ಸಾಂದರ್ಬಿಕ ಚಿತ್ರ [ ಕೃಪೆ ಅಂತರ್ಜಾಲ] |
ಇದೊಂದು ಕಾಡುತ್ತಿರುವ ಪ್ರಶ್ನೆ , ನನಗೂ ಯೋಚಿಸಿ ಯೋಚಿಸಿ ಸಾಕಾಯ್ತು. ನೀವಾದ್ರೂ ಉತ್ತರ ಕೊಡಿ ಬಾಲೂ ಅಂದ್ರು ಮಲ್ಲಿಕಾರ್ಜುನ್ ಮೇಷ್ಟ್ರು. ಯಾಕೆ ಸಾರ್ ಏನಾಯ್ತು?. ಏನ್ ಸಮಾಚಾರ? ಅಂದೇ ,
ಅಯ್ಯೋ ಬಾಲೂ ಯಾಕೆಳ್ತೀರ ನನ್ನ ಕಥೆ ಈ ಹಳ್ಳಿ ಹೈಕಳ ಸಾವಾಸ ಬಲು ಕಷ್ಟಾ ಕಣ್ರೀ , ಬನ್ನಿ ವಿಚಾರ ಹೇಳ್ತೀನಿ ಅಂತಾ ವಿಚಾರ ಹೇಳಿದ್ರೂ ಬನ್ನಿ ಈ ಕಥೆ ಓದಿ.
ನಮ್ಮ ಮಲ್ಲಿಕಾರ್ಜುನ್ ಒಳ್ಳೆಯ ಉತ್ಸಾಹಿ ಮೇಷ್ಟ್ರು , ಒಂದು ಹಳ್ಳಿಯಲ್ಲಿ ಪ್ರೌಡ ಶಾಲೆ ಮಕ್ಕಳಿಗೆ ವಿಜ್ಞಾನ ಭೋದನೆ ಮಾಡುತ್ತಾರೆ. ಹಳ್ಳಿಯ ಮಕ್ಕಳಿಗೆ ಅಂತರ್ಜಾಲ ಸೌಲಭ್ಯ ಇಲ್ಲಾ , ಮಾಹಿತಿ ಸಿಗೋಲ್ಲಾ ಎನ್ನುವ ಕಾರಣಕ್ಕೆ ತಾವೇ ಅಂತರ್ಜಾಲ ಹುಡುಕಾಡಿ ವೈಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಶಾಲೆಯಲ್ಲಿ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಮಕ್ಕಳಿಗೆ ಹೆಚ್ಚು ವಿಚಾರ ತಿಳಿದು, ಹೆಚ್ಚಾಗಿ ಪ್ರಶ್ನೆ ಕೇಳಿ ಹೊಸ ವಿಚಾರಗಳನ್ನು ತಿಳಿದು ಪಟ್ಟಣದ ಮಕ್ಕಳಿಗೆ ಸರಿಸಮನಾಗಿ ಜ್ಞಾನ ಪಡೆಯಲಿ ಎನ್ನುವ ಸದುದ್ದೇಶ ಅವರದು, ಮಕ್ಕಳನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ, ಮಕ್ಕಳಿಗೂ ಸಹ ಇವರಂದ್ರೆ ಬಹಳ ಪ್ರೀತಿ ಹಾಗು ಸಲಿಗೆ ಜಾಸ್ತಿ.ಇವರ ಕ್ಲಾಸು ಅಂದ್ರೆ ಅದೊಂದು ವಿಚಾರ ಘೋಷ್ಠಿ ಇದ್ದಂತೆ , ಪ್ರಶ್ನೆ ಕೇಳುವ ಅಧಿಕಾರ ಮಕ್ಕಳಿಗೂ ಇರುತ್ತದೆ. ಆದರೆ ಇವರ ಓರಿಗೆಯ ಸಹೋದ್ಯೋಗಿ ಮೇಷ್ಟರುಗಳಿಗೆ ಇವರೊಬ್ಬ ವಿಚಿತ್ರ ವ್ಯಕ್ತಿ. ಇರಲಿ ಬನ್ನಿ ಮುಖ್ಯ ವಿಚಾರಕ್ಕೆ ಸಾಗೋಣ.
