|
ಗುರುಗುಟ್ಟಿದ ಪಿರಂಗಿ. |
|
|
|
|
"ಶಾಲ್ಮಲಾ ನದಿ" ದಾಟಿ ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ ನಡೆಯಲು ಆರಂಭಿಸಿದೆವು ಅಲ್ಲೇ
ಇದ್ದ ಒಂದು ಸಣ್ಣ ಗುಡ್ಡ ಏರಿದ ನಾವು ಕಾಡಿನ ವಾತಾವರಣ ಇದ್ದ ಜಾಗದ ಒಳಗೆ ಬಂದಿದ್ದೆವು
ಅಲ್ಲಿ ಎತ್ತರದ ಪ್ರದೇಶದಲ್ಲಿ ಪೊದೆಗಳ ನಡುವೆ ನಮ್ಮತ್ತ "ದುರುಗುಟ್ಟುತ್ತಾ "
ನೋಡುತ್ತಿತು ಒಂದು ಪಿರಂಗಿ....................!!!
|
ಕಾನನದಲ್ಲಿ ಮಲಗಿದ ಪಿರಂಗಿ |
|
ಶತಮಾನಗಳ ಹವಾಮಾನ ವೈಪರೀತ್ಯ ಎದುರಿಸಿ ನಿಂತ ಪಿರಂಗಿ. |
"ಸಾರ್ ಇದೆ ಜಾಗದಲ್ಲಿ ಸೋಂದೆ ಅರಸರ ಕೋಟೆ ಇತ್ತಂತೆ " ಎಂದ ಹರ್ಷ " ಬನ್ನಿ ಸಾರ್ ಪಿರಂಗಿ ನೋಡೋಣ" , ಅಂತಾ ಹತ್ತಿರ ಕರೆದುಕೊಂಡುಹೋದ ''ಅನುಮಾನವೇ ಬೇಡ ಇದು ಸೋಂದೆ ಅರಸರ ಕಾಲದ ಪಿರಂಗಿ ಗಳೇ'' ಅಂತಾ ಮನಸು ಹೇಳುತ್ತಿತ್ತು. ಪಿರಂಗಿ ಹತ್ತಿರ ಬಂದೆವು!! ಕಾಡಿನ ನಡುವೆ ಬೃಹತ್ ಮರಗಳ ಬೇರುಗಳ ಚಕ್ರವ್ಯೂಹದಲ್ಲಿ ಇತಿಹಾಸ ಬಂಧಿಯಾಗಿತ್ತು. ಹಲವು ಶತಮಾನಗಳ ಮಳೆ, ಚಳಿ, ಗಾಳಿ, ಬಿಸಿಲು ಹೊಡೆತಕ್ಕೆ ಸಿಕ್ಕಿ ಪಿರಂಗಿ ಛಲದಿಂದ ಬಾಯ್ತೆರೆದು ಮಲಗಿತ್ತು, ಗತ ಇತಿಹಾಸವ ಕಾಯುತ್ತಾ.
|
ಸೋಂದೆ ಕೋಟೆಯೊಳಗೆ ಇವೆಲ್ಲಾ ಇವೆ. |
ಬನ್ನಿ ಸೋಂದೆ ಅರಸರ ಬಗ್ಗೆ ಸ್ವಲ್ಪ ತಿಳಿಯುವ. ನಿಮಗೆ ಮೊದಲೇ ತಿಳಿಸಿದಂತೆ "ಸೋಂದಾ" ಎಂಬ ಊರಿಗೆ ''ಸ್ವಾಧಿ'', ''ಸುಧಾಪುರ" ಎಂಬ ಹೆಸರುಗಳೂ ಸಹ ಇದೆ. ಈ ಪ್ರದೇಶದಲ್ಲಿಯೇ ಮೆರೆದಿತ್ತು, 263ವರ್ಷಗಳ ಕಾಲದ ಸ್ವಾಧಿ ಅರಸರ ರಾಜ್ಯಭಾರ.ಸ್ವಾಧಿಯ ಲ್ಲಿ ಆಡಳಿತ ನಡೆಸಿದ 9 ಜನ ಅರಸರ ವಿವರ ಈ ಕೆಳಕಂಡಂತೆ ಇದೆ.
