Monday, November 14, 2011

ಮೂರು ನದಿಗಳು ಸಂಗಮವಾಗುವ ಸ್ಥಳ !!!! ಜಗದ ಜನರ ಕಣ್ಣಿಗೆ ಬೀಳದೆ ನಿರ್ಮಲವಾಗಿದೆ!!!!

ಮೂರು ನದಿಗಳು ಸೇರುವ ಪಾತ್ರ ಗೂಗಲ್ ಮ್ಯಾಪ್ನಲ್ಲಿ


ಹೌದು ಈ ಜಾಗದ ಬಗ್ಗೆ ಪರಿಚಯ ಮಾಡಿಕೊಡಲಾ ಬೇಡವ ಎಂಬ ಜಿಜ್ಞಾಸೆ ಕಾಡಿದೆ. ಪರಿಚಯ ಮಾಡಿಕೊಟ್ಟರೆ ಹೆಚ್ಚಿನ ಜನ ಬಂದು ಈ ಜಾಗದ ನಿರ್ಮಲತೆ ಹಾಳಾಗುವ ಭಯ.ಏಕೆಂದರೆ ನಮ್ಮಲ್ಲಿ ಇಂತಹ ಸ್ಥಳಗಳಿಗೆ ಹೋಗುವ ಕೆಲವು ಜನ ಗೊತ್ತಲ್ಲ!!! ಚೆನ್ನಾಗಿ ತಿಂದು ಕುಡಿದು ಮಜಾ ಮಾಡಿ ಕುಡಿದ ಬಾಟಲ್ ಗಳನ್ನೂ , ಕಸವನ್ನು ಚೆಲ್ಲಾಡಿ ಬರುತ್ತಾರೆ.[ ಉದಾಹರಣೆ ಕೆ.ಆರ್.ಎಸ ಸಮೀಪವಿರುವ ಬಲಮುರಿ ] ಎಂಬ ಭಯ, ಪರಿಚಯ ಮಾಡಿಕೊಡದಿದ್ದರೆ ಇಂತಹ ಸುಂದರ ಪರಿಸರವನ್ನು ನೋಡುವ ಅವಕಾಶವನ್ನು ಹಲವಾರು ಒಳ್ಳೆಯ ಜನರಿಗೆ ತಪ್ಪಿಸಬೇಕಲ್ಲಾ ಎನ್ನುವ ಸಂಕಟ , ಇವುಗಳ ಮೇಲಾಟದಲ್ಲಿ ಪರಿಚಯ ಮಾಡಿಕೊಡುವ ಬಗ್ಗೆ ನಿರ್ಧರಿಸಿ ಈ ಲೇಖನ ಪ್ರಕಟಿಸಿದ್ದೇನೆ. ಏನ್ ಮಹಾ ಬುದ್ದಿವಂತಾ ಇವನು ಎಲ್ಲಾ ಗೊತ್ತೂ ಅನ್ನೋಹಂಗೆ ಆಡ್ತಾನೆ ಬಹಳ ಜಂಬಾ ಇವನಿಗೆ ಅಂತೀರಾ ??? ಇಲ್ಲಾ ರೀ ನೀವು ಇಲ್ಲಿ ಪರಿಚಯ ಮಾಡಿಕೊಳ್ಳುವ ಪರಿಸರದ ಜಾಗದ ಬಗ್ಗೆ ಅಂತರ್ಜಾಲ ಜಾಲಾಡಿದರೂ ಮಾಹಿತಿ ದೊರೆಯಲ್ಲಾ , ವಿಕಿಪಿಡಿಯಾ ದಲ್ಲೂ ಮಾಹಿತಿ ಇಲ್ಲ, ಗೂಗಲ್ ಸರ್ಚ್ ಈ ಜಾಗದ ಬಗ್ಗೆ ತಲೆ ಒಗೆಯುತ್ತದೆ. ಅಚ್ಚರಿ ಆಯ್ತಾ ಬನ್ನಿ ಆ ಜಾಗಕ್ಕೆ ಹೋಗೋಣ. ಕೆ.ಆರ್.ಎಸ. ಹಿನ್ನೀರಿನ ತಡಿಯಲ್ಲಿ ಹಲವಾರು ವಿಸ್ಮಯ ಕಾರಿ ಜಾಗಗಳು ಅಡಗಿಕೊಂಡಿವೆ, ಹಿನ್ನೀರಿನ ಚಾಚು ಮಂಡ್ಯ ಜಿಲ್ಲೆ ಹಾಗು ಮೈಸೂರು ಜಿಲ್ಲೆಗೆ ಸೇರಿದ ಪಾಂಡವಪುರ , ಕೆ ಆರ್.ಪೇಟೆ ,[ಮಂಡ್ಯ ಜಿಲ್ಲೆ ] ಕೆ.ಆರ್.ನಗರ , ಹುಣಸೂರು [ ಮೈಸೂರು ಜಿಲ್ಲೆ ] ಈ ಭಾಗದಲ್ಲಿ ಹರಡಿ ಕೊಂಡಿದೆ. ಈ ಭಾಗಗಳಲ್ಲಿನ ಹಲವಾರು ವಿಸ್ಮಯಗಳು ಹೊರ ಜಗತ್ತಿಗೆ ತಿಳಿದಿಲ್ಲ. ಅದಕ್ಕೆ ಹೆಚ್ಚಿನ ಪ್ರಚಾರವೂ ಇಲ್ಲ ಹಾಗಾಗಿ ಜನರ ಕಣ್ಣಿಗೆ ಮರೆಯಾಗಿ ಉಳಿದಿವೆ.ಅಂತಹ ಒಂದು ಜಾಗ ಈ ಸಂಗಮೇಶ್ವರ ಪುರ ಅಥವಾ ಸಂಗಾ ಪುರ ಎನ್ನುವ ಸ್ಥಳ.

