Friday, August 29, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......07 ಇಕ್ಕೆರಿಯ ಮಡಿಲಲ್ಲಿ ಇತಿಹಾಸದ ಸಿಂಚನ

ಇಕ್ಕೆರಿಯ  ಸುಂದರ ಬಸವ 


ಕಳೆದ ಸಂಚಿಕೆಯಲ್ಲಿ  ಇಕ್ಕೆರಿಯ  ಬಸವನ ಮೂಗಿಗೆ ಕೈ ಬೆರಳನ್ನು  ಇಟ್ಟು , ಮಕ್ಕಳಂತೆ  ತುಂಟಾಟ ಮಾಡಿದ್ದ  ನಾವು , ದೇವಾಲಯದ ಆವರಣದಿಂದ  ಸ್ವಲ್ಪ ಮುಂದೆ ನಡೆದೆವು, ದೇವಾಲಯದ ಒಳಗೆ ಪ್ರವೇಶ ಮಾಡಿದೆವು . ನಮ್ಮನ್ನು ನೋಡುತ್ತಲೇ ನಗು ಮುಖದಿಂದ    ಸ್ವಾಗತಿಸಿದ  ಅರ್ಚಕರನ್ನು ಮಾತನಾಡಿಸಿ  ಅವರು   ದೇವಾಲಯ ಪ್ರವೇಶ ಮಾಡುವ  ಸನ್ನಿವೇಶದ  ಚಿತ್ರ ತೆಗೆಯುವ  ಆಸೆಯಿಂದ  ಅವರಿಗೆ ನಮ್ಮ ಕೋರಿಕೆಯನ್ನು ತಿಳಿಸಿದಾಗ  , ಬಹಳ ಸಂತೋಷದಿಂದ  ನಮ್ಮ  ಕೋರಿಕೆಯಂತೆ   ದೇವಾಲಯವನ್ನು  ಪ್ರವೇಶ ಮಾಡಿ  ನಾವು ಫೋಟೋ ತೆಗೆಯಲು ಅನುವು ಮಾಡಿಕೊಟ್ಟರು .



ಸ್ವಾಮಿಯ ಸೇವೆ ಮಾಡಲು  ನಗು ಮುಖದಿ ಬಂದವರು 


ನಗು ಮುಖದಿಂದ  ಉತ್ಸಾಹದಿಂದ  ತಮ್ಮ ಕಾರ್ಯ ಮಾಡುವ  ಅರ್ಚಕರ ಬಗ್ಗೆ ಗೌರವ ಮೂಡಿತು . ಪರಸ್ಪರ ಪರಿಚಯ,  ಮಾತುಕತೆ ನಂತರ   ದೇವಾಲಯದ  ಬಗ್ಗೆ ತಮಗೆ ತಿಳಿದ ವಿವರಗಳನ್ನು  ನಮ್ಮೊಡನೆ ಹಂಚಿಕೊಂಡರು . ದೇವಾಲಯದ  ವಿವರಗಳನ್ನು ಅವರು ಹೇಳುತ್ತಿದ್ದರೆ   ಕೇಳಲು ಬಹಳ ಸಂತೋಷ ಆಗುತ್ತಿತ್ತು . ಬನ್ನಿ ಸ್ವಾಮಿಯ ದರ್ಶನ ಮಾಡೋಣ ಅಂತಾ ಕರೆದು ಕೊಂದು ಹೋಗಿ  ನಮ್ಮಗಳ ಹೆಸರನ್ನು ಹೇಳಿ ಸಂಕಲ್ಪಮಾಡಿ  ಅರ್ಚನೆ ಮಾಡಿ   ಮಂಗಳಾರತಿ  ಬೆಳಗಿ ಶಿವ ಲಿಂಗದ  ದರ್ಶನ ಮಾಡಿಸಿದರು .



ಅಘೋರೆಶ್ವರ ಸನ್ನಿಧಿಯಲ್ಲಿ  ಮಂಗಳಾರತಿ 

ಅರೆ ಇದೇನು....?  ಈ ಭವ್ಯ ದೇಗುಲಕ್ಕೆ ಇತಿಹಾಸ ಇರಬೇಕಲ್ಲಾ  ಎಂಬ ಪ್ರಶ್ನೆ  ಮನದಲ್ಲಿ  ಮೂಡಿತು . ಬನ್ನಿ ಇಕ್ಕೆರಿಯ ಇತಿಹಾಸ ತಿಳಿಯೋಣ

ಐತಿಹಾಸಿಕ ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ  ಸೇರಿದೆ . ಸಾಗರದಿಂದ ಕೇವಲ  ಮೂರು  ಕಿಲೋ ಮೀಟರ್  ದೂರದಲ್ಲಿದೆ ಇಕ್ಕೆರಿ. ಅರಳಿ ಕೊಪ್ಪ ಗ್ರಾಮದ ಉಪಗ್ರಾಮ  ಈ ಇಕ್ಕೇರಿ .


