Sunday, April 28, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .೦೧ . ಬನ್ನಿ ಹೊರಡೋಣ ದಾಂಡೇಲಿ ಗೆ.





ದಾಂಡೇಲಿ ಗೆ ಸ್ವಾಗತ.


ಕಳೆದ ವರ್ಷ  ದೆಹಲಿಯ ಪ್ರವಾಸದ ಬಗ್ಗೆ ಬರೆದದ್ದು ನಿಮಗೆ ನೆನಪಿದೆ, ಆ ಸಮಯದಲ್ಲಿ  ದೆಹಲಿಯಲ್ಲಿ ನನ್ನ ಕೆಲಸ ಮುಗಿಸಿ ಹೊರಡುವ ಹಿಂದಿನ ದಿನ ನನ್ನ ಪತ್ನಿ  ಫೋನ್ ಮಾಡಿ  " ರೀ  ಏನ್ ಸಮಾಚಾರ , ಮನೆಗೆ ಬರೋ ಯೋಚನೆ ಇಲ್ವಾ ಅಥವಾ ದೆಹಲಿಯಲ್ಲೇ ಬಿಡಾರ ಮಾಡೋ ಯೋಚನೆ ಮಾಡಿಬಿಟ್ರಾ...........!!!!"  ಅನ್ನುತ್ತಾ ಹುಸಿಮುನಿಸು ತೋರಿದಳು. ಇಲ್ಲಾ ಮಾರಾಯ್ತಿ  ನಾಳೆ ವಾಪಸ್ಸು  ಹೊರಟಿದ್ದೇನೆ ಅಂದೇ. ಓ ಹೌದಾ ಸರಿ ಹಾಗಿದ್ರೆ  ನೀವು ಬೆಂಗಳೂರಿನ ಶ್ರೀಧರ್  ಮನೆಗೆ ಬನ್ನಿ ನಾನೂ ಅಲ್ಲಿಗೆ ಬರ್ತಾ ಇದ್ದೀನಿ. ವೇಣು , ಶ್ರೀಧರ್ ಎಲ್ಲಾ  ದಾಂಡೇಲಿ ಗೆ ಹೋಗೋದಿಕ್ಕೆ  ನಮ್ಮ ಕುಟುಂಬವನ್ನೂ ಸೇರಿಸಿ ಬುಕ್  ಮಾಡಿದ್ದಾರೆ , ಅಂದ್ಲೂ .............!!! ಸರಿ ಮಾರಾಯ್ತಿ  ಅಮ್ಮನವರ ಅಪ್ಪಣೆ ಅಂತಾ ಫೋನ್ ಇಟ್ಟೇ. ಅಷ್ಟರಲ್ಲಿ  ನನ್ನ ಕೋ ಬ್ರದರ್  ವೇಣು ಫೋನ್ ಬಂದು ಬಾಲು ನಾಳೆ ಬರ್ತಾ ಇದೀರಂತೆ  ಬೆಂಗಳೂರ್ ಗೆ ಬನ್ನಿ  ಎಲ್ಲಾರೂ ದಾಂಡೇಲಿ  ಹೋಗಲು ಬುಕ್ ಮಾಡಿದ್ದೇನೆ  , ಮಿಸ್ ಮಾಡ್ಬೇಡಿ ಆಮೇಲೆ ಅಂದ್ರೂ.



