|
ಮುಂಜಾವಿನ ಸಂಭ್ರಮ |
ಅಂತೂ ಇಂತೂ ಯಾವಾಗಲೋ ನಿದ್ದೆ ಬಂದಿತ್ತು . ........ !!! ನಿದ್ದೆಯಿಂದ ಎಚ್ಚರವಾದಾಗ ದೂರದಲ್ಲಿ ಎಲ್ಲೋ ಕಲರವ ಕೇಳಿತ್ತು ಹಕ್ಕಿಗಳ ಚಿಲಿಪಿಲಿ ಗಾನದ ಸುಪ್ರಭಾತ ,ಮುಂಜಾನೆಯ ಕೆಂಪಾದ ಆಕಾಶ ಹೊಸ ನೋಟದ ದರ್ಶನ ನಮ್ಮದಾಗಿತ್ತು, ಮುಂಜಾವಿನ ತಂಗಾಳಿಯಲ್ಲಿ ಕ್ಯಾಮರಾ ಹಿಡಿದು ಹೊರಟೆ
|
ರಾತ್ರಿ ನಮ್ಮ ನೆಮ್ಮದಿ ಹಾಳಾಯ್ತು |
ಜಂಗಲ್ ಲಾಡ್ಜ್ ಸುತ್ತ ಮುತ್ತಾ ಮುಂಜಾವಿನ ಸುಳಿಗಾಳಿ ತನ್ನ ಜಾಲ ಬೀಸಿತ್ತು, ಪ್ರಶಾಂತವಾದ ವಾತಾವರಣ , ಪಕ್ಷಿಗಳ ಕಲರವ, ಮನಸನ್ನು ಪ್ರಸನ್ನಗೊಳಿಸಿತ್ತು , ಅಲ್ಲೇ ಸನಿಹದಲ್ಲಿ ಮರದ ಮೇಲೆ ಎರಡು ಲಾಂಗೂರ್ ಕೋತಿಗಳು ಸಪ್ಪಗೆ ಕುಳಿತಿದ್ದವು , ಬಹುಷಃ ರಾತ್ರಿಯ ಸಿನಿಮ ಶೂಟಿಂಗ್ ಶಬ್ದ, ಹೈ ಬೀಮ್ ಬೆಳಕು, ಜೆನರೆಟರ್ ಶಬ್ಧ ಅವುಗಳ ರಾತ್ರಿ ನರಕ ಮಾಡಿತ್ತೆಂದು ಕಾಣುತ್ತದೆ , ಲಾಂಗೂರ್ ಕೋತಿಗಳ ಬಗ್ಗೆ ಮರುಕ ಪಡುತ್ತಾ ಹಾಗೆ ಸಾಗಿದೆ , ಕಾಳಿ ನದಿಯ ದಂಡೆ, ಅಲ್ಲಿನ ಪ್ರಕೃತಿ ವೈಭವ ನನ್ನ ಕ್ಯಾಮರಾದಲ್ಲಿ ಸೆರೆಯಾಯಿತು . ಸುತ್ತಾಟ ಮುಗಿಸಿ ರೂಂ ಗೆ ಮರಳಿ ಸಿದ್ದನಾಗಿ ಬೆಳಿಗ್ಗೆಯ ಟ್ರೆಕಿಂಗ್ ಗೆ ಸಿದ್ದನಾದೆ.
