Saturday, July 7, 2012

ಮೈ ದಿಲ್ಲಿಹೂ ............ಪಯಣ :-) 4 ಲಾಲ್ ಖಿಲಾ ಎಂಬ ಕೆಂಪು ಇತಿಹಾಸ ಖಣಜ.!!!

ಭಾರತದ ಇತಿಹಾಸದ ಖಣಜ  ಈ ಲಾಲ್ ಖಿಲಾ [ಕೆಂಪು ಕೋಟೆ ]
ಚಾಂದನಿ ಚೌಕ ದಿಂದ ಹೊರಟ ನಮ್ಮ ಕಾಲುಗಳು  "ಲಾಲ್ ಖಿಲಾ"  ಕಡೆಗೆ ಹೊರಟಿದ್ದವು .ಅದೇಕೋ ಕಾಣೆ ಪ್ರತೀ ಸಾರಿ ದೆಹಲಿಗೆ ಬಂದರೆ ನಾನು ತಪ್ಪದೆ ಈ "ಲಾಲ್ ಖಿಲಾ" ಕ್ಕೆ ಬಂದೆ ಬರುತ್ತೇನೆ.ಇಲ್ಲಿನ ಹಲವು ವಿಸ್ಮಯಗಳು ನನ್ನನ್ನು ಇಲ್ಲಿಗೆ ಕೈ ಬೀಸಿ  ಕರೆಯುತ್ತವೆ. ಅವುಗಳಲ್ಲಿ ಅಮೃತ ಶಿಲೆಯಲ್ಲಿ ಅರಳಿದ ಚಿತ್ತಾರಗಳು,  ರಾತ್ರಿವೇಳೆಯಲ್ಲಿ ನಡೆಯುವ "ಲೈಟ್ ಅಂಡ್ ಸೌಂಡ್ " ಕಾರ್ಯಕ್ರಮ ನನ್ನನ್ನು ಇಲ್ಲಿಗೆ ಬರಲು ಪ್ರೇರಣೆ ನೀಡುತ್ತವೆ.ಬನ್ನಿ ಕೆಂಪು ಕೋಟೆಯ ಬಗ್ಗೆ ಸ್ವಲ್ಪ ತಿಳಿಯೋಣ.
ಕೆಂಪು ಕೋಟೆಯ ಒಂದು ಪಾರ್ಶ್ವ ನೋಟ
ಹೌದು ಈ "ಲಾಲ್ ಖಿಲಾ " ಅಂದರೆ ಕೆಂಪು ಕೋಟೆ [ ಲಾಲ್ :- ಕೆಂಪು  , ಖಿಲ :- ಕೋಟೆ ]  17  ನೆ ಶತಮಾನದ ಈ ಕೆಂಪುಕೋಟೆ   2007 ರಲ್ಲಿ   "ಯುನೆಸ್ಕೋ'' ಗುರುತಿಸಿ ಘೋಷಿಸಿರುವ  ಅಂತರಾಷ್ಟ್ರೀಯ ಐತಿಹಾಸಿಕ ಸ್ಮಾರಕ .ಮೊಘಲ್ ಬಾದಷಾ ಶಹಜಾನ್ ಇದನ್ನು ನಿರ್ಮಾಣ ಮಾಡಿಸಿದನೆಂದು ತಿಳಿದುಬರುತ್ತದೆ.1638 ರಲ್ಲಿ  ಆರಂಭವಾದ ನಿರ್ಮಾಣ 1648  ರಲ್ಲಿ  ಪೂರ್ಣವಾಗಿ  ಈ ಸುಂದರ ಕೆಂಪು ಕೋಟೆ ಲೋಕಕ್ಕೆ ಸಮರ್ಪಣೆಯಾಗಿದೆ . ಈ ಕೆಂಪು ಕೋಟೆಯಲ್ಲಿ  ಹಲವು ಮೊಘಲ್ ಬಾದಶ ಗಳು ಮೆರೆದದ್ದು ಇತಿಹಾಸವಾಗಿದೆ.ಈ" ಕೆಂಪು ಕೋಟೆ"  ಸುಮಾರು ಇನ್ನೋರೈವತ್ತು ಎಕರೆಗಳ ವಿಸ್ತೀರ್ಣ ದಲ್ಲಿ ಹರಡಿಕೊಂಡಿದೆ. ಶಹಜಾನ್ ಕಾಲದಲ್ಲಿ  ದೆಹಲಿಯನ್ನು "ಶಹಜನಾಬಾದ್ " ಎಂದು ಕರೆಯಲಾಗುತ್ತಿತ್ತು.ಆಗಿನ ಕಾಲದಲ್ಲಿ ಈ ಕೆಂಪು ಕೋಟೆಯನ್ನು  "Qila-i-Mubarak" (the blessed fort), ಎಂದು ಕರೆಯಲಾಗುತ್ತಿತ್ತು.

