Sunday, October 21, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.9 .ಬನವಾಸಿಯಲ್ಲಿ ಇತಿಹಾಸದ ಹುಡುಕಾಟ!!!


ಗೂಗಲ್ ನಲ್ಲಿ ಬನವಾಸಿ ಕಾಣೋದು ಹೀಗೆ 


ಬನವಾಸಿ !!!ಹರ್ಷನಿಗೆ ಹೇಳಿದ್ದೆ ತಡ  ಬನ್ನಿ ಸಾರ್ ಈಗಲೇ ಹೊರಡೋಣ ಅಂತಾ  ಬೈಕ್ ಏರಿ ಸ್ಟಾರ್ಟ್ ಮಾಡಿದ .  ವೇಗವಾಗಿ ಹೋಗುತ್ತಿತ್ತು ಬೈಕು . ......................... ""ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂಬ   ಮಾತನ್ನು ಮನದಲ್ಲಿ  ನೆನೆಯುತ್ತಾ  ಕಾತರದಿಂದ  ಬನವಾಸಿ ನೋಡಲು ಉಸಿರು ಬಿಗಿ ಹಿಡಿದು ಬೈಕಿನಲ್ಲಿ ಕುಳಿತಿದ್ದೆ.  ................!!!!   ಮನಸ್ಸು ಬನವಾಸಿ ತಲುಪಿಯಾಗಿತ್ತು. ಮನಸ್ಸುಬನವಾಸಿಯಲ್ಲಿ   "ಆದಿಕವಿ ಪಂಪ" ನ ಕುರುಹುಗಳನ್ನು , ಮಯೂರವರ್ಮನ ಇತಿಹಾಸವನ್ನು ಕಾಣಲು ಹಾತೊರೆಯುತ್ತಿತ್ತು. ಅಲ್ಲಿ ಏನು ಮಾಡ ಬೇಕೆಂಬ ಬಗ್ಗೆ  ಕನಸು ಕಟ್ಟುತ್ತಿತ್ತು. ಅಡಿಗಡಿಗೆ  ಬಾಲ್ಯದಲ್ಲಿ ಉರು ಹೊಡೆದಿದ್ದ  ಆದಿಕವಿ ಪಂಪನ ಪದ್ಯ "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ"  ಎಂಬ ವಾಕ್ಯವನ್ನು ಮೆಲುಕು ಹಾಕುತ್ತಿತ್ತು.ಬನವಾಸಿಯಲ್ಲಿ ಕೋಟೆ ಇತ್ತೇ  ಈ ಚಿತ್ರ ನೋಡಿದರೆ ಅನುಮಾನ ಕಾಡುತ್ತದೆ.

 ಕನವರಿಕೆಯಲ್ಲೇ ಬನವಾಸಿಯ ಬಗ್ಗೆ ತಿಳಿಯೋಣ ಬನ್ನಿ ಕರ್ನಾಟಕದ ಇತಿಹಾಸದಲ್ಲೇ  ಪ್ರಾಚೀನ ಪಟ್ಟಣಗಳಲ್ಲಿ  ಬನವಾಸಿ ಅತ್ಯಂತ ಪುರಾತನ ಪಟ್ಟಣವಾಗಿದೆ. ಈ ಊರನ್ನು "ವೈಜಯಂತಿ '', " ಬನವಸೆ ", "ಜಯಂತೀ ಪುರ", "ಕೊಂಕಣ ಪುರ " ಎಂದು ಹಲವು ಕಡೆ ಹೆಸರಿಸಿ ಉಲ್ಲೇಖ ಮಾಡಲಾಗಿದೆ.ಬನವಾಸಿಯ ಸುತ್ತ ಮೂರುಕಡೆ ವರದಾ ನದಿಯು ಆವರಿಸಿದ್ದು  ಇಲ್ಲಿನ ಮರೆಯಾಗಿರುವ  ಇತಿಹಾಸವನ್ನು ತನ್ನ ಒಡಲಲ್ಲಿ ಬಸಿದುಕೊಂಡು ಗುಟ್ಟು ಬಿಡದೆ , ತನಗೇನು ಗೊತ್ತಿಲ್ಲದಂತೆ ಮೂಕ  ಸಾಕ್ಷಿಯಾಗಿ ಹರಿಯುತ್ತಿದೆ. ಮತ್ತೊಂದು ಕಡೆ ಹಸಿರ ಪರಿಸರ ವಿದ್ದು  ಬನವಾಸಿಯನ್ನು ಹಸಿರ ಪೈರಿನಿಂದ ಸಿಂಗಾರ ಮಾಡಿದೆ.ರಾಮಾಯಣ, ಮಹಾಭಾರತ , ಆದಿ ಕವಿ ಪಂಪನ ಕೃತಿಗಳಲ್ಲಿ ಈ ಊರಿನ ಬಗ್ಗೆ ಉಲ್ಲೇಖವಿದೆ. ಪುರಾತನ ಕಾಲದ  ಹಲವಾರು ವಿದೇಶಿ ಪ್ರವಾಸಿಗರು ಈ ಊರನ್ನು ಹಾಡಿ  ಹೊಗಳಿದ್ದಾರೆ. ಹ್ಯೂಯೇನ್ತ್ಸಾಂಗ್ , ಟಾಲೇಮಿ, ಅಲ್ಪೆರುನಿ , ಬುಕನನ್ ಮುಂತಾದವಿದೇಶಿ ಪ್ರವಾಸಿಗರು ತಮ್ಮ ಪ್ರವಾಸ ಕಾಲದಲ್ಲಿ ಇಲ್ಲಿಗೆ ಭೇಟಿ ನೀಡಿ ಬನವಾಸಿಯನ್ನು ಕಂಡು ಬೆರಗಾಗಿದ್ದಾರೆ  , ಟಾಲೇಮಿಯಂತೂ ಈ ಊರನ್ನೂ " ಬನೌಸಿ" ಎಂದೇ ಕರೆದಿದ್ದಾನೆ . 

