Sunday, April 28, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .೦೧ . ಬನ್ನಿ ಹೊರಡೋಣ ದಾಂಡೇಲಿ ಗೆ.





ದಾಂಡೇಲಿ ಗೆ ಸ್ವಾಗತ.


ಕಳೆದ ವರ್ಷ  ದೆಹಲಿಯ ಪ್ರವಾಸದ ಬಗ್ಗೆ ಬರೆದದ್ದು ನಿಮಗೆ ನೆನಪಿದೆ, ಆ ಸಮಯದಲ್ಲಿ  ದೆಹಲಿಯಲ್ಲಿ ನನ್ನ ಕೆಲಸ ಮುಗಿಸಿ ಹೊರಡುವ ಹಿಂದಿನ ದಿನ ನನ್ನ ಪತ್ನಿ  ಫೋನ್ ಮಾಡಿ  " ರೀ  ಏನ್ ಸಮಾಚಾರ , ಮನೆಗೆ ಬರೋ ಯೋಚನೆ ಇಲ್ವಾ ಅಥವಾ ದೆಹಲಿಯಲ್ಲೇ ಬಿಡಾರ ಮಾಡೋ ಯೋಚನೆ ಮಾಡಿಬಿಟ್ರಾ...........!!!!"  ಅನ್ನುತ್ತಾ ಹುಸಿಮುನಿಸು ತೋರಿದಳು. ಇಲ್ಲಾ ಮಾರಾಯ್ತಿ  ನಾಳೆ ವಾಪಸ್ಸು  ಹೊರಟಿದ್ದೇನೆ ಅಂದೇ. ಓ ಹೌದಾ ಸರಿ ಹಾಗಿದ್ರೆ  ನೀವು ಬೆಂಗಳೂರಿನ ಶ್ರೀಧರ್  ಮನೆಗೆ ಬನ್ನಿ ನಾನೂ ಅಲ್ಲಿಗೆ ಬರ್ತಾ ಇದ್ದೀನಿ. ವೇಣು , ಶ್ರೀಧರ್ ಎಲ್ಲಾ  ದಾಂಡೇಲಿ ಗೆ ಹೋಗೋದಿಕ್ಕೆ  ನಮ್ಮ ಕುಟುಂಬವನ್ನೂ ಸೇರಿಸಿ ಬುಕ್  ಮಾಡಿದ್ದಾರೆ , ಅಂದ್ಲೂ .............!!! ಸರಿ ಮಾರಾಯ್ತಿ  ಅಮ್ಮನವರ ಅಪ್ಪಣೆ ಅಂತಾ ಫೋನ್ ಇಟ್ಟೇ. ಅಷ್ಟರಲ್ಲಿ  ನನ್ನ ಕೋ ಬ್ರದರ್  ವೇಣು ಫೋನ್ ಬಂದು ಬಾಲು ನಾಳೆ ಬರ್ತಾ ಇದೀರಂತೆ  ಬೆಂಗಳೂರ್ ಗೆ ಬನ್ನಿ  ಎಲ್ಲಾರೂ ದಾಂಡೇಲಿ  ಹೋಗಲು ಬುಕ್ ಮಾಡಿದ್ದೇನೆ  , ಮಿಸ್ ಮಾಡ್ಬೇಡಿ ಆಮೇಲೆ ಅಂದ್ರೂ.



ವೇಣು ಗೋಪಾಲ್ 

ಶ್ರೀಧರ್ ನಾಗಭೂಷಣ್  


ಅರೆ ಇದೇನಿದು ಅಂತಾ ಅಚ್ಚರಿಯಾದರೂ  ಒಮ್ಮೊಮ್ಮೆ ನಮಗೆ ಅರಿವಿಲ್ಲದಂತೆ ಇಂತಹ ಪ್ರವಾಸ ಬರುತ್ತವೆ.  ಸರಿ ದೆಹಲಿಯ ಬೇಸಿಗೆಯ  ಬಿಸಿಯಲ್ಲಿ ಬಸವಳಿದ ನನಗೆ ಅನಿವಾರ್ಯವಾಗಿ ಇಂತಹ ಪ್ರವಾಸ ಅಗತ್ಯವಿತ್ತು, ಬೆಂಗಳೂರಿಗೆ ದೌಡಾಯಿಸಿದೆ.   ಕಟ್ ಮಾಡಿದ್ರೆ  ನಮ್ಮ ಪಯಣ ದಾಂಡೇಲಿಯ ಕಡೆ ಹೊರಟಿತ್ತು. ,  ಮತ್ತೆ ದಿಬ್ಬಣ ಹೊರಟಿತ್ತು, ಮೂವರು ಅಳಿಯಂದಿರ  ಕುಟುಂಬಗಳು.  ಮೊದಲನೆಯ ಅಳಿಯ ನಾನು ಎರಡನೆಯ ಅಳಿಯ ಶ್ರೀಧರ್ , ಮೂರನೆಯ ಅಳಿಯ ವೇಣುಗೋಪಾಲ್ ,  ಮೂವರು  ಸಹ ಸಮಾನ  ಹವ್ಯಾಸಗಳು  ಇರುವ ಕಾರಣ ಯಾವುದೇ ಗೊಂದಲ ವಿಲ್ಲದೆ ಹೊರಟೆವು, ಎರಡು ಕಾರುಗಳು ಬೆಂಗಳೂರಿನಿಂದ  ಹೊರಟು  ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ   ಸಾಗಿದವು.ಬೆಂಗಳೂರು, ನೆಲಮಂಗಲ, ತುಮಕೂರು, ಶಿರ, ಹಿರಿಯೂರು ,  ಚಿತ್ರದುರ್ಗ, ದಾವಣಗೆರೆ, ಹರಿಹರ ,ರಾಣಿಬೆನ್ನೂರು , ಹಾವೇರಿ, ಧಾರವಾಡ , ಹಳಿಯಾಳ, ದಾಂಡೇಲಿ  ೪೭೭ ಕಿ.ಮಿ. ಪ್ರಯಾಣ, ಸುಮಾರು ೭.ರಿಂದ ೮ ಘಂಟೆ  ಅವಧಿಯ ಪ್ರಯಾಣ,  ಆದರೆ  ಬೆಳಿಗ್ಗೆ ಏಳು ಘಂಟೆಗೆ ಹೊರಟ ನಾವು  ಮಧ್ಯಾಹ್ನ  ಒಂದುವರೆಗೆ  ದಾಂಡೇಲಿ ಜಂಗಲ್ ರೆಸಾರ್ಟ್ ತಲುಪಬೇಕಾಗಿತ್ತು.   ಮಿಂಚಿನಂತೆ ಎರಡೂ ಕಾರುಗಳು ಹೊರಟವು.   ಪಯಣದ ಅವಧಿಯಲ್ಲಿ ನನ್ನ ಕ್ಯಾಮರಾ ಕೈಗೆ ಬಂತು ದಾರಿಯಲ್ಲಿ ನನ್ನ ಕ್ಯಾಮರಾ ಕಣ್ಣಿಗೆ ಅಂತಹ ವಿಶೇಷವೇನೂ ಕಾಣಲಿಲ್ಲ ಆದರೆ  ಚಿತ್ರದುರ್ಗ ಹತ್ತಿರ ಬಂದಂತೆ  ನಮ್ಮನ್ನು ಸ್ವಾಗತ ಮಾಡಿದ್ದು, ಗಾಳಿಯಂತ್ರ .



