Monday, December 10, 2012

ಬನ್ನಿ ಜಾರೋಣ ಬನ್ನಿ ಕಾಡಿನ ನೆನಪಿಗೆ......!!! ಶಿಂಷಾ ಕಾಡಿನ ಅಲೆದಾಟ ....೦೧

ಬನ್ನಿ ನಿಮಗೆ ಸ್ವಾಗತ  ಅಂದಿತ್ತು ಪರಿಸರ.



ನಮಸ್ಕಾರ  ಹೇಗಿದ್ದೀರಾ? ಬಹಳ ದಿನಗಳ ನಂತರ ಕಾಡಿನ ಅನುಭವದ ಬಗ್ಗೆ ಬರೆಯುವ ಮನಸಾಗಿ , ಮತ್ತೆ ಹಳೆಯ ನೆನಪನ್ನು  ಕೆದಕಿ ಬರೆಯಲು  ಪ್ರಾರಂಭ ಮಾಡಿದ್ದೇನೆ. ಹಿಂದೆ ಬರೆದ ಕಾಡಿನ ಅನುಭವಗಳಂತೆ ಈ ಅನುಭವವವೂ ನಿಮಗೆ ಇಷ್ಟಾ ಆಗುತ್ತದೆ. ಬನ್ನಿ ಜಾರಿ  ಹೋಗೋಣ ಕಾಡಿನ ನೆನಪಿನ ಪುಟಗಳಿಗೆ.


ಕಾಡಿನಲ್ಲಿ ಕೆಲಸಕ್ಕೆ ಬಾರದ ಕಾರುಗಳು.


ಬಾಲೂ ಯಾವುದಾದರೂ ಕಾಡಿಗೆ ಹೋಗೋಣ ಪ್ಲಾನ್ ಮಾಡಿ ಹೋಗೋಣ ಅಂತಾ ವರ್ಷದಲ್ಲಿ ಕನಿಷ್ಠ ಎರಡು ಸಾರಿ ನನಗೆ ನನ್ನ ಕೋ ಬ್ರದರ್ಗಳು , ಹಾಗು ಕೆಲವು ಗೆಳೆಯರು ಒತ್ತಾಯ   ಮಾಡುತ್ತಿರುತ್ತಾರೆ . ನಾನೂ ಸಹ ಈ ಬಗ್ಗೆ ತಲೆ ಕೆಡಿಸಿಕೊಂಡು ಸಿದ್ಧನಾಗುತ್ತೇನೆ. ಕಳೆದ೨೦೧೧  ನೇ ಜುಲೈ ನಲ್ಲಿ ಒಂದು ದಿನ ಕಾಡಿಗೆ ಹೋಗುವ  ಕಾರ್ಯಕ್ರಮ ಹಾಕಲು ಸಿದ್ದತೆ ನಡೆದಿತ್ತು. ಈ ಸಾರಿ ಇದರ ಉಸ್ತುವಾರಿ ಹಾಗು ಹೋಗುವ ಜಾಗದ ಆಯ್ಕೆ ನನ್ನ ನಾದಿನಿಯ ಗಂಡ ಅಂದರೆ ನನ್ನ ಕೊಬ್ರದರ್ ಶ್ರೀ  ವೇಣುಗೋಪಾಲ್  ಹೆಗಲಿಗೆ  ಬಿತ್ತು . ಅವರು ಎಲ್ಲಾ ವಿಚಾರ ಜಾಲಾಡಿ ಆಯ್ಕೆ ಮಾಡಿದ ಜಾಗ ಮಂಡ್ಯ ಜಿಲ್ಲೆಯ  ಮಳವಳ್ಳಿ ತಾಲೂಕಿನ " ಶಿಂಷಾ" ಎಂಬ   ಊರಿನ ಹತ್ತಿರವಿದ್ದ "ಅಬ್ಬೀಸ್  ವೈಲ್ಡ್ ರ್ನೆಸ್"  ಎಂಬ  ರೆಸಾರ್ಟ್ , ನನಗೂ  ಶಿಂಷಾ ಹೊಸದಲ್ಲ  ಆದರೆ ರೆಸಾರ್ಟ್ ಹೆಸರು ಮೊದಲು ಕೇಳಿದ್ದು. ಸರಿ ಇದೂ ಒಂದು ಅನುಭವ ಆಗಲಿ ಅಂತಾ  ಗಂಟು ಮೂಟೆ ಕಟ್ಟಿ ಮೈಸೂರಿನಿಂದ  ನನ್ನ ಮತ್ತೊಬ್ಬ ಕಸಿನ್ ರವಿಂದ್ರ  ಜೊತೆ ಹೊರಟೆ, ಬೆಂಗಳೂರಿನಿಂದ  ನನ್ನ ಕೊಬ್ರದರ್ ವೇಣುಗೋಪಾಲ್ , ಹಾಗು ಅವರ ಜೊತೆಗಾರ  ದೀಪಕ್ ವಸ್ತಾರೆ, ಹಾಗು ದೀಪಕ್ ಪತ್ನಿ ಸುಮನ ದೀಪಕ್.ನಮ್ಮನ್ನು ಮಳವಳ್ಳಿ ಯಲ್ಲಿ ಸೇರಿಕೊಂಡರು.

