Friday, August 2, 2013

ಈ ಹುಡುಗನ ಕಥೆಗೆ ಒಂದು ಹೆಸರು ಕೊಡಿ .................. !!

ಕರುಣಾಳು ಬಾ ಬೆಳಕೇ



ಹೌದು ಈ ಹುಡುಗನ ಕಥೆಗೆ   ಯಾವ ಹೆಸರನ್ನು ಇಡಬೇಕೆಂದು ಕಥೆ ಓದಿದ ನಂತರ ನೀವೇ ನಿರ್ಧರಿಸಿ.....![ ಸುಮಾರು  ಮೂವತ್ತು ವರ್ಷಗಳ  ಹಿಂದಿನ  ನೈಜ ಕಥೆ  ಹೆಸರುಗಳನ್ನ ಬದಲಾಯಿಸಿಸಲಾಗಿದೆ ]

ಅದೊಂದು ತಾಲೂಕು ಕೇಂದ್ರದ  ಸರ್ಕಾರಿ ಪ್ರೌಡ ಶಾಲೆ , ಸುತ್ತ ಮುತ್ತಲಿನ  ಹಳ್ಳಿ ಗಳಿಂದ , ಅಲ್ಲಿಗೆ ಗಂಡು ಹಾಗು ಹೆಣ್ಣು ಮಕ್ಕಳು ಬರುತ್ತಿದರು, ಆ ಶಾಲೆ ಹಲವು ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತಿತ್ತು, ಅಲ್ಲಿನ ಶಿಕ್ಷಕರೋ ಯಾವುದೇ ಪಟ್ಟಣದ  ಶಿಕ್ಷಕರಿಗೆ ಸೆಡ್ಡು ಹೊಡೆಯುವಂತೆ ಮಕ್ಕಳಿಗೆ ಕಲಿಸುತ್ತಿದ್ದರು, ಇನ್ನು ಶಿಸ್ತು ವಿಚಾರದಲ್ಲಿ  ಮಕ್ಕಳನ್ನು ತೀವ್ರವಾಗಿ ದಂಡಿಸಲಾಗುತ್ತಿತ್ತು, ಈಗಿನಂತೆ  ಅಪ್ಪ ಅಮ್ಮಂದಿರು,  ಮಕ್ಕಳಿಗೆ ಹೊಡೆದ ಶಿಕ್ಷಕರ  ವಿರುದ್ಧ  ಉಸಿರು ಬಿಚ್ಚುತ್ತಿರಲಿಲ್ಲ ಬಿಡಿ, ಹಾಗಾಗಿ ಮಕ್ಕಳು  ಶಿಕ್ಷಕರ ವಿರುದ್ಧ ಯಾವುದೇ ದೂರು ಪೋಷಕರ ಬಳಿ ದೂರುತ್ತಿರಲಿಲ್ಲ. ಆದರೆ ಶಿಕ್ಷಕರು  ಅಶಿಸ್ತು  ಕಂಡಲ್ಲಿ ಮಾತ್ರ ಶಿಕ್ಷೆ  ನೀಡುತ್ತಿದ್ದರು . ಇಲ್ಲಿ ನಕಲಿಗೆ ಅವಕಾಶ ವಿರಲಿಲ್ಲ ಹಾಗಾಗಿ  ಈ ಶಾಲೆ ಮಕ್ಕಳು ತನ್ನದೇ ಆದ ಹಿರಿಮೆ ಹೊಂದಿದ್ದರು .


