ನೀನಂದ್ರೆ ನನಗೆ ಇಷ್ಟಾ ಕಣೋ |
ಅಜಯ್ ಇಂದಿನ ನಾಯಕ , ನಮ್ಮ ಅಜಯ್ ಒಂದು ಹಳ್ಳಿ ಯಲ್ಲಿ ಜನಿಸಿ ಬಾಲ್ಯ ಕಳೆದವ, ಬಾಲ್ಯದ ಓದು ಅವನು ಜನಿಸಿದ "ಜ್ಞಾನ ಪುರದಲ್ಲಿ" , ನಂತರ ಐದನೇ ತರಗತಿ ಇಂದ ಹತ್ತರವರೆಗೆ ಹತ್ತಿರದ ಪಟ್ಟಣ "ವಿಜ್ಞಾನ ಪುರ"ದಲ್ಲಿ ನಂತರ ಕಾಲೇಜಿಗೆ "ಚಂದನ ಪುರ" ಕ್ಕೆ ಬಂದವ , ನಂತರ ಜೀವನ ಏರು ಪೇರಾಗಿ ಇಂದು ದಡ ಸೇರಿ ಜೀವನದಲ್ಲಿ ಸಾಧಿಸಿ ಉತ್ತಮ ಬಾಳು ಇಂದು ಅವನದಾಗಿದೆ. ಅದೊಂದು ದಿನ ತನ್ನ ಆಫಿಸ್ ನಲ್ಲಿ ಕುಳಿತವನಿಗೆ ದೂರದಿಂದ ತೇಲಿಬಂದ ಹಾಡು
ಮನದಲ್ಲಿ ನಿಂತಿತು, "ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೇ ತೊರೆಯಲಿ" "ಅನ್ನ ನೀಡಿದ ಮಣ್ಣನು ನಾ ಹೇಗೆ ಮರೆಯಲಿ " ಅಂತಾ ಮನಸಿನಲ್ಲಿ ಹಾಡಿಕೊಂಡ , ಬಂದರೂ ಆ ಹಾಡು ಮನದಲ್ಲಿ ಕಾಡತೊಡಗಿತು . ಮಾರನೆಯ ದಿನ ಆಫಿಸ್ ಗೆ ಹೋಗಿ ಎರಡು ದಿನ ರಜೆ ಹಾಕಿ ಊರ ದಾರಿ ಹಿಡಿದ,
ಬಾಲ್ಯ ಕಳೆದ ಊರಿಗೆ ಬಂದು ಸುಮಾರು ಇಪ್ಪತ್ತು ವರ್ಷಗಳಾಗಿದ್ದವು , ಏನಿದೆ ಎಂದು ಬಂದಾನು ಊರಿಗೆ? ಇದ್ದ ಜಮೀನುಗಳು ಅಕ್ಕ ತಂಗಿಯರ ಮದುವೆಗಾಗಿ ಅಪ್ಪ ಮಾರಿದ್ದ, ಅಪ್ಪ ಸತ್ತ ನಂತರ ಊರಿನಲ್ಲಿ ಇರಲಾಗದೆ ಬದುಕನ್ನು ಅರಸಿ ಚಂದನಪುರ ಪಟ್ಟಣಕ್ಕೆ ಬಂದು ನೆಲಸಿದ್ದಾ ಯಿತು, ಅದೇ ಉಸಿರಿನಲ್ಲಿ ಆಗ ಇದ್ದ ಮನೆಯನ್ನು ಬಂದಷ್ಟು ದುಡ್ಡಿಗೆ ಮಾರಿದ್ದಾಗಿತ್ತು, ಆದರೆ ಮನದ ಮೂಲೆಯಲ್ಲಿ ಬಾಲ್ಯ ಕಳೆದ ಆ ಊರಿನ ಬೀದಿ ಬೀದಿಗಳು , ಮನೆ ಮನೆಗಳೂ , ಅಲ್ಲಿನ ಬಾಲ್ಯ ಗೆಳೆಯರು , ಬಾಲ್ಯದ ಜೀವನದ ಅಮೂಲ್ಯ ಕ್ಷಣಗಳು ಅವನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದವು.
ಊರಿಗೆ ಬಂದವನೇ ತಾನು ಬಾಲ್ಯ ಕಳೆದ ಮನೆಗೆ ಬಂದ ಇವನನ್ನು ಕಂಡ ಪುಟ್ಟ ಮಕ್ಕಳು, "ಅಪ್ಪ ಅಪ್ಪಾ ಯಾರೋ ಬಂದವ್ರೇ " ಅಂತಾ ಓಡಿ ಹೋಗಿ ಒಬ್ಬ ಹಿರಿಯರನ್ನು ಕರೆದು ಕೊಂಡು ಬಂದವು . ಒಳಗಿನಿಂದ ಬಂದ ಹಿರಿಯರು ಯಾರೂ ಅಂತಾ ಹತ್ತಿರ ಬಂದು "ನೀವು ನಮ್ಮ ಐನೋರ ಮಗ ಅಜಯ್ ಸ್ವಾಮೆರಲ್ವೆ " "ಬನ್ನಿ ಬನ್ನಿ ಒಳಕೆ " ಅಂತಾ ಮನೆಯ ಒಳಗೆ ಕರೆದು ಕೊಂಡು ಹೋಗಿ ಉಪಚಾರ ಮಾಡಿದ್ರು, "ಸ್ವಾಮೀ ಬೊ ವರ್ಸಾ ಆಗಿತ್ತು ತಾಮು ಬಂದು" , "ಮನೆಕಡೆ ಎಲ್ಲಾ ಸಂದಾ ಕಿದ್ದಾರ" "ಅವ್ನೋರು