1] ಅರಸಪ್ಪ ನಾಯಕ'1530- 1555 , 2] ಇಮ್ಮಡಿ ಅರಸಪ್ಪ ನಾಯಕ 1555-1603, 3] ರಾಮಚಂದ್ರ ನಾಯಕ 1603-1618, 4] ರಘುನಾಥ ನಾಯಕ 1618 1638, 5] ಮಧುಲಿಂಗ ನಾಯಕ 1638-1672 6] ಸವಾಯಿ ರಾಮಚಂದ್ರ ನಾಯಕ 1672- 1678 , 7] ಇಮ್ಮಡಿ ಸದಾಶಿವರಾಯ 1678-1718, 8] ಬಸವಲಿಂಗ ರಾಯ 1718- 1745 , ಹಾಗು 9] ಇಮ್ಮಡಿ ಸದಾಶಿವ 1745- 1763 ( ಮಾಹಿತಿ ಕೃಪೆ ಸೋಂದಾ ದರ್ಶನ ಪುಸ್ತಕ , ಜಾಗೃತ ವೇದಿಕೆ ಸೋಂದಾ )
|
ಸೋಂದೆ ಕೋಟೆಯ ಗೋಡೆಯ ಅವಶೇಷ |
ಇತಿಹಾಸಕಾರರು ಹೇಳುವಂತೆ 263 ವರ್ಷಗಳ ಕಾಲ ಮೇಲಿನ 9 ಜನ ರಾಜರುಗಳು ಸೊಂದೆಯಲ್ಲಿ ಆಡಳಿತ ನಡೆಸಿದ್ದಾರೆ. ಸೋಂದೆ ರಾಜರು ವಿಜಯ ನಗರ ಅರಸರ ಅನುಯಾಯಿಗಳಾಗಿದ್ದರು , ವಿಜಯನಗರಕ್ಕೂ ಸೊಂದೆಗೂ ಒಳ್ಳೆಯ ಆಡಳಿತ ಸಂಭಂದವಿತ್ತು. "ಇಮ್ಮಡಿ ಸದಾಶಿವ ರಾಯ" ನ ಕಾಲದಲ್ಲಿ ಮೊಘಲರ ದಾಳಿ ಎದುರಿಸಲು ಶಾಲ್ಮಲಾ ನಧಿಯ ದಡದಲ್ಲಿ ಸೋಂದೆ ಅರಸರ ಕೋಟೆ ನಿರ್ಮಾಣವಾಯಿತು. ಇವರ ಕಾಲದಲ್ಲಿ ಪೋರ್ಚುಗೀಸರೊಡನೆ ವ್ಯಾಪಾರ ವಹಿವಾಟು ಇತ್ತು. ಪೋರ್ಚುಗೀಸರ ಗನ್ನುಗಳು, ಮದ್ದು ಗುಂಡುಗಳು, ಪಿರಂಗಿ, ಕುದುರೆ ಮುಂತಾದವುಗಳಿಗೆ ಸೋಂದೆ ಅರಸರು ಮನಸೋತ್ತಿದ್ದರು, ಇವುಗಳನ್ನು ಅವರಿಂದ ಆಮದು ಮಾಡಿಕೊಂಡು , ಸೋಂದೆ ರಾಜ್ಯದಿಂದ ಅಕ್ಕಿ, ಮೆಣಸು, ಏಲಕ್ಕಿ, ಹಾಗು ಇತರೆ ಸಂಬಾರ ಪದಾರ್ಥಗಳನ್ನು ಪೋರ್ಚುಗೀಸರಿಗೆ ರಫ್ತು ಮಾಡಲಾಗುತ್ತಿತ್ತು ,
|
ಪಿರಂಗಿ ಗಳ ಸಾಲು |
|
ಇವು ಪೋರ್ಚುಗೀಸರ ಕಾಲದ ಪಿರಂಗಿ ಇರಬಹುದೇ?? |
ಹಾಗಾಗಿ ಈ ಕೋಟೆಯಲ್ಲಿ ಇಂದಿಗೂ ಪೋರ್ಚುಗೀಸರ ಕಾಲದ ಪಿರಂಗಿ ಗಳ ಸಾಲು ಸೋಂದೆ ಅರಸರ ವಿಶೇಷತೆಯನ್ನು ಸಾರುತ್ತಾ ಮಲಗಿವೆ.ಮುಂದೆ ಈ ರಾಜ್ಯವನ್ನು ಶ್ರೀ ರಂಗಪಟ್ಟಣದ ಹೈದರ್ ಅಲಿ 1763 ರಲ್ಲಿ ವಶ ಪಡಿಸಿಕೊಳ್ಳುತ್ತಾನೆ , ಈ ದಾಳಿಯಲ್ಲಿ ಸ್ವಾಧಿ ರಾಜ್ಯ ಪತನ ಕಾಣುತ್ತದೆ. ನಂತರ ಈ ಪ್ರದೇಶ ಟಿಪ್ಪೂ ಸುಲ್ತಾನ ಆಡಳಿತಕ್ಕೆ ಒಳಪಡುತ್ತದೆ. 1799 ರಲ್ಲಿ ಟಿಪ್ಪೂ ಪತನ ನಂತರ ಬ್ರಿಟೀಷರ ತೆಕ್ಕೆಗೆ ಸೇರುತ್ತದೆ.
