Friday, August 22, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......06 ಇಕ್ಕೆರಿಯ ಬಸವನ ಮೂಗಿನ ಒಳಗೆ ಕೈ ಬೆರಳು ಇಡೋಣ ಬನ್ನಿ .



ಇಕ್ಕೆರಿಗೆ ಸ್ವಾಗತ 

ನಮಸ್ತೆ ಗೆಳೆಯರೇ  ಬಹಳ ದಿನಗಳ ನಂತರ  ಮತ್ತೆ ಮುಂದುವರೆದಿದೆ ನಮ್ಮ ಈ ಪಯಣ, ಕಳೆದ ಸಂಚಿಕೆಯಲ್ಲಿ  ಕೆಳದಿಯ ಇತಿಹಾಸದ  ಮಹಾಪುರುಷ  ಶ್ರೀಯುತ ಗುಂಡಾ ಜೋಯಿಸರ  ಆಶೀರ್ವಾದ ಪಡೆದು  ಇಕ್ಕೆರಿಯ ಕಡೆ ಹೊರಟೆವು , ನಮ್ಮ ತುಂಟ ಪ್ರಕಾಶಣ್ಣ ನ ಜೊತೆ ಪ್ರವಾಸ ಮಾಡುವುದು ಒಂದು ಒಳ್ಳೆಯ ಸುಯೋಗವೇ ಸರಿ ,  ಮೊದಲು ಮತ್ತೆ ನಮ್ಮ ತುಂಟಾಟ  ಶುರು ಆಯ್ತು , ಅವರ ಜೀವನದ ಎಡವಟ್ಟು ಪ್ರಸಂಗಗಳ ಬಗ್ಗೆ  ನೆನಪಿನ ಹರಟೆ ಕೀಟಲೆ ನಗು ಇವೆಲ್ಲಾ ಇದ್ದವು. 


ಇಕ್ಕೆರಿಗೆ  ಸ್ವಾಗತ

  ಬಾಲಣ್ಣ  ಇಕ್ಕೇರಿ ಬಹಳ ಚೆನ್ನಾಗಿದೆ  ಇಲ್ಲಿನ  ಬಸವನ ಕೀರ್ತಿ ಈ ಊರಿನ  ಸುತ್ತ ಮುತ್ತಾ  ಬಹಳ ಪ್ರಸಿದ್ಧಿ , ಆದರೆ  ಬಾಲಣ್ಣ ..... ! ಅಂತಾ  ಮಾತು ನಿಲ್ಲಿಸಿ  ನಸು ನಕ್ಕರು , ನನಗೆ ಇಲ್ಲಿ ಏನೋ ತುಂಟಾಟ ಇದೆ ಎನ್ನುವ  ವಾಸನೆ  ಸಿಗುತ್ತಿತ್ತು ,  ಉರಿ ಬಿಸಿಲಿನ  ತಾಪದ  ಪ್ರವಾಸದಲ್ಲಿ  ಇಂತಹ ತುಂಟಾಟ ಚಿಮ್ಮಿ  ಜೋರಾಗಿ ನಕ್ಕಾಗ   ಮನಸಿಗೆ  ಖುಷಿಯಾಗಿ ಮುಂದಿನ   ಪ್ರವಾಸದ  ಅನುಭವದ  ಸವಿಯನ್ನು ಅನುಭವಿಸಬಹುದು , ಸರಿ  ನಾನು ಪ್ರಕಾಶಣ್ಣ  ಅದೇನದು ಇಕ್ಕೆರಿಯ ಬಸವನ  ಬಗ್ಗೆ ನಿಮ್ಮ  ಅನಿಸಿಕೆ ಬರಲಿ ಆಚೆಗೆ  ಅಂದೇ .....! 