ಎನ್ಗವ್ರೆ ಬುದ್ದೀ?? ಅಂತಾ ಹೇಳಿ ಉಪಚರಿಸಿದರು. ಇವತ್ತು ಸ್ವಾಮೀ ಆ ರೂಮಲ್ಲಿ ಇರಿ , ಅಂತಾ ಹೇಳಿ ಮನೆಯ ಮುಂದೆ ಇದ್ದ , ಬಾಲ್ಯದಲ್ಲಿ ನಾನು ಉಳಿದಿದ್ದ ರೂಂ ನಲ್ಲಿ ನನ್ನ ಲಗ್ಗೇಜ್ ಇಟ್ಟರು . "ಲೇ ಇವಳೇ ಆ ಸಾಮಣ್ಣ ನವರ ಮನೆಗೆ ಹೋಗಿ ಐನೊರ್ ಮಗ ಅಜಯ್ ಬಂದವರೆ ರಾತ್ರಿ ಊಟಕ್ಕೆ ಅಲ್ಲಿಗೆ ಬತ್ತಾರೆ ಅಂತಾ ಯೋಳು " ಅಂತಾ ಹೇಳಿ , ಬನ್ನಿ ಸ್ವಾಮೀ ಊರ ಒಂದು ಸುತ್ತು ಹಾಕಿ ಬರುವ ಅಂತಾ ಕರೆದುಕೊಂಡು ಹೊದ್ರು. ಬಾಲ್ಯ ಕಳೆದ ಸರ್ಕಾರಿ ಸ್ಕೂಲು ಮಾಯವಾಗಿತ್ತು,ಸುತ್ತಲಿನ ಮರಕೋತಿ ಆಟ ಆಡಿದ್ದ ಮರಗಳು ಮಾಯವಾಗಿದ್ದವು , ಮರ ಹತ್ತಿ ನೇರಳೆ ಹಣ್ಣು ತಿನ್ನುತ್ತಿದ್ದ ಮರಗಳು ಕಣ್ಮರೆಯಾಗಿದ್ದವು, ಸರ್ಕಾರಿ ಕ್ವಾರ್ಟರ್ಸ್ ಸುತ್ತಾ ಹಾಕಲಾಗಿದ್ದ ಕಾಂಪೌಂಡ್ ಉರಳಿ ಹೋಗಿತ್ತು, ಕಾಂಪೌಂಡ್ ಮೇಲೆ ಹತ್ತಿ ಅದರ ಉದ್ದಕ್ಕೂ ಓಡುತ್ತಾ , ಬಸ್ ಆಟ ಆಡಿದ ನೆನಪು ಕಳೆದು ಹೋಗಿತ್ತು, ಮಾವಿನ ತೋಪಿನಲ್ಲಿ ಮರ ಹತ್ತಿ ಕೋತಿಗಳಿಗೆ ಕಲ್ಲು ಹೊಡೆದು ಓಡಿಸಿ ಮಾವಿನ ಹಣ್ಣು ತಿಂದ ನೆನಪಿನ ಮಾವಿನ ಮರಗಳು ನಿರ್ನಾಮ ವಾಗಿದ್ದವು, ಬೇಲಿಯಲ್ಲಿ ಕಾರೆ ಹಣ್ಣು ಕಿತ್ತು ತಿಂದ ಜಾಗದಲ್ಲಿ ಯಾವುದೋ ಕಟ್ಟಡ ಬಂದಿತ್ತು, ಈಚಲು ಹಣ್ಣು ನೀಡಿದ್ದ ಮರಗಳು ಹೆಸರಿಗೂ ಇರಲಿಲ್ಲ, ಈಜು ಕಲಿತ ಕಪಿಲೆ ಬಾವಿ ಮುಚ್ಚಿ ಹೋಗಿತ್ತು, ಸೈಕಲ್ಲು ಬಾಡಿಗೆ ಪಡೆಯುತ್ತಿದ್ದ ಅಂಗಡಿ ಇಲ್ಲವಾಗಿತ್ತು, ಬಿಸಿ ಬಿಸಿ ಮಿಟಾಯಿ ಮಾಡಿ ಎಲ್ಲರ ನಾಲಿಗೆಗೆ ನೀಡುತ್ತಿದ ಮಿಟಾಯಿ ಶಿವಣ್ಣ ಬದುಕಿರಲಿಲ್ಲ, ಅಂದಿನ ಬಾಲ್ಯದ ಗೆಳೆಯರು ರಾಜಕೀಯದ ಒಳ ಸುಳಿಗೆ ಸಿಕ್ಕಿ ದುಶ್ಮನ್ ಗಳಾಗಿದ್ದರು, ಒಟ್ಟಿನಲ್ಲಿ ಬಾಲ್ಯದ ಸುಂದರ ಕನಸುಗಳೆಲ್ಲಾ ಭಗ್ನವಾದ ಹಾಳು ನೆನಪಾದವು, ಹಾಗು ಹೀಗೂ ರಾತ್ರಿ ಶ್ಯಾಮಣ್ಣನವರ ಮನೆಯಲ್ಲಿ ಊಟ ಮಾಡಿ ತನ್ನ ರೂಂ ಗೆ ಬಂದ ,
ಹೌದು ಈ ಮನೆಯನ್ನು ಅಜಯ್ ಮನೆಯವರು ಸುಮಾರು ಮೂವತ್ತು ವರ್ಷಗಳ ಹಿಂದೆ ಅವರ ಮನೆಯ ಹಿತೈಷಿಯಾಗಿದ್ದ ಬೋರೆ ಗೌಡರಿಗೆ ಮಾರಾಟ ಮಾಡಿದ್ದರು . ಬೋರೆಗೌಡರು ಆ ಕಾಲಕ್ಕೆ ಆ ಊರಿನ ಶ್ರೀಮಂತರಾದರೂ , ಅಜಯ್ ತಂದೆಯ ಆತ್ಮೀಯ ಗೆಳೆಯರಾಗಿದ್ದ ಕಾರಣ ಅವರೂ ಸಹ ಆ ಮನೆಯನ್ನುಅಜಯ್ ತಂದೆಯವರ ನೆನಪಿನಲ್ಲಿ ಖರೀದಿ ಮಾಡಿದ್ದರು, ಮನೆಯನ್ನು ಒಂದು