Saturday, June 8, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .04 ದಾಂಡೇಲಿ ಯಲ್ಲಿ ಏನೇನ್ ಕಂಡಿ .!!

ಮುಂಜಾವಿನ ಸಂಭ್ರಮ


ಅಂತೂ ಇಂತೂ ಯಾವಾಗಲೋ ನಿದ್ದೆ  ಬಂದಿತ್ತು .  ........ !!!  ನಿದ್ದೆಯಿಂದ ಎಚ್ಚರವಾದಾಗ ದೂರದಲ್ಲಿ ಎಲ್ಲೋ  ಕಲರವ ಕೇಳಿತ್ತು ಹಕ್ಕಿಗಳ ಚಿಲಿಪಿಲಿ ಗಾನದ ಸುಪ್ರಭಾತ ,ಮುಂಜಾನೆಯ ಕೆಂಪಾದ ಆಕಾಶ ಹೊಸ ನೋಟದ ದರ್ಶನ ನಮ್ಮದಾಗಿತ್ತು, ಮುಂಜಾವಿನ  ತಂಗಾಳಿಯಲ್ಲಿ ಕ್ಯಾಮರಾ ಹಿಡಿದು ಹೊರಟೆ


ರಾತ್ರಿ ನಮ್ಮ ನೆಮ್ಮದಿ ಹಾಳಾಯ್ತು

 ಜಂಗಲ್ ಲಾಡ್ಜ್ ಸುತ್ತ ಮುತ್ತಾ   ಮುಂಜಾವಿನ ಸುಳಿಗಾಳಿ ತನ್ನ  ಜಾಲ ಬೀಸಿತ್ತು, ಪ್ರಶಾಂತವಾದ ವಾತಾವರಣ , ಪಕ್ಷಿಗಳ ಕಲರವ, ಮನಸನ್ನು ಪ್ರಸನ್ನಗೊಳಿಸಿತ್ತು , ಅಲ್ಲೇ ಸನಿಹದಲ್ಲಿ  ಮರದ ಮೇಲೆ ಎರಡು ಲಾಂಗೂರ್ ಕೋತಿಗಳು ಸಪ್ಪಗೆ  ಕುಳಿತಿದ್ದವು , ಬಹುಷಃ  ರಾತ್ರಿಯ ಸಿನಿಮ  ಶೂಟಿಂಗ್  ಶಬ್ದ, ಹೈ ಬೀಮ್ ಬೆಳಕು, ಜೆನರೆಟರ್ ಶಬ್ಧ  ಅವುಗಳ ರಾತ್ರಿ  ನರಕ ಮಾಡಿತ್ತೆಂದು ಕಾಣುತ್ತದೆ , ಲಾಂಗೂರ್ ಕೋತಿಗಳ ಬಗ್ಗೆ ಮರುಕ ಪಡುತ್ತಾ ಹಾಗೆ ಸಾಗಿದೆ , ಕಾಳಿ ನದಿಯ ದಂಡೆ, ಅಲ್ಲಿನ ಪ್ರಕೃತಿ  ವೈಭವ ನನ್ನ ಕ್ಯಾಮರಾದಲ್ಲಿ  ಸೆರೆಯಾಯಿತು .  ಸುತ್ತಾಟ ಮುಗಿಸಿ ರೂಂ ಗೆ ಮರಳಿ ಸಿದ್ದನಾಗಿ  ಬೆಳಿಗ್ಗೆಯ ಟ್ರೆಕಿಂಗ್ ಗೆ ಸಿದ್ದನಾದೆ.


ಚಾರಣ ಕ್ಕೆ ಹೋರಟ  ಮಂದಿ

ಒಣಗಿದ  ಎಲೆಗಳು , ಕಡ್ಡಿ, ಕಾಯಿಗಳು ಹಾಸಿದ್ದ ದಾರಿ

 ಬೆಳಿಗ್ಗೆ ಸುಮಾರು ಎಂಟು ಘಂಟೆಗೆ ನಮ್ಮನ್ನು ಅಲ್ಲೇ ಅಕ್ಕಪಕ್ಕದ ಕಾಡಿಗೆ ಚಾರಣಕ್ಕೆ ಕರೆದುಕೊಂಡು ಹೊಗಲಾಯಿತು.  ಒಬ್ಬರು  ಜಂಗಲ್ ಲಾಡ್ಜ್ ಸಿಬ್ಬಂದಿ  ನಮ್ಮ ಪೈಲಟ್ ಆದರು. ಅಲ್ಲೇ  ಪಕ್ಕದಲ್ಲಿದ್ದ ಗಿಡಗಳ ನರ್ಸರಿ ಒಳಗೆ ಹೊಕ್ಕು  ಕಾಡಿನ ಹಾದಿ ಹೊಕ್ಕೆವು,  ಕಾಡಿನ ಹಾದಿಯಲ್ಲಿ   ಒಣಗಿದ ಎಲೆ, ಕಡ್ಡಿ, ಕಾಯಿ ಮುಂತಾದವುಗಳು  ಹಾಸಿಗೆ ಹಾಕಿದ್ದವು.  ಯಾವುದೇ ಪಕ್ಷಿಗಳ  ದ್ವನಿಯಾಗಲಿ  ಪಕ್ಷಿಯಾಗಲಿ ಕಾಣಲು  ಸಿಗದೇ ಇದ್ದದ್ದು  ಆಶ್ಚರ್ಯವಾಗಿತ್ತು. , ಸ್ವಲ್ಪ ಹಾಗೆ ಮುಂದೆ ಬಂದ ನಮಗೆ ಅಲ್ಲೇ ಮರದ ಮೇಲೆ  ಕಂದು ಬಣ್ಣದ "ಮಲಬಾರ್ ದೊಡ್ಡ  ಅಳಿಲು" ಕಾಣಸಿಕ್ಕಿತು. ತುಂಬಾ ನಾಚಿಕೆ ಸ್ವಭಾವದ ಸಾದು ಪ್ರಾಣಿ ಇದು, 



