|
ಹೊಯ್ಸಳ ಸಾಮ್ರಾಜ್ಯಕ್ಕೆ ಸ್ವಾಗತ |
ಕಳೆದ ಸಂಚಿಕೆಯಲ್ಲಿ ಸಕಲೇಶಪುರದ ಬಳಿ ಇರುವ "ಮಂಜರಾಬಾದ್ ಕೋಟೆ ಕೊತ್ತಲ "ಗಳ ದರ್ಶನ ಮಾಡಿ, ಇಲ್ಲಿಗೆ ಬಂದಾಗ ನಮ್ಮನ್ನು ಸ್ವಾಗತಿಸಿದ್ದು "ಕಲ್ಲಿನ ಕುಟ್ಟಾಣಿ." , ಅಚ್ಚರಿ ಎಂದರೆ ಇಲ್ಲಿ ಶಿಲೆಗಳನ್ನು ಕುಟ್ಟಿ ಸುಂದರ ಆಕಾರ ನೀಡಿ ಐತಿಹಾಸಿಕ ಕಲೆಯನ್ನು ವೈಜ್ಞಾನಿಕವಾಗಿ ಅರಳಿಸಿ ಕೊಡುಗೆ ನೀಡಿದ್ದಾರೆ ಅಂದಿನ ಜನರು. ಹೌದು ಇಲ್ಲಿ ಅಂದಿನ ವಿಜ್ಞಾನದ , ಅಂದಿನ ತಾಂತ್ರಿಕತೆಯ , ಅಂದಿನ ಕಲಾ ಶ್ರೀಮಂತಿಕೆಯ ದರ್ಶನ ಆಗುತ್ತದೆ, ತೆರೆದ ಮನಸ್ಸಿನಿಂದ ನೋಡಲು ತೆರಳುವ ಮನುಷ್ಯನಿಗೆ ಸೌಂದರ್ಯದ ಜೊತೆ ಜ್ಞಾನ ದರ್ಶನ ಮಾಡಿಸುತ್ತದೆ .. ಆ ಊರೇ ಅಂದಿನ ಪ್ರಸಿದ್ದ ವೇಲಾಪುರಿ ಅಲಿಯಾಸ್ ವಿಶ್ವ ವಿಖ್ಯಾತ ಬೇಲೂರು .
|
ಬೇಲೂರು ದೇವಾಲಯದ ಪಕ್ಷಿನೋಟ |
ಬೇಲೂರಿಗೆ ಬರುವ ಹಾದಿಯಲ್ಲಿ ನಮ್ಮ ಗಿರೀಶ್ ಸೋಮಶೇಖರ್ ಹಲವಷ್ಟು ವಿಚಾರಗಳನ್ನು ತಿಳಿಸುತ್ತಾ ಬಂದರು , ದೇವಾಲಯದ ಆವರಣ ತಲುಪಿದ ನಾವು ಐತಿಹಾಸಿಕ ನೆಲದಲ್ಲಿ ಕಾಲಿಟ್ಟು ಧನ್ಯವಾದೆವು, ಬೇಲೂರ ಬಗ್ಗೆ ನಮಗೆ ಗೊತ್ತು ಇವನೇನು ಹೇಳುತ್ತಾನೆ , ಅನ್ನುತೀರಿ ಆಲ್ವಾ ? ಹೌದು ಇಲ್ಲಿಗೆ ಬರುವ ಎಲ್ಲರಿಗೂ ಇಲ್ಲಿನ ದೇವಾಲಯದ ಪ್ರತೀ ವಿಗ್ರಹದ ಪರಿಚಯ ಆಗಿರುತ್ತದೆ , ಹಾಗಾಗಿ ನಾನು ಆ ವಿಚಾರಕ್ಕೆ ಹೋಗುವುದಿಲ್ಲ, ಇಲ್ಲಿ ಕಳೆದ ಕೆಲವು ಘಂಟೆಗಳ ಕಾಲ ನಾನು ಗಮನಿಸಿದ ವಿಚಾರಗಳನ್ನು ಮಾತ್ರ ಇಲ್ಲಿ ದಾಖಲೆ ಮಾಡಿದ್ದೇನೆ . ನಿಜವಾಗಿಯೂ ಬೇಲೂರನ್ನು ಅರ್ಥ ಮಾಡಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ . ಇಲ್ಲಿನ ದೇವಾಲಯದ ಪೂರ್ತಿ ವಿಚಾರ ತಿಳಿಯಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ . ಎಷ್ಟು ನೋಡಿದರೂ ಪೂರ್ಣ ಇತಿಹಾಸ ತಿಳಿಯಲು ಸಾಧ್ಯವಾಗುವುದಿಲ್ಲ . ಆದರೂ ಸ್ವಲ್ಪ ವಿಚಾರ ತಿಳಿಯೋಣ ಬನ್ನಿ