ಇಂತಹ ಶಿಸ್ತು  ಬದ್ದ ಶಾಲೆಯಲ್ಲಿ  ಹಳ್ಳಿ ಯಿಂದ ಬರುತ್ತಿದ್ದ ನಮ್ಮ  ಈ ಕಥಾ ನಾಯಕ  "ಕುಮಾರ್"   , ಈ ಹುಡುಗ ಹಳ್ಳಿ ಇಂದ ಬರುತ್ತಿದ್ದ, ಯಾವುದೇ ಪಟ್ಟಣದ  ವಿಧ್ಯಾರ್ಥಿಗಳಿಗೆ  ಕಡಿಮೆ ಇಲ್ಲದಂತೆ ಶಾಲೆಗ ಬರುತ್ತಿದ್ದ.ಓದಿನಲ್ಲೂ ಅಷ್ಟೇ  ತರಗತಿಯಲ್ಲಿ ಮುಂದಿನ ಸಾಲಿನ ವಿಧ್ಯಾರ್ಥಿಗಳ ಗುಂಪಿನಲ್ಲಿ ಇವನ ಸ್ಥಾನವಿತ್ತು, ಹಳ್ಳಿ ಇಂದ ತರುತ್ತಿದ್ದ  ಇವನ ಸೈಕಲ್  ಹೊಡೆಯಲು ಎಲ್ಲಾ ಗೆಳೆಯರು ಹಾ ತೊರೆಯುತ್ತಿದ್ದರು , ಒಟ್ಟಿನಲ್ಲಿ  ಆ ಶಾಲೆಯಲ್ಲಿ  ಇವನೊಬ್ಬ ಹೀರೋ  ಆಗಿದ್ದ,  ಮೊದಲೇ  ಆ ತರಗತಿ  ಗಂಡು ಹಾಗು ಹೆಣ್ಣು ಮಕ್ಕಳು  ಜೊತೆಯಾಗಿ ಕಲಿಯುತ್ತಿದ್ದ  ತಾಣವಾಗಿತ್ತು,  ಓದದಿದ್ದರೆ ಹೆಣ್ಣುಮಕ್ಕಳ ಮುಂದೆ ಅವಮಾನ ಆಗುತ್ತೆ ಎಂದು ಗಂಡು ಮಕ್ಕಳೂ,  ಗಂಡು ಮಕ್ಕಳ ಮುಂದೆ ಅವಮಾನ ಆಗಬಾರದೆಂದು  ಹೆಣ್ಣುಮಕ್ಕಳು  ಒದುತ್ತಿದ್ದರು. ನಮ್ಮ ಹೀರೋ ಕೂಡ ಅಂದಿನ ದಿನದಲ್ಲಿ  ಇದೆ ಭಾವನೆಯಿಂದ ಓದುತ್ತಿದ್ದ.

ಅದೇ ತರಗತಿಯಲ್ಲಿ  "ಶೋಭಪ್ರಿಯ"  ಎಂಬ ಹುಡುಗಿಯೂ ಸಹ ಈ ಹುಡುಗನಿಗೆ ಸರಿ ಸಾಟಿಯಾಗಿ ಓದುತ್ತಾ ತನ್ನ ಹಿರಿಮೆ ಮೆರೆದಿದ್ದಳು, ಕೆಲವೊಮ್ಮೆ  ನಮ್ಮ ಕುಮಾರ್ ನಿಗೆ ಅರ್ಥ ಆಗದ ವಿಚಾರಗಳನ್ನು  ಆ ಹುಡುಗಿ  ವಿವರಿಸಿ ಸಹಾಯ ಮಾಡುತ್ತಿದ್ದಳು,  ಅದೇ ರೀತಿ ಅವಳಿಗೂ ಇವನ ಸಹಾಯ ಸಿಕ್ಕುತ್ತಿತ್ತು.  ಆದರೆ  ಅಂದಿನ ನಡವಳಿಕೆಗಳಲ್ಲಿ  ಅನುಮಾನ ಪಡುವ ಯಾವುದೇ  ಭಾವನೆಗಳು ಅವರಲ್ಲಿ ಇರಲಿಲ್ಲ . ಇವನೊಂದಿಗೆ ಹುಡುಗಿ ಮಾತಾಡೋದು ನೋಡಿ ಇವನ ಗೆಳೆಯರಿಗೆ  ಅಚ್ಚರಿ, ಅಸೂಯೆ, ಮುಂತಾದ ಭಾವನೆಗಳು ಸಹಜವಾಗಿಯೇ ಇತ್ತು. ಬಹುಷಃ  ಒಂದುರೀತಿಯ ಭಯ ಎನ್ನಬಹುದು.   ಹೊಸ ವರ್ಷದ  ಸಂದರ್ಭದಲ್ಲಿ   ಕೆಲವು ಆತ್ಮೀಯ ಗೆಳೆಯರು  ಈ ಹುಡುಗನಿಗೆ  '' ಹೊಸ ವರ್ಷದ  ಶುಭಾಷಯಗಳು "  ಎಂದು ನಮೂದಿಸಿ ನೋಟ್  ಪುಸ್ತಕಗಳನ್ನು  ನೀಡಿದ್ದರು, ಇವನೂ ಸಹ ಹಾಗೆ ಕೆಲವರಿಗೆ  ನೀಡಿದ್ದ ,  ಹಾಗೆ ನೋಟ್  ಪುಸ್ತಕ  ಪಡೆದವರಲ್ಲಿ ಆ ಹುಡುಗಿಯೂ ಇದ್ದಳು . ಅದೇ ರೀತಿ ಇರುವಾಗ  ಶಾಲಾ ಪ್ರವಾಸದ  ಕಾರ್ಯಕ್ರಮ  ಶಾಲೆಯವರು  ಏರ್ಪಾಡು ಮಾಡಿದರು, ಸರಿ  ನಮ್ಮ ಕುಮಾರ್  ಇಂತಹ ಅವಕಾಶ  ಮಿಸ್ ಮಾಡಿ ಕೊಳ್ಳುತ್ತಾನೆಯೇ  ತಾನೂ ಹೊರಡಲು ಸಿದ್ಧನಾದ,