"ಶಿಂಷಾ " ಅಥವಾ "ಶಿಂಷಾಪುರ" ಇದು ಮಂಡ್ಯಾ ಜಿಲ್ಲೆಯ ಮಳವಳ್ಳಿ ತಾಲೂಕಿನ ಒಂದು ಪ್ರಮುಖ ಸ್ಥಳ. ಸುತ್ತಲೂ ಕಾಡಿನಿಂದ ಬೆಟ್ಟಗಳಿಂದ ಕೂಡಿದ ಊರು ಇದು. ಮಳವಳ್ಳಿ ಯಿಂದ ಕೊಳ್ಳೇಗಾಲಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಪಂಡಿತ ಹಳ್ಳಿಯ  ಬಳಿ  ಸಿಗುವ ಜಂಕ್ಷನ್ ನಲ್ಲಿ ಎಡಕ್ಕೆ ಸಾಗುವ ರಸ್ತೆಯಲ್ಲಿ  ಸುಮಾರು ಹತ್ತು ಕಿ.ಮೀ. ಚಲಿಸಿದರೆ ಈ ಊರು ಸಿಗುತ್ತದೆ. " ಏಶಿಯಾ ಖಂಡದಲ್ಲೇ ಪ್ರಪ್ರಥಮವಾಗಿ  ಜಲ ವಿಧ್ಯುತ್ ಯೋಜನೆಯನ್ನು ಇಲ್ಲಿ ಕೈಗೊಳ್ಳಲಾಗಿದೆ. ೧೯೦೨ ರಲ್ಲಿ ಅಂದಿನ ಮೈಸೂರು ಮಹಾರಾಜರಾದ  ನಾಲ್ಕನೆ ಕೃಷ್ಣರಾಜ ಒಡೆಯರ್ ರವರ ಆಡಳಿತ   ಕಾಲದಲ್ಲಿ ದಿವಾನ್ ಶೇಷಾದ್ರಿ ಐಯ್ಯರ್ ರವರ  ಉತ್ಸಾಹ ದೊಂದಿಗೆ ಈ ಯೋಜನೆ ಕಾರ್ಯ ರೂಪಕ್ಕೆ ಬಂದಿತು. ೧೭೨೦೦  ಕಿಲೋ ವ್ಯಾಟ್ ವಿಧ್ಯುತ್  ಉತ್ಪಾದನೆ  ಸಾಮರ್ಥ ಹೊಂದಿದ ಈ ಯೋಜನೆ , ಮೊದಲು ಕೋಲಾರ ಚಿನ್ನದ ಗಣಿಗೆ ವಿಧ್ಯುತ್ ಪೂರೈಕೆ ಮಾಡಿ , ನಂತರ ಬೆಂಗಳೂರಿಗೆ  ೧೯೩೭ ರಲ್ಲಿ ವಿಧ್ಯುತ್ ಪೂರೈಸಿದ ಹೆಗ್ಗಳಿಗೆ ಹೊಂದಿದೆ. ಶಿಂಷಾ ನದಿ ಈ ಊರಿನ ಹತ್ತಿರ ಜಲಪಾತ ನಿರ್ಮಿಸಿರುವ ಕಾರಣ  ಈ ಊರನ್ನು  "ಶಿಂಷಾಪುರ" ಅಥವಾ ಶಿಂಷಾ ಅಂತಾ ಕರೆಯುತ್ತಾರೆ."

ಸೀನ್ ಕಟ್ ಮಾಡಿದ್ರೆ ಎಲ್ಲಾ  ಮಧ್ಯಾಹ್ನ  ಹನ್ನೊಂದು ಘಂಟೆ ಸುಮಾರಿಗೆ ರೆಸಾರ್ಟ್ ತಲುಪಿದ್ವಿ.   ಅಲ್ಲಿದ್ದ ರೆಸಾರ್ಟ್ ಮಾಲೀಕ ವಿಜಯ್ ಪರಿಚಯ ಮಾಡಿಕೊಂಡು ನಮ್ಮ ಲಗ್ಗೇಜ್ ಗಳನ್ನೂ ಒಂದೆಡೆ ಇಟ್ಟು , ಕಾಫಿ ಕುಡಿದು  ವಿಜಯ್ ರವರ ಸಲಹೆಯಂತೆ  ರೆಸಾರ್ಟ್ ಸಮೀಪವಿದ್ದ   ಬೆಟ್ಟಕ್ಕೆ ಟ್ರೆಕಿಂಗ್  ಹೊರಟೆವು, ಆಗ ವಿಜಯ್ ರವರು ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿ" ಸಾರ್ ಇವರೇ ನಿಮ್ಮ ಟ್ರೆಕಿಂಗ್  ಗೈಡು"  "ಇವರು ನಿಮ್ಮನ್ನು ಕಾಡಿನ ಒಳಗೆ ಟ್ರೆಕಿಂಗ್  ಕರೆದು ಕೊಂಡು  ಹೋಗ್ತಾರೆ" , ಅಂದರು. 
ನಮಗೆ  ಆ ವ್ಯಕ್ತಿಯನ್ನು ನೋಡಿ ಅಚ್ಚರಿ , 

ಒಂದು ಸಾದಾರಣ  ಮಾಸಿದ ಚಡ್ಡಿ, ಬಿಳಿಯ ಅಂಗಿ, ಹೆಗಲ ಮೇಲೆ ಟವಲ್ಲು ಹಾಕಿದ ಒಬ್ಬ ಇಳಿವಯಸ್ಸಿನ ಮನುಷ್ಯ ನಮ್ಮ ಮುಂದೆ ನಿಂತಿದ್ದರು. ಇವರ ಹೆಸರು ಹಲಗೂರಯ್ಯ. 