|
ಚಾರಣ ಕ್ಕೆ ಹೋರಟ ಮಂದಿ |
|
ಒಣಗಿದ ಎಲೆಗಳು , ಕಡ್ಡಿ, ಕಾಯಿಗಳು ಹಾಸಿದ್ದ ದಾರಿ |
ಬೆಳಿಗ್ಗೆ ಸುಮಾರು ಎಂಟು ಘಂಟೆಗೆ ನಮ್ಮನ್ನು ಅಲ್ಲೇ ಅಕ್ಕಪಕ್ಕದ ಕಾಡಿಗೆ ಚಾರಣಕ್ಕೆ ಕರೆದುಕೊಂಡು ಹೊಗಲಾಯಿತು. ಒಬ್ಬರು ಜಂಗಲ್ ಲಾಡ್ಜ್ ಸಿಬ್ಬಂದಿ ನಮ್ಮ ಪೈಲಟ್ ಆದರು. ಅಲ್ಲೇ ಪಕ್ಕದಲ್ಲಿದ್ದ ಗಿಡಗಳ ನರ್ಸರಿ ಒಳಗೆ ಹೊಕ್ಕು ಕಾಡಿನ ಹಾದಿ ಹೊಕ್ಕೆವು, ಕಾಡಿನ ಹಾದಿಯಲ್ಲಿ ಒಣಗಿದ ಎಲೆ, ಕಡ್ಡಿ, ಕಾಯಿ ಮುಂತಾದವುಗಳು ಹಾಸಿಗೆ ಹಾಕಿದ್ದವು. ಯಾವುದೇ ಪಕ್ಷಿಗಳ ದ್ವನಿಯಾಗಲಿ ಪಕ್ಷಿಯಾಗಲಿ ಕಾಣಲು ಸಿಗದೇ ಇದ್ದದ್ದು ಆಶ್ಚರ್ಯವಾಗಿತ್ತು. , ಸ್ವಲ್ಪ ಹಾಗೆ ಮುಂದೆ ಬಂದ ನಮಗೆ ಅಲ್ಲೇ ಮರದ ಮೇಲೆ ಕಂದು ಬಣ್ಣದ "ಮಲಬಾರ್ ದೊಡ್ಡ ಅಳಿಲು" ಕಾಣಸಿಕ್ಕಿತು. ತುಂಬಾ ನಾಚಿಕೆ ಸ್ವಭಾವದ ಸಾದು ಪ್ರಾಣಿ ಇದು,
|
"ಮಲಬಾರ್ ದೊಡ್ಡ ಅಳಿಲು" |
ಮುಂದೆ ನಡೆದ ನಮಗೆ ಕಾಡಿನೊಳಗೆ ಇಲ್ಲದ ಹಾದಿಯಲ್ಲಿ ಒಬ್ಬ ವ್ಯಕ್ತಿ ಸೈಕಲ್ ನಲ್ಲಿ ಸಾಗುತ್ತಿದ್ದರು,ಇದೇಕೆ ಹೀಗೆ ಎಂದು ಕೇಳಿದ ನಮಗೆ , ಅಲ್ಲಿನ ಸಿಬ್ಬಂದಿ ಕಾಡಿನೊಳಗೆ ಅಲ್ಲಲ್ಲಿ ಮನೆಗಳಿವೆ ಸಾರ್ ಅಲ್ಲಿನ ಜನ ಹೀಗೆ ಓಡಾಡುತ್ತಾರೆ ಅಂದರು . ಆ ಚಿತ್ರದ ಸನ್ನಿವೇಶ ಪೂರ್ಣ ಚಂದ್ರ ತೇಜಸ್ವಿಯವರ ಕಥೆಗಳ ಪಾತ್ರಗಳನ್ನು ನೆನಪಿಗೆ ತಂದಿತು .
|
ಕಾಡಿನಲ್ಲಿ ಸಿಕ್ಕ ದೃಶ್ಯ |
ಕಾಡಿನ ಚಾರಣದಿಂದ ವಾಪಸ್ಸುಬಂದ ನಾವು ಬೆಳಗಿನ ಉಪಹಾರ ಸೇವಿಸಿ ಕಾಳಿ ನದಿಯಲ್ಲಿ ಹರಿಗೋಲಿನಲ್ಲಿ ಸವಾರಿ ಹೊರಟೆವು , ಇಲ್ಲಿನ ಹರಿಗೋಲು ವ್ಯವಸ್ತೆ ಚೆನ್ನಾಗಿದೆ, ಪ್ರವಾಸಿಗರು ಹರಿಗೋಲಿನಲ್ಲಿ ಲೈಫ್ ಸೇವಿಂಗ್ ಜಾಕೆಟ್ ಧರಿಸಿಯೇ ಕೂರಬೇಕೆಂಬ ನಿಯಮವಿದೆ,ಹಾಗೂ , ಹರಿಗೋಲಿನಲ್ಲಿ ವೃತ್ತಾಕಾರದ ಕಬ್ಬಿಣದ ಆಸನ ಹಾಕಿ ಪ್ರವಾಸಿಗಳು ಅಲ್ಲಿನ ಸೌಂದರ್ಯ ಸವಿಯಲು ಅವಕಾಶ ಮಾಡಿದ್ದಾರೆ
