Saturday, May 9, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......15 ಹೋಗಿದ್ದು ಕಾಗಿನೆಲೆಗೆ ಮೊದಲು ಕಂಡಿದ್ದು ಬಾಡಾ !


ಎತ್ತ ಪೋಗುವುದೆಂದು ಕೇಳಿತ್ತು ಚಿತ್ತ


ಕಳೆದ ಸಂಚಿಕೆಯಲ್ಲಿ  "ದೇವಿಸರ"  ದ ಅನುಭವ  ಬರೆದ ಬಗ್ಗೆ ಓದಿದ ಹಲವರು  ಬಹಳ ಖುಷಿಪಟ್ಟು ತಮ್ಮ ಅನಿಸಿಕೆ ಹಾಕಿದ್ದಾರೆ, ಕೆಲವರ  ಆತ್ಮೀಯ ಸಂಬಂಧಿಕರು  ನಾನು ಹಾಕಿದ ಚಿತ್ರದಲ್ಲಿ  ಆಕಸ್ಮಿಕವಾಗಿ  ಇದ್ದದ್ದು    ಗೆಳೆಯರಿಗೆ  ಬಾಲ್ಯದ ನೆನಪಾಗಿ  ಖುಷಿಕೊಟ್ಟಿದೆ . ಅದರಲ್ಲೂ  ಗೆಳೆಯರಾದ ನಂಜುಂಡ ಭಟ್ , ರಾಮಕೃಷ್ಣ  ಅವರ  ಸಂತಸದ ಮಾತುಗಳು  ಮನಮುಟ್ಟಿದವು ,  ಈ ಒಂದು ಬ್ಲಾಗ್ ಬರಹ  ಓದುಗರಿಗೆ  ಅವರ  ಬಾಲ್ಯದ ನೆನಪನ್ನು ನೆನಪಿಸಿ  ತಮ್ಮ ಬಂಧು ಗಳ ದರ್ಶನ ಪಡೆಯಲು  ಕಾರಣವಾಗಿದ್ದಕ್ಕೆ  ನನಗೂ ಖುಶಿತಂದಿತು . ಬನ್ನಿ ಮುಂದೆ ಹೋಗೋಣ .


ಮರಕ್ಕೂ  ಬೇಕಂತೆ ಬದಲಾವಣೆ



ಅಣ್ಣಾ ಪ್ರಕಾಶಣ್ಣ  ಯಾವ ಕಡೆಯಿಂದ ಹೋಗೋದು  ಅಂದೇ .....?   ಹ .. ಬಾಲಣ್ಣ   ಯಾವಕಡೆ ಯಿಂದ ಹೋಗಬಹುದು   ಅಂತಾ ಯೋಚಿಸ್ತೀನಿ ತಾಳಿ ಅಂದರು  ............!   
  ಶಿರಸಿಯ  ಮಾರಿಕಾಂಬ  ದೇಗುಲದ ಬಳಿ ನಿಂತು   ಯಾವ ಕಡೆಯಿಂದ   ಊರಿಗೆ ವಾಪಸ್ಸ್ ಹೋಗೋದು ಅಂತಾ  ಯೋಚಿಸುತ್ತಾ  ನಿಂತೆವು ....!  ನಮ್ಮ ಪಯಣದ ಅಂತಿಮ ದಿನ  ಇಂದು   ಊರಿಗೆ ಹೋಗಲೇ ಬೇಕಾದ ಅನಿವಾರ್ಯತೆ , ಆದರು ಮನಸಿನಲ್ಲಿ ದುರಾಸೆ  ಇನ್ನೇನಾದರೂ ನೋಡಲು ಸಿಕ್ಕರೆ ಅದನ್ನು ನೋಡಿಬಿಡುವಾ  ಎಂಬ ತವಕ,  ಚರ್ಚೆಮಾಡುತ್ತಾ  ಅಣ್ಣಾ  ಬೆಂಗಳೂರಿಗೆ  ಶಿರಸಿಯಿಂದ ಹಾವೇರಿ ಕಡೆಯಿಂದ ಹೋದರೆ  ಹತ್ತಿರ ಆಗುತ್ತೆ ಏನ್ .ಹೆಚ್ . ೪ ರಲ್ಲಿ  ವೇಗವಾಗಿ  ಬೆಂಗಳೂರು ತಲುಪೋಣ , ದಾರಿಯಲ್ಲಿ ಸಾಧ್ಯಾ ಆದರೆ ಕಾಗಿನೆಲೆ ನೋಡೋಣ ಅಂತಾ  ತೀರ್ಮಾನ ಮಾಡಿದೆವು,  ಸರಿ ಶಿರಸಿಯಿಂದ  ಹಾವೇರಿ ಕಡೆ ಪಯಣ ಸಾಗಿತು . ದಾರಿಯಲ್ಲಿ  ಸಿಕ್ಕ ಒಂದು ಮರ  ಡೈನಾಸರಸ್ ತರಹ ತಲೆ ಎತ್ತಿ ನಿಂತಿತ್ತು ,  ಅರೆ  ಈ ಮರಕ್ಕೆ  ಯಾಕೆ   ಹೀಗೆ ಬದಲಾವಣೆ  ಆಸೆ  ಮೂಡಿತು ? ಅಂತಾ  ಪ್ರಶ್ನೆ ಮೂಡಿತು,  ಉತ್ತರ ಹೊಳಿಲಿಲ್ಲ  ತಲೆ ಕೆರೆದರೆ  ಕೂದಲು ಉದುರುವ  ಸಂಭವ  ಇದೆ  ಅಂತಾ ಮುನ್ನಡೆದೆವು .


