Saturday, October 27, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.11, ಅಲೆದಾಡಿ ಬಂದ ನೆಂಟ ನಾನು !!!!




ಪಡುವಣ ಸೂರ್ಯ ಮನೆಗೆ ಹೊರಟ  ಸಮಯ 

ಬನವಾಸಿಯಿಂದ ಸಿರ್ಸಿ ಹಾದಿಯಲ್ಲಿ  ಹಸಿರ ಸಿರಿಯ ನಡುವೆ ಮಲಗಿದ್ದ ರಸ್ತೆಯಲ್ಲಿ ನಮ್ಮ ಹರ್ಷನ ಬೈಕ್ ಸಾಗಿತ್ತು,
  ಆ ಸಮಯದಲ್ಲಿ ಪಡುವಣದಲ್ಲಿ ಸೂರ್ಯಾಸ್ತ  ಆಗುವ ಸಮಯ ಹತ್ತಿರವಾಗುತ್ತಿತ್ತು................!!!!!! ಅಸ್ತಮಿಸುವ ಸೂರ್ಯ ಆಗಸದಲ್ಲಿ ಬಣ್ಣದ ಚಿತ್ತಾರ ಬರೆಯುತ್ತಿದ್ದ. ಹಕ್ಕಿಗಳು ಗೂಡು ಸೇರಲು ಹೊರಟಿದ್ದವು, ಅದೇ ರೀತಿ ನಾವೂ ಸಹ ನಮ್ಮ ಮನೆಗಳಿಗೆ  ಹೊರಟಿದ್ದೆವು. ಆದರೆ ನನ್ನ ಮನೆ ಸಿರ್ಸಿಯಲ್ಲಿ  ನನ್ನ ಸೋದರತ್ತೆ ಮನೆಯೇ ಆಗಿತ್ತು. ಬೆಳಿಗ್ಗೆ ನಾಗು ಹೇಳಿದ ಮಾತು  "ಲೋ ಬೇಗ ಬಾ, ಎಲ್ಲೆಲ್ಲೋ  ಅಲೆಯುತ್ತಾ  ರಾತ್ರಿ ಮಾಡಿ ಬರಬೇಡ ,ನಿನ್ನ ಜೊತೆ ಬಹಳ ಮಾತಾಡೋದು ಇದೆ" ಅಂತಾ ಹೇಳಿದ್ದು, ಕಿವಿಯಲ್ಲಿ ಗುಯ್  ಗುಡಲು ಆರಂಭಿಸಿತ್ತು . ಮನೆಗೆ ಹೋದರೆ ಅವಳ ಅರ್ಚನೆ ಆಗೋದು ಗ್ಯಾರಂಟೀ ಆಗಿತ್ತು. ಆ ಯೋಚನೆಯಲ್ಲೇ  ಸಿರ್ಸಿ ತಲುಪಿದ್ದೆ ನಾನು. "ಸಾರ್  ಜೂ ಸರ್ಕಲ್ ಬಂತು"  ಅಂತಾ ಹರ್ಷ ಹೇಳಿದಾಗಲೇ ವಾಸ್ತವಕ್ಕೆ ಬಂದೆ,  ಆಗಲೇ ಬೈಕ್  ಗಂಗಾವನ  ಎಸ್ಟೇಟ್  ಹೊಕ್ಕು ಮನೆಯ ಮುಂದೆ ನಿಂತಿತು. "ಬಾಲೂ ಸಾರ್ ಬೆಳಿಗ್ಗೆ ಎಂಟು ಘಂಟೆಗೆ ಬರ್ತೇನೆ ಗುಡ್ ನೈಟ್ " ಅಂತಾ ಹೇಳಿ  ಹರ್ಷ ಮಾಯವಾದ.