ಗಾಳಿಯಂತ್ರ 

ಹೌದು ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿನಾಲ್ಕರಲ್ಲಿ  ಪಯಣಿಸುವಾಗ ಚಿತ್ರದುರ್ಗಕ್ಕೆ ಮೊದಲು ನಿಮ್ಮನ್ನು ಸ್ವಾಗತಿಸಲು ಈ ಗಾಳಿಯಂತ್ರಗಳ  ಸಮೂಹವೇ ನಿಮಗೆ ಕಾಣ ಸಿಗುತ್ತವೆ, ಐತಿಹಾಸಿಕ ಕೋಟೆಯ ಈ ನೆಲದಲ್ಲಿ ಇಂದು  ಚಿತ್ರದುರ್ಗದ ಸುತ್ತಮುತ್ತ  ಇರುವ ಗುಡ್ಡ  ಬೆಟ್ಟಗಳ ಮೇಲೆ ಗಾಳಿ ಯಂತ್ರಗಳದ್ದೆ  ಕಾರು ಬಾರು.  ಹಾಗೆ ಮುಂದೆ ಚಲಿಸುತ್ತಾ  , ಸಾಗಿದ ನನಗೆ ಮುಂದೆ ದಾವಣಗೆರೆ  ಕ್ರಮಿಸಿದಾಗ ಜ್ಞಾಪಕಕ್ಕೆ ಬಂದಿದ್ದು , ಇಲ್ಲಿನ ಹತ್ತಿ ಗಿರಣಿಗಳ ನೆನಪು "ಕರ್ನಾಟಕದ  ಮ್ಯಾಂಚೆಸ್ಟರ್ " ಎಂದು ಕರೆಯುತ್ತಿದ್ದ ದಿನಗಳು, ಇಂದು ಆ ಊರು  "ಕರ್ನಾಟಕದ  ಮ್ಯಾಂಚೆಸ್ಟರ್ "    ಎಂಬ ಅರ್ಥವನ್ನು ಕಳೆದುಕೊಂಡು  ಇತಿಹಾಸ ಸೇರುವ ಹಾದಿಯಲ್ಲಿರುವುದಾಗಿ ತಿಳಿದು  ನೋವಾಯಿತು. ಇಲ್ಲಿನ  ಡಿ .ಸಿ . ಎಂ.  ಸೂಟಿಂಗ್    ಆ ದಿನಗಳಲ್ಲಿ ಬಹಳ ಪ್ರಸಿದ್ದಿ ಹೊಂದಿದ್ದು   ಇಂದು  ಹೇಳಹೆಸರಿಲ್ಲದಂತೆ ಆಗಿದೆ.  


ಯಂತ್ರಗಳ ಚಿತ್ತಾರ 

ನೆನಪಿನ ವಾಸ್ತವತೆಗೆ  ಹಿಂತಿರುಗಿ ಬಂದ ನನಗೆ  ನಮ್ಮ ಕಾರಿನ ಮುಂದೆ ಚಲಿಸುತ್ತಿದ್ದ ಎರಡು ದೊಡ್ಡ ಲಾರಿಗಳಲ್ಲಿ  ಟ್ರಾಕ್ಟರ್ ಗಳನ್ನೂ ಕೊಂದೊಯ್ಯುತ್ತಿರುವುದು ಕಣ್ಣಿಗೆ ಬಿತ್ತು , ಪ್ರತೀ ಲಾರಿಯಲ್ಲೂ  ಐದೈದು  ಟ್ರ್ಯಾಕ್ಟರ್ ಗಳನ್ನೂ ವ್ಯವಸ್ತಿತವಾಗಿ ನಿಲ್ಲಿಸಲಾಗಿತ್ತು, ನೋಡಲು  ಅಂದವಾಗಿ ಕಾಣುತ್ತಿತ್ತು,  ಚಲಿಸುತ್ತಿದ್ದ ವಾಹನಗಳ ನಡುವೆ ಇದೊಂದು ವಿಶೇಷವಾಗಿ ಗಮನ ಸೆಳೆಯುತ್ತಿತ್ತು.   ಜೊತೆಗೆ ಟ್ರಾಕ್ಟರ್  ಭಾರವನ್ನು ಹೊತ್ತ ಲಾರಿಗಳು ಬುಸುಗುಡುತ್ತಾ  ಸಾಗಿ ಹೊಗೆಯನ್ನು ಉಗುಳುತ್ತಿದ್ದವು. 


ವಾಹನಗಳ  ನಡುವೆ 


ಹಾಗೂ ಹೀಗೂ  ಹರಿಹರ  ದಾಟಿ  ಹೋರಟ ನನಗೆ  ಹೆದ್ದಾರಿಯಲ್ಲಿ ಲಾರಿಗಳ ಕಾರುಬಾರು ಗೋಚರಿಸಿತು, ಯಾವುದೇ ಶಿಸ್ತಿಲ್ಲದೆ  ತಮಗಿಷ್ಟಬಂದಂತೆ ಚಾಲಕರು  ಲಾರಿಗಳನ್ನು ಚಲಿಸುತ್ತಿದ್ದುದು  ಕಂಡು ಬಂತು, ಈ ನಡುವೆ ಹರ ಸಾಹಸ ಪಟ್ಟು  ಲಾರಿಗಳ ನಡುವೆ  ನುಸುಳಿ ದಾರಿ ಮಾಡಿಕೊಂಡು ಸಾಗಬೇಕಾದ  ಅನಿವಾರ್ಯ  ಕಾರುಗಳದ್ದಾಗಿತ್ತು ಇಲ್ಲಿ ಕಾರು ಚಾಲನೆ ಮಾಡುವ ಚಾಲಕ ಬಹಳ  ಜಾಗರೂಕನಾಗಿ ಕಾರ್ ಚಾಲನೆ ಮಾಡಬೇಕಾಗುತ್ತದೆ, ಅದೇರೀತಿ ಈ ಲಾರಿಗಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಾ   ಸಾಗಿದ್ದವು ಕಾರುಗಳು. 



 ಕನ್ಮಿಣಿಕೆ  ನೋಟ 


ರಾಣಿಬೆನ್ನೂರ್ ಹೊರವಲಯ ದಾಟಿ ಮುಂದೆ ಹೊರಟ  ನಮಗೆ ದಾರಿಯಲ್ಲಿ  ಹಟಕ್ಕೆ ಬಿದ್ದಂತೆ  ವೇಗವಾಗಿ  ಅಕ್ಕ ಪಕ್ಕ ದಲ್ಲಿ  ಸಾಗುತ್ತಿದ್ದ  ಎರಡು ಬಸ್ಸುಗಳು ಕಂಡವು, ಇವರಿಬ್ಬರ  ಜೂಟಾಟ ದ ಪರಿಣಾಮ ಸುಮಾರು ಕಿ.ಮಿ.ಗಳ ದೂರ ಯಾವ ವಾಹನಕ್ಕೂ ಇವುಗಳನ್ನು ದಾಟಿ   ಮುಂದೆ ಚಲಿಸಲು ಸಾಧ್ಯವಾಗಲಿಲ್ಲ  , ಇದೆ ನೋಟವನ್ನು ನೋಡುತ್ತಿದ್ದ ನನಗೆ ಕೆಲವು ಜಾಗಗಳಲ್ಲಿ  "ಕನ್ಮಿಣಿಕೆ" [mirage ] ಗೋಚರಿಸಿತು  ಇವು ವಾಹನ ಚಾಲಕರನ್ನು ಕೆಲವೊಮ್ಮೆ ಗೊಂದಲಕ್ಕೆ ದೂಡುತ್ತವೆ, ಹೀಗೆ ಸಾಗಿತ್ತು, ನಮ್ಮ ಪಯಣ. 