ರೈತನ ಬದುಕಿಗೆ  ಇಲ್ಲೂ  ಕಾಟ ಕೊಟ್ಟ  ವಾಹನಗಳು




ಶಿರಸಿ ಯಿಂದ  ಹಾವೇರಿಯ ಕಡೆ ಸಾಗುವ ರಸ್ತೆ ದುರಸ್ತಿಕಾರ್ಯ  ನಡೆದಿತ್ತು, ಕೆಲವೊಂದು ಕಡೆ  ವಾಹನಗಳನ್ನು ಊರಿನೊಳಗೆ  ಹೋಗುವಂತೆ  ಮಾಡಲಾಗಿದ್ದ ಕಾರಣ ಕೆಲವು ಹಳ್ಳಿಗಳ  ಬೀದಿಗಳ ದರ್ಶನ ಆಯ್ತು , ಮಳೆ  ಇಲ್ಲದೆ  ಒಣಗಿದ ಭೂಮಿ, ದೂಳು ತುಂಬಿದ  ಹಾದಿಗಳು,   ಈ ನಡುವೆ  ರಸ್ತೆ ದುರಸ್ತಿಕಾರಣ  ಊರಿನೊಳಗೆ ಹಾದುಹೋಗುವ  ವಾಹನಗಳ ಕಿರಿ ಕಿರಿ , ಇವುಗಳೆಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡ ಜನರ ದರ್ಶನ ಆಯ್ತು .   ಶಿರಸಿಯಿಂದ ಹಾವೇರಿಗೆ ನಡುವೆ ಸಿಕ್ಕ  ಹಾನಗಲ್  ಎಂಬ ಊರನ್ನು ನೋಡಿ   "ಗಂಗೂಬಾಯಿ  ಹಾನಗಲ್ "  ಅವರ ಊರು ಇದೆ ಇರಬೇಕೂ  ಅಂತಾ  ಕಾರಿನಿಂದ  ಇಳಿದು ಅಲ್ಲೇ ಇದ್ದ ಅಂಗಡಿಯವರನ್ನು ವಿಚಾರಿಸಿದರೆ   " ಗಂಗೂಬಾಯಿ ಹಾನಗಲ್ " ಅವರ ಊರು ಇದಲ್ಲಾ  ಸರಾ ಅಂತಾ ಉತ್ತರ ನೀಡಿದರು,  ಏನೋ  ಮಹಾ ಹೊಸ ಜಾಗ  ನೋಡಲು ಸಿಕ್ಕಿತು ಎಂದು ಜಂಬದಿಂದ   ಬೀಗಿದ್ದ ನನಗೆ   ಸರಿಯಾದ ಶಾಸ್ತಿ  ಆಗಿತ್ತು ಇಲ್ಲಿ.  ಮತ್ತೆ ಪಯಣ ಮುಂದುವರಿಸಿದೆವು,  ಹಾಗೂ ಹೀಗೂ  ತೆವಳುತ್ತಾ  ದುರಸ್ತಿಕಾರ್ಯ ನಡೆದಿದ್ದ  ರಸ್ತೆಯಲ್ಲಿ ಸುಮಾರು ೭೦ ಕಿಲೋಮೀಟರು  ಹಾದಿಯನ್ನು ೨ಘಂಟೆಗೂ ಹೆಚ್ಚು  ಅವಧಿಯಲ್ಲಿ ಕ್ರಮಿಸಿದೆವು ,



ಬಾಡಾ  ದಲ್ಲಿ ಕಂಡ   ಸ್ಮಾರಕ

 ಹಾವೇರಿ ಗೆ ಪ್ರವೇಶಿಸುವ  ಮೊದಲು  ಕಾಗಿನೆಲೆ ದಾರಿಯಾವುದು  ತಿಳಿಯೋಣ ಎಂದು  ಅಲ್ಲೇ ಬರುತ್ತಿದ್ದ  ಆಟೋ ನಿಲ್ಲಿಸಿ  ಅಣ್ಣಾ   ಕಾಗಿನೆಲೆಗೆ  ಹೋಗ ಬೇಕು ದಾರಿ ಯಾವುದು ಹೇಳ್ತೀರಾ ? ಎಂದು  ಅದರ ಚಾಲಕರನ್ನು ಕೇಳಿದೆ ,  ಬಹಳ ಖುಷಿಯಾಯ್ತು  ಅನ್ನಿಸುತ್ತೆ ಅವರಿಗೆ
 ಸರ ,    ಕಾಗಿನೆಲೆ   ನೋಡುವ ಮೊದಲು  ಬಾಡಾ  ನೋಡ್ರೀ  ಸರಾ , ಇಲ್ಲಿಂದ  ಸುಮಾರು  ಹದಿನಾರು ಕಿಲೋಮೀಟರು  ಆಗ್ತೈತಿ  ನಂತರ  ಮತ್ತೆ ಹಾವೇರಿಗೆ ಬಂದು ಅಲ್ಲಿಂದ ಕಾಗಿನೆಲೆ ನೋಡಬಹುದು  ಎಂದು ಹೇಳಿ ಒಂದು ರೂಟ್  ಮ್ಯಾಪ್  ಹಾಕಿಕೊಟ್ಟರು .  ಅದರಂತೆ ಮೊದಲು ತಲುಪಿದ್ದೆ   ಕನದಾಸರ  ಬಾಡ  ಗ್ರಾಮಕ್ಕೆ .