ಗೂಗಲ್ ನಲ್ಲಿ ಕಂಡ ಬನವಾಸಿಯ  ಮಧುಕೆಶ್ವರ ದೇವಾಲಯ.


ಈ ಊರಿನ  ಇತಿಹಾಸ ನಿಮ್ಮನ್ನು 3 ನೆ ಶತಮಾನಕ್ಕೆ ಕರೆದುಕೊಂಡು ಹೋಗುತ್ತದೆ. ಆ ಕಾಲದ ಮಡಿಕೆ, ಮುಂತಾದ ವಸ್ತುಗಳನ್ನು ಸಂಶೋಧಕರು ಹೊರ ತೆಗೆದಿದ್ದಾರೆ. ಮತ್ತೊಂದು ವಿಶೇಷ ಈ ಬನವಾಸಿ ಪಟ್ಟಣ ನಮ್ಮ ದೇಶದ ಪುರಾಣ ಪಟ್ಟಣಗಳಲ್ಲಿ  "ವಾರಣಾಸಿಯ"  ನಂತರದ ಎರಡನೇ ಸ್ಥಾನ ಪಡೆದಿದೆ.  ಹೌದು ನಮ್ಮ  ದೇಶದ ಪುರಾತನ ಪಟ್ಟಣಗಳಲ್ಲಿ  ಮೊದಲು" ವಾರಣಾಸಿ " ಪಟ್ಟಣದ ಉಲ್ಲೇಖವಿದ್ದು, ಆ ನಂತರ" ಬನವಾಸಿ ' ಎರಡನೆ ಸ್ಥಾನದಲ್ಲಿದೆ ಎಂದು ಹಲವಾರು ಇತಿಹಾಸತಜ್ಞರು  ಅಭಿಪ್ರಾಯ ಪಡುತ್ತಾರೆ. ಈ ಬನವಾಸಿಯಲ್ಲಿ  ಬೌದ್ಧ , ಜೈನ,  ಹಿಂದೂ ಮೂರು ಧರ್ಮಗಳ ಮೆರೆದಾಟ ಆಗಿದೆ. ಅದಕ್ಕೆ ಸಾಕ್ಷಿಯಾಗಿ ಮೂರು ಧರ್ಮ ಗುರುಗಳು ತಮ್ಮ ಲೇಖನಗಳಲ್ಲಿ ಬನವಾಸಿಯನ್ನು ಉಲ್ಲೇಖ ಮಾಡಿದ್ದಾರೆ. ಬನವಾಸಿ ಈ ಎಲ್ಲಾ ಧರ್ಮಗಳನ್ನು ಪ್ರೀತಿಯಿಂದ  ಪೋಷಿಸುವ ಮನೆಯಾಗಿತ್ತು.. ಬನವಾಸಿವನ್ನು  ಶಾತವಾಹನರು,ಚುಟು ಮನೆತನದವರು, ಪಲ್ಲವರು  ಆಳಿದ್ದಾರೆ, ನಂತರ ಬನವಾಸಿಯನ್ನು  ಕೇಂದ್ರವಾಗಿಸಿ  ಕದಂಬರು  "ಕುಂತಲ"[ ಕುಂತಲ  ಎಂದರೆ  ಉತ್ತರ ಕನ್ನಡ , ಶಿವಮೊಗ್ಗ , ಧಾರವಾಡ  ಜಿಲ್ಲೆಗಳ ಪ್ರದೇಶ ] ರಾಜ್ಯವನ್ನು ಆಳಿದರೆಂದು  ತಿಳಿದು ಬರುತ್ತದೆ. ಪಲ್ಲವರ ವಿರುದ್ಧ  ಮಯೂರ ವರ್ಮ ಸೆಣಸಿ  ತನ್ನ ರಾಜ್ಯ ವನ್ನು ಕಟ್ಟಿದ್ದು ಇದೆ ಬನವಾಸಿಯಲ್ಲೇ . ಪುರಾತನ ಕಾಲದಿಂದಲೂ ತನ್ನದೇ ಶ್ರೇಷ್ಠತೆ  ಸಾಧಿಸಿ ಮೆರೆದ ಪಟ್ಟಣ ಈ  ಬನವಾಸಿ.
 