|
ಬೇಲೂರ ದೇವಾಲಯದ ಕೀ ಪ್ಲಾನ್ [ ಚಿತ್ರ ಕೃಪೆ ವಿಕಿ ಪೀಡಿಯಾ ] |
ಪುರಾಣಗಳಲ್ಲಿ ಬೇಲೂರು ಪ್ರದೇಶವನ್ನು ವೇಲಾಪುರಿ ಅಥವಾ ವೇಲೂರು ಎಂದು ಕರೆಯಲಾಗಿದೆ, ಇದನ್ನು ದಕ್ಷಿಣದ ವಾರಣಾಸಿ ಎಂದು ಕರೆಯುತ್ತಿದ್ದುದ್ದಾಗಿ .... ಕೆಲವು ಕಡೆ ದಾಖಲಿಸಲಾಗಿದೆ . ಹೊಯ್ಸಳ ಅರಸರ ಕಾಲದಲ್ಲಿ ಅಪಾರ ಕೀರ್ತಿ ಗಳಿಸಿದ ಈ ಊರು, ಚನ್ನ ಕೇಶವನ ಸುಂದರ ದೇವಾಲಯದಿಂದ ವಿಶ್ವ ವಿಖ್ಯಾತಿ ಹೊಂದಿತು . ಸುಂದರ ದೇವಾಲಯದ ನಿರ್ಮಾಣದ ಬಗ್ಗೆ ಹಲವು ಕಥೆಗಳಿವೆ , ಹಲವು ಅಚ್ಚರಿಯ ವಿಚಾರಗಳಿವೆ
|
ಬೇಲೂರ ಚನ್ನಕೇಶವ ಸ್ವಾಮಿ [ ಚಿತ್ರ ಕೃಪೆ ವಿಕಿಪಿಡಿಯಾ ] |
ದೇವಾಲಯದ ನಿರ್ಮಾಣದ ಬಗ್ಗೆ ಮೂರು ವಿವಿಧ ಕಾರಣಗಳನ್ನು ಇತಿಹಾಸದ ವಿದ್ವಾಂಸರು ಹೇಳುತ್ತಾರೆ, ೧] ಹೊಯ್ಸಳ ದೊರೆಗಳಲ್ಲಿ ವಿಷ್ಣುವರ್ಧನ ಮಹಾರಾಜ ಬಹಳ ಪ್ರಸಿದ್ಧಿ ಹೊಂದಿದವ, ಆತ ಮೊದಲು ಜೈನ ಧರ್ಮ ಆಚರಣೆ ಅನುಸರಿಸಿ ನಂತರ ವೈಷ್ಣವ ಧರ್ಮ ಸ್ವೀಕರಿಸಿದ ಕುರುಹಾಗಿ ಬೇಲೂರಿನಲ್ಲಿ ಚೆನ್ನ ಕೇಶವನ ದೇವಾಲಯ ನಿರ್ಮಾಣ ಆಯಿತೆಂದು ವಿದ್ವಾಂಸರ ಒಂದು ತಂಡ ಅಭಿಪ್ರಾಯ ಪಡುತ್ತದೆ, ಆದರೆ ಅವನ ಪತ್ನಿ ಶಾಂತಲೆ ತಾನು ಜೈನ ಧರ್ಮದಲ್ಲೇ ಮುಂದುವರೆಯುತ್ತಾಳೆ , ಹಾಗಾಗಿ "ವಿಷ್ಣು ವರ್ಧನ ಅಥವಾ ಬಿಟ್ಟಿದೇವ" ನ ಕಾಲದಲ್ಲಿ ಜೈನ ಧರ್ಮ, ಹಾಗು ವೈಷ್ಣವ ಧರ್ಮಕ್ಕೆ ಸಮನಾದ ಮಹತ್ವ ನೀಡಲಾಗಿದೆಯೆಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.
|
ಬೇಲೂರ ದೇವಾಲಯ ಗೋಪುರ |
೨] ದೇವಾಲಯ ನಿರ್ಮಾಣದ ಬಗ್ಗೆ ಎರಡನೆಯ ಕಾರಣ ಬಸವ ಕಲ್ಯಾಣದ ಚಾಲುಕ್ಯ ದೊರೆ ವಿಕ್ರಮಾದಿತ್ಯ I V ನ ವಿರುದ್ದ ಸಾಧಿಸಿದ ವಿಜಯದ ನೆನಪಿಗಾಗಿ ಅಂದರೆ ಚಾಲುಕ್ಯರ ವಿರುದ್ದ ಹೊಯ್ಸಳರು ಸಾಧಿಸಿದ ವಿಜಯದ ನೆನಪಿಗಾಗಿ ಈ ದೇವಾಲಯ ನಿರ್ಮಾಣ ಆಯಿತೆಂದು ಅಭಿಪ್ರಾಯ ಪಡಲಾಗಿದೆ . ಇದಕ್ಕೆ ಕಾಲ ನಿರ್ಣಯ ತಾಳೆ ಆಗುತ್ತಿಲ್ಲ.