ಕನಕದಾಸರ ಮೂರ್ತಿ


ಬನ್ನಿ ಬಾಡ ಗ್ರಾಮದ ಬಗ್ಗೆ ತಿಳಿಯೋಣ , ನಮಗೆಲ್ಲಾ  ತಿಳಿದಿರೋದು  ಕನಕದಾಸರು ಅಂದ್ರೆ  ಕಾಗಿನೆಲೆಯಲ್ಲಿ  ಜನಿಸಿದವರು,  ದಾಸಪಂಥಕ್ಕೆ  ಸೇರಿದವರು, ಉಡುಪಿಯಲ್ಲಿ  ತಮ್ಮ ಭಕ್ತಿಯ ಬಲದಿಂದ  ಶ್ರೀ ಕೃಷ್ಣನನ್ನು   ಒಲಿಸಿಕೊಂಡವರು , ಕನಕನಕಿಂಡಿ ಯ ಕಾರಣಕರ್ತರು  ಇತ್ಯಾದಿ  ವಿಚಾರಗಳು ತಿಳಿದಿವೆ,  ಆದರೆ ನಮಗೆ ತಿಳಿಯದ  ಅನೇಕ ವಿಸ್ಮಯದ  ವಿಚಾರಗಳನ್ನು  ಕನಕದಾಸರ ಬಗ್ಗೆ ಈ ಊರು ತನ್ನ ಒಡಲಿನಲ್ಲಿ  ಇಟ್ಟುಕೊಂಡಿದೆ . ಇಲ್ಲಿಗೆ ಬರುವವರೆಗೂ  ನಮಗೂ ಇದ್ದ ಜ್ಞಾನ ಇಷ್ಟೇ , ಇಲ್ಲಿಗೆ ಬಂದ ಮೇಲೆ ಕಂಡಿದ್ದು  ತಿಳಿದದ್ದು  ಬಹಳ ಆಸಕ್ತಿದಾಯಕ ವಿಚಾರಗಳು . ಬನ್ನಿ ಹೋಗೋಣ "ಕನಕದಾಸರ ಬಾಡ" ನೋಡಲು .  ಬಾಡ  ಗ್ರಾಮ ಇರೋದು  ಹಾವೇರಿ ಜಿಲ್ಲೆಯ  ಶಿಗ್ಗಾವ್  ತಾಲೂಕಿನಲ್ಲಿ ,  ಮೊದಲು ಈ ಗ್ರಾಮ ಧಾರವಾಡ ಜಿಲ್ಲೆಗೆ ಸೇರಿತ್ತು ೧೯೯೭-೯೮ ರಲ್ಲಿ  ಜಿಲ್ಲೆಗಳ ಪುನರ್ವಿಂಗಡಣೆ  ಆದಾಗ . ಶಿಗ್ಗಾವ್  ತಾಲೂಕು   ಹಾವೇರಿ ಜಿಲ್ಲೆಗೆ ಸೇರಿದ ಕಾರಣ  ಬಾಡ ಗ್ರಾಮ  ಹಾವೇರಿ ಜಿಲ್ಲೆಯ  ಇತಿಹಾಸದ ಭಾಗವಾಗಿ ನಿಂತಿದೆ .  ಹಾಲಿ ಇಲ್ಲಿ  ಕನಕದಾಸರ ನೆನೆಯಲು  ಒಂದು ಸುಂದರ ಕೋಟೆಯನ್ನು ನಿರ್ಮಿಸಿ ಅದರೊಳಗೆ  ಒಂದು ಸಂಗ್ರಹಾಲಯ  ಮಾಡಲಾಗಿದೆ.  ಒಳಗಡೆ ಕನಕದಾಸರ ಜೀವನದ ಬಗ್ಗೆ  ಹಲವು ಚಿತ್ರಗಳನ್ನು  ಪ್ರದರ್ಶಿಸಲಾಗಿದೆ , ಎಲ್ಲವನ್ನೂ  ನೋಡುತ್ತಾ ಸಾಗಿದೆವು ಇಲ್ಲಿನ ಅಚ್ಚುಕಟ್ಟು  ಗಮನ ಸೆಳೆಯಿತು .