ನಮ್ಮ ಟ್ರೆಕಿಂಗ್ ಗೈಡ್  ಹಲಗೂರಯ್ಯ 

ಟ್ರೆಕಿಂಗ್  ಹೋರಟ ಹಾದಿ 
" ಬನ್ನಿ ಸಾ  ನನ್ ಜೊತೆ  ಹುಸಾರಾಗಿ  ಕರಕೊಂದೋಯ್ತೀನಿ" , ಎಂದು  ಹೇಳಿ ಬನ್ನಿ  ಹೋಗುಮಾ ........! ಅಂತಾ ಹೇಳಿ ಮುಂದೆ ಹೊರಟರು.ನಮ್ಮ ಟ್ರೆಕಿಂಗ್  ಪಯಣ ಸಾಗಿತು. ದಾರಿ ಸಾಗುತ್ತಿದ್ದಂತೆ ಎದುರಿಗೆ ಹಸಿರ ಹೊದ್ದ ಸುಂದರ  ಬೆಟ್ಟ ಕೈಬೀಸಿ ಕರೆಯುತ್ತಿತ್ತು.  ನಾವೂ ಸಹ ಹಲಗೂರೈಯ್ಯನ ಹಿಂದೆ  ಹೊರಟೆವು.  ನಡೆಯುತ್ತಿದ್ದ ಹಾದಿಯಲ್ಲಿ ಕಲ್ಲು ಮುಳ್ಳುಗಳು , ಪೊದೆ, ಆನೆ ಜೊಂಡು ಹುಲ್ಲು ಗೋಚರವಾಯಿತು.



ಚಾರಣಕ್ಕೆ ಹೋರಟ  ನಮಗೆ ಕಂಡ ದೂರದ ಬೆಟ್ಟ.



ಕಲ್ಲು ಮುಳ್ಳು , ಹಾಗು ಆನೆ ಹುಲ್ಲಿನಿಂದ ಕೂಡಿದ ಹಾದಿ.



 ಬೆಟ್ಟ ಹತ್ತಲು ಆರಂಭಿಸಿದ ನಮಗೆ ಮೊದಲು ಸುಂದರವಾಗಿ ಕಂಡ ಹಸಿರ ಬೆಟ್ಟ ತನ್ನ ಒಡಲಲ್ಲಿ ಇಟ್ಟುಕೊಂಡಿದ್ದ ಪ್ರಕೃತಿದತ್ತ  ಲಕ್ಷಣಗಳನ್ನು  ಪರಿಚಯ ಮಾಡಲು ಶುರುಮಾಡಿತು.  ಮೊದಲು  ಹಸಿರ ಹುಲ್ಲು  ಹೂವಿನ ಹಾಸಿಗೆ ಅಂತಾ ನಡೆದಿದ್ದ ನಮಗೆ ಅದರಲ್ಲಿನ ಕಲ್ಲು ಮುಳ್ಳುಗಳು  ಪಾದಕ್ಕೆ ಚುಚ್ಚಿ  ತಮ್ಮ ಪ್ರತಾಪ ಮೆರೆದಿದ್ದವು. ಹಾಕಿದ್ದ ಚಪ್ಪಲಿಗಳ ಪ್ರತಾಪ ಅವುಗಳ ಆಟದ ಮುಂದೆ ಏನೂ ನಡೆಯಲಿಲ್ಲ  ಹಿತವಾದ ಗಾಳಿ ಮುದನೀಡಿದರೂ  , ಹಸಿರ ಸಿರಿ ಕಣ್ಣಿಗೆ  ಬಿದ್ದರೂ , ಪಾದಗಳಿಗೆ  ಚುಚ್ಚುತ್ತಿದ್ದ ಚೂಪಾದ ಕಲ್ಲು, ಹಾಗು ಮುಳ್ಳುಗಳು ನಮ್ಮ ಪಾದಗಳಿಗೆ  ಚುಚ್ಚಿ ಸ್ವರ್ಗದಲ್ಲೂ ನರಕ ಇರುತ್ತದೆ ಎಂಬ ಸಂದೇಶ ನೀಡಿದ್ದವು.  ಮೊದ  ಮೊದಲು  ಇವುಗಳಿಗೆ ಭಯಗೊಂಡಿದ್ದ ನಾವು  ಆಮೇಲೆ  ಅವುಗಳನ್ನು ಲೆಕ್ಕಿಸದೆ  ಮುಂದೆ ಸಾಗಿದೆವು. ಆದರೂ  ಎತ್ತರಕ್ಕೆ ಬೆಳೆದ  ಹುಲ್ಲಿನ ನಡುವೆ  ಹಾವುಗಳು, ಅಥವಾ ಹೆಬ್ಬಾವು ಇರುವ ಸಾಧ್ಯತೆ  ತಳ್ಳಿ ಹಾಕುವಂತಿರಲಿಲ್ಲ. ಈ ಪ್ರದೇಶದಲ್ಲಿ ಹೆಬ್ಬಾವುಗಳ ಹಾವಳಿ  ಜಾಸ್ತಿ  ಎಂಬುದು ಇಲ್ಲಿನ ಸ್ಥಳಿಯರ ಅನುಭವದ ಮಾತು.