|
ಬೇಲೂರ ದೇವಾಲಯಕ್ಕೆ ನಾ ನಾ ಕಥೆಗಳು |
೩] ಮತ್ತೊಂದು, ಬಹು ಮುಖ್ಯ ವಿಚಾರ ಇಲ್ಲಿದೆ , ಕ್ರಿಸ್ತ ಶಕ ೧೧೧೬ ರಲ್ಲಿ ವಿಷ್ಣು ವರ್ಧನ ಗಂಗ ಅರಸರ ಸಹಾಯ ಪಡೆದು ತಲಕಾಡಿನ ಚೋಳ ಅರಸರೊಡನೆ ಕಾದಾಡಿ ದಿಗ್ವಿಜಯ ಸಾಧಿಸುತ್ತಾನೆ , ಈ ದಿಗ್ವಿಜಯದ ನೆನಪಿಗಾಗಿ ಕ್ರಿ.ಶ . ೧೧೧೭ ರಲ್ಲಿ ಬೇಲೂರಿನಲ್ಲಿ ಚೆನ್ನಕೇಶವನ ದೇವಾಲಯದ ನಿರ್ಮಾಣ ಪ್ರಾರಂಭಿಸಿದನೆಂದು ವಾದ ಮಂಡಿಸುತ್ತಾರೆ .
|
ಸುಂದರ ದೇವಾಲಯ ದರ್ಶನ |
ಮೇಲಿನ ಮೂರು ಕಾರಣ ಗಳನ್ನೂ ಅವಲೋಕಿಸಿದರೆ ಮೂರನೆಯ ಕಾರಣ ಸರಿ ಎನ್ನಿಸುತ್ತದೆ , ಅದಕ್ಕೆ ಪೂರಕ ಘಟನೆಗಳ ಆಧಾರವಿದೆ, ಮೊದಲನೆಯದಾಗಿ ತಲಕಾಡು ಯುದ್ಧ ನಡೆದದ್ದು ೧೧೧೬ ರಲ್ಲಿ ದೇವಾಲಯ ನಿರ್ಮಾಣ ೧೧೧೭ ರಲ್ಲಿ ಪ್ರಾರಂಭ ಆಯಿತೆಂಬ ಬಗ್ಗೆ ಯಾವುದೇ ಜಿಜ್ಞಾಸೆ ಇಲ್ಲ , ೧೧೧೭ ರಲ್ಲಿ ದೇವಾಲಯದ ನಿರ್ಮಾಣ ಶುರು ಆಯಿತೆಂದು ಐತಿಹಾಸಿಕ ದಾಖಲೆಗಳು ಹೇಳುತ್ತಿವೆ , ಹಾಗಾಗಿ ಇದು ಸತ್ಯಕ್ಕೆ ಹತ್ತಿರ ವಿರಬಹುದೆಂದು ಅನ್ನಿಸುತ್ತದೆ, ದೇವಾಲಯ ನಿರ್ಮಾಣ೧೧೧೭ ರಲ್ಲಿ ಪ್ರಾರಂಭವಾಗಿ ಬೇಲೂರು ದೇವಾಲಯದ ನಿರ್ಮಾಣ ಪೂರ್ಣ ಗೊಳಲು ೧೦೩ ವರ್ಷ ಆಯಿತೆಂದು ತಿಳಿದು ಬರುತ್ತದೆ, ವಿಷ್ಣುವರ್ಧನ ಅರಸನ ಮೊಮ್ಮೊಗ "ಎರಡನೇ ವೀರ ಬಲ್ಲಾಳ" ನ ಆಳ್ವಿಕೆಯಲ್ಲಿ ಪೂರ್ಣ ವಾಯಿತೆಂದು ಇತಿಹಾಸ ಕಾರರು ತಿಳಿಸುತ್ತಾರೆ .