ರಸ್ತೆಯಲ್ಲಿ ಚಿತ್ತಾರ ಮೂಡಿಸಿದ  ವಾಹನಗಳ ಸಾಲು.

 ಅಕ್ಕ ಪಕ್ಕದ ನೋಟ ಕಾರಿನ  ವೇಗಕ್ಕೆ ತಕ್ಕಂತೆ  ಚಲಿಸುತ್ತಿದ್ದ ಕಾರಣ ಅಷ್ಟಾಗಿ  ಚಿತ್ರಗಳನ್ನು ತೆಗೆಯಲು ಕಷ್ಟವಾಗಿತ್ತು, ಹಾಗಾಗಿ ಮುಂದಿನ ನೋಟಗಳು ಮಾತ್ರ ನನ್ನ ಕ್ಯಾಮರದಲ್ಲಿ ಸೇರೆಯಾಗುತ್ತಿದ್ದವು. ಧಾರವಾಡ  ಸಮೀಪ ಒಂದು ಜಂಕ್ಷನ್ ನಲ್ಲಿ  ಹಲವು ವಾಹನಗಳು  ಹೆದ್ದಾರಿಯಲ್ಲಿ  ಚಕ್ರವ್ಯೂಹದ ಚಿತ್ತಾರ ಮೂಡಿಸಿದ್ದವು. ಈ ವ್ಯೂಹವನ್ನು ಭೇದಿಸಿ  ಮುನ್ನಡೆದ ನಾವು, ಧಾರವಾಡ ತಲುಪಿದೆವು, ಇಲ್ಲಿಗೆ ರಾಷ್ಟ್ರೀಯ  ಹೆದ್ದಾರಿ ೪ ರ ಒಂದು ಹಂತದ ಪಯಣ ಮುಗಿದಿತ್ತು, 



ಹೆದ್ದಾರಿಯಲ್ಲಿ ಹೀಗೂ   ಆಗುತ್ತೆ.


ಧಾರವಾಡ ಬಂದೊಡನೆ ನೆನಪಾದದ್ದು ಬೇಂದ್ರೆ ಅಜ್ಜ, ಸಾದನ ಕೇರಿ,  ಮಿಶ್ರ  ಪೇಡ , ಇತ್ಯಾದಿ  ಆದರೆ ನಮಗೆ ವೇಳೆಯೇ ಇಲ್ಲದ ಕಾರಣ, ಹಳಿಯಾಳ ರಸ್ತೆಯಲ್ಲಿ ಚಲಿಸಿದೆವು,  ಧಾರವಾಡ ಬಿಟ್ಟು ಸ್ವಲ್ಪ ದೂರ ಬಂದೊಡನೆ,  ರಾಷ್ಟ್ರೀಯ ಹೆದ್ದಾರಿಯಿಂದ  ಉರುಳಿಬಿದ್ದ  ಲಾರಿಯ ದರ್ಶನ ವಾಯಿತು, ನಾವು ಅಲ್ಲಿಗೆ ತೆರಳುವ ಸ್ವಲ್ಪ ಹೊತ್ತಿನ ಮೊದಲು ಈ ಘಟನೆ ನಡೆದಿತ್ತು, ಯಾರಿಗೂ ಅಪಾಯ ಆಗಿರುವ ಬಗ್ಗೆ ಅಲ್ಲಿ ಯಾವುದೇ  ಸನ್ನಿವೇಶ ಕಂಡುಬರಲಿಲ್ಲ , ಆದರೆ ಲಾರಿಗೆ  ಬಹಳಷ್ಟು ಜಖಂ ಆಗಿತ್ತು. 




ಹಸಿರ ಕಮಾನು ನಡುವೆ ಸಾಗಿದ ರಸ್ತೆ.



ಸ್ವಲ್ಪ ಮುಂದೆ ಬಂದೊಡನೆ ಹಳಿಯಾಳ ರಸ್ತೆಯಲ್ಲಿ ಹಸಿರ  ಕಮಾನು ಧರಿಸಿದ   ರಸ್ತೆ ಗೋಚರಿಸಿತು,  ತಂಪಾದ ವಾತಾವರಣ , ಬೀಸಿದ್ದ ತಂಗಾಳಿ ಪಯಣಕ್ಕೆ ಮುದ  ನೀಡಿತ್ತು. ಹಸಿರ ತಬ್ಬಿದ ರಸ್ತೆಯಲ್ಲಿ  ಸಾಗಿದ ನಾವು ದಾಂಡೇಲಿ ಅರಣ್ಯದ ಹೆಬ್ಬಾಗಿಲು   ಹಳಿಯಾಳ ತಲುಪಿದೆವು, 





ಹಳಿಯಾಳದಿಂದ  ದಾಂಡೇಲಿ  ರಸ್ತೆಯ ನೋಟ.

ಹಳಿಯಾಳದಿಂದ   ದಾಂಡೇಲಿ ಗೆ ತೆರಳುವ  ರಸ್ತೆಯ ಎರಡೂ ಬದಿಯಲ್ಲಿ ಕಾಡಿನ ನೋಟ ಸಾಮಾನ್ಯ , ರಾಷ್ಟ್ರೀಯ ಹೆದ್ದಾರಿಯಲ್ಲಿ  ವಾಹನಗಳ   ದಟ್ಟಣಿ ನೋಟ ಸಾಮಾನ್ಯವಾದರೆ  ಈ ರಸ್ತೆಯಲ್ಲಿ  ಸ್ವಲ್ಪ ಕಡಿಮೆ ದಟ್ಟಣಿ  ಇತ್ತು.  ಕಾಡನ್ನು ಕಂಡೊಡನೆ  ಮನದಲ್ಲಿ  ಆಸೆ ಜಾಸ್ತಿಯಾಗಿ   ಯಾವುದಾದರೂ ವನ್ಯ ಜೀವಿ  ದಾರಿಯಲ್ಲಿ ಕಾಣಬಹುದೇ ಎಂಬ ನಿರೀಕ್ಷೆ ಇತ್ತು, ಆದರೆ ಉ  ಹೂ  ಯಾವ ವನ್ಯ ಜೀವಿಯ  ಪದರ್ಶನ ಆಗಲಿಲ್ಲ. ಹಕ್ಕಿಗಳ ಕಲರವ ಕೇಳಲಿಲ್ಲ ,


 
ಹಳಿಯಾಳ  ತಪಾಸಣ ಕೇಂದ್ರ 



ಬರೀ  ಬೋರ್ಡುಗಳಲ್ಲಿ  ಅಲ್ಲಿನ ಜೀವ  ವೈವಿಧ್ಯತೆಯ ದರ್ಶನ ಮಾಡಿದ ನಾವು, ಹಸಿರ ಕಾಡಿನಿಂದ ತೂರಿಬಂದ ತಂಗಾಳಿಯನ್ನು  ಆಸ್ವಾದಿಸುತ್ತಾ   ಚಲಿಸಿದೆವು. ಹಸಿರ ದೃಶ್ಯ ವೈಭವ ನೋಡುತ್ತಾ   ಬಂದೆ ಬಿಟ್ಟೆವು  ದಾಂಡೇಲಿ ಗೆ  , ಆಗ ಸಮಯ ಎರಡು ಘಂಟೆ ಆಗಿತ್ತು. 