ದಿನಕ್ಕೆ ಶುಭ ವಿದಾಯ ಹೇಳಿದ ಸೂರ್ಯ 

ಸೂರ್ಯ ದೇವನು  ಆ ದಿನಕ್ಕೆ ಶುಭ ವಿದಾಯ ಹೇಳಿ ಮನೆಗೆ ಹೊರಟಿದ್ದ. ನಾನೂ ಮನೆಯ ಒಳಗೆ ಕಾಲಿಟ್ಟೆ  ,ನನ್ನ ಸೋದರತ್ತೆ ನಾಗು  ಹುಸಿಮುನಿಸು ತೋರಿ  "ಆಹಾ ಬಂದಾ ನೋಡು ಈಗ  ಬೆಳಿಗ್ಗೆ ಯಿಂದಾ ಎಲ್ಲೆಲ್ಲಿ ಅಲೆದೆ ", "ಹೋಗ್ಲಿ ಎಲ್ಲಾ ಜಾಗ ಖುಶಿ ಆಯ್ತಾ" ಅಂತಾ ಹೇಳಿ , "ನೀರು ಕುಡಿ ಮೊದಲು ಅಂತಾ  ಕುಡಿಯಲು ನೀರು ಕೊಟ್ಟು , ಕಾಫಿನೋ  ಕಷಾಯ ಕೊಡಲೋ"  ಅಂತಾ ಹೇಳಿದಳು, ನಾನೂ "ಅಮ್ಮಾ ತಾಯಿ, ನನಗೆ ನಿಮ್ಮ ಮನೆಯಲ್ಲಿ ಇರುವವರೆಗೆ ಕಷಾಯ ಕೊಡು"   ಅಂದೇ   ನನ್ನ ಕೋರಿಕೆಯಂತೆ  ಕಷಾಯ ಕೊಟ್ಟಳು  , ಬೆಳಗ್ಗಿನಿಂದ ಅಲೆದಿದ್ದ ನನಗೆ ಬಿಸಿ ಬಿಸಿ ಕಷಾಯ  ಮುದ ನೀಡಿ ಆಯಾಸ ಪರಿಹಾರವಾಯಿತು."ಲೇ  ಬಾರೋ ಇಲ್ಲಿಕೂತು ಮಾತಾಡೋಣ"   ಅಂತಾ ಮಾತಾಡಲು ಶುರುಮಾಡಿದಳು,  ಪರಸ್ಪರ ಮಾತಾಡುತ್ತಾ  ಸುಮಾರು ಮೂವತ್ತು ವರ್ಷಗಳ  ಜೀವನದ ಘಟನೆಗಳನ್ನು ಮೆಲುಕು ಹಾಕಿದೆವು. ನನ್ನ ಬಾಲ್ಯದ ಅನೇಕ ಘಟನೆಗಳನ್ನು  ನೆನಪಿಸಿ , ನನ್ನ ತಂದೆ ತಾಯಿಗಳ ಬಗ್ಗೆ, ನೆಂಟರ ಬಗ್ಗೆ ಮಾತಾಡಿ  ಹಾಗು ತನ್ನ ಸುಖಿ ಕುಟುಂಬದ ಬಗ್ಗೆ ಮಾತಾಡಿ  ನನ್ನ ಜೀವನದ ಅನೇಕ ಮಜಲುಗಳನ್ನು ಪುನಃ ಕಣ್ಣ ಮುಂದೆ ತಂದಳು. ನನ್ನನ್ನು ಬಾಲ್ಯದಿಂದ ಎತ್ತಿ ಆಡಿಸಿದ ನಾಗುವಿನ  ಹಾಗು ಅವಳ ಮಮತೆಗೆ ಕೈಗಳಿಗೆ ಮನದಲ್ಲೇ ನಮಸ್ಕಾರ ಮಾಡಿದೆ.  ಕಣ್ಣುಗಳು ತುಂಬಿ ಬಂದಿದ್ದವು. ನಂತರ  ಪಕ್ಕದ ಮನೆಯಲ್ಲೇ ಇದ್ದ ನೆಂಟರ ಮನೆಯ ದರ್ಶನ ಮಾಡಿದೆ. ಅವರ ಪ್ರೀತಿಗೆ ಶರಣಾದೆ. ಏನೋ ನೆನಪಾಗಿ ನಮ್ಮಬ್ಲಾಗ್ ಮಿತ್ರ  ಡಾಕ್ಟರ್ ಸಂತೋಷ್  ಅವರಿಗೆ ಫೋನ್ ಮಾಡಿದೇ  , ಅವರು ನಾನು ಇಲ್ಲಿಗೆ ಬರುವ ಮೊದಲು ಸಿರ್ಸಿಯಲ್ಲಿ ಸಿಗುವುದಾಗಿ ಹೇಳಿದರು , ಫೋನ್  ಮಾಡಿದಾಗ ಜಾತ್ರೆಯಲ್ಲಿರುವುದಾಗಿ ತಿಳಿಸಿದರು,  ಮತ್ತೊಮ್ಮೆ ಫೋನ್ ಮಾಡಿದಾಗ  ಕಾಣೆಯಾಗಿದ್ದರು. ಜಾತ್ರೆ ನೋಡುವ ಆಸೆ ಕೈಬಿಟ್ಟೆ. ಅಷ್ಟರಲ್ಲಿ ನಾಗು ಮಗ ಹಾಗು  ಸೊಸೆ  ಬಂದರು ಎಲ್ಲರೂ ಒಟ್ಟಿಗೆ ಕುಳಿತು  ರಾತ್ರಿ ಭೋಜನ ಮುಗಿಸಿದೆವು, ಇವರೆಲ್ಲರ ಜೊತೆ ಮಾಡಿದ ಊಟ ಹೆಚ್ಚಾಗಿರುಚಿ  ನೀಡಿತ್ತು.   ಎಲ್ಲರಿಗೂ  ಶುಭ ರಾತ್ರಿ ತಿಳಿಸಿ  ನಿದ್ರಾದೇವಿಯ ಮಡಿಲಿಗೆ ಜಾರಿದೆ.