ಕೆಂಪು ಕೋಟೆಯ ಲಾಹೋರ್ ಗೇಟ್
ಕೆಂಪು ಕೋಟೆಯ ಪ್ರವೇಶ ದ್ವಾರ ಲಾಹೋರ್  ಗೇಟ್
ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡುವ ಸ್ಥಳ.
ಬನ್ನಿ ಕೆಂಪು ಕೋಟೆಯ ಒಳಗೆ ಹೋಗೋಣ , ನಿಮಗೆ ಮೊದಲು ಸ್ವಾಗತ ಕೋರುವ ಬಾಗಿಲೆ "ಲಾಹೋರ್ ಗೇಟ್ ' ರಕ್ಷಣಾ ತಪಾಸಣೆ ಮುಗಿಸಿ ನೀವು ಲಾಹೋರ್ ಗೇಟ್ ಮೂಲಕ ಕೆಂಪು ಕೋಟೆ ಪ್ರವೇಶ ಮಾಡುತ್ತೀರಿ.ನಂತರ ನಿಮಗೆ ಕೆಲವು ಮಾಹಿತಿಗಳನ್ನು ಗಮನಿಸಿದಲ್ಲಿ ನೀವು ಕೆಂಪು ಕೋಟೆಯಲ್ಲಿ ನೋಡಬೇಕಾದ ಸ್ಥಳಗಳ ಮಾಹಿತಿ ದೊರಕುತ್ತದೆ ,ಈ ಮಾಹಿತಿಯ ಪ್ರಕಾರ ನೋಡಿದಲ್ಲಿ ನೀವು ಇಪ್ಪತ್ತು ಜಾಗಗಳನ್ನು ನೋಡಬಹುದು. ರಾಷ್ಟ್ರೀಯ ಹಬ್ಬ ಆಗಸ್ಟ್ 15 ರಂದು ಭಾರತದ ಪ್ರಧಾನ ಮಂತ್ರಿಗಳು ದೇಶಕ್ಕೆ ಸ್ವಾತಂತ್ರ್ಯದಿನಾಚರಣೆ   ಸಂದೇಶ ನೀಡುವು ಇಲ್ಲಿಂದಲೇ .ಅದಕ್ಕಾಗೆ ಆ ದಿನ ವಿಶೇಷ ಭದ್ರತೆ ವ್ಯವಸ್ತೆ ಮಾಡಲಾಗುತ್ತದೆ.
ಕೆಂಪು ಕೋಟೆಯಲ್ಲಿ ನೀವು ನೋಡಬೇಕಾದ ವಿವರ ನೀಡುವ ಫಲಕ.
ಆದರೆ ನಮ್ಮ ಜನಗಳಿಗೆ ಅಷ್ಟೊಂದು ತಾಳ್ಮೆ ಇಲ್ಲಾ, ಅದನ್ನು ನೋಡಿಯೂ ನೋಡದ ಹಾಗೆ ಮುಂದೆ ತೆರಳುತ್ತಾರೆ.ಹಾಗೆ ಮುಂದೆ ಬನ್ನಿ ನಿಮಗೆ ಲಾಹೋರ್ ಗೇಟ್ ದಾಟಿದ ನಂತರ ನಿಮಗೆ ಕೋಟೆಯ ಒಳಗೆ ಎರಡೂ ಬದಿಯಲ್ಲಿ ವಿವಿಧ ಬಗೆಯ ಅಂಗಡಿಗಳದರ್ಶನ ಆಗುತ್ತದೆ..
ಲಾಹೋರ್ ಬಾಗಿಲ ಬಳಿ ಎರಡೂ ಬದಿಯಲ್ಲಿರುವ ಮಾರುಕಟ್ಟೆ.
ಅಲ್ಲಿ ಕರಕುಶಲ ವಸ್ತುಗಳನ್ನು ಕೊಳ್ಳ ಬಹುದು.ಇದನ್ನು  "ಚಟಾ ಚೌಕ್" ಎಂದು ಕರೆಯುತ್ತಾರೆ. 17 ಶತಮಾನದಿಂದ ಕೆಂಪು ಕೋಟೆಯೊಳಗೆ ಇರುವ  ಎರಡಂತಸ್ತಿನ ಈ ಮಾರುಕಟ್ಟೆ ಐತಿಹಾಸಿಕ ಮಹತ್ವ ಪಡೆದಿತ್ತು.ಇದನ್ನು ಶಹಜಾನ್ ತಾನು "ಪಾಕಿಸ್ತಾನದ ಪೆಶಾವರ್ "ನಲ್ಲಿ 1646 ಕಂಡಂತೆ ರೂಪಿಸಿ ಇಲ್ಲಿ ನಿರ್ಮಾಣ ಮಾಡಿಸಿದನೆಂದು ತಿಳಿದುಬರುತ್ತದೆ.
ಚಟಾ ಚೌಕದ ಬಗ್ಗೆ ಮಾಹಿತಿ
ಕೆಂಪು ಕೋಟೆಯಲ್ಲಿ ಅರಳಿದ ಕಲಾ ಸೌಂದರ್ಯ
ಕೃತಕ ಬಣ್ಣವಿಲ್ಲದೆ ಅರಳಿದ ಈ ಕಲೆ.

