುಗ್ಗುತ್ತಿದೆ. ಇದು ಕರ್ನಾಟಕ ಸಾಹಿತ್ಯ ಕ್ಷೇತ್ರದಲ್ಲಿ  ಒಂದು ದಾಖಲೆಯೇ ಹೌದು . ಇವರ ಮನೆ ಮನೆ ಕವಿಗೋಷ್ಠಿ  ಯಲ್ಲಿ ಬೆಳೆದ ಹಲವರು ಇಂದು ಉತ್ತಮ ಕವಿಗಳಾಗಿ  ಬೆಳೆದಿದ್ದಾರೆ, ಇಂದು ಇವರ ಕವಿಗೋಷ್ಠಿ ಪ್ರಾಯೋಜಿಸಲು  ಮುಂದು ಅಂತಾ ಜನ  ರಾಜ್ಯಾದ್ಯಂತ  ಬರುತ್ತಿದ್ದಾರೆ. ಗ್ರಾಮೀಣ  ಪ್ರತಿಭೆಗಳಲ್ಲಿ  ಸಾಹಿತ್ಯದ ಕಂಪು  ಹರಡುವ ಇವರ ಕೆಲಸ   ಅನುಕರಣೀಯ,  ಯಾವುದೇ ಪ್ರಶಸ್ತಿಗೆ ಹಿಂದೆ ಬೀಳದೆ , ತನ್ನ ಪಾಡಿಗೆ ತಾನು  ಸದ್ದಿಲ್ಲದೇ  ಸಾಗುತ್ತಿರುವ  ಕನ್ನಡದ  ಹೆಮ್ಮೆಯ ಪೂಜಾರಿ   ಹಿರೆಮಗಳೂರ್  ಕಣ್ಣನ್  ಅವರು ಸನ್ಮಾನಿಸಿದ್ದು  ವಿಶೇಷ .  ಮತ್ತೊಂದು ವಿಶೇಷ ಇವರ ಸಾಧನೆಯ ಹಿಂದೆ  ಸದ್ದಿಲ್ಲದೇ  ಪ್ರೇರಣೆ ನೀಡುತ್ತಿರುವ  ಇವರ ಪತ್ನಿ  ಶ್ರೀಮತಿ ಸರಸ್ವತಿ  ಯವರ ಕಾರ್ಯವನ್ನೂ ಸಹ ಮೆಚ್ಚಬೇಕಾಗಿದೆ 


ಪ್ರೀತಿಗೆ ಮತ್ತೊಂದು ಹೆಸರು  ಇವರು

ಎಲ್ಲಾ ಗೆಳೆಯರಿಗೂ  ಆತ್ಮೀಯತೆ ತೋರುತ್ತಾ  , ಎಲ್ಲರ ಪ್ರೀತಿಗೆ  ಒಳಗಾಗಿ,  ಸಾಗುತ್ತಿರುವ ಇವರನ್ನು ಬ್ಲಾಗ್ ಗೆಳೆಯರಿಗೆ  ಪರಿಚಯ ಮಾಡುವ  ಅವಕಾಶ ಸಿಕ್ಕಿದ್ದು  ಖುಷಿಯಾಗಿದೆ, ನೀವು  ಮೈಸೂರಿನಿಂದ  ಮಂಗಳೂರಿಗೆ ತೆರಳುವಾಗ  ಸಿಗುವ ಪಿರಿಯಾಪಟ್ಟಣ  ದಲ್ಲಿ  ಯಾರನ್ನೇ ಕೇಳಿ   "ಕಂಪಲಾಪುರ ಮೋಹನ್  ದಾರಿ ದೀಪ ಪತ್ರಿಕೆ ''  ಎನ್ನುತ್ತಿದ್ದಂತೆ   ಅವರ ಬಗ್ಗೆ ನಿಮಗೆ  ಮಾಹಿತಿನೀಡುತ್ತಾರೆ . ಒಮ್ಮೆ ಹೋಗಿ ಅವರನ್ನು ಭೇಟಿಯಾಗಿ ನೀವು , ನಿಮಗೆ ಅವರಬಗ್ಗೆ  ಗೌರವಮೂಡುತ್ತದೆ .  ಎಲೆ ಮರೆ ಕಾಯಿಯಂತಿರುವ ಇಂತಹ ಬಹಳಷ್ಟು ಜನರನ್ನು ಗುರುತಿಸಬೇಕಾದ  ಕಾರ್ಯ ಬ್ಲಾಗ್ ಲೋಕದಲ್ಲಿ ಆಗಬೇಕಾಗಿದೆ , ಆಲ್ವಾ ?? ನೀವೇನಂತೀರಿ ................ ?