|
ದೇವಾಲಯದ ಸುಂದರ ಆವರಣ |
ದೇವಾಲಯದ ಪ್ರಾಕಾರದಲ್ಲಿ ಅಲೆಯುತ್ತಿದ್ದ ನನಗೆ ಇವೆಲ್ಲಾ ವಿಚಾರಗಳು ಅಚ್ಚರಿ ಮೂಡಿಸಿದವು, ಆಗಿನ ಕಾಲದಲ್ಲಿ ರಾಜರು ತಮ್ಮ ಕಾಲದ ಐತಿಹಾಸಿಕ ಘಟನೆಗಳನ್ನು ಶಾಶ್ವತ ಗೊಳಿಸಲು ಇಂತಹ ಮಹತ್ವದ ದೇವಾಲಯಗಳ ನಿರ್ಮಾಣಕ್ಕೆ ಮುಂದಾಗುತ್ತಿದ್ದರು ಎಂಬ ವಿಚಾರ , ಹಾಗು ಅವನ್ನು ಹಲವಾರು ಶತಮಾನ ಕಳೆದರೂ ಜನಗಳ ಮನದಲ್ಲಿ ಅಚ್ಚಳಿಯದೆ ಉಳಿಸಲು ಕಂಡು ಹಿಡಿದುಕೊಂಡ ಮಾರ್ಗ ವಿಸ್ಮಯ ಗೊಳಿಸಿತು . ತಮ್ಮ ಕಾಲದ ಕಲೆ, ಜನ ಜೀವನ, ಆ ಕಾಲದ ಯುದ್ಧಗಳಲ್ಲಿ ಉಪಯೋಗಿಸುತ್ತಿದ್ದ ಉಪಕರಣಗಳು , ಪ್ರಾಣಿಗಳು, ಧಾರ್ಮಿಕ ಘಟನೆಗಳ ವಿವರ , ಇವುಗಳನ್ನು ಅನಾವರಣ ಗೊಳಿಸಲು , ತಮ್ಮ ಕಾಲದ ವಿಜ್ಞಾನದ ತಾಂತ್ರಿಕತೆಯನ್ನು ಮೆರೆಸಲು ಇದಕ್ಕಿಂತಾ ಇನ್ನೊಂದು ಮಾರ್ಗ ಖಂಡಿತ ಇರಲಿಲ್ಲ, ಈ ನಿಟ್ಟಿನಲ್ಲಿ ಈ ದೇವಾಲಯ ಸಾಕ್ಷಿಯಾಗಿ ನಮ್ಮ ತಾಂತ್ರಿಕತೆಯನ್ನು ಅಣಕಿಸುತ್ತಾ ನಿಂತಿದೆ .
|
ವಿಸ್ಮಯ ದೀಪ ಸ್ತಂಭ . |
ಬನ್ನಿ ಮತ್ತಷ್ಟು ವಿಚಾರದ ಒಳಗೆ ಹೋಗೋಣ ಬೇಲೂರಿನ ದೇವಾಲಯದ ನಿರ್ಮಾಣಕಾರ ಜಕಣಾ ಚಾರಿ ಎಂದು ಅಂದು ಕೊಂಡರೂ ನಿಖರವಾಗಿ ಕಲ್ಯಾಣ ಚಾಲುಕ್ಯ ಅರಸರ ಆಳ್ವಿಕೆಗೆ ಸೇರಿ ನಂತರ ಹೊಯ್ಸಳ ರಾಜರ ವಶವಾದ ಬಳ್ಳಿಗಾವೆ ಎಂಬ ಊರಿನ "ದಾಸೋಜ" ಹಾಗು "ಚವನ '' ಎಂಬ ಶಿಲ್ಪಿಗಳ ಉಸ್ತುವಾರಿಯಲ್ಲಿ ದೇವಾಲಯ ನಿರ್ಮಾಣ ಕಾರ್ಯ ಆಯಿತೆಂದು ತಿಳಿದುಬರುತ್ತದೆ. ದೇವಾಲಯ ನಿರ್ಮಾಣಕ್ಕೆ ೧೦೩ ವರ್ಷ ತೆಗೆದುಕೊಂಡ ಕಾರಣ ಹಲವು ಶಿಲ್ಪಿಗಳು ಬದಲಾಗಿರುವ ಸಾಧ್ಯತೆ ಇರುತ್ತದೆ ಈ ಬಗ್ಗೆ ಹೆಚ್ಚಿನ ಸಂಶೋದನೆ ಅಗತ್ಯವಿದೆ . ಸುಂದರ ಚೆನ್ನಕೇಶವನ ಮೂರ್ತಿಯನ್ನು "ಬಾಬಾ ಬುಡನ್ ಗಿರಿ " ಬೆಟ್ಟಗಳ ಶ್ರೇಣಿಯಲ್ಲಿ ಸಿಕ್ಕ ಕಲ್ಲುಗಳಲ್ಲಿ ಕೆತ್ತಿ ತರಲಾಯಿತೆಂದು , ಆ ಸಮಯದಲ್ಲಿ ಅಮ್ಮನವರ ಮೂರ್ತಿ ಕೆತ್ತುವಾಗ ತಾಂತ್ರಿಕವಾಗಿ ತಪ್ಪಾಗಿ ಅದನ್ನು ಅಲ್ಲಿಯೇ ಬಿಡಲಾಯಿತೆಂದೂ ಹಾಗಾಗಿ ಚೆನ್ನಕೇಶವ ದೇವರು ಬಾ ಬಾ ಬುಡನ್ ಗಿರಿ ಶ್ರೇಣಿಗೆ ಸಂಚಾರಕ್ಕಾಗಿ ಆಗಾಗ್ಗೆ ತೆರಳುವುದಾಗಿಯೂ , ಆ ಕಾರಣದಿಂದ ಪ್ರತೀ ವರ್ಷ ಹೊಸ ಚಪ್ಪಲಿ ಮಾಡಿಕೊಡುತ್ತಿರುವುದಾಗಿ ಇಲ್ಲಿನ ಜನ ಹೇಳುತ್ತಾರೆ, ಇದನ್ನು ಸಿದ್ದಪಡಿಸಲು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ಸಮೀಪದ ಬಸವಪಟ್ಟಣದ ಕೆಲವು ಮನೆತನದವರು ಸೇವೆ ಮಾಡುತ್ತಿದ್ದು, ಅವರಿಗೆ ದೇವಾಲಯದಲ್ಲಿ ಪ್ರತೀ ವರ್ಷ ಈ ಸೇವೆ ಮಾಡಲು ಇಂದಿಗೂ ಅವಕಾಶ ಮಾಡಿಕೊಡುತ್ತಿರುವುದಾಗಿ ಹೇಳಲಾಗುತ್ತದೆ. ಈ ವಿಚಾರವನ್ನು ಹಯವದನ ರಾಯರ ಗೆಜೆಟ್ ನಲ್ಲಿಯೂ ಪ್ರಸ್ತಾಪಿಸಲಾಗಿದೆ.