|
ಹರಿಗೊಲಿನ ಸವಾರಿ |
ಹರಿಗೊಲಿನ ಸವಾರಿ ಜೋರಾಗಿತ್ತು, ಪ್ರಶಾಂತವಾಗಿ ಹರಿಯುತ್ತಿದ್ದ ಕಾಳಿನದಿಯ ಒಡಲಲ್ಲಿ ನಮ್ಮ ಹರಿಗೋಲು ಸಾಗಿತ್ತು, ನಮ್ಮ ಕ್ಯಾಮರಾಗಳಿಗೆ ಬೆಳಗಿನ ಬೆಡಗಿನ ಪರಿಸರದ ದರ್ಶನ ಆಗಿತ್ತು, ನಮ್ಮನ್ನು ಕರೆದೊಯ್ದಿದ್ದ ಸಿಬ್ಬಂಧಿಯವರು ವಿವರಣೆ ನೀಡುತ್ತಾ ಸಾಗಿದ್ದರು. ನಿನ್ನೆ ನಮ್ಮ ಜೊತೆ ಬಂದಿದ್ದ ಸಿಬ್ಬಂದಿ ಬದಲಾಗಿದ್ದರು. ಸಾರ್ ಅಲ್ಲಿ ನೋಡಿ , ಸಾರ್ ಇಲ್ಲಿ ನೋಡಿ , ಸಾರ್ ಆ ದೃಶ್ಯದ ಫೋಟೋ ತೆಗೆಯಿರಿ ಅಂತಾ ಹುರಿದುಂಬಿಸುತ್ತಿದ್ದರು . ಅವರು ತೋರುತ್ತಿದ್ದ ದೃಶ್ಯಗಳು ಮನೋಹರವಾಗಿದ್ದವು
|
ನೀರಿನಲ್ಲಿ ಸಾಗಿದ್ದ ಶಿಸ್ತಿನ ಸಿಪಾಯಿಗಳು |
|
ದೈತ್ಯ ಮೊಸಳೆ |
|
ಬಿಲದಿಂದ ಹೊರಗೆ ಬಂದ ಉರಗ |
ಕಾಳೀ ನದಿಯಲ್ಲಿಸಾಗಿದ್ದ ನಮಗೆ ನೀರಿನೊಳಗೆ ಸಾಗಿದ್ದ ಕಪ್ಪು ಬಣ್ಣದ ಮೀನುಗಳ ಗುಂಪು ನೋಡಲು ಸಿಕ್ಕಿತು, ನೀರಿನೊಳಗೆ ಶಿಸ್ತಿನ ಸಿಪಾಯಿಗಳಂತೆ ಗುಂಪಾಗಿ ಸಾಗಿದ್ದ ಮೀನುಗಳ ಆ ದೃಶ್ಯ ಅಪರೋಪವಾಗಿತ್ತು. ಮುಂದೆ ಸಾಗಿದ ನಮಗೆ ಅಲ್ಲೇ ಸನಿಹದಲ್ಲಿ ನೀರಿನ ಒಳಗೆ ಹಾಸಿದ್ದ ಮಣ್ಣಿನ ಬದಿಯಲ್ಲಿ ದೈತ್ಯ ಮೊಸಳೆ ದರ್ಶನ ನೀಡಿತ್ತು, ಮುಂಜಾವಿನ ಸೂರ್ಯ ಕಿರಣದ ಸ್ಪರ್ಶಕ್ಕಾಗಿ ಆ ಮೊಸಳೆ ಮೈಒಡ್ಡಿ ಮಲಗಿತ್ತು. ಹಾಗೆ ಆ ಗುಡ್ಡೆಯನ್ನು ಬಳಸಿದ ನಮ್ಮ ಹರಿಗೋಲು ಸಾಗಿರಲು ಆ ಮಣ್ಣಿನ ಗುಡ್ಡದಲ್ಲಿದ್ದ ಒಂದು ಬಿಲದಿಂದ ನೀರು ಹಾವೊಂದು ಹೊರ ಬರುತ್ತಿತ್ತು. ನಮ್ಮ ಕ್ಯಾಮರ ಅದನ್ನು ಸೆರೆಹಿದಿಯುತ್ತಾ ಸಾಗಿತ್ತು.