ಒಮ್ಮೆ ಹೀಗಾಯ್ತು ನಮ್ಮ ಮಲ್ಲಿಕಾರ್ಜುನ್ ಮೇಷ್ಟ್ರು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದರು, ಅವರ ತರಗತಿಯಲ್ಲಿ ವಿಷಯ ಮಂಡನೆ ಆಗುತ್ತಿತ್ತು, ವಿಜ್ಞಾನದ ಕೌತುಕಗಳ ಬಗ್ಗೆ ಪ್ರಶ್ನೋತ್ತರಗಳ ನಡೆದಿತ್ತು,
ಮಲ್ಲಿಕ್ :- ಲೇ ಪರಮೇಶ ಪ್ಲಾನೆಟ್ [ಗ್ರಹ ]ಎಂಬ ಪದ ಯಾವ ಭಾಷೆ ಯಿಂದ ಉದ್ಭವಿಸಿದೆ ? ಹೇಳೋ
ಪರಮೇಶ :- ಸಾ ಅದು ಗಿರೀಕ್[ ಗ್ರೀಕ್] ಭಾಸೆ ಯಿಂದ ಆಲ್ವಾ ಸಾ ............ .?
ಮಲ್ಲಿಕ್ :- ಲೇ ಅದು ಗಿರೀಕ್ ಅಲ್ವೋ ಗ್ರೀಕ್ ಭಾಷೆ ಉತ್ತರ ಸರಿ ಕೂತ್ಕೋ
ಪರಮೇಶ :- ಊ ಕ ಸಾ , ಅಂತಾ ಕುಳಿತ.
ಮಲ್ಲಿಕ್ :-ಲೇ ಬಸವ ನೀ ಹೇಳೋ ಟೈರ್ ಕಂಡು ಹಿಡಿದವರು ಯಾರೋ ??
ಪರಮೇಶ :- ಅದೇ ಅದೇ ಟೈರು ..... ಕಂಡು ಹಿಡಿದವರು ........ ಅದೇಯ ಊ ಅಂತಾ ತಡಕಾಡಿ ತಲೆ ಕೆರೆಯುತ್ತಾ ನಿಂತ.
ಮಲ್ಲಿಕ್ :- ಲೇ ಲೇ ಮೊನ್ನೆ ತಾನೇ ಅವನ ಚಿತ್ರ ತೋರ್ಸಿ ಹೇಳಿರ್ಲಿಲ್ವ ..... ಬರೀ...... ಊ .ಮ. ಹೇ. ಗೆ ಲಾಯಕ್ಕೋ ನೀನು ಲೇ ಕೆಂಪ ನೀನೆಳ್ ಲೇ ಅಂದ್ರೂ
ಕೆಂಪ :- ಸಾ ಸಾ ಅದೇಯಾ , ಅದೇಯಾ ಬೆಂಡ್ಲಪ್ ........ಸಾ , ಅಂದಾ ಲೇ ಲೇ ಅದು "ಡನ್ಲಪ್" ಕಣೋ ಓ ಕೂತ್ಕೋ ಅಂದ್ರು,
ಮಲ್ಲಿಕ್ :- ಏಳಮ್ಮಾ ಸರೋಜಾ ಜಗತ್ತಿನ ಅತ್ಯಂತ ಶೀತ ಪ್ರದೇಶ ಯಾವುದು ....??
ಸರೋಜಾ :- ಹಿಮಾಲಯ ಸಾ
ಮಲ್ಲಿಕ್ : - ಏನಮ್ಮ ನೀನೂ ಹಿಂಗೆ ಹೇಳ್ತಿಯಾ , ಉತ್ತರ ತಪ್ಪು, ನೋಡು ಮರಿ ಭಾಗ್ಯ ನೀನು ಹೇಳಮ್ಮ .