ಮುಂಜಾವಿನ ಸೊಗಸು  ಹಸಿರ ನಡುವೆ.


ಎಚ್ಚರವಾದಾಗ  ಹಕ್ಕ್ಕಿಗಳ ಹಾಡು ಕೇಳಿತ್ತು. ಬೆಳಗಿನ ಕಾರ್ಯ ಮುಗಿಸಿ ಮನೆಯಿಂದ ಹೊರಗೆ ಬಂದೆ  ಕ್ಯಾಮರ ಜೊತೆಯಲ್ಲೇ ಬಂದಿತ್ತು.  ಮುಂಜಾವಿನ ಸೂರ್ಯ ಕಿರಣ ಧರೆಗೆ  ತಾಗುವ ಸಮಯ  ಮೋಹಕವಾಗಿತ್ತು. ಮನೆಯ ಸುತ್ತ ಫೋಟೋ ತೆಗೆಯುತ್ತಾ ಸಾಗಿದೆ.


ಮನೆಯ ಮುಂದಿನ ಅಡಿಕೆ ತೋಟದ ಅಡಿಕೆ ಮರ 


ಶುಭೋದಯ ಹೇಳಿದ  ಹೂ ಗೊಂಚಲು 








ಮನೆಯ ಮುಂಬಾಗದಲ್ಲೇ ಇದ್ದ  ತೋಟದ   ಅಡಿಕೆ ಮರಗಳ   ಹೊಯ್ದಾಟ , ಅವುಗಳ ನಡುವಿನಿಂದ  ಸುಳಿದು  ಬಂದ  ತಂಗಾಳಿ  ಉಸಿರಾಗಿ ದೇಹ ಸೇರಿ ಹೊಸ ಚೈತನ್ಯ ನೀಡಿತ್ತು. ಅಲ್ಲೇ ಬೇಲಿಯಲ್ಲಿದ್ದ  ಹೂ ಗೊಂಚಲು ನಗುತ್ತಾ ಶುಭೋದಯ ಹೇಳಿತ್ತು,  ಹತ್ತಿರದ ಮರದಲ್ಲಿ  ಮರೆಯಾಗಿ ಕುಳಿತ ಮಂಗಾಟೆ  ಹಕ್ಕಿ  ಕೂಗುತ್ತಾ  ಯಾರನ್ನೋ ಅಣಕಿಸುತ್ತಿತ್ತು.

