Sunday, July 15, 2012

ಮೈ ದಿಲ್ಲೀ ಹೂ .....ಪಯಣ :-)5 ಸುಪ್ರೀಂ ಕೋರ್ಟ್ ಅಂಗಳದಲ್ಲಿ ಬೇರೊಂದು ಲೋಕ !!!!


ಸರ್ವೋಚ್ಹ ನ್ಯಾಯಾಲಯ 
ಐತಿಹಾಸಿಕ ದಿಲ್ಲಿಯ ಅಂಗಳದಿಂದ   ವಾಸ್ತವಕ್ಕೆ ಬಂದ ನಮಗೆ ಕರ್ತವ್ಯದ ಕರೆ ಕರೆಯುತ್ತಿತ್ತು , ಮೊದಲ ದಿನ ಅಲೆದಾಡಿದ ನಮಗೆ ಎರಡನೇ ದಿನ ಕರ್ತವ್ಯ ನಿರ್ವಹಣೆ ಮಾಡಲು ಉತ್ಸಾಹ ಮೂಡಿತ್ತು. ಅದೇ ಉತ್ಸಾಹದಲ್ಲಿ ನಮ್ಮ ಪರವಾದ ವಕೀಲರ ಸೂಚನೆ ಮೇರೆಗೆ  ಸುಪ್ರೀಂ ಕೋರ್ಟ್ ನತ್ತ ಎರಡನೇ ದಿನ  ಹೊರಟೆವು .ನನ್ನ ಕರ್ತವ್ಯದ ಅವಧಿಯಲ್ಲಿ ನಾನು ಹಲವಾರು ನ್ಯಾಯಾಲಯಗಳಿಗೆ ತೆರಳಿದ್ದೆ ನಾದರೂ  ಸರ್ವೋಚ್ಹ  ನ್ಯಾಯಾಲಯಕ್ಕೆ  ತೆರಳುವ ಅವಕಾಶ ದೊರೆತಿರಲಿಲ್ಲ. ಸರ್ವೋಚ್ಹ ನ್ಯಾಯಾಲಯದ ಕಾರ್ಯ ವಿಧಾನ ತಿಳಿಯುವ ಅವಕಾಶ ಯಾವಾಗ ಬರುವುದೋ ಎಂಬ ಕನಸು ಈಗ ನನಸಾಯಿತು.

ಬನ್ನಿ ಸುಪ್ರೀಂ ಕೋರ್ಟ್ ಬಗ್ಗೆ ತಿಳಿಯೋಣ  ನಮ್ಮ ದೇಶದ  ಗಣತಂತ್ರ ವ್ಯವಸ್ಥೆಯಲ್ಲಿ  ಅತ್ಯುನ್ನತ  ನ್ಯಾಯ ದೊರಕಿಸಿಕೊಡುವ ಒಂದು ಸಂವಿದಾನಾತ್ಮಕ ಸಂಸ್ಥೆ ಇದು. ಮೊದಲು ನಮ್ಮ ದೇಶದ ನ್ಯಾಯಾಲಯ ವ್ಯವಸ್ಥೆಯಲ್ಲಿ  ಅಸ್ತಿತ್ವಕ್ಕೆ ಬಂದದ್ದು ಫೆಡರಲ್ ಕೋರ್ಟ್  ಇದು ಹಾಲಿ ನಮ್ಮ ಪಾರ್ಲಿಮೆಂಟ್ ಇರುವ ಕಟ್ಟಡದ ಒಂದು ಭಾಗದಲ್ಲಿ  1937  ರಿಂದ 1950  ರ ವರೆಗೆ  ಕಾರ್ಯ ನಿರ್ವಹಣೆ ಮಾಡಿತು. ನಂತರ 28  ಜನವರಿ 1950  ರಲ್ಲಿ {ದಿನಾಂಕ 26 ಜನವರಿ 1950 ರಲ್ಲಿ    ಭಾರತ  ಗಣತಂತ್ರ  ವ್ಯವಸ್ಥೆ ಒಪ್ಪಿಕೊಂಡ  ಎರಡುದಿನಗಳ  ನಂತರ } ಅಧಿಕೃತವಾಗಿ ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂತು.ಅದರ  ಉದ್ಘಾಟನೆ  ಪಾರ್ಲಿಮೆಂಟ್ ನ "ಪ್ರಿನ್ಸೆಸ್ ಚೇಂಬರ್"  ನಲ್ಲಿ ಜರುಗಿತು.  ಭಾರತದ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟ ಎಲ್ಲಾ ರಾಜ್ಯಗಳು ಈ ಸಂವಿದಾನಾತ್ಮಕ  ನ್ಯಾಯಾಲಯ ವ್ಯವಸ್ಥೆಗೆ ಅಂಗೀಕಾರ ನೀಡಿವೆ. ಈ ಸುಪ್ರೀಂ ಕೋರ್ಟ್ ನಲ್ಲಿ ಒಬ್ಬರು ಮುಖ್ಯ ನ್ಯಾಯಾಧೀಶರು ಹಾಗು ಮೂವತ್ತು ನ್ಯಾಯಾಧೀಶರು ಕಾರ್ಯ ನಿರ್ವಹಣೆ ಮಾಡುತ್ತಾರೆ.ಇಂತಹ ಒಂದು ಹಿರಿಯ ನ್ಯಾಯಾಂಗ ವ್ಯವಸ್ಥೆಯನ್ನು ನೋಡುವ ಬಹಳ ದಿನಗಳ ಆಸೆ ಕೈಗೂಡಿತ್ತು.
ಸುಪ್ರೀಂ ಕೋರ್ಟ್ ಆವರಣದಲ್ಲಿ ಕಂಡು ಬಂದ ದೃಶ್ಯ.{ ಚಿತ್ರಗಳು ಬಾಲು}

ಸುಪ್ರೀಂ ಕೋರ್ಟ್ ಆವರಣದೊಳಗೆ ರಕ್ಷಣಾ ತಪಾಸಣೆ ಮುಗಿದ ನಾವು ಮುಂದುವರೆದು ಬಂದೆವು ಅಲ್ಲಿ ಕಂಡ ಮೊದಲ ದರ್ಶನವೇ ಅಚ್ಚರಿ ತಂದಿತು.ಹೌದು ಅಲ್ಲಿ ದೇಶದ  ರಾಜಕೀಯದ ಪ್ರಮುಖ ವ್ಯಕ್ತಿಯಾದ ಶ್ರೀ ಸುಬ್ರಮಣಿಯಂ ಸ್ವಾಮಿಯವರನ್ನು ಹಲವು ಟಿ.ವಿ .ಚಾನಲ್ ಕ್ಯಾಮರಾಗಳು ಹಾಗು ಮೈಕುಗಳು ಸುತ್ತುವರೆದಿದ್ದವು  , ಅವರೂ ಸಹ ಸುಪ್ರೀಂ ಕೋರ್ಟಿನಲ್ಲಿ ಅಂದು ನಡೆದ  ವಿಧ್ಯಾಮಾನಗಳನ್ನು ವಿವರಿಸುತ್ತಿದ್ದರು . ಇದಕ್ಕಾಗಿ ಕಾಯುತಿದ್ದ ಟಿ.ವಿ.ಮೀಡಿಯಾ ಹಾಗು ಪತ್ರಿಕೆಗಳ ಪತ್ರಕರ್ತರು,ಉತ್ಸಾಹದಿಂದ ಪ್ರಶ್ನೆಗಳನ್ನು ಕೇಳುತ್ತಾ ಉತ್ತರ ಪಡೆಯುತ್ತಿದ್ದರು ನಾನೂ ಸಹ ಇವರ ಬಗ್ಗೆ ಆಸಕ್ತಿಯಿಂದ ಫೋಟೋ ತೆಗೆಯಲು ಶುರುಮಾಡಿದೆ. ಹಾಗೆ ಕೆಲವು ಚಿತ್ರ ತೆಗೆದು ಕೋರ್ಟ್ ಕೆಲಸಕ್ಕೆ ತೆರಳಿದೆ.
ಸುಪ್ರೀಂ ಕೋರ್ಟ್ಗೆ ಮುಖ ಮಾಡಿ ಪ್ಪ್ರತಿನಿತ್ಯ ನಿಲ್ಲುವ ಕ್ಯಾಮರ ಸ್ಟ್ಯಾಂಡ್ ಗಳು.{ ಚಿತ್ರಗಳು ಬಾಲು}
ಸಾಲಾಗಿ ನಿಂತ ಓ.ಬಿ. ವ್ಯಾನುಗಳು .{ ಚಿತ್ರಗಳು ಬಾಲು}
ವಾಪಸ್ಸು ಬರುವಷ್ಟರಲ್ಲಿ ಅಲ್ಲಿದ್ದ ಚಟುವಟಿಕೆ ನಿಂತಿತ್ತು ಕೋರ್ಟ್ ಆವರಣದಲ್ಲಿ ಕ್ಯಾಮರಾಗಳ ಸ್ಟ್ಯಾಂಡ್ ಗಳು ಮಾತ್ರ ಮುಖ ಮಾಡಿ ನಿಂತಿದ್ದವು.ಹೌದೂ ಸಾರ್ ಪ್ರತಿನಿತ್ಯ ಇಲ್ಲಿ ಪತ್ರಕರ್ತರುಹಾಗು ವಾಹಿನಿಗಳ ವರದಿಗಾರರು  ಬೆಳಿಗ್ಗೆ 9  ಘಂಟೆಗೆಲ್ಲಾ ಜಮೆಯಾಗುತ್ತಾರೆ.
ಏನ್.ದಿ.ಟಿ.ವಿ.ಓ.ಬಿ.ವ್ಯಾನ್ { ಚಿತ್ರಗಳು ಬಾಲು}
ಟಿ.ವಿ.ಟುಡೆ ಓ.ಬಿ. ವ್ಯಾನು{ ಚಿತ್ರಗಳು ಬಾಲು}

ಅವರಿಗೆ ಸಂಭಂದಿಸಿದ ವಾಹಿನಿಗಳ ಓ.ಬಿ.ವ್ಯಾನುಗಳು  ಹೊರ ಆವರಣದಲ್ಲಿ ತಮಗೆ ನೀಡಲಾಗಿರುವ ತಾಣದಲ್ಲಿ ಶಿಸ್ತಾಗಿ ನಿಲ್ಲುತ್ತವೆ  ಅಲ್ಲಿಂದ ವೈರುಗಳ ಅಳವಡಿಕೆ ಕ್ಯಾಮರ ಸಿದ್ಧಪದಿಸಿಕೊಳ್ಳುವುದು ಮುಂತಾದ ಕ್ರಿಯೆ ನಡೆದು ಹತ್ತು ಘಂಟೆ ಗೆ ಶಿಸ್ತಿನ ಸಿಪಾಯಿಗಳಂತೆ ಪತ್ರಕರ್ತರು  ಸುದ್ಧಿ ಭೇಟೆಗೆ ಸಿದ್ದವಾಗುತ್ತಾರೆ.ನಿಮ್ಮ ಮನೆಯಲ್ಲಿ ಕಾಣಸಿಗುವ ಎಲ್ಲ ವಾಹಿನಿಗಳ  ಓ.ಬಿ.ವ್ಯಾನ್ ಗಳನ್ನೂ ನೀವಿಲ್ಲಿ ಕಾಣಬಹುದು.   ಯಾವುದೇ ವಿಚಾರ ಈ ಆವರಣದಲ್ಲಿ ಕಂಡುಬಂದರೂ ಇಲ್ಲಿರುವ ಓ.ಬಿ.ವ್ಯಾನುಗಳ ಮೂಲಕ "ಬ್ರೆಕಿಂಗ್ ನ್ಯೂಸ್"  ಆಗಿ ಬಿತ್ತರಗೊಳ್ಳುತ್ತದೆ.ಒಂದು ರೀತಿಯಲ್ಲಿ ಓ.ಬಿ ವ್ಯಾನುಗಳು  ಚಲಿಸುವ ಟಿ.ವಿ.ಸ್ಟುಡಿಯೋ ಇದ್ದಂತೆ ನೇರವಾಗಿ ವರದಿಗಳನ್ನು ಉಪಗ್ರಹಕ್ಕೆ ಅಪ್ಲೋಡ್ ಮಾಡಿ ಸುದ್ದಿ ಬಿತ್ತರವಾಗಲು ಕಾರಣವಾಗುತ್ತವೆ.

ಕೆಲಸ ಇಲ್ಲದೆ ಕಾಲಾಕಳೆಯೋದು ಬಹಳ ಕಷ್ಟಾ ಕಣ್ರೀ ಅಂತಾರೆ ಮಾಧ್ಯಮ ಮಿತ್ರರು{ ಚಿತ್ರಗಳು ಬಾಲು}
ಜಯ ಟಿ.ವಿ.ಕ್ಯಾಮರಾಮನ್ { ಚಿತ್ರಗಳು ಬಾಲು}
ನಾನು ಸುಮಾರು ಹತ್ತು ದಿನಗಳಕಾಲ ಸುಪ್ರೀಂ ಕೋರ್ಟ್ ಕೆಲಸದಲ್ಲಿದ್ದ ಕಾರಣ ಪ್ರತಿನಿತ್ಯ ಪತ್ರಕರ್ತರ ಹಾಗು ವಾಹಿನಿಗಳ ವರದಿಗಾರರ ಚಟುವಟಿಕೆ ಗಮನಿಸುತ್ತಲೇ ಇದ್ದೆ. ದೆಹಲಿಯಲ್ಲಿ ಮೊದಲೇ ಬಿಸಿಲಿನ ತಾಪ 41 ಡಿಗ್ರೀ ತಲುಪಿತ್ತು, ಸುದ್ಧಿ ಭೇಟೆಗಾಗಿ ಬಂದವರು ಯಾವುದಾದರೂ ಬ್ರೆಕಿಂಗ್ ನ್ಯೂಸ್ ಕೊಡಲು ಹಾತೊರೆಯುತ್ತಿದ್ದರು,     ಆದರೆ ಅದು ಅವರಿಗೆ ಸಿಕ್ಕದಿದ್ದಾಗ ಕಾಲ ಕಳೆಯಲು ಬೇಸರದಿಂದ  ಸಪ್ಪೆ ಮುಖ ಹೊತ್ತು ಗುಂಪಾಗಿ ಅಥವಾ ತಮಗೆ ಇಷ್ಟ ಬಂದ ರೀತಿ ಕಾಲ ಕಳೆಯುತ್ತಿದ್ದರು . ಊಟದ ವೇಳೆಯಲ್ಲೂ ಸಹ ತಾವು ತಂದ ಊಟದ ಡಬ್ಬಿ ಯನ್ನು ತೆರೆದು  ಆ ಉರಿ ಬಿಸಿಲಿನ ತಾಪದಲ್ಲೇ  ಮರದ ನೆರಳಿನಲ್ಲಿ ಬಿಸಿಗಾಳಿಯ ಮಧ್ಯೆ ಊಟಮಾದುತ್ತಿದ್ದರು, ನಂತರ ಮತ್ತೆ ಅದೇ ನೆರಳಿನಲ್ಲಿ ಕೆಲವರು ಮಲಗಿದರೆ ಕೆಲವರು ಬೇಸರ ಕಳೆಯಲು ಕಾರ್ಡ್ಸ್ ಆಟಕ್ಕೆ ಶರಣಾಗಿದ್ದರು.ಆದರೂ ಇಲ್ಲಿ ಕೆಲಸ ಮಾಡಲು ಪತ್ರಕರ್ತರಿಗೆ ಹಾಗು ವಾಹಿನಿಗಳ ಸುದ್ಧಿ ಗಾರರಿಗೆ ಬಹಳ ತಾಳ್ಮೆ ಬೇಕೂ ಎನ್ನುವ ಸತ್ಯ ತಿಳಿಯಿತು. ನಮ್ಮ ಮನೆಯ ಟಿ.ವಿ.ಗಳಲ್ಲಿ ಬರುವ ಸೂಟು ಬೂಟುದಾರಿ ವಾರ್ತಾ ವಾಚಕರುಗಳು ಅಲ್ಲಿ ಕಂಡುಬಂದು ಅವರ ಕಾರ್ಯದ ಕಷ್ಟದ ದರ್ಶನವಾಯಿತು. ಹತ್ತಿರದಲ್ಲೇ ಅಡ್ಡಾಡಿದ ನಾನು ಹಲವರ ಮುಖದಲ್ಲಿ ಬೇಸರದ ಛಾಯೆ , ನಿರುತ್ಸಾಹ , ಕಂಡೆ ಬಿಸಿಲಿನ  ತಾಪ ತಾಳಲಾರದೆ  ಮರದ ಬಳಿ ತೆರಳುತ್ತಿದ್ದ ನನಗೆ ಜಯ ಟಿ.ವಿ.ಕ್ಯಾಮರಾಮನ್ ಕೆಲಸವಿಲ್ಲದ ಬೇಸರದಿಂದ ತಲೆತಗ್ಗಿಸಿ ಕ್ಯಾಮಾರ ಕಡೆ ಕೋಪದಿಂದ ಸುಮ್ಮನೆ ನೋಡುತ್ತಿರುವಂತೆ ಕಂಡು ಬಂದ ಈ ದೃಶ್ಯ ಮನಕರಗಿತು.ಹತ್ತು ದಿನಗಳ ಕಾಲ" ಬ್ರೆಕಿಂಗ್ ನ್ಯೂಸ್ "ಬೇಟೆಗಾರರ ಜೀವನ ಶೈಲಿಯ ದರ್ಶನ ವಾಗಿ "ನಮ್ ಕೆಲಸವೇ ವಾಸಿ" ಅಂತಾ ಅನ್ನಿಸಿ ಅವರ ಬಗ್ಗೆ ಮರುಕಗೊಂಡು ಅಲ್ಲಿಂದ ಕಾಲ್ಕಿತ್ತೆ ...........!!! ನನ್ನ ಸುಪ್ರೀಂ ಕೋರ್ಟ್ ಕೆಲಸ ಮುಗಿದಿತ್ತು ನಮ್ಮ ದೇಶದ ಇತಿಹಾಸದ ಘಟನೆಗಳ  ಭಾಗವಾಗಿ ಮೆರೆದಿರುವ ಸುಪ್ರೀಂ ಕೋರ್ಟ್ ಮೈ ಬಿ ದಿಲ್ಲಿ ಹೂ ಅಂದಿತ್ತು......!!!                                   { ಮುಂದಿನ ಸಂಚಿಕೆಯಲ್ಲಿ   ಹೊಸ ದೊಂದು  ಲೋಕದಲ್ಲಿ ನಾನು......????}