ಹೀಗಿರಲು  ಪ್ರವಾಸದ ಹಣ ನೀಡುವ ಬಗ್ಗೆ ಒಮ್ಮೆ ಈ ಹುಡುಗ ತರಗತಿಯ ವೇಳೆಯಲ್ಲಿ  ಪ್ರವಾಸದ ಉಸ್ತುವಾರಿ ಹೊತ್ತ ಶಿಕ್ಷಕರ ಬಳಿ  ತೆರಳಿದ , ಹಣ ನೀಡಿದ ಬಗ್ಗೆ ರಸೀದಿ  ಪಡೆದು ಕ್ಲಾಸಿಗೆ ಬಂದು ನೋಡುತ್ತಾನೆ,  ಮೂರ್ನಾಲ್ಕು ಹುಡುಗರ ಗುಂಪು ಇವನ ನೋಟ್  ಪುಸ್ತಕ ಹಿಡಿದು ಚರ್ಚೆ ಮಾಡುತ್ತಿದ್ದಾರೆ. ಹತ್ತಿರ ಹೋದ ಇವನನ್ನು ಕಂಡು  ಜೋರಾಗಿ ನಕ್ಕ  ಆ ಗುಂಪು  "ಲೇ ಕುಮಾರ  ಕ್ಲಾಸ್  ಮುಗಿದ ಮೇಲೆ ಸಿಕ್ಕು  ನಿನ್ನ ಜೊತೆ ಮಾತಾಡಬೇಕು" ಎಂದಿತು . . ಅಷ್ಟರಲ್ಲಿ ಮೇಡಂ ಬಂದ  ಕಾರಣ ತರಗತಿ  ಮುಂದುವರೆಯಿತು . ಅಂದಿನ ಕೊನೆಯ ತರಗತಿ ಮುಗಿದ ಕಾರಣ  ಹೊರಗೆ ಬಂದ  ಇವನನ್ನು ಹಿಂಬಾಲಿಸಿದ ನಾಲ್ಕು  ಹುಡುಗರ ಗುಂಪು ,  ಕುಮಾರನಿಗೆ  ನಿಲ್ಲುವಂತೆ ಹೇಳಿ ಹತ್ತಿರ ಬಂದರು,

ಗುಂಪಿನಲ್ಲಿದ್ದ  ಮೃತ್ಯುಂಜಯ ಹೇಳಿದ  "ಲೋ  ಕುಮಾರ  , ನಿನ್ನ ಬಹಳ  ಒಳ್ಳೆ ಹುಡುಗ ಅಂತಾ ಅಂದುಕೊಂಡಿದ್ವಿ , ಆದ್ರೆ  ನೀನು  ಚಾಲಾಕಿ ಕಣೋ"   ಅಂದ

 ವಿಷಯ ತಿಳಿಯದ  ಕುಮಾರ  "ಏನೋ ಅದು"  ಅಂದಾಗ ,   ನೋಡಿಲ್ಲಿ ನಿನ್ನ ಹಲ್ಕಾ ಕೆಲಸ  ಅಂತಾ   ಒಂದು ನೋಟ್ ಬುಕ್
ಮುಖಕ್ಕೆ ಹಿಡಿದರು .

ಕಣ್ಣು ಬಿಟ್ಟು ನೋಡಿದ  ಕುಮಾರ ............... ! ಅಚ್ಚರಿ  ಅದು ಅವನಿಗೆ  ಹೊಸವರ್ಷದ  ಶುಭಾಶಯಗಳು ಎಂದು ನಮೂದಿಸಿ  ಗೆಳೆಯ  ಆನಂದ ನೀಡಿದ್ದ  ನೋಟ್  ಬುಕ್ .
ಆದರೆ ಅದರಲ್ಲಿ  ಈಗ "ಹೊಸವರ್ಷದ  ಶೋಭಾಶಯಗಳು" ಎಂದು ತಿದ್ದಿ ಬರೆಯಲಾಗಿದೆ. ...... !!!
"ಹೇಳಪ್ಪ ಹೀರೋ ಈಗ  ಇದನ್ನು  ಕ್ಲಾಸ್ ಟೀಚರ್ಗೆ ಕೊಡ್ತೀವಿ,  ಮುಂದೆ ನಿನ್ನ ಇಷ್ಟ"  ಅಂತಾ   ಬೆದರಿಕೆ ಬಂತು ಆ  ಗುಂಪಿನಿಂದ  .