ಕಾದಿನಿದ ಕಂಡ  ಜಲ ವಿದ್ಯುತ್ ಯೋಜನೆಯ ನೋಟ.

ಕಾಡಿನಲ್ಲಿ ಸಾಗಿದ ನಮಗೆ ಯಾವುದೇ ಪ್ರಾಣಿ ಗೋಚರಿಸದೆ ಇದ್ದರೂ ವಿವಿಧ ಬಗೆಯ ಹಕ್ಕಿಗಳ  ಕಲರವ ಕೇಳುತ್ತಿತ್ತು, ನಮ್ಮ ಗೈಡ್  ಹಲಗೂರಯ್ಯ  ಹಾದಿಯುದ್ದಕ್ಕೂ  ಪರಿಸರದ ಪರಿಚಯ  ಮಾಡುತ್ತಾ ಹೊರಟರು. ಪ್ರಕೃತಿಯ ಬಗ್ಗೆ ಅವರಿಗಿದ್ದ ಅರಿವು ಕಂಡು ಅಚ್ಚರಿಯಾಯಿತು. ಒಂದು ಜಾಗದಲ್ಲಿ ನಿಲ್ಲಿಸಿ  "ಸಾ ಅಲ್ನೋಡಿ   ಬಳಾಪು"   ಅಂದರು ಹೌದು ಇಲ್ಲಿನ ಜನ "ಬ್ಲಫ್ " ಅನ್ನೋ ಊರನ್ನು ಆಡು ಭಾಷೆಯಲ್ಲಿ  "ಬಳಾಪು" ಅನ್ನುತ್ತಾರೆ.  ನಾವು ನಿಂತ ಜಾಗದಿಂದ  "ಏಶಿಯಾ ಖಂಡದಲ್ಲಿ  " ಪ್ರಥಮವಾಗಿ ಜಲ ವಿಧ್ಯುತ್ ಯೋಜನೆ ಕಾರ್ಯಗತ ಗೊಂಡ ಜಾಗಗಳಲ್ಲಿ ಒಂದಾದ    "ಬ್ಲಫ್" ನಲ್ಲಿನ  ವಿಧ್ಯುತ್  ಉತ್ಪಾದನಾ ಕೇಂದ್ರ ಗೋಚರಿಸಿತು.  ಹಾಗು ಟ್ರಾಲಿ ಮನೆ ಹಾಗು ಟ್ರಾಲಿ ಸಾಗುವ ಹಾದಿ  ಸಹ ಒಳ್ಳೆಯ ನೋಟ ನೀಡಿತ್ತು.
                                                   


ಜಲ ವಿಧ್ಯುತ್ ಯೋಜನೆಯ ಟ್ರಾಲಿ ಸಾಗುವ ಹಾದಿ.

ಇನ್ನು ನಮ್ಮ  ಗೈಡ್ ಹಲಗೂರಯ್ಯ ಹೇಳಿದ  "ಬಳಾಪು"  ಅಥವಾ "ಬ್ಲಫ್"  ಬಗ್ಗೆ ತಿಳಿಯೋಣ ಬನ್ನಿ, ಈ ಊರು ಸಹ ಜಲ ವಿಧ್ಯುತ್ ಯೋಜನೆ ಹೊಂದಿದ್ದು, ಶಿಂಷಾ ದಲ್ಲಿ ನಿರ್ಮಿತವಾದ ಕಾಲದಲ್ಲಿಯೇ ಇಲ್ಲಿಯೂ ಜಲ ವಿಧ್ಯುತ್ ಯೋಜನೆ ಆರಂಭ ಮಾಡಲಾಗಿದೆ. ಹತ್ತಿರದಲ್ಲಿ "ಗಗನ ಚುಕ್ಕಿ" ಜಲಪಾತವಿದ್ದು,  ಈ ಜಲಪಾತ ತುಂಬಾ ಹತ್ತಿರ ಹೋಗುವವರೆಗೆ ಕಣ್ಣಿಗೆ ಕಾಣುವುದಿಲ್ಲ. ಆದರೆ ಜಲಪಾತದ ಶಬ್ದ ಬಹಳ ದೂರದ ವರೆಗೆ ಕೇಳಿಸಿ, ನಿಮಗೆ ಇಲ್ಲೇ ಹತ್ತಿರದಲ್ಲೇ ಜಲಪಾತ ಇದೆ ಎಂಬ ಭ್ರಮೆ ಹುಟ್ಟಿಸುತ್ತದೆ, ಈ ರೀತಿ ಭ್ರಮೆ  ಹುಟ್ಟಿಸುವ ಜಲಪಾತ ಇರುವ ಈ ಊರನ್ನು ಬ್ರಿಟೀಷರು " ಬ್ಲಫ್  " ಎಂದು ನಾಮಕರಣ  ಮಾಡಿದ್ದಾರೆ. ಇಂತಹ ಹೆಸರಿನ ಒಂದು ಊರು ನಮ್ಮ ದೇಶದಲ್ಲಿ ಎಲ್ಲೂ ಇಲ್ಲ. ಅದೇ ಈ ಊರಿನ ಹೆಗ್ಗಳಿಕೆ.
 