ಆದಿಕವಿ ಪಂಪ 
 ಆದಿ ಕವಿ ಪಂಪ ನಡೆದಾಡಿದ ನೆಲ ಈ ಬನವಾಸಿಯಲ್ಲಿದೆ "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" , ಎಂಬ ವಾಕ್ಯ , ಅವನ ಮಾತೊಂದು ಜನ್ಮದ  ಆಸೆ ಕೇಳಿ "ಬನವಾಸಿಯಲ್ಲಿ ಮನುಷ್ಯನಾಗಿ ಹುಟ್ಟದಿದ್ದರೂ ಪರವಾಗಿಲ್ಲ ದುಂಬಿಯಾಗಿ ಅಥವಾ ಹಾಡುವ ಕೊಗಿಲೆಯಾಗಿಯಾದರೂ   ಹುಟ್ಟಬೇಕೆಂದು   ಅವನ ಆಸೆ",  ಬನವಾಸಿ  ಊರನ್ನು ಅದೆಷ್ಟು ಪ್ರೀತಿಸಿದ್ದಾನೆ ಎಂಬುದು ನಮಗೆ  ತಿಳಿಯುತ್ತದೆ .


ಬನವಾಸಿ ಜಲ ದುರ್ಗವಂತೆ 
 ಹೌದು ಬನವಾಸಿಯನ್ನು ಜಲ ದುರ್ಗವೆಂದು  ಬಣ್ಣಿಸಲಾಗಿದೆ , "ಐ ಹೊಳೆ"  ಯ ಒಂದು  ಶಾಸನದಲ್ಲಿ  ಎರಡನೇ ಪುಲಿಕೇಶೀ  ಈ ಬನವಾಸಿಯನ್ನು ಜಲ ದುರ್ಗವೆಂದು ಕರೆದಿದ್ದಾನೆ. ಮೇಲಿನ ಉಪಗ್ರಹ ಚಿತ್ರವನ್ನು ನೋಡಿದರೆ ಅವನ ಮಾತು ಎಷ್ಟು ಸತ್ಯ ವೆಂಬ ಅರಿವಾಗುತ್ತದೆ. ಅಂದಿನ ದಿನಗಳಲ್ಲಿ ಈ ಊರಿಗೆ  ಮೂರುಕಡೆ ವರದ ನದಿ, ಮತ್ತೊಂದು ಕಡೆ ನದಿಗೆ ಸೇರಿದಂತೆ ಕೋಟೆ ಇತ್ತೆಂಬ ಮಾಹಿತಿ ಇದೆ ಆದರೆ ಈ ಬಗ್ಗೆ ಖಚಿತ ಸಾಕ್ಷ್ಯ ದೊರೆಯಬೇಕಾಗಿದೆ. ಉಪಗ್ರಹ ಚಿತ್ರಗಳು ಕೋಟೆ ಇದ್ದ ಬಗ್ಗೆ ಊಹಾತ್ಮಕ ನೋಟ ಒದಗಿಸುತ್ತಿವೆ. 