ಕನಕದಾಸರ  ಜನ್ಮಸ್ಥಳ  ಬಾಡ


ಕನಕದಾಸರ  ನೆನಪಿಗಾಗಿ ಒಂದು ಸ್ಮಾರಕ


ಬಾಡ  ಗ್ರಾಮ  ಮೊದಲು  ಒಬ್ಬ ವಿಜಯ ನಗರದ  ಪ್ರತಿನಿಧಿ  ಅಥವಾ ಪಾಳಯಗಾರರ  ಆಡಳಿತಕ್ಕೆ ಒಳಪಟ್ಟ ಕೇಂದ್ರ ಸ್ಥಾನ  ಆಗಿತ್ತು, ಈ ಆಡಳಿತಕ್ಕೆ  ಸುಮಾರು ೮೦ ಹಳ್ಳಿಗಳು ಒಳಪಟ್ಟಿದ್ದವು ,  ಆ ಎಲ್ಲಾ ಹಳ್ಳಿಗಳ ಆಡಳಿತ  ನಡೆಸಲು ಇಲ್ಲಿ  ಮೂರುಸುತ್ತಿನ  ಒಂದು ಕೋಟೆ  ಕಟ್ಟಿ  ಆಡಳಿತ ನಡೆಸಿದ್ದವರೇ  ಬೀರೇಗೌಡ  ಎಂಬ ಸರದಾರರು , ಇವರ ಮಡದಿ ಬಿಚ್ಚಮ್ಮ ಅಥವಾ  ಬೆಚ್ಚಮ್ಮ   ಪತಿಗೆ ಆಡಳಿತದಲ್ಲಿ ಸಹಕಾರ ಕೊಡುತ್ತಿದ್ದರು , ಇವರಿಬ್ಬರ  ಅಪರೂಪದ  ಸಂತಾನವೇ  ಕನಕದಾಸರು ,  ಕನಕದಾಸರ ಮೂಲ ಹೆಸರು ತಿಮ್ಮಣ್ಣ ಅಥವಾ ತಿಮ್ಮಣ್ಣ ನಾಯಕ   ಎಂದು  ಕರೆಯಲಾಗಿತ್ತಂತೆ , ಹೌದು ಬಾಲಕ  ತಿಮ್ಮಣ್ಣ ಸಿರಿವಂತ ಕುಟುಂಬಕ್ಕೆ ಸೇರಿದವರು , ಮೊದಲೇ ರಾಜ ಪ್ರತಿನಿಧಿಯ  ಅರಮನೆ, ಹಾಗು ಕೋಟೆ ಇಲ್ಲಿ  ಆಡಳಿತ ವಿಚಾರಗಳು, ಸೈನ್ಯದ ಮೇಲ್ವಿಚಾರಣೆ  , ಅಪಾರ ಪ್ರಮಾಣದ  ಸಿರಿವಂತಿಕೆ , ಗೌರವ   ಇವೆಲ್ಲಾ ಬಾಲಕ ತಿಮ್ಮಣ್ಣ ನಿಗೆ ಬಳುವಳಿಯಾಗಿ  ಬಂದಿತ್ತು  ಆ ಕಾರಣ ಇವರು ರಾಜಕುಮಾರ ರಂತೆ ಬಾಲ್ಯ ಕಳೆದರು , ಜನನ  ಕಾಲ  ೧೪೮೯ ಎಂದು  ಊಹಿಸಲಾಗಿದ್ದರೂ  ಸರಿಯಾದ ಮಾಹಿತಿ ಲಭ್ಯವಿಲ್ಲ.  ಬಾಲಕ ತಿಮ್ಮಣ್ಣನ  ತಂದೆತಾಯಿಗಳು  ತಿರುಪತಿಯ  ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದ ಕಾರಣ ಈ ಮಗುವಿಗೆ ತಿಮ್ಮಣ್ಣ  ಎಂದು ನಾಮಕರಣ ಮಾಡುತ್ತಾರೆ . ತಿಮ್ಮಣ್ಣ  ಅಥವಾ  ಬಾಲ ಕನಕದಾಸ ರ ವಿಧ್ಯಾಭ್ಯಾಸ   ಬಾಡ  ಸಮೀಪದ ಸದಾಶಿವಪೇಟೆ ಎಂಬಲ್ಲಿದ್ದ ಶೈವ  ಮಠದಲ್ಲಿ  ಆಯಿತೆಂದು ತಿಳಿದುಬರುತ್ತದೆ, ಆ ನಂತರ  ವಿಜಯನಗರದ  ಕಾಲದ  "ಆನೆಗೊಂದಿ"   ಯಲ್ಲಿನ ತಿರುಮಲೆತಾತಾಚಾರ್ಯ  ಎಂಬುವರ  ಆಶ್ರಮದಲ್ಲಿ ಆಯಿತೆಂದು ಹೇಳುತ್ತಾರೆ . ತಂದೆಯ ಕಾಲಾನಂತರ  ಆಡಳಿತದ ಚುಕ್ಕಾಣಿ  ತಿಮ್ಮಣ್ಣನ  ಕೈಗೆ ಬರುತ್ತದೆ  , ಆಡಳಿತ ನಡೆಸುವ ಕಾಲದಲ್ಲಿ  ಒಮ್ಮೆ ಅಪಾರ ಪ್ರಮಾಣದ  ಚಿನ್ನ  ಲಭ್ಯವಾದ ಕಾರಣ  ತಿಮ್ಮಣ್ಣ  ಎಂಬ ಹೆಸರು  ಕನಕ  ಎಂದಾಗುತ್ತದೆ,  ವಿಜಯ ನಗರ  ಸಾಮ್ರಾಜ್ಯದ ಹಿತ ಕಾಯಲು  ಯುದ್ದ ಮಾಡಿ  ಯುದ್ದದಲ್ಲಿ ಗಾಯಗೊಂಡ  ಕನಕ  ಚೇತರಿಸಿಕೊಳ್ಳುವ ಹಂತದದಲ್ಲಿ   ತಾಯಿ,  ಹೆಂಡತಿ ಹಾಗು ಮಕ್ಕಳ   ಸಾವು ಜೀವನದಲ್ಲಿ  ವಿರಕ್ತಿ ಮೂಡಿಸುತ್ತದೆ ,  ಹಣ , ಐಶ್ವರ್ಯ ಎಲ್ಲವನ್ನೂ ತ್ಯಜಿಸಿ   ವಿಷ್ಣುವಿನ ಆರಾಧಕನಾಗಿ  ದಾಸ ನಾಗಿ  ಭಕ್ತಿ ಪಂಥದ  ಮೂಲಕ ವಿಷ್ಣುವನ್ನು ಕಾಣಲು  ಕನಕದಾಸರಾಗಿ  ಲೋಕ ಸಂಚಾರ ಮಾಡುತ್ತಾ   ಅಮರರಾಗುತ್ತಾರೆ, ಕನಕದಾಸರ  ಬಾಳಿನಲ್ಲಿ  ಬಹು ಮುಖ್ಯ ಪಾತ್ರವಹಿಸಿದ  ಗ್ರಾಮವೇ  ಈ  "ಬಾಡ " ಎಂಬ ಐತಿಹಾಸಿಕ ಸ್ಥಳ .