ದಾಂಡೇಲಿ ಗೆ  ಸ್ವಾಗತ.

ಅಲ್ಲಿ ಕಾಣಿಸಿದ್ದು "ವೆಲ್ಕಂ ಟು ದಾಂಡೇಲಿ"  ಎನ್ನುವ ಕಮಾನು.............................................ಸ್ವಾಗತ ಕೋರಿತು,  ಆಗಲೇ ಮನಕ್ಕೆ ಬಂತು  ದಾಂಡೇಲಿ ಗೆ  ಅದರ ಹೆಸರು ಹೇಗೆ ಬಂತು .....??? ಎನ್ನುವ   ಪ್ರಶ್ನೆ....!!     

  

Sunday, April 21, 2013

ಕಬಿನಿ ಕಾಡಿನಲ್ಲಿ ನಾನು. ......೦೨ ಟೈಗರ್ ಕಾಲಿಂಗ್

ನಮಗೆ ಉಗಿದು ಕಾನನದತ್ತ  ತೆರಳಿದ  ಅಮ್ಮ ಮಗು 


ಕಣ್ಣಾಮುಚ್ಚಾಲೆ  ಆಟ ನೋಡುತ್ತಿದ್ದ ತಾಯಿ ಆನೆ  "ಬಾ ಕಂದಾ ಹೋಗೋಣ , ಇವರು ಮರ್ಯಾದೆ ಇಲ್ಲದ ಜನ" ಅಂತಾ  ಮರಿಯಾನೆ ಜೊತೆ  ಕಾಡಿನೊಳಗೆ ತೆರಳಿತು. .ಆನೆಯಿಂದ ಉಗಿಸಿಕೊಂಡ  ನಾವು ಮುಂದೆ ಹೊರಟೆವು, ಕಾಡಿನಲ್ಲಿ  ನಮ್ಮ ಕಣ್ಣುಗಳು ವನ್ಯ ಜೀವಿಗಳ ಹುಡುಕಾಟ ನಡೆಸಿದ್ದವು, ಆದರೆ ಯಾವುದೇ ಕಾಡಿನಲ್ಲಿ ವನ್ಯಜೀವಿಗಳು ಮನುಷ್ಯರನ್ನು ಸ್ವಾಗತಿಸಲು  ಹಲ್ಲು ಕಿರಿಯುತ್ತಾ ನಿಂತಿರುವುದಿಲ್ಲ , ನಮ್ಮ ಅದೃಷ್ಟದ  ಮೇಲೆ ಅವು ಕಾಣಲು ಸಿಗುತ್ತವೆ.ಅದೃಷ್ಟವಿಲ್ಲದಿದ್ದರೆ , ನೀವು ದಿನಗಟ್ಟಲೆ  ಕಾಡಿನಲ್ಲಿ ಅಲೆದರೂ  ಏನೂ ಸಿಗದೇ ನಿರಾಸೆ ಆಗುವ ಸಂಭವ ಇರುತ್ತದೆ. ನಮಗೆ ಸ್ವಲ್ಪ ಅಲ್ಲಲ್ಲಾ ಜಾಸ್ತಿ ಅದೃಷ್ಟ ಇತ್ತು  ಬಹಳಷ್ಟು ಕಡೆ ನಮಗೆ ವನ್ಯ ಜೀವಿಗಳ ನಿರಂತರ ನೋಟ ಸಿಗುತ್ತಿತ್ತು.


ಕಾಡೆಮ್ಮೆಗಳ  [ಕಾಟಿ ಗಳ ]ಬಳಗ 







 ಕಾಡಿನಲ್ಲಿ ನಮ್ಮ ಪಯಣ ಸಾಗಿತ್ತು, ಕೆಲವೆಡೆ ಸಾರಂಗ, ಜಿಂಕೆ , ನವಿಲು ಮುಂತಾದ ಜೀವಿಗಳ ದರ್ಶನ ಆಯಿತು, ಆದರೆ ಮನದಲ್ಲಿನ ಬಯಕೆ   ಬೇರೆಯೇ  ಇತ್ತು, ಹೌದು ಬಹಷ್ಟು ಸಾರಿ ಇಲ್ಲಿ ಬಂದಿದ್ದರು ಮೊದಲ ಸಲ ಮಾತ್ರ ನಮಗೆ ಹುಲಿ ಸಿಕ್ಕಿತ್ತು, ಆ ನಂತರ ನಮಗೆ ಅದರ ದರ್ಶನ ಸಿಕ್ಕಿರಲಿಲ್ಲ. ಆದರೆ ಈ ಸಾರಿಯಾದರೂ ದರ್ಶನ ಸಿಗಲಿ ಎಂಬ ಆಸೆಯಿತ್ತು. ನಮ್ಮ ಜೊತೆಯಲ್ಲಿದ್ದವರು  ವಾಹನ ಚಾಲಕ ರಾಜು ಅವರನ್ನು  ಟೈಗರ್ ಟ್ಯಾಂಕ್ ಹತ್ತಿರ ವಾಹನ ಕೊಂಡೊಯ್ಯಲು ಕೋರಿದರು. ಅದರಂತೆ ಅಲ್ಲಿಗೆ ನಮ್ಮ ವಾಹನ ತೆರಳಿತು. ಅಲ್ಲಿ ಹೋದಾಗ ನಮಗೆ ಕಂಡಿದ್ದು ಒಂದು ಹಿಂಡು ಕಾಡೆಮ್ಮೆಗಳ ಬಳಗ ಇವುಗಳನ್ನು ಕಾಟಿ ಅಂತಾನೂ ಕರೆಯಲಾಗುತ್ತದೆ.  ಹುಲಿ  ಕೆರೆಯ[ ಟೈಗರ್ ಟ್ಯಾಂಕ್ ] ಸಮೀಪದಲ್ಲಿ ಬೀಡು ಬಿಟ್ಟಿದ್ದವು.ಕ್ಯಾಮರ ಜೂಮ್ ಮಾಡಿನೋಡಿದಾಗ ಪಕ್ಕದಲ್ಲಿ ಒಂಟಿ  ಕಾಟಿ ಎತ್ತಲೋ ನೋಡುತ್ತಾ ಕಾವಲು ಕಾಯುತ್ತಿತ್ತು.