|
ಕೋಟೆಯ ಅವಶೇಷ |
|
ಹನುಮ ಇಲ್ಲಿದಾನೆ |
|
ಶೀರ್ಷಿಕೆ ಸೇರಿಸಿ |
ಅಂದು ಮೊಘಲರ ದಾಳಿ ಎದಿರಿಸಿದ ಈ ಕೋಟೆಯಲ್ಲಿ ಇಂದು ಅವಶೇಷಗಳ ಪಳೆಯುಳಿಕೆ ಕಂಡುಬರುತ್ತದೆ. ಕೋಟೆಯ ದ್ವಾರ ಇತ್ತೆಂದು ಹೇಳುವ ಕಡೆಯಲ್ಲಿ ಒಂದು ಸುಮಾರು ಐದು ಅಥವಾ ಆರು ಅಡಿ ಎತ್ತರದ ಹನುಮನ ಸನ್ನಿಧಿ ಇದೆ. ಇದರ ಪಕ್ಕ ದಲ್ಲಿ ಹುಲಿಯನ್ನು ಹೋಲುವ ಪುಟ್ಟ ವಿಗ್ರಹ ಕಂಡುಬರುತ್ತದೆ. "ಸಾರ್ ಇದನ್ನು ಹುಲಿಯಪ್ಪಾ ಅನ್ನುತ್ತಾರೆ ಇಲ್ಲಿ ಜನ" ಅಂದಾ ನಮ್ಮ ಹರ್ಷ. ಮಾತಾಡುತ್ತಾ ಕೋಟೆಯ ಆವರಣ ಹೊಕ್ಕೆವು, ಕೋಟೆಯ ಒಳ ಆವರಣ ಹೊಕ್ಕರೆ ನಿಮಗೆ ಕಾಣುವುದು ಪಿರಂಗಿ ಗಳ ಸಾಲು ಅರೆ ಇದೇನಿದು ಅಂತಾ ಮುಂದೆ ಹೋದರೆ ಒಂದು ಜಾಲರಿ ಮನೆಯ ಒಳಗೆ ಕಲ್ಲಿನ ಮಂಚ ಕಂಡು ಬರುತ್ತದೆ ಇದನ್ನು "ನ್ಯಾಯ ಪೀಠ" ಎನ್ನುತ್ತಿದ್ದರಂತೆ,
|
ಕಲ್ಲಿನ ಸುಂದರ ಪೀಟ ಇರುವ ಜಾಲರಿ ಮನೆ. |
|
|
ಮಂಚದ ಕಾಲಿನಲ್ಲಿ ಅರಳಿದ ಮುರಳಿಧರ ಕೃಷ್ಣ. |
|
ಕಾಳಿಂಗ ಮರ್ಧನ ಕೃಷ್ಣ |
|
ಬೆಣ್ಣೆ ತಿನ್ನುವ ಮುದ್ದು ಕೃಷ್ಣ. |
"ಕಲ್ಲಿನ ಪೀಠ" ಇರುವ ಮನೆಯ ಬಳಿ ತೆರಳಿ ವೀಕ್ಷಿಸಿದೆ. ಅಂದಾಜು 10*10 ಅಡಿಗಿಂತಲೂ ದೊಡ್ಡದಾದ ಕಲ್ಲಿನ ಮಂಚ , ಮಂಚದ ನಾಲ್ಕು ಕಾಲುಗಳಲ್ಲಿಯೂ ಸುಂದರ ಕೆತ್ತನೆಯ ಕೌಶಲತೆ ಮನಸೆಳೆಯಿತು. ಅಚ್ಚರಿವ ವಿಚಾರ ವೆಂದರೆ "ನ್ಯಾಯ ಪೀಠ" ಅಥವಾ ಮಂಚದ ನಾಲ್ಕೂ ಕಾಲುಗಳನ್ನು ನೋಡುತ್ತಾ ಹೋದಂತೆ ಶ್ರೀ ಕೃಷ್ಣನ ವಿವಿಧ ಬಗೆಯ ಲೀಲೆಗಳನ್ನು ಅಲ್ಲಿ ಸುಂದರವಾಗಿ ಕೆತ್ತಲಾಗಿತ್ತು. ಸುಂದರ ಕಲೆಯನ್ನು ಹೊಂದಿದ ಈ ಮಂಚದ ರಕ್ಷಣೆ ಆಗಬೇಕಾಗಿದೆ.