"ಮಲಬಾರ್ ದೊಡ್ಡ  ಅಳಿಲು"


ಮುಂದೆ ನಡೆದ ನಮಗೆ ಕಾಡಿನೊಳಗೆ ಇಲ್ಲದ ಹಾದಿಯಲ್ಲಿ ಒಬ್ಬ ವ್ಯಕ್ತಿ ಸೈಕಲ್ ನಲ್ಲಿ  ಸಾಗುತ್ತಿದ್ದರು,ಇದೇಕೆ   ಹೀಗೆ ಎಂದು ಕೇಳಿದ ನಮಗೆ , ಅಲ್ಲಿನ ಸಿಬ್ಬಂದಿ   ಕಾಡಿನೊಳಗೆ ಅಲ್ಲಲ್ಲಿ  ಮನೆಗಳಿವೆ ಸಾರ್ ಅಲ್ಲಿನ ಜನ ಹೀಗೆ ಓಡಾಡುತ್ತಾರೆ   ಅಂದರು .   ಆ ಚಿತ್ರದ ಸನ್ನಿವೇಶ ಪೂರ್ಣ ಚಂದ್ರ ತೇಜಸ್ವಿಯವರ  ಕಥೆಗಳ ಪಾತ್ರಗಳನ್ನು ನೆನಪಿಗೆ ತಂದಿತು .


ಕಾಡಿನಲ್ಲಿ   ಸಿಕ್ಕ ದೃಶ್ಯ
 ಕಾಡಿನ ಚಾರಣದಿಂದ  ವಾಪಸ್ಸುಬಂದ  ನಾವು  ಬೆಳಗಿನ ಉಪಹಾರ ಸೇವಿಸಿ  ಕಾಳಿ ನದಿಯಲ್ಲಿ ಹರಿಗೋಲಿನಲ್ಲಿ ಸವಾರಿ ಹೊರಟೆವು , ಇಲ್ಲಿನ ಹರಿಗೋಲು ವ್ಯವಸ್ತೆ  ಚೆನ್ನಾಗಿದೆ, ಪ್ರವಾಸಿಗರು ಹರಿಗೋಲಿನಲ್ಲಿ  ಲೈಫ್ ಸೇವಿಂಗ್ ಜಾಕೆಟ್ ಧರಿಸಿಯೇ ಕೂರಬೇಕೆಂಬ ನಿಯಮವಿದೆ,ಹಾಗೂ , ಹರಿಗೋಲಿನಲ್ಲಿ ವೃತ್ತಾಕಾರದ ಕಬ್ಬಿಣದ ಆಸನ ಹಾಕಿ ಪ್ರವಾಸಿಗಳು ಅಲ್ಲಿನ ಸೌಂದರ್ಯ ಸವಿಯಲು ಅವಕಾಶ  ಮಾಡಿದ್ದಾರೆ 

ಹರಿಗೊಲಿನ  ಸವಾರಿ

ಹರಿಗೊಲಿನ  ಸವಾರಿ ಜೋರಾಗಿತ್ತು, ಪ್ರಶಾಂತವಾಗಿ ಹರಿಯುತ್ತಿದ್ದ ಕಾಳಿನದಿಯ ಒಡಲಲ್ಲಿ ನಮ್ಮ ಹರಿಗೋಲು ಸಾಗಿತ್ತು, ನಮ್ಮ ಕ್ಯಾಮರಾಗಳಿಗೆ  ಬೆಳಗಿನ ಬೆಡಗಿನ ಪರಿಸರದ ದರ್ಶನ  ಆಗಿತ್ತು, ನಮ್ಮನ್ನು ಕರೆದೊಯ್ದಿದ್ದ  ಸಿಬ್ಬಂಧಿಯವರು  ವಿವರಣೆ ನೀಡುತ್ತಾ ಸಾಗಿದ್ದರು.  ನಿನ್ನೆ ನಮ್ಮ ಜೊತೆ ಬಂದಿದ್ದ ಸಿಬ್ಬಂದಿ ಬದಲಾಗಿದ್ದರು.  ಸಾರ್ ಅಲ್ಲಿ ನೋಡಿ  , ಸಾರ್ ಇಲ್ಲಿ ನೋಡಿ , ಸಾರ್ ಆ ದೃಶ್ಯದ ಫೋಟೋ ತೆಗೆಯಿರಿ ಅಂತಾ  ಹುರಿದುಂಬಿಸುತ್ತಿದ್ದರು . ಅವರು ತೋರುತ್ತಿದ್ದ ದೃಶ್ಯಗಳು ಮನೋಹರವಾಗಿದ್ದವು 