ಒಂದು  ಕ್ಷಣ ದಿಕ್ಕೇ ತೋಚದ ಸ್ಥಿತಿ  ಕುಮಾರ್ ನದಾಯಿತು , ತಾನು ಗಳಿಸಿದ್ದ  ಒಳ್ಳೆಯ ಕೀರ್ತಿ ಹಾಳಾದ ಅನುಭವ,  ಈ ವಿಚಾರ  ಕ್ಲಾಸ್ ಟೀಚರ್  ಗೆ ಗೊತ್ತಾಗಿ  ಅವರು  ಈ ವಿಚಾರವನ್ನು  ಮುಖ್ಯೋಪಾಧ್ಯಾಯರಿಗೆ  ತಿಳಿಸಿ, ತನ್ನನ್ನು ಶಾಲೆ ಯಿಂದ  ಆಚೆ ಹಾಕಿದರೆ, ಒಂದು ವೇಳೆ ಆ ಹುಡುಗಿಗೆ ಈ ವಿಚಾರ ತಿಳಿದು  , ಆ ಹುಡುಗಿಯ ಅಪ್ಪಾ ಅಮ್ಮ  ತನ್ನನ್ನು  ಹೊಡೆದರೆ,  ಇವೆಲ್ಲಾ  ವಿಚಾರ  ಮನೆಯಲ್ಲಿರುವ ದೂರ್ವಾಸ ಮಹರ್ಷಿ ಯಂತಹ ಅಪ್ಪನಿಗೆ ತಿಳಿದರೆ  ಆಗುವ ಘೋರ  ಶಿಕ್ಷೆ ಇವೆಲ್ಲಾ  ಊಹಿಸಿಕೊಂಡು   ಕಣ್ಣಲ್ಲಿ  ನೀರು ತುಂಬಿ ಕೊಂಡು  ದಿಗ್ಭ್ರಾಂತ ನಾದ , ಮನಸು ಪೂರ  ಕತ್ತಲಾಯಿತು.

ಲೋ ಮೃತ್ಯುಂಜಯ , ನಾನು ಈ ಕೆಲಸ ಮಾಡಿಲ್ಲ  ಎನ್ನಲೂ ಶಕ್ತಿ ಸಾಲದಾಯಿತು. , ಆ ದಿನ ಇವನನ್ನು ಆಟಾ  ಆಡಿಸಿ ಮಜಾ ತೆಗೆದು ಕೊಂಡ   ಆ ಹುಡುಗರು   "ಆಯ್ತು ಈಗ ಹೋಗು  ಆಮೇಲೆ ವಿಚಾರಿಸಿಕೊಳ್ಳುತ್ತೇವೆ , ಯಾರಿಗಾದರೂ ಹೇಳಿದ್ರೆ  ಆಮೇಲೆ ಗೊತ್ತಲ್ಲಾ....??"  ಅಂತಾ ಹೆದರಿಸಿ  ಎರಡು ಏಟು ಬಿಟ್ಟು  ಕಳುಹಿಸಿದರು .. ಇದು ಹೀಗೆ ಪ್ರತೀ  ನಿತ್ಯ   ಒಂದಲ್ಲಾ ಒಂದು  ಸಮಯದಲ್ಲಿ ನದೆಯುತ್ತಿತ್ತು.  ತರಗತಿಯ ಹೀರೋ ಆಗಿದ್ದ ಆ ಹುಡುಗ  ಜೋಕರ್ ಆಗಿ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳತೊಡಗಿದ ,  ಮನೆಯಲ್ಲಿ ಯಾರೊಂದಿಗೂ ಮಾತಿಲ್ಲ, ರಾತ್ರಿ ನಿದ್ದೆಯಲಿ  ಕೂಗಿ ಕೊಳ್ಳುತ್ತಿದ್ದ , ಶಾಲೆಯ ಹೋಂ ವರ್ಕ್  ಮಾಡದೆ  ಶಿಕ್ಷಕರ  ದೃಷ್ಟಿಯಲ್ಲೂ ಇವನ ಸ್ಥಾನ ಕುಸಿಯ ತೊಡಗಿತು . ಪ್ರತಿನಿತ್ಯ  ಶಾಲೆಗೇ ಹೋಗೋದು ನರಕ  ಅನ್ನಿಸಿ   , ತನಗೆ ಅರಿವಿಲ್ಲದೆ  ನರಳಾಡುತ್ತಿದ್ದ , ಇದನ್ನು ನೋಡಿ ಅವನ  ವೈರಿ ಗುಂಪು  ಅಟ್ಟಹಾಸ ಮೆರೆದಿತ್ತು.