ವೇಣು ಗೋಪಾಲ್ 

ಶ್ರೀಧರ್ ನಾಗಭೂಷಣ್  


ಅರೆ ಇದೇನಿದು ಅಂತಾ ಅಚ್ಚರಿಯಾದರೂ  ಒಮ್ಮೊಮ್ಮೆ ನಮಗೆ ಅರಿವಿಲ್ಲದಂತೆ ಇಂತಹ ಪ್ರವಾಸ ಬರುತ್ತವೆ.  ಸರಿ ದೆಹಲಿಯ ಬೇಸಿಗೆಯ  ಬಿಸಿಯಲ್ಲಿ ಬಸವಳಿದ ನನಗೆ ಅನಿವಾರ್ಯವಾಗಿ ಇಂತಹ ಪ್ರವಾಸ ಅಗತ್ಯವಿತ್ತು, ಬೆಂಗಳೂರಿಗೆ ದೌಡಾಯಿಸಿದೆ.   ಕಟ್ ಮಾಡಿದ್ರೆ  ನಮ್ಮ ಪಯಣ ದಾಂಡೇಲಿಯ ಕಡೆ ಹೊರಟಿತ್ತು. ,  ಮತ್ತೆ ದಿಬ್ಬಣ ಹೊರಟಿತ್ತು, ಮೂವರು ಅಳಿಯಂದಿರ  ಕುಟುಂಬಗಳು.  ಮೊದಲನೆಯ ಅಳಿಯ ನಾನು ಎರಡನೆಯ ಅಳಿಯ ಶ್ರೀಧರ್ , ಮೂರನೆಯ ಅಳಿಯ ವೇಣುಗೋಪಾಲ್ ,  ಮೂವರು  ಸಹ ಸಮಾನ  ಹವ್ಯಾಸಗಳು  ಇರುವ ಕಾರಣ ಯಾವುದೇ ಗೊಂದಲ ವಿಲ್ಲದೆ ಹೊರಟೆವು, ಎರಡು ಕಾರುಗಳು ಬೆಂಗಳೂರಿನಿಂದ  ಹೊರಟು  ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ   ಸಾಗಿದವು.ಬೆಂಗಳೂರು, ನೆಲಮಂಗಲ, ತುಮಕೂರು, ಶಿರ, ಹಿರಿಯೂರು ,  ಚಿತ್ರದುರ್ಗ, ದಾವಣಗೆರೆ, ಹರಿಹರ ,ರಾಣಿಬೆನ್ನೂರು , ಹಾವೇರಿ, ಧಾರವಾಡ , ಹಳಿಯಾಳ, ದಾಂಡೇಲಿ  ೪೭೭ ಕಿ.ಮಿ. ಪ್ರಯಾಣ, ಸುಮಾರು ೭.ರಿಂದ ೮ ಘಂಟೆ  ಅವಧಿಯ ಪ್ರಯಾಣ,  ಆದರೆ  ಬೆಳಿಗ್ಗೆ ಏಳು ಘಂಟೆಗೆ ಹೊರಟ ನಾವು  ಮಧ್ಯಾಹ್ನ  ಒಂದುವರೆಗೆ  ದಾಂಡೇಲಿ ಜಂಗಲ್ ರೆಸಾರ್ಟ್ ತಲುಪಬೇಕಾಗಿತ್ತು.   ಮಿಂಚಿನಂತೆ ಎರಡೂ ಕಾರುಗಳು ಹೊರಟವು.   ಪಯಣದ ಅವಧಿಯಲ್ಲಿ ನನ್ನ ಕ್ಯಾಮರಾ ಕೈಗೆ ಬಂತು ದಾರಿಯಲ್ಲಿ ನನ್ನ ಕ್ಯಾಮರಾ ಕಣ್ಣಿಗೆ ಅಂತಹ ವಿಶೇಷವೇನೂ ಕಾಣಲಿಲ್ಲ ಆದರೆ  ಚಿತ್ರದುರ್ಗ ಹತ್ತಿರ ಬಂದಂತೆ  ನಮ್ಮನ್ನು ಸ್ವಾಗತ ಮಾಡಿದ್ದು, ಗಾಳಿಯಂತ್ರ .