ಅಯ್ಯೋ   ಬಾಲಣ್ಣಾ  ಒಳ್ಳೆ ಮಜವಾದ ಕಥೆ ಇದೆ ಬನ್ನಿ ಹೇಳ್ತೀನಿ, ಅಂತಾ  ಒಂದು ಕಥೆ ಹೇಳಿದರು , ಕಥೆ ಇಲ್ಲಿದೆ ನೋಡಿ  , 

ಒಮ್ಮೆ ಒಂದು ಶಾಲೆಯ ಮಕ್ಕಳು  ಇಕ್ಕೇರಿ ಪ್ರವಾಸಕ್ಕೆ ಬಂದರು , ಹಾಗೆ  ಇಕ್ಕೆರಿಯ ದರ್ಶನ ಮಾಡುತ್ತಾ ,   ಬಂದ  ಶಾಲಾ ಮಕ್ಕಳು  ಈ ಬಸವನ ಬಳಿ  ಬರುತ್ತಾರೆ , ಶಾಲಾ ಮಕ್ಕಳ ತಂಡದಲ್ಲಿದ್ದ  ಒಬ್ಬ ತುಂಟ ಹುಡುಗ  ಈ ಬಸವನ  ಮೂಗಿನ  ಒಳಗೆ ತನ್ನ  ಕೈ ಬೆರಳನ್ನು  ತೋರಿಸುತ್ತಾನೆ , ಬಸವ ಮೂಗಿನೊಳಗೆ  ಅಡಗಿದ್ದ  ಒಂದು ಸಣ್ಣ ಚೇಳು  ಆತನ ಕೈ ಬೆಳನ್ನು ಕುಟುಕುತ್ತದೆ , ಮೊದಲೇ ತುಂಟ ಹುಡುಗ ,  ಆದರೆ   ತನ್ನ ನೋವನ್ನು ತೋರ್ಪಡಿಸದೆ   , ಕೈ ಬೆರಳು ಹೊರಗೆ ತೆಗೆದು  ಜೋರಾಗಿ ನಗಲು ಶುರು ಮಾಡ್ತಾನೆ   , ಪಕ್ಕದಲ್ಲಿದ್ದ ಅವನ ಗೆಳೆಯರು  , ಯಾಕೋ ಏನಾಯ್ತು  ಅಂತಾ ಕೇಳಿದಾಗ , ಅಯ್ಯಪ್ಪಾ ,  ಹೋಗ್ರೋ  ನಾನು ಹೇಳೋಲ್ಲಾ   ಅನ್ನುತ್ತಾನೆ  , ಆದರೆ  ಇವನ ಮಾತಿಂದ ಕುತೂಹಲ ಹೆಚ್ಚಾಗಿ  ಮಕ್ಕಳು  ಇವನನ್ನು ಪೀಡಿಸಲು  ಶುರು ಮಾಡುತ್ತವೆ , ಆಗ ಆ ತುಂಟ ಹುಡುಗ ,  ನೋಡ್ರೋ  ಬಸವನ ಮೂಗಿಗೆ  ಕೈ ಬೆರಳು ಹಾಕಿದೆ  ಆ ಹಾ  ತಣ್ಣಗೆ  ಐಸ್  ಇದ್ದಂಗೆ  ಆಯ್ತು , ಬಹಳ ಖುಷಿಯಾಯಿತು  ಅನ್ನುತ್ತಾನೆ  , ಇದನ್ನು ಕೇಳಿದ ಮಕ್ಕಳು ನಾ ಮುಂದು   ತಾ ಮುಂದು  ಅಂತಾ  ಬಸವನ  ಮೂಗಿನೊಳಗೆ  ಕೈ ಬೆರಳು ತೋರಿಸಿ  ಚೇಳಿನ ಕೈಲಿ    ಕುಟುಕಿಸಿ ಕೊಂಡರೂ  ಬೇರೆಯವರಿಗೆ ಹೇಳದೆ , ಎಲ್ಲಾ  ಮಕ್ಕಳೂ  ಬಸವನ ಮೂಗಿನೊಳಗೆ  ಕೈ ಬೆರಳು ಹಾಕಲು  ಪ್ರೇರಣೆ ನೀಡುತ್ತಾರೆ ,  ಅವತ್ತಿಂದ ಬಾಲಣ್ಣ , ಇಲ್ಲಿಗೆ  ಯಾರೇ ಬಂದರೂ  ಇಕ್ಕೇರಿ ಬಸವನ  ಮೂಗಿನೊಳಗೆ  ಕೈ ಬೆರಳು ಇಡಬೇಕು , ಅದು ಇಲ್ಲಿನ ಸಂಪ್ರದಾಯ  ಅಂತಾ ನಕ್ಕರು, 



ಇಕ್ಕೆರಿಯ  ಬಸವನ  ಮೂಗಿನ  ಹೊಳ್ಳೆಗಳು 

ನನಗೋ ನಗು ತಡೆಯಲು ಆಗಲಿಲ್ಲ , ಕಾರಿನೊಳಗೆ ಗೊಳ್ಳನೆ  ನಗೆಯ  ಬುಗ್ಗೆ ಚಿಮ್ಮಿತು,  ಅರೆ ಬಂದೆ ಬಿಟ್ಟೆವು  ಇಕ್ಕೆರಿಗೆ , ಇಲ್ಲಿಗೆ ಬಂದು ಮೊದಲು ಬಂದು ನಿಂತಿದ್ದೆ  ಬಸವನ  ಹತ್ತಿರ  , ಸುಂದರ ಬಸವನ   ಬೃಹತ್  ಮೂರ್ತಿ , ನಮ್ಮ ಮೈಸೂರಿನ  ಚಾಮುಂಡಿ ಬೆಟ್ಟದ  ನಂದಿ ಯನ್ನು  ನೆನಪಿಗೆ ತಂದಿತು,  ಆದರೆ  ಈ ಪ್ರಕಾಶಣ್ಣ ಇಟ್ಟಿದ್ದ  ನಗೆಯ ಬಾಂಬ್  ಆ ಮೂರ್ತಿಯ  ಮೂಗಿನ  ಹೊಳ್ಳೆಗಳನ್ನು  ಫೋಟೋ ತೆಗೆಯಲು  ಪ್ರೇರೇಪಿಸಿತ್ತು,  ಆದರೆ  ಕ್ಯಾಮರಾ ಕಣ್ಣಿನಲ್ಲಿ ಅದನ್ನು ನೋಡುತ್ತಿದ್ದರೆ  ನಗು ಬರುತ್ತಿತ್ತೆ  ಹೊರತು, ನನ್ನ ಕೈ ಬೆರಳು  ಫೋಟೋ ಕ್ಲಿಕ್ಕಿಸಲು  ತಡವರಿಸುತ್ತಿತ್ತು . ಬಹುಷಃ  ಅದೂ ಸಹ ಇಕ್ಕೇರಿ ಬಸವನ ಪ್ರಸಾದ ಪಡೆಯಲು ಆಸೆ ಪಡ್ತಾ ಇತ್ತು ಅನ್ನಿಸುತ್ತೆ. 



ಅಂಕಲ್  ಬಸವನ  ಮೂಗಿನೊಳಗೆ ಬೆರಳು ಹೀಗೆ  ಇಡಬೇಕಾ ?




ಈ ಹುಡುಗನ  ಕೈ ಬೆರಳನ್ನು  ಬಸವನ ಮೂಗಿಗೆ  ಹಾಕಿಸ್ಲಾ  

ಬಸವನ ವಿವಿಧ ಬಂಗಿಗಳ ಫೋಟೋ ತೆಗೆಯುತ್ತಾ  ಇರುವಾಗ ಅಲ್ಲಿಗೆ  ಬಂದಾ ಮತ್ತೊಂದು ಹುಡುಗನನ್ನು   ಬಸವನ  ಮೂಗಿನೊಳಗೆ ಕೈ ಬೆರಳು ಇಡುವಂತೆ , ತಿಳಿಸಲು  ಆ ಮಗು ನಗು ನಗುತ್ತಾ  ತನ್ನ ಕೈ ಬೆರಳನ್ನು  ಬಸವನ ಮೂಗಿನೊಳಗೆ  ಹಾಕಿ ಫೋಟೋಗೆ  ಪೋಸ್  ಕೊಟ್ಟಳು . ಅಲ್ಲಿಗೆ ಬಂದ ಮತ್ತೊಬ್ಬ ಹುಡುಗ  ಅಂಕಲ್  ಏನಿದೂ ಅಂದಾ , ಮತ್ತೆ ಅವನಿಗೆ  ಬಸವನ ಮೂಗಿಗೆ ಕೈ ಬೆರಳು ತೋರಿಸಲು  ಹೇಳಿದೆವು ,  ಅವನೂ ಸಹ ಬೆರಳು ತೋರಿಸಿದ , ಈ ಪ್ರಕಾಶ್ ಹೆಗ್ಡೆ ಮಾತನ್ನು ನಂಬಿ  ಪಾಪ   ಇಕ್ಕೇರಿ ಬಸವನ  ಮೂಗಿಗೆ ಕೈ ಬೆರಳು  ತೂರಿಸಿದ  ಮಕ್ಕಳಿಗೆ  ಯಾವುದೇ ಪ್ರಸಾದ ಸಿಕ್ಕಲಿಲ್ಲ , ನಮ್ಮ ಪುಣ್ಯಾ . 


ಇಕ್ಕೇರಿ  ಬಸವನ ಮೂಗಿಗೆ  ಕೈ ಬೆರಳನ್ನು  ತೋರಿಸಿ  ಪ್ರಸಾದ ಪಡೆಯುವ ಬನ್ನಿ 



ಹೀಗೆ ಬಸವನ ಮೂಗಿಗೆ ಕೈ ಬೆರಳು ತೋರಿಸುವ ಆಟಾ ಆಡುತ್ತಾ  ಕಾಲ ಕಳೆದ  ನಾವು  ಇನ್ನು ಸ್ವಲ್ಪ ಹೊತ್ತು ಹಾಗೆ ಮಾಡಿದ್ದರೆ  ಖಂಡಿತಾ  ನಮ್ಮನ್ನು ನೋಡಿದ  ಜನ  ಅದು ಇಲ್ಲಿನ ಸಂಪ್ರದಾಯ  ಎಂದು ತಿಳಿದು  ತಾವು ಸಹ ಬಸವನ ಮೂಗಿಗೆ  ಕೈ ಬೆರಳು ಇಡಲು ಬರ್ತಾ ಇದ್ರೂ  ಅಂತಾ ಕಾಣುತ್ತೆ,  ಊರುಗಳ ಪ್ರವಾಸ ಮಾಡುತ್ತಾ ಇತಿಹಾಸ ಕಲಿಯುತ್ತಾ  ಸಾಗಿದ್ದ ನಾವು  ಇಕ್ಕೆರಿಯ ಬಸವನ ಸನ್ನಿಧಿಯಲ್ಲಿ   ನಮ್ಮ ವಯಸ್ಸನ್ನು ಮರೆತು ತುಂಟ  ಹುಡುಗರಂತೆ  ತುಂಟಾಟ ಮಾಡುತ್ತಾ  ಹೊಟ್ಟೆ ತುಂಬಾ  ನಕ್ಕು  , ಕಾಲ ಕಳೆದೆವು, ಬೆಳಗಿನ  ಆಯಾಸ ನಮ್ಮ ಈ ತುಂಟಾಟದ ನಗುವಿನಲ್ಲಿ ಮಾಯವಾಗಿ  ಹೊಸ ಉತ್ಸಾಹ ಮೂಡಿತ್ತು. 


ಬನ್ನಿ ದೇವನ ಸನ್ನಿಧಿಗೆ 




ಮತ್ತೆ ವಾಸ್ತವಕ್ಕೆ ಬಂದು ದೇವಾಲಯದ ಪ್ರದಕ್ಷಿಣೆ ಹಾಕುತ್ತಾ  ಫೋಟೋ ತೆಗೆಯುತ್ತಾ ಬಂದೆವು , ಅಘೋರೆಶ್ವರ ದೇವಾಲಯದ  ಅರ್ಚಕರು  ಮೆಟ್ಟಿಲು ಹತ್ತುತ್ತಾ  ದೇವಾಲಯಕ್ಕೆ  ಬರುತ್ತಿದ್ದರು . ನಾವು ದೇಗುಲದ ಒಳಗೆ  ಅಘೋರೆಶ್ವರ ದೇವರ ದರ್ಶನ ಪಡೆದು ಇತಿಹಾಸ ತಿಳಿಯಲು  ಸಿದ್ಧರಾದೆವು. ......... ಮುಂದೆ ....!!!













8 comments:

Srikanth Manjunath said...