"ಇಕ್ಕೇರಿ"   ಅಂದರೆ  ಎರಡು ಕೇರಿ  ಅಥವಾ ಎರಡು ಬೀದಿ  ಎಂದು ಅರ್ಥ , ಬಹುಷಃ ಆಕಾಲದಲ್ಲಿ  ಈ ಊರಿನಲ್ಲಿ  ಎರಡು ಬೀದಿಗಳಲ್ಲಿ   ಮಾತ್ರ   ಜನವಸತಿ ಇತ್ತೆಂದು ಕಾಣುತ್ತದೆ  ಅದಕ್ಕಾಗಿ ಈ ಊರನ್ನು ಇಕ್ಕೇರಿ ಎಂದು ಕರೆಯಲಾಗಿದೆ. ಕ್ರಿ.ಶ . ೧೫೧೨ ರಲ್ಲಿ ಕೆಳದಿ ಅರಸರು ಇಕ್ಕೇರಿಯನ್ನು ರಾಜಧಾನಿಯನ್ನಾಗಿ  ಘೋಷಿಸಿಕೊಂಡು  ತಮ್ಮ ಆಡಳಿತ ವನ್ನು  ಕೆಳದಿ ಯಿಂದ  ಇಲ್ಲಿಗೆ ವರ್ಗಾಯಿಸಿಕೊಳ್ಳುತ್ತಾರೆ . ಹಾಗಾಗಿ ಈ ಊರು ಮತ್ತಷ್ಟು ಪ್ರಖ್ಯಾತಿ  ಪಡೆಯುತ್ತದೆ . ಜೊತೆಗೆ ಕೆಳದಿ ಅರಸರು ಇಲ್ಲಿ ಒಂದು ಟಂಕ ಸಾಲೆಯನ್ನು  ಸ್ಥಾಪಿಸಿ  ಇಲ್ಲಿ  ಇಕ್ಕ್ರಿ ಹೆಸರಿನ "ಪಗೋಡ ಹಾಗು  ಫಣಮ್ಸ್"[ ಅಂದಿನಕಾಲದ  ಹಣದ ಹೆಸರು ] ನಾಣ್ಯಗಳನ್ನು ಇಲ್ಲಿ ತಯಾರು ಮಾಡಲಾಗುತ್ತದೆ . ಇಂದು ಈ  ಟಂಕ ಸಾಲೆ ಇಲ್ಲವಾದರೂ  ಅದರ ಅವಶೇಷಗಳನ್ನು  ಇಂದೂ ಕಾಣ ಬಹುದೆಂದು ಹೇಳಲಾಗುತ್ತದೆ , ನಮಗೆ ಅದನ್ನು ನೋಡಲು ಆಗಲಿಲ್ಲ. ನಂತರ ೧೬೩೯ ರಲ್ಲಿ ಕೆಳದಿ ಅರಸರು ತಮ್ಮ ರಾಜಧಾನಿಯನ್ನು ಇಲ್ಲಿಂದ  ಬಿದನೂರಿಗೆ  ಮತ್ತೊಮ್ಮೆ  ಬದಲಾವಣೆ ಮಾಡುತ್ತಾರೆ . ಆದರೆ ಇಕ್ಕೇರಿ ತನ್ನ ಗತ ವೈಭವದ  ಗತ್ತನ್ನು ಬಿಟ್ಟುಕೊಡದೆ  ಅಘೋರೆಶ್ವರ  ದೇವಾಲಯದ  ಮಹತ್ವ ಸಾರುತ್ತಾ ನಿಂತಿದೆ .