ಯಾರಿಗೆ ಹೇಳಿದರೂ  ತನ್ನ ಮಾತು ಕೇಳಲಾರರು ಎಂಬ ಕೊರಗು ಇತ್ತು, ಆದರೆ ಇವನ ಮೂಕ ರೋಧನೆಗೆ ಉತ್ತರವಿಲ್ಲದೆ   ಹಲವು ತಿಂಗಳು  ಕಳೆಯಿತು,  ಈ ಹುಡುಗ ಮೊದಲು ತರಗತಿಯಲ್ಲಿ ಒಂದು ಅಥವಾ ಎರಡು ಗಳಿಸುತ್ತಿದ್ದ   ಸ್ಥಾನ ಪ್ರಥಮ ಪರೀಕ್ಷೆಯಲ್ಲಿ ಮೂವತ್ತಕ್ಕೆ ಇಳಿದಿತ್ತು  ತರಗತಿಯ "ಹೀರೋ ಆಗಿದ್ದ ಇವನನ್ನು  ಜೋಕರ್" ಆಗಿ ಮಾಡಿತ್ತು  ಆ ತುಂಟ ಹುಡುಗರ  ಕಾಟ . ಒಮ್ಮೆಯಂತೂ  ಯಾವೋ ಜ್ಞಾನದಲ್ಲಿ ಸೈಕಲ್ ಓಡಿಸುತ್ತಾ  ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ  ಹೊಡೆಯುವುದರಿಂದ  ಸ್ವಲ್ಪದರಲ್ಲಿ  ಬಚಾವ್  ಆಗಿದ್ದ.

ಹೀಗಿರಲು ಒಂದು ದಿನ  ಯೋಚಿಸುತ್ತಾ ರಾತ್ರಿ ಮಲಗಿರಲು  ಬಹಳ ದಿನಗಳಿಂದ  ಇವನನ್ನು  ಗಮನಿಸಿದ ಅಜ್ಜಿ  ಇವತ್ತು ತನ್ನ ಬಳಿ  ಮಲಗಲು ಹೇಳಿ ದಳು ."ಯಾಕೋ ಮಗು ಬಹಳ ದಿನಗಳಿಂದ  ಸಪ್ಪಗೆ ಇದ್ದೀಯ , ಬಾ ಮಗು ನನ್ನ ಪಕ್ಕ ಮಲಗು" ಎಂದು ಪ್ರೀತಿ ತೋರಿ , ತನ್ನ ಪಕ್ಕ ಮಲಗಿಸಿಕೊಂಡು ತಲೆ ಸವರುತ್ತಾ ಮಹಾಭಾರತದ ''ಕರ್ಣನ '' ಕಥೆ ಹೇಳಿದಳು , ಕಥೆ ಕೇಳುತ್ತಾ  ಕೇಳುತ್ತಾ  ಹಾಗೆ ಮಲಗಿದ , ಬೆಳಿಗ್ಗೆ ಎದ್ದು ಮತ್ತೊಮ್ಮೆ  ಅಜ್ಜಿಯಿಂದ ಆ ಕಥೆಯನ್ನು ಹೇಳಿಸಿಕೊಂಡ , ಅರೆ ಹೌದಲ್ವಾ  ಕರ್ಣನಿಗೂ ಎಷ್ಟೊಂದು ಅವಮಾನ ವಾಗಿದೆ  , ಆದರೆ ಅವನಿಗೆ ಧುರ್ಯೋದನ ನಂತಹ  ಗೆಳೆಯ ಆಸರೆಯಾಗಿ ನಿಂತು ಸಲಹಿದ,  ಆದರೆ ನನಗೆ  ಗೆಳೆಯರಿಲ್ಲವೇ  ................ !!

ಅಂದೇನೋ ಅಜ್ಜಿ ಹೇಳಿದ ಕಥೆಯಿಂದ ಹೊಸ ಹುರುಪು.  ಶಾಲೆಗೇ ಬಂದವನೇ ತನ್ನ   ಆತ್ಮೀಯ ಗೆಳೆಯ  ಶ್ರೀಕರ ನ   ಹತ್ತಿರ ನಡೆದ ಎಲ್ಲಾವಿಚಾರ ತಿಳಿಸಿದ,   ಎಲ್ಲವನ್ನು ಆಲಿಸಿದ  ಶ್ರೀಕರ್  ಬರೆಯದಿದ್ದ ಮೇಲೆ  ನಿನಗ್ಯಾಕೆ ಭಯ ಅಂದವನೇ ತರಗತಿಯ ಮೇಡಂ ಬಳಿ  ಕರೆದೊಯ್ದು  ಎಲ್ಲಾ ವಿಚಾರವನ್ನು  ಅವರಿಗೆ ಹೇಳಿದ . ಅದನ್ನು ಕೇಳಿದ  ಆ ಶಿಕ್ಷಕಿ  ಆಯ್ತು ಈ ವಿಚಾರ ಗುಟ್ಟಾಗಿರಲಿ  ಎಂದು ಹೇಳಿ, ತನ್ನ ಕಾರ್ಯಾಚರಣೆ  ಶುರು ಮಾದಿದರು.