|
ಸುಂದರ ಗರುಡ ಮೂರ್ತಿ |
ದೇವಾಲಯದಲ್ಲಿ ಅದ್ಭುತ ಕೆತ್ತನೆ ಇದ್ದು ಯಾವ ಮೂರ್ತಿಗಳು ಎಷ್ಟು ಇವೆ ಎಂಬ ಬಗ್ಗೆ ಮಾಹಿತಿ ಎಲ್ಲಿಯೂ ದೊರೆಯಲಾರದು ಆದರೆ ಹಳೆಯ ಗೆಜೆಟ್ ಗಳಲ್ಲಿ ಅದನ್ನು ಸಹ ವಿವರವಾಗಿ ದಾಖಲೆ ಮಾದಲಾಗಿದೆ. ಬೇಲೂರ ದೇವಾಲಯದಲ್ಲಿ ಮೂರು ಬಾಗಿಲುಗಳು ಇದ್ದು ಅವು ಪೂರ್ವ, ದಕ್ಷಿಣ ಹಾಗು ಉತ್ತರ ಅಬಿಮುಖವಾಗಿವೆ. ಪೂರ್ವ ಬಾಗಿಲು ಹೆಬ್ಬಾಗಿಲು ಆದರೆ , ದಕ್ಷಿಣದ ಬಾಗಿಲು ಶುಕ್ರವಾರದ ಬಾಗಿಲು [ ಬಹುಷಃ ಹಿಂದಿನ ಶತಮಾನಗಳಲ್ಲಿ ಶುಕ್ರವಾರದಂದು ಈ ಬಾಗಿಲಿನಲ್ಲಿ ಪ್ರವೇಶ ಇತ್ತೆಂದು ಕಾಣುತ್ತದೆ ] , ಉತ್ತರದ ಬಾಗಿಲು ಸ್ವರ್ಗದ ಬಾಗಿಲು, ಇದನ್ನು ಉತ್ತರಾಯಣ ಪುಣ್ಯಕಾಲದಲ್ಲಿ ತೆರೆದು ಪ್ರವೇಶಕ್ಕೆ ಅನುವು ಮಾಡಿ ಕೊಡುತ್ತಾರೆ . ದೇವಾಲಯದ ಆವರಣದ ಮಧ್ಯಭಾಗದಲ್ಲಿ ಚನ್ನಕೇಶವ ದೇಗುಲ, ದೇಗುಲದ ಹಿಂಬಾಗಕ್ಕೆ ಸ್ವಲ್ಪ ದಕ್ಷಿಣಕ್ಕೆ "ಕಪ್ಪೆ ಚನ್ನಿಗರಾಯ" ಹಾಗು ಸೌಮ್ಯ ನಾಯಕಿ ದೇಗುಲ ಇದೆ, ಅದರ ಸನಿಹದಲ್ಲಿ "ವೀರ ನಾರಾಯಣ" ದೇಗುಲ ,ಕಂಡು ಬರುತ್ತದೆ.