ಇದಕ್ಕೆ ಪೂರಕವಾಗಿ ಮಾಹಿತಿ ಫಲಕ ಪ್ರದರ್ಶಿಸಲಾಗಿದೆ.ಕೆಂಪು ಕೋಟೆಯ ಒಳಗಡೆ ನೀವು ನೋಡಲೇ ಬೇಕಾದದ್ದು ೧ ) ದಿವಾನ್ -ಇ- ಆಂ, ೨) ದಿವಾನ್ -ಇ -ಖಾಸ್ ,೩ ) ನಹ್ರ್ -ಇ -ಬೆಹಿಶ್ತ್ , ೪ ) ಜೆನಾನ , ೫) ಮೋತಿ ಮಸ್ಜಿದ್ , ೬) ಹಯಾತ್ ಬಕ್ಷ್  ಬಾಗ್  ಮುಂತಾದವು .ಈ ಎಲ್ಲಾ ಸ್ಥಳಗಲ್ಲಿಯೂ ಪರ್ಷಿಯನ್, ಯೂರೋಪಿಯನ್ ಹಾಗು ಭಾರತೀಯ ಕಲಾಕೃತಿಗಳನ್ನು ಅರಳಿಸಿ  ಕೆಂಪು ಕೋಟೆಯನ್ನು ಒಂದು ಅದ್ಭುತ ಕಲಾಕೇಂದ್ರ ದಂತೆ ರೂಪಿಸಲಾಗಿದೆ.ನನ್ನ ಗಮಸೆಳೆದದ್ದು  ಗೋಡೆಗಳ ಮೇಲೆ ಬೆಲೆಬಾಳುವ ಬಣ್ಣ ಬಣ್ಣದ ಕಲ್ಲುಗಳಿಂದ ನಿರ್ಮಿಸಲಾದ ಕಲಾವೈಭವ, ಇದಕ್ಕೆ ಯಾವುದೇ ಕೃತಕ ಬಣ್ಣಗಳಿಂದ ಅಲಂಕಾರ ಮಾಡಲಾಗಿಲ್ಲ.ಸಂಧರ್ಬಕ್ಕೆ ತಕ್ಕಹಾಗೆ ಅಗತ್ಯವಿರುವ ಬಣ್ಣದ ಕಲ್ಲುಗಳನ್ನು ಕತ್ತರಿಸಿ ಗೋಡೆಗೆ ಅಂಟಿಸಿ ಮೂಡಿಸಿರುವ ಶಿಲ್ಪಿಯ ಪ್ರತಿಭೆಗೆ ಮನಸ್ಸು ಜೈಕಾರ ಹಾಕಿತ್ತು.