ಗಾಳಿಯಂತ್ರ 

ಹೌದು ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿನಾಲ್ಕರಲ್ಲಿ  ಪಯಣಿಸುವಾಗ ಚಿತ್ರದುರ್ಗಕ್ಕೆ ಮೊದಲು ನಿಮ್ಮನ್ನು ಸ್ವಾಗತಿಸಲು ಈ ಗಾಳಿಯಂತ್ರಗಳ  ಸಮೂಹವೇ ನಿಮಗೆ ಕಾಣ ಸಿಗುತ್ತವೆ, ಐತಿಹಾಸಿಕ ಕೋಟೆಯ ಈ ನೆಲದಲ್ಲಿ ಇಂದು  ಚಿತ್ರದುರ್ಗದ ಸುತ್ತಮುತ್ತ  ಇರುವ ಗುಡ್ಡ  ಬೆಟ್ಟಗಳ ಮೇಲೆ ಗಾಳಿ ಯಂತ್ರಗಳದ್ದೆ  ಕಾರು ಬಾರು.  ಹಾಗೆ ಮುಂದೆ ಚಲಿಸುತ್ತಾ  , ಸಾಗಿದ ನನಗೆ ಮುಂದೆ ದಾವಣಗೆರೆ  ಕ್ರಮಿಸಿದಾಗ ಜ್ಞಾಪಕಕ್ಕೆ ಬಂದಿದ್ದು , ಇಲ್ಲಿನ ಹತ್ತಿ ಗಿರಣಿಗಳ ನೆನಪು "ಕರ್ನಾಟಕದ  ಮ್ಯಾಂಚೆಸ್ಟರ್ " ಎಂದು ಕರೆಯುತ್ತಿದ್ದ ದಿನಗಳು, ಇಂದು ಆ ಊರು  "ಕರ್ನಾಟಕದ  ಮ್ಯಾಂಚೆಸ್ಟರ್ "    ಎಂಬ ಅರ್ಥವನ್ನು ಕಳೆದುಕೊಂಡು  ಇತಿಹಾಸ ಸೇರುವ ಹಾದಿಯಲ್ಲಿರುವುದಾಗಿ ತಿಳಿದು  ನೋವಾಯಿತು. ಇಲ್ಲಿನ  ಡಿ .ಸಿ . ಎಂ.  ಸೂಟಿಂಗ್    ಆ ದಿನಗಳಲ್ಲಿ ಬಹಳ ಪ್ರಸಿದ್ದಿ ಹೊಂದಿದ್ದು   ಇಂದು  ಹೇಳಹೆಸರಿಲ್ಲದಂತೆ ಆಗಿದೆ.  


ಯಂತ್ರಗಳ ಚಿತ್ತಾರ 

ನೆನಪಿನ ವಾಸ್ತವತೆಗೆ  ಹಿಂತಿರುಗಿ ಬಂದ ನನಗೆ  ನಮ್ಮ ಕಾರಿನ ಮುಂದೆ ಚಲಿಸುತ್ತಿದ್ದ ಎರಡು ದೊಡ್ಡ ಲಾರಿಗಳಲ್ಲಿ  ಟ್ರಾಕ್ಟರ್ ಗಳನ್ನೂ ಕೊಂದೊಯ್ಯುತ್ತಿರುವುದು ಕಣ್ಣಿಗೆ ಬಿತ್ತು , ಪ್ರತೀ ಲಾರಿಯಲ್ಲೂ  ಐದೈದು  ಟ್ರ್ಯಾಕ್ಟರ್ ಗಳನ್ನೂ ವ್ಯವಸ್ತಿತವಾಗಿ ನಿಲ್ಲಿಸಲಾಗಿತ್ತು, ನೋಡಲು  ಅಂದವಾಗಿ ಕಾಣುತ್ತಿತ್ತು,  ಚಲಿಸುತ್ತಿದ್ದ ವಾಹನಗಳ ನಡುವೆ ಇದೊಂದು ವಿಶೇಷವಾಗಿ ಗಮನ ಸೆಳೆಯುತ್ತಿತ್ತು.   ಜೊತೆಗೆ ಟ್ರಾಕ್ಟರ್  ಭಾರವನ್ನು ಹೊತ್ತ ಲಾರಿಗಳು ಬುಸುಗುಡುತ್ತಾ  ಸಾಗಿ ಹೊಗೆಯನ್ನು ಉಗುಳುತ್ತಿದ್ದವು. 