ಅಂದು ಶಾಲೆ  ಬಿಟ್ಟಿತ್ತು, ಮಾಮೂಲಿಯಂತೆ  ಆ ಹುಡುಗರ ಗುಂಪು  ಕುಮಾರ್ ನನ್ನು ಪೀಡಿಸುತ್ತಿತ್ತು,  ದೂರದಿಂದ ಗಮನಿಸಿದ  ಆ ಶಿಕ್ಷಕಿ  ಇತರ ಮೂವರು ಮಕ್ಕಳೊಂದಿಗೆ  ಅಲ್ಲಿಗೆ ಬಂದು  "ಲೋ ಬನ್ರೋ " ಇಲ್ಲಿ  ಅಂತಾ ಕರೆದುಕೊಂಡು  ಕ್ಲಾಸ್ ರೂಮಿಗೆ ಹೋದರು . ಹಿಂಬಾಲಿಸಿದ  ಕುಮಾರ್ ಹಾಗು ಮೃತ್ಯುಂಜಯ ತಂಡವನ್ನು   ತಮ್ಮ ಬ್ಯಾಗಿನಲ್ಲಿರುವ ಎಲ್ಲಾ ಪುಸ್ತಕಗಳನ್ನು  ತನ್ನ ಟೇಬಲ್ ಮೇಲೆ ಇಡಲು ಹೇಳಿದರು,  ಟೇಬಲ್ ಮೇಲೆ ಇಡಲಾದ ಎಲ್ಲಾ ಪುಸ್ತಕಗಳನ್ನು    ತಪಾಸಣೆ  ಮಾಡಲಾಗಿ  ಆ "ಹೊಸ ವರ್ಷದ ಶುಭಾಶಯದ" ನೋಟ್  ಬುಕ್ ಸಿಕ್ಕಿತು,  ಅದನ್ನು ಪರಿಶೀಲಿಸಿದ  ಶಿಕ್ಷಕಿ  ಅದರಲ್ಲಿ "ಶೋಭಾಶಯ"  ಎಂದು ತಿದ್ದಿರುವ  ಅಕ್ಷರಗಳ ಹೋಲಿಕೆ  ಮಾಡಲು ಎಲ್ಲರ  ನೋಟ್ ಬುಕ್  ಗಳಲ್ಲಿ   ಇಣುಕಿ ನೋಡಿದಾಗ ಕಂಡು ಬಂದಿದ್ದೆ ಆ  ಮೃತ್ಯುಂಜಯ ನ ಅಕ್ಷರದ ಹೋಲಿಕೆ .

ಇದನ್ನು ಗಮನಿಸಿದ  ಆ ಶಿಕ್ಷಕಿ  ಮೊದಲು  ಮೃತ್ಯುಂಜಯ ಹಾಗು ಅವನ ಪಟಾಲಂ ಗೆ   ವಿಚಾರಣೆ ಮಾಡಿದರು .  ಅವರುಗಳಿಂದ   ಉತ್ತರ ದೊರೆಯದ ಕಾರಣ   ಶಾಲೆಯಿಂದ  ತೆಗೆದು ಹಾಕುವುದಾಗಿ , ಪೋಲೀಸಿಗೆ  ಒಪ್ಪಿಸುವುದಾಗಿ  ಹೇಳಿದರು, ಇದರಿಂದ ಬೆದರಿದ ಮೃತ್ಯುಂಜಯ  ನಡೆದ ಘಟನೆಯನ್ನೆಲ್ಲಾ ಬಾಯಿಬಿಟ್ಟ ಮೃತ್ಯುಂಜಯ ಹಾಗು ಅವನ ಪಟಾಲಂ ಗೆ  ಚೆನ್ನಾಗಿ  ಬೆತ್ತದ  ಸೇವೆ ಮಾಡಿ ,  ಕುಮಾರನಿಗೆ ಆಗಿರುವ ಮಾನಸಿಕ ಯಾತನೆ ಬಗ್ಗೆ  ತಿಳಿಹೇಳಿದರು, ಇನ್ನು ಮುಂದೆ ಹೀಗೆ ಮಾಡುವುದಿಲ್ಲ ವೆಂಬ  ಪತ್ರವನ್ನು ಆ ಗುಂಪಿನಿಂದ ಪಡೆದರು,  ಆ ಮೇಲೆ  ಕುಮಾರ್ ಹಾಗು ಮೃತ್ಯುಂಜಯ ತಂಡವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ  ಜಾಮೂನು ನೀಡಿ   ಒಳ್ಳೆಯ ಗೆಳೆಯರಾಗಲು  ತಿಳಿಸಿದರು  ಎಂಬಲ್ಲಿಗೆ ಈ ಕಥೆಯು ಸಮಾಪ್ತಿಯಾಯಿತು .ಇಂದು ಅವರೆಲ್ಲಾ  ಒಳ್ಳೆಯ ಗೆಳೆಯರಾಗಿ ಚೆನ್ನಾಗಿ ಬೆಳೆದು ಸಮಾಜದಲ್ಲಿ ನೆಲೆ ನಿಂತಿದ್ದಾರೆ 