ಗುಂಪನ್ನು ಕಾಯುತ್ತಿರುವ ಸೈನಿಕ 
 
ನಿಶ್ಯಬ್ದದ ಕಾಡು,  ಬಿಸಿಲ ತಾಪ ಕಡಿಮೆಯಾಗಿ ಸಂಜೆಯ ತಣ್ಣನೆ ಗಾಳಿ, ಬೀಸುತ್ತಿತ್ತು, ಸನಿಹದಲ್ಲಿ ಕಾಟಿ  ಗುಂಪಿನಲ್ಲಿ ಚಟುವಟಿಕೆ  ಗರಿಕೆದರಿತ್ತು. ಸನಿಹದ ಮರದ ನೆರಳಲ್ಲಿ ತಾಯಿ ಮಗುವಿನ ಅಕ್ಕರೆಯ  ಪ್ರೀತಿಯ ವಿನಿಮಯ ನಡೆದರೆ, ಮತ್ತೊಂದೆಡೆ  ಎರಡು ಜೀವಿಗಳು ಮಿಲನ ಮಹೋತ್ಸವಕ್ಕೆ ಅಣಿಯಾಗುತ್ತಿದ್ದವು . ಆದರೆ ........................ಅಷ್ಟರಲ್ಲಿ  ತೋರಿ ಬಂತು  .................. ಆ ದ್ವನಿ. ಎಲ್ಲೆಡೆ ಸ್ಥಬ್ಧ ,............. ನಿಶ್ಯಬ್ಧ .



ಅಮ್ಮನ ಅಕ್ಕರೆ ಬಲು ಚಂದ 




ಮಿಲನ ಮಹೋತ್ಸವಕ್ಕೆ ರೆಡಿ 



 ಹೌದು ಆ ದ್ವನಿಯೇ ಹಾಗೆ ಯಾವುದೇ ಚಟುವಟಿಕೆಯನ್ನು ಕಾಡಿನಲ್ಲಿ   ಸ್ಥಬ್ಧ ಗೊಳಿಸುವ ತಾಕತ್ತು ಅದಕ್ಕಿದೆ. ಮತ್ತೊಮ್ಮೆ ಅದೇ ದ್ವನಿ  ವ್ರೂಂ...............  ವ್ರೂಂ  , ನನ್ನ ಪಕ್ಕದಲ್ಲಿದ್ದ  ರಾಜು"ಸಾ ಟೈಗರ್ ಕಾಲ್ ಆಯ್ತಾ ಅದೇ , ಇಲ್ಲೇ ಇರುಮಾ  ಗ್ಯಾರಂಟೀ ಹುಲಿ ಇಲ್ಲೇ ಎಲ್ಲೋ ಅದೇ  ಸೈಟ್  ಆಯ್ತುದೆ" ಅಂದಾ, ಅಲ್ಲಿನ ಪ್ರದೇಶದಲ್ಲಿ ವಿಚಿತ್ರ ಬದಲಾವಣೆ ಮೇಯುತ್ತಿದ್ದ ಕಾಟಿಗಳ ಗುಂಪಿನಲ್ಲಿ ಎಲ್ಲಾ ಕಾಟಿಗಳು ಎಚ್ಚರಗೊಂಡವು  ತಮ್ಮ ಕ್ರಿಯೆಗಳನ್ನೆಲ್ಲ ನಿಲ್ಲಿಸಿ,  ಶಬ್ದ ಬಂದ ದಿಕ್ಕಿಗೆ  ಗಮನ  ಹರಿಸಿದವು . ಹುಲಿರಾಯ ಅಲ್ಲಿರುವ ಸೂಚನೆ ದೊರಕಿತ್ತು, ಹುಲಿಯ ಗರ್ಜನೆಗೆ ಕೆರೆಯ ಸಮೀಪ ಕುಳಿತಿದ್ದ  ಹಕ್ಕಿಗಳು ಪುರ್ ಪುರ್  ಅಂತಾ ಹಾರಿ ಹೋದವು, , ಆದರೆ ಪುಣ್ಯಕ್ಕೆ  "ಕಾಡು ಕೋಳಿ" ಹಾಗು "ಲಾಂಗೂರ್ ಕೋತಿಗಳು"  ಇರಲಿಲ್ಲ ಅವುಗಳೇನಾದರೂ ಇದ್ದಿದ್ದರೆ  ಬಹಳ ಗಲಾಟೆ ಎಬ್ಬಿಸಿ ಇಡೀ  ಕಾಡಿನಲ್ಲಿ ಮತ್ತಷ್ಟು ಗಲಬೆ ಆಗುತ್ತಿತ್ತು. ಕಾಡೆಮ್ಮೆಗಳು ಮತ್ತಷ್ಟು ಜಾಗರೂಕತೆ ಯಿಂದ  ನಿಂತಿದ್ದವು ಹುಲಿರಾಯನ ಚಲನವಲನ ಅರಿಯಲು. 
 


ಎಲ್ಲಿಹನು ಹುಲಿರಾಯ 


 ಸುಮಾರು ಹೊತ್ತು ನಿಂತರೂ ಪ್ರಯೋಜನ ಆಗಲಿಲ್ಲ, ನಮ್ಮ ಜೊತೆಯಲ್ಲಿದ್ದವರು ಸಲಹೆ ನೀಡಿದರು, ರಾಜು ಮೊದಲು ಇಲ್ಲಿಂದ ಜಾಗ ಖಾಲಿಮಾಡಿ ಕಬಿನಿ ಹಿನ್ನೀರಿಗೆ ಹೋಗೋಣ  ಆಮೇಲೆ ಇಲ್ಲ್ಗೆ ಮತ್ತೆ ಬರೋಣ ನಡೀರಿ ಅಂತಾ ಬಲವಂತ ಮಾಡಿ ಹೊರಡಿಸಿದರು ಕೊಪಬಂದರೂ ತೋರಿಸಿಕೊಳ್ಳದೆ ಚಾಲಕ ರಾಜು  ಯಾಂತ್ರಿಕವಾಗಿ ವಾಹನವನ್ನು ಕಬಿನಿ ಹಿನ್ನೀರಿಗೆ     ತೆಗೆದುಕೊಂಡು  ಹೋದರು.  ಅಲ್ಲಿ ಮತ್ತಷ್ಟು ನೋಟ ಸಿಕ್ಕಿತು,  ಹೌದು ನಾವು  ಮೊದಲು ಇಲ್ಲಿಗೆ  ಬಂದು ಬೋಟಿನಲ್ಲಿ  ತೇಲಾಡುತ್ತಿದ್ದ ಪ್ರದೇಶದಲ್ಲಿ ನೀರು ಒಣಗಿ ಬರಡಾಗಿತ್ತು. ವಿಶಾಲವಾದ ಕಬಿನಿ ನದಿ ಇಂದು ನೀರಿಲ್ಲದೆ ಒಣಗಿ ವೈಜ್ಞಾನಿಕ ಜಗತ್ತಿನ ಅಟ್ಟಹಾಸಕ್ಕೆ ಬಲಿಯಾಗಿ ಅವಮಾನದಿಂದ  ತತ್ತರಿಸಿತ್ತು.ಜೀವ ಜಲ ಇಲ್ಲದೆ ವನ್ಯ ಜೀವಿಗಳು ಸಂಕಟದಿಂದ ನರಳುತ್ತಿರುವ ದೃಶ್ಯ ಕಾಣಸಿಕ್ಕಿತು. ನೀರಿಗಾಗಿ ಮಾನವರ ಹೊಡೆದಾಟದಿಂದ  ಏನೂ ಅರಿಯದ ಈ ವನ್ಯಜೀವಿಗಳಿಗೆ ಜೀವ ಜಲ ಇಲ್ಲದಂತಾಗಿದೆ.