ಚೂರೂ ಬದಲಾವಣೆ ಮಾಡದೆ ಹಾಗೆ ಉಳಿಸಿಕೊಂಡು ಬಂದಿದ್ದರು .. ಆ ರಾತ್ರಿ ಅಜಯ್ ಉಳಿದಿದ್ದ ರೂಂ ಗೆ ಬಂದ ಬೋರೆಗೌಡರು ಹಾಲು ಹಣ್ಣು ನೀಡಿ ಬಹಳಷ್ಟು ವಿಚಾರ , ಹಳ್ಳಿಯ ಹಿಂದಿನ ದಿನಗಳಿಗೂ ಇವತ್ತಿನ ದಿನಗಳಿಗೂ ಆದ ಬದಲಾವಣೆಯ ಸಂಪೂರ್ಣ ಮಾಹಿತಿ ನೀಡಿದರು,. "ಅಜಯಪ್ಪಾ ನೀವು ಬೊ ವರ್ಸ ಯಾರೋ ಈ ಕಡಿಕೆ ಬರ್ನೆ ಇಲ್ಲಾ , ಹತ್ತೊರ್ಸದ ಹಿಂದೆ ಮನೆ ಅಟ್ಟದ ಮ್ಯಾಲೆ ಒಂದು ತುಕ್ಕು ಹಿಡಿದ ಕಬ್ಬಿಣದ ಪೆಟ್ಟಿ [ ಪೆಟ್ಟಿಗೆ] ಸಿಕ್ತು" , "ಆದ್ರೆ ಅದರಲ್ಲಿ ಏನು ಐತೆ ಅಂತಾ ನೋಡಿಲ್ಲಾ" , "ನೀಮೆ ಯಾರಾದ್ರು ಬಂದಾಗ ಅದನ್ನು ತೆಗೆಯುಮಾ ಅಂತಾ ಜ್ವಾಪಾನವಾಗಿ ಮಡಗಿದ್ದೆ" , "ಪುಣ್ಯ ನಾ ಬದುಕಿದ್ದಾಗಲೇ ಬಂದ್ರೀ " ಅಂತಾ ಹೇಳಿ ತುಕ್ಕು ಹಿಡಿದ ಒಂದು ಕಬ್ಬಿಣದ ಪೆಟ್ಟಿಗೆ ತಂದಿಟ್ಟ , ಅಜಯ್ ಗೂ ಕೆಟ್ಟ ಕುತೂಹಲ ಉಂಟಾಗಿ , ಇಬ್ಬರೂ ಸೇರಿ ಪೆಟ್ಟಿಗೆ ತೆರೆಯಲು ಪ್ರಯತ್ನಿಸಿದರೂ, ತುಕ್ಕು ಹಿಡಿದ ಬೇಗ , ಬೀಗದ ಕೈ ಇಲ್ಲದೆ ತೆರೆಯಲು ಕಷ್ಟವಾಗಿ,ನಂತರ ಬಲವಂತದಿಂದ ಒಡೆದು ತೆಗೆದದ್ದಾಯಿತು. ತೆರೆದ ಪೆಟ್ಟಿಗೆ ಒಳಗೆ ಹಲವು ವರ್ಷಗಳ ಕೆಟ್ಟ ಗಾಳಿ ತುಂಬಿತ್ತು, ಒಂದಷ್ಟು ಜಿರಳೆ ಗಳು ಹರಿದಾಡಿದ್ದವು , ,ಅದರಲ್ಲಿ ಒಂದು ಪುಸ್ತಕ , ಬ್ಯಾಗು ಇತ್ಯಾದಿ ಕಂಡು ಬಂದವು, ಅಂತಹ ಮುಖ್ಯವಾದದ್ದು ಕಂಡು ಬರಲಿಲ್ಲ, ಪುಸ್ತಕ ತೆರೆದರೆ ಅಜಯ್ ಅಪ್ಪ ಬರೆದಿದ್ದ ಡೈರಿ ಆಗಿತ್ತು, ಅಪ್ಪನ ನೆನಪಿಗೆ ಇರಲಿ ಅಂತಾ ಅನ್ನಿಸಿತು, ಪುಸ್ತಕ ಬಿಡಿಸುತ್ತಿದ್ದಂತೆ ಒಂದೆರಡು ಫೋಟೋಗಳು ಕೆಳಗೆ ಬಿದ್ದವು ಕುತೂಹಲದಿಂದ ಎತ್ತಿ ಕೊಂಡು ನೋಡಿದೆ ಅಚ್ಚರಿ ಬಾಲ್ಯದಲ್ಲಿ ತೆಗೆದ ಆ ಫೋಟೋಗಳು ಅಜಯ್ ಅದನ್ನು ತೆಗೆದಿಟ್ಟು ಕೊಂಡ , ಉಳಿದ ಯಾವುದು ಅಂತಹ ಮುಖ್ಯ ಅನ್ನಿಸದ ಕಾರಣ ಅವುಗಳನ್ನು ವಿಲೇವಾರಿ ಮಾಡಲಾಯಿತು . ಬೋರೆಗೌಡ ರು ತಾವು ಬಂದ ಕೆಲಸ ಆಯಿತು ಅಂತಾ ಹೊರಟರು .
ರಾತ್ರಿ ರೂಂ ನಲ್ಲಿ ಮಲಗುವ ಮೊದಲು ಅಪ್ಪನ ಡೈರಿ ಓದತೊಡಗಿದ ಅಪ್ಪನ ತ್ಯಾಗದ ಪರಿಚಯ ಸಿಕ್ಕಿತು, ಅವರಿಂದ ಸಹಾಯ ಪಡೆದ ಚಿಕ್ಕಪ್ಪ, ಅತ್ತೆ , ಎಲ್ಲರೂ ಕೈಕೊಟ್ಟು ಮಾಡಿದ ಮೋಸದ ದರ್ಶನ ಸಿಕ್ಕಿತು. ಅದರೊಳಗೆ ಕಂಡ ಫೋಟೋ ನೋಡತೊಡಗಿದ ಆ ಹೌದು ಅವಳೇ , ....... ಅವಳು ..... ತೇಜಸ್ವಿನಿ .