|
ಕೋಟೆಯೊಳಗೆ ದೇವಾಲಯ |
|
ಗತ ಕಾಲದ ಬಾವಿ |
ಮಂಚದ ಮನೆಗೆ ಅನತಿ ದೂರದಲ್ಲಿ ಎದುರಾಗಿ ಒಂದು ಸಣ್ಣ ದೇವಾಲಯ ಕಾಣುತ್ತದೆ ಹತ್ತಿರ ಹೋಗಿ ನೋಡಿದರೆ ಅಲ್ಲಿ ಕಂಡಿದ್ದು ಸೋಂದೆ ಅರಸರ ಪ್ರಿಯವಾದ ಶಿವಲಿಂಗ ಹಾಗು ನಂದಿ ವಿಗ್ರಹ. ಶಾಲ್ಮಲಾ ನದಿಯ ದಡದಲ್ಲಿ ನೆಲೆಸಿದ್ದ ಇತಿಹಾಸದ ಕೋಟೆಯನ್ನು ಹಸಿರ ವನಸಿರಿ ತನ್ನ ಒಡಲಲ್ಲಿ ಹಾಕಿಕೊಂಡು ಮುಚ್ಚಿಡುವಂತೆ ಕೋಟೆಯ ಪರಿಸರದಲ್ಲಿ ಬೆಳೆದಿರುವ ದೊಡ್ಡ ದೊಡ್ಡ ಮರಗಳ ಬೇರುಗಳು ಕೋಟೆಯ ಒಡಲನ್ನು ಸೀಳಿ ಭಗ್ನಗೊಳಿಸಿವೆ ಹಾಗೆ ಕೋಟೆ ಯ ಆವರಣದಲ್ಲಿ ಸುತ್ತು ಹಾಕುತ್ತಾ ಫೋಟೋ ತೆಗೆಯುತ್ತಾ ಸಾಗಿದೆ, ಯಾವುದೇ ಶಾಸನದ ಕುರುಹು ನನ್ನ ಕಣ್ಣಿಗೆ ಸಿಗಲಿಲ್ಲ. ಸನಿಹದಲ್ಲೇ ಕಂಡಿದ್ದು ಮರದ ಬೇರಿಗೆ ಹೊಂದಿ ಕೊಂಡಂತೆ ಒಂದು ಹಳೆಯ ಕಾಲದ ಬಾವಿ ಗೋಚರಿಸಿತು. ಆಕಾಲದ ನಿರ್ಮಾಣ ಕೌಶಲತೆ ಅನಾವರಣ ಗೊಂಡು ಅಚ್ಚರಿ ತಂದಿತು.