ಬನವಾಸಿ ಊರಿನ ಪ್ರವೇಶ ದ್ವಾರ 

"ಸಾರ್  ಬಾಲೂ  ಸರ್  ಬನವಾಸಿ ಬಂತು  ನಿಲ್ಲಿಸ್ತೀನಿ ತಾಳಿ"  ಅಂತಾ ಹರ್ಷ  ವೇಗವಾಗಿ  ಚಲಿಸುತ್ತಿದ್ದ ಬೈಕನ್ನು  ರಸ್ತೆಯ  ಎಡ ಬದಿಗೆ  ತಂದು  ಒಂದು ಟೀ  ಅಂಗಡಿ ಮುಂದೆ ನಿಲ್ಲಿಸಿದ. ಅಚ್ಚರಿ ಎಂದರೆ  ಸುಮಾರು 80- 100 ಕಿ.ಮಿ. ವೇಗದಲ್ಲಿ ಚಲಿಸಿದ್ದ ಬೈಕು ಸೊಂದೆಯಿಂದ  ಬನವಾಸಿಗೆ  ಸುಮಾರು 40 ನಿಮಿಷದಲ್ಲಿ  ಬಂದು ಸೇರಿತ್ತು. ಕೈಯಲ್ಲಿ ಬಿಸಿ ಬಿಸಿ  ಚಾಯ್  ಲೋಟ ಹಿಡಿದು ಹೊರಗೆ ನೋಡಿದರೆ   ಬನವಾಸಿ ಕಮಾನು ನಮ್ಮನ್ನು ಸ್ವಾಗತ ಕೋರಿತ್ತು.  ಟೀ  ಸೇವಿಸಿ , ಸ್ವಲ್ಪ ವಿಶ್ರಮಿಸಿ  ಬನವಾಸಿ ಪ್ರವೇಶ ಮಾಡಿದೆವು 

ಹಳೆಯ ರಥ [ಬನವಾಸಿ]

 ಬನವಾಸಿಯನ್ನು ನೋಡುತ್ತಾ ನನ್ನ  ಕಣ್ಣುಗಳು ಧನ್ಯ ಧನ್ಯ ಎಂಬಂತೆ  ಕುಣಿದವು. ಮಧುಕೇಶ್ವರ ದೇವಾಲಯ ಸಮೀಪ ಬಂದ ನಾವು ನಮ್ಮ ಬೈಕನ್ನು ನಿಲ್ಲಿಸಿದೆವು. ಬೈಕಿನಿಂದ ಇಳಿದ ನನ್ನ ಕಣ್ಣಿಗೆ  ಅಲ್ಲೇ ಇದ್ದ ಒಂದು ಹಳೆಯ ರಥ ಕಣ್ಣಿಗೆ ಬಿತ್ತು , ಸನಿಹದಲ್ಲೇ ಮತ್ತೊಂದು ಹೊಸ ರಥ ಜೋಡಣೆ  ಕೆಲಸ ನಡೆಯುತ್ತಿರುವುದನ್ನು ನೋಡಿ  ಅಲ್ಲಿಗೆ ತೆರಳಿದೆ 

ಮರದಲ್ಲಿ ಅರಳಿದ ಸುಂದರ ಕಲೆ 


ಯಾವುದೇ ರಥಕ್ಕೂ ಗಣಪನ ಚಿತ್ರ ಇರಲೇ ಬೇಕು.
ಚಿತ್ತಾರ ಮೂಡಿಸುವ ನಾಗ ಮಂಡಲ

ಹೌದು ಅಲ್ಲಿ ಮರದ ಸುಂದರ ಕೆತ್ತನೆ ಕೆಲಸ , ಹಾಗು ಪಕ್ಕದಲ್ಲೇ ರಥದ ಜೋಡಣೆ ಕೆಲಸ ನಡೆಯುತ್ತಿತ್ತು.  ಮರದಲ್ಲಿ ಕಲೆ ಅರಳಿಸುವ  ಕಲೆಗಾರರ ಕೈಚಳಕ  ನೋಡಿ ಮನದಲ್ಲೀ ಅವರಿಗೆ  ನಮನ ಅರ್ಪಿಸಿದೆ. ಮುಂದೆ ಸಾಗಿದ ನನಗೆ  ಮತ್ತಷ್ಟು  ಕಲಾದೇವಿಯ  ಅನಾವರಣ ಆಗಿತ್ತು .