ಪಕ್ಷಿಲೋಕ , ಹಾಗು ಸಂಸ್ ಕಸಿನ್  ಬ್ಲಾಗಿನ ಸುಮನ ಹಾಗು ದೀಪಕ್ ದಂಪತಿಗಳು 


ಕಾಡಿನಲ್ಲೂ ನಗೆ ಚಿಮ್ಮಿಸಿದ ವೇಣುಗೋಪಾಲ್.


ನಮ್ಮ  ಟ್ರೆಕಿಂಗ್ ಮುಂದುವರೆಯಿತು.  ಕಾಡಿನಲ್ಲಿ ಸುತ್ತಲು ಹೊರಟ  ನಮ್ಮ ತಂಡದ ಯಾರು ಆಯಾಸಗೊಂಡಿರಲಿಲ್ಲ ,  "ಸಂಸ್ ಕಸಿನ್" ಎಂಬ ಅಡಿಗೆ ಬ್ಲಾಗ್ ಹಾಗು "ಪಕ್ಷಿಲೋಕ" ಎಂಬ  ಹಕ್ಕಿಗಳ ಪರಿಚಯದ ಬ್ಲಾಗಿನ  ಸುಮನ ಹಾಗು ದೀಪು  ದಂಪತಿಗಳು  ತಾವು ಕಂಡ  ನೋಟಗಳನ್ನು ಸೆರೆ ಹಿಡಿಯುತ್ತಾ , ಜೊತೆಯಾಗಿ ನಗುತ್ತಾ ಬರುತ್ತಿದ್ದರು, ಇನ್ನು ನಮ್ಮ ವೇಣುಗೋಪಾಲ್  ನಗುತ್ತಾ ಎಲ್ಲಾ ಅನುಭವಗಳನ್ನು  ಖುಷಿಯಿಂದ ಸ್ವೀಕರಿಸುತ್ತಾ ಹಸನ್ಮುಖಿಯಾಗಿ ನಡೆದಿದ್ದರು.ಇನ್ನು ನನ್ನ ಕಸಿನ್ ರವಿಂದ್ರ  ಟ್ರೆಕಿಂಗ್  ನೀರು ಕುಡಿದಂತೆ ಆರಾಮವಾಗಿ ಪ್ರಕೃತಿಯ ಸವಿ ಸವಿಯುತ್ತಿದ್ದ.   ಮುಂದೆ ಸಾಗಿದ ನಮ್ಮನ್ನು ಹಲಗೂರಯ್ಯ  "ಸಾ ಅಲ್ನೋಡಿ  ಸಾ ಆನೆಯ"  ಅಂದರು  ನಾವು ಅವರು ತೋರಿದ ದಿಕ್ಕಿನೆಡೆಗೆ ಕಣ್ಣು ಹಾಯಿಸಿದರೂ  ನಮಗೆ ಆನೆ ಕಾಣಲಿಲ್ಲ.

ಈ ಹಸಿರ ನಡುವೆ ಆನೆಯ ಹುಡುಕಾಟ ನಡೆದಿತ್ತು.

ಇಲ್ಲೆಲ್ಲಿ ಹುಡುಕೋದು ಆನೆಯ ?


 "ಎಲ್ಲಿ ಹಲಗೂರಯ್ಯ  ಆನೆ?" ಅಂತಾ ಮತ್ತಷ್ಟು ಕಣ್ಣುಗಳನ್ನು ಅಗಲ ಮಾಡಿಕೊಂಡು  ಎದುರಿಗೆ ಕಾಣುತ್ತಿದ್ದ ಕಾಡಿನ ಹಸಿರಲ್ಲಿ  ಆನೆಯ ನೋಡಲು ಹುಡುಕಿದೆವು. "ಅಲ್ಲೇ ಅಸೆ ನೋಡಿ ಸಾ".....  , "ಕಿಮಿ ಅಲ್ಲಾಡಿಸುತ್ತಿಲ್ವೆ" , "ಅಲ್ಲೇ ನೋಡಿ ಸಾ ಕಾಣ್ತಾ  ಅದೇ" ಅಂದಾ  ಆದರೆ ಹಸಿರ ಕಾನನದಲ್ಲಿ ಆನೆ ಕಾಣುವಷ್ಟು ನಮ್ಮ ಕಣ್ಣುಗಳು ತೀಕ್ಷ್ಣ ವಾಗಿರಲಿಲ್ಲ . ಆದರೆ ಆ ವಯಸ್ಸಾದ  ನಮಗಿಂತ  ಹಿರಿಯರಾದ  ಆ ಹಲಗೂರಯ್ಯ ನ  ಸೂಕ್ಷ್ಮ  ಕಣ್ಣುಗಳು ಬಹಳ ದೂರದಲ್ಲಿ  ಹಸಿರಿನ ಬೆಟ್ಟದ ನಡುವೆ ಇದ್ದ  ಆನೆಯನ್ನು  ಕಂಡಿದ್ದವು. ನನ್ನ ಜೂಮ್ ಲೆನ್ಸ್ ನಲ್ಲಿ ಇಡೀ ಪ್ರದೇಶವನ್ನು ಜಾಲಾಡಿದೆ ಯಾವ ಪ್ರಯೋಜನವೂ ಆಗದೆ  ಬೆಪ್ಪನಾದೆ. ಹಲಗೂರಯ್ಯ  "ಅಲ್ಲೇ  ಇತ್ತು ನಿಮಗೆ ಕಾಣಲಿಲ್ಲ ಅಂತೀರಲ್ಲಾ"   ಅಂತಾ ಹೇಳುತ್ತಾ ಮುನ್ನಡೆದರು.