|
ಕಾಳಿನದಿಯ ರಮಣೀಯ ದೃಶ್ಯ |
ಕಾಳಿ ನದಿಯಲ್ಲಿ ತೇಲುತ್ತಾ ಸಾಗಿದ್ದ ನಮಗೆ ಜೊತೆಯಾಗಿ ಪ್ರಕೃತಿಯೂ ಸಹ ನಲಿದಿತ್ತು. ಬೆಳಗಿನ ದೃಶ್ಯಗಳು ನೆನಪಾಗಿ ನಮ್ಮ ಕಣ್ ಹಾಗು ಕ್ಯಾಮರಾಗಳಿಗೆ ಸೆರೆಯಾದವು , ನಿನ್ನೆಯ ದಿನದ ನಿರಾಸೆ ಕಡಿಮೆಯಾಗಿತ್ತು, ಈ ಹರಿಗೊಲಿನ ಸವಾರಿ ಮನಕ್ಕೆ ಮುದ ನೀಡಿತ್ತು . , ಹರಿಗೋಲು ಸವಾರಿ ಮುಗಿಸಿ ಬಂದ ನಾವು ಜಂಗಲ್ ಲಾಡ್ಜ್ ಸುತ್ತಾ ಒಂದಷ್ಟು ಸೈಕಲ್ ಸವಾರಿ ಮಾಡಿ ಖುಷಿಪಟ್ಟೆವು, ನನಗೋ ಸೈಕಲ್ ಹೊಡೆದು ಎರಡು ದಶಕಗಳೇ ಆಗಿತ್ತು, ಬಾಲ್ಯದ ದಿನಗಳನ್ನು ನೆನೆಯುತ್ತಾ ನಾನೂ ಒಂದಷ್ಟು ಸೈಕಲ್ ಸವಾರಿ ಮಾಡಿ ಆನಂದಿಸಿದೆ, ಇನ್ನು ನಮ್ಮ ಮನೆಯವರೆಲ್ಲರೂ ಮತ್ತು ಮಕ್ಕಳು ಸೈಕಲ್ ಸವಾರಿ ಮಾಡಿ ಕುಣಿದಾಡಿದರು
|
ಸೈಕಲ್ ಸವಾರಿ ಮಾಡಿ ಬಾಲ್ಯಕ್ಕೆ ಜಾರಿದ ಸಮಯ |
ನಮ್ಮ ದಾಂಡೇಲಿ ಕಾರ್ಯಕ್ರಮದ ಅಂತಿಮ ಘಟ್ಟ ತಲುಪಿದ್ದೆವು ಮುಂದಿನ ಜಾಗಕ್ಕೆ ತೆರಳಲು ಸಿದ್ದತೆ ಮಾಡಿಕೊಂಡು ದಾಂಡೇಲಿ ಜಂಗಲ್ ಲಾಡ್ಜ್ ಸಿಬ್ಭಂದಿಗೆ ಕೃತಜ್ಞತೆ ತಿಳಿಸಿ, ಅಲ್ಲಿಂದ ಮುಂದೆ ಸಾಗಿದೆವು. ದಾಂಡೇಲಿ ಯಲ್ಲಿನ ಈ "ಜಂಗಲ್ ಲಾಡ್ಜ್ " ಒಳ್ಳೆಯ ಪರಿಸರದಲ್ಲಿ ಇದೆ, ಇಲ್ಲಿನ ಸಿಬ್ಬಂಧಿ ಇಲ್ಲಿನ ಪರಿಸರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರವಾಸಿಗರಿಗೆ ಕೊಟ್ಟರೆ ಒಳ್ಳೆಯದು , ಶುಚಿಯಾದ ರೂಮುಗಳು, . ನೀಡುವ ಊಟ ತಿಂಡಿ ಶುಚಿಯಾಗಿತ್ತು, ಒಳ್ಳೆಯ ಅನುಭವ ಸಿಕ್ಕಿತು. ಆದರೂ ಕೆಲವು ಬದಲಾವಣೆ ಆದರೆ ಒಳ್ಳೆಯದು ಅನ್ನಿಸಿತು .
