Sunday, July 6, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......04 ಕೆಳದಿಯ ಮಡಿಲಲ್ಲಿ ಇತಿಹಾಸ ಬರೆದಳು ಸಂಬಾರ ರಾಣಿ .

 ಕೆಳದಿಯ  ಇತಿಹಾಸದ ಸಾಕ್ಷಿ  ಈ  ದೇಗುಲ 

ಅಯ್ಯೋ  ಇದೇನ್ರೀ  ಪಯಣದ  ಕಥೆ ಬರೆಯಲು ಶುರು ಮಾಡಿ ಅರ್ಧಕ್ಕೆ ಓಡಿ  ಹೋದ ..... !  ಅಂತಾ  ಬೈಯ್ಕೋ  ಬೇಡಿ, ಬಹಳ ದಿನಗಳ ನಂತರ ಮತ್ತೆ ಬಂದಿದ್ದೇನೆ, ಹೌದು ಬಿಡುವಿಲ್ಲದ  ದಿನಚರಿ , ಜೊತೆಗೆ  ರಜಾದಿನಗಳಲ್ಲಿ ಬಂದ  ಹಲವು  ಅನಿವಾರ್ಯದ ಕಾರ್ಯಕ್ರಮಗಳು ಈ ಬರವಣಿಗೆಗೆ ಸ್ವಲ್ಪ ಅಡಚಣೆ ಉಂಟು ಮಾಡಿದ್ದು ನಿಜ.  ಬನ್ನಿ ಕೆಳದಿಯ  ಬಗ್ಗೆ ಸ್ವಲ್ಪ ವಿಚಾರ  ತಿಳಿಯೋಣ .