|
ಕೋಟೆಯನ್ನು ಆಕ್ರಮಿಸಿರುವ ದೊಡ್ಡ ಮರಗಳು. |
ಕೋಟೆಯನ್ನು ನುಂಗುತ್ತಿರುವ ಮರಗಳನ್ನು ನೋಡುತ್ತಾ , ಇದರೊಳಗೆ ಅಳಿಯುತ್ತಿರುವ ಕೋಟೆಯ ನೋಡಿ ಒಮ್ಮೆ ನಿಟ್ಟುಸಿರು ಬಿಟ್ಟು ನಾನೂ ಹರ್ಷ ಹೊರಟೆವು................ನಮ್ಮನ್ನು ಬೀಳ್ಕೊಟ್ಟ ಕೋಟೆ ಮತ್ತೆ ಯಾವಾಗ ಬರುವೆ ಎಂಬಂತೆ ಕೇಳಿದಂತೆ ಆಯಿತು. ನಮ್ಮ ಪಯಣ ಮುಂದೆ ಸಾಗಿತು..............ಮುಂದೆ ಸಾಗಿದ ನಮ್ಮ ಬೈಕು ನಿಂತಿದ್ದು ದಾರಿಯಲ್ಲಿ ಸಿಕ್ಕ ಒಂದು ಮ್ಯೂಸಿಯಮ್ಮಿನ ಬಳಿ.................!!!!
12 comments:
ನಾವು ಚಿಕ್ಕವರಿದ್ದಾಗ (ಈಗಲೂ ಸಹ) ಬಾಣಲೆಯಲ್ಲಿ ಮಾಡಿದ ಉಪ್ಪಿಟ್ಟು ತೆಗೆದ ಮೇಲೆ..ತಳಕ್ಕೆ ಅಂಟಿಕೊಂಡ ರೊಟ್ಟಿಯಂತಾದ ಉಪ್ಪಿಟ್ಟಿನ ಚಕ್ಕಳವನ್ನು ಮಗಚುವ ಕೈಯಲ್ಲಿ ಎಬ್ಬಿ ಎಬ್ಬಿ ಕೆರೆದು ಹಾಕಿಸಿಕೊಳ್ಳುವುದು ಬಹು ಇಷ್ಟವಾದ ಕಾರ್ಯವಾಗಿತ್ತು..ನೀವು ಸೊಂದೆಯ ಇತಿಹಾಸವನ್ನು ಪದರ ಪದರವಾಗಿ ಎಬ್ಬುತ್ತಿರುವ ಪ್ರಯತ್ನ ನೋಡಿದಾಗ..ಆ ಚಕ್ಕಳದ ಉಪ್ಪಿಟ್ಟು ರುಚಿಯಾಗಿರುವ ಹಾಗೆ ಮನಕ್ಕೆ, ಕಣ್ಣಿಗೆ ಖುಷಿ ಕೊಡುತ್ತಿದೆ...ಪಿರಂಗಿಗಳು, ಹಳೆಯ ಭಾವಿ, ಅರಮನೆಯಿರಬಹುದಾದ ಅವಶೇಷಗಳು, ಕೋಟೆ ಕೊತ್ತಲಿನ ಪಳಯುಳಿಕೆಗಳು, ಕಲ್ಲಿನ ಪೀಠದ ಕುಸುರಿ ಕೆಲಸ.. ರಾಕ್ಷಸಾಕಾರದ ಮರಗಳು ಒಂದೇ ಎರಡೇ....ಅಮೋಘ...ನಮಗೆ ೪೫೦ಕಿ.ಮಿ. ದೂರದಿಂದಲೇ ಇತಿಹಾಸವನ್ನು ಮೊಗೆ ಮೊಗೆದು ಉಣಬಡಿಸುತ್ತಿರುವ ನಿಮಗೆ, ನಿಮ್ಮ ಕ್ಯಾಮೆರಾಕ್ಕೆ ಧನ್ಯವಾದಗಳು (ಈ ಪ್ರವಾಸದ ಶಿಲ್ಪಿಗೆ ನಿಮ್ಮ ಈ ಲೇಖನದ ಕೊನೆ ಕಂತಿನಲ್ಲಿ ಬೇರೆಯಾಗೇ ಬರೆಯುತ್ತೇನೆ..)......ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬೇಕು....
ಶತಮಾನಗಳು ನಾಡನ್ನು ಆಳಿದ ಅರಸರ ಗುರುತುಗಳು ಅವಗಣನೆಗೆ ಗುರಿಯಾಗಿರುವುದು, ನಮ್ಮ ಇತಿಹಾಸವನ್ನು ಅಗೌರವದಿಂದ ಕಾಣುವುದಕ್ಕೆ ಮತ್ತು ಸರ್ಕಾರಗಳ ಕುರುಡುತನಕ್ಕೆ ಸಾಕ್ಷಿ.