ತೊನೆದಾಡಿತ್ತು   ಬಾಳೆಗೊನೆ.


ಅಲ್ಲೇ ಅಂಗಳದಲ್ಲಿ ನಿಂತಿದ್ದ ಬಾಳೆಯ ಮರದಲ್ಲಿ ತೊನೆದಾಡಿತ್ತು  ಬಾಳೆಗೊನೆ ,ಅಲ್ಲೇ ಹಕ್ಕಿಗಳ , ದುಂಬಿಗಳ ಚೆಲ್ಲಾಟ ಮುಂಜಾನೆಯ ಹೊಸ ಲೋಕ  ಸೃಷ್ಟಿ ಮಾಡಿತ್ತು. ಒಳ್ಳೆಯ ಆಲೋಚನೆಗಳ  ಚಿಲುಮೆ ಮನದಲ್ಲಿ  ಚಿಮ್ಮಿ ಮನಸು ಪ್ರಶಾಂತ ವಾಯಿತು. ದೇಹದಲ್ಲಿ ಉತ್ಸಾಹ ದ ಬುಗ್ಗೆ ಉಕ್ಕಿತು.. ಹಾಗೆ ನಡೆಯುತ್ತಾ ಮನೆಯ ಹಿಂಬಾಗ ಬಂದೆ

ಅಡಿಕೆ ಲೋಕದೊಳಗೆ ನಿಂತ ಮನೆ 
ಅಡಿಕೆ ಗೊಂಚಲಿನ  ಹಾರ  ನೇತಾಡುತ್ತಿತ್ತು.



ಇಲ್ಲಿ ನಾ ಕಂಡದ್ದೇ ಬೇರೆ ಲೋಕ !!!  ಅದೇ ಅಡಿಕೆ ಲೋಕ  ಅರೆ ಎಲ್ಲೆಲ್ಲಿ ನೋಡಿದರೂ ಅಡಿಕೆ ಸಾಮ್ರಾಜ್ಯ , ಮನೆಯ ಚಾವಣಿ ಮೇಲೆ, ಅಂಗಳದಲ್ಲಿ ,ಮರಗಳ ನಡುವೆ ಅಡಿಕೆ ಸಾಮ್ರಾಜ್ಯ ಕಂಡು ಬೆರಗಾದೆ , ಹೌದು ಶಿರಸಿಯಲ್ಲಿ ಅಡಿಕೆ ತೋಟ ಇದ್ದವರ  ಮನೆಗಳಲ್ಲಿ ಕಾಣುವ ಸಾಮಾನ್ಯ  ದ್ರುಶ್ಯವಾಗಿರುತ್ತದೆ ,ಹಾಗೆ ಮುಂದೆ ಬಂದೆ



ಗೋಟು  ಅಡಿಕೆ { ಹಣ್ಣು ಅಡಿಕೆ }

ಒಣಗಿದ  ಚಾಲಿ    ಅಡಿಕೆ 


ಅಡಿಕೆ ಹಣ್ಣನ್ನು ಕೈಯಲ್ಲಿ ಹಿಡಿದು ನೋಡುತ್ತಿದ್ದೆ  "ಅದಾ ಅದು ಅಡಿಕೆ ಗೋಟು " [ಅಡಿಕೆ ಹಣ್ಣು]ಹಿಂದಿನಿಂದ ನಾಗು ಮಗ ಶ್ರೀನಿವಾಸ್  ದ್ವನಿ ಬಂತು,   "ಅಡಿಕೆ ಗೊಟನ್ನು   ಬಿಸಿಲಿನಲ್ಲಿ ಒಣಗಿಸಿ  ಅದು ಪೂರ್ಣವಾಗಿ ಒಣಗಿ   ಚಾಲಿ ಅಡಿಕೆ  ಆಗುತ್ತೆ  ನಂತರ ಅದನ್ನು ಸುಲಿದು  ಸಿದ್ದಪಡಿಸಿದ ಅಡಿಕೆ ಯನ್ನು ಮಾರುಕಟ್ಟೆಗೆ ಒಯ್ಯುತ್ತೇವೆ"  ಅಂತಾ ಅಡಿಕೆ ಸಂಸ್ಕರಣೆ ಮಾಡುವ ವಿವಿಧ ವಿಧಾನಗಳನ್ನು  ತಿಳಿಸಿದನು. ಅಡಿಕೆಯ ಬಗ್ಗೆ ತಿಳಿದ ನಾನು ಸ್ವಲ್ಪ ಮುಂದೆ ಬಂದೆ