 ಬಹಳ ಹಿಂದೆ  ಚಂದ್ರಗುತ್ತಿ ರಾಜ್ಯದ  ವ್ಯಾಪ್ತಿಯಲ್ಲಿ ಕೆಳದಿ ತಾಲೂಕು ಆಗಿತ್ತು , ಆ ತಾಲೂಕಿಗೆ ಸೇರಿದ  ಹಳೆ ಬಯಲು ಎಂಬ ಊರಿನಲ್ಲಿ   ಚೌಡೇಗೌಡ , ಭದ್ರೇಗೌಡ  ಎಂಬ ಇಬ್ಬರು ಅಣ್ಣ ತಮ್ಮಂದಿರು ಇದ್ದರು ,  ಆ ಕಾಲಕ್ಕೆ ಅವರು ಒಂದು ತರಹ ಜಮೀನ್ದಾರರು ಅಥವಾ ಪಾಳೆಗಾರರು  ಇರಬಹುದು , ಅವರ  ಬಳಿ ಇದ್ದ ಜಮೀನಿನ  ವ್ಯವಸಾಯದ  ಕೆಲಸವನ್ನು ಯಾದವ ಹಾಗು ಮುರಾರಿ ಎಂಬ ಇಬ್ಬರು ಆಳುಗಳು  ಮಾಡುತ್ತಾ  ಬಹಳ ನಿಷ್ಠೆಯಿಂದ  ಇದ್ದರು.  ಒಮ್ಮೆ ಅವರು ಯಜಮಾನರ  ಜಮೀನಿನಲ್ಲಿ ವ್ಯವಸಾಯದ   ಕೆಲಸ ಮಾಡುವಾಗ  ಒಂದು ಹಸು  ಹುತ್ತದ  ಬಳಿ  ಹಾಲನ್ನು ಎರೆಯುತ್ತಿರುವುದನ್ನು  ಕಂಡು ಆ ವಿಚಾರವನ್ನು ತನ್ನ ಯಜಮಾನರಿಗೆ ತಿಳಿಸುತ್ತಾರೆ , ತನ್ನ ಯಜಮಾನರ  ಆದೇಶ ಪಡೆದು ಆ ಜಾಗವನ್ನು  ಅಗೆಯುತ್ತಾರೆ, ಅಲ್ಲಿ  ಅವರಿಗೆ ಒಂದು "ಲಿಂಗ " ದೊರೆಯುತ್ತದೆ  ಆ ಜಾಗದಲ್ಲಿ ಯಜಮಾನ   ಚೌಡೇಗೌಡ  ಒಂದು ದೇವಾಲಯ ಕಟ್ಟಿಸುತ್ತಾನೆ ಆ ದೇಗುಲವೇ  ಕೆಳದಿಯ ಮೂಲ ದೇವಾಲಯ . ನಂತರ  ಸ್ವಲ್ಪ ದಿನಕ್ಕೆ ಒಂದು ಖಡ್ಗ  ಆ ಜಾಗದಲ್ಲಿ ದೊರೆಯುತ್ತದೆ ಆದನ್ನು ಚೌಡೇಗೌಡ  ಸಂರಕ್ಷಿಸುತ್ತಾನೆ , ಒಮ್ಮೆ ಕನಸಿನಲ್ಲಿ ಅವನಿಗೆ   ಮನುಷ್ಯರನ್ನು    ಬಲಿ  ನೀಡಿದರೆ  ಅಪಾರ ನಿಧಿ  ದೊರೆಯುವುದಾಗಿ  ಪ್ರೇರಣೆ ಆಗುತ್ತದೆ,  ಈ ಬಗ್ಗೆ  ಯೋಚಿಸುತ್ತಿರಲು,  ಅವನ ನಂಬಿಕೆಯ  ಇಬ್ಬರು  ಬಂಟರಾದ   ಯಾದವ ಹಾಗು ಮುರಾರಿ ಸ್ವಯಂ ಇಚ್ಚೆಯಿಂದ  ಮಂದೆಬಂದು  ತಮ್ಮನ್ನು   ಬಲಿ  ಗೆ ಅರ್ಪಣೆ ಮಾಡಿ ಕೊಳ್ಳುತ್ತಾರೆ . ಅವರ ಶಿರವನ್ನು   ಭೂಮಿಯಲ್ಲಿ  ಸಿಕ್ಕ ನಾಗಮುರಿ  ಖಡ್ಗದಿಂದ  ಕಡಿಯಲಾಗುತ್ತದೆ.  ಈ ರೀತಿ ದೊರೆತ ಸಂಪತ್ತಿ ನ  ಸಹಾಯದಿಂದ ತಮ್ಮ ರಾಜ್ಯ ಕಟ್ಟುತ್ತಾರೆ  . ಒಂದು ಸಣ್ಣ  ಸೈನಿಕ ಪಡೆ ಕಟ್ಟಿ ಸುತ್ತಮುತ್ತಲಿನ  ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆಯುತ್ತಾರೆ . ಈ ವಿಚಾರ  ತಿಳಿದ  ವಿಜಯನಗರ  ಅರಸರ ಪಡೆ ಇವರನ್ನು  ಬಂಧಿಸಿ ವಿಜಯನಗರಕ್ಕೆ ಕರೆದೊಯ್ಯುತ್ತದೆ . ಕಾಲಾನಂತರ ಇವರನ್ನು   ವಿಜಯನಗರ ಅರಸರ  ಪ್ರತಿನಿಧಿ ಗಳೆಂದು ಗುರುತಿಸಿ ವಿಜಯನಗರ ಅರಸರ  ಮೊಹರು ನೀಡಿ ಬಿಡುಗಡೆ ಮಾಡುತ್ತಾರೆ .