ಕ್ರೇನು ಮತ್ತಿತರ ಆಧುನಿಕ ಎತ್ತು ಪರಿಕರಗಳಿಲ್ಲದೆ, ಪಿರಂಗಿ ಮತ್ತಿತರ ಭಾರವಾದ ಉಪಕರಣಗಳನ್ನು ದೂರದ ಪೋರ್ಚಗಲ್ಲಿನಿಂದ ಆಮದಿಸಿ, ಈ ಕಾನನದ ಮಧ್ಯೆ ಪ್ರತಿಷ್ಟಾಪಿಸಿದ ಹಿರಿಯರ ಶ್ರಮವು ಅಚ್ಚರಿ ತರಿಸುತ್ತದೆ.
ಅಲ್ಲಿನ ಶಿಲ್ಪ ಕಲೆ ಮತ್ತು ಪರಿಸರ ನನಗೆ ನೋಡುವ ಹುಚ್ಚೆಬಿಸಿತು.
ಶೀರ್ಷಿಕೆ ಕೊಡುವಷ್ಟು ಪಟು ನಾನಲ್ಲ ಬಾಲು ಸಾರ್, ಅದೇನಿದ್ದರು ನಿಮಗೆ ಚಿಟಿಕೆ ವಿದ್ಯೆ.
ಮುಂದುವರೆಯಲಿ...
ಉತ್ತಮ ನಿರೂಪಣೆಯೊ೦ದಿಗೆ ಅತುತ್ತಮ ವಿಚಾರಗಳನ್ನು ಚಿತ್ರದ ಮೂಲಕ ಸಾಕ್ಷೀಕರಿಸಿದ್ದೀರಿ.. ಹತ್ತು ಹಲವು ಐತಿಹಾಸಿಕ ವಿಚಾರಗಳನ್ನು ಬಿಚ್ಚಿಡುವ ನಿಮ್ಮ ಪರಿಗೆ ಅನ೦ತ ಧನ್ಯವಾದಗಳು.
ಬಾಲು ಸರ್,
ಸೋಂದೆ ಅರಸರ ಸಂಪೂರ್ಣ ವಿವರ ಆಗ ಬಳಸುತ್ತಿದ್ದ ಪೋರ್ಚುಗೀಸರ ಪಿರಂಗಿಗಳು ಅಲ್ಲಿನ ಕೋಟೆ, ಅದೊಳಗಿನ ದೇವಾಲಯ... ಹೀಗೆ ಇನ್ನೂ ಅನೇಕ ನಮಗೆ ಗೊತ್ತಿಲ್ಲದ ಮಾಹಿತಿಗಳ ಕಲೆಹಾಕಿದ್ದೀರಿ...ಕುತೂಹಕರವಾಗಿದೆ ನಿಮ್ಮ ಈ ಲೇಖನಮಾಲೆ ಮುಂದುವರಿಸಿ ಸರ್..
ತುಂಬಾ ಚೆನ್ನಾಗಿದೆ... ಮುಂದಿನ ಪೋಸ್ಟ್ ಯಾವಾಗ ಹಾಕ್ತಾರಪ್ಪ ಅಂತ ಕಾಯುವ ಹಾಗೆ ಮಾಡ್ತಿರಾ ಬಾಲಣ್ಣ..