ಸಂಗಮೇಶ್ವರ ಹಾಗು ಪಾರ್ವತಿ ದೇವಾಲಯಗಳು.

ಈ ಪ್ರದೇಶದಲ್ಲಿ ಮೂರು ನದಿಗಳು ಸಂಗಮವಾಗಿ ಸುಂದರ ಪರಿಸರ ನಿರ್ಮಿಸಿವೆ.ಕೊಡಗು ಜಿಲ್ಲೆ ತಲಕಾವೇರಿ ಯಿಂದ ಹರಿದು ಬರುವ ಕಾವೇರಿ, ಕೊಡಗಿನ ಬ್ರಹ್ಮ ಗಿರಿ ಬೆಟ್ಟದ ಲ್ಲಿ ಹುಟ್ಟಿ ಇರುಪ್ಪು ಮೂಲಕ ಹರಿದು ಬರುವ ಲಕ್ಷ್ಮಣ ತೀರ್ಥ ಹಾಗು ಚಿಕ್ಕ ಮಗಳೂರು ಜಿಲ್ಲೆ ಮೂಡಿಗೆರೆಯ ಸಮೀಪದ "ಜಾವಳಿ" ಯಿಂದ ಹರಿದು ಬರುವ ಹೇಮಾವತಿ ನದಿಗಳು ಇಲ್ಲಿ ಪ್ರೀತಿಯಿಂದ ಸಂಗಮಿಸಿ ಸಂಭ್ರಮಿಸುತ್ತವೆ .ಮೂರು ನದಿಗಳು ಇಲ್ಲಿ ಹಲವಾರು ಸಣ್ಣ ಸಣ್ಣ ಭೂಶಿರ,ಹಾಗು ದ್ವೀಪಗಳನ್ನು ನಿರ್ಮಿಸಿವೆ.
ಭೂಶಿರದ ಕಡೆಗೆ ಸಾಗುವ ಹಾದಿ

ಜನರ ಕಣ್ಣಿಗೆ ಕಾಣದೆ ನಿರ್ಮಲವಾಗಿರುವ ಸಂಗಮೇಶ್ವರ
ಭೂಶಿರದ ತುದಿಯ ಭಾಗ. [ ಎಡಭಾಗದಲ್ಲಿ ಹೇಮಾವತಿ , ಬಲಭಾಗದಲ್ಲಿ ಕಾವೇರಿ , ಎದುರು ಭಾಗದಲ್ಲಿ ಲಕ್ಷ್ಮಣ ತೀರ್ಥ ನದಿಗಳ ಸಂಗಮ]