ತೇಜಸ್ವಿನಿ , ಅಜಯ್ ಸೋದರಮಾವನ ಮಗಳು ಪ್ರತೀವರ್ಷ ಬೇಸಿಗೆ ರಜೆಯಲ್ಲಿ ಈ ಹಳ್ಳಿಗೆ ಬರುತ್ತಿದ್ದಳು, ಅಜಯ್ ಹಾಗು ಇವಳಿಗೆ ಚಿಕ್ಕಂದಿನಿಂದ ಬಾಲ್ಯದ ಒಡನಾಟ ಇತ್ತು. ಇವನೂ ಸಹ ದಸರಾ ರಜೆಯಲ್ಲಿ ಅವಳಿದ್ದ ಪಟ್ಟಣಕ್ಕೆ ಹೋಗಿ ಅವರ ಮನೆಯಲ್ಲಿ ಉಳಿಯುತ್ತಿದ್ದ , ಇವರಿಬ್ಬರು ಒಂದೇ ವಯಸ್ಸಿನವರಾಗಿದ್ದು ಒಂದೇ ತರಗತಿಯಲ್ಲಿ ಓದುತ್ತಿದ್ದರು , ಅವಳು ಪಟ್ಟಣದಲ್ಲಿ, ಇವನು ಪಕ್ಕದ ಪಟ್ಟಣದಲ್ಲಿ ಹತ್ತನೇ ಪ್ರೌಡಶಾಲೆ ಯಲ್ಲಿ ಕಲಿಯುತ್ತಿದ್ದರು. ಹಳ್ಳಿಗೆ ಬಂದಾಗ ಇವನು ಅವಳನ್ನು ತನ್ನ ಸೈಕಲ್ ನಲ್ಲಿ ಕುಳ್ಳರಿಸಿಕೊಂಡು ಗದ್ದೆ, ತೋಟ , ಮುಂತಾದ ಕಡೆ ಓಡಾಡಿಸುತ್ತಿದ್ದ , ಅವಳು ಬಂದಾಗ ಇಬ್ಬರು ಮಕ್ಕಳಿಗೂ ಹೊಸ ಬಟ್ಟೆ ತರುವ ಕೆಲಸ ಅಜಯ್ ಅಪ್ಪನದಾಗಿತ್ತು. ಹೀಗೆ ಕಳೆದಿತ್ತು ಬಾಲ್ಯ, ಒಮ್ಮೆ ಅವಳು ಬೇಸಿಗೆ ರಜಕ್ಕೆ ಬಂದವಳೇ "ಲೇ ಬಾರೋ ಅಜಯ್ ನಿಮ್ಮ ಗದ್ದೆ ಕಡೆ ಹೋಗಿ ಬರೋಣ" ಅಂತಾ ಕರೆದಳು , ಅಜಯ್ "ತಾಯಿ ಲೋ ಹುಷಾರಾಗಿ ಕರೆದುಕೊಂಡು ಹೋಗಿ ಬಾ ಅಂತಾ ಸೈಕಲ್ಲಿನ ಕೀ ಕೊಟ್ಟರು . ಇಬ್ಬರ ಸವಾರಿ ಗದ್ದೆ ಕಡೆಗೆ ಹೊರಟಿತು, ದಾರಿಯಲ್ಲಿ ಸಿಕ್ಕ ಸೀಬೆ ಹಣ್ಣು, ಕಬ್ಬು . ನೇರಳೆ ಹಣ್ಣು , ಅಲ್ಲೇ ಇದ್ದ ನೀರಿನ ಕಾಲುವೆ ಇವೆಲ್ಲವನ್ನೂ ನೋಡಿ ಹರುಷ ಗೊಂಡ ಅವಳು, "ಲೋ ಅಜಯ್ ನಿಂಗೆ ನನ್ನ ನೋಡಿದ್ರೆ ಏನು ಅನ್ನಿಸುತ್ತೆ ಅಂದಳು " ಅಜಯ್" ಏನೇ ಹಾಗಂದ್ರೆ , ನನಗೆ ಅರ್ಥ ಆಗಲಿಲ್ಲ," ಅಂದಾ . ಲೋ ಅಜಯ್ ನಿನ್ನ ಕಂಡ್ರೆ ನನಗೆ ಇಷ್ಟಾ ಕಣೋ, ಮುಂದೆ ನಾವಿಬ್ಬರು ದೊಡ್ಡವರಾದ ಮೇಲೆ ಮದುವೆ ಆಗೋಣ ಅಂದಳು , ಇವನು ಅವಳನ್ನು ಎಂದೂ ಅದೃಷ್ಟಿ ಯಲ್ಲಿ ಎಂದೂ ನೋಡಿರಲಿಲ್ಲ, ಈ ಮಾತು ಕೇಳಿ ಮೌನವಾದ , ಆ ಮೇಲೆ ಅವಳ ಬಗ್ಗೆ ಆಸಕ್ತನಾದ , [ ಈ ವಯಸ್ಸಿನಲ್ಲಿ ಪ್ರೀತಿ ಹುಟ್ಟೋದಿಲ್ಲ , ಆಕರ್ಷಣೆ ಅಷ್ಟೇ ] , ಇಬ್ಬರು ಕೈ ಹಿಡಿದು ಬಹಳಷ್ಟು ವಿಚಾರ ಮಾತನಾಡಿದರು, ಆದ್ರೆ ಮೊದಲಿದ್ದ ಸಲಿಗೆ ಕಡಿಮೆ ಯಾಯಿತು. ಪ್ರೌಡ ಶಾಲೆ ಮುಗಿಸಿ, ಕಾಲೇಜಿಗೆ ಬರುವಷ್ಟರಲ್ಲಿ ಎರಡು ಕುಟುಂಬಗಳ ಮಧ್ಯೆ ತಲೆದೋರಿದ ವೈಮನಸ್ಸು ದೊಡ್ಡವರ ಸಂಬಂಧಕ್ಕೆ ಹುಳಿ ಹಿಂಡಿತ್ತು .. ಎರಡು ಕುಟುಂಬಗಳು ದೂರವಾದವು .