|
ಅನಂತ ಶಯನ ಇಲ್ಲಿದ್ದಾನೆ |
ದೇವಾಲಯದಲ್ಲಿ ಯಾವ ಮೂರ್ತಿಗಳು ಎಷ್ಟಿವೆ ಎಂಬ ಬಗ್ಗೆ ತಿಳಿಯೋಣ ಬನ್ನಿ , ಗೆಜೆಟ್ ನಲ್ಲಿ ದಾಖಲಾದ ಅಧಿಕೃತ ಮಾಹಿತಿಯಂತೆ ವಿಷ್ಣುವಿನ ೩೨ , ಲಕ್ಷ್ಮಿ ನಾರಾಯಣ.. ೨, ವಾಮನ.. ೧
, ನರಸಿಂಹ ..,೨ , ವರಾಹ .., ೨ , ರಂಗನಾಥ .. ೧, ಬಲರಾಮ .. , ೧, ಶಿವ ಪಾರ್ವತಿ.. , ೧, ಶಿವ ಗಜಾಸುರನಾಗಿ.. . ೧ , ಹರಿಹರ ... ೨, ಸೂರ್ಯ .., ೪, ಪಾರ್ವತಿಯ ವಿವಿಧ ಅವತಾರ.. . ೫ , ಭೈರವ.. ೨ , ರತಿ ಮನ್ಮತ.. , ೧, ಗಣೇಶ,ಸರಸ್ವತಿ, ಬ್ರಹ್ಮ, ಗರುಡ ತಲಾ ಒಂದು , ದೇವರ ಮೂರ್ತಿಗಳನ್ನು ನೋಡ ಬಹುದು . ಜೊತೆಗೆ ಎಂಬತ್ತಕ್ಕೂ ಹೆಚೀನ ಮದನಿಕೆಯರ ಸುಂದರ ಮೂರ್ತಿಗಳು ಇಲ್ಲಿ ಕಾಣ ಸಿಗುತ್ತವೆ.
|
ದೇವಾಲಯದ ಆವರಣದಲ್ಲಿ ಸುಂದರ ಕಿಟಕಿಯ ಕೆತ್ತನೆ |
ಚೆನ್ನಕೇಶವನ ಸನ್ನಿಧಿಯಲ್ಲಿ ದರ್ಶನ ಪಡೆದು ಅಡ್ಡಾಡಿದ ನನ್ನ ಕಣ್ಣಿಗೆ ಅಚ್ಚರಿ ಮೂಡಿಸಿದ ಒಂದು ಕಿಟಕಿ ಇದು ಯಾವ ಶಿಲ್ಪಿಯ ಕಲ್ಪನೆಯ ಕಲೆಯೋ ಕಾಣೆ ಕಲ್ಲಿನಲ್ಲಿ ಹೂಗಳನ್ನು ಅರಳಿಸಿ ತಾಂತ್ರಿಕವಾಗಿ ಉತ್ಕೃಷ್ಟವಾದ ಈ ಕೆತ್ತನೆ ರಚನೆ ಕಣ್ಣಿಗೆ ಬಿತ್ತು , ಯಾವುದೇ ಯಂತ್ರದ ಸಹಾಯವಿಲ್ಲದೆ, ಎಲ್ಲಿಯೂ ಗಣಿತದ ಸೂತ್ರಗಳಿಗೆ ಲೋಪವಾಗದಂತೆ, ತನ್ನ ಕೌಶಲ ತೋರಿದ ಆ ಕೈಗಳಿಗೆ ಯಾವ ದೈವ ಶಕ್ತಿ ನೀಡಿತು ಎಂಬ ಅಚ್ಚರಿ ಕಾಡಿತು . ನನ್ನ ಈ ಹುಡುಕಾಟವನ್ನು ಕಂಡು ಅತ್ತ ಮದನಿಕೆಯರು ಮನದಲ್ಲೇ ನಗುತ್ತಿರುವಂತೆ ಅನ್ನಿಸಿ .... ಮದನಿಕೆಯರ ಬಳಿ ಸಾಗಿದೆ.
|
ಸೌಂದರ್ಯಕ್ಕೆ ಮನಸೋತ ಮನಸೆಂಬ ಕೊತಿ. |
ಮೊದಲು ಹೋದದ್ದು ಈ ವಿಗ್ರಹದ ಹತ್ತಿರ ಶಿಲೆ ಆಗಿದ್ದರು ತನ್ನ ಸೌಂದರ್ಯದಿಂದ ಎಂತಹ ಮನಸನ್ನಾದರೂ ಚಂಚಲ ಗೊಳಿಸುವ ತಾಕತ್ತು ಈ ಮೂರ್ತಿಗಿದೆ , ಅದಕ್ಕೆ ಇರಬೇಕು ಒಂದು ಕೋತಿ ಸುಂದರಿಯ ವಸ್ತ್ರ ಎಳೆಯುವ ಸನ್ನಿವೇಶ ಎಷ್ಟಾದರೂ ನಮ್ಮ ಮನಸುಗಳು ಕೋತಿ ಇದ್ದ ಹಾಗೆ ಅಲ್ವೆ.. !