ಕಾಯಿ ಮೆಣಸಿನ ಗೊಂಚಲು 
ಕಾಯಿ ಮೆಣಸಿನ ಗೊಂಚಲು 



ಮೆಣಸಿನ ಹಣ್ಣು 





ಅಲ್ಲೇ ಕಣ್ಣಿಗೆ  ಬಿತ್ತು ಒಣಗಿ ಹಾಕಿದ ಮೆಣಸಿನ ಗೊಂಚಲು ಹಸಿರು ಬಣ್ಣದಿಂದ , ಹಳದಿ , ಕೆಂಪಾಗಿ  ನಂತರ ಒಣಗಿ ಕಪ್ಪಾಗಿ  ಕರಿ ಮೆಣಸಾಗಿ  ನಮ್ಮ ಸಂಬಾರ ಪದಾರ್ಥವಾಗುವ ಮೆಣಸಿನ ಜೀವನ  ಕ್ರಿಯೆ ಪರಿಚಯವಾಯಿತು.  "ಲೇ ಬನ್ರೋ ಒಳಗೆ  ಇವುಕ್ಕೆ ತಿಂಡಿ ತಿನ್ನೋ ಆಸಕ್ತೀನೇ ಇಲ್ಲಾ" ನನ್ನ ಸೋದರತ್ತೆ  ಕರೆದಳು, ಒಳಕ್ಕೆ ಹೋಗಿ ಬಿಸಿ ಬಿಸಿ ಪೂರಿ, ಸಾಗು ಗುಳುಂ ಮಾಡಿ , ಕಷಾಯ ಕುಡಿದು , ಮನೆಯಿಂದ  ಆಚೆ ಬಂದೆ ನಮ್ಮ ಹರ್ಷ ತನ್ನ ಬೈಕಿನಲ್ಲಿ ಹಾಜರ್ ಆಗಿದ್ದ,  ನಾಗು ಬರ್ತೀನೆ  "ಕೊಳಗಿ ಬೀಸ್" ನಲ್ಲಿ ನನ್ನ ಸ್ನೇಹಿತರ ಸಹೋದರನ ಮದುವೆ ಇದೆ ಅಂತಾ ಹೊರಟೆ "ಹುಷಾರು ಮಾರಾಯ"  ಅಂತಾ ನಗು ನಗುತ್ತ  ಹಾರೈಸುತ್ತಾ  ಕಳುಹಿಸಿಕೊಟ್ಟಳು .  ನಮ್ಮ ಹರ್ಷ ಬೈಕ್ ಸ್ಟಾರ್ಟ್  ಮಾಡಿ ರೊಯ್ಯನೆ ಹೋರಟ , ನಾನು ಯಥಾ ಸ್ಥಿತಿ  ಹಿಂದಿನ ಸೀಟಿನಲ್ಲಿ ಆಸಿನನಾದೆ , ಸಾರ್ ಬನ್ನಿ ಶಿರಸಿ   ಮಾರಿಕಾಂಬೆ ದೇಗುಲ  ದರ್ಶನ ಮಾಡೋಣ ಅಂತಾ  ಬೈಕ್ ಓಡಿಸಿದ.