 
ನೀರಿನಲ್ಲಿ ಸಾಗಿದ್ದ ಶಿಸ್ತಿನ ಸಿಪಾಯಿಗಳು


ದೈತ್ಯ ಮೊಸಳೆ

ಬಿಲದಿಂದ ಹೊರಗೆ ಬಂದ ಉರಗ

ಕಾಳೀ ನದಿಯಲ್ಲಿಸಾಗಿದ್ದ ನಮಗೆ  ನೀರಿನೊಳಗೆ  ಸಾಗಿದ್ದ  ಕಪ್ಪು ಬಣ್ಣದ ಮೀನುಗಳ ಗುಂಪು  ನೋಡಲು ಸಿಕ್ಕಿತು, ನೀರಿನೊಳಗೆ ಶಿಸ್ತಿನ ಸಿಪಾಯಿಗಳಂತೆ  ಗುಂಪಾಗಿ ಸಾಗಿದ್ದ ಮೀನುಗಳ ಆ ದೃಶ್ಯ  ಅಪರೋಪವಾಗಿತ್ತು. ಮುಂದೆ ಸಾಗಿದ ನಮಗೆ ಅಲ್ಲೇ ಸನಿಹದಲ್ಲಿ   ನೀರಿನ ಒಳಗೆ ಹಾಸಿದ್ದ ಮಣ್ಣಿನ  ಬದಿಯಲ್ಲಿ  ದೈತ್ಯ ಮೊಸಳೆ ದರ್ಶನ ನೀಡಿತ್ತು, ಮುಂಜಾವಿನ ಸೂರ್ಯ ಕಿರಣದ  ಸ್ಪರ್ಶಕ್ಕಾಗಿ  ಆ ಮೊಸಳೆ ಮೈಒಡ್ಡಿ ಮಲಗಿತ್ತು.  ಹಾಗೆ ಆ ಗುಡ್ಡೆಯನ್ನು ಬಳಸಿದ ನಮ್ಮ ಹರಿಗೋಲು  ಸಾಗಿರಲು  ಆ ಮಣ್ಣಿನ  ಗುಡ್ಡದಲ್ಲಿದ್ದ  ಒಂದು ಬಿಲದಿಂದ ನೀರು ಹಾವೊಂದು ಹೊರ ಬರುತ್ತಿತ್ತು.  ನಮ್ಮ ಕ್ಯಾಮರ ಅದನ್ನು ಸೆರೆಹಿದಿಯುತ್ತಾ ಸಾಗಿತ್ತು.



ಕಾಳಿನದಿಯ ರಮಣೀಯ ದೃಶ್ಯ

 ಕಾಳಿ ನದಿಯಲ್ಲಿ ತೇಲುತ್ತಾ  ಸಾಗಿದ್ದ ನಮಗೆ ಜೊತೆಯಾಗಿ  ಪ್ರಕೃತಿಯೂ ಸಹ  ನಲಿದಿತ್ತು. ಬೆಳಗಿನ ದೃಶ್ಯಗಳು ನೆನಪಾಗಿ ನಮ್ಮ ಕಣ್ ಹಾಗು ಕ್ಯಾಮರಾಗಳಿಗೆ ಸೆರೆಯಾದವು , ನಿನ್ನೆಯ ದಿನದ ನಿರಾಸೆ ಕಡಿಮೆಯಾಗಿತ್ತು, ಈ ಹರಿಗೊಲಿನ ಸವಾರಿ ಮನಕ್ಕೆ ಮುದ ನೀಡಿತ್ತು . , ಹರಿಗೋಲು ಸವಾರಿ ಮುಗಿಸಿ   ಬಂದ ನಾವು ಜಂಗಲ್ ಲಾಡ್ಜ್ ಸುತ್ತಾ ಒಂದಷ್ಟು ಸೈಕಲ್ ಸವಾರಿ ಮಾಡಿ  ಖುಷಿಪಟ್ಟೆವು, ನನಗೋ ಸೈಕಲ್ ಹೊಡೆದು ಎರಡು ದಶಕಗಳೇ ಆಗಿತ್ತು, ಬಾಲ್ಯದ ದಿನಗಳನ್ನು ನೆನೆಯುತ್ತಾ ನಾನೂ ಒಂದಷ್ಟು ಸೈಕಲ್ ಸವಾರಿ ಮಾಡಿ ಆನಂದಿಸಿದೆ, ಇನ್ನು ನಮ್ಮ ಮನೆಯವರೆಲ್ಲರೂ ಮತ್ತು ಮಕ್ಕಳು ಸೈಕಲ್ ಸವಾರಿ ಮಾಡಿ  ಕುಣಿದಾಡಿದರು