ಬಾಡ ದಲ್ಲಿ ಕಂಡುಬರುವ  ಅರಮನೆಯ ಅವಶೇಷಗಳು



ಅರಮನೆಯ  ಸನಿಹ ಕಂಡುಬರುವ  ಪುರಾತನ ಕೊಳ



ನಾನೂ ಪ್ರಕಾಶ್ ಹೆಗ್ಡೆ  ಅಲ್ಲೇ ಇದ್ದ ಸ್ಥಳೀಯ  ವ್ಯಕ್ತಿಯೊಬ್ಬರ ಮೂಲಕ  ಬಾಡ  ದಲ್ಲಿ ಸುತ್ತಾಡಿದೆವು,   ನಮಗೆ ಒಂದು ಅರಮನೆಯ ಅವಶೇಷ ಗೋಚರಿಸಿತು, ಹತ್ತಿರ  ಹೋಗಿ ಗಮನಿಸಿದರೆ  ಆಕಾಲದಲ್ಲಿ  ಅರಮನೆ ಕಟ್ಟಲು ಉಪಯೋಗಿಸಿದ್ದ  ಗಾರೆ  ಗಚ್ಚು , ಬಂಡೆಗಳ  ಬಳಕೆ, ವಿನ್ಯಾಸ , ಮುಂತಾದ ವಿಚಾರಗಳು ತಿಳಿದುಬಂದವು , ಸನಿಹದಲ್ಲಿ ಒಂದು ದೊಡ್ಡ ವೃತ್ತಾಕಾರದ  ಕೊಳ ಕಾಣಿಸಿತು ಇಲ್ಲಿಯೂ ಸಹ  ವರ್ತುಲಾಕಾರವಾಗಿ ಕೊಳವನ್ನು  ನಿರ್ಮಿಸುವಾಗ  ಬಂಡೆಗಳನ್ನುಅದಕ್ಕೆ ಅನುಗುಣವಾಗಿ   ಅಂದಗೆಡದಂತೆ  ಬಳಸಿರುವುದು  ಕಂಡು ಬಂತು,  ಹಾಗೆ ನೋಡುತ್ತಾ  ಅಲೆದಾಡಿದ್ದ ನಮಗೆ ನಮ್ಮ ಜೊತೆ ಬಂದಿದ್ದ ಸ್ಥಳಿಯರು   ಸಾರ್ ಬನ್ನಿ ಇಲ್ಲಿ ಒಂದು ಪುರಾತನ  ದೇವಾಲಯ ಇದೆ ಎಂದು ಹೇಳಿ  ಅಲ್ಲಿಗೆ ಕರೆದುಕೊಂಡು ಹೋದರು


.
ಪುರಾತನ ವಿಷ್ಣು ದೇಗುಲ  ಇದ್ದ ಬಗ್ಗೆ ಸಾಕ್ಷಿ

ದೇಗುಲದಲ್ಲಿ  ಅಂದು ಉಪಯೋಗಿಸಿದ್ದ  ಸುಂದರ  ಕಲ್ಲಿನ ಕೆತ್ತನೆಯ ಕಂಬದ  ಅವಶೇಷಗಳು

ಈ  ಸಾಕ್ಷಿಯ  ಮೂಲಕ  ಹೇಳೋದಾದ್ರೆ  ಬಾಡ ದಲ್ಲಿ  ಮೂರು ಸುತ್ತಿನ ಕೋಟೆ ಇತ್ತು .


 ಸ್ಥಳೀಯರ  ಹೇಳಿಕೆಯಂತೆ  ಹಾಲಿ ಕಾಗಿನೆಲೆಯಲ್ಲಿರುವ  ಕೇಶವನ   ಮೂರ್ತಿ  ರಂಗನಾಥ  ಎಂಬ ಹೆಸರಿನಲ್ಲಿ  ಬಾಡ  ಗ್ರಾಮದ  ರಂಗನಾಥ ದೇವಾಲಯದಲ್ಲಿ   ಇದ್ದಿತೆಂದು  ಹೇಳುತ್ತಾರೆ, ಅದಕ್ಕೆ ಪುಷ್ಟಿಕೊಡುವಂತೆ  ಅಲ್ಲಿ ಒಂದು ಪುರಾತನ  ವಿಷ್ಣು ದೇವಾಲಯ ಇದ್ದ ಬಗ್ಗೆ ಇಂದಿಗೂ  ಸಾಕ್ಷಿದೊರಕುತ್ತದೆ .  ದೇಗುಲದ ಅವಶೇಷಗಳು  ಚೆಲ್ಲಾಪಿಲ್ಲಿಯಾಗಿ    ಅಲ್ಲಲ್ಲಿ ಅಲ್ಲಲ್ಲಿ ಬಿದ್ದಿದ್ದು  , ಕನಕದಾಸರ ಹಿಂದಿನ ವೈಭವದ  ಕಥೆಯನ್ನು  ನೆನಪಿಸುತ್ತವೆ ,  ಅಲ್ಲೇ ಕಂಡುಬರುವ  ಮತ್ತೊಂದು ಚಿತ್ರವೂ ಒಗಟಾಗಿ  ಕಾಡಿ  ಬಾಡ  ಗ್ರಾಮದಲ್ಲಿ ಮೂರು ಸುತ್ತಿನ  ಕೋಟೆ ಇತ್ತು ಎನ್ನುತ್ತದೆ . ಈ ಊರು ಅವನತಿ ಹೊಂದುವುದನ್ನು ಅರಿತಿದ್ದ  ಕನಕದಾಸರು  ಇಲ್ಲಿನ ರಂಗನಾಥ ಮೂರ್ತಿಯನ್ನು  ಕಾಗಿನೆಲೆಗೆ ಸಾಗಿಸಿ  ಅಲ್ಲೇ ನೆಲೆ ನಿಂತರೆಂದು  ಸ್ಥಳೀಯರು  ಹೇಳುತ್ತಾರೆ .  ಇವುಗಳನ್ನು ಪರಿಶೀಲಿಸೋಣ ಎಂದರೆ   ಹೆಚ್ಚಿನ ಮಾಹಿತಿ  ಲಭ್ಯವಾಗುತ್ತಿಲ್ಲಾ, ವಿಕಿಪೀಡಿಯದಲ್ಲಿಯೂ  ಹೆಚ್ಚು ಮಾಹಿತಿ ಇಲ್ಲಾ,  ಗೆಜೆತೀರ್ ಗಳು ಮೌನವಾಗಿವೆ  . ಸಧ್ಯಕ್ಕೆ  ಸ್ಥಳೀಯರ ನಂಬಿಕೆಯೇ  ಇತಿಹಾಸವಾಗಿದೆ ಇಲ್ಲಿ.