ಪ್ರದೇಶಕ್ಕೆ ಐತಿಹಾಸಿಕ ಪೌರಾಣಿಕ ಮಹತ್ವ ಸಾರುವ ವಿಚಾರಗಳು ಇಲ್ಲದಿದ್ದರೂ ಕುಟುಂಬ ಸಮೇತ ಎಲ್ಲರೂ ಹಾಯಾಗಿ ಯಾವುದೇ ಅಡೆತಡೆ ಇಲ್ಲದೆ ವಿಹರಿಸಿ ಬರಬಹುದು. ಪ್ರದೇಶಕ್ಕೆ ಬರುವವರು ಯಾವುದೇ ಕಾರಣಕ್ಕೂ ಮರೆಯದೆ ತಿಂಡಿ ಊಟಗಳನ್ನು ಜೊತೆಯಲ್ಲಿ ತನ್ನಿರಿ . ದಯಮಾಡಿ ಸುಮಾರುಎರಡು ಹೊತ್ತಿನ ಆಹಾರ ತರುವುದು ಒಳ್ಳೆಯದು .ಈ ಪ್ರದೇಶದಲ್ಲಿ ಚೆಲುವನ್ನು ನೋಡುತ್ತಾ ದಿನ ಕಳೆಯುವುದು ತಿಳಿಯುವುದಿಲ್ಲ. ಭೂಶಿರದ ತಟದಲ್ಲಿ ಕುಳಿತು ಗುಂಪಾಗಿ ಊಟ ಮಾಡುತ್ತಿದರೆ ಅನುಭವವೇ ಬೇರೆ. ಇಲ್ಲಿಯೂ ಸಹ ಹಲವಾರು ಬಗೆಯ ಪಕ್ಷಿಗಳನ್ನು ಪಕ್ಷಿವೀಕ್ಷಕರು ಗಮನಿಸಬಹುದು, ನೀರಿನಲ್ಲಿ ಯಾವುದೇ ಹೆದರಿಕೆ ಇಲ್ಲದೆ ಸುರಕ್ಷಿತ ಜಾಗದಲ್ಲಿ ಈಜಬಹುದು,[ ಆದರೆ ಗಮನಿಸಿ ಹೆಚ್ಚು ದೂರ ಹೋದಲ್ಲಿ ಸುಳಿಗೆ ಸಿಲುಕುವ ಅಪಾಯವಿದೆ ] ಸನಿಹದಲ್ಲೇ ಇರುವ ಸಂಗಮೇಶ್ವರ ,ಪಾರ್ವತಿ ದೇವಾಲಯದಲ್ಲಿ ದೇವರ ಆಶೀರ್ವಾದ ಪಡೆಯಬಹುದು.ಎಲ್ಲಕಿಂತ ಹೆಚ್ಹಾಗಿ ಯಾವುದೇ ಗಲೀಜಿಲ್ಲದ , ನಿರ್ಮಲವಾದ ಪ್ರದೇಶದಲ್ಲಿ ಕುಟುಂಬದವರು ಮನರಂಜನೆಯ ಆಟ ಆಡಿ ಸಂತೋಷ ಹೊಂದ ಬಹುದು. ಪ್ರದೇಶಕ್ಕೆ ಬಂದೊಡನೆ ನಿಮಗೆ ಎದುರಾಗುವುದು ಮೀನುಗಾರರ ಹರಿಗೋಲು, ಸಣ್ಣ ಶೆಡ್ಡುಗಳು ಇತ್ಯಾದಿ
ನದಿಯಲ್ಲಿ ಸಿಗುವ ಮೀನುಗಳು
ಹೌದು ಇಲ್ಲಿ ಹೇರಳವಾಗಿ ಸಿಗುವ ಹಲವಾರು ಜಾತಿಯ ಮೀನುಗಳು ಮೈಸೂರು, ಬೆಂಗಳೂರು, ಪೂನ, ಮುಂತಾದೆಡೆಗೆ ಸಾಗಿಸಲ್ಪಡುತ್ತವೆ. ಛಾಯ ಚಿತ್ರ ತೆಗೆಯುವ ಹವ್ಯಾಸ ಇದ್ದಲ್ಲಿ ಕ್ಯಾಮರಾಗಳಿಗೆ ಹಬ್ಬ ಅಂತೂ ಗ್ಯಾರಂಟಿ .ಒಮ್ಮೆ ನೀವೂ ಸಹ ನಿಮ್ಮ ಕುಟುಂಬ ದೊಡನೆ ಇಲ್ಲಿಗೆ ಮರೆಯದೆ ಹೋಗಿಬನ್ನಿ [ ಆದರೆ ಅಲ್ಲಿನ ನಿರ್ಮಲತೆ ಕಾಪಾಡಲು ಸಹಕರಿಸಿ ]
ನಿರ್ಮಲ ವಾತಾವರಣದ ಸುಂದರ ನೋಟ