ಸೈಕಲ್ ಸವಾರಿ ಮಾಡಿ  ಬಾಲ್ಯಕ್ಕೆ ಜಾರಿದ ಸಮಯ


 ನಮ್ಮ ದಾಂಡೇಲಿ  ಕಾರ್ಯಕ್ರಮದ ಅಂತಿಮ ಘಟ್ಟ ತಲುಪಿದ್ದೆವು ಮುಂದಿನ ಜಾಗಕ್ಕೆ ತೆರಳಲು ಸಿದ್ದತೆ ಮಾಡಿಕೊಂಡು  ದಾಂಡೇಲಿ ಜಂಗಲ್ ಲಾಡ್ಜ್ ಸಿಬ್ಭಂದಿಗೆ ಕೃತಜ್ಞತೆ ತಿಳಿಸಿ,  ಅಲ್ಲಿಂದ ಮುಂದೆ ಸಾಗಿದೆವು. ದಾಂಡೇಲಿ  ಯಲ್ಲಿನ ಈ  "ಜಂಗಲ್ ಲಾಡ್ಜ್ " ಒಳ್ಳೆಯ ಪರಿಸರದಲ್ಲಿ ಇದೆ,  ಇಲ್ಲಿನ ಸಿಬ್ಬಂಧಿ  ಇಲ್ಲಿನ ಪರಿಸರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರವಾಸಿಗರಿಗೆ ಕೊಟ್ಟರೆ ಒಳ್ಳೆಯದು ,  ಶುಚಿಯಾದ  ರೂಮುಗಳು, . ನೀಡುವ ಊಟ ತಿಂಡಿ  ಶುಚಿಯಾಗಿತ್ತು, ಒಳ್ಳೆಯ ಅನುಭವ ಸಿಕ್ಕಿತು. ಆದರೂ  ಕೆಲವು ಬದಲಾವಣೆ ಆದರೆ ಒಳ್ಳೆಯದು ಅನ್ನಿಸಿತು .

  ಉತ್ತರ ಭಾರತ ಶೈಲಿಯ ತಿಂಡಿ ಊಟದ ಜೊತೆ ದಕ್ಷಿಣ ಭಾರತದ  ತಿಂಡಿ ತಿನಿಸುಗಳಿಗೆ ಹೆಚ್ಚಿನ ಪ್ರಾಶಸ್ತ್ಯ  ನೀಡಬೇಕು , ಉತ್ತರ ಕನ್ನಡ ಜಿಲ್ಲೆಯ  ವಿಶೇಷ  ಖಾದ್ಯಗಳನ್ನು  ಇಲ್ಲಿ ಪರಿಚಯಿಸುವ ಕಾರ್ಯ ಆದರೆ ಒಳ್ಳೆಯದು , ಪ್ರವಾಸಿಗಳಿಗೆ ಉತ್ತರ ಕನ್ನಡ ಜಿಲ್ಲೆಯ ತಿನಿಸುಗಳ ಪರಿಚಯ ಆಗುತ್ತದೆ , ಇಲ್ಲಿನ ಸುತ್ತ ಮುತ್ತಲಿನ ವಿಶೇಷತೆ ಬಗ್ಗೆ ಕೈಪಿಡಿ  ಪ್ರಕಟಿಸಿ ಪ್ರವಾಸಿಗರಿಗೆ  ಒದಗಿಸಬೇಕು ,  ಇವುಗಳನ್ನು ಅನುಷ್ಠಾನ ಮಾಡಿದಲ್ಲಿ  ಮತ್ತಷ್ಟು ಜನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ನೋಟ ಸವಿಯುತ್ತಾರೆ ಅನ್ನಿಸಿತು.     ಹಸಿರು ಕಮಾನಿನ ಹಾದಿಯಲ್ಲಿ,   ಹಸಿರ ಹಾದಿಯಲ್ಲಿ  ಕೆಲವು ಕಿಲೋಮೀಟರ್  ಕ್ರಮಿಸಿ , ಇದ್ದಕ್ಕಿದ್ದಂತೆ ನಮ್ಮ ಕಾರುಗಳು ಮಣ್ಣು  ದೂಳಿನ ಹಾದಿ ಹಿಡಿದವು


ಹಸಿರು ಕಮಾನಿನ ಹಾದಿ


ಅರೆ ಇದೇನಿದು  ಕಾರಿನ ಮೇಲೆಲ್ಲಾ ಧೂಳಿನ ಎರಚಾಟ......!!!.

Sunday, June 2, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .03 ಇವರ್ಯಾಕೆ ಬಂದರು ???