ದಿವಾನ್ -ಇ- ಆಂ
ಅಮೃತ ಶಿಲೆಯ ಸಿಂಹಾಸನ
ಅದ್ಭುತ ಸಭಾಂಗಣ 
ಮುಂದೆ ಹೆಜ್ಜೆ ಹಾಕಿದ ನಮಗೆ ಕಂಡಿದ್ದೆ ದಿವಾನ್ -ಇ- ಆಂ ವಿಶಾಲವಾದ ಧರ್ಬಾರ್   ಸಭಾಂಗಣ,ಸುಂದರ ದರ್ಭಾರ್ ಸಭಾಂಗಣದಲ್ಲಿ ಅದ್ಭತ ಎನ್ನಿಸುವ ಕೆತ್ತನೆ ಮನಸೆಳೆಯುತ್ತದೆ.ವಿಶಾಲವಾದ ಈ ಧರ್ಬಾರ್ ಹಾಲ್ ನಲ್ಲಿ ಅಮೃತ ಶಿಲೆಯಿಂದ ನಿರ್ಮಿಸಿದ  ಒಂದು ಅದ್ಭತ ಪೀಟದಲ್ಲಿ ಕುಳಿತು  ಮೊಘಲ್ ರಾಜರು ಸಾರ್ವಜನಿಕ ಧರ್ಬಾರ್  ನಡೆಸುತ್ತಿದ್ದರಂತೆ .ಈ ಹಾಲ್ ನಲ್ಲಿ ಅಮೃತಶಿಲೆಯ ಕೆತ್ತನೆಯ ಸುಂದರ ಸಿಂಹಾಸನ ಇದ್ದು ಕಲಾತ್ಮಕವಾಗಿ ಗಮನ ಸೆಳೆಯುತ್ತದೆ.


ದಿವಾನ್ -ಇ- ಖಾಸ್
ಮುಂದಿನ ನದಿಗೆ" ದಿವಾನ್ -ಇ -ಖಾಸ್" [ಖಾಸಗಿ ಧರ್ಬಾರ್ ಹಾಲ್ ] ಮತ್ತೊಂದು ಸುಂದರ ಸ್ಮಾರಕ ಸುಂದರ ಕಮಾನುಗಳನ್ನು ಹೊಂದಿ, ಗೋಡೆಯ ಮೇಲೆಲ್ಲಾ ಸುಂದರ ಚಿತ್ತಾರಗಳನ್ನು ಬಿಡಿಸಿಕೊಂಡು ಮೆರೆದಿರುವ ಸುಂದರ ಕಟ್ಟಡ.ಈ ಕಟ್ಟಡ ದಲ್ಲಿಯೇ  ಮಯೂರ ಸಿಂಹಾಸನ ಇತ್ತೆಂದೂ 1739 ರಲ್ಲಿ ನಾದಿರ್ ಷಾ ಇದನ್ನು ತೆಗೆಸಿದನೆಂದೂ  ಹೇಳುತ್ತಾರೆ.
ಕಿಟಕಿ ಬಾಗಿಲುಗಳನ್ನು ಬಿಡದ ಕಲಾಸೌಂದರ್ಯ
ಅದ್ಭುತ ಲೋಕ ಈ ಖಾಸಗಿ ಧರ್ಬಾರ್
ಖಾಸಗಿ ಧರ್ಬಾರ್ ನ ಮಾಹಿತಿ ಫಲಕ.