ಅಲ್ಲಿಗೆ ಹೋಗಲು ನಿಮ್ಮದೇ ಸ್ವಂತವಾಹನ ವಿದ್ದರೆ ಸೂಕ್ತ , ಬೆಂಗಳೂರಿನಿಂದ ,ಅಂದಾಜು 178 ಕಿ.ಮಿ.ದೂರದಲ್ಲಿರುವ ಈ ಪ್ರದೇಶ ವನ್ನು ಮಂಡ್ಯ , ಶ್ರೀ ರಂಗ ಪಟ್ಟಣ ಸಿಗುವ ಮೊದಲು ಕಿರಂಗೂರು ಸಮೀಪದ ವೃತ್ತದಲ್ಲಿ ಬಲಕ್ಕೆ ತಿರುಗಿ ಪಾಂಡವಪುರ ರೈಲ್ವೆ ಸ್ಟೇಶನ್ , ಮೂಲಕ, ಕೆ.ಆರ್.ಪೇಟೆ ರಸ್ತೆಯಲ್ಲಿ ಸಾಗಿ, ಚಿನಕುರುಳಿ, ಭೂಕನ ಕೆರೆ, ಗಂಜಿಗೆರೆ, ಕಟ್ಟೆಕ್ಯಾತನ ಹಳ್ಳಿ ಸೇತುವೆ ದಾಟಿ, , ಅಂಬಿಗರ ಹಳ್ಳಿ ಸಂಗಾ ಪುರ ಮೂಲಕ ಈ ತ್ರಿವೇಣಿ ಸಂಗಮದ ಜಾಗ ತಲುಪಬಹುದು. ಈ ಪ್ರದೇಶ ಮಂಡ್ಯ ಜಿಲ್ಲೆಗೆ ಸೇರಿದ್ದರೂ , ಕೆ.ಆರ್.ನಗರ ದಿಂದ ಸಂಗಾಪುರಕ್ಕೆ ಬಸ್ಸಿನ ಸೌಲಭ್ಯ ಇದೆ. ಇಲ್ಲಿಂದ ಮೂರು ಕಿ.ಮಿ.ನಡೆದರೆ ತ್ರಿವೇಣಿ ಸಂಗಮ ತಲುಪ ಬಹುದು . ಒಮ್ಮೆ ಹೋಗಿಬನ್ನಿ ಈ ಮಾಹಿತಿ ನಿಮಗೆ ಅನುಕೂಲವಾಗಲಿ. ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಮಾಹಿತಿ ಹೊತ್ತು ಬರುವೆ ನಿಮಗೆ ಶುಭ ಸಮಯ .

18 comments:

Digwas hegde said...

Thanq very much for the info....nice photos...

ದಿನಕರ ಮೊಗೇರ said...

tumbaa oLLeya maahiti sir...

ಜಲನಯನ said...

ಬಾಲು ಸೂಪರ್ ಅವಿಷ್ಕಾರಿ ಲೇಖನ ಮತ್ತು ಚಿತ್ರಗಳು...ಬಹಳ ಚನ್ನಾಗಿದೆ..
ಮೀನುಗಳು ಕೆಲವು ವಿಶಿಷ್ಠ ಪ್ರಬೇಧಗಳಾಗಿದ್ದು..ಇವುಗಳ ಉಲ್ಲೇಖ ಆಗಿದೆ... ಈ ಸಂಗಮದ ಮೀನುಗಳಲ್ಲೂ ವೈಶಿಷ್ಠ್ಯತೆ ಇರಬಹುದು ... ಗಮನಿಸಬೇಕಾದ ಅಂಶ ಇದು.

HegdeG said...

Balu sir, super photos haage uttam mahitigagi dhanyavadagalu :)

ಗಿರೀಶ್.ಎಸ್ said...

Never heard of this place before to this...Thanx for the info and photos are nice..

sunaath said...

Excellent info. Thank you.

ಮಂಜುಳಾದೇವಿ said...

ಒಳ್ಳೆಯ ಮಾಹಿತಿಗಾಗಿ ಮತ್ತು ಚೆಂದದ ಚಿತ್ರಗಳಿಗಾಗಿ ಅಭಿನಂದನೆಗಳು

ಹಳ್ಳಿ ಹುಡುಗ ತರುಣ್ said...

oLLeya maahitige danyavaadagaLu sir...

AntharangadaMaathugalu said...

ಬಾಲು ಸಾರ್...

ಅಂತೂ ನಿಮ್ಮ ಬ್ಲಾಗ್ ನಲ್ಲಿ ನಾವು ಒಳ್ಳೊಳ್ಳೆಯ ಜಾಗಗಳನ್ನೂ ಅದರ ಬಗ್ಗೆ ವಿವರಗಳನ್ನೂ ನೋಡ್ತಿರ್ತೀವಿ... ಧನ್ಯವಾದಗಳು...