ಕನಕದಾಸರ ಗದ್ದಿಗೆ ಇರುವ ಸ್ಥಳ


 ಹಾಗೆ ಮುನ್ನಡೆದ ನಾವು  ಕನಕದಾಸರ ಗದ್ದಿಗೆ  ಇದೆಯೆಂದು ತಿಳಿದು ನೋಡಲು ಹೋದೆವು  ಅಲ್ಲಿಗೆ ಹೋದರೆ ಬಹಳಷ್ಟು  ಜನ ದೂರದ ಊರಿನಿಂದ  ಕನಕದಾಸರ ಗದ್ದಿಗೆ ನೋಡಲು  ಬಂದಿದ್ದರು, ಆದರೆ   ಸುಮಾರು ಒಂದು ತಾಸು ಕಳೆದರೂ  ಬಾಗಿಲು ತೆಗೆದು ಕನಕದಾಸರ ಗದ್ದಿಗೆ ದರ್ಶನ ಮಾಡಿಸಲು ಯಾರೂ ಬರಲಿಲ್ಲ ,  ಅಲ್ಲೇ ಅಡ್ಡಾಡುತ್ತಾ ಇದ್ದ ನಮಗೆ ಸನಿಹದಲ್ಲೇ ಮತ್ತಷ್ಟು ಪುರಾತನ ಅವಶೇಷಗಳು ಗೋಚರಿಸಿದವು




ಕನಕದಾಸರ ಗದ್ದಿಗೆ ಸಮೀಪ ಇರುವ ದೇಗುಲದ ಒಳ ನೋಟ




ಬಾಡ  ಗ್ರಾಮದಲ್ಲಿ  ಕಂಡುಬಂದ  ಶಾಸನ



ಇತಿಹಾಸದ  ಘಟನೆ ನೆನಪಿಸುವ ವೀರಗಲ್ಲುಗಳು






 ಹೌದು ಕನಕದಾಸರ  ಗದ್ದಿಗೆ  ಸಮೀಪ    ಬಿಳೀ ಬಣ್ಣದ ಒಂದು ಸಣ್ಣ ಮನೆ  ಗಮನ ಸೆಳೆಯಿತು ಹತ್ತಿರ ಹೋಗಿ ನೋಡಲು ನಮಗೆ  ಮತ್ತಷ್ಟು ಅಚ್ಚರಿತರುವ  ವಿವರಗಳು  ಕಂಡವು  , ಆ ಬಿಳಿ ಮನೆ ಒಂದು ಹಳೆ ಶಿವನ ದೇಗುಲವಾಗಿದ್ದು , ಒಳಗಡೆ ಪುರಾತನ  ಶಿವಲಿಂಗ , ಬಸವ ಹಾಗು ಮತ್ತೆ ಕೆಲವು ವಿಗ್ರಹಗಳನ್ನು ಕಂಡೆವು,  ದೇಗುಲದ ಹೊರಗೆ ಬಂದರೆ  ಶಾಸನ ಕಲ್ಲು  ಕಾಣಿಸಿತು , ಹತ್ತಿರ ಹೋಗಿ ನೋಡಲು  ಶಾಸನ  ಕಾಲನ ಹೊಡೆತಕ್ಕೆ ಸಿಕ್ಕಿ  ಮಸುಕಾಗಿ ಅಳಿಸಿ ಹೋಗಿತ್ತು , ಅಸ್ಪಷ್ಟ ವಾಗಿಯೂ ಓದಲು ಆಗಲಿಲ್ಲ ಇರಲಿ ಎಂದು ವಿವಿಧ ಕೋನಗಳಿಂದ ಇದರ ಚಿತ್ರ   ಸೆರೆಹಿದಿದೆ , ನಂತರ ಆ ಶಾಸನದ ಕಲ್ಲಿನಲ್ಲಿ ಕಂಡ  ಶಿವಲಿಂಗ , ಹಸುಕರು,  ಸೂರ್ಯ ಚಂದ್ರ  ಇವುಗಳು  ಯಾವುದೋ ಸಂದೇಶ ನೀಡುತ್ತಿವೆ ಎನ್ನೋದು ಸ್ಪಷ್ಟವಾಗಿತ್ತು ಆದರೆ  ಈ ಶಾಸನ ಸಂರಕ್ಷಣೆ ಆಗದೆ ಇದರ  ವಿವರ ಸಂಶೋಧನೆ ಆಗದೆ  ಜಗತ್ತಿಗೆ ವಿಚಾರ ತಿಳಿಯದಾಗಿದೆ, ದಕ್ಷಿಣ ಕರ್ನಾಟಕದ  ಭಾಗದ ಹೆಚ್ಚು ಶಾಸನಗಳನ್ನು  ಬಿ .ಎಲ್ . ರೈಸ್  ರವರು  ಸಂಶೋದಿಸಿ  ಎಪಿಗ್ರಾಫಿಯಾ  ಸಂಚಿಕೆ ತಂದು  ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ , ಆದರೆ  ಇದೆ ರೀತಿ  ಉತ್ತರ ಭಾಗದ  ಕಡೆ  ಶಾಸನಗಳ  ಸಂರಕ್ಷಣೆ , ಸಂಶೋಧನೆ  ಹೆಚ್ಚು ಆಗಿಲ್ಲದಿರುವುದು ಕಂಡು ಬರುತ್ತದೆ . ಹಾಗಾಗಿ  ಇಂತಹ ಪ್ರದೇಶಗಳಲ್ಲಿ ಕಂಡು ಬರುವ  ಶಾಸನಗಳ  ಬಗ್ಗೆ ಮಾಹಿತಿ ಶೂನ್ಯವಾಗಿದೆ .