ಅಘೋರೆಶ್ವರ  ದೇಗುಲ ದರ್ಶನ 



ಅಘೋರೆಶ್ವರ ದೇವಾಲಯ  ಬಹಳ ವಿಸ್ತಾರವಾದ ದೇವಾಲಯವಾಗಿದ್ದು, ೧೬ ನೆ ಶತಮಾನದಲ್ಲಿ ವಿಜಯನಗರ, ಹೊಯ್ಸಳ  ವಾಸ್ತು ಶೈಲಿಗಳ  ದರ್ಶನ ನಿಮಗೆ ಆಗುತ್ತದೆ . ದೇವಾಲಯದ ಮುಂಬಾಗದಲ್ಲಿ  ಕೆಳದಿ ಅರಸರುಗಳ ಪ್ರತಿಮೆಗಳು ಇದ್ದು  ಕೆಳದಿ ಇಕ್ಕೆರಿಯ ಇತಿಹಾಸ ನೆನಪು ಮಾಡಿಕೊಡುತ್ತವೆ . ದೇವಾಲಯ ಉತ್ತರ ಮುಖಿಯಾಗಿದೆ . ಸುಂದವಾದ ಚಾವಣಿ,  ಗರ್ಭ ಗೃಹ , ಸುಖನಾಸಿ ಹಾಗು ದೇವಾಲಯದ ಹೊರ ಆವರಣದಲ್ಲಿ  ಸುಂದವಾಗಿ  ಕಲೆ ಅರಳಿದೆ . ಕಲ್ಲಿನಲ್ಲಿ ಅರಳಿದ ಸುಂದರ ಕೆತ್ತನೆಗಳು ಕಣ್ಮನ   ತಣಿಸುತ್ತವೆ .



ದೇವಾಲಯ ಚಾವಣಿಯಲ್ಲಿ ಅರಳಿದ  ಕಲೆ 


ಈ ದೇವಾಲಯಕ್ಕೆ ನವರಂಗ ಇರುವುದಿಲ್ಲ. ದೇವಾಲಯದ ಮುಂದೆ ಸುಂದರ  ನಂದಿ ವಿಗ್ರಹವನ್ನು  ಮಂಟಪದಲ್ಲಿ  ಸ್ಥಾಪಿಸಲಾಗಿದೆ . ಇನ್ನು ಪಾರ್ವತಿ ದೇಗುಲಕ್ಕೆ  ಗರ್ಭ ಗೃಹ , ಸುಖನಾಸಿ,  ಕಂಬಗಳು ಇಲ್ಲದ  ಪುಟ್ಟದಾದ ನವರಂಗ  ಕಾಣ ಸಿಗುತ್ತದೆ . ಇಲ್ಲಿನ ಪ್ರಕೃತಿ ಹಾಗು ಹವಾಮಾನಕ್ಕೆ ತಕ್ಕಂತೆ  ದೇವಾಲಯ ರಚನೆ ಆಗಿದೆ , ಈ ಭಾಗದಲ್ಲಿ ಹೆಚ್ಚಿನ ಮಳೆ ಆಗುವ ಕಾರಣ   ಎಂತಹ ಭಾರಿ ಮಳೆ ಬಂದರೂ  ಅದನ್ನು ಎದುರಿಸಿ ಹಲವು ಶತಮಾನಗಳಿಂದ  ಹೆಮ್ಮೆಯಿಂದ ನಿಂತಿದೆ  ಈ ದೇವಾಲಯ, ಅಂದಿನ ತಾಂತ್ರಿಕತೆಯ  ವಿಶೇಷವನ್ನು  ನಾವಿಲ್ಲಿ ಕಾಣಬಹುದು .



ಇಕ್ಕೆರಿಯಲ್ಲಿ ದರ್ಶನ ವಿತ್ತ  ಷಣ್ಮುಖ 

ಇಕ್ಕೆರಿಯಲ್ಲಿ ಕಂಡ ಸುಂದರ ಗಣಪ 


ದೇವಾಲಯದಲ್ಲಿ  ವಿಶೇಷವಾಗಿ ನಿಮಗೆ ಕಾಣಸಿಗುವುದು  ಅಘೋರೆಶ್ವರ  ಲಿಂಗ [ ಹಿಂದೊಮ್ಮೆ ಇಲ್ಲಿ ಅಘೋರೆಶ್ವರನ  ಬೃಹತ್  ಮೂರ್ತಿಯನ್ನು  ಪೂಜಿಸಲಾಗುತ್ತಿತ್ತೆಂದು  ಹಾಲಿ ಈ ಮೂರ್ತಿ ಇಲ್ಲವೆಂದು ಹೇಳಲಾಗುತ್ತಿದೆ , ಬಿಜಾಪುರ ಸುಲ್ತಾನ್  ಇಲ್ಲಿ ಆಕ್ರಮಣ ಮಾಡಿದಾಗ  ಅಘೋರೆಶ್ವರ ಮೂರ್ತಿ ಭಗ್ನವಾಯಿತೆಂದು ಹೇಳುತ್ತಾರೆ  ] , ಭೈರವ, ಮಹಿಷಮರ್ಧಿನಿ ,  ಷಣ್ಮುಖ , ಹಾಗು ಗಣಪತಿಯ  ಮೂರ್ತಿಗಳನ್ನು  ಕಾಣಬಹುದು.