ಮರದಲ್ಲಿ ಗೊಂದು ತೆಗೆಯುವ ನೋಟ,
ಕಣ್ಣಿಗೆ ಕಂಡ  ಚಿಟ್ಟೆ 
ತಲೆ ಎತ್ತಿ ನೋಡಿದಾಗ ಕಂಡ ಹಸಿರ ಚಪ್ಪರ.  


ಹಾಗೆ ಮುಂದೆ ನಡೆದ ನಮಗೆ ಹಲಗೂರಯ್ಯ  ಅಲ್ಲಿನ ಮರಗಳ ಪರಿಚಯ ಮಾಡುತ್ತಾ ಹೊರಟರು, ಕೆಲವು ಹಕ್ಕಿಗಳ ಬಗ್ಗೆ ಹೇಳುತ್ತಾ  ನಡೆದರೂ. ಅಲ್ಲೇ ಇದ್ದ ಒಂದು ಮರದಲ್ಲಿ ಗೊಂದು ಕಿತ್ತು  ನಮಗೆ ನೀಡಿದರು.  ಹೀಗೆ ಸಾಗಿತ್ತು ನಮ್ಮ ಟ್ರೆಕಿಂಗ್. ದಾರಿಯಲ್ಲಿ ಒಂದು ಏರೋಪ್ಲೇನ್  ಚಿಟ್ಟೆ   ತನ್ನ ಬಾಲ ಎತ್ತಿಕೊಂಡು  ನನ್ನ ಕ್ಯಾಮರಾಗೆ  ಪೋಸ್ ಕೊಟ್ಟಿತು.   ಸಾಗುತ್ತಾ ತಲೆ ಎತ್ತಿ  ನೋಡಿದರೆ ಕಾಣಿಸಿತು ಹಸಿರ ಚಾವಣಿ ಹಾಕಿದ್ದ  ಮರಗಳ ಕೊಂಬೆ. ಬಹಳ ಹೊತ್ತು ಅಲೆದಾಟ ನಡೆಸಿದ ನಾವು ಬೆಟ್ಟ ಇಳಿಯಲು  ಶುರುಮಾಡಿದೆವು.




ಮುಂದಿನ ದಾರಿ ಎಲ್ಲಿದೆ 


ಇಳಿಯುವ ಹಾದಿಯಲ್ಲಿ ನಮ್ಮ ಹಲಗೂರಯ್ಯ  ಸ್ವಲ್ಪ ಗಲಿಬಿಲಿಗೊಂಡು  ಒಂದೆಡೆ  ತಂದು ನಿಲ್ಲಿಸಿದರು , ನೋಡಿದರೆ ಯಾವ ಕಡೆ ಹೋಗಲೂ  ಜಾಗವಿಲ್ಲಾ, ಸಂಪೂರ್ಣ ಪ್ರದೇಶ ಮುಳ್ಳು ಗಿಡಗಳಿಂದ  ತುಂಬಿತ್ತು, ಹೇಗೋ ದಾರಿ ಮಾಡಿಕೊಂಡು  ತೆವಳುತ್ತಾ ನಡೆದೆವು, ಆ ಸಮಯದಲ್ಲಿ ನನಗೆ  ಏನೋ ಕಚ್ಚಿದ ಅನುಭವ   ಬಲ ಕಾಲಿನ ತೊಡೆಗೆ  ಏನೋ ಕಚ್ಚಿದಂತೆ ಆಗಿ ಉರಿಯ ತೊಡಗಿತು.  ಮನದಲ್ಲಿ  ಹಾವೆನಾದರು ಕಚ್ಚಿತೆ ಎನ್ನುವ  ಆತಂಕ. ಸ್ವಲ್ಪ ಮುಂದೆ ಹೋಗಿ ಆ ಜಾಗ ನೋಡಿದರೆ  ತೊಡೆಯಲ್ಲಾ   ಕೆಂಪಾಗಿತ್ತು,  ಆದರೆ ರಕ್ತ ಬಂದಿರಲಿಲ್ಲ  , ಆಮೇಲೆ ತಿಳಿಯಿತು, ಅದು ಯಾವುದೋ ಗಿಡದ ಮುಳ್ಳು  ಚುಚ್ಚಿ ಆದ ಅನಾಹುತ ಅಂತ.  ಅದರ ಉರಿ ಸುಮಾರು ಎರಡು ಘಂಟೆಗಳ ಕಾಲ ನನ್ನನ್ನು ಕಾಡಿತು . ಹಾಗು ಹೀಗೂ ಬೆಟ್ಟ ಇಳಿದು ರೆಸಾರ್ಟಿಗೆ  ವಾಪಸ್ಸು ಬಂದು ಉಸ್ಸಪ್ಪಾ  ಅಂತಾ ಕುಸಿದು ಕುಳಿತೆವು


.
ಟ್ರೆಕಿಂಗ್ ಮುಗಿಸಿ ಕುಳಿತ ರವಿಂದ್ರ 

  ಎದುರಿಗೆ ತಣ್ಣನೆಯ ನಿಂಬೆ ಶರಬತ್ತು,  ಹಾಗು ಹಸಿದ ಹೊಟ್ಟೆಗೆ ಬಿಸಿ ಬಿಸಿ  ಊಟ ಕಾಯುತ್ತಿದ್ದವು,..................., ಮೊದಲ ಹಂತದ ಟ್ರೆಕಿಂಗ್ ಮುಗಿದಿತ್ತು, ಇನ್ನೂ ಹಲವು ಚಟುವಟಿಕೆ ಬಾಕಿಯಿತ್ತು.  ................!!!!

11 comments:

ಸವಿಗನಸು said...

ಏನ್ ಅಲೆದಾಟ ಸರ್...
ಎಷ್ಟೊಂದು ಮಾಹಿತಿ....

Manjunatha Kollegala said...

Nice... ಮುಂದುವರೆಯಲಿ.

umesh desai said...

ಛಂದ ಅದ ಮುಂದಿನ ಕಂತು ಯಾವಾಗ

ಚಿನ್ಮಯ ಭಟ್ said...

ಬಾಲು ಸರ್..
ಮೊದಲಿಗೆ ಖುಷಿಯಾಗಿದ್ದು ಮತ್ತೊಂದು ಪ್ರವಾಸ ಸಂಚಿಕೆ ಆರಂಭವಾಯಿತಲ್ಲಾ ಅದಕ್ಕೆ...
ಹಮ್..ಸುಂದರ ಚಿತ್ರಗಳು ಸಾರ್..
ಜೊತೆಗೆ ಎಂದಿನಂತೆ ಇತಿಹಾಸದ ಪುಟದ ಧೂಳನ್ನು ಕೊಡವಿ ಬ್ಲಾಗಿನಲ್ಲಿ ಬಂದುನಿಂತ ಮಾಹಿತಿಗಳು...
ಕಟ್ ಮಾಡಿದ್ರೆ,
ಧುತ್ತೆಂದು ಬಂದು ಬಿಡುವ ಡೈಲಾಗುಗಳು..
ಬರೆಯುತ್ತಿರಿ...
ಓದುತ್ತಿರುತ್ತೇವೆ...ಖುಷಿಯಾಯ್ತು..

Srikanth Manjunath said...

ನಾವು ಸಾಮಾನ್ಯ ಪ್ರವಾಸ ಕೈಗೊಂಡರೆ ಅಂತರ್ಜಾಲದಲ್ಲಿ ಆದಷ್ಟು ಮಾಹಿತಿ ಹೆಕ್ಕಿ ತೆಗೆದು..ಆ ಸ್ಥಳವನ್ನು ಸಂದರ್ಶಿಸಿ ಅಲ್ಲಿ ನಡೆದ ವಿದ್ಯಮಾನಗಳನ್ನು ನಮ್ಮ ಧಾಟಿಯಲ್ಲಿ (?) ಬರೆದು ಕೈ ತೊಳೆದುಕೊಳ್ಳುತ್ತೇವೆ...ನೀವು ಹಾಗಲ್ಲ..ಹೋಗುವ ಮುಂಚೆ ಮತ್ತು ನಂತರ..ಗುದ್ದಲಿ, ಪಿಕಾಸಿ ಎರಡನ್ನು ತೆಗೆದುಕೊಂಡು ಅಲ್ಲಿನ ಸ್ಥಳ ವಿಚಾರಗಳನ್ನು ಅಗೆದು, ಬಗೆದು, ನಮಗೆ ಉಣ ಬಡಿಸುವ ರೀತಿ ಖುಷಿ ಕೊಡುತ್ತದೆ.ನಿಮ್ಮ ಶ್ರಮಕ್ಕೆ ಒಂದು ನಿಡಿದಾದ ಪ್ರತಿಕ್ರಿಯೆ ಕೊಟ್ಟರೆ ನನಗೆ ಸಮಾಧಾನ..ಸುಂದರ ಪ್ರವಾಸ...ಮನಸೆಳೆದದ್ದು ಎಂದರೆ ಬ್ಲಫ್ ಎನ್ನುವ ಹೆಸರಿನ ಬಗ್ಗೆ ಕುತೂಹಲ ಇತ್ತು...ಉತ್ತರ ಮನಸಿಗೆ ಮುದ ನೀಡಿತು..ಒಳ್ಳೆಯ ಟ್ರೆಕಿಂಗ್.ನಿಮ್ಮೊಡನೆ ಒಮ್ಮೆ ಕಾಡು ನೋಡುವ ಬಯಕೆ ಇದೆ ಆದಷ್ಟು ಬೇಗ ಹೋಗಿ ಬರುವ..ಸುಂದರ ಲೇಖನ, ಚಿತ್ರಗಳು, ಕಿಕ್ ಕೊಡುವ ಸಂಭಾಷಣೆ..ಇದೆಲ್ಲ ಮಿಗಿಲಾಗಿ ಆ ವಯಸ್ಸಿನಲ್ಲೂ ಬತ್ತದ ಉತ್ಸಾಹ ಇರುವ ಶ್ರೀ ಹಲಗೂರಯ್ಯನವರ ಮಾರ್ಗದರ್ಶನ..