ಅಜಯ್ ಕಾಲೇಜು ಮುಗಿಸಿ ಜೀವನದಲ್ಲಿ ಬಹಳಷ್ಟು ಕಷ್ಟ ಎದುರಿಸಿ , ನೆಂಟರ ಸಹಾಯವಿಲ್ಲದೆ ಕಷ್ಟಪಟ್ಟು ತಾನೇ ಜೀವನದಲ್ಲಿ ನೆಲೆ ಕಂಡುಕೊಂಡ . ಬಹಷ್ಟು ವರ್ಷ ಆಗಿತ್ತು, ಈ ಘಟನೆ ನಡೆದು, ರೂಂ ನಲ್ಲಿ ನೋಡಿದ ಆ ಫೋಟೋಗಳು ಗತ ಕಾಲದ ನೆನಪಿನ ಮೂಟೆಗಳನ್ನು ಗುಡ್ಡೆ ಹಾಕಿದ್ದವು, ಆ ರೂಂ ನಲ್ಲಿ ಕುಳಿತು ಆ ಫೋಟೋ ನೋಡುತ್ತಾ ನೋಡುತ್ತಾ ಅಜಯ್ ಕಣ್ಗಳಲ್ಲಿ
ಕಣ್ಣೇರು ಬರುತ್ತಿತ್ತು, ಯಾಕೋ ಈ ಊರಿನಲ್ಲಿ ಇರೋದು ಬೇಡ ಅನ್ನಿಸಿ, ಮಾರನೆಯ ದಿನ ಮುಂಜಾವಿಗೆ ವಾಪಸ್ಸು ಹೊರಟು ಬಿಟ್ಟ , ಮನೆಗೆ ಬಂದವನೇ ಅಜಯ್ ತನ್ನ ರೂಂ ಸೇರಿ ಹಾಗೆ ಮಂಚದ ಮೇಲೆ ಉರುಳಿದ ಪತ್ನಿ ಸವಿತಾ ಕಾಫಿ ಯೊಂದಿಗೆ ಪ್ರತ್ಯಕ್ಷಳಾಗಿ, "ಯಾಕ್ರೀ ಸುಸ್ತಾಗಿದ್ದೀರ ತಗೋಳಿ ಕಾಫಿ", ಅಂತಾ ಕಾಫಿ ಕೊಟ್ಟು, ರಮಿಸಿ, ಮನಸಿನ ದುಗುಡ ಕಡಿಮೆ ಮಾಡಿದಳು . ಆನಂತರ "ನೋಡಿ ನಿಮಗೆ ಒಂದು ಲಗ್ನ ಪತ್ರಿಕೆ ಬಂದಿದೆ" , "ನಿಮ್ಮ ಗೆಳೆಯನ ಮಗಳ ಮದುವೆಯಂತೆ " ಅನ್ನುತ್ತ ಕೈಗಿತ್ತಳು . ಗೆಳೆಯನ ಮಗಳ ಮದುವೆಗೆ ಎರಡು ದಿನ ಮುಂಚಿತವಾಗಿಯೇ ಹೊರಡಲು ನಿರ್ಧಾರ ಮಾದಿದೆವು.
ಗೆಳೆಯನ ಮಗಳ ವಿವಾಹ ಸಂಭ್ರಮ ಜೋರಾಗಿತ್ತು, ಮೊದಲೆಲ್ಲಾ ಮದುವೆಗಳಲ್ಲಿ ಮೊದಲು ವರ ಪೂಜೆ, ಮಾರನೆಯ ದಿನ ಧಾರೆ , ನಂತರ ಆರತಕ್ಷತೆ ಇತ್ತು, ಆದರೆ ಈಗ ಬದಲಾಗಿ ಎಲ್ಲ ಮದುವೆಗಳಂತೆ ಈ ಮದುವೆಯಲ್ಲಿ ಮೊದಲೇ ಆರತಕ್ಷತೆ ಇಂದ ಕಾರ್ಯ ಪ್ರಾರಂಭ ವಾಯಿತು. ಬಂದ ಗಣ್ಯರನ್ನು ಸ್ವಾಗತಿಸಿದ ಗೆಳೆಯನಿಗೆ ಆಸರೆಯಾಗಿ ಅಜಯ್ ನಿಂತಾ , ಆಗಮಿಸಿದ ಅತಿಥಿಗಳಿಗೆ ಸತ್ಕಾರ ಮಾಡುವ ಕಾರ್ಯ ಅವನಾದಾಗಿತ್ತು ಒಬ್ಬೊಬ್ಬರಾಗಿ ಆಗಮಿಸಿದ ಆಹ್ವಾನಿತರನ್ನು ಸ್ವಾಗತಿಸಿ ಸೌಲಭ್ಯ ನೀಡಿದ್ದಾಯಿತು, ಗೆಳೆಯ ಕೂಡ ಹರುಷಗೊಂಡು ಅಜಯ್ ನನ್ನು ಹೊಗಳಿದ , ಎಲ್ಲಾ ಕಾರ್ಯ ನಡೆಯುತ್ತಿತ್ತು, ವೇದಿಕೆ ಯಲ್ಲಿ ನವ ವಧುವರರು ಸಂಭ್ರಮದಲ್ಲಿ ಮುಳುಗಿದ್ದರು. ಅಜಯ್ ಹಾಗು ಗೆಳೆಯ ಒಂದೆಡೆ ಕುಳಿತು ನೋಡುತ್ತಿದ್ದರು, ಆಗ ಅಜಯ್ ಗೆಳೆಯ , ಲೋ ಅಲ್ನೋಡು ಅವರನ್ನು ನಾವು ಮಾತನಾಡಿಸಿಯೇ ಇಲ್ಲಾ ಬಾ ಮಾರಾಯ ಅಂತಾ ಅಜಯ್ ನನ್ನು ಎಳೆದುಕೊಂಡು ಓಡಿದ , ಆ ದಂಪತಿಗಳ ಹತ್ತಿರ ಬಂದವನೇ "ಹಲೋ ಮಿಸ್ಟರ್ ಭೂಷಣ್, ಸಾರಿ ನಿಮ್ಮನ್ನು ಗಮಸಿರಲಿಲ್ಲ," ಅಂತಾ ಹೇಳಿ, "ಬನ್ನಿ ಬನ್ನಿ ಅಂತಾ ಉಪಚರಿಸಿ," "ಬಾ ಅಜಯ್ ಇವರ ಪರಿಚಯ ಮಾಡುತ್ತೇನೆ ಅಂತಾ ಹೇಳಿ ಇವರು ಭೂಶಣ್" ಅಂತಾ , "ಪಕ್ಕದಲ್ಲಿ ಇರುವವರು ತೇಜಸ್ವಿನಿ ಇವರ ಪತ್ನಿ," ಇಬ್ಬರು "ಮೇಡ್ ಫಾರ್ ಈಚ್ ಅದರ್" "ಇವನು ನನ್ನ ಆತ್ಮೀಯ ಗೆಳೆಯ ಅಜಯ್" ಎಂದು ಪರಿಚಯ ಮಾಡಿದ , ಇಬ್ಬರತ್ತ ಕೈಮುಗಿದ ಅಜಯ್ ಬೆವತು ಹೋದ , ಬಾಲ್ಯದಲ್ಲಿ ಕಳೆದು ಹೋಗಿದ್ದ ತೇಜಸ್ವಿನಿ ಇಲ್ಲಿ ಪ್ರತ್ಯಕ್ಷ ಆಗಿದ್ದಳು, ಆದರು ತೋರಿಸಿಕೊಳ್ಳದೆ ಯಾಂತ್ರಿಕವಾಗಿ ಅವರನ್ನು ಉಪಚರಿಸಿದ.