ಮಾನವರ  ಅವೈಜ್ಞಾನಿಕ  ಸಿದ್ದಾಂತಕ್ಕೆ  ಬಲಿಯಾಗುತ್ತಿರುವ ಪರಿಸರದ ನೋಟ.


ಒಣಗಿದ ಕಬಿನಿಯ ಅಂಗಳದಲ್ಲಿ  ಕೆಲವು ಆನೆಗಳು, ಹಾಗು ಕಾಡೆಮ್ಮೆಗಳ ಗುಂಪು ಒಟ್ಟಿಗೆ ಕಾಣಲು ಸಿಕ್ಕಿತು,  ಆಹಾರವಿಲ್ಲದೆ, ನೀರಿಲ್ಲದೆ   ಅಲ್ಲಿನ  ಜೀವಿಗಳು  ಸೊರಗಿದ್ದವು, ಆನೆಗಳ ಹಾಗು ಕಾಡೆಮ್ಮೆಗಳ ಮೂಳೆಗಳನ್ನು ಎಣಿಕೆ ಮಾಡಬಹುದಾಗಿತ್ತು. ವನ್ಯ ಜೀವಿಗಳ ದರ್ಶನ ಮುಗಿಸಿ ಮತ್ತೊಮ್ಮೆ ಟೈಗರ್ ಟ್ಯಾಂಕ್ ಬಳಿ  ಬಂದೆವು,  ಸುಮಾರು ಮುಕ್ಕಾಲು  ಘಂಟೆ ಕಳೆದು ಮತ್ತೆ ಅಲ್ಲಿಗೆ ಬಂದಿದ್ದ ನಮಗೆ ಅಲ್ಲಿನ ಪರಿಸರ ಸಂಪೂರ್ಣ ಬದಲಾಗಿತ್ತು, ಮೊದಲಿದ್ದ ಕಾಡೆಮ್ಮೆಗಳ ಗುಂಪು ಮಾಯವಾಗಿತ್ತು, ಅಲ್ಲಿದ್ದ ಕೆರೆಯಲ್ಲಿ   ಹುಲಿರಾಯ ನೀರಿನಲ್ಲಿ ವಿಶ್ರಮಿಸುತ್ತಾ  ವಿಹರಿಸಿದ್ದ.


ನನ್ನ ಮಗ ಕ್ಲಿಕ್ಕಿಸಿದ   ಚಿತ್ರ 


ನಾನು ಕ್ಲಿಕ್ಕಿಸಿದ ಚಿತ್ರ.

ಹುಲಿಯ ದರ್ಶನ ಮಾಡಿದ ಮನಸು  ಆನಂದದಿಂದ ಕುಣಿಯಿತು, ಅತ್ತ ನನ್ನ ಮಗ  ಗೌತಂ ಸದ್ದಿಲ್ಲದೇ  ಹುಲಿಯ ಚಿತ್ರ ತೆಗೆಯುತ್ತಿದ್ದ, ಹುಲಿಯ ದರ್ಶನ ಮಾಡಿದ ಖುಷಿಯಲ್ಲಿ ನನ್ನ ಕ್ಯಾಮರದಿಂದ ಫೋಟೋ ತೆಗೆಯೋದನ್ನು ಮರೆತು ಹಾಗೆ ಹುಲಿರಾಯನನ್ನು ಕಣ್ತುಂಬಾ ನೋಡುತ್ತಾ ಮೈಮರೆತಿದ್ದೆ , ನಂತರ  ವಾಸ್ತವತೆಗೆ ಬಂದು ಕ್ಯಾಮರ ಕ್ಲಿಕ್ಕಿಸಿದಾಗ  ನನಗೆ ಅಗತ್ಯವಾದ ಬೆಳಕು ಸಿಗಲಿಲ್ಲ ಸುಮಾರಾದ ಚಿತ್ರ ಕ್ಯಾಮರಾದಲ್ಲಿ ಮೂಡಿಬಂತು.  ಅಷ್ಟರಲ್ಲಿ  ಕಾಡಿನಲ್ಲಿನ ಮರಗಳ ಸಂದಿಯಿಂದ ಸೂರ್ಯನ  ಕಿರಣ ಮಂಕಾಗತೊಡಗಿತು,  ಹುಲಿರಾಯ ನಮ್ಮ ಇರುವನ್ನು ಲೆಕ್ಕಿಸದೆ  ಆರಾಮವಾಗಿ ತನ್ನ ಲೋಕದಲ್ಲಿ ಮುಳುಗಿದ್ದ.  ಹೆಚ್ಚು ಹೊತ್ತು ನಿಲ್ಲದೆ ಸುಮಾರು ಹದಿನೈದು ನಿಮಿಷಗಳ ದರ್ಶನ ಮುಗಿಸಿ  ವಾಪಸ್ಸು ಹೊರಟೆವು,  ನನ್ನ ಮಗ ಪ್ರಥಮ ಭೇಟಿಯಲ್ಲೇ ಹುಲಿ ನೋಡಿದ ಖುಷಿಯಲ್ಲಿದ್ದ, ನಾನು ಹುಲಿಯ ಚಿತ್ರ ಸರಿಯಾಗಿ ತೆಗೆಯಲಿಲ್ಲ ಎನ್ನುವ ನಿರಾಸೆಯಲ್ಲಿದ್ದೆ, ನಮ್ಮೊಡನಿದ್ದ ಕೆಲವರು  ಹೆದರಿಕೆಯಿಂದ ಮೌನವಾಗಿದ್ದರು, ಇವನ್ನೆಲ್ಲಾ  ನೋಡಿದ ಸೂರ್ಯ ತನ್ನ ಪಯಣವನ್ನು ಭೂಮಿಯ ಇನ್ನೊಂದು  ಕಡೆಗೆ ಮುಂದುವರೆಸಿದ್ದ, ಈ ಭಾಗಕ್ಕೆ ವಿಧಾಯ ಹೇಳಿದ್ದ , ವನ್ಯ ತಾಣ ವೀಕ್ಷಣೆ ಮುಗಿಸಿದ ನಮ್ಮನ್ನು ಚಾಲಕ ರಾಜು  ಸುರಕ್ಷಿತವಾಗಿ  ವಾಪಸ್ಸು ತಂದು ಬಿಟ್ಟು ನಕ್ಕಿದ್ದ.


ತನ್ನದೇ ಲೋಕದಲ್ಲಿದ್ದ ಹುಲಿರಾಯ 

ನಮ್ಮ ಕಬಿನಿ ವನ್ಯಜೀವಿ  ತಾಣದ ಪ್ರವಾಸ ಇಲ್ಲಿಗೆ ಮುಗಿದಿತ್ತು. ಅಮೂಲ್ಯ ತಾಣದ ನೂರಾರು ಚಿತ್ರಗಳು ನನ್ನ ಕ್ಯಾಮರಾದಲ್ಲಿ ಭದ್ರವಾಗಿ ಸೇರಿದ್ದವು. ವಾಪಸ್ಸು ಕಾರಿನಲ್ಲಿ ಬರುವಾಗ  "ಟೈಗರ್ ಕಾಲ್"  ನ  ಗರ್ಜನೆ ಕಿವಿಯಲ್ಲಿ  ಮಾರ್ಧನಿಸುತ್ತಿತ್ತು . .....!!