ಪೌರಾಣಿಕ ಸನ್ನಿವೇಶಗಳ  ಸುಂದರ ಅನವಾರಣ 


ಆನೆಯ ಸೊಂಡಿಲನ್ನು ಬಾಯಲ್ಲಿ ಹಿಡಿದ ಹುಲಿ.
ರಥವ  ಕಟ್ಟೋಣ  ಬನ್ನಿ    ಹೌದು ಕಲಾದೇವಿಯ ಗುಡಿಯಲ್ಲಿ ಕಲೆಗಾರರ ಕಲೆಯ ಅನಾವರಣ ಕಂಡು ಈನನ್ನ ಎರಡೂ  ಕಣ್ಣುಗಳು  ಧನ್ಯತೆ ಪಡೆದಿತ್ತು. ಅಷ್ಟರಲ್ಲಿ ರಥದ ತಯಾರಿಕೆ ಹೊತ್ತ  ಮಹನೀಯರ ದರ್ಶನ  ಆಯಿತು, ಅವರೊಡನೆ ಸ್ವಲ್ಪ ಮಾತಾಡಿ  ಮಧುಕೇಶ್ವರ  ದೇವಾಲಯದ ಕಡೆ ಹೊರಟೆವು, 


ಮಧುಕೆಶ್ವರ ದೇವಾಲಯದ ಪ್ರವೇಶ  ದ್ವಾರದಲ್ಲಿರುವ  ಆನೆ.
ಕೈ ಮುಗಿದು ಒಳಗೆ ಬನ್ನಿ ಹೌದು ಮಧುಕೇಶ್ವರ  ದೇವಾಲಯದ ಪ್ರವೇಶ ದ್ವಾರದ  ಸುಂದರ ಆನೆ ಗಳೆರಡು  ವೈಭವದ ಜಾಗಕ್ಕೆ ಸ್ವಾಗತ ಕೋರುತ್ತಾ ನಿಂತಿದ್ದವು.  ನಮ್ಮ ಕಾಲುಗಳು  ದೇವಾಲಯ ಪ್ರವೇಶ ದ್ವಾರದಲ್ಲಿ ಬಂದು ನಿಂತವು , ನನಗರಿವಿಲ್ಲದೆ ನನ್ನ ಕೈಗಳನ್ನು ಮುಗಿದು ನನ್ನ  ಕ್ಯಾಮರದಲ್ಲಿ  ಪ್ರವೇಶ ದ್ವಾರದಿಂದ ದೇವಾಲಯದ ಒಳಗಿನ  ಚಿತ್ರ ತೆಗೆದೇ. ಒಳಗಡೆ  .........ನಿಧಾನವಾಗಿ...........ಭಕ್ತಿ ಯಿಂದ ......... ನಮ್ಮ ಪಾದಗಳು  ಪ್ರವೇಶಿಸಿದ್ದವು ......!!!!!!

19 comments:

Anitha Naresh Manchi said...

ಇತಿಹಾಸದ ಪುಟಗಳು .. ಮಗುಚಿದಷ್ಟು ನೆನಪುಗಳ ಹರಿದಾಟ.

Prasad Hegde said...

ತುಂಬ ಸುಂದರವಾದ ನಿರೂಪಣೆ.. ನಮ್ಮೂರ ಬಗ್ಗೆ ನಮಗೇ ಗೊತ್ತಿರದ ಎಷ್ಟೋ ಅಚ್ಚರಿಯ ಸಂಗತಿಗಳು ಅನಾವರಣಗೊಂಡಿವೆ! ಧನ್ಯವಾದ ಬಾಲು ಸರ್ :)

ಚುಕ್ಕಿಚಿತ್ತಾರ said...

ಸುಂದರವಾದ ನಿರೂಪಣೆ.
ಧನ್ಯವಾದ

Shridhar Bhat said...

super..

ಮನಸು said...

ಅಬ್ಬಾ. ವಿಸ್ಮಯ ನಾಡು ಈ ಕರುನಾಡು.. ಸರ್ ನೀವು ನೀಡುವ ಇತಿಹಾಸ ಮಾಹಿತಿ ನಮಗೆ ಖುಷಿ ನೀಡುತ್ತೆ ಹೀಗೆ ಮತ್ತಷ್ಟು ಇತಿಹಾಸ ಪುಟವನ್ನು ತೆರೆದಿಡಿ.

mshebbar said...