ಪಾಳು ಬಿದ್ದ ಪುರಾತನ  ದೇಗುಲ


ನಿರಾಸೆಯಿಂದ  ಬರಲು ಅಣಿಯಾಗುತ್ತಿದ್ದ ನಮಗೆ  ಪಾಳು  ಬಿದ್ದ ಮತ್ತೊಂದು ದೇಗುಲದ ದರ್ಶನ ಆಯ್ತು , ದೇಗುಲದ ತಲೆಯಮೇಲೆ ಮಣ್ಣಿನ ಗುಡ್ಡೆ, ಸುತ್ತಲೂ  ಗಿಡ ಗಂಟಿಗಳ  ಅಲಂಕಾರ, ಬಿರುಕುಬಿಟ್ಟ ಗೋಡೆಗಳು,  ಮುಕ್ಕಾದ  ಕೆತ್ತನೆಗಳು ಎಲ್ಲವೂ ರೋಧಿಸುತ್ತಾ   ನಮ್ಮಗಳ   ಇತಿಹಾಸ ಪ್ರಜ್ಞೆಯನ್ನು ಶಪಿಸುತ್ತಾ   ಅಸಹಾಯಕತೆಯಿಂದ  ಅಳಿವಿನತ್ತ ಮುಖಮಾಡಿ ನಿಂತಿದ್ದವು ,



"ನೀ ಮಾಯೆಯೊಳಗೋ  ಮಾಯೇಯೋಳು ನೀನೋ "



ಇತ್ತಾ ಬಾಡ ದಲ್ಲಿನ  ವೃತ್ತದಲ್ಲಿ  ಕುಳಿತಿದ್ದ  ಕನಕದಾಸರ  ಪ್ರತಿಮೆ   "ನೀ ಮಾಯೆಯೊಳಗೋ  ಮಾಯೇಯೋಳು ನೀನೋ " ಎಂದು ಹಾಡುವ ಬದಲಾಗಿ   "ನೀ ಅಜ್ಞಾನ ದೊಳಗೋ   ಅಜ್ಞಾನ ದೊಳು  ನೀನೋ"   ಎಂದು ಹಾಡಿದಂತೆ  ಅನ್ನಿಸಿ  ಹೆಚ್ಚಿನ ಸಮಯ ವ್ಯರ್ಥ ಮಾಡಬಾರದೆಂದು   ಕಾಗಿನೆಲೆ ನೋಡಲು  ಹಾವೇರಿಯ ಕಡೆ  ಪಯಣ  ಮುಂದುವರೆಸಿದೆವು , ಹೊಟ್ಟೆ ಚುರುಗುಟ್ಟುತ್ತಿತ್ತು , ಕಾರು ಹಾವೇರಿ ಪ್ರವೆಶಿಸುತ್ತಿತ್ತು.







7 comments:

Harini Narayan said...

ಧನ್ಯೋಸ್ಮಿ ! ... ನಮ್ಮ ಕನಕದಾಸರ ಹುಟ್ಟೂರು ಬಾಡ ಗ್ರಾಮದ ಪರಿಚಯ ಮಾಡಿಸಿದಿರಿ. ದಾರಿ ಯಾವುದಯ್ಯಾ ವೈಕುಂಠಕೆ ? ಎನ್ನದೆ ಕಾಗಿನೆಲೆಗೆ ಎಂದು ಕೇಳಿದಿರಲ್ಲಾ ಸಂತೋಷ :)

ಸುಬ್ರಮಣ್ಯ said...

ಚಂದದ ವಿವರಣೆ. ತಕ್ಕ ಚಿತ್ರಗಳು.

Srikanth Manjunath said...