ಮಾರಿಕಾಂಬ ದೇಗುಲದಲ್ಲಿ ಸ್ವಾಗತ ಕೋರುವ ಗಣಪತಿ 


ಮಾರಿಕಾಂಬ ದೇವಿಯ ದೇಗುಲದ ಮುಂದೆ ಬೈಕ್ ನಿಂತಿತು ಎದುರಿಗೆ ಕಂಡದ್ದು ಗಣಪತಿಯ ದರ್ಶನ  ............!!!!




11 comments:

manu said...

chennagide

Srikanth Manjunath said...

ಸಣ್ಣ ಕುಂಡದಲ್ಲಿ ಜನಿಸಿದ ನದಿ.ಸಿಕ್ಕಲೆಲ್ಲ ಓಲಾಡಿ ಹರಿದು..ನಂತರ..ಮತ್ತೆ ಶಕ್ತಿ ತುಂಬಿಕೊಳ್ಳಲು ಕೊಳ್ಳದಲ್ಲಿ ನಿಂತು..ಸುತ್ತ ಮುತ್ತ ತನ್ನ ಒಡಲಿಗೆ ಸೇರುವ ಝರಿಗಳನ್ನ ನೋಡುತ್ತಾ ನಲಿಯುವಂತೆ...ಸಿರ್ಸಿಯ ಉದ್ದಗಲಕ್ಕೂ ಹರಿದು ಬಂದು ಮೆಲುಕು ಹಾಕಲು ನಿಮ್ಮ ಸೋದರತ್ತೆ ಮನೆಯ ಸುತ್ತ ಮುತ್ತಲಿನ ಪರಿಸರ ಪರಿಚಯಿಸುತ್ತಾ, ನಮಗೆ ತಿಳಿಯದ ಎಷ್ಟು ಪದಾರ್ಥಗಳ ಜೀವನ ಚಕ್ರದ ಪರಿಚಯ ಸುಂದರವಾಗಿದೆ..ಮಾರಿಕಾಂಬೆ ಹರಸಿ ನಮ್ಮನ್ನು ಒಳಗೆ ಕರೆಯುತ್ತಿದ್ದಾಳೆ..

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವದೆಯ ಮಧ್ಯೆ ಸಿಕ್ಕರೆ ಆಹಾ ಅದರ ಸೊಗಸೇ ಸೊಗಸು...

ಚಿನ್ಮಯ ಭಟ್ said...

ಆಹಾ ಶಿರಸಿಯ ತೋಟವನ್ನೂ ತೋರಿಸಿದಿರಿ..ಯಾಕೋ ಮನೆಯ ನೆನಪು ಕಾಡ್ತಾ ಇದೆ..
ಚಿತ್ರಗಳು ಮುದ ನೀಡಿದವು..

ಮುಂದಿನ ಪ್ರಯಾಣಕ್ಕೆ ಸಿದ್ಧರಾಗಿದ್ದೇವೆ ನಾವೂ ಕೂಡ..
ನಮಸ್ತೆ,...

ಸುಬ್ರಮಣ್ಯ said...

ಚನ್ನಾಗಿದೆ ಬಾಲು ಅಣ್ಣ .

Badarinath Palavalli said...

ಈ ಕಷಾಯದ ರುಚಿ ನನಗೆ ಹತ್ತಿಸಿದ್ದು, ಬ್ಲಾಗ್ ಲೋಕದ ಡಾ|| ರಾಜ್ಕುಮಾರ್ ಪ್ರಕಾಶ್ ಹೆಘಡೆ ದಂಪತಿಗಳು. ಒಳ್ಳೆಯ ಆರೋಗ್ಯದಾಯಕ ಕಷಾಯ ಮಾರೇಯ್ರೇ.

ತೋಟದ ಹೂ ಗೊಂಚಲಿನ ಬಣ್ಣಗಳ ಗ್ರಹಿಕೆ ನಿಮ್ಮ ಛಾಯಾಗ್ರಹಣದ ಪಳಗಿದ ಕೈನ ಸೂಚಕ.

ಈ ಮನೆ ನೋಡಿ, ತೀರ್ಥಹಳ್ಳಿ ಬಳಿ ನಾನು ಸಿನಿಮಾ ಶೂಟಿಂಗಿಗೆ ಹೋದಾಗ ಕಂಡ ಮನೆ ನೆನಪಾಯ್ತು.