4 comments:

Ittigecement said...

ಬಾಲಣ್ಣಾ...

ದಿಲ್ಲಿಯ ಇನ್ನೊಂದು ಪರಿಚಯ ಮಾಡಿಕೊಡುವ ನಿಮ್ಮ ಛಾಯಾಚಿತ್ರ ಲೇಖನ ಕುತೂಹಲಕಾರಿಯಾಗಿದೆ...

ಟಿವಿ ಸುದ್ಧಿಗಳು ನಮಗೆ ನೋಡಲು ಖುಷಿಯಷ್ಟೇ..

ಆದರೆ ಅಲ್ಲಿ ಕೆಲಸ ಮಾಡುವ ಕ್ಯಾಮರಾ ಹುಡುಗರು ಮತ್ತು ವರದಿಗಾರರ ಸ್ಥಿತಿ ಯಾರಿಗೂ ಬೇಡ... ಅಲ್ಲವಾ?

ಚಂದದ ಲೇಖನಕ್ಕೆ ಜೈ ಹೋ !!

Badarinath Palavalli said...

ಐದನೇ ಭಾಗ ವಸ್ತು ನಿಷ್ಠವಾಗಿದೆ.

ಸುಪ್ರೀಂ ಕೋರ್ಟಿನ ಆರಂಭಕ್ಕೂ ಮುಂಚೆ ಫೆಡರಲ್ ಕೋರ್ಟ್ ಇತ್ತೆನ್ನುವುದು ನನಗೆ ಗೊತ್ತಿರಲಿಲ್ಲ.

ನಿಮ್ಮ ಫೋಟೋದಲ್ಲಿ ಓ.ಬಿ. ವ್ಯಾನುಗಳು ಸಾಲು ನೋಡಿದಿರಾ ಸಾರ್, ಒಬ್ಬೊಬ್ಬರು ಒಂದೊಂದು ಮಾದರಿಯ, ವಿನ್ಯಾಸದ ಮತ್ತು ಡಿಷ್ ಅಳತೆಯ ವ್ಯಾನ್ ಹೊಂದಿದ್ದಾರೆ. ಇದರಲ್ಲಿ ಎರಡು ರೀತಿ:

೧. ಸಂಪೂರ್ಣ ಸ್ವಯಂ ಚಾಲಿತ. ಅಂದರೆ ಒಂದು ಗುಂಡಿ ಒತ್ತಿದ ಕೂಡಲೇ ಮೇಲಿನ ಡಿಷ್ ಅದಾಗೆ ಚಾಲನೆಗೊಂಡು, ಉಪಗ್ರಹವಿರುವ ದಿಕ್ಕಿಗೆ ಮುಖ ಮಾಡಿ ಪ್ರ್ಸಾರಕ್ಕೆ ಅಣಿಯಾಗುತ್ತದೆ.