ಬದಲಾವಣೆ ಜಗದ ನಿಯಮ ಎನ್ನುತ್ತಾರೆ. ಹಳೆಯದು ಹೋಗಬೇಕು ಹೊಸದು ನುಗ್ಗಿ ಬರಬೇಕು.. ಆದರೆ ಇವುಗಳ ಮಧ್ಯೆ ಕಾಲನ ದಾಳಿ, ಹಾಗೂ ಮನುಜನ ನಿರ್ಲಕ್ಷತೆಗೆ ಉತ್ತಮ ಉದಾಹರಣೆಗೆ ಈ ಲೇಖನದ ಚಿತ್ರಗಳು ಮತ್ತು ಮಾಹಿತಿಗಳು ಬೆಂಬಲ ನೀಡುತ್ತವೆ.
ಮನುಜನ ದಾಳಿಯಿಂದ ಸಾಕಪ್ಪ ಎಂದುಕೊಂಡು ಓದಲು ಸಿದ್ಧವಾಗಿರುವಂತೆ ನಿಂತಿದೆ ಮರ.. ಇಲ್ಲಿಂದ ಶುರುವಾದ ಲೇಖನ.. ಭಿನ್ನ ವಿಭಿನ್ನ ದೃಶ್ಯಗಳನ್ನು, ಮಾಹಿತಿಗಳನ್ನು ಪೋಣಿಸಿಕೊಂಡು ನಿಂತಿರುವ ರೀತಿ ನಿಮಗೆ ಇತಿಹಾಸದ ಬಗ್ಗೆ ಇರುವ ಹಸಿವು, ಪ್ರೀತಿ ಅರಿವಾಗುತ್ತದೆ.
ಪ್ರತಿ ಮಾಹಿತಿಗಳನ್ನು ಅಪ್ಪಿ ಕೆದಕಿ ತಾಳೆ ಹಾಕಿ ಕೊಟ್ಟಿರುವ ಈ ಲೇಖನ ಪೂರ್ಣ ಮಾಹಿತಿಗೆ ಸಲಾಂ ಸರ್
ಉತ್ತಮ ಲೇಖನ ಅತ್ಯುತ್ತಮ ಚಿತ್ರಗಳು ಉಪಯುಕ್ತ ಮಾಹಿತಿ ನಮಗೆ ಕೃಷ್ಣನನ್ನು ಕಿಂಡಿಯಲ್ಲಿ ಕಂಡು ಬೆರಗಾದ ಕನಕದಾಸರಂತೆ ನಾವು ಧನ್ಯರಾಗಿದ್ದೇವೆ..
ಹಾಟ್ಸ್ ಸರ್ಜಿ

ಮನಸಿನಮನೆಯವನು said...

ಚಂದದ ಮಾಹಿತಿಪೂರ್ಣ ಲೇಖನ.. ಇಂತಹ ಹಲವಾರು ಅವಶೇಷಗಳ ಬಗ್ಗೆ ನಮಗೆ ಸರಿಯಾದ ಮಾಹಿತಿ ದೊರೆಯುವುದಿಲ್ಲವಲ್ಲ ಎಂಬ ಚಿಂತೆ ಇದೆ..

Badarinath Palavalli said...

ಬಾಡಾದ ಸ್ಮಾರಕದ ಬಗ್ಗೆ ನಮ್ಮ ವಾಹಿನಿಯು ಸವಿವರವಾದ ಒಂದು ಗಂಟೆಯ ಕಾರ್ಯಕ್ರಮ ಮಾಡಿದಂತಹ ನೆನಪು.

ಪಾಳು ಬಿದ್ದ ಪುರಾತನ ದೇಗುಲವು ನಮ್ಮೂರ ಸುತ್ತಮುತ್ತಲ ಚಿತ್ರಗಳನ್ನು ನೆನಪಿಗೆ ತಂದವು.

ಚಿತ್ರಗಳು ಬಹಳ ಚೆನ್ನಾಗಿವೆ.

Ittigecement said...

ಬಾಲಣ್ಣಾ...
ಮಹಾನ್ ಚೇತನ ಕನಕದಾಸರ ಬಗೆಗೆ ವಿವರವಾಗಿ ಗೊತ್ತಾಗಿದ್ದು ನಿಮ್ಮಿಂದಾಗಿ...
ನಿಮ್ಮ ಜೊತೆ ಪ್ರಯಾಣ ಮಾಡಿದ್ದಕ್ಕಾಗಿ...
ಕನಕದಾಸರ ಬದುಕು.. ಅವರ ಅನುಭವಾಮೃತ ನಿಜಕ್ಕೂ ಖುಷಿ ಕೊಟ್ಟಿತು...

ತುಂಬಾ ತುಂಬಾ .. ಸಿಕ್ಕಾಪಟ್ಟೆ ಧನ್ಯವಾದಗಳು ಬಾಲಣ್ಣಾ..

Unknown said...

ಮಾನ್ಯರೇ, ಉತ್ತಮ ಚಿತ್ರಗಳ ಸಮೇತ ಚಾರಿತ್ರಿಕವಾಗಿ ಮಾಹಿತಿ ನೀಡಿದ್ದೀರಿ. ನೀವು ತಿಳಿಸಿದಂತೆ ಶಾಸನಗಳನ್ನೂ ಮತ್ತು ವೀರಗಲ್ಲುಗಳನ್ನು ಸಂಬಂದಿಸಿದ ಇಲಾಕೆಯಿಂದ ರಕ್ಷಿಸುವ ಕೆಲಸವಾಗಬೇಕು. ಇದ್ರಲ್ಲಿ ಸ್ಥಳೀಯರ ಪಾತ್ರವೂ ಮುಖ್ಯ. ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು.