Sunday, July 13, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......05 ಕೆಳದಿಯಲ್ಲಿದೆ ಗುಂಡಾ ಜೋಯಿಸರ ಜ್ಞಾನ ಭಂಡಾರ .


ಕೆಳದಿಯ  ಐತಿಹಾಸಿಕ ದೇವಾಲಯದ ಒಂದು ನೋಟ

ನಮಸ್ತೆ  ಕಳೆದ ಸಂಚಿಕೆಯಲ್ಲಿ  ಕೆಳದಿಯ ಇತಿಹಾಸದ ಒಳಗೆ  ಒಂದು ಇಣುಕು ನೋಟ  ಹರಿಸಿದೆವು,  ಅದರಲ್ಲಿ ನಾ ಹೆಕ್ಕಿ ತೆಗೆದ ಹಲವು  ಐತಿಹಾಸಿಕ ವಿಚಾರಗಳ ಜೊತೆಯಲ್ಲಿ  ತಮ್ಮ  ಬಳಿ  ಇದ್ದ ಮಾಹಿತಿಯನ್ನು  ತಿಳಿಸಿ  ಹಲವು ಓದುಗರು ಸಹಕರಿಸಿದರು  ಎಲ್ಲರಿಗೂ ನನ್ನ ನಮನಗಳು, ಇತಿಹಾಸವೇ  ಹಾಗೆ , ಸರಿಯಾದ ನಿಟ್ಟಿನಲ್ಲಿ ಹೆಜ್ಜೆ ಇಟ್ಟಾಗ  ಹಲವು ಜ್ಞಾನ ಭಂಡಾರ ಗಳಿಂದ  ಮಾಹಿತಿ  ಸಹಜವಾಗಿ ಹರಿದು ಬರುತ್ತದೆ   ಅಮೃತದ ಹಾಗೆ. ತಮ್ಮ ಬಳಿ ಇದ್ದ ಇತಿಹಾಸದ  ಅಮೃತವನ್ನು ನನ್ನ ಮೇಲೆ ಸಿಂಚನ ಮಾಡಿದ  ಹಲವರಿಗೆ ನನ್ನ  ಕೃತಜ್ಞತೆಗಳು . 


ದೇಗುಲದಲ್ಲಿನ   ಮರದ ಕೆತ್ತನೆ


ಅದ್ಯಾಕೋ ಗೊತ್ತಿಲ್ಲ  ಕೆಳದಿಗೆ ಕಾಲಿಟ್ಟ ಗಳಿಗೆ ಚೆನ್ನಾಗಿತ್ತು ಅನ್ಸುತ್ತೆ , ಬಂದೊಡನೆ  ಒಂದು ಖುಷಿಯ ವಾತಾವರಣ  ನಿರ್ಮಾಣವಾಗಿತ್ತು, ಜೊತೆಗೆ ಪ್ರಕಾಶಣ್ಣನ  ಹಾಸ್ಯ ಚಟಾಕಿ  ಸಾಥ್ ನೀಡಿತ್ತು . ಮೊದಲು  ಕೆಳದಿಯ ಇತಿಹಾಸ  ಹೇಳಲು ಬಂದ   "ಗುಲಾಬಿ " , ನಂತರ  ದೇವಾಲಯದ ಆವರಣ ಹೊಕ್ಕಾಗ ಕಂಡ  ವಿವಿಧ ಅದ್ಭುತ  ಕಲಾ ಲೋಕ  ಜೊತೆಗೆ ಗಲಾಟೆ ಇಲ್ಲದ  ನಿಶ್ಯಬ್ಧ  ಇವುಗಳು ನಮ್ಮನ್ನು ಹೆಚ್ಚು ವಿಚಾರ ತಿಳಿಯಲು ಪ್ರೇರಣೆ ನೀಡಿದ್ದವು . ಗುಲಾಬಿಯಿಂದ  ಇತಿಹಾಸ ತಿಳಿದು ದೇವಾಲಯದ  ದರ್ಶನ ಮಾಡಿದೆವು,   ಕೆಳದಿಯ ಈ ಸುಂದರ ದೇಗುಲ  ಸುಮಾರು ಹದಿನಾರನೇ ಶತಮಾನದ  ದೇಗುಲವೆಂದು ತಿಳಿಯುತ್ತದೆ .  ಈ ದೇಗುಲದಲ್ಲಿ ಮೂರು  ಸನ್ನಿಧಿ ಇದ್ದು, ಅವುಗಳು ಕ್ರಮವಾಗಿ,  ವೀರಭದ್ರ, ರಾಮೇಶ್ವರ , ಹಾಗು  ಪಾರ್ವತಿ    ಸನ್ನಿಧಿಗಳಾಗಿವೆ .




ಕೆಳದಿ ದೇಗುಲದ  ಒಂದು ನೋಟ


ಈ ದೇಗುಲವು ಹೊಯ್ಸಳ ಹಾಗು ದ್ರಾವಿಡ  ಶೈಲಿಯನ್ನು  ಹೋಲುತ್ತದೆ .  ಬೂದುಬಣ್ಣದ  ಪದರದ ಶಿಲೆಗಳಿಂದ  ನಿರ್ಮಾಣಗೊಂಡಿರುವುದು ಕಂಡು ಬರುತ್ತದೆ.  ಈ ದೇವಾಲಯಕ್ಕೆ  ಸುಂದರವಾಗಿ  ಮುಖ ಮಂಟಪ,  ಪ್ರದಕ್ಷಿಣ ಪಥ , ಅಂತರಾಳ, ಗರ್ಭಗೃಹ , ಗಳು ನಿರ್ಮಾಣ ಗೊಂಡು  ಸೌಂದರ್ಯ ಹೆಚ್ಚಿಸಿವೆ . ಈ ದೇಗುಲಕ್ಕೆ ಮೂರು  ಪ್ರವೇಶ ದ್ವಾರಗಳಿದ್ದು, ಅವು ಉತ್ತರ, ಪೂರ್ವ ಹಾಗು ದಕ್ಷಿಣ  ದಿಕ್ಕಿಗೆ ಮುಖ ಮಾಡಿ  ನಿಂತಿವೆ .  ಹೊರ ಆವರಣದಲ್ಲಿ  ಗರುಡ,  ವಿವಿಧ ಸಂಗೀತ  ಸಾಧನಗಳನ್ನು ನುಡಿಸುವ ಸಂಗೀತಗಾರರು , ವಾಸ್ತು ಪುರುಷ , ಹರಿಹರ  ಮುಂತಾದ   ಸುಂದರ ಕೆತ್ತನೆಯನ್ನು   ಕಾಣಬಹುದು,ನವರಂಗದಲ್ಲಿ   ನಿಮಗೆ ಐದು  ಕಂಬಗಳು ಕಾಣಸಿಗುತ್ತವೆ  ಅವುಗಳಲ್ಲಿ   ಚಾಲುಕ್ಯರ ಶೈಲಿ ಹೋಲುವ  ಕೆತ್ತನೆ ಹೋಲುವ  ಮೂರ್ತಿಗಳನ್ನು ಗಮನಿಸ ಬಹುದು .  ದೇಗುಲದ  ಸ್ವಲ್ಪ  ಭಾಗ   ಮೇಲ್ಚಾವಣಿಯು  ಮರದ ಕೆತ್ತನೆ ಇಂದ ಅಲಂಕಾರ ಗೊಂಡಿದ್ದು  ಮೋಹಕವಾಗಿವೆ,  ಮತ್ತೆ ಕೆಲವು ಕಡೆ  ಕಲ್ಲಿನ ಮೇಲ್ಚಾವಣಿ  ಯಲ್ಲಿ ಅದ್ಭುತ ಕಲಾಕೃತಿಗಳು ಕಂಗೊಳಿ ಸಿವೆ. 


ಗಂಡ ಬೇರುಂಡ


ದೇವಾಲಯದ  ಅಂದ ಸವಿಯುತ್ತಾ ಬರುತ್ತಿದ್ದ ನನ್ನನ್ನು  ಚಾವಣಿಯಲ್ಲಿನ ಈ ಗಂಡ ಬೇರುಂಡ  ಪಕ್ಷಿ  ಕೆತ್ತನೆ  ತನ್ನತ್ತ ಸೆಳೆ ಯಿತು.   ಗಂಡ ಬೇರುಂಡ ಪಕ್ಷಿಯ  ಸುಂದರ ಕಲ್ಪನೆ  ಇಲ್ಲಿ ಅನಾವರಣ ಆಗಿತ್ತು,  ಎರಡು ತಲೆಯ  ದೈತ್ಯ ಪಕ್ಷಿ,  ಎರಡೂ ತಲೆಯ ಕೊಕ್ಕಿನಲ್ಲಿ  ಎರಡು ಸಿಂಹಗಳನ್ನೂ,  ಕಾಲಿನ  ಪಂಜಗಳಲ್ಲಿ  ಎರಡು ಆನೆಗಳನ್ನು  ಹಿಡಿದಿರುವ ನೋಟ  ಇಲ್ಲಿ ಕಾಣ ಸಿಗುತ್ತದೆ . ನಿಮಗೆ ತಿಳಿದಿರಲಿ ಮೈಸೂರು  ಯದುವಂಶದ  ಅರಸರ   ಲಾಂಛನ ವೂ ಸಹ ಈ ಗಂಡಬೇರುಂಡ   ಪಕ್ಷಿಯೇ ಆಗಿತ್ತು,  ಜೊತೆಗೆ  ವಿಜಯನಗರ  ಅರಸರ ಕಾಲದ ನಾಣ್ಯದ  ಮೇಲೆ ಈ  ಗಂಡ ಬೇರುಂಡ  ಪಕ್ಷಿಯ ಲಾಂಛನ   ಇರುತ್ತಿತ್ತು,  ಹಾಲಿ ನಮ್ಮ ಕರ್ನಾಟಕ  ರಾಜ್ಯದ  ರಾಜ್ಯ ಲಾಂಛನ  ಈ ಗಂಡ ಬೇರುಂಡ  ಪಕ್ಷಿಯೇ  ಆಗಿದೆ.  ಹಾಗಾಗಿ ಈ  ಲಾಂಛನ ಕ್ಕೆ   ೫೦೦ ವರ್ಷಗಳ ಇತಿಹಾಸ ವಿದೆ .  ಬಹುಷಃ  ಮೈಸೂರು ಅರಸರು  ಈ ದೇಗುಲದ   ಲಾಂಛನ ನೋಡಿ   ತಾವು ಗಂಡ ಬೇರುಂಡ  ಲಾಂಛನ  ಆರಿಸಿಕೊಂಡರೆ ಎನ್ನುವುದು   ಸಂಶೋದನಾ  ಯೋಗ್ಯ  ವಿಚಾರವಾಗಿದೆ. 


ನಾಗ  ಮಂಡಲ
ದಕ್ಷ ಪ್ರಜಾಪತಿ




ಹಾಗೆ ಮುಂದು ವರೆದು  ಅಲ್ಲಿಯೇ ಪಕ್ಕದಲ್ಲಿ  ನಾಗ ಮಂಡಲ ಕೆತ್ತನೆಯನ್ನು  ಕಣ್ತುಂಬಿ ಕೊಂಡೆ , ಅದರ ಪಕ್ಕದಲ್ಲಿ ನವಗ್ರಹಗಳ ಸುಂದರ ಕೆತ್ತನೆ  ಇನ್ನು ಮುಂತಾದವುಗಳು   ಮನಸನ್ನು ಉಲ್ಲಾಸ ಗೊಳಿಸಿದವು.  ಅಲ್ಲೇ ಸನಿಹದಲ್ಲಿ ದಕ್ಷ  ಪ್ರಜಾಪತಿಯ ಶಿಲ್ಪ ಮನಸೆಳೆಯಿತು . ಟಗರಿನ  ಮುಖ ಹೊತ್ತು ಭಕ್ತಿಯಿಂದ   ನಿಂತಿರುವ   ಆ ಅಪರೂಪದ  ವಿಗ್ರಹ   ಇತರ ದೇಗುಲದಲ್ಲಿ ಕಂಡುಬರುವುದು ಅಪರೂಪವೇ ಸರಿ. 




ಕೆಳದಿ ವೀರಭದ್ರೆಶ್ವರ  ಸನ್ನಿಧಿ


 ಕೆಳದಿ  ವೀರಭದ್ರೇಶ್ವರ   ಸನ್ನಿಧಿಯಲ್ಲಿ   ಬಾಗಿಲ ಕಂಡಿಯಿಂದ ದರ್ಶನ ಮಾಡಿ   ಅಲ್ಲಿಯೇ ಸುಮಾರು ಹೊತ್ತು ಕುಳಿತು   , ಪ್ರಕಾಶಣ್ಣ ಹಾಗು ನಾನು ಹರಟಿದೆವು,   ಅಚ್ಚರಿ ಎಂದರೆ  ಪ್ರಕಾಶಣ್ಣನ  ಮನೆ ದೇವರು ಕೆಳದಿ  ವೀರಭದ್ರ.   ತಮ್ಮ ಮನೆತನಕ್ಕೂ  ಈ ದೇವರಿಗೂ ಹೇಗೆ  ಸಂಬಂಧ   ಎಂಬ ಬಗ್ಗೆ  ಗೆಳೆಯ ಪ್ರಕಾಶ್ ಹೆಗ್ಡೆ  ತಿಳಿದು ಕೊಳ್ಳುವ  ಆಸಕ್ತಿ  ಮೂಡಿತ್ತು, ಇದಕ್ಕಾಗಿ   ಅವರ ಮನಸು ಚಡಪಡಿಸುತ್ತಿತ್ತು, ಅಲ್ಲಿಂದ ಹೊರಗೆ ಬಂದೆವು,  ಆದರೆ ನನ್ನ ಕಣ್ಣುಗಳು ಅಲ್ಲಿ ದೊರೆಯಬಹುದಾದ  ಶಾಸನಗಳ ಬಗ್ಗೆ  ಹುಡುಕಾಟ  ನಡೆಸಿತ್ತು, ದೇವಾಲಯದ  ಆವರಣದ ಸುತ್ತಾ , ಹೊರಗಡೆ  ಆವರಣದಲ್ಲಿ  ಎಲ್ಲಾ ಕಡೆ ಸುತ್ತಿದರೂ  ಯಾವುದೇ ಶಿಲಾ ಶಾಸನ  ಕಣ್ಣಿಗೆ ಬೀಳಲಿಲ್ಲ,  ಅಷ್ಟರಲ್ಲಿ  ಪ್ರಕಾಶಣ್ಣ   ಬಾಲಣ್ಣ  ಇಲ್ಲಿ ಕೆಳದಿ ಇತಿಹಾಸ ಗೊತ್ತಿರುವ ಒಬ್ಬರು ಇದ್ದಾರೆ ಬನ್ನಿ ಅಂತಾ  ಕರೆದು ಕೊಂಡು  ಹೋದರು . 




ನಮ್ಮ ನಾಡಿನ ಕೆಳದಿ ಇತಿಹಾಸ ಭಂಡಾರ


ಕಟ್ ಮಾಡಿದ್ರೆ  ನಾವು ಆ  ಮಹಾನ್ ವ್ಯಕ್ತಿಯ  ಮನೆಯಲ್ಲಿದೆವು,  ಅವರನ್ನು ಕಂಡ ನಮ್ಮ ಕಣ್ಣುಗಳು  ಧನ್ಯವಾದವು , ನಮ್ಮನ್ನು ಕಂಡೊಡನೆ ಪರಿಚಯಕ್ಕೆ ಮೊದಲೇ ನೀವು ಯಾರೇ ಆಗಿರಿ ಮೊದಲು  ಪಾನಕ ಕುಡಿಯಿರಿ ಅಂತಾ  ಹೇಳುತ್ತಾ  ಪ್ರೀತಿಯಿಂದ ಸ್ವಾಗತ   ನೀಡಿತು  ಈ ಹಿರಿಯ  ಚೇತನ .  ನನಗೋ ಈ ವ್ಯಕ್ತಿ ಯಾರೂ ಎಂಬ ಕುತೂಹಲ  , ಪ್ರಕಾಶಣ್ಣ ನನ್ನನ್ನು ಉದ್ದೇಶಿಸಿ   ಬಾಲಣ್ಣ ಇವರೇ  ಕೆಳದಿಯ ಗುಂಡಾ  ಜೋಯಿಸ್  ಎಂದರೂ  ಈ ಪೆದ್ದು ತಲೆಗೆ  ಸರಿಯಾಗಿ  ಅರ್ಥ ಆಗಲಿಲ್ಲ.   


ಬಿಸಿಲಿನಲ್ಲಿ  ಬಳಲಿ ಬಂದ  ನಮ್ಮನ್ನು ಪ್ರೀತಿಯಿಂದ  ಪಾನಕ ನೀಡಿ  ಆದರಿಸಿ , ನಮ್ಮ ಪರಿಚಯ , ಬಂದ ಉದ್ದೇಶ  ಇವುಗಳನ್ನು   ತಿಳಿದುಕೊಂಡರು , ಪ್ರಕಾಶಣ್ಣ ನ  ಪ್ರಶ್ನೆಗೆ  ಇಲ್ಲಿ ಉತ್ತರ ಸಿಕ್ಕಿತು. ಜೊತೆಗೆ ಕೆಳದಿ ಇತಿಹಾಸದ ಹಲವು  ವಿಚಾರಗಳನ್ನು  ತಿಳಿಸಿಕೊಟ್ಟರು . ಹಾಗೆ ಕೇಳುತ್ತಾ ಇವರ ಪುಸ್ತಕ ಏಲ್ಲೊ ಓದಿದ ನೆನಪಾಗಿ  ಜ್ಞಾಪಿಸಿಕೊಂಡೆ  ಅರೆ ಹೌದು   ತಮಿಳು ನಾಡಿನ  ಕನ್ನಡ ಮಂತ್ರಿ  ಗೋವಿಂದ  ದೀಕ್ಷಿತರ  ಬಗ್ಗೆ   ಪುಸ್ತಕ ಬರೆದ ಮಹನೀಯರು  ಇವರೇ ಅಂತಾ ತಿಳಿದು ಬಂದು ಮನಸಾ  ವಂದಿಸಿದೆ . 

ಗುಂಡಾ ಜೋಯಿಸರ ಬಗ್ಗೆ ಒಂದು ಇಣುಕು ನೋಟ  ಇಲ್ಲಿದೆ  ನೋಡಿ ,  ೨೭-೦೯ -೧೯೩೧ ರಲ್ಲಿ ಕೆಳದಿಯಲ್ಲಿ ಜನಿಸಿದ ಇವರು  ಅನೇಕ ಸಾಧನೆ ಮಾಡಿದ್ದಾರೆ , ಬಾಲ್ಯದ ಬಗ್ಗೆ ಹೆಚ್ಚಿನ ವಿವರ ತಿಳಿದು ಬರುವುದಿಲ್ಲ,  ಆದ್ರೆ ಅವರ ಸಾಧನೆ ಕಂಡು ಬೆರಗಾದೆ . ಗುಂಡಾ ಜೋಯಿಸರು ಬಹಳ ಜ್ಞಾನಿಗಳು   ಮೈಸೂರು ವಿಶ್ವವಿಧ್ಯಾಲಯದಲ್ಲಿನ   ಎಮ್. ಎ ., ಸಂಸ್ಕೃತದಲ್ಲಿ ಆಗಮ ಪರ್ವ ಪರೀಕ್ಷಾ , ಕನ್ನಡ ಸಾಹಿತ್ಯ ಪರಿಷತ್  ನಡೆಸುವ ಕನ್ನಡ ರತ್ನ , ಪದವಿಗಳು  ಇವರ ಜ್ಞಾನ ಬತ್ತಳಿಕೆಗೆ  ಸೇರಿವೆ , ಈಗ ಸುಮಾರು ಎಂಭತ್ತಮೂರು  ವರ್ಷ ಇರಬಹುದು, ಕೆಳದಿಯ  ಐತಿಹಾಸಿಕ  ವಸ್ತು  ಸಂಗ್ರಹಾಲಯದ  ಸ್ಥಾಪಕ  ಹಾಗು ಗೌರವ ಕಾರ್ಯದರ್ಶಿ,  ೧೯೬೨ ರಿಂದ ೧೯೭೫ ರವರೆಗೆ  ಮೈಸೂರು ಹಾಗು ಧಾರವಾಡ ದ ವಿಶ್ವವಿಧ್ಯಾಲಯ ಗಳಲ್ಲಿ  ಇತಿಹಾಸದ ಪ್ರಾಧ್ಯಾಪಕರು ,  ೧೯೮೦ ರಿಂದ ೧೯೮೫ ರವರೆಗೆ  ಕರ್ನಾಟಕ ಇತಿಹಾಸ  ದಾಖಲೆ  ಸಂಶೋದನಾ  ಸಮಿತಿಯ ಸದಸ್ಯರು,  ಹಾಗು  ಅಮೇರಿಕಾ  ಸೇರಿದಂತೆ ಹಲವಾರು ದೇಶ  ವಿದೇಶಗಳಲ್ಲಿ  ತಮ್ಮ ಸಂಶೋದನಾ ಪ್ರಬಂಧಗಳನ್ನು  ಮಂಡಿಸಿ  ಕನ್ನಡ  ತಾಯಿಯ ಕೀರ್ತಿ  ಕಿರೀಟಕ್ಕೆ  ಮೆರುಗುತಂದಿದ್ದಾರೆ . ೧೯೯೪ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಅರಸಿ ಬಂದಿದೆ,  ಹಲವಾರು ಧಾರ್ಮಿಕ  ಸಂಸ್ಥಾನಗಳು ಇವರನ್ನು  ಗೌರವಿಸಿವೆ . 

ಗುಂಡಾ ಜೋಯಿಸರ  ಜೊತೆ ಪ್ರಕಾಶ್ ಹೆಗ್ಡೆ


 ಇಂತಹ  ಮಹನೀಯರ  ಸಾಧನೆಯ ಹಿಮಾಲಯ ದ ಮುಂದೆ ನಾವೆಲ್ಲಾ ಸಣ್ಣ ಮಣ್ಣಿನ ಕಣಗಳು ಎಂದರೆ ತಪ್ಪಾಗಲಾರದು, ಇನತಹವರ ಭೇಟಿ ನನ್ನ ಜನ್ಮದ ಪುಣ್ಯವೆಂದು ಅನ್ನಿಸಿತು, ಇಂತಹ ಮಹನೀಯರು  ನಮ್ಮ ಕನ್ನಡ ತಾಯಿಯ ಅನರ್ಘ್ಯ  ರತ್ನಗಳು . ಇಂತಹ ಜ್ಞಾನ ಭಂಡಾರ  ದರ್ಶನ ಪಡೆದು  , ಅವರ ಆಶೀರ್ವಾದ ಪಡೆದು ಪ್ರಕಾಶ್ ಹೆಗ್ಡೆ ಹಾಗು ನಾನು  ಕೆಳದಿಯ ಮ್ಯೂಸಿಯಂ ಸಂದರ್ಶಿಸಿ,  ಹೊಸ  ಉತ್ಸಾಹದೊಡನೆ  ನಮ್ಮ ಪಯಣ ಮುಂದು ವರೆಸಿದೆವು. ........  ಇಕ್ಕೆರಿಯ ಕಡೆಗೆ .




4 comments:

ಚಿನ್ಮಯ ಭಟ್ said...

ಚೆನಾಗಿದೆ ಸರ್...ಧನ್ಯವಾದಗಳು..
ಜೋಯಿಸರ ಬಗ್ಗೆ ತಿಳಿದು ಹೆಮ್ಮೆ ಎನಿಸಿತು :)

Harini Narayan said...

ಯಾವುದೇ ಊರಿನ ಇತಿಹಾಸವನ್ನು ತಿಳಿಯುವುದೇ ಒಂದು ಅಂದ . ಅದರಲ್ಲೂ ಕರ್ನಾಟಕದ ಮೂಲೆಯಲ್ಲಿನ ಒಂದೊಂದು ಗುಡಿ ಗ್ರಾಮಗಳೂ ಒಂದೊಂದು ವೈಶಿಷ್ಟ್ಯದ ಇತಿಹಾಸ ಹೊಂದಿವೆ. ಶ್ರೀ ಗುಂಡಾ ಜೋಯಿಸರಂಥಹ ಮೇರುಗಳಿದ್ದರೆ ಮತ್ತಷ್ಟು ಮೆರುಗು. ನಿಮ್ಮ ಭಾವ ಲಹರಿಯ ಬ್ಲಾಗ್ ನಲ್ಲಿ ಅವರ ಪರಿಚಯವಾದುದು ಒಳ್ಳೆಯದೇ.. ಕೆಳದಿಯ ಕಥೆ ಓದುತ್ತಿದ್ದರೆ ನಾನೇ ಕೆಳದಿಯಲ್ಲಿದ್ದೆನೇನೋ ಎಂಬ ಭಾಸವಾಯ್ತು..

kavinagaraj said...

ಬಾಲಸುಬ್ರಹ್ಮಣ್ಯಯ್ಯನವರೇ, ವಂದನೆಗಳು. ಕೆಳದಿ ಕವಿಮನೆತನದವನಾದ ನಾನು ಮನೆತನದ ಅರ್ಧ ವಾರ್ಷಿಕ ಪತ್ರಿಕೆ 'ಕವಿಕಿರಣ'ವನ್ನು ಕಳೆದ ಏಳು ವರ್ಷಗಳಿಂದ ಕುಟುಂಬಗಳವರು, ಬಂಧುಗಳು ಮತ್ತು ಸ್ನೇಹಿತರಿಗಾಗಿ ಸಂಪಾದಕನಾಗಿ ಹೊರತರುತ್ತಿರುವೆ. ಕವಿಮನೆತನದ ಹಿರಿಮೆಯನ್ನು ಎತ್ತಿ ಹಿಡಿಯುವಲ್ಲಿ ಶ್ರೀ ಗುಂಡಾಜೋಯಿಸರ ಪಾತ್ರ ಹಿರಿದಾದುದು. ಕೆಳದಿಯಲ್ಲೇ ಇರುವ ಮ್ಯೂಸಿಯಮ್ಮಿಗೆ ಭೇಟಿ ನೀಡಿದ್ದರೆ ನಿಮಗೆ ಇನ್ನೂ ಆಶ್ಚರ್ಯಕರವಾದ ವಿಷಯಗಳು ಕಾಣಸಿಗುತ್ತಿದ್ದವು. ನೋಡಿರದಿದ್ದರೆ ಮುಂದೊಮೆಮ ನೋಡಿ. ಹಾಸನಕ್ಕೆ ಬಂದಾಗಲೊಮ್ಮೆ ನನ್ನನ್ನು ಭೇಟಿ ಮಾಡಿದರೆ ಕೆಳದಿ ಕವಿಮನೆತನಕ್ಕೆ ಸಂಬಂಧಿಸಿದ ಸಂಗತಿಗಳು, ಮಾಹಿತಿಗಳನ್ನು ನಿಮಗೆ ಆಸಕ್ತಿಯಿದ್ದರೆ ತಿಳಿಸುವೆ. ಕೆಳದಿ ಜೋಯಿಸ್ ಮನೆತನಕ್ಕೂ, ಕವಿಮನೆತನಕ್ಕೂ ಅವಿನಾಭಾವ ಸಂಬಂಧಗಳಿವೆ. ಕವಿಮನೆತನದ ಧೀಮಂತ ಎಸ್,ಕೆ.ಲಿಂಗಣ್ಣಯ್ಯನವರ ಪುತ್ರಿ ಮೂಕಾಂಬಿಕಮ್ಮ ಗುಂಡಾಜೋಯಿಸರ ತಾಯಿ.ನಾನು ಕವಿಮನೆತನದ 10ನೆಯ ಪೀಳಿಗೆಗೆ ಸೇರಿದವನು. 13 ತಲೆಮಾರುಗಳ ವಂಶವೃಕ್ಷ ನಮ್ಮಲ್ಲಿದೆ. ಇದರ ಕ್ರೋಢೀಕರಣಕ್ಕೆ ಗುಂಡಾಜೋಯಿಸರ ನೆರವು ಅತ್ಯಮೂಲ್ಯವಾಗಿದೆ. ವಂದನೆಗಳು. ನನ್ನ ಇಮೇಲ್ ಐಡಿ: kavinagaraj2010@gmail.com - ನಿಮ್ಮ ಮಾಹಿತಿಗಾಗಿ.

Badarinath Palavalli said...

ಗುಂಡಾ ಜೋಯೀಸರ ಸಾಧನೆ ಅಪ್ರತಿಮ, ಅವರನ್ನು ಇನ್ನೂ ಹೆಚ್ಚು ಗೌರವಗಳು ಹುಡುಕಿ ಬರಲಿ.
ಅವರನ್ನು ಭೇಟಿಯಾದದ್ದು ತಮ್ಮ ಇತಿಹಾಸ ದಾಹಕ್ಕೆ ಸರಿಯಾದ ಪಾನಕ ಸೇವೆ ಅಲ್ಲವೇ?

ಇಲ್ಲಿ ತಾವು ವಿವರಿಸುತ್ತಾ ಹೋದ ಕೆಳದಿಯ ಇತಿಹಾಸ ನಮಗೆ ಪಟ್ಯದಂತೆ ಉಪಯುಕ್ತವಾಗಿದೆ.
ಚಿ. ಚಿನ್ಮಯ್, ಗುರುಗಳಾದ ಕವಿ ನಾಗರಾಜ್ ಹಾಗೂ ಹರಿಣೀ ಮೇಡಂ ಅವರ ಕಾಮೆಂಟುಗಳೂ ನಮಗೆ ಉಪಯುಕ್ತವೇ.