ಶಿಲ್ಪಿಯ ಕಲ್ಪನೆ ಗರಿ ಬಿಚ್ಚಿದೆ ಇಲ್ಲಿ 




ಕಲೆಯ  ಬಲೆ  ಸುಂದರವಾಗಿ ಅರಳಿದೆ ಇಲ್ಲಿ 



ಶಿಲೆಯಲ್ಲಿ ಅರಳಿದ ಪುಷ್ಪ  ಕ್ಯಾಮರ ನೋಡಿ ನಕ್ಕಾಗ 


ಅದ್ಭತ  ಕಲಾ ಲೋಕ ಇಲ್ಲಿದೆ 


ದೇವಾಲಯವನ್ನು  ನೋಡುತ್ತಾ  ಸಾಗಿದೆ ನನ್ನ ಕ್ಯಾಮರ ದೇಗುಲದ ಸುಂದರ ಕೆತ್ತನೆಗಳನ್ನು ತನ್ನ ಒಡಲೊಳಗೆ ತುಂಬಿ ಕೊಳ್ಳುತ್ತಿತ್ತು , ದೇವಾಲಯದ ಸುಂದರ ಕೆತ್ತನೆಗಳು  ಮನ ಸೂರೆಗೊಂಡವು ಕತ್ತಲ ಇತಿಹಾಸದಲ್ಲಿ ಅಡಗಿ ಕುಳಿತ  ಈ ಸುಂದರ  ಕಲೆಯನ್ನು ಆಸ್ವಾದಿಸಲು  ಯಾವ ಜನ್ಮದ ಪುಣ್ಯ ಇತ್ತೋ  ಕಾಣೆ ಅದು ಇಲ್ಲಿ ನನಸಾಗಿತ್ತು,   ಬಾಲಣ್ಣ  ಹೊರಡೋಣ ಎಂದ ಪ್ರಕಾಶ್ ಹೆಗ್ಡೆ ದ್ವನಿ ಕೇಳಿ ವಾಸ್ತವಕ್ಕೆ ಬಂದೆ  .  ಹೊರಡುವ ಮೊದಲು  ಅಲ್ಲಿ ಕಣ್ಣಿಗೆ ಬಿದ್ದ  ಕಿಟಕಿಯ ಚಿತ್ರ ತೆಗೆದೇ  ಕತ್ತಲಿನಲ್ಲಿ ಕಿಟಕಿಯ ಮೂಲಕ  ಬರುವ ಬೆಳಕು ಚಿತ್ತಾರ ಮೂಡಿಸಿತ್ತು, ದೇವಾಲಯಕ್ಕೆ  ಬೆಳಕಿನ ರಂಗೋಲಿ ಹಾಕಲು  ಇಂತಹ  ಕಿಟಕಿಗಳನ್ನು ನಿರ್ಮಿಸಲಾಗಿದೆ ಇಲ್ಲಿ,  ಸಂತೃಪ್ತ ಮನಸಿನಿಂದ ಹೊರಬಂದೆ



ಬೆಳಕಿನ ರಂಗೋಲಿ  ಹಾಕಲು ಇಂತಹ  ಕಿಟಕಿಗಳು  ಬೇಕು 


ಇಕ್ಕೆರಿಯ  ಪುಟ್ಟ ಮಕ್ಕಳು 

ದೇವಾಲಯದ ಹೊರಗೆ ಬಂದು ಹೊರಡಲು ಅನುವಾದೆವು , ತಮ್ಮ ಊರಿನ  ದೇಗುಲದ  ಮಹತ್ವ ತಿಳಿಯದ  ಪುಟ್ಟ ಮಕ್ಕಳು ಅಲ್ಲಿ   ಸಂತಸದಿಂದ ಕ್ರಿಕೆಟ್   ಆಟಾ  ಆಡುತ್ತಿದ್ದರು ,  ದೇವ್ರೇ ಈ ಮಕ್ಕಳು ಈ ಊರಿನ  ಈ ಐತಿಹಾಸಿಕ ದೇಗುಲ ಉಳಿಸಿಕೊಂಡು  ಮೆರೆಸುವಂತೆ  ಮಾಡಪ್ಪಾ  ಅಂತಾ ಮನಸಿನಲ್ಲಿ ಅಂದುಕೊಂಡೆ . ನಮ್ಮ ಪಯಣ ಮುಂದೆ ಸಾಗಿ  ಸಾಗರ ತಲುಪುವ   ರಸ್ತೆಗೆ ಬಂದು ನಿಂತೆವು  ಅಲ್ಲಿ ಕಂಡಿತ್ತು ಒಂದು ಬೋರ್ಡು  ........ !!!  ಅದು ವರದಾ ಮೂಲ....!!    ಪ್ರಕಾಶಣ್ಣಾ  ಅಂದೇ   ಗೊತ್ತಾಯ್ತು ಬಾಲಣ್ಣ  ....! ಅಲ್ಲಿಗೆ ಹೋಗೋಣ  ಅಂದ್ರು .... ...!!!