ಸೊಗಸಾಗಿದೆ. ಶ್ರೀರಂಗ ಪಟ್ಟಣದಿಂದ ಬನವಾಸಿಗೆ ನೆಗೆದಿದ್ದೀರ. ಮಯೂರ ವರ್ಮ ನಂತರದಲ್ಲಿ ಮಯೂರ ಶರ್ಮನಾಗುತ್ತಾನೆ ಎಂದು ಕೇಳಿದ್ದೆ. ಸರೀನಾ? ದಕ್ಷಿಣ ಕನ್ನಡದಲ್ಲಿ ಬ್ರಾಹ್ಮಣರನ್ನು ಯಜ್ಞಯಾಗಾದಿಗಳಿಗೆ ಸ್ಥಾಪಪಿಸಿದ ನೆಂದು ಪ್ರತೀತಿ. ಇರಬಹುದೇ?
Wish to be a great Historian, one day or other.

Prabhu Iynanda said...

ಅನುಪಮ! ಧನ್ಯವಾದಗಳು, ಬಾಲು!

ಜಲನಯನ said...

ಬೈಕಲ್ಲೇ ಹೋಗಿಬಂದ್ರಾ ಸಿವಾ,,,??
ಸಕ್ಕತ್ತಾಗಿದೆ ಚಿತ್ರಗಳು ಮತ್ತು ವಿವವರಣೆ,,,
ಅದೇ. ಅಂದ್ಕೊಂಡೆ..ನೋಡಿ ಅಂದಾಗ ಏನೋ ವಿಶೇಷ ಬರೆದಿರ್ತಾರೆ ಬಾಲು ಅಂತ...!!! ಇತಿಹಾಸದ ಮೆಲುಕು ಚನ್ನಾಗಿತ್ತು.

Srikanth Manjunath said...

ಶಿವಸ್ಕಂದ ವರ್ಮ.ಇನ್ನು ನೀನು ಆಳಿದ್ದು, ಅಲಿಸಿದ್ದು ಮುಗಿಯಿತು..ಮಯೂರ ಶರ್ಮ ಬಂದಾಯಿತು...ಮಯೂರ ಶರ್ಮ ಈಗ ಮೈಸೂರಿನ ಬಾಲೂ ಸರ್ ಅವರಿಂದ ಎರಡನೇ ಮೂರನೇ ಶತಮಾನದ ಇತಿಹಾಸವನ್ನು ಕೆದಕಿಸುತ್ತ ವಿವರಿಸುತ್ತ ಹೊಗುತ್ತಾನೆ..
ಬಾಲೂ ಸರ್ ನಿಮ್ಮ ಬನವಾಸಿಯಾ ಬಗ್ಗೆ ಬ್ಲಾಗ್ ನೋಡಲು ಕುತೂಹಲದಿಂದ ಕಾಯುತಿದ್ದೆ.ಅಂಥಹ ಸುವರ್ಣ ಘಳಿಗೆ ಬಂದ ತಕ್ಷಣ.ಮನಸ್ಸಿಗೆ ಹೊಳೆದದ್ದು ಮೇಲಿನ ಸಾಲು..
ಬನವಾಸಿಯಾ ಉಪಗ್ರಹ ನೋಟ ಸೊಗಸಾಗಿದೆ..ಕಳೆದ ವಾರವಷ್ಟೇ ನೋಡಿದ ಈ ಜಾಗ ಇನ್ನಷ್ಟು ಹೊಸದಾಗಿ ಕಾಣುತ್ತಿದೆ...ನಿಮ್ಮ ಕೈಯಿಂದ ಚಿಕ್ಕ ಚಿಕ್ಕ ಸಂಗತಿಗಳು ಸೊಗಸಾಗಿ ಅಕ್ಷರ ರೂಪ ಪಡೆದುಕೊಳ್ಳುತ್ತವೆ.ಸುಂದರವಾಗಿದೆ ನಾವು ಕೈ ಮುಗಿದಿ ನಿಂತಿದ್ದೇವೆ..ಒಳಗೆ ಕರೆದು ಕೊಂದು ಹೋಗಿ ನಮ್ಮನ್ನು,,

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)

ಹರಿಹರಪುರ ಶ್ರೀಧರ್ said...