{ಮುಂದಿನ ಸಂಚಿಕೆಯಲ್ಲಿ ದಾಂಡೇಲಿ ಪ್ರವಾಸದ ಅನುಭವಗಳು ಬರಲಿವೆ } 

Thursday, April 18, 2013

ಕಬಿನಿ ಕಾಡಿನಲ್ಲಿ ನಾನು. ......೦೧ ಸಾ ಉಸಾರು ಅಲ್ನೋಡಿ ...!!


ಕನ್ನಡ ನಾಡಿನ ಹೆಮ್ಮೆಯ ಪಕ್ಷಿ 
ಬ್ಲಾಗ್ ಬರಹ ಬರೆದು ಬಹಳ ದಿನ ಆಯ್ತು, ಬಿಡುವಿಲ್ಲದ ದಿನಗಳು ,  ದಿನವೆಲ್ಲಾ ತಲೆಯಮೇಲೆ ಉರಿವ ಬಿಸಿಲು , ಮನೆಗೆ ಬಂದೊಡನೆ ಧಣಿದ ದೇಹ ಸೋಮಾರಿಯಾಗಿ ಬಿಡುತ್ತೆ, ಬರೆಯಲು ಕುಳಿತರೆ ಮನಸಿನಲ್ಲಿ ಬರೆಯುವ ಉತ್ಸಾಹ ಬೇಸಿಗೆಯ ಬಿಸಿಯಲ್ಲಿ ಆವಿಯಾಗಿ ಬಿಡುತ್ತದೆ,ಹಾಗಾಗಿ  ಬರೆಯಲಿಲ್ಲ ಎನ್ನುವ ಕಾರಣ. ಮೊನ್ನೆ ತಾನೇ ಫೆಸ್ ಬುಕ್ ನಲ್ಲಿ ಶನಿವಾರ ನನ್ನ  ದಾಂಡೇಲಿ , ಗಣೇಶ್ ಗುಡಿ , ಸಿನ್ಥೆರಿ ರಾಕ್ಸ್  ಪ್ರವಾಸದ ಹಳೆಯ  ನೆನಪುಗಳ ಮಾಲಿಕೆ ಬರೆಯುವುದಾಗಿ ಜಂಭ ಕೊಚ್ಚಿಕೊಂಡಿದ್ದೆ. ಆದರೆ ಯಾವುದೋ ವಿಚಾರ  ಗೊಂದಲದಿಂದ ಅದರ ಮಾಲಿಕೆ ಮತ್ತಷ್ಟು ವಿಳಂಭ ವಾಗುತ್ತಿದೆ. ಕೆಲವು ಆತ್ಮೀಯ ಗೆಳೆಯರ ಒತ್ತಾಯದ ಮೇರೆಗೆ ಈ ಲೇಖನ ನಿಮ್ಮ ಮುಂದೆ ಹಾಜರ್ ಆಗಿದೆ.



ಕಾಡೆಂದರೆ  ಹೀಗೆ  ಒಳಗೆ ಇರೋದು ಗೊತ್ತಾಗೊಲ್ಲ.



ಕಳೆದ ಭಾನುವಾರ ನನ್ನ ಗೆಳಯ ಸತ್ಯ ಅವರು ಫೋನ್ ಮಾಡಿ  ಬಾಲಣ್ಣ  ಎಷ್ಟೊತ್ತಿಗೆ ಹೊರಡೋದು ಎಂದಾಗಲೇ ಅರಿವಾಗಿದ್ದು, ನಾವು ಆ ದಿನ ಕಬಿನಿ ಕಾಡಿಗೆ ಹೋಗಬೇಕಾಗಿತ್ತೆಂದು , ಸರಿ ಅಂತಾ ಸಾರ್ ನಾನು ರೆಡಿ ನಿಮ್ಮ ಆಗಮನ ಎಷ್ಟು ಘಂಟೆಗೆ ಸಾರ್ ಅಂದೇ. ಸೀನ್  ಕಟ್  ಮಾಡಿದ್ರೆ , ಮಧ್ಯಾಹ್ನ ೧.೦೦ ಘಂಟೆಗೆ ನಮ್ಮ ಮನೆಯ ಮುಂದೆ ಅವರ  ನ್ಯಾನೋ ಕಾರ್ ನಿಂತಿತ್ತು,  ನಾನೂ , ನನ್ನ ಮಗ  ಜೊತೆಯಾಗಿ  ಕಬಿನಿ ಕಾಡು  ನೋಡಲು  ಹೊಂಟೆವು .ಪ್ರಯಾಣ, ಊಟ ಇತ್ಯಾದಿ ಮಾಡಿ   ಕಾಡಿನ ಒಳಗೆ  ನಮ್ಮ ಪ್ರವೇಶ ಮಧ್ಯಾಹ್ನ ೪.೦೦ ಘಂಟೆಗೆ ಆರಂಭ ಆಯಿತು. ವಾಹನ ಚಾಲಕ  ರಾಜು  ಕಾಡಿನ ಒಳಗೆ ನಮ್ಮ ಕಾನನ ದರ್ಶಕನಾಗಿ  ನಿಧಾನವಾಗಿ ವಾಹನ ಚಲಾಯಿಸುತ್ತಿದ್ದ. ಒಣಗಿದ ಕಾಡು,  ಬಿಸಲಿಗೆ ಬಾಡಿದ  ಪೊದೆಗಳು, ನೀರಿಲ್ಲದ ಹೊಂಡಗಳ ದರ್ಶನ  , ಮಳೆ ಬಂದರೆ  ಹಸಿರ ಉಡುಗೆ ಧರಿಸುವ  ಕಾನನ ಸುಂದರಿ  ಬೇಸಿಗೆಯಲ್ಲಿ ಹಸಿರು ಕಳೆದುಕೊಂಡು   ಸೊರಗುತ್ತಾಳೆ.  ದಾರಿಯುದ್ದಕ್ಕೂ ಕಾಣ ಸಿಕ್ಕ ಜಿಂಕೆಗಳು  ಉತ್ಸಾಹ ಕಳೆದುಕೊಂಡು  ನೀರಿಗಾಗಿ ಹಪಹಪಿಸುತ್ತಿದ್ದವು .  ಕಾಡಿನ ಹಾದಿಯಲ್ಲಿ ಬಹಳ ದೂರದ ವರೆಗೆ ಚಟುವಟಿಕೆಗಳನ್ನು ನೋಡಬಹುದಿತ್ತು,  ಹೀಗೆ ಸಾಗಿತ್ತು, ನಮ್ಮ ಪಯಣ .