ಗೆಳೆಯನ ಮಗಳ ವಿವಾಹ ಸಂಭ್ರಮ ನಡೆದಿತ್ತು, ಬೆಳಿಗ್ಗೆ ಉಪಹಾರ ವ್ಯವಸ್ಥೆಯ ನಿರ್ವಹಣೆ ಅಜಯ್ ನೋಡಿಕೊಳ್ಳುತ್ತಿದ್ದ , ಆಗ ಬಂದ ಭೂಷಣ್ ಆತ್ಮೀಯವಾಗಿ ಬನ್ನಿ ಅಜಯ್ ನಮ್ಮ ಜೊತೆ ಕಂಪನಿ ಕೊಡಿ ಎಂದು ಬಲವಂತ ಮಾಡಿ ಜೊತೆಯಲ್ಲಿ ಉಪಹಾರಕ್ಕೆ ಕುಳಿತರು, ಜೊತೆಯಲ್ಲಿ ತೇಜಸ್ವಿನಿ ಕೂಡ ಬಂದಳು, ಉಪಹಾರ ಮಾಡುತ್ತಾ ಪರಸ್ಪರ ಪರಿಚಯ ವಾಯಿತು, ಆದರೆ ತೇಜಸ್ವಿನಿ ಒಂದೂ ಮಾತನಾಡಲಿಲ್ಲ, ಸ್ವಲ್ಪ ಸಮಯದ ನಂತರ ತೆರಳಿದ ಅವರು ವಿವಾಹ ಕಾರ್ಯದಲ್ಲಿ ಮುಳುಗಿಹೋದರು,
ಧಾರೆ ಯಾಯಿತು, ಎಲ್ಲರೂ ಗಡಿಬಿಡಿ ಯಾಗಿ ಓಡಾಡುತ್ತಿದ್ದರು, ಅಜಯ್ ಅಲ್ಲೇ ಊಟದ ವ್ಯವಸ್ಥೆ ಮಾಡುತ್ತಿದ್ದ, ಅಲ್ಲಿಗೆ ಬಂದಳು ತೇಜಸ್ವಿನಿ , "ನಾನು ಯಾರು ಗುರುತು ಸಿಕ್ತೇನೋ ನಿನಗೆ" ನೀನು ಅಜಯ್ ಆಲ್ವಾ, ಸಾರಿ ನಿನ್ನೊಡನೆ ಸರಿಯಾಗಿ ಮಾತನಾಡಲು ಆಗ್ತಿಲ್ಲ, ನನ್ನ ಮೊಬೈಲ್ ನಂಬರ್ ತಗೊ. ನಿನ್ನ ನಂಬರ್ ಕೊಡು ನಾಳೆ ಸಿಗು ನಿನ್ನಲ್ಲಿ ಸ್ವಲ್ಪ ಮಾತನಾಡಬೇಕು ಅಂದಳು .
ವಿವಾಹ ಕಾರ್ಯ ಮುಗಿಯಿತು, ಮಾರನೆಯ ದಿನ ಬೀಗರ ಔತಣ ಪೂಜೆ ಇತ್ಯಾದಿ ನಡೆದಿತ್ತು, ಅವಳ ಫೋನ್ ಬಂತು , ಸರಿ ಅಂತಾ ಆ ದೇವಾಲಯದ ಹತ್ತಿರ ಹೊರಟ , ದೇವಾಲಯದಲ್ಲಿ ಸಿಕ್ಕ ಅವಳು ಬಾ ಆ ಬಂಡೆಯ ಮೇಲೆ ಕುಳಿತು ಮಾತನಾಡೋಣ ಅಂದಳು, ಬಂಡೆಯ ಮೇಲೆ ಕುಳಿತ ಇಬ್ಬರು ಗತಕಾಲಕ್ಕೆ ಜಾರಿದರು, ಏನೋ ನಿನ್ನ ಸಮಾಚಾರ , ಇಷ್ಟು ವರ್ಷ ಎಲ್ಲಿಗೆ ಹೋಗಿದ್ದೆ, ನಾನಂತೂ ನಿನ್ನ ನೋಡುವ ಆಸೆಯಿಂದ ಇಷ್ಟು ವರ್ಷ ಕಳೆದೆ , ತಪ್ಪು ತಿಳುವಳಿಕೆಯಿಂದ ಆದ ಆ ಘಟನೆ ನಮ್ಮಿಬ್ಬರ ಮೆನೆಯವರನ್ನು ದೂರ ಮಾಡಿದೆ, ಆ ಮೇಲೆ ಸತ್ಯ ತಿಳಿಯುವಷ್ಟರಲ್ಲಿ, ನನ್ನ ಮದುವೆ ಆಗಿ ಹೋಗಿತ್ತು, ಆದರೂ ನಿನ್ನ ನೆನಪಲ್ಲಿ ಕೊರಗಿದೆ ನಾನು, ಬಾಲ್ಯದಲ್ಲಿ ನಮ್ಮಿಬ್ಬರ ಒಡನಾಟದ ಸುಂದರ ಕ್ಷಣಗಳನ್ನು ಮೆಲುಕು ಹಾಕಿ ಕಣ್ಣಲ್ಲಿ ನೀರು ಹಾಕಿದಳು , "ಸಾರಿ ಕಣೋ ನಿನ್ನ ಪಡೆಯುವ ಭಾಗ್ಯ ನನ್ನದಾಗಲಿಲ್ಲ,"" ಆದರೆ ನನ್ನ ಗಂಡನಿಗೆ ಒಳ್ಳೆಯ ಪತ್ನಿಯಾಗಲು ಸಾಧ್ಯವಾಗುತ್ತಿಲ್ಲ", "ನಿನ್ನ ಕೊರಗು ನನ್ನನ್ನು ಕಾಡುತ್ತಿದೆ" , "ಯಾಕಂದ್ರೆ ನಿನ್ನಲ್ಲಿ ಪ್ರೀತಿಯ ಗಿಡ ನೆಟ್ಟವಳು ನಾನು" , "ಅದನ್ನು ಸಾಯಿಸಿದ ಪಾಪ ನನ್ನನ್ನು ಕಾಡುತ್ತಿದೆ" , ಎಂದು ಅಳುತ್ತಾ ಅಜಯನ ಭುಜಕ್ಕೆ ಒರಗಿದಳು, ಅವಳ ಕಣ್ಣೀರಿನಿಂದ ಅವನ ಭುಜ ಒದ್ದೆಯಾಯಿತು, ಮನದಲ್ಲಿ ಸಂಕಟದ ಬೆಂಕಿ ಹತ್ತಿ ಉರಿಯುತ್ತಿತ್ತು.