ಈ ಸಭಾಂಗಣದಲ್ಲಿ ಓಡಾಡಿದರೆ ಮನಸ್ಸಿಗೆ ಉಲ್ಲಾಸ ಸಿಗುತ್ತದೆ.
ಕೆಂಪು ಕೋಟೆಯ ಅದ್ಭುತ ಲೋಕ ನೋಡುತ್ತಾ ಮೈಮರೆತಿದ್ದೆ ಗೆಳೆಯ ನಂದಕುಮಾರ್ ಬಾಲೂ ಬನ್ನಿ ಹೊರಗೆ ಹೋಗಿ" ಲೈಟ್ ಅಂಡ್ ಸೌಂಡ್ ಷೋ"  ಗೆ ಟಿಕೆಟ್ ತರೋಣ ಅಂದಾಗ ವಾಸ್ತವಕ್ಕೆ ಬಂದೆ, ಹೊರಗೆ ಬಂದು ಟಿಕೆಟ್ ಪಡೆದು ಮತ್ತೆ ಸಂಜೆ 7 ರಿಂದ 8 ಘಂಟೆಯವರೆಗೆ  ಹಿಂದಿ ಯಲ್ಲಿನ ಕಾರ್ಯಕ್ರಮ ನೋಡಲು ಬಂದೆವು ,  ಕಾರ್ಯಕ್ರಮದ ಆವರಣಕ್ಕೆ ಬಂದ ನಮಗೆ ಸೊಳ್ಳೆಯ ಕಡಿತದ  ಸ್ವಾಗತ ಸಿಕ್ಕಿತು.1981 ರಲ್ಲಿ ಇಲ್ಲಿನ ಕಾರ್ಯಕ್ರಮ ನೋಡಿದ್ದ ನನಗೆ ಅಂದಿನ ಅನುಭವ ಇಂದು ಸಿಗದಿದ್ದರೂ ಹಲವು ಬದಲಾವಣೆಗಳನ್ನು ನೋಡಿದೆ.ಸೊಳ್ಳೆಗಳ ಕಡಿದತ ನಡುವೆಯೇ ಕಾರ್ಯಕ್ರಮ ಶುರು ಆಯಿತು. ಸೊಳ್ಳೆ ನಿಯಂತ್ರಣಕ್ಕೆ ಯಾವುದೇ ಕ್ರಮವನ್ನು ಕಾರ್ಯಕ್ರಮ ಆಯೋಜಕರು ತೆಗೆದು ಕೊಂಡಿರಲಿಲ್ಲ. ಆದರೂ ಉತ್ತಮ ಕಾರ್ಯಕ್ರಮ ನೋಡಲು ಜನಗಳು ಬಹಳಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು.  ಹೌದು ಇಲ್ಲಿ ಪ್ರತೀ ದಿನ " ಲೈಟ್ ಅಂಡ್ ಸೌಂಡ್ " ಕಾರ್ಯಕ್ರಮ ಇರುತ್ತದೆ , ಟಿಕೆಟ್ ಬೆಲೆ ಒಬ್ಬರಿಗೆ 60 ರೂಪಾಯಿ.ಒಂದು ಘಂಟೆ ಕಾಲಾವದಿಯ ಈ ಕಾರ್ಯಕ್ರಮ ಹಿಂದಿಯಲ್ಲಿ ಸಂಜೆ 7 ರಿಂದ 8 ಘಂಟೆಯವರೆಗೆ , ಇಂಗ್ಲೀಷ್ ನಲ್ಲಿ ರಾತ್ರಿ 8 .30 ರಿಂದ 9 .30 ಘಂಟೆಯವರೆಗೆ ಇರುತ್ತದೆ ಕೆಂಪು ಕೋಟೆಯ  ಒಂದು ಕೇಂದ್ರ  ಭಾಗದಲ್ಲಿ ಪ್ರೇಕ್ಷಕರನ್ನು ಕೂರಿಸಿ  ಹಲವು ಸ್ಮಾರಕಗಳಿಗೆ ಬೆಳಕಿನ ಹಾಗು ಶಬ್ದ ಉಪಕರಣಗಳನ್ನು ಅಳವಡಿಸಿ  ದೆಹಲಿಯ