ಶ್ಯಾಮಲ

Badarinath Palavalli said...

ನಾವು ನೋಡದ ಪ್ರಚಾರಕ್ಕೆ ಬಾರದ ಕರ್ನಾಟಕ ದರ್ಶನ. ಇಲ್ಲಿ ನೀವು ಕ್ಷೇತ್ರ ಪರಿಚಯ ಮಾಡಿಕೊಡುವಾಗ ಪರಿಸರ ಕಾಳಜಿ ವ್ಯಕ್ತಪಡಿಸಿರುವುದು ಪ್ರಶಂಸನೀಯ.

ನಿಮ್ಮ ಸ್ವಂತ ಚಿತ್ರಗಳು ಮತ್ತು ಗೂಗಲ್ ಚಿತ್ರಗಳೂ ನಿಮ್ಮ ಪ್ರಾಮಾಣಿಕ ಪರಿಶ್ರಮಕ್ಕೆ ಕೈಗನ್ನಡಿ.

ಕ್ಷಣ... ಚಿಂತನೆ... said...

ಬಾಲು ಸಾರ್...

ನಿಮ್ಮ ಬ್ಲಾಗ್ನಲ್ಲಿ ಒಳ್ಳೆಯ ಜಾಗಗಳ ಮಾಹಿತಿಗಾಗಿ and ಅದರ ಚಿತ್ರಗಳಿಗಾಗಿ ಧನ್ಯವಾದಗಳು...

chandru

Bhairav Kodi said...

ಉಪಯುಕ್ತ ಮಾಹಿತಿಯೊಂದಿಗೆ ಅನನ್ಯ ಚಿತ್ರಗಳು ತುಂಬಾನೇ ಇಷ್ಟ ಆಯ್ತು ಬಾಲು ಸಾರ್ ಧನ್ಯವಾದಗಳು

Sharmila Rao said...

publicity beda, irali nammadu nammali, nemadiyanidu taalali

prabhamani nagaraja said...

ನಮ್ಮೂರ ಸಮೀಪ ಹರಿಯುವ ನಮ್ಮ ಹೆಮಾವತಿಯು ಕೆ.ಆರ್.ಎಸ್. ಬಳಿ ಕಾವೇರಿಯನ್ನು ಸ೦ಗಮಿಸುವುದು ತಿಳಿದಿತ್ತು . ಆದರೆ ನಿಖರ ಮಾಹಿತಿ ತಿಳಿದಿರಲಿಲ್ಲ. ಸಚಿತ್ರ ಲೇಖನ ಬಹಳ ಚೆನ್ನಾಗಿದೆ, ಧನ್ಯವಾದಗಳು. ಪರಿಸರದ ಸ್ವಚ್ಚತೆಯ ಬಗ್ಗೆ ನಿಮ್ಮ ಕಾಳಜಿ ಅಭಿನ೦ದನೀಯ. ಈಗ ಯಾವಾಗ ಆ ಸ್ಥಳವನ್ನು ನೋಡುವೆನೋ ಎನಿಸಿದೆ!

nimmolagobba said...

ಲೇಖನ ಓದಿ ಅನಿಸಿಕೆ, ಅಭಿಪ್ರಾಯ ತಿಳಿಸಿದ , ಹಾಗು ಇಷ್ಟಪಟ್ಟ ಎಲ್ಲಾ ಆತ್ಮೀಯ ಬ್ಲಾಗ್ ಮಿತ್ರರಿಗೆ ವಂದನೆಗಳು.ನಿಮ್ಮ ಪ್ರೋತ್ಸಾಹ ಮುಂದುವೆರೆಯಲಿ.

ಕವಿ ನಾಗರಾಜ್ said...

ಬಾಲು ಅವರೇ, ನಿಮ್ಮ ಸುಂದರ ತಾಣ(ಬ್ಲಾಗ್)ಕ್ಕೆ ಭೇಟಿ ನೀಡಿರುವೆ. ಆಹ್ಲಾದಕರ ಻ನುಭವ ನೀಡಿದೆ. ಧನ್ಯವಾದಗಳು. ನನ್ನ http://kavimana.blogspot.com/ಗೂ ಒಮ್ಮೆ ಕಣ್ಣು ಹಾಯಿಸಿರಿ.

ಸೀತಾರಾಮ. ಕೆ. / SITARAM.K said...

ಉತ್ತಮ ಮಾಹಿತಿ

nimmolagobba said...

@ ಸೀತಾರಾಮ್ :-) ಧನ್ಯವಾದಗಳು ಸರ್