Deep said...

Hey hey..... hey super .. super.....sakhattagi bandide..
Nimmuru namage tumba ista aytu ..... innomme yavsga ?

Badarinath Palavalli said...

ಹೊಸ ಧಾರವಾಹಿಗೆ ಸ್ವಾಗತ ಸಾರ್.

ನೀವೇ ಭಾಗ್ಯವಂತರು ಇಂತಹ ಶ್ರೀ. ವೇಣುಗೋಪಾಲ್ ಅವರಂತಹ ಕೋಬ್ರದರ್ ನನಗೂ ಬೇಕೆಂಬ ಆಸೆಯಿತ್ತು. ನನಗೆ ಸಿಗಲಿಲ್ಲ ಅಷ್ಟೇ!

ದೀಪಕ್ ವಸ್ತಾರೆ ಮತ್ತು ಸುಮನಾ ದೀಪಕ್ ಅಪರೂಪದ ದಂಪತಿಗಳು. ಅವರ ಬ್ಲಾಗಿಗೆ ಇತ್ತೀಚೆಗೆ ನಾನು ಮಾರುಹೋದೆ.

ಶಿಂಷಾ ಬಗೆಗೆ ಒಳ್ಳೆಯ ಮಾಹಿತಿ ಇದೆ.

ಹಲಗೂರಯ್ಯ ಪಕ್ಕಾ ಕಾಡಿನ ಭಾಗ.

ಬಳಾಪು ಫೋಟೋಗಳು ಪಸಂದಾಗವೇ.

ನನಗಂತೂ ಟ್ರೆಕ್ಕಿಂಗ್ ಎಂದರೆ ಅಷ್ಟಕಷ್ಟೆ. ಮೊದಲೆ ದೆಂಡಿಯಾಗಿ ಸಿಗರೇಟ್ ಸುಡುವ ದೇಹದ ತಿತ್ತಿಗಳು ಏದುಸಿರಿನ ತಿದಿಗಳು!

ಒಳ್ಳೆಯ ಸಾಲು ಬರಹಗಳ ನಿರೀಕ್ಷೆಯಲ್ಲಿ....

vandana shigehalli said...

ಒಳ್ಳೆಯ ಕಾಡಿನ ಸುತ್ತಾಟ ನಿಮ್ಮ ಬ್ಲಾಗ್ ನೋಡಿ ಎಲ್ಲಿಗೆ ಹೋಗಬಹುದು ಅಂತ ತೀರ್ಮಾನ ಮಾಡಬಹುದು ನೋಡಿ ಒಳ್ಳೆಯ ಮಾಹಿತಿ ಚಿತ್ರ ದೊಂದಿಗೆ

ದಿನಕರ ಮೊಗೇರ said...

nimma jote naanu naDedukonDu bartaa iddene...haagittu nivu bareda riti..

pravaasa kathana bareyuva nimm abge super....

munduvarisi sir...

Sudeepa ಸುದೀಪ said...

ಚಿತ್ರಗಳಂತೂ ತುಂಬಾನೇ ಚೆನ್ನಾಗಿದೆ...ಜೊತೆಗೆ ನಿಮ್ಮ ಮಾಹಿತಿ..

ಜಲನಯನ said...

ಅಲ್ಪಾ..ಬಾಲಣ್ಣ..ಹೆಂಗಂತಾ ಟೇಮ್ ಸಿಗ್ತದೆ ನಿಮ್ಗೆ...??
ಮಂಡ್ಯ ಸುತ್ ಮುತ್ತಾ ಸಂದಾಕೇ ಓಡಾಡೀರಿ...ಅಂಗಂದ್ರೆ..??? ಬ್ಲಪ್ಫು ನೋಡಿದ್ದೀನಿ ಆದರೆ ನೆನಪು ಮಾಸಿತ್ತು..ನಿಮ್ ಬ್ಲಾಗ್ ನೊಡಿ ಮತ್ತೆ ಒರೆಸ್ಕೊಂಡೆ..ನೆನಪಿನ ಕನ್ನಡಿ, ಚಿತ್ರಗಳು ಸಹಕಾರಿ ಅದಕ್ಕೆ... ನಿಮ್ಮ ಮಾಮೂಲಿ ಹಿಡ್ತಕ್ಕೆ ಸಿಗೋ ನಿರೂಪಣೆ..