ಇತಿಹಾಸಕ್ಕೆ ಬೆಳಕು ಹಾಗು ಧ್ವನಿಯ ಮೋಹಕ ಸ್ಪರ್ಶ.
ಇತಿಹಾಸವನ್ನು ಕಣ್ಮುಂದೆ ತರುವ ಈ ಮಾಯಾ ಲೋಕದ ಸೃಷ್ಟಿಗೆ ಎಂತಹವರೂ ಮರುಳಾಗುತ್ತಾರೆ."ಮೈ ದಿಲ್ಲಿ ಹೂ" ಎಂದು  "ಬಿನಾಕ ಗೀತ ಮಾಲ " ಖ್ಯಾತಿಯ  "ಅಮೀನ್ ಸಯಾನಿ"ದ್ವನಿಯಲ್ಲಿ ಪ್ರಾರಂಭಿಸಿದ ಈ ಕಾರ್ಯಕ್ರಮದಲ್ಲಿ ಬೆಳಕು ಹಾಗು  ಶಬ್ಧದ ಕಣ್ಣಾ ಮುಚ್ಚೆ ಆಟದಲ್ಲಿ ದೆಹಲಿಯ ಪೂರ್ಣ  ಇತಿಹಾಸದ ಬಗ್ಗೆ  ಎಳೆ ಎಳೆಯಾಗಿ ವಿವರಗಳು ತೆರೆದುಕೊಂಡಿತು.ಸುಂದರ ಕಾರ್ಯಕ್ರಮದಲ್ಲಿ    ಲೀನವಾಗಿ ಹೋಗಿದ್ದೆ.ಕಾರ್ಯಕ್ರಮದ ಅಂತಿಮ ವಾಗಿ "ಸಾರೆ ಜಹಾನ್ಸೆ  ಅಚ್ಚಾ " ತೇಲಿಬಂದು ಕಿವಿಗೆ ಸೇರಿದಾಗ ವಾಸ್ತವಕ್ಕೆ ಬಂದೆ , ಕಾರ್ಯಕ್ರಮ ಮುಗೀತು ಹೋಗೋಣವಾ , ಬನ್ನಿ ಹೊಟ್ಟೆ ಹಸಿತಾಯಿದೆ ಜಲ್ದಿ ಹೋಗೋಣ ಅಂತಾ ನಂದಕುಮಾರ್ ಹೇಳಿದಾಗ ಒಲ್ಲದ ಮನಸಿನಿಂದ ಕೆಂಪು ಕೋಟೆಯ ಕತ್ತಲಲ್ಲಿ ಇತಿಹಾಸ ಮೆಲುಕು ಹಾಕುತ್ತಾ ಹೊರಗೆ ಬಂದೆ, ಕಿವಿಯಲ್ಲಿ ಅಮೀನ್ ಸಯಾನಿ  ಹೇಳಿದ ."ಮೈ ದಿಲ್ಲಿ ಹೂ"ಶಬ್ಧಗಳು ಕಿವಿಯಲ್ಲಿ ಮನದಲ್ಲಿ   ಗುಯ್ಯ್ ಗುಡುತ್ತಲೇ ಇದ್ದವು. ....................!!!! ಮುಂದಿನ ಸಂಚಿಕೆಯಲ್ಲಿ .........ಸುಪ್ರೀಂ ಕೋರ್ಟ್ ಅಂಗಳದಲ್ಲಿ .......?????