ಪ್ರವೇಶದಲ್ಲಿ ಕಂಡ ಸಿನಿಮ ಯೂನಿಟ್ ವಾಹನಗಳು

ದಾಂಡೇಲಿ ಕಥೆಯನ್ನು ಮೆಲಕು ಹಾಕುತ್ತಾ  ರೆಸಾರ್ಟ್ ಆವರಣ ಪ್ರವೇಶಿಸಿದೆ, ಅರೆ .....   ಇದೇನು ಕಾಡಿನ ಈ ಪ್ರದೇಶಕ್ಕೆ ಇವರ್ಯಾಕೆ ಬಂದರು ???  ಹೌದು ಇವರ್ಯಾಕೆ ಬಂದರು.. ?  ಇಲ್ಲಿನ ಜೀವಿಗಳ  ಜೀವನಕ್ಕೆ ತೊಂದರೆ ಮಾಡಲು ........... !!? ಹೌದು ದಾಂಡೇಲಿ ಅಭಯಾರಣ್ಯ ವನ್ಯ ಜೀವಿ ವೈವಿಧ್ಯತೆಗೆ ಹೆಸರುವಾಸಿ ಆದರೆ  ಆವರಣ ಪ್ರವೇಶಿಸಿದಂತೆ ನಮಗೆ ಕಂಡದ್ದು ಸಿನಿಮ ಯೂನಿಟ್ ವಾಹನಗಳ ದರ್ಶನ ,  ದೊಡ್ಡ ದೊಡ್ಡ ಸ್ಪಾಟ್ ಲೈಟ್ ಗಳು, ದೊಡ್ಡದಾದ ಜನರೇಟರ್ ಗಳು, ಕ್ಯಾಮರಾಗಳು , ಜೊತೆಗೆ ಸಿನಿಮಾ  ಶೂಟಿಂಗ್ ಮಾಡುವ ಸಡಗರದ ದೊಡ್ಡ  ಗಲಾಟೆ , ಶಬ್ಧ , ಇತ್ಯಾದಿಗಳೆಲ್ಲಾ ಸೇರಿ , ಇದು ಜಂಗಲ್ ಲಾಡ್ಜೋ ಅಥವಾ  ಸ್ಟುಡಿಯೋ ನೋ   ಎನ್ನುವ ಅನುಮಾನ ಬಂದಿತು,


ಸಾರಿ ಸಾರ್  ಎಲ್ಲಾ ಬುಕ್ ಆಗಿದೆ.


ಆದರೂ ನೋಡೋಣ ಅಂತಾ ಮುಂದೆ ಸಾಗಿದೆವು.  ಸ್ವಾಗತ ನೀಡಿದ ಅಲ್ಲಿನ ಸಿಬ್ಬಂಧಿ  ನಗುಮುಖದಿಂದ ಬರ ಮಾದಿಕೊಂಡರು , ಏನ್ ಸಾರ್ ರೂಮ್ಸ್ ಬುಕ್ ಆಗಿದೆಯಲ್ವಾ ??  ಎಂಬ ನಮ್ಮ ಶ್ರೀಧರ್ ಮಾತಿಗೆ , ಇಲ್ಲಾ ಸಾರ್ ಮಾಹಿತಿ ಸಿಕ್ಕಿಲ್ಲ ಎಲ್ಲಾ ರೂಂ ಗಳೂ ಬುಕ್ ಆಗಿವೆ ನಿಮಗೆ ಇಲ್ಲಾ ಸಾರ್ ಅಂತಾ  ಹೇಳಿ ದಾಗ ನಮ್ಮ ಶ್ರೀಧರ್ ಒಂದು ಕ್ಷಣ ತಬ್ಬಿಬ್ಬಾದರು , ನಂತರ ಏನೂ ಯೋಚನೆ ಬೇಡ ಸಾರ್ ಎಲ್ಲಾ ರೆಡಿ ಇದೆ ಬನ್ನಿ ಅಂತಾ ನಮ್ಮ ರೂಂ ಗಳನ್ನೂ ತೋರಿದರು .




ಗೋಲ್ ಘರ್ ನಲ್ಲಿ ಊಟ ಉಪಹಾರ



ನಮ್ಮ ಲಗ್ಗೇಜ್ ಗಳನೆಲ್ಲಾ ರೂಂ ನಲ್ಲಿ ಇಳಿಸಿ , ಸ್ವಲ್ಪ  ವಿಶ್ರಾಂತಿ ಪಡೆದು   ಮಧ್ಯಾಹ್ನದ  ಊಟಕ್ಕೆ ಗೋಲ್ ಘರ್  ಕಡಗೆ ಬಂದೆವು,  ಒಳ್ಳೆಯ ರುಚಿಯಾದ ಆಹಾರ ಸೇವನೆ ಆಯಿತು,  ಅಲ್ಲೇ ಇದ್ದ ಒಂದು ಬೆಕ್ಕು  ಮಕ್ಕಳನ್ನು  ಸೆಳೆದಿತ್ತು, ಎಲ್ಲಾ ಮಕ್ಕಳು ಆ ಬೆಕ್ಕನ್ನು ಹಿಂಬಾಲಿಸಿ ಅದಕ್ಕೆ ತಿಂಡಿ ಹಾಕಿ ಸಂಭ್ರಮ ಪಟ್ಟರು, ಮುಂದಿನ ಕಾರ್ಯಕ್ರಮಕ್ಕೆ ಸಿದ್ಧವಾದೆವು. ಮುಂದಿನ ಕಾರ್ಯಕ್ರಮ ಜೀಪ್ ಸಫಾರಿ