ಪೋದೆವಳಗೆ ನೋಡಿ ಸಾ 


ಒಮ್ಮೆಲೇ ವಾಹನ ಆಫ್ ಮಾಡಿ  ನಿಲ್ಲಿಸಿದ ಚಾಲಕ  ರಾಜು  "ಸಾ ಉಸಾರಾಗಿ  ಆ ಕಡೆ ನೋಡಿ" ಅಂದಾ....! ಅಲ್ಲೇನಿದೆ ಬರಿ ಒಣಗಿದ  ಪೊದೆ  , "ಇಲ್ಲಾ  ರಾಜು  ಏನೂ ಕಾಣುತ್ತಿಲ್ಲ, "  " ಸಾ ಸರಿಯಾಗಿ ನೋಡಿ ಸಾ ಅಲ್ಲೇ ಅವೇ "ಅಂದಾ  ...!! ಆ  ಪೋದೆಗಳು  ನಮ್ಮಿಂದ ಕೇವಲ ಅಂದಾಜು ಇಪ್ಪತ್ತು ಅಡಿ ದೂರದಲ್ಲಿದ್ದವು.  "ಇಲ್ಲಾ  ರಾಜು  ಏನೂ ಕಾಣುತ್ತಿಲ್ಲ"  ಅಂತಾ ಪಿಸುಗುಟ್ಟಿದೆ.


 ಏ ಸರ್ಯಾಗಿ  ನೋಡಿ ಸಾ 

"ಏ  ಸರ್ಯಾಗಿ ನೋಡಿ ಸಾ  ಅಲ್ಲೇ ಅವೇ  , ಅಂಗೆ ಇರಿ ಬತ್ತವೆ  ಆಚೆಗೆ ", ಅಂತಾ  ಹೇಳಿ ಸುಮ್ಮನಾದ .  ಪಟ್ಟಣದ ವಾಸಿಯಾದ ನನ್ನ ಕಣ್ಣು  ಕಾನನದ ಪರಿಸರಕ್ಕೆ ಹೊಂದಿಕೊಂಡಿರದ ಕಾರಣ  ಪಕ್ಕದಲ್ಲೇ ನಡೆಯುತ್ತಿರುವ  ಚಟುವಟಿಕೆ ಗೊತ್ತಾಗಲಿಲ್ಲ  ಜೊತೆಗೆ ಯಾವುದೇ ಶಬ್ಧ ಆ ಪೊದೆಯಿಂದ ಬರುತ್ತಿರಲಿಲ್ಲ  , ಹಾಗೆ ಸಹನೆಯಿಂದ ಕಾಯುವುದಷ್ಟೇ ನನಗಿದ್ದ  ಅವಕಾಶ . ಹಾಗೆ ಕಾಯುತ್ತಿದ್ದೆ, ಕೇವಲ ಎರಡು ಮೂರು ನಿಮಿಷಗಳ ಕಾಯುವಿಕೆ ಅಷ್ಟೇ ........!!!!! ಪೊದೆಯಿಂದ ಹೊರಬಂದವು   ... ಅವು.



ಪೊದೆಯಿಂದ  ಬಂದಿದ್ದು ಇವುಗಳೇ 




 ಒಂದಲ್ಲಾ ಎರಡು 
ಒಂದಲ್ಲಾ  ಎರಡಲ್ಲಾ , ಮೂರಲ್ಲಾ  ನಾಲ್ಕು 

ಹೌದು  ಆ ಪೊದೆಗಳ ಹಿಂದೆ  ನಾಲ್ಕು ಆನೆಗಳ ಒಂದು ಗುಂಪಿತ್ತು, ಒಣಗಿದ ಕಾಡಿನಲ್ಲಿ ಒಣಗಿದ ಪೊದೆಯ ಹಿಂದೆ ಇಷ್ಟು ಆನೆಗಳು  ನಮ್ಮ ಸನಿಹದಲ್ಲೇ ಇದ್ದರೂ  ನಮಗೆ ಅರಿವಾಗಲಿಲ್ಲ  ಜೊತೆಗೆ ಒಣಗಿದ ಪರಿಸರದಲ್ಲಿ ನಾವು ನಡೆದರೆ  ಹೆಜ್ಜೆಯ ಸಪ್ಪಳವಾದರೂ  ಕೇಳುತ್ತದೆ, ಆದರೆ  ಊ ಹು  ಈ ಆನೆಗಳ ಗುಂಪು ನಡೆದು ಬರುತ್ತಿದ್ದರು  ಒಂದು ಚೂರು ಸಪ್ಪಳ ಕೇಳಲಿಲ್ಲ . ಇದು ನಮಗೆ  ಅಚ್ಚರಿಯ ವಿಚಾರ,  ನಮ್ಮ ವಾಹನದ ಸಮೀಪದಲ್ಲೇ  ಈ ಆನೆಗಳ ಮೆರವಣಿಗೆ ಸಾಗಿತ್ತು, ಕ್ಯಾಮರ ತನ್ನ ಕಾಯಕ ನಡೆಸಿತ್ತು,

ಏ  ಹುಷಾರು  ಹತ್ರ ಬಂದ್ರೆ  ಅಷ್ಟೇ....!


 ಸಾಗುತ್ತಿದ್ದ ಆನೆಗಳ ಗುಂಪಿನ ಕೊನೆಯಲ್ಲಿದ್ದ ಒಂದು ಆನೆ  ರಕ್ಷಣೆಯ ಜವಾಬ್ಧಾರಿ ಹೊತ್ತಿತ್ತು, ನಮ್ಮ ವಾಹನ ನೋಡಿ  ಸ್ವಲ್ಪ  ಅವಾಜ್ ಹಾಕಿ ಹೆದರಿಸಿತು, ಹಲವು ಸಾರಿ ಇಂತಹ ಸನ್ನಿವೇಶ ಎದುರಿಸಿರುವ ನಮಗೆ  ಇದೇನು ಹೊಸತಲ್ಲ. ಅದರಿಂದ  ನಿಶ್ಯಬ್ಧ ವಾಗಿ  ವಾಹನದಲ್ಲಿ ಕಲ್ಲಿನಂತೆ ಕುಳಿತೆ ಇದ್ದವು  , ಅದು ಬಹಳಷ್ಟು  ಹೆದರಿಸುವ ಆಟ ನಡೆಸಿತ್ತು, ಸುಮಾರು  ಹತ್ತು ನಿಮಿಷ ಈ ಆಟ ನಡೆಯಿತು,  ಆ ಆನೆ  ಅಲ್ಲಿಂದ ರಸ್ತೆ ದಾಟಿ ಕಾಡು ಹೊಕ್ಕಿತು.

ಬಾ ಕಂದಾ ಹೋಗೋಣ ಮರ್ಯಾದೆ ಇಲ್ಲದ ಜನ ಇವರು 

 ಸನಿಹದಲ್ಲಿ ಈ ಕಣ್ಣಾಮುಚ್ಚಾಲೆ  ಆಟ ನೋಡುತ್ತಿದ್ದ ತಾಯಿ ಆನೆ  "ಬಾ ಕಂದಾ ಹೋಗೋಣ , ಇವರು ಮರ್ಯಾದೆ ಇಲ್ಲದ ಜನ" ಅಂತಾ  ಮರಿಯಾನೆ ಜೊತೆ  ಕಾಡಿನೊಳಗೆ ತೆರಳಿತು. . [ ಮುಂದಿನ ಸಂಚಿಕೆ ಟೈಗರ್ ಕಾಲಿಂಗ್ ]