5 comments:

Badarinath Palavalli said...

ಇಕ್ಕೇರಿಯ ಇತಿಹಾಸ ಬಲು ಚೆನ್ನಾಗಿ ವಿವರಿಸಿದ್ದೀರ.
ಪುರಾತನ ದೇಗುಲಗಳ ರಚನೆ, ಬಾಳಿಕೆ ಮತ್ತು ಶಿಲ್ಪ ಕಲಾ ಚಾತುರ್ಯಗಳು ಇಂದಿನ ಕಾಂಕ್ರೀಟ್ ದೇವಸ್ಥಾನವೆಂಬ ಕಟ್ಟಡಗಳಲ್ಲಿ ಕಾಣಸಿಗವು.
ಟಂಕಸಾಲೆಯಲ್ಲಿ ಆಗಿನ ಕಾಲದಲ್ಲಿ ನಾಣ್ಯಗಳ ಠಣ ಠಣ ಸದ್ದು ಕಲ್ಪಿಸಿಕೊಳ್ಳಿ.

ಮುಂದಿನ ಭಾಗ ತುಸು ಬೇಗ ಬರಲಿ.

ಮೌನರಾಗ said...

ಇತಿಹಾಸದ ಸೊಬಗನ್ನು ಸುಂದರ ಚಿತ್ರ ಸಹಿತವಾಗಿ ವಿವರಿಸಿದ್ದೀರಿ...

ಸಂಗ್ರಹಯೋಗ್ಯ ಬರಹ...

bilimugilu said...

Balu Sir, ikkEriya itihaasa haagu sthala parichaya nimma chaaychitragaLalli - vivaraNeyalli chennaagi moodibandide.

@spn3187 ಕನ್ನಡಿಗ ಶಿವಕುಮಾರ ನೇಗಿಮನಿ said...

how to join your blog,
that way not joined.........

Srikanth Manjunath said...

ಈ ದೇವಾಲಯವನ್ನು ಮೂರು ಬಾರಿ ನೋಡಿದ್ದೀನಿ.. ಪ್ರತಿ ಬಾರಿ ಏನಾದರು ಹೊಸದನ್ನು ತೆಗೆದು ಇಡುತ್ತದೆ.. ಸುಂದರ ಮಲೆನಾಡಿನ ಹೆಬ್ಬಾಗಿಲಿನ ಪರಿಸರ.. ಸದಾ ಜಿಗಿ ಜಿಗಿ ಅನ್ನಿಸುವ ವಾತವಾರಣ.. ತುಸು ಕೆಂಪು ಕಲ್ಲಿನ ದೇವಾಲಯ ಬೃಹತ್ ನಂದಿ.. ಪ್ರಾಕಾರ ಸುತ್ತಿ ಬಂದಾಗ ಮನಸ್ಸಿಗೆ ಮುದ ನೀಡುವ ತಂಗಾಳಿ..

ಅದನ್ನೆಲ್ಲ ಪಕ್ಕಕ್ಕೆ ಇಟ್ಟು ನಿಂತರೆ.. ನಿಮ್ಮ ಬರಹದಲ್ಲಿ ಕಾಣುವ ಇತಿಹಾಸ ಒಮ್ಮೆ ಕಣ್ಣು ಹೊಡೆದು ನಗುತ್ತದೆ.. ಬರಹ ಇತಿಹಾಸ ಹಾಸ್ಯ ಮಾಹಿತಿ ಎಲ್ಲದರ ಹದವಾದ ಗುಣವನ್ನು ನಿಮ್ಮ ಬರಹಗಳಲ್ಲಿ ಕಾಣಬಹುದು

ಸೂಪರ್ ಬಾಲೂ ಸರ್.. ವರದಾಮೂಲ ವರದಾ ಮೂಲ ಯಾರ್ರೀ ಬರ್ತೀರಾ.. ನಾ ಬಂದೆ ನಾ ಬಂದೆ