ವಾಹನಗಳ  ನಡುವೆ 


ಹಾಗೂ ಹೀಗೂ  ಹರಿಹರ  ದಾಟಿ  ಹೋರಟ ನನಗೆ  ಹೆದ್ದಾರಿಯಲ್ಲಿ ಲಾರಿಗಳ ಕಾರುಬಾರು ಗೋಚರಿಸಿತು, ಯಾವುದೇ ಶಿಸ್ತಿಲ್ಲದೆ  ತಮಗಿಷ್ಟಬಂದಂತೆ ಚಾಲಕರು  ಲಾರಿಗಳನ್ನು ಚಲಿಸುತ್ತಿದ್ದುದು  ಕಂಡು ಬಂತು, ಈ ನಡುವೆ ಹರ ಸಾಹಸ ಪಟ್ಟು  ಲಾರಿಗಳ ನಡುವೆ  ನುಸುಳಿ ದಾರಿ ಮಾಡಿಕೊಂಡು ಸಾಗಬೇಕಾದ  ಅನಿವಾರ್ಯ  ಕಾರುಗಳದ್ದಾಗಿತ್ತು ಇಲ್ಲಿ ಕಾರು ಚಾಲನೆ ಮಾಡುವ ಚಾಲಕ ಬಹಳ  ಜಾಗರೂಕನಾಗಿ ಕಾರ್ ಚಾಲನೆ ಮಾಡಬೇಕಾಗುತ್ತದೆ, ಅದೇರೀತಿ ಈ ಲಾರಿಗಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಾ   ಸಾಗಿದ್ದವು ಕಾರುಗಳು. 



 ಕನ್ಮಿಣಿಕೆ  ನೋಟ 


ರಾಣಿಬೆನ್ನೂರ್ ಹೊರವಲಯ ದಾಟಿ ಮುಂದೆ ಹೊರಟ  ನಮಗೆ ದಾರಿಯಲ್ಲಿ  ಹಟಕ್ಕೆ ಬಿದ್ದಂತೆ  ವೇಗವಾಗಿ  ಅಕ್ಕ ಪಕ್ಕ ದಲ್ಲಿ  ಸಾಗುತ್ತಿದ್ದ  ಎರಡು ಬಸ್ಸುಗಳು ಕಂಡವು, ಇವರಿಬ್ಬರ  ಜೂಟಾಟ ದ ಪರಿಣಾಮ ಸುಮಾರು ಕಿ.ಮಿ.ಗಳ ದೂರ ಯಾವ ವಾಹನಕ್ಕೂ ಇವುಗಳನ್ನು ದಾಟಿ   ಮುಂದೆ ಚಲಿಸಲು ಸಾಧ್ಯವಾಗಲಿಲ್ಲ  , ಇದೆ ನೋಟವನ್ನು ನೋಡುತ್ತಿದ್ದ ನನಗೆ ಕೆಲವು ಜಾಗಗಳಲ್ಲಿ  "ಕನ್ಮಿಣಿಕೆ" [mirage ] ಗೋಚರಿಸಿತು  ಇವು ವಾಹನ ಚಾಲಕರನ್ನು ಕೆಲವೊಮ್ಮೆ ಗೊಂದಲಕ್ಕೆ ದೂಡುತ್ತವೆ, ಹೀಗೆ ಸಾಗಿತ್ತು, ನಮ್ಮ ಪಯಣ. 


ರಸ್ತೆಯಲ್ಲಿ ಚಿತ್ತಾರ ಮೂಡಿಸಿದ  ವಾಹನಗಳ ಸಾಲು.

 ಅಕ್ಕ ಪಕ್ಕದ ನೋಟ ಕಾರಿನ  ವೇಗಕ್ಕೆ ತಕ್ಕಂತೆ  ಚಲಿಸುತ್ತಿದ್ದ ಕಾರಣ ಅಷ್ಟಾಗಿ  ಚಿತ್ರಗಳನ್ನು ತೆಗೆಯಲು ಕಷ್ಟವಾಗಿತ್ತು, ಹಾಗಾಗಿ ಮುಂದಿನ ನೋಟಗಳು ಮಾತ್ರ ನನ್ನ ಕ್ಯಾಮರದಲ್ಲಿ ಸೇರೆಯಾಗುತ್ತಿದ್ದವು. ಧಾರವಾಡ  ಸಮೀಪ ಒಂದು ಜಂಕ್ಷನ್ ನಲ್ಲಿ  ಹಲವು ವಾಹನಗಳು  ಹೆದ್ದಾರಿಯಲ್ಲಿ  ಚಕ್ರವ್ಯೂಹದ ಚಿತ್ತಾರ ಮೂಡಿಸಿದ್ದವು. ಈ ವ್ಯೂಹವನ್ನು ಭೇದಿಸಿ  ಮುನ್ನಡೆದ ನಾವು, ಧಾರವಾಡ ತಲುಪಿದೆವು, ಇಲ್ಲಿಗೆ ರಾಷ್ಟ್ರೀಯ  ಹೆದ್ದಾರಿ ೪ ರ ಒಂದು ಹಂತದ ಪಯಣ ಮುಗಿದಿತ್ತು, 



ಹೆದ್ದಾರಿಯಲ್ಲಿ ಹೀಗೂ   ಆಗುತ್ತೆ.


ಧಾರವಾಡ ಬಂದೊಡನೆ ನೆನಪಾದದ್ದು ಬೇಂದ್ರೆ ಅಜ್ಜ, ಸಾದನ ಕೇರಿ,  ಮಿಶ್ರ  ಪೇಡ , ಇತ್ಯಾದಿ  ಆದರೆ ನಮಗೆ ವೇಳೆಯೇ ಇಲ್ಲದ ಕಾರಣ, ಹಳಿಯಾಳ ರಸ್ತೆಯಲ್ಲಿ ಚಲಿಸಿದೆವು,  ಧಾರವಾಡ ಬಿಟ್ಟು ಸ್ವಲ್ಪ ದೂರ ಬಂದೊಡನೆ,  ರಾಷ್ಟ್ರೀಯ ಹೆದ್ದಾರಿಯಿಂದ  ಉರುಳಿಬಿದ್ದ  ಲಾರಿಯ ದರ್ಶನ ವಾಯಿತು, ನಾವು ಅಲ್ಲಿಗೆ ತೆರಳುವ ಸ್ವಲ್ಪ ಹೊತ್ತಿನ ಮೊದಲು ಈ ಘಟನೆ ನಡೆದಿತ್ತು, ಯಾರಿಗೂ ಅಪಾಯ ಆಗಿರುವ ಬಗ್ಗೆ ಅಲ್ಲಿ ಯಾವುದೇ  ಸನ್ನಿವೇಶ ಕಂಡುಬರಲಿಲ್ಲ , ಆದರೆ ಲಾರಿಗೆ  ಬಹಳಷ್ಟು ಜಖಂ ಆಗಿತ್ತು. 




ಹಸಿರ ಕಮಾನು ನಡುವೆ ಸಾಗಿದ ರಸ್ತೆ.



ಸ್ವಲ್ಪ ಮುಂದೆ ಬಂದೊಡನೆ ಹಳಿಯಾಳ ರಸ್ತೆಯಲ್ಲಿ ಹಸಿರ  ಕಮಾನು ಧರಿಸಿದ   ರಸ್ತೆ ಗೋಚರಿಸಿತು,  ತಂಪಾದ ವಾತಾವರಣ , ಬೀಸಿದ್ದ ತಂಗಾಳಿ ಪಯಣಕ್ಕೆ ಮುದ  ನೀಡಿತ್ತು. ಹಸಿರ ತಬ್ಬಿದ ರಸ್ತೆಯಲ್ಲಿ  ಸಾಗಿದ ನಾವು ದಾಂಡೇಲಿ ಅರಣ್ಯದ ಹೆಬ್ಬಾಗಿಲು   ಹಳಿಯಾಳ ತಲುಪಿದೆವು, 





ಹಳಿಯಾಳದಿಂದ  ದಾಂಡೇಲಿ  ರಸ್ತೆಯ ನೋಟ.

ಹಳಿಯಾಳದಿಂದ   ದಾಂಡೇಲಿ ಗೆ ತೆರಳುವ  ರಸ್ತೆಯ ಎರಡೂ ಬದಿಯಲ್ಲಿ ಕಾಡಿನ ನೋಟ ಸಾಮಾನ್ಯ , ರಾಷ್ಟ್ರೀಯ ಹೆದ್ದಾರಿಯಲ್ಲಿ  ವಾಹನಗಳ   ದಟ್ಟಣಿ ನೋಟ ಸಾಮಾನ್ಯವಾದರೆ  ಈ ರಸ್ತೆಯಲ್ಲಿ  ಸ್ವಲ್ಪ ಕಡಿಮೆ ದಟ್ಟಣಿ  ಇತ್ತು.  ಕಾಡನ್ನು ಕಂಡೊಡನೆ  ಮನದಲ್ಲಿ  ಆಸೆ ಜಾಸ್ತಿಯಾಗಿ   ಯಾವುದಾದರೂ ವನ್ಯ ಜೀವಿ  ದಾರಿಯಲ್ಲಿ ಕಾಣಬಹುದೇ ಎಂಬ ನಿರೀಕ್ಷೆ ಇತ್ತು, ಆದರೆ ಉ  ಹೂ  ಯಾವ ವನ್ಯ ಜೀವಿಯ  ಪದರ್ಶನ ಆಗಲಿಲ್ಲ. ಹಕ್ಕಿಗಳ ಕಲರವ ಕೇಳಲಿಲ್ಲ ,


 
ಹಳಿಯಾಳ  ತಪಾಸಣ ಕೇಂದ್ರ 



ಬರೀ  ಬೋರ್ಡುಗಳಲ್ಲಿ  ಅಲ್ಲಿನ ಜೀವ  ವೈವಿಧ್ಯತೆಯ ದರ್ಶನ ಮಾಡಿದ ನಾವು, ಹಸಿರ ಕಾಡಿನಿಂದ ತೂರಿಬಂದ ತಂಗಾಳಿಯನ್ನು  ಆಸ್ವಾದಿಸುತ್ತಾ   ಚಲಿಸಿದೆವು. ಹಸಿರ ದೃಶ್ಯ ವೈಭವ ನೋಡುತ್ತಾ   ಬಂದೆ ಬಿಟ್ಟೆವು  ದಾಂಡೇಲಿ ಗೆ  , ಆಗ ಸಮಯ ಎರಡು ಘಂಟೆ ಆಗಿತ್ತು. 





ದಾಂಡೇಲಿ ಗೆ  ಸ್ವಾಗತ.

ಅಲ್ಲಿ ಕಾಣಿಸಿದ್ದು "ವೆಲ್ಕಂ ಟು ದಾಂಡೇಲಿ"  ಎನ್ನುವ ಕಮಾನು.............................................ಸ್ವಾಗತ ಕೋರಿತು,  ಆಗಲೇ ಮನಕ್ಕೆ ಬಂತು  ದಾಂಡೇಲಿ ಗೆ  ಅದರ ಹೆಸರು ಹೇಗೆ ಬಂತು .....??? ಎನ್ನುವ   ಪ್ರಶ್ನೆ....!!     

  

6 comments:

ಪುಷ್ಪರಾಜ್ ಚೌಟ said...

ನನ್ನ ಪ್ರೀತಿಯ ಊರದು ದಾಂಡೇಲಿ. ಎರಡು ಬಾರಿ ಭೇಟಿ ನೀಡಿದ್ದೆ. ಈಗ ನಿಮ್ಮ ಬ್ಲಾಗ್ ಮುಖಾಂತರ ಮತ್ತೊಮ್ಮೆ ಭೇಟಿ ನೀಡಬೇಕು.

ಪುಷ್ಪರಾಜ್ ಚೌಟ said...

ನನ್ನ ಪ್ರೀತಿಯ ಊರದು ದಾಂಡೇಲಿ. ಎರಡು ಬಾರಿ ಭೇಟಿ ನೀಡಿದ್ದೆ. ಈಗ ನಿಮ್ಮ ಬ್ಲಾಗ್ ಮುಖಾಂತರ ಮತ್ತೊಮ್ಮೆ ಭೇಟಿ ನೀಡಬೇಕು.

samanvaya bhat said...

sooper sir.... dandeli ge chikkavaliddaga hogidde... allina kadalli aane, karadigala darshanavagittu... nantara siddana gavigoo hogiddevu,,, ella nenapoo marukalisitu.. thank u...

Srikanth Manjunath said...

ದಾಂಡೇಲಿ ಎನ್ನುತ್ತಲೇ ನೆನಪಿಗೆ ಬರೋದು ಒಂದು ರಭಸವಾಗಿ ಹರಿಯುವ ನೀರಿನಲ್ಲಿ ರಾಫ್ಟಿಂಗ್ ಮತ್ತು ಇನ್ನೊಂದು ಹಲವು ಕಿ ಮಿ ಗಳು ದೂರವಿರುವ ದೂದಸಾಗರ್ ಜಲಪಾತ. ನಿಮ್ಮ ಉತ್ಸಾಹ ಒಂದಷ್ಟು ಭಾಗ ನಮಗೂ ಸಿಗಲಿ. ದಿಲ್ಲಿಯ ಪ್ರಯಾಸ :-) ಮುಗಿಸಿ ಮತ್ತೆ ಅದರ ದಿಕ್ಕಿನಲ್ಲೇ ೫೦೦ ಕಿಮಿ ಪಯಣಿಸುವ ನಿಮ್ಮ ಉತ್ಸಾಹಕ್ಕೆ ನಮನಗಳು. ಲೇಖನದ ಆರಂಭ ನಿಧಾನವಾಗಿ ನಶೆ ಏರಿಸುತ್ತಿದೆ. ಸೂಪರ್ ಸರ್ಜಿ

Badarinath Palavalli said...

ಅಂತೂ ಹಕ್ಕೊತ್ತಾಯದ ನಮತರ ದಾಂಡೇಲಿ ಬಂತು. ನಮಗೆ ಖುಷಿಯಾಯಿತು.

ಆವತ್ತೇ ರೇಗಿಸಿದ್ದೆ ನೆನಪಿದೆಯೇ ಸಾರ್, ಈಗಷ್ಟೇ ದೆಹಲಿ ಮತ್ತೆ ದಾಂಡೇಲಿ, ಪಾದಗಲಲ್ಲಿ ಚಕ್ರವಿದೆ ತಮಗೆ ಅಂತ.

ಕರ್ನಾಟಕದ ಮ್ಯಾಂಚೆಸ್ಟರ್ ದಾವಣಗೆರೆಯ ಇಂದಿನ ಹತ್ತಿಗಿರಣಿಗಳ ವನತಿ ನೆನೆಸಿಕೊಂದರೆ ನೋವಾಗುತ್ತದೆ ನಮಗೆ.

"ಕನ್ಮಿಣಿಕೆ" - ಈ ಮರೀಚಿಕೆ ಚಾಲಕರನ್ನು ಯಾಮಾರಿಸಿಬಿಡುವುದು ಸತ್ಯ. ಹೀಗೆ ನಾವಿದ್ದ ಟೀಟಿ ಧಾರವಾಡದ ಬಳಿ ಅಪಘಾತಕ್ಕೆ ಈದಾದದ್ದು ಸಾರ್.

ಧಾರವಾಡವೆಂದರೆ ಪೇಡಾ ಮತ್ತು ಕವಿತೆ ಕೂಡಾ...

ಕಾಡಿನ ರಸ್ತೆ ಒಮ್ಮೆ ನಿರಮ್ಮಳ ಮತ್ತೊಮ್ಮೆ ಭಯ ಹುಟ್ಟಿಸುವ ಪರಿಸರ ಅಲ್ಲವೇ?

ದಾಂಡೇಲಿಯ ಸ್ವಾಗತ ಕಮಾನು ತಮ್ಮ ಧಾರವಾಹಿಗೂ ಅನ್ವರ್ಥ ಅನಿಸಿತು.

ಚಿತ್ರಗಳೂ ಶೀರ್ಷಿಕೆಗಳೂ ಮಸ್ತು.

ಮುಂದುವರೆಯಲಿ...

Adarsha B S said...

ತುಂಬಾ ಚೆನಾಗಿದೆ ಸರ್ .... ಫೋಟೋಗಳು ಅದರ ಶೀರ್ಷಿಕೆಗಳು ಎಲ್ಲವು :)