ಅಣಶಿ ಅರಣ್ಯ ಪ್ರದೇಶಕ್ಕೆ ಸ್ವಾಗತ

ಅರಣ್ಯ ಚೆಕ್ ಪೋಸ್ಟ್


ಸಂಜೆ ನಾಲ್ಕು ಘಂಟೆಗೆ  ನಮ್ಮ ಅರಣ್ಯ ಯಾನ ಆರಂಭ ವಾಯಿತು. ಅಣಶಿ ಅರಣ್ಯ ಪ್ರದೇಶಕ್ಕೆ ನಮ್ಮನ್ನು ಕರೆದು ಕೊಂದು ಹೊಗಲಾಯಿತು.  ಆದರೆ ನಮ್ಮ ಅದೃಷ್ಟ ಕೋಟ ಆಗಿತ್ತು ಯಾವುದೇ ವನ್ಯ ಜೀವಿ ಕಾಣ ಸಿಗಲಿಲ್ಲ.  ಜೊತೆಗೆ ಸಣ್ಣದಾಗಿ ಮಳೆ ಹನಿ ಬೀಳ ತೊಡಗಿತು ,


ಪ್ರಕೃತಿ ವೀಕ್ಷಣಾ ಸ್ಥಳ



ಬಾನಲ್ಲಿ ಮೂಡಿದ ಬಣ್ಣದ ಚಿತ್ತಾರ

 ಕಾಡಿನಲ್ಲಿ ಒಂದೆಡೆ ನಮ್ಮನ್ನೆಲ್ಲಾ ಇಳಿಸಿ ವೀಕ್ಷಣಾ ಸ್ಥಳಕ್ಕೆ ಕರೆದು ಕಂಡು ಹೊಗಲಾಯಿತು.  ಅಲ್ಲಿದ್ದ ವೀಕ್ಷಣಾ  ಸ್ಥಳದಿಂದ ಪ್ರಕೃತಿಯನ್ನು ನೋಡಲು ಬಹಳ ಸಂತಸವಾಯಿತು. ನಮ್ಮ ಕ್ಯಾಮರ ದಿಂದ ಒಂದಷ್ಟು ಚಿತ್ರಗಳನ್ನು ಸೆರೆ ಹಿಡಿದು ಮುಂದೆ  ಸಾಗಿದೆವು . ನಮ್ಮ ಜೊತೆ ಇದ್ದ  ಜಂಗಲ್ ಲಾಡ್ಜ್ ಸಿಬ್ಬಂಧಿಗೆ ಅರಣ್ಯದ ಬಗ್ಗೆ ಅಂತಹ ಮಾಹಿತಿ ಇರಲಿಲ್ಲ , ಅವರು ನಮ್ಮಂತಹ ಪ್ರವಾಸಿಗರ ಜೊತೆ ಮಾಹಿತಿ ಹಂಚಿ ಕೊಳ್ಳುವ ಉತ್ಸಾಹ ತೊರಲಿಲ್ಲ. ಅಲ್ಲಿನ ಅರಣ್ಯದ ಬಗ್ಗೆ ನಾವೇ ಕೇಳಿದ ಪ್ರಶ್ನೆಗಳಿಗೂ ಉತ್ತರ ನೀಡುವ  ಆಸಕ್ತಿ ಅವರಲ್ಲಿ ಕಾಣಲಿಲ್ಲ . ಜಂಗಲ್ ಲಾಡ್ಜಸ್ ಬಗ್ಗೆ ಇದ್ದ ಒಂದು ಕಲ್ಪನೆಕರಗುತ್ತಾ ಇರುವ ಭಾವನೆ ಉಂಟಾಯಿತು ನಮಗೆ.




ವೀಕ್ಷಣ ಗೋಪುರ 

 
ಮತ್ತೊಂದೆಡೆ  ಕಂಡ  ರಮ್ಯ ನೋಟ


 ಮುಂದೆ ಸಾಗಿದ ನಮಗೆ ವನ್ಯ ಜೀವಿಗಳೂ ಕಾಣಲಿಲ್ಲ, ಸಿಬ್ಬಂಧಿಗಳೂ ನಿರುತ್ಸಾಹ ದಿಂದ ಇದ್ದರು ಪ್ರಕೃತಿಯೂ ಸಹಕರಿಸಲಿಲ್ಲ. ಯಾಕೋ ಬೋರ್ ಆದ ಸಫಾರಿ ಇದಾಗಿತ್ತು. ಇಂತಹವೆಲ್ಲಾ ಎಷ್ಟೋ ಜನರಿಗೆ ಆಗಿರುತ್ತೆ ಅಂತಾ ಸಮಾಧಾನ ಮಾಡಿಕೊಂಡ ನಾವುಗಳು ಇರೋದರಲ್ಲೇ  ಖುಷಿ ಪಡೋಣ ಎಂಬ ಪಾಲಿಸಿಗೆ  ಹೊಂದಿಕೊಂಡೆವು.   ಅಲ್ಲೊಂದು ವೀಕ್ಷಣಾ ಗೋಪುರದಲ್ಲಿ ನನಗೆ ಸುಂದರ ರಮ್ಯ ನೋಟ ಸಿಕ್ಕಿತು. ,