9 comments:

Unknown said...

ಬಾಲೂ , ಮೋಹನರ ಬಗೆಗಿನ ಗಮನಾರ್ಹ ಲೇಖನ

bilimugilu said...

Balu Sir,
ಮೋಹನ್ ರವರ ಬಗ್ಗೆ ಓದಿ ಖುಷಿಯಾಯಿತು, ಸಾಧಕರಿವರು, ಧನ್ಯರು. ಇವರ "ದಾರಿದೀಪ" ಪ್ರಜ್ವಲಿಸುತ್ತಿದೆ.... ಮಾಹಿತಿಗೆ, ಇವರ ಬಗೆಗಿನ ಲೇಖನಕ್ಕೆ ನಿಮಗೆ ಧನ್ಯವಾದ....

Srikanth Manjunath said...

ದಾರಿಯಲ್ಲಿ ನೆಟ್ಟ ದೀಪದ ಕಂಬ ಪಯಣಿಗರಿಗೆ ದಾರಿ ತೋರಿಸುತ್ತದೆ.. ನಮ್ಮೆಲ್ಲರ ನಡುವೆಯೇ ಇರುವ ಇರುವ ಶ್ರೀ ಮೋಹನ್ ರವರು ನೀಡುವ ಮಾಹಿತಿ ನಿಜಕ್ಕೂ ದಾರಿ ದೀಪವೆ. ಸರಳ ಎನ್ನುವ ಪದಕ್ಕೆ ಸರಿ ಸಮಾನರಾಗಿ ತೂಗುವ ಈ ಸುಮಧುರ ಮನಸ್ಸಿನ ವ್ಯಕ್ತಿಯ ಪರಿಚಯವಾದದ್ದು ನನ್ನ ಭಾಗ್ಯವೇ ಸರಿ. ಇವರ ಸಾಹಸಯಾತ್ರೆಯನ್ನು ನಿಮ್ಮ ಬ್ಲಾಗಿನಲ್ಲಿ ಓದಿದಾಗ ಮನಸ್ಸುಅರಳಿತು. ಸುಂದರ ಮಾಹಿತಿಯುಳ್ಳ ನಿಮ್ಮ ಬ್ಲಾಗ್ ನಿಜಕ್ಕೂ ಒಂದು ಅಕ್ಷಯ ಗಣಿ. ಮೊಗೆದಷ್ಟು ಮಾಹಿತಿ ಕೊಡುವ ಶ್ರೀಯುತ ಮೋಹನ್ ಪರಿಚಯ, ಸ್ನೇಹಪರತೆ, ಶ್ರೀಯುತ ಪುಟ್ಟಣ್ಣರವರ ಜೊತೆಯ ಒಡನಾಟದ ಮಾತುಗಳು ಒಂದು ಸಂತಸ ಭರಿತ ರುಚಿಗವಳ ಅಂದರೆ ತಪ್ಪಿಲ್ಲಾ. ಸೂಪರ್ ಬಾಲೂ ಸರ್. ದಾರಿ ದೀಪದ ಮೂವತ್ತನೇ ವರುಷ ತಲುಪಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಹೀಗೆ ದಾಪುಗಾಲು ಹಾಕುತ್ತಾ ಮುಂದುವರೆಯಲಿ ಎಂದು ಹಾರಿಸುತ್ತ ಶ್ರೀ ಮೋಹನ್ರವರಿಗೂ ಅವರ ಸಾಹಸಕ್ಕೆ ಪ್ರೇರಪಣೆ ನೀಡುತ್ತಿರುವ ಮಡದಿ ಹಾಗು ಕುಟುಂಬಕ್ಕೆ ಅಭಿನಂದನೆಗಳು.

ಗಿರೀಶ್.ಎಸ್ said...

ಸರ್,ಇಂಥ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು .. ಇಂಥ ಎಷ್ಟೋ ಜನರು ಎಲೆ ಮರೆಯಲ್ಲಿ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ ಅನಿಸುತ್ತದೆ ..

ಜಲನಯನ said...