ಸ್ವಲ್ಪ ಹೊತ್ತು ಮೌನ ನಂತರ ಮತ್ತಷ್ಟು ಮಾತು ಇವುಗಳ ಜುಗಲ್ಬಂದಿ ನಡೆಯಿತು, ಅಜಯ್ ಒಂದು ಕ್ಷಣ ಯೋಚಿಸಿ, ಮಾತನಾಡಲು ಹೊರಟ ಆದರೆ ಬಾಯಲ್ಲಿ ಮಾತುಗಳು ಬರುತ್ತಿಲ್ಲ, ಇವಳ ಮಾತು ಕೇಳಿ ಇವಳ ಜೊತೆ ನಡೆದರೆ, ಅವಳ ಸಂಸಾರ ಹಾಳಾಗುತ್ತದೆ, ಜೊತೆಗೆ ತನ್ನನ್ನೇ ನಂಬಿ ಪ್ರೀತಿಸಿ ಬಂದಿರುವ ಸವಿತಾ ಬಾಳು ಹಾಳಾಗುತ್ತದೆ , , ಈಗ ದುಡುಕಿದರೆ ನರಕ ದ ಬದುಕು ಇಬ್ಬರದಾಗುತ್ತದೆ ಎಂದು ಯೋಚಿಸಿ, "ತೇಜಸ್ವಿನಿ, ನೋಡು ನೀನು ಸಿಕ್ಕಿದ್ದು ಬಹಳ ಸಂತೋಷ ," "ನೀನೀಗ ಭೂಷಣ್ ರ ಪತ್ನಿ," "ಭೂಷಣ್ ತುಂಬಾ ಒಳ್ಳೆಯ ವ್ಯಕ್ತಿ, " "ನನ್ನ ನೆನಪಿನಲ್ಲಿ ಅವರಿಗೆ ಅನ್ಯಾಯ ವಾದರೆ ಅದು ನೀನು ನನಗೆ ಬಗೆಯುವ ದ್ರೋಹ ವಾಗುತ್ತದೆ" , "ಜೊತೆಗೆ ನನ್ನ ಕಷ್ಟದ ದಿನಗಳಲ್ಲಿ ಜೊತೆಯಾಗಿ ನಡೆದು ಬಂದ ನನ್ನ ಪ್ರಿಯ ಪತ್ನಿ ಸವಿತಾ ಬಾಳು ಸಹ ನಿನ್ನ ದುಡುಕು ನಿರ್ಧಾರದಿಂದ ಹಾಳಾಗುತ್ತದೆ" , "ಇದಕ್ಕೆ ನಾವಿಬ್ಬರೂ ಅಪಾರ ಬೆಲೆ ತೆರಬೆಕಾಗುತ್ತದೆ ", "ನೀನು ತುಂಬಾ ಒಳ್ಳೆಯವಳು," "ಆವೇಶದ ನಿರ್ಧಾರ ಒಳ್ಳೆಯದಲ್ಲ", "ನಾವಿಬ್ಬರು ಒಳ್ಳೆಯ ಗೆಳೆಯರಾಗೋಣ", "ಪರಸ್ಪರ ಗೌರವ ಇಟ್ಟುಕೊಳ್ಳೋಣ, " " ಬಾಲ್ಯದ ನೆನಪುಗಳು ಅಮರವಾಗಿ ಉಳಿಯಲಿ", "ನಿನ್ನ ಕುಟುಂಬ ಚೆನ್ನಾಗಿ ನಿರ್ವಹಿಸಿದರೆ ನೀನು ನನ್ನ ನೆನಪುಗಳಿಗೆ ಗೌರವ ಕೊಟ್ಟಂತೆ " , "ತೇಜಸ್ವಿನಿ ಪ್ಲೀಸ್ ನನ್ನ ಗೆಳತಿಯಾಗಿ ನನ್ನ ನೆನಪಾಗಿ ಉಳಿದುಕೊ ಭೂಷಣ್ ರಿಗೆ ಒಳ್ಳೆಯ ಸತಿಯಾಗು ನಿನ್ನ ಸಂಸಾರದಲ್ಲಿ ಸುಖ ಶಾಂತಿ ನೆಲಸಲಿ" , "ನಿನಗೆ ಒಳ್ಳೆಯದಾಗಲಿ, " ಎಂದಾ,
ತೇಜಸ್ವಿನಿ ಇವನ ಮಾತು ಕೇಳಿ ಮತ್ತೆ ಮೌನದ ಮೊರೆ ಹೋದಳು , ಸ್ವಲ್ಪ ಸಮಯದನಂತರ ಯೋಚಿಸಿ , ಅಜಯ್ ನೀನಿಷ್ಟು ವಿಸ್ತಾರವಾಗಿ ಯೋಚಿಸಿದ್ದು ಒಳ್ಳೆಯದಾಯಿತು, ನಿನ್ನ ಬಗ್ಗೆ ಗೌರವ ಜಾಸ್ತಿಯಾಯಿತು, ನಿನ್ನ ಮಾತಿಗೆ ಬೆಲೆ ಕೊಡುತ್ತೇನೆ, ಭೂಷಣ್ ಗೆ ಒಳ್ಳೆಯ ಸತಿಯಾಗುತ್ತೇನೆ, ನಮ್ಮಿಬ್ಬರ ಬಾಲ್ಯದ ಸುಂದರ ನೆನಪುಗಳಿಗೆ ಬಹುಮಾನವಾಗಿ ನಿನ್ನ ಕೋರಿಕೆಯಂತೆ ಬಾಳುತ್ತೇನೆ,ಅಂದಳು
ಅತ್ತಕಡೆ ದೇವಾಲಯದಲ್ಲಿ ದೇವರಿಗೆ ಮಂಗಳಾರತಿ ಆಗುತ್ತಿತ್ತು, ಇತ್ತ ಇವರಿಬ್ಬರ ಬಾಳಿನಲ್ಲಿ ಹೊಸ ಮನ್ವಂತರ ಶುರು ಆಗಿತ್ತು.