ಕಾಡಿನಲ್ಲಿ ಪ್ರವಾಸಿಗಳು ಸುರಿದ  ತ್ಯಾಜ್ಯಗಳನ್ನು ನೋಡಿ



 ಅಲ್ಲೇ ಸನಿಹದಲ್ಲಿ  ನಮಗೆ ದರ್ಶನ ನೀಡಿತ್ತು  ಪ್ಲಾಸ್ಟಿಕ್ ಬಾಟಲ, ಬಿಸ್ಕೆಟ್ ಪ್ಯಾಕೆಟ್ ಗಳ ರಾಪರ್ , ಬಿಯರ್ ಬಾಟಲ , ಇತರ ತ್ಯಾಜ್ಯ ವಸ್ತುಗಳು,  ದಟ್ಟ ಕಾಡಿನಲ್ಲಿ  ಇವನ್ನೆಲ್ಲ ಸುರಿದು  ವನ್ಯ ಜೀವಿಗಳ  ಬಗ್ಗೆ ಉದ್ದುದ್ದ ಮಾತಾಡುವ ನಮ್ಮ ಬಗ್ಗೆ ಅಸಹ್ಯ  ಹುಟ್ಟಿತು .  ಇದರ ಬಗ್ಗೆ  ನಮ್ಮ  ಜೊತೆಯಲ್ಲಿದ್ದ ಸಿಬ್ಬಂಧಿಗಳಿಗೆ ಹೇಳಿದರೆ  ಅಯ್ಯೋ ಬಿಡಿ ಸಾರ್ ಇವೆಲ್ಲಾ  ಕಾಮನ್  ಅಂದ್ರು . ವಿಷಾದದ  ಮುಖ ಹೊತ್ತು  ಜಂಗಲ್ ಲಾಡ್ಜ್ ಗೆ ವಾಪಸ್ಸಾದೆವು,




ಚಿತ್ರೀಕರಣದ  ಭರಾಟೆ

ಹೈ ಬೀಮ್ ಲೈಟ್ ನ ಬೆಳಕು  ಹಾಗು ಲಾಡ್ಜ್ ತುಂಬಾ ಚಿತ್ರೀಕರಣ  ಸಾಮಗ್ರಿ ಗಳ ಚೆಲ್ಲಾಟ

 
ಅಲ್ಲಿಗೆ ಬಂದ ನಮಗೆ  ಎದುರಾದದ್ದೇ  ಚಿತ್ರೀಕರಣ  ತಂಡ  ದೊಡ್ಡ ಹೈ  ಬೀಮ್ ಲೈಟ್  ಗಳ ಬೆಳಕಿಗೆ  ಅಲ್ಲಿನ ರಾತ್ರಿ ಕೂಡ ಬೆಳಕಾಗಿತ್ತು, ಅಲ್ಲಿನ ಮರಗಳಲ್ಲಿದ್ದ  ಪಕ್ಷಿಗಳು, ಕೋತಿಗಳು  ವಿಚಿತ್ರವಾಗಿ ಕೂಗುತ್ತಿದ್ದವು, ಇದ್ಯಾವುದೂ ಆ ಚಿತ್ರೀಕರಣ ತಂಡಕ್ಕೆ ಗೊತ್ತಿರಲಿಲ್ಲ. ಅದರ ಬಗ್ಗೆ ಜಂಗಲ್ ಲಾಡ್ಜ್ ನವರೂ ಸಹ ತಲೆ ಕೆದಿಸಿಕೊಂಡಿರಲಿಲ್ಲ ,ಜಂಗಲ್ ಲಾಡ್ಜ್ ನವರ ಉದ್ದೇಶ ಪರಿಸರ ಉಳಿಸುವ ಪ್ರವಾಸ  ಎಂಬ ಕಲ್ಪನೆ ಇಲ್ಲಿ ಕಾಣಲಿಲ್ಲ . ಜಂಗಲ್ ಲಾಡ್ಜ್  ನವರ ಉದ್ದೆಶದಬಗ್ಗೆ ಈ ಲಿಂಕ್ ನೋಡಿ http://junglelodges.com/index.php/about-us.html
Our objective
   The Company promotes Eco-tourism, wildlife tourism, adventure tourism and various outdoor activities like trekking, camping, white water rafting, fishing etc., that are non consumptive components of eco-tourism and in general help in environment conservation.