ಸುಂದರ ಪರಿಚಯ ಬಾಲು..ನಿಮ್ಮಲೇಖನಗಳ ಛಾಪು ಒತ್ತೇಬಿಟ್ರಿ...

ಮನಸು said...

ನಿಮಗೆ ನೀವೇ ಸಾಟಿ ಸರ್.. ಮುಂದಿನ ಸರಿ ಬೆಂಗಳೂರಿಗೆ ಬಂದಾಗ ನಮಗೂ ಟ್ರಿಪ್ ಕರೆದುಕೊಂಡು ಹೋಗಿ ನಿಮ್ಮೊಂದಿಗೆ ಸುತ್ತಾಡಿಬಂದರೆ ನಾವು ಧನ್ಯರು. ಹಿರೇಗೌಡ್ರನ್ನು ಭೇಟಿ ಮಾಡಿದ್ದಿರೆಂದು ತಿಳಿದಿತ್ತು ಈಗ ಅವರ ಪೂರ್ಣ ಮಾಹಿತಿ ಮತ್ತು ಮೋಹನ್ ಸರ್ ಅವರ ಪರಿಚಯ ಎಲ್ಲವೂ ಮಾಹಿತಿ ಪೂರ್ಣವಾಗಿ ತಿಳಿಸಿದ್ದೀರಿ ಧನ್ಯವಾದಗಳು

Badarinath Palavalli said...

ಅರೆರೆ ಇದು ಸಖತ್ consept ಸಾರ್, ಮನೆ ಮನೆ ಕವಿ ಗೋಷ್ಠಿ - ನಾವೂ ಶ್ರೀ ಕಂಪಲಾಪುರ ಮೋಹನ್ ಅವರ ತರಹ ಶುರು ಮಾಡಿದರೆ ಹೇಗೆ ಅಂತ? ಉಪ್ಪಿಟ್ಟು ಕೇಸರೀ ಬಾತು ಬಾಳೆ ಹಣ್ಣು ಸೀಕರಣೆ ಹಬೆಯಾಡೊ ಕಾಫೀ ಜೊತೆಗೆ ತಗೊಳ್ಳಿ ಒಳ್ಳೊಳ್ಳೆ ಕವಿತೆ!

ಶ್ರೀ ಕಂಪಲಾಪುರ ಮೋಹನ್ ಮತ್ತು ಪುಟ್ಟಣ್ಣ ಅವರ ಮಿತ್ರತ್ವ ಮತ್ತು ಶ್ರೀಯುತರ ನ್ಯಾಯಯುತ ಪತ್ರಿಕೋದ್ಯಮ ನಮಗೆಲ್ಲ ಮಾದರಿಯಾಗಲಿ.

ಕೆಲಸ ಬಾಹುಳ್ಯ ಮತ್ತು ಲಕ್ವ ಹೊಡೆದ ಲಕ್ಕಿಲ್ಲದ ಈ ಹಣೆಯ ಬರಹದ ಕಾರಣ ನಿಮ್ಮ ಜೊತೆ ನಾನು ಬರಲಾಗಲಿಲ್ಲ. ಆದರೂ ಈ ಬರಹ ಮತ್ತು ಉತ್ತಮ ಚಿತ್ರಗಳು ನನ್ನನ್ನು ನಿಮ್ಮ ಜೊತೆ ಯಾನ ಮಾಡಿಸಿತು. ಶ್ರೀಮಾನ್ ಮತ್ತು ಬಾಲಣ್ಣ ಉಘೇ ಉಘೇ.

Vinayak Bhagwat said...

ಎಲ್ಲೋ ಅವಿತಿದ್ದ ವಿಷಯವನ್ನು ಎಳೆದು ತಂದು ನಮಗೆ ತಿಳಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಬಾ..ಲ...ಣ್ಣ....

manjunath said...

ಇಂತಹ ಮಹನೀಯರುಗಳೇ ನಿಜಾರ್ಥದಲ್ಲಿ ಕನ್ನಡ ಸೇವೆ ಮಾಡುತ್ತಲಿರುವವರು. ಅವರಿಂದ ಹೆಚ್ಚು ಹೆಚ್ಚು ಜನರು ಪ್ರೇರೇಪಿತರಾಗುವಂತಾಗಲಿ. ಕಂಪಲಾಪುರ ಮೋಹನ್ ರವರಿಗೆ ಶುಭವಾಗಲಿ.