ಕಥೆ ಓದಿಯಾಯಿತ ....???ಹಾಗಿದ್ರೆ ಇನ್ನೇಕೆ ತಡ   ಈ ಕಥೆಗೆ ಒಂದು ಚಂದದ ಹೆಸರು ಕೊಡಿ ..!






7 comments:

bilimugilu said...

ಸ್ನೇಹದ ಕಡಲು...........
ಸರ್, ಕಥೆ ಚೆನ್ನಾಗಿದೆ :)
ಈ ಕಡಲಲ್ಲಿ - ಎಲ್ಲಾ ರೀತಿಯ ಸ್ನೇಹವಿದೆ, ಸ್ನೇಹದ ಅನುಭವಗಳಿವೆ...... ಈ ಕಡಲಿನಲ್ಲಿ ದೊರೆವ ಸ್ನೇಹಿತರೆ೦ದರೆ ಹಲವು ಮುತ್ತುಗಳ೦ತೆ, ಕಪ್ಪೆ ಚಿಪ್ಪುಗಳ೦ತೆ, ಶ೦ಖ ಇತ್ಯಾದಿಗಳಲ್ಲದೆ ಅನೇಕ ಕೈಗೆಟುಕುವ, ಎಟುಕದ ಅಮೂಲ್ಯ ವಸ್ತುಗಳ೦ತೆ.
ಎಲ್ಲಾ ಅನುಭವಗಳನ್ನ ಹೊತ್ತ "ಸ್ನೇಹದ ಕಡಲು"

ಜಲನಯನ said...

ಬೆಕ್ಕಿಗೆ ಚಲ್ಲಾಟ ಇಲಿಗೆ.....

ಹೇಗೆ? ಕಥೆಗೆ ಸಿರ್-ಸೀಕೆ.
ಇಂತಹ ಹಲವು ಘಟನೆಗಳು ಎಲ್ಲರ ಜೀವನದಲ್ಲೂ ನಡೆದಿರುತ್ತವೆ..
ಚನ್ನಾಗಿದೆ ನಿರೂಪಣೆ ಬಾಲು...ಅಂತೂ ಸುಖಾಂತ ಆದದ್ದು...ಸತ್ಯ ಮಾವ ಜಯತ್ತೆ ನೆನಪಾದ್ರು...

Badarinath Palavalli said...

"ಶೋಭಾಯಮಾನ"

1. ಯಾಕೆಂದರೆ ಶೋಭಾ ಹೆಸರಿನಿಂದ ಕುಮಾರನಿಗೆ ಆದ ಅವಮಾನ ಮತ್ತು ಮೃತ್ಯುಂಜಯನ ಆ ಕೆಟ್ಟ ಬುದ್ದಿ ಕಡೆಗೆ ಪರಿಹಾರವಾಗುತ್ತೆ.

2. ಕುಮಾರಾಣಿಗೆ ಶೋಭಾವೇ ಸರ್ವಸ್ವ, ಆದಕಾರಣ ಇಡೀ ಕಥೆ ಶೋಭಾಯಮಾನ.



ನಮ್ಮ ಹಳ್ಳಿ ಶಾಲೆಗಳ ಪರಿಸರ, ಶಿಕ್ಷಕರ ಹಂಸಕ್ಷೀರ ನ್ಯಾಯ, ಹಳ್ಳಿ ಹುಡುಗರ ಪಜೀತಿಗಳು ಚೆನ್ನಾಗಿ ವಿವರಿಸಿದ್ದೀರಾ.

Srikanth Manjunath said...