|
ದರ್ಪಣ ಸುಂದರಿ |
ಮತ್ತೊಬ್ಬಳು ಕನ್ನಡಿಯಲ್ಲಿ ತನ್ನ ಸೌಂದರ್ಯ ನೋಡುತ್ತಾ ಮೈಮರೆತಿರುವ ಸುಂದರಿ, ತನ್ನ ರೂಪ ಅಲಂಕಾರದ ಬಗ್ಗೆ ತನ್ನ ಬಿಂಬವನ್ನು ಕನ್ನಡಿಯಲ್ಲಿ ನೋಡುತ್ತಾ ಮೈಮರೆತ ಸುಂದರಿ , ತನ್ನ ಸುತ್ತಲಿನ ಪ್ರಪಂಚದ ಅರಿವಿಲ್ಲದೆ ತನ್ನದೇ ಲೋಕದಲ್ಲಿ ವಿಹರಿಸುತ್ತಾ ಚೆಲುವನ್ನು ಚೆಲ್ಲುತ್ತಾ ನಿಂತಿದ್ದಾಳೆ, ನಾನು ನಕ್ಕರು ಅವಳು ನಗಲಿಲ್ಲ. ಹಾಗೆ ಎಲ್ಲಾ ಮದನಿಕೆಯರ ಚಿತ್ರ ತೆಗೆಯುತ್ತಾ ಮೈಮರೆತು ಸಾಗಿದೆ. ಮದನಿಕೆಯ ಚೆಲುವಿನ ಬಲೆಯಲ್ಲಿ ಕರಗಿ ಹೊಗಿದ್ದೆ. ಕ್ಯಾಮರ ಇವರ ಸೌಂದರ್ಯವನ್ನು ತನ್ನ ಹೊಟ್ಟೆಗೆ ತುಂಬಿಸಿಕೊಳ್ಳುತ್ತಿತ್ತು ,
|
ಹಿರಣ್ಯ ಕಶಿಪುವಿನ ವಧೆ |
|
ಮಾನವನ ಕರುಳು |
ಮುಂದೆ ಸಾಗಿದ ನನಗೆ ನರಸಿಂಹ ದೇವರ ವಿಗ್ರಹದ ದರ್ಶನ ಆಯಿತು, ಯಾಕೋ ಗೊತ್ತಿಲ್ಲ, ಈ ನರಸಿಂಹ ಹಿರಣ್ಯ
ಕಷಿಪುವನ್ನು ಸಂಹಾರ ಮಾಡುತ್ತಿರುವ ಚಿತ್ರ ವೈಜ್ಞಾನಿಕವಾಗಿ ಅಚ್ಚರಿ ಮೂಡಿಸಿತು,
ಚಿತ್ರಗಳನ್ನೂ ಒಮ್ಮೆ ಹೋಲಿಸಿ ನೋಡಿ ನರಸಿಂಹ ವಿಗ್ರಹದ ಕೈಯಲ್ಲಿ ಹಿರಣ್ಯಕಶಿಪುವಿನ ಕರುಳಿನ ಹಾರವಿದೆ. ಕೆಳಗಿನ ಚಿತ್ರ ನೋಡಿ ನಮ್ಮ ಹೊಟ್ಟೆಯೊಳಗೆ ಅಡಗಿರುವ ಕಣ್ಣಿಗೆ ಕಾಣದ ಕರುಳುಗಳ ಮಾಲೆ ರಚನೆ ಇದೆ , ಇಲ್ಲಿ ಅಚ್ಚರಿ ಎಂದರೆ ಕ್ರಿ.ಶ . ೧೧೧೭ ದೇವಾಲಯ ನಿರ್ಮಾಣ ಮಾಡುವ ಸಮಯದ ಶಿಲ್ಪಿಗಳಿಗೆ ಹೊಟ್ಟೆಯೊಳಗೆ ಇರುವ ಕರುಳಿನ ಕಲ್ಪನೆ ಹೇಗೆ ಬಂತೂ ಅನ್ನುವ ವಿಚಾರ . ಹೌದಲ್ವಾ ಅಂದಿನ ದಿನಗಳಲ್ಲಿ ಯಾವುದೇ ಸ್ಕ್ಯಾನರ್ ಗಳು ಇರಲಿಲ್ಲ, ಹೊಟ್ಟೆಯೊಳಗಿನ ಅಂಗಗಳನ್ನು ತೋರುವ ಯಾವುದೇ ಯಂತ್ರ ಆ ದಿನಗಳಲ್ಲಿ ಇರಲಿಲ್ಲ ಆದರೂ ನಿಜದ ತಲೆಯ ಮೇಲೆ ಹೊಡೆದಂತೆ ಕರುಳಿನ ರಚನೆಯನ್ನು ಕಲ್ಲಿನಲ್ಲಿ ಕೆತ್ತಿದ ಶಿಲ್ಪಿ ಎಂತಹ ವಿಜ್ಞಾನಿ ಇರಬೇಕು ಆಲ್ವಾ, ... ಇತಿಹಾಸವನ್ನು ನಿಕೃಷ್ಟವಾಗಿ ಕಾಣುವ ನಾವು ಇಂತಹ ವಿಚಾರಗಳ ಬಗ್ಗೆ ಯಾಕೆ ಅರಿಯುವುದಿಲ್ಲವೋ ಕಾಣೆ, ಒಂದು ಕ್ಷಣ ನನ್ನ ಬಗ್ಗೆ ನನಗೆ ನಾಚಿಕೆ ಆಯಿತು.