ಚಿತ್ರಗಳೆಲ್ಲಾ ಸುಂದರವಾಗಿವೆ. ಪ್ರವಾಸಿಗರಿಗೆ ಒಂದಿಷ್ಟು ವಿವರ ಕೊಡಬಹುದೇ? ಪ್ರಯಾಣಿಸಲು ಬಸ್,ಟ್ರೈನ್ ವೇಳಾಪಟ್ಟಿ. ಉಳಿಯಲು ಸೂಕ್ತ ಹೋಟೆಲ್ ,ಇತ್ಯಾದಿ ಮಾಹಿತಿ ಒದಗಿಸಿದರೆ ಉಪಕಾರವಾದೀತು

M.D.subramanya Machikoppa said...

ಉತ್ತಮ ನಿರೂಪಣೆ.

Badarinath Palavalli said...

ಬನವಾಸಿ ಎಂದರೆ ನನಗೆ ಮೊದಲಿಂದಲೂ ಯಾಕೋ ಮೈ ಪುಳಕ.

ವರದಾ ನದಿಗೆ ಅನ್ವರ್ಥವಾಗುವಂತಹ ವರ ಭೂಮಿ ಇದು.

ನನ್ನ ಮಯೂರ ವರ್ಮ ಕಟ್ಟಿದ ನಾಡು.

ಆದಿ ಕವಿ ಪಂಪನ ಸುಕ್ಷೇತ್ರ.

ಸಾಕ್ಷಾತ್ಮಕವಾಗಿ ಕೊಟ್ಟ ಗೂಗಲ್ ಚಿತ್ರಗಳು ಸ್ಪಷ್ಟವಾಗಿವೆ.

ಮಧುಕೇಶ್ವರ ನನಗೆ ಯಾವತ್ತು ದರ್ಶನ ಭಾಗ್ಯ ಕೊಡುತ್ತಾನೋ?

ನಾಗ ಮಂಡಲವಂತೂ ಅಮೋಘ.

ಮುಂದುವರೆಯಲಿ ಬನವಾಸಿಯಲ್ಲಿ.

UMESH VASHIST H K. said...

ನಿಜ ವಾಗಲೂ ಅದ್ಭುತ .... ಬಾಲು ಸಾರ್.... ನಾವು ಪಟ್ಯ ಪುಸ್ತಕ ಓದುವಾಗಲು
ಇಸ್ಟೊಂದು ವಿಷಯಗಳನ್ನ ತಿಳಿದಿರಲಿಲ್ಲ, .... ಮುಂದುವರೆಸಿ .....ಕುತೂಹಲಕರವಾಗಿದೆ
..... ವಂದನೆಗಳು....

UMESH VASHIST H K. said...

ನಿಜ ವಾಗಲೂ ಅದ್ಭುತ .... ಬಾಲು ಸಾರ್.... ನಾವು ಪಟ್ಯ ಪುಸ್ತಕ ಓದುವಾಗಲು
ಇಸ್ಟೊಂದು ವಿಷಯಗಳನ್ನ ತಿಳಿದಿರಲಿಲ್ಲ, .... ಮುಂದುವರೆಸಿ .....ಕುತೂಹಲಕರವಾಗಿದೆ
..... ವಂದನೆಗಳು....

Sathish MR said...

ಮುಂದಿನ ಕಥೆ ಯಾವಾಗ ಹೇಳುತ್ತಿರಾ ಸಾರ್......waiting .......

Sulatha Shetty said...

ಸುಂದರ ನಿರೂಪಣೆ Balanna:)

shivu.k said...

ಬಾಲು ಸರ್,
ಬನವಾಸಿ ಎರಡನೆ ಪುರಾತನ ನಗರವೆನ್ನುವ ವಿಚಾರ ವಿದೇಶಿಗರು ಅದರ ಬಗ್ಗೆ ಬರೆದಿರುವ ವಿಚಾರ ಮತ್ತು ಬನವಾಸಿ ಮದುಕೇಶ್ವರ ದೇವಾಲಯ ಇತ್ಯಾದಿ ವಿಚಾರಗಳು ಮತ್ತು ಫೋಟೊಗಳನ್ನು ನೋಡಿ ತುಂಬಾ ಖುಷಿಯಾಯ್ತು.

ಸೀತಾರಾಮ. ಕೆ. / SITARAM.K said...

:-)

Anonymous said...

ಸೊಗಸಾಗಿದೆ.