೨. ಅರೆ ಸ್ವಯಂ ಚಾಲಿತ ಓ.ಬಿ. ಗಳಲ್ಲಿ ಡಿಷ್ ಅದಾಗೇ ಉಪಗ್ರಹದ ದಿಕ್ಕನ್ನು ಆರಿಸಿದರೂ, ಮೇಲೆ ಒಬ್ಬರು ಹತ್ತಿ ಅದರ ಮುಚ್ಚಳವನ್ನು ತೆಗೆದು ಅಣಿಗೊಳಸಬೇಕು.

ಎಲ್ಲಾ ಓ.ಬಿ. ವ್ಯಾನುಗಳಲ್ಲೂ ಒಂದು ರೆಕಾರ್ಡರ್, ಜಿ.ಪಿ.ಆರ್.ಎಸ್, ಜನರೇಟರ್ ಮತ್ತು ನ್ಯಾವಿಗೇಟರ್ ಇರುತ್ತವೆ. ದೂರದರ್ಶನದಂತಹ ಸಂಸ್ಥೆಗಳು ದೊಡ್ಡ ಓ.ಬಿ. ವ್ಯಾನ್ ಹೊಂದಿದ್ದು ಬೇಕಾದರೆ ಅದರಲ್ಲೇ ಬಹು ಕ್ಯಾಮರಾ ಆಪರೇಟಿಂಗ್ ಯೂನಿಟ್ ಇಟ್ಟುಕೊಂಡು ಮಂತ್ರಾಲಯ, ಧರ್ಮಸ್ಥಳ, ಕ್ರಿಕೇಟ್ ಮ್ಯಾಚ್, ಸ್ವಾಂತಂತ್ರ್ಯ ದಿನಾಚರಣೆ ಪೆರೆಡ್ ಮುಂತಾದವುಗಳನ್ನು ನೇರ ಪ್ರಸಾರ ಮಡುತ್ತದೆ.

ಜಯ ಟೀವಿಯ ಕ್ಯಾಮರಾಮೆನ್ ಬಳಿ ಇರುವ ಕ್ಯಾಮರಾ ಸೋನಿಯವರ PD 177 ಮತ್ತು ನೆಲದ ಮೇಲಿರುವ ಕ್ಯಾಮರ ಸೋನಿಯವರ Z5P.

ನನ್ನ ಒಡಹುಟ್ಟಿದ ಅಣ್ಣ ತಮ್ಮಂದಿರಾದ ಮಾಧ್ಯಮ ಛಾಯಾಗ್ರಾಹಕರ ಪರಿಪಾಟಲನ್ನು ಉತ್ತಮವಾಗಿ ನಿರೂಪಿಸಿದ್ದೀರ. ಸುಪ್ರೀಂ ಕೋರ್ಟ್ ಅಂಗಳದಲ್ಲಿ ಸರ್ಕಾರ ಛಾಯಾಗ್ರಹಕರಿಗೆ ಒಂದು ಶೆಡ್ ರೀತಿ ವ್ಯವಸ್ಥೆ ಮಾಡಿಕೊಟ್ಟರೆ ಉತ್ತಮ.

Ashok.V.Shetty, Kodlady said...

ಬಾಲು ಸರ್,

ಸುಂದರ ಚಿತ್ರಗಳೊಂದಿಗೆ, ಅದ್ಭುತ ನಿರೂಪಣೆ. ದಿಲ್ಲಿ ತಿರುಗಿ ಬಂದಂತೆ ಆಯಿತು. ಸುಂದರ ಲೇಖನ ಸರ್...

Srikanth Manjunath said...

ಜೇನುಗೂಡು ಹೊರಗಿನಿಂದ ಅಂದ....ಒಳಗೆ ಸಾವಿರಾರು ಜೇನುನೊಣಗಳು ದುಡಿಯುತ್ತ ಇರುತ್ತವೆ..ರಾಣಿ ಜೇನು ಅದನ್ನ ನೋಡುತ್ತಾ ಮೇಸ್ತ್ರಿ ಕೆಲಸ ಮಾಡುತ್ತಾ ಇರುತ್ತೆ..ವರದಿಗಾರರ ಸ್ಥಿತಿ ಓದಿದಾಗ ನನಗೆ ನೆನಪಾದದ್ದು ಈ ಚಿತ್ರ...ಸುಂದರ ಚಿತ್ರ ವರ್ಣನೆ...ಸೊಗಸಾಗಿದೆ..ತಾಪ, ಕೋಪ, ಎಲ್ಲದರ ವರದಿ ಚೆನ್ನಾಗಿದೆ..