ಕೆಳದಿಯ ದೇಗುಲದ ಒಂದು ನೋಟ

ವಿಜಯನಗರ ಅರಸರ   ಪ್ರತಿನಿಧಿಗಳಾಗಿ  ಕೆಳದಿರಾಜ್ಯ  ಸ್ಥಾಪಿಸುತ್ತಾರೆ , ಆಗಲೇ ಪ್ರಸಿದ್ದ ಕೆಳದಿ  ರಾಮೇಶ್ವರ  ದೇವಾಲಯ  ನಿರ್ಮಾಣದ ಬಗ್ಗೆ ಕಾರ್ಯ ಆರಂಭವಾಗುತ್ತದೆ . ಕೆಳದಿಯಲ್ಲಿ  ರಾಮೇಶ್ವರ ಹಾಗು ವೀರಭದ್ರ  ದೇಗುಲಗಳು  ಹೊಯ್ಸಳ ಹಾಗು ದ್ರಾವಿಡ  ಶೈಲಿಯಲ್ಲಿರುತ್ತವೆ .  ತಾಳಿ ಕೋಟೆ  ಯುದ್ದದ ನಂತರ ವಿಜಯನಗರ  ಅರಸರಿಂದ  ಬೇರ್ಪಟ್ಟ  ಕೆಳದಿ ನಾಯಕರು  ಸ್ವತಂತ್ರ ಕೆಳದಿ ಸಾಮ್ರಾಜ್ಯ ಕಟ್ಟುತ್ತಾರೆ  , ಕೆಳದಿಯಲ್ಲಿ ಶಿವಪ್ಪ ನಾಯಕ ಹಾಗು ಕೆಳದಿಯ ಚೆನ್ನಮ್ಮ ಆಳ್ವಿಕೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ . ನಂತರ  ಈ ಕೆಳದಿ ರಾಜ್ಯ  ಮೈಸೂರು ಸಂಸ್ಥಾನಕ್ಕೆ   ಹೈದರ್ ಅಲಿ ಕಾಲದಲ್ಲಿ  ಸೇರಿಕೊಳ್ಳುತ್ತದೆ.


ಕೆಳದಿಯ ಚೆನ್ನಮ್ಮ [ ಚಿತ್ರ ಕೃಪೆ  ಅಂತರ್ಜಾಲ  ಗೂಗಲ್ ಸರ್ಚ್ ] ಕೆಳದಿಯ  ಚೆನ್ನಮ್ಮ  ೧೬೭೭ ರಿಂದ  ೧೬೮೯ ರ ವರೆಗೆ  ಕೆಳದಿ ಸಾಮ್ರಾಜ್ಯದ   ಆಡಳಿತ ಚುಕ್ಕಾಣಿ ಹಿಡಿದು ಆಳುತ್ತಾಳೆ . ಬಹಳ ಸುಂದರ ಚೆಲುವಿ ಆಕೆ, ಅವಳ ಸೌಂದರ್ಯದ  ಬಗ್ಗೆ ಹಲವಾರು ಕಥೆಗಳು  ಆ ಭಾಗದಲ್ಲಿ  ಹರಡಿವೆ . ಕೆಳದಿಯ ಚೆನ್ನಮ್ಮನ  ಹುಟ್ಟೂರು  ಕುಂದಾಪುರ   ಅಲ್ಲಿನ ಸಿದ್ದಪ್ಪಶೆಟ್ಟಿ  ಎಂಬುವರ ಮಗಳು ಆಕೆ.   ಕೆಳದಿಯ ರಾಜ ಸೋಮಶೇಖರ ನಾಯಕನನ್ನು  ವಿವಾಹವಾಗುತ್ತಾಳೆ , ಕೆಳದಿಯ   ರಾಜ ಸೋಮಶೇಖರ  ಅಪಾರ ಸೌಂದರ್ಯವತಿ   ಚೆಮ್ಮನನ್ನು  ಪ್ರೀತಿಸಿ  ವಿವಾಹವಾಗುತ್ತಾನೆ . ೧೬೭೭  ರಲ್ಲಿ ರಾಜ ತೀರಿಕೊಂಡ  ನಂತರ  ಚೆನ್ನಮ್ಮ  ಕೆಳದಿಯ ಆಡಳಿತದ ಚುಕ್ಕಾಣಿ   ಹಿಡಿಯುತ್ತಾಳೆ .  ಹನ್ನೆರಡು ವರ್ಷದಲ್ಲಿ  ಉತ್ತಮ ಆಡಳಿತ ನೀಡಿ  ಪ್ರಖ್ಯಾತಿಯಾಗುತ್ತಾಳೆ   ಕನ್ನಡ ಮಣ್ಣಿನಲ್ಲಿ  , ಕೆಳದಿ ಸಾಮ್ರಾಜ್ಯ ಆಕ್ರಮಿಸಲು  ಬಂದ ಮೊಗಲ್  ರಾಜ  ಔರಂಗ್ ಜೇಬ್ ನ ಸೈನಿಕರನ್ನು ಎದುರಿಸಿ  ಮಣ್ಣು ಮುಕ್ಕಿಸುತ್ತಾಳೆ .   ಮರಾಟ ರಾಜ್ಯದ ಛತ್ರಪತಿ ಶಿವಾಜಿಯ ಮಗ ರಾಜಾರಾಂ ಛತ್ರಪತಿ  ಮೊಗಲರ  ಆಕ್ರಮಣಕ್ಕೆ ಹೆದರಿ ಇವಳ ಬಾಲಿ ಆಶ್ರಯ  ಪಡೆಯುತ್ತಾನೆ . ವಿದೆಶಿಯರೊಂದಿಗೆ ಅಂದಿನ ಕಾಲಕ್ಕೆ  ವ್ಯಾಪಾರ  ವ್ಯವಹಾರ ನಡೆಸಿದ ಧೀರ ಮಹಿಳೆ ಈ ಚೆನ್ನಮ್ಮ,  ಪೋರ್ಚುಗೀಸರು  ಚೆನ್ನಮ್ಮನ ಆಡಳಿತದ   ಅತ್ಯಂತ ಆತ್ಮೀಯ  ವ್ಯವಹಾರಿಕ  ಗೆಳೆಯರಾಗಿದ್ದರು . ಚೆನ್ನಮ್ಮನನ್ನು  "ಸಂಬಾರ  ರಾಣಿ " [ spice  queen ]  ಎಂದು ಕರೆಯುತ್ತಿದ್ದರು .  ಇಂತಹ  ವಿಶೇಷ  ಹೊಂದಿದ  ಕೆಳದಿಯ  ಸಾಮ್ರಾಜ್ಯಕ್ಕೆ ಒಮ್ಮೆ ಜೈ ಎನ್ನೋಣ .  ಮುಂದೆ .......    ಇತಿಹಾಸದ ನಿಧಿ .... ಈ ಪುಣ್ಯ ಪುರುಷರು ..... ?7 comments:

Badarinath Palavalli said...

ತಮ್ಮ ಮಾತು ನಿಜ, ಬ್ಲಾಗ್ ಪ್ರವೀಣ ಬಾಲಣ್ಣ ಈ ನಡುವೆ ಯಾಕೋ ಬ್ಲಾಗಿನಿಂದ ವಿಮುಖರಾದರಲ್ಲ ಎಂದಂತೂ ಬೇಸರ ಮಾಡಿಕೊಂಡಿದ್ದೆವು.

ಕೆಳದಿಯ ಮೂಲ ಇತಿಹಾಸವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ.
ಸಂಬಾರ ರಾಣಿ ಕೆಳದಿಯ ಚೆನ್ನಮ್ಮರ ವ್ಯಕ್ತಿತ್ವ ಮತ್ತು ಚಲುವನ್ನು ಸಮರ್ಥವಾಗಿ ನಿರೂಪಿಸಿದ್ದೀರ.

ಚಿನ್ಮಯ ಭಟ್ said...

ಧನ್ಯವಾದ ಬಾಲಣ್ಣಾ :)

ಚುಕ್ಕಿಚಿತ್ತಾರ said...

ಕೆಳದಿಯ ಇತಿಹಾಸದ ಬಗೆಗಿನ ತಮ್ಮ ಬರಹ ಸುಂದರವಾಗಿದೆ.. ಇಪ್ಪತ್ತೈದು ವರ್ಷ ಕೆಳದಿ ರಾಜ್ಯಭಾರ ಮಾಡಿದ ಚನ್ನಮ್ಮ ಅಪ್ರತಿಮಳು. ಗಂಡ ಸೋಮಶೇಖರನಾಯಕ ನರ್ತಕಿ ಕಲಾವತಿಯ ಮೋಹದಲ್ಲಿ ಮೈ ಮರೆತಿದ್ದಾಗ ರಾಜ್ಯ ಅನಾಥವಾಗಬಾರದೆಂದು ಪ್ರಜೆಗಳ ಸಂರಕ್ಷಣೆಯ ಹೊಣೆ ಹೊತ್ತಾಕೆ. ಆಶ್ರಯ ಬೇಡಿದವರಿಗೆ ಆಶ್ರಯ ನೀಡುವುದು ಧರ್ಮ ಎಂದು ಛತ್ರಪತಿ ಶಿವಾಜಿಯ ಮಗ ರಾಜಾರಾಮನಿಗೆ ಆಶ್ರಯವಿತ್ತು ಜಿಂಜಿ ಕೋಟೆಗೆ ಕಳುಹಿಸಿಕೊಡುತ್ತಾಳೆ. ಈ ಕಾರಣದಿಂದ ಔರಂಗಜೇಬನ ದ್ವೇಷ ಕಟ್ಟಿಕೊಂಡರೂ ಆತನ ಮಗ ಅಜಮ್ತಾರನನ್ನು ಹಿಮ್ಮೆಟ್ಟಿಸುತ್ತಾಳೆ. ಅಜಂತಾರ ಮಲೆನಾಡಿನ ಅರಣ್ಯ, ಕಣಿವೆ, ಗುಡ್ಡ ಗಾಡು , ಮತ್ತು ಅಸಾಧ್ಯ ಮಳೆಯ ಪ್ರಭಾವದಿಂದ ಕನ್ನಡ ವೀರರನ್ನು ಸೋಲಿಸಲು ಕಷ್ಟಪಡುತ್ತಾನೆ. ಕೊನೆಯಲ್ಲಿ ಚನ್ನಮ್ಮನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾನೆ. ಔರಂಗಜೇಬ ಕೆಳದಿ ರಾಣಿಯನ್ನು ಸ್ವತಂತ್ರ ಳೆಂದು ಗೌರವಿಸುತ್ತಾನೆ. ಹೀಗಾಗಿ ಔರಂಗಜೇಬ ನೊಂದಿಗೆ ಯುದ್ಧ ಮಾಡಿ ಜಯ ಪಡೆದ ಮೊದಲ ಗೌರವ ಧೀರ ಚನ್ನಮ್ಮಳದಾಗಿದೆ.

ಆದರೆ ಒಂದು ಗೊಂದಲ ಇದೆ .. ಸಾಂಬಾರ ರಾಣಿ ಅಥವಾ ಕರಿಮೆಣಸಿನ ರಾಣಿ ಎಂದು ಉಳ್ಳಾಲದ ಅಬ್ಬಕ್ಕ ರಾಣಿಯನ್ನು ಕರೆಯುತ್ತಿದ್ದುದಾಗಿ ಪಾಠದಲ್ಲೆಲ್ಲೂ ಓದಿದ ನೆನಪು. ಚನ್ನಮ್ಮ ಸಾಂಬಾರ ಪದಾರ್ಥಗಳನ್ನು ಮತ್ತು ಇತರೆ ವಸ್ತುಗಳನ್ನು ಪೋರ್ಚುಗೀಸರೊಂದಿಗೆ ವ್ಯಾಪಾರ ಮಾಡುತ್ತಿದ್ದರೂ ರಾಣಿ ಅಬ್ಬಕ್ಕ ಕರಿಮೆಣಸಿನ ರಾಣಿ ಎಂದು ಪ್ರಸಿದ್ಧಳಾಗಿದ್ದು ಎಂದು ಓದಿದ ನೆನಪು. ವಿಕಿಪೀಡಿಯ ದಲ್ಲಿ ಇಬ್ಬರ ವಿಷಯದಲ್ಲೂ ಸಾಂಬಾರ ರಾಣಿ ಎಂದು ನಮೂದಿಸಲಾಗಿದೆ. ಯಾವುದಕ್ಕೂ ಸ್ಥಳೀಯ ಆಸಕ್ತರಲ್ಲಿ ವಿಚಾರಿಸಿದರೆ ತಿಳಿದೀತು.

ವಂದನೆಗಳು.

Harini Narayan said...

ಇದೇ ಚೆನ್ನಮ್ಮನನ್ನು ನಾನು ಓದುವಾಗ " ಕಾಳು ಮೆಣಸಿನ ರಾಣಿ - Queen of Pepper " ಎಂದು ಓದಿದ್ದೆ. ಇಷ್ಟೆಲ್ಲಾ ಬರೆದವರು ವಾಸ್ತು ಪುರುಷನ ಬಗ್ಗೆ ಬರೆದಿಲ್ಲವೇಕೆ ? ಆಶ್ಚರ್ಯ. ಅದೊಂದು ಅಪರೂಪದ ಕೃತಿ. ಕೆಳದಿ ರಾಮೇಶ್ವರನ ಗುಡಿಯ ಹೊರಗೋಡೆಯಲ್ಲಿದೆ .. ಒಳ್ಳೆಯ ಮಾಹಿತಿ..

ಮನಸು said...

ಧನ್ಯವಾದಗಳು ಸರ್.
ಕೆಳದಿ ಚೆನ್ನಮ್ಮನ ಬಗ್ಗೆ ಎಷ್ಟೆಲ್ಲಾ ಮಾಹಿತಿ ನೀಡಿದ್ದೀರಿ. ನನಗೆ ಸಾಂಬಾರ್ ಕ್ವೀನ್ ಎಂದು ಕರೆದಿರುವ ಬಗ್ಗೆ ಗೊತ್ತೇ ಇರಲಿಲ್ಲ.

Gopal Wajapeyi said...

ಬಾಲೂ ಜಿ,
ನಿಮ್ಮ ನಿರೂಪಣೆ ಸರಳತೆಯಿಂದ ಕೂಡಿ, ಇಷ್ಟವೆನಿಸಿ, ಓದನ್ನು ಮುಂದುವರಿಸುವಂತೆ ಮಾಡುತ್ತದೆ. ನಿಮ್ಮ ಚಿತ್ರಗಳಂತೂ ಯಾವಾಗಲೂ ಸಮರ್ಪಕತೆಯಲ್ಲಿ ಎತ್ತಿದ ಕೈ. ಅದಕ್ಕಾಗಿ ಅಭಿನಂದನೆಗಳು.
ಆದರೆ, ಈ ಲೇಖನದಲ್ಲಿ ನೀವು ಪ್ರಸ್ತಾಪಿಸಿರುವ ಹುತ್ತದ ಮೇಲೆ ಹಸು ಹಾಲು ಸುರಿಯುವ ವಿಚಾರದ ಕುರಿತು... ಇಂಥ ಹೇಳಿಕೆಗಳು ನಿಮಗೆ ದೇಶದ ಯಾವದೇ ಮೂಲೆಗೆ ಹೋದರೂ ಕೇಳಿಬರುತ್ತವೆ. ಅಷ್ಟೇ ಏಕೆ, 'ವೆಂಕಟೇಶ ಮಹಾತ್ಮೆ'ಯಲ್ಲಿಯೂ ಇದು ಪ್ರಮುಖ ಪ್ರಸಂಗ. ಇನ್ನು ಯಡೆಯೂರು ಸಿದ್ಧಲಿಂಗೇಶ್ವರರ ಚರಿತ್ರೆಯಲ್ಲೂ ಇಂಥ ಪ್ರಸಂಗವಿದೆ. ಆದ್ದರಿಂದ, ಈ ಪ್ರಸಂಗ ಹಾಗೂ ದೇವರು ಸ್ವಪ್ನದಲ್ಲಿ ಬಂದು ಮಂದಿರ ನಿರ್ಮಿಸಲು ಹೇಳುವುದು, ಅಥವಾ ಇಂಥಲ್ಲಿ ಭೂಗತನಾಗಿದ್ದೇನೆ ಎಂದು ತಿಳಿಸುವುದು ಇವೆಲ್ಲ ಬಹುಶಃ ನಮ್ಮಲ್ಲಿ ಭಕ್ತಿಯನ್ನು ಜಾಗೃತಗೊಳಿಸುವ ಉಪಾಯಗಳಾಗಿರಬಹುದು ಎನಿಸುತ್ತದೆ.

Shivakumar Negimani said...

ಸುಂದರವಾಗಿದೆ..