ಕಾಳು ಮೆಣಸಿನ ಬಗ್ಗೆ ನನಗೆ ಒಳ್ಳೆಯ ಪರಿಚಯ.

ಮಾರಿಕಾಂಬ ದೇಗುಲದಿಂದ ಆರಂಭವಾಗುವ ಮುಂದಿನ ಕಂತು ಬೇಗ ಬರಲಿ ಎಂದು ಆಶಿಸುತ್ತೇವೆ.

Anonymous said...

ನಿಮ್ಮ ಫೋಟೋಗ್ರಫಿ ಬಗ್ಗೆ ಮಾತಿಲ್ಲ...ತಿರುಗಾಟದ ಸವಿಯನ್ನ ನಮಗೂ ಉಣಬಡಿಸಿದ್ದಕ್ಕೆ ಧನ್ಯವಾದಗಳು...ನಿಮ್ಮೆಲ್ಲ ಫೋಟೋಗಳನ್ನ್ ಎತ್ತಿಟ್ಟುಕೊಂಡಿದ್ದೇನೆ.....ಎಂಥದೇ ಹೇಳಿ ನಮ್ಮ ಮಲೆನಾಡ ಸೊಬಗೆ ಹಾಗೆ ಪ್ರತಿಯೊಬ್ಬರನ್ನ ತನ್ನತ್ತ ಆಕರ್ಷಿಸುತ್ತದೆ..ಮುಂದಿನ ತಿರುಗಾಟಕ್ಕೆ ಶುಭ ಹಾರೈಕೆಗಳು

ಗಣೇಶ್ ಕಾಡೂರ್ ಕೆ

umesh desai said...

waiting for more

Unknown said...

olleya photography ,,,modadalli mareyaada soorya nachikondu kempagiruvudu ossum !! ,,,tumbane chenagi sirsiya adike thotavannu torisiddiri ,yaako mane nenpagta ide

vandana shigehalli said...

ಚೆನ್ನಾಗಿದೆ ..... ಇವತ್ತಿಗೂ ಅಲ್ಲೇ ಹುಟ್ಟಿ ಬೆಳೆದ ನನ್ನ ಪಾಲಿಗೆ ಗಂಗಾವನ ಒಂದು "?" ಆಗಿಯೇ ಉಳಿದಿದೆ .... ಯಾಕೊ ಗೊತ್ತಿಲ್ಲ ಇ ಬಾರಿ ಊರಿಗೆ ಹೋದಾಗ ಹೋಗಿಯೇ ಬರುತ್ತೇನೆ ....
ಫೋಟೋ ಸುಂದರ ವಾಗಿದೆ ... ಒಂದು ಬದಲಾವಣೆ ಮಾಡಲ ..... "ಹಣ್ಣು ಅಡಿಕೆ = ಗೋಟು " ಅಂತ ಬಳಕೆಯಲ್ಲಿದೆ .... "ಗೋಟು" ಇನ್ನು ಆಪ್ತ ಆಗ ಬಹುದೇನೂ ಅನ್ನಿಸಿತು ...

ಗಿರೀಶ್.ಎಸ್ said...

First 2 fotos are beautiful.... So our next visit to Marikmabe Temple?

shivu.k said...

ಬಾಲು ಸರ್,

ಅಪರೂಪಕ್ಕೆ ಗೆಳೆಯನ ಅಥವ ಸಂಭಂದಿಗಳ ಮನೆಗೆ ಹೋಗಿ ಮುವತ್ತು ವರ್ಷಗಳ ಅನುಭವವನ್ನು ಮಾತಾಡುವುದು ಅಂದರೆ ನಿಜಕ್ಕೂ ಅದರ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ. ಮನೆ ಮತ್ತು ಸುತ್ತ ಆಡಿಕೆ, ಮೆಣಸು ತೋಟ ಅವುಗಳ ಚಿತ್ರಗಳು ಮುದ ನೀಡಿದವು.