ಬಾಲ್ಯದನೆನಪಿನಲ್ಲಿ ಬದುಕೋಣ ಬಾ |
9 comments:
ಮೊದಲು ನನಗೆ ಸೆಳೆದದ್ದು ಅಜಯ್ ಅವರ ತುಂಬು ವ್ಯಕ್ತಿತ್ವ. ಅಚಾನಕ್ಕಾಗಿ ಸಿಕ್ಕ ತೇಜಸ್ವಿನಿ ಜೊತೆ ಆಟ ನಡೆದುಕೊಂಡ ರೀತಿ.
ಎರಡನೆಯದಾಗಿ, ನೀವು ಅಂದಿನ ಹಳ್ಳಿಗಳು ಇಂದು ಬದಲಾಗಿ ಹೋಗಿರುವ ಬಗ್ಗೆ ಬರೆದುಕೊಟ್ಟ ಸಾಲುಗಳು. ನನ್ನ ಹಳ್ಳಿಯೂ ಹಾಗೇ ನನಗೇ ಇಂದು ಗುರುತು ಸಿಗುವುದಿಲ್ಲ.
ಅಪ್ಪನ ಡೈರಿ ಇಟ್ಟಿದ್ದ ಆ ಪೆಟ್ಟಿಗೆಯನ್ನು ಬೋರೇಗೌಡರು ತೆರೆದಿರಲೇ ಇಲ್ಲ. ಅದು ಹಳ್ಳಿಗರ ನಿಯತ್ತು.
ಒಟ್ಟಾರೆಯಾಗಿ ನಗರ - ಗ್ರಾಮೀಣ, ಒಲವು - ಪುನರ್ ಮಿಲನ, ನೆನಪುಗಳು ಹೀಗೆ ಒಟ್ಟು ಮಾಡಿಕೊಟ್ಟ ಸಣ್ಣ ಕಥೆ ಇದು.
ಬಾಲೂ ಸಾರ್ ಸೂಪರ್ರೂ...
ಬಾಲು ಸರ್ ನಿಮ್ಮ ಆಲೋಚನೆ ಉತ್ತಮವಾಗಿದ್ದು ಹಳ್ಳಿಯ ಹಿಂದಿನ ಚಿತ್ರಣ ಇಂದಿನ ಚಿತ್ರಣ
ಎಲ್ಲವನ್ನ ಸುಂದರವಾಗಿ ನಿರೂಪಿಸಿದ್ದಿರ ಜೊತೆಯಲ್ಲಿ ಪ್ರತಿಯೊಬ್ಬರ ಬಾಲ್ಯದ ಸವಿ ನೆನಪುಗಳಿಗೆ
ಇ ಕಥೆ ಕಂಡಿತ ಸಹಾಯ ಒಟ್ಟಿನಲ್ಲಿ ಬಾಲು ಸರ್ realy ಸೂಪರ್
ಬಾಲು ಸರ್ ನಿಮ್ಮ ಆಲೋಚನೆ ಉತ್ತಮವಾಗಿದ್ದು ಹಳ್ಳಿಯ ಹಿಂದಿನ ಚಿತ್ರಣ ಇಂದಿನ ಚಿತ್ರಣ
ಎಲ್ಲವನ್ನ ಸುಂದರವಾಗಿ ನಿರೂಪಿಸಿದ್ದಿರ ಜೊತೆಯಲ್ಲಿ ಪ್ರತಿಯೊಬ್ಬರ ಬಾಲ್ಯದ ಸವಿ ನೆನಪುಗಳಿಗೆ
ಇ ಕಥೆ ಕಂಡಿತ ಸಹಾಯ ಒಟ್ಟಿನಲ್ಲಿ ಬಾಲು ಸರ್ realy ಸೂಪರ್
chandada kathe sir.... sukhaantya innu ishTa aaytu....
chikka chikka vishayavannu ishTapaTTu hELutteeraa sir....
thank you sir... chandada kathege...
ಅಂಗೈಯಲ್ಲಿ ಆಕಾಶ ಸಿಕ್ಕಾಗ ದುಡುಕದೆ ವ್ಯವಧಾನದಿಂದ ವರ್ತಿಸಿದ ಅಜಯ್ ನಿಜಕ್ಕೂ ನಾಯಕನಾಗುತ್ತಾನೆ. ಹುಟ್ಟು ಬೆಳೆದ ಹಳ್ಳಿಯಲ್ಲಿ ನಡೆದುಬಂದ ಕೆಲ ಸಮಯ ಜೀವನದ ದಿಕ್ಕನ್ನು ಬದಲಿಸಲು ಸಹಾಯ ಮಾಡುತ್ತದೆ. ಹುಟ್ಟೂರು, ಹುಟ್ಟಿದ ಮನೆ, ನಡೆದಾಡಿದ ಜಾಗ ಇವೆಲ್ಲ ಸ್ಫೂರ್ತಿ ತುಂಬಬಲ್ಲ ತಾಣಗಳು. ಸೊಗಸಾಗಿ ಮೂಡಿ ಬಂದಿದೆ ಕಥಾನಕ
ಮೂಲ ಕಥೆಯ ಹಂದರ ಬಿಡಿಸಲು ಮತ್ತೊಂದು ಪುಟ್ಟ ಕಥೆಯ ಬಾಲ್ಯದ ಆಟಗಳ ಪೀಠಿಕೆ ಚೆನ್ನಾಗಿದೆ. ಅಜಯ್ ನ ವ್ಯಕ್ತಿತ್ವ ಮೆಚ್ಚುವಂಥಹುದು. ಜುಗಲ್ಬಂದಿ ಆರಂಭವಾದಾಗ ಎಲ್ಲಿ ಎಡವುತ್ತಾರೋ ಎಂದೆಣಿಸಿದ್ದೆ. ಸಂಸ್ಕೃತಿಯ ಚೌಕಟ್ಟನ್ನು ಮೀರದೆ ಒಳ್ಳೆಯ ಗೆಳೆಯರಾದದ್ದು ಸಮಾಧಾನ ..
ತುಂಬಾ ಚೆನ್ನಾಗಿದೆ ಸರ್ ಕಥೆ, ಹಳ್ಳಿಯ ಸೊಬಗು ಯಾವಾಗಲೂ ಕಾಡುತ್ತಿರುತ್ತದೆ. ಅಂತ್ಯ ತುಂಬಾ ಇಷ್ಟವಾಯ್ತು
ಬಾಲಣ್ಣ ಕಥೆ ಸುಂದರವಾಗಿದೆ.
Very nice balanna
Post a Comment