ಮತ್ತೆ ಮುಂದುವರೆದ ಪಯಣ ಸೂಪರ್ ಬಾಲೂ ಸರ್

ಅಮೃತ ಘಳಿಗೆ ಚಿತ್ರದಲ್ಲಿ ಈ ದೇವಾಲಯವನ್ನು ತೋರಿಸಿದ ಬಗೆ ಸೂಪರ್ ಇದೆ.. ಸುಂದರ ದೇವಾಲಯ.. ಬೃಹದಾಕಾರದ ನಂದಿ.. ದೇವಾಲಯ್ದದ ಪ್ರಾಂಗಣ ಎಲ್ಲವೂ ಗಮನಸೆಳೆಯುತ್ತದೆ

ಚಿತ್ರಗಳು ಸೂಪರ್.. ಅದರಲ್ಲೂ ಆಯತಾಕಾರದ ಚೌಕಟ್ಟಿನೊಳಗೆ ದೇವಾಲಯದ ಚಿತ್ರ ಸೂಪರ್ ಇದೆ

ಮುಂದಿನ ಮಾಲಿಕೆಗೆ ಕಾಯುತ್ತಾ

ಜಲನಯನ said...

ಭ್ರಮಣ ಸಚಿತ್ರ ವಿವರಣ..ಬಾಲು ಗೆ ಬಾಲುವೇ ಸಾಟಿ..ಹೌದು..ಪ್ರಕಾಶ ಬಂದಿದ್ನಾ... ಸೂಪರ್ ಕಥನ.

ಮನಸು said...

ಆಹಾ...!! ನಾವೇ ಪ್ರವಾಸಕ್ಕೆ ಹೋಗಿ ಬಂದಂತೆ ಆಯ್ತು... ಸರ್.

ಮೌನರಾಗ said...

ಆಹಾ!
ಉಲ್ಲಾಸದಾಯಕ ಬರಹ..
ಖುಷಿಯಾಯ್ತು..

Harini Narayan said...

ಬಸವನ ಹೊಳ್ಳೆಯಲ್ಲಿ ಬೆರಳಿಡುವ ಪ್ರಸಂಗ , ತಿಥಿಯಲ್ಲಿ ಬೆಕ್ಕು ಕಟ್ಟಬೇಕು ಎಂದಂತಾಗಿದೆ :) ಇಕ್ಕೇರಿಯ ಬಸವ ಕಣ್ಣಿಗೆ ಕಟ್ಟುವ ಚಿತ್ರ ..

gururaja said...

ಈ ದೇವಾಲಯ, ಬಸವನ, ಕೆರೆ, ಬೆಳ್ಳಿರಥದ ಹಿಂದೆ ಇರುವ ಕಥೆ ನೋವಿನ ನೆರಳು ಮೂಡಿಸುತ್ತದೆ.. ದೇಗುಲದ ಒಳ ಮತ್ತು ಹೊರ ಕೆತ್ತನೆ ಮನೋಹರವಾಗಿದೆ..

Ittigecement said...

ಬಾಲಣ್ಣಾ...
ಮತ್ತೊಮ್ಮೆ ನೆನಪುಗಳು ಹೂವಾದವು...

ಇಕ್ಕೇರಿಯ ದೇವಾಲಯ ನಿಜಕ್ಕೂ ತುಂಬಾ ಚಂದ...
ಅದರಲ್ಲೂ ನಿಮ್ಮೊಡನೆ ಹೋದರೆ
ಅಲ್ಲಿನ ಇತಿಹಾಸ ಕೆದಕುವ ನಿಮ್ಮ ಪರಿಗೆ ನೀವೇ ಸಾಟಿ...

ಒಂದು ಸುಂದರ ಅನುಭವಕ್ಕಾಗಿ ನಿಮಗೊಂದು ಪ್ರೀತಿಯ ಹಗ್....

Badarinath Palavalli said...

ಬಸವ ಮೂಗಿನೊಳಗೆ ಬೆರಳು ಕಥೆ ರೋಚಕವಾಗಿದೆ.
ಮಕ್ಕಳಿಬ್ಬರ ಮುಗ್ಧತೆ ಮತ್ತು Prakash Hegde ಅವರ ಆ ಅಬೋಧ ನಗು ಮನಸೆಳೆಯಿತು.
ಅಘೋರೆಶ್ವರ ಚರಿತೆ ಬೇಗ ಬರಲಿ.
ಎಂದಿನಂತೆ ಚಿತ್ರಗಳು ಕಥೆ ಹೇಳುತ್ತಿವೆ.