ಶಿಕ್ಷಕರ ಕೆಲಸ ಬರಿ ಶಿಕ್ಷಿಸುವುದು ಅಷ್ಟೇ ಅಲ್ಲ ಸರಿಯಾದ ಶಿ(ರ)ಕ್ಷಣೆ ಕೊಡುವುದು ಎನ್ನುವುದು ಈ ಕಥೆಯಿಂದ ತಿಳಿಯುತ್ತದೆ. ಪ್ರತಿವರ್ಷ ಈ ರೀತಿಯ ನೂರಾರು ವಿಧ್ಯಾರ್ಥಿಗಳನ್ನು ನೋಡುವ ಅವರಿಗೆ ಇಂತಹ ಸಂಕೀರ್ಣ ಸಮಸ್ಯೆಗಳನ್ನು ಬಿಡಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಇಲ್ಲಿನ ಶಿಕ್ಷಕಿ ಒಂದು ಹೆಜ್ಜೆ ಮುಂದೆ ಹೋಗಿ ಸಮಸ್ಯೆ ತಿಳಿಗೊಳಿಸಿದ್ದೆ ಅಲ್ಲದೆ ಇಬ್ಬರು ವಿರುದ್ಧ ದಿಕ್ಕಿನ ಸ್ವಭಾವದ ಹುಡುಗರನ್ನು ಒಟ್ಟಿಗೆ ಸೇರಿಸಿ ಒಳ್ಳೆಯ ಗೆಳೆಯರನ್ನಾಗಿ ಮಾಡಿದ್ದು ಮತ್ತು ಅದಕ್ಕೆ ಅಡಿಪಾಯ ಹಾಕಿದ ಕುಮಾರನ ಸ್ನೇಹಿತ ಶ್ರೀಕರ, ಇವೆಕ್ಕೆಲ್ಲ ಬುನಾದಿ ಅಜ್ಜಿ ಹೇಳಿದ ಕಥೆ ಹಾಗೂ ಕುಮಾರ ಅರ್ಥೈಸಿಕೊಂಡು ಅದನ್ನು ತನಗೆ ಸಮೀಕರಿಸಿಕೊಂಡ ರೀತಿ ಇವೆಲ್ಲಾ ಒಳ್ಳೆಯ ಒಡನಾಟದಲ್ಲಿ ಒದಗುತ್ತದೆ ಎಂದು ತೋರಿಸುತ್ತದೆ. ಮನೆಯಲ್ಲಿ ಹಿರಿಯರ ಉಪಸ್ಥಿತಿ, ಹೊರಗೆ ಉತ್ತಮ ಗೆಳೆಯರ, ಉತ್ತಮ ಶಿಕ್ಷಕರ ಒಡನಾಟ ಸುಂದರ ಜೀವನ ಕಟ್ಟಬಲ್ಲದು ಎನ್ನುವುದಕ್ಕೆ ಉತ್ತಮ ನಿದರ್ಶನ ಈ ಘಟನೆ. ಇಲ್ಲದೆ ಹೋದರೆ ಗಾಳಿಮಾತು ಚಿತ್ರದ ನಾಯಕಿಯಂತೆ ದುರಂತ ಅಂತ್ಯ ಕಾಣುವ ಎಲ್ಲಾ ಸಾಧ್ಯತೆಗಳು ಈ ಘಟನೆಯಲ್ಲಿದ್ದವು!!!

ಹೆಸರು : ಕುಮಾರ (ಅ)ಸಂಭವ : ಸಾಮಾನ್ಯರು ತುಳಿಯುವ ಹಾದಿಯಿಂದ ಭಿನ್ನವಾಗಿ ಯೋಚಿಸಿ ತನ್ನ ಮಾನಸಿಕ ಕ್ಲೇಶವನ್ನು ಬಗೆ ರೀತಿ ಇಷ್ಟವಾಯಿತು. ಅದಕ್ಕಾಗಿ ಈ ಹೆಸರು

ಮನಸು said...

"ಶೋಭಾಯಮಾನ" ಬದರಿ ಸರ್ ಹೇಳಿದಂತೆ ನನಗೂ ಇದೇ ಹೊಳೆಯಿತು ... ಚೆನ್ನಾಗಿದೆ ಕಥೆ

ಮೌನರಾಗ said...

ಚಂದದ ಕಥೆ ಬಾಲು ಸರ್

ನನ್ನ ಕೇಳಿದರೆ ಕಥೆಗೆ ಈ ಶೀರ್ಷಿಕೆ ಇಡಬಹುದೇನೋ
"ಉಪ್ಪು ತಿಂದ ಮೇಲೆ .....?"

ದಿನಕರ ಮೊಗೇರ said...

ಕಥೆಯ ನಿರೂಪಣೆ ಚೆನ್ನಾಗಿದೆ.... ಕಥೆಗೆ ಹೆಸರು ಕೊಡುವುದರಲ್ಲಿ ನಾನು ತುಂಬಾ ಹಿಂದೆ... ಆದರೂ ಈ ಕಥೆಗೆ ನನ್ನ ಹೆಸರು.." ಸ್ನೇಹ.."