ಉತ್ತರ ಭಾರತ ಶೈಲಿಯ ತಿಂಡಿ ಊಟದ ಜೊತೆ ದಕ್ಷಿಣ ಭಾರತದ ತಿಂಡಿ ತಿನಿಸುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು , ಉತ್ತರ ಕನ್ನಡ ಜಿಲ್ಲೆಯ ವಿಶೇಷ ಖಾದ್ಯಗಳನ್ನು ಇಲ್ಲಿ ಪರಿಚಯಿಸುವ ಕಾರ್ಯ ಆದರೆ ಒಳ್ಳೆಯದು , ಪ್ರವಾಸಿಗಳಿಗೆ ಉತ್ತರ ಕನ್ನಡ ಜಿಲ್ಲೆಯ ತಿನಿಸುಗಳ ಪರಿಚಯ ಆಗುತ್ತದೆ , ಇಲ್ಲಿನ ಸುತ್ತ ಮುತ್ತಲಿನ ವಿಶೇಷತೆ ಬಗ್ಗೆ ಕೈಪಿಡಿ ಪ್ರಕಟಿಸಿ ಪ್ರವಾಸಿಗರಿಗೆ ಒದಗಿಸಬೇಕು , ಇವುಗಳನ್ನು ಅನುಷ್ಠಾನ ಮಾಡಿದಲ್ಲಿ ಮತ್ತಷ್ಟು ಜನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ನೋಟ ಸವಿಯುತ್ತಾರೆ ಅನ್ನಿಸಿತು. ಹಸಿರು ಕಮಾನಿನ ಹಾದಿಯಲ್ಲಿ, ಹಸಿರ ಹಾದಿಯಲ್ಲಿ ಕೆಲವು ಕಿಲೋಮೀಟರ್ ಕ್ರಮಿಸಿ , ಇದ್ದಕ್ಕಿದ್ದಂತೆ ನಮ್ಮ ಕಾರುಗಳು ಮಣ್ಣು ದೂಳಿನ ಹಾದಿ ಹಿಡಿದವು
|
ಹಸಿರು ಕಮಾನಿನ ಹಾದಿ |
ಅರೆ ಇದೇನಿದು ಕಾರಿನ ಮೇಲೆಲ್ಲಾ ಧೂಳಿನ ಎರಚಾಟ......!!!.
7 comments:
ಅಹ್..ಚೆನ್ನಾಗಿದೆ ಸಾರ್...
ನಿಮ್ಮ ದಾಂಡೇಲಿ ಸರಪಣಿಯಲ್ಲಿ ಹೊಟ್ಟೆ ತುಂಬಿದ ಅನುಭವ ಇವತ್ತಿನ ಸಂಚಿಕೆಯಿಂದ....
ಖುಷಿ ಆಯ್ತು...
ಚಂದದ ಚಿತ್ರಗಳು...:)
ಚೆನ್ನಾಗಿದೆ:) ಮೊಸಳೆ ಚಿತ್ರ ನೋಡಿದಾಗ ಸ್ವಲ್ಪ ಭಯವಾಯ್ತು
Khushiyaaytu sir...