ಅಬ್ಬಾ..!! ನಿಜಕ್ಕೂ ನಾವೂ ಹೋಗಿ ನೋಡಬೇಕು ಎನಿಸಿದೆ. ಅತ್ಯುತ್ತಮ ನಿರೂಪಣೆ ಮತ್ತು ಮಾಹಿತಿಗಳನ್ನು ಒಳಗೊಂಡಿದೆ ಹಾಗೆ ಇಂತಹ ಐತಿಹಾಸಿಕ ಸ್ಥಳಗಳು ನಶಿಶಿ ಹೋಗುತ್ತಿರುವುದು ನಿಜಕ್ಕೂ ವಿಷಾದನೀಯ.:(
ಬಾಲು ಸರ್ ನಿಜವಾಗಲೂ ಬೇಸರ ವಾಗುತ್ತಿದೆ .. ಇಷ್ಟೆಲ್ಲಾ ಪುರಾತನ ಮಹತ್ವದ ಸ್ಥಳಗಳಿದ್ದ್ದು ಯಾರಿಗೂ ಗೋಚರವಾಗದೆ ಇದೆಯಲ್ಲ .. ಸ್ತಳೀಯರೂ ಸಹ ಆಸಕ್ತಿ ತೆಗೆದುಕೊಂಡು ಪ್ರವಾಸೋದ್ಯಮವನ್ನ ಅಭಿವೃದ್ದಿ ಮಾಡಬಹುದಿತ್ತು ... ನಿಜವಾಗಿಯೂ ಹೇಳಲಾ ನಾನಿನ್ನೂ ಆ ಸ್ಥಳವನ್ನು ನೋಡಿಲ್ಲ ಅಲ್ಲೇ ಹತ್ತಿರದಲ್ಲಿದ್ದೂ ಸಹ ,.... ಮುಂದಿನ ಸಾರ್ತಿ ಊರಿಗೆ ಹೋದಾಗ ಖಂಡಿತ ಅಲ್ಲೆಲ್ಲ ತಿರುಗಿ ಬರುತ್ತೇನೆ
ತುಂಬಾನೆ ಚೆನ್ನಾಗಿದೆ ಈ ಕಥನ ಈ ಸೋಂದೆ ಅರಸರಬಗ್ಗೆ ನನಗೆ ಮಾಹಿತಿಯೇ ಇರ್ಲಿಲ್ಲ ...... ಸುಮಾರಾಗಿ ಎಲ್ಲಾ ರಾಜರು ಗಳು ೨೫ ರಿಂದ ೩೦ ವರ್ಷ ಆಳಿದವರೇ...
ಆಶ್ಚರ್ಯ ವಾಯ್ತು ... ಮತ್ತು ಖುಷಿ ಆಯ್ತು .... ತುಂಬ ತುಂಬಾ ವಂದನೆಗಳು ........
ಬಾಲು ಅಣ್ಣಾ,ಆ ಫಿರಂಗಿಯನ್ನು ನೋಡಿ ಮೊದಲು ಚಂದ್ರಗುತ್ತಿಯ ಬಗ್ಗೆ ಬರೆಯುತ್ತಿದ್ದೀರೇನೋ ಅಂದುಕೊಂಡೆ...
ಮತ್ತೆ ಸೋಂದೆಯಲ್ಲೆ ಓಡಾಡಿಸಿದಿರಿ..
ಅದೆಷ್ಟು ಚಂದದ ಪೋಟೋಗಳು..ಬಹುಷಃ ನೀವು ಬರ್ತೀರಾ,ಫೋಟೋ ತೆಗಿತೀರಾ, ಅಂತೇಳೇ ಕೋಟೆಯ ಕಲಾಮೂರ್ತಿಗಳೆಲ್ಲಾ ಸ್ನಾನ ಮಾಡಿ ಸಿದ್ಧವಾಗಿದ್ದವೇನೋ..
ಓದಿ ಖುಷಿ ಆಯ್ತು..ಬರಿತಾ ಇರಿ..ಓದ್ತಾ ಇರ್ತೀವಿ..
ನಮಸ್ತೆ..
ಸರ್,ಫೋಟೋ ಮತ್ತು ಮಾಹಿತಿ ತುಂಬ ಚೆನ್ನಾಗಿದೆ..... ನಿಜವಾಗಲು ಈ ಫಿರಂಗಿಯನ್ನೆಲ್ಲ ನೋಡಿದಾಗ ಆಶ್ಚರ್ಯ ಆಯಿತು.....ನ್ಯಾಯ ಕಟ್ಟೆ,ಅದರ ಕೆತ್ತನೆಗಳು ಎಲ್ಲ ಮನಸೂರೆಗೊಂಡಿತು....ಆದಷ್ಟು ಬೇಗ ಪೂರ್ತಿ ಶಿರಸಿಯನ್ನು ತೋರಿಸಿಬಿಡಿ ನಮಗೆ..
To facilitate was a impressive place of duty. It is inspiring on behalf of all. Credit on behalf of sharing to facilitate slice.
ಬಾಲಣ್ಣಾ...
ಎಷ್ಟೆಲ್ಲ ವಿಷಯ ಹುಡುಕಿದ್ದೀರಿ... !
ಒಂದು ಪುಸ್ತಕ ಮಾಡಿ... ದಯವಿಟ್ಟು....
ಆಸಕ್ತರಿಗೆ ಅನುಕೂಲವಾಗುತ್ತದೆ....
ಪ್ರೀತಿಯಿಂದ
Post a Comment