5 comments:

Badarinath Palavalli said...

ನಾಲ್ಕನೇ ಭಾಗ ಬರೆದುಕೊಟ್ಟದ್ದಕ್ಕೆ ಧನ್ಯವಾದಗಳು.

ಯಾಕೆಂದರೆ ಈ ನಡುವೆ ಬಾಲಣ್ಣನಿಂದ ಬ್ಲಾಗ್ ಬರೆಸುವುದು ಮತ್ತು ಮಂತ್ರಿ ಮಂಡಲ ವಿಸ್ತರಣೆ ಮಾಡುವುದು ಎರಡೂ ತ್ರಾಸಿನ ಕೆಲಸಗಳೇ!!!

ಶಹಜನಾಬಾದ್ ಬಗ್ಗೆ ಗೊತ್ತಿರಲಿಲ್ಲ ಸಾರ್, ಈಗ ತಿಳಿದುಕೊಂಡಂತಾಯ್ತು.

ದಿವಾನ್ -ಇ -ಖಾಸ್ ಮುಂಭಾಗ ತುಸು ಟಿಪ್ಪು ಸುಲ್ತಾನನ ಬೆಂಗಳೂರು ಅರಮನೆ ಮುಂಬಾಗವಿದ್ದಂತೆಯೇ ಇದೆ ಅಲ್ಲವೇ? ಬಹುಶಃ ಎರಡೂ ಒಂದೇ ಶೈಲಿಯ ವಾಸ್ತು ಇದ್ದೀತು.

ಚಿತ್ರಗಳು ಅಮೋಘವಾಗಿವೆ. ಮೊಗಲ್ ಶೈಲಿಯ ಕರಕುಶಲತೆ ಮನಮೋಹಕವಾಗಿದೆ.

ಆಯೋಜಕರು ಒಂದು ಸುತ್ತು ಸೊಳ್ಳೆ ನಿರ್ಮೂಲನ ಹೊಗೆ ಜೀಪ್ ಓಡಿಸಿದ್ದರೂ ಸೊಳ್ಳೆಗಳು ನಿಯಂತ್ರಣಕ್ಕೆ ಬರುತ್ತಿದ್ದವು.

ಹೋಗಲಿ ಬಿಡಿ ಸಾರ್, ಕೇಂದ್ರ ಸರ್ಕಾರ ತೆರಿಗೆಯಂತೆ ನಮ್ಮ ರಕ್ತ ಹೀರುತ್ತಿಲ್ಲವೆ? ಪುಟ್ಟ ಸೊಳ್ಳೆ ಮೈಸೂರಿಗನ ರಕ್ತ ಹೀರಿಕೊಳ್ಳಲಿ ಬಿಡಿ!!!

Ittigecement said...

ಬಾಲಣ್ಣ...

ನಾನು ದೆಹಲಿಗೆ ಹೋಗಿದ್ದರೂ ಕೆಂಪುಕೋಟೆಗೆ ಹೋಗಲಿಲ್ಲವಾಗಿತ್ತು...

ನಿಮ್ಮ ಲೇಖನ ..
ಫೋಟೊ ನೋಡಿದ ಮೇಲೆ ತಪ್ಪು ಮಾಡಿದೆ ಅಂತ ಅನ್ನಿಸುತ್ತಿದೆ..

ತುಂಬಾ ಉಪಯುಕ್ತ ಮಾಹಿತಿಗಳು..

ಚಂದದ ಫೋಟೊಗಳಿಗೆ ..
ಪುಕ್ಕಟೆಯಾಗಿ ಕೆಂಪುಕೋಟೆ ತಿರುಗಾಡಿಸಿದ್ದಕ್ಕೆ ಜೈ ಹೋ !!

Dr.D.T.Krishna Murthy. said...

ಬಾಲಣ್ಣ;ಕೆಂಪು ಕೋಟೆಯ ಬಗ್ಗೆ ಎಷ್ಟೆಲ್ಲಾ ಉಪಯುಕ್ತ ಮಾಹಿತಿ!!!ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಬಾಲಣ್ಣ;ಕೆಂಪು ಕೋಟೆಯ ಬಗ್ಗೆ ಎಷ್ಟೆಲ್ಲಾ ಉಪಯುಕ್ತ ಮಾಹಿತಿ!!!

Srikanth Manjunath said...

ದಿಲ್ಲಿ ಹಾಗು ಕುರುಕ್ಷೇತ್ರ ನೋಡುವ ನನ್ನ ಪಟ್ಟಿಯಲ್ಲಿ ಇನ್ನು ರಾಜಿ ಆಗಿಲ್ಲ..ಖರ್ಚಿಲ್ಲದೆ ದಿಲ್ಲಿ ಪ್ರವಾಸ ಮಾಡಿಸುತ್ತಿರುವ ಬಾಲು ಸರ್..ನಿಮಗೆ ಧನ್ಯವಾದಗಳು...ನಿಮ್ಮ ಬ್ಲಾಗ್ ನನಗೆ ಮಾರ್ಗದರ್ಶಿ...