|
ಗಜಾಸುರ ಸಂಹಾರ ಮಾಡುತ್ತಿರುವ ಶಿವ |
ಇಲ್ಲಿನ ಕಲೆಗಳ ಒಳ ಅರ್ಥವನ್ನು ನೋಡುತ್ತಾ ನಡೆಯುತ್ತಿದ್ದಷ್ಟು ನನ್ನ ಅಜ್ಞಾನದ ಅಹಂ ಕಡಿಮೆ ಆಗುತ್ತಿತ್ತು, ಇಂದಿನ ತಾಂತ್ರಿಕತೆ ಬಗ್ಗೆ ಬೀಗುತ್ತಿರುವ ನಾವು ಅರಿಯದೆ ಇರುವ ಬಹಳಷ್ಟು ವಿಚಾರಗಳನ್ನು ಬೇಲೂರಿನ ದೇಗುಲ ಅಡಗಿಸಿಕೊಂಡಿದೆ , ಕಣ್ತೆರೆದು ನೋಡಬೇಕಾದ ನಾವುಗಳು ವಿಜ್ಞಾನದ ಯಂತ್ರಗಳ ದಾಸರಾಗಿ , ವೈಜ್ಞಾನಿಕತೆ ಎಂಬ ಸೋಗಿನ ಕಪ್ಪು ಬಟ್ಟೆಯನ್ನು ಕಣ್ಣಿಗೆ ಕಟ್ಟಿಕೊಂಡು ಕೋಪ ಮಂಡೂಕಗಳಂತೆ ಬಾಳುತ್ತಿದ್ದೇವೆ, ಅತ್ತ ಶಿವ ಗಜಾಸುರ ಸಂಹಾರ ಮಾಡುತ್ತಿದ್ದರೆ ಇತ್ತ ನನ್ನಲ್ಲಿನ ಅಹಂಕಾರ ಸಂಹಾರ ಆಗುತ್ತಿತ್ತು. ಹೆಚ್ಚಿನ ಸಮಯ ಕಳೆಯಲು ಆಸೆ ಇದ್ದರೂ ಮುಂದಿನ ಪಯಣ ಸಾಗಬೇಕಾಗಿತ್ತು, ಒಲ್ಲದ ಮನಸಿನಿಂದ ಹೊರಡಲು ಅನುವಾದೆ , ಅಲ್ಲೇ ಇದ್ದ ಮಗುವೊಂದು ಶಿಲ್ಪವನ್ನು ಕೈನಿಂದ ಸ್ಪರ್ಶಿಸಿ ಸಂತಸ ಪಡುತ್ತಿತ್ತು, ಇತ್ತ ಬಳಪದ ಕಲ್ಲಿನ ಮೂರ್ತಿಗಳು ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿದ್ದ ದೃಶ್ಯ ಕಂಡು ಬರುತ್ತಿತ್ತು, ಮುಂದಿನ ಪೀಳಿಗೆಯ ಜನರು ನಮ್ಮನ್ನು ಬೈಯ್ದುಕೊಳ್ಳದಂತೆ ಈ ಕಲೆಯ ಸಾಗರವನ್ನು ರಕ್ಷಣೆ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಅನ್ನಿಸಿತು.
|
ದಯವಿಟ್ಟು ನನಗಾಗಿ ಇದನ್ನು ಉಳಿಸಿ |
ಅಷ್ಟರಲ್ಲಿ ಗಿರೀಶ್ ಹತ್ತಿರ ಬಂದರು, ನಗುತ್ತಾ ಹತ್ತಿರ ಬಂದ ಗಿರೀಶ್ ಗೆ ಮನದಲ್ಲೇ ನಮಿಸಿದೆ , ಮುಂದಿನ ಪಯಣಕ್ಕೆ ಹೊರಟು ನಿಂತೆವು, ಮನದಲ್ಲಿ ಅಂದಿನ ಜ್ಞಾನ ಹಾಗು ಇಂದಿನ ವಿಜ್ಞಾನದ ನಡುವೆ ಸಂಘರ್ಷಣೆ ನಡೆದಿತ್ತು . ಬೇಲೂರಿನ ಮಯೂರ ಹೋಟೆಲ್ ನಲ್ಲಿದ್ದ ಗೆಳೆಯ ಮಂಜು ನಾಥ್ ಭೇಟಿ ಮಾಡಿ ಪಕೋಡ , ಹಾಗು ಕಾಫಿ ಸವಿದು, ಹರ್ಷ ಚಿತ್ತರಾಗಿ ಹೊರಟೆವು ... ದ್ವಾರ ಸಮುದ್ರದೆಡೆಗೆ , ........ !!!