ಲಾಡ್ಜ್ ನಲ್ಲಿದ್ದ ಇತರ ಪ್ರವಾಸಿಗರಿಗೂ ಇಂತದೆ ಕಿರಿ ಕಿರಿ ಆಗಿದ್ದರೂ ಯಾರೂ ಮಾತಾಡದ ಸನ್ನಿವೇಶ , ಜೊತೆಗೆ ಆಕ್ಷನ್ , ಕಟ್ , ಹಾಗು ಇತರ ತಂತ್ರಜ್ಞರಿಗೆ ನೀಡುವ ಆಜ್ಞೆಯ ದೊಡ್ಡ  ಮಾತುಗಳ ಗದ್ದಲ , ತಂತ್ರಜ್ನರ ಗಲಾಟೆ ಎಲ್ಲಾ ಸೇರಿ ಅಲ್ಲಿ ಕಾಡಿನ ಮದ್ಯದಲ್ಲಿನ ಸಂತೆ ಯಾಗಿತ್ತು . 


ಹೀರೋ ಹೀರೋಯಿನ್  ನಟನೆ ಇಲ್ಲಿದೇ
ಭಯಾನಕ ಸನ್ನಿವೇಶ ಸೃಷ್ಟಿಸಲು ಮಾಡಿದ್ದ ಬೆಳಕಿನ ವ್ಯವಸ್ಥೆ
 ನಮಗೂ  ವಿಧಿಯಿಲ್ಲದೇ  ಬಲವಂತವಾಗಿ  ಚಿತ್ರೀಕರಣ ನೋಡುವ  ಅವಕಾಶ ಸಿಕ್ಕಿತು, ಯಾವುದೋ ತೆಲುಗಿನ ಭಯಾನಕ ಕಥೆಯ ಚಿತ್ರವಂತೆ  ಅದರ ಸನ್ನಿವೇಶಗಳ  ಚಿತ್ರೀಕರಣ ನದೆಯುತ್ತಿತ್ತು.  , ಅಲ್ಲಿನವರಿಗೆ ಅಲ್ಲಪ್ಪ ಜಂಗಲ್ ಲಾಡ್ಜ್ ಉದ್ದೇಶ  ವನ್ಯ ಜೀವಿಗಳ ಬಗ್ಗೆ  ಅದರ ಉಳಿವಿನ ಬಗ್ಗೆ  ಜನರಿಗೆ ತಿಳುವಳಿಕೆ ನೀಡುವುದು ಆದರೆ ಇಲ್ಲಿ ಯಾಕೆ  ಅದರ ಉಲ್ಲಂಘನೆ ಆಗ್ತಿದೆ ಅಂದರೆ  ಅಯ್ಯೋ ಇವರು ನಮ್ಮ ದೊಡ್ಡ  ಆಫಿಸರ್ಗಳ ಹತ್ತಿರ ಅನುಮತಿ  ಪಡೆದಿದ್ದಾರೆ  ನಾವೇನು ಮಾಡಲು ಸಾಧ್ಯ ಸಾರ್ ಅಂದ್ರು  ಮನಸಿಗೆ ಬೇಸರವಾಯಿತು,  ಜಂಗಲ್ ಲಾಡ್ಜ್    ನವರ ಅಂತರ್ಜಾಲ ತಾಣದಲ್ಲಿ  ತಿಳಿಸಿದಂತೆ  
ಲಿಂಕ್ ಇಲ್ಲಿದೆ http://junglelodges.com/index.php/resorts/kali.html
"Both Dandeli Wildlife Sanctuary and its adjacent Anshi National Park house huge tracts of moist- deciduous forest. Although a know habitat of the rare black panther, the large size of the forest makes spotting them very difficult. Yet, many of our guests have spotted it and other wild animals such as spotted deer, sambar, barking deer, sloth bear, gaur (Indian bison), wild boars, fox, jackal, pangolin and elephants. Our guests have also had frequent sighting of the great pied hornbill, yellow footed pigeon, crested serpent eagle, adjutant stork, black crested baza and peafowls. The forests of Dandeli and Anshi are home to over 200 species of birds. From the Camp, one can sight Malabar hornbills nesting across the river. Ashy swallow shirkes, drongos, minivets, iora, brahminy kites, and many others birds can be spotted from the camp. "

 ಅಲ್ಲಿನ ಗೋಲ್ ಘರ್  ನಲ್ಲಿ  ಊಟ ಮಾಡಿ    ರೂಮಿಗೆ ಮಲಗಲು ಬಂದರೆ ಚಿತ್ರೀಕರಣ ತಂಡದ ಗದ್ದಲ ಸರಿ ರಾತ್ರಿವರೆಗೆ ನದೆದಿತ್ತು. ಅಂತೂ ಇಂತೂ ಯಾವಾಗಲೋ ನಿದ್ದೆ  ಬಂದಿತ್ತು .  ........ !!! ದೂರದಲ್ಲಿ ಎಲ್ಲೋ  ಕಲರವ ಕೇಳಿತ್ತು .