ತುಂಬಾ ಚೆನ್ನಾಗಿದೆ ಬಾಲಣ್ಣ ದಾಂಡೇಲಿಯಲ್ಲಿ ೪ ಬಾರಿ ಓಡಾಡಿದ ಅನುಭವ :)
ಮುಂಜಾವಿನ ಸುಪ್ರಭಾತ ಕಲರ್ ಫ಼ುಲ್ ಆಗಿತ್ತು :)
ಎಂದಿನಂತೆ ಸುಂದರ ..ಇಷ್ಟ ಆಗ್ಲೇ ಬೇಕು :)
ಪ್ರವಾಸದಲ್ಲಿ ನಿಜವಾಗಿಯೂ ಆನಂದ ತರುವುದು ಮುಂಜಾನೆ, ಮುಸ್ಸಂಜೆ ಹಾಗು ಮಧ್ಯರಾತ್ರಿಯ ಪರಿಸರದ ಚಿತ್ರಗಳು. ಪಟ್ಟಣದ ಗದ್ದಲ, ಮಾಲಿನ್ಯವಿಲ್ಲದ ಪರಿಸರ ಖುಷಿ ಕೊಡುತ್ತದೆ. ಮುಂಜಾವಿನ ಆಗಸದ ಚಿತ್ತಾರ ಗಮನ ಸೆಳೆಯಿತು. ನಿಮ್ಮ ನಿರೂಪಣೆ ಸೂಪರ್. ಜೊತೆಯಲ್ಲಿ ನೀವು ನೀಡುವ ಕೆಲವು ಸಲಹೆಗಳು ನಿಜಕ್ಕೂ ಉಪಯೋಗವಾಗುತ್ತದೆ. ನೀವು ನೀಡಿದ ಸಲಹೆಗಳನ್ನು ರೆಸಾರ್ಟ್ನವರು ಆಚರಣೆಗೆ ತಂದರೆ ನಿಜಕ್ಕೂ ದಾಂಡೇಲಿ ಪ್ರವಾಸ ಕಳೆಕಟ್ಟುತ್ತದೆ. ನೀರಿನ ಮೇಲೆ ತೆಳುವ ದೃಶ್ಯ, ಜಲಚರಗಳ ದೃಶ್ಯಗಳು ಸೂಪರ್ ಆಗಿವೆ. ಮುಂದುವರೆಯಲಿ ಅಭಿಯಾನ
ಮತ್ತೊಮ್ಮೆ ಉತ್ತರ ಕನ್ನಡದ ರಮಣೀಯತೆಯನ್ನು ದೃಶ್ಯದಲ್ಲಿ ಮಾತುಗಳಲ್ಲಿ ಹಿಡಿದಿಟ್ಟ ನಿಮ್ಮ ಪ್ರತಿಭೆಗೆ ಅಭಿನಂದನೆಗಳು ಸರ್.. ಈ ಕಾಡು, ಈ ಹಸಿರು, ಈ ಪ್ರಕೃತಿಯನ್ನೇ ಉಸಿರಾಡಿಕೊಂಡು ಹುಟ್ಟಿ ಬೆಳೆದ ನಾವು ಇಂದು ಅದನ್ನು ಆಸ್ವಾದಿಸುವುದಕ್ಕೂ ಸಮಯವಿಲ್ಲದಷ್ಟು ಧೂಳನ್ನು ನಮ್ಮ ನಮ್ಮ ಮನಸುಗಳಿಗೆ ತುಂಬಿಕೊಂಡಿದ್ದೇವೆ ಎಂಬುದು ವಿಷಾದವಾದರೂ ಸತ್ಯ. ಈ ಎಲ್ಲದರ ಮಧ್ಯೆಯೂ ಒಮ್ಮೊಮ್ಮೆ ನಮ್ಮ ಬಾಲ್ಯಗಳು ಮರುಕಳಿಸುವಂತೆ ಇಂತಹ ಬರಹಗಳು ದೃಶ್ಯಗಳು ಆ ಕ್ಷಣಕ್ಕೆ ನಮ್ಮನ್ನು ಒಯ್ಯುತ್ತಿವೆ. ನಾನಂತೂ ಈ ನದಿ, ಕಾಡು, ಅಲ್ಲಿನ ಹಕ್ಕಿಗಳು, ಅವುಗಳ ಕೂಗು, ಒಣಗಿದೆಲೆಯ ಹಾಸು(ನಾವದನ್ನು ತೆರಕು ಅನ್ನುತ್ತೇವೆ)ನ ಮೇಲಿನ ನಡಿಗೆ ಇವನ್ನೆಲ್ಲ ಇವತ್ತಿಗೂ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಮತ್ತು ಸಂದರ್ಭ ಸಿಕ್ಕಾಗೆಲ್ಲ ಅವನ್ನು ಅಷ್ಟೇ ಪ್ರೀತಿಯಿಂದ ಆಸ್ವಾದಿಸುತ್ತೇನೆ. ತುಂಬಾ ಖುಷಿಯಾಯ್ತು ಬಾಲು ಸರ್. ಇದಕ್ಕಿಂತ ಹೆಚ್ಚಿಗೆ ಏನು ಹೇಳಲಿ? ಧನ್ಯವಾದಗಳು.
Yen Madli sir Nanage NUDI (KANNADA) Tipe Baralla tumba channagi erute
Post a Comment