ಭಾಗ್ಯ :- ಸಾ ಅದು ಅಂಟಾರ್ಟಿಕಾ ಸಾ,
ಮಲ್ಲಿಕ್ :-ಭೇಷ್ ಭೇಷ್ ಒಳ್ಳೆಯ ಮಗು ನೀನು ಗುಡ್, ಕೂತ್ಕೋ ಮರಿ , ಲೇ ಶಂಭೂ ಅವುತ್ಕೊತೀಯ ಎದ್ದೇಳು
ಶಂಭು :- ಇಲ್ಲಾ ಸಾ ಅಂಗೆನಿಲ್ಲ ಸಾ, ಅಂತಾ ನಿಂತು ಕೊಂಡಾ
ಮಲ್ಲಿಕ್ :- ಲೇ ಶಂಭೂ ತರ್ಲೆ ಮಾಡ ಬ್ಯಾಡ ಹೇಳೋ ನ್ಯೂಟನ್ ನಿಯಮಾವಳಿ ಯಾವ ವಿಚಾರದ ಬಗ್ಗೆ ಹೇಳೋ
ಶಂಭು:- ನ್ಯೂಟನ್ ಗುರ್ತ್ವಾ ಕರ್ಸಣೆ ನಿಯಮ ಆಲ್ವಾ ಸಾ.?
ಮಲ್ಲಿಕ್ :- ಲೇ ನನ್ನೇ ಪ್ರಶ್ನೆ ಕೇಳ್ತೀಯ , ಅದು ಗುರುತ್ವಾಕರ್ಷಣೆ ಕಣಯ್ಯ ಗುರ್ತ್ವಾ ಕರ್ಸಣೆ ಅಲ್ಲಾ ತಿಳೀತ
ಶಂಭು :- ಸಾ ಒಂದು ಪಸ್ನೆ ಕೇಳ ಬೇಕೂ ಅಂತೀವ್ನಿ ತಪ್ಪು ತಿಳಕಾ ಬ್ಯಾಡಿ?? ಅಂದಾ
ಮಲ್ಲಿಕ್ :- ಅಯ್ಯೋ ದಡ್ಡ.... ಅದಕ್ಕೆ ಯಾಕೆ ಸಂಕೋಚ? ಕೇಳೋ ಪ್ರಶ್ನೆ , ಮಕ್ಕಳು ಹೊಸ ವಿಚಾರ ತಿಳಿದು ಕೊಳ್ಳ ಬೇಕು, ಕೇಳು ಕೇಳು ನಿನ್ನ ಪ್ರಶ್ನೆ ...ಅಂದ್ರೂ
ಶಂಭು :- ಪ್ರಶ್ನೆ ಕೆಲಿದ್ಮ್ಯಾಲೆ ನನ್ನ ಬೋಯ್ಯಕಿಲ್ಲ , ಒಡಿಯಾಕಿಲ್ಲ ಅಂತಾ ಯೋಳಿ , ಆಮೇಕೆ ಪಶ್ನೆ ಕೇಳ್ತೀನಿ ಅಂದಾ
ಮಲ್ಲಿಕ್ :- ಲೇ ಪ್ರಶ್ನೆ ಕೇಳೋ ನಿನಗೆ ಏನೂ ಮಾಡೋಲ್ಲ ಹೆದರ ಬೇಡ ಪ್ರಶ್ನೆ ಕೇಳೂ ಅಂದ್ರು.
ಶಂಭು :- ನಮ್ಮ ಹಟ್ಟಿ [ ಮನೆ] ಪಕ್ಕ ಇರೋ ಲಾರೀ ತೂಕ ಮಾಡೋ ಮಿಶಿನಿನಲ್ಲಿ ನಮ್ಮ ಎಮ್ಮೆ ಯ ಹತ್ಸಿ ತೂಕ ಮಾಡ್ದೆ ಸಾ ೩೦೦ ಕೆ.ಜಿ.ಅದೇ[ ಆಹಾರ ಸೇವಿಸುವ ಮೊದಲು ] , ಅದು ಹುಲ್ಲು, ಹೊಟ್ಟು , ಭೂಸ ಎಲ್ಲಾ ಸೇರಿ ಸುಮಾರು ಹತ್ತು ಕೆ.ಜಿ. ಆಹಾರ ತಿನ್ನುತ್ತೆ , ಆದ್ರೆ ಅದರ ತೂಕ ಆಹಾರ ತಿಂದ ಮ್ಯಾಲೆ ೩೧೦ ಕೆ.ಜಿ. ಆಗಬೇಕು ಆದರೆ ತೂಕ ಹಾಕುದ್ರೆ ೩೦೦ ಕೆ.ಜಿ. ನೆ ತೂಗ್ತು ಸಾ,
ಆಮ್ಯಾಕೆ ಬೆಳಿಗ್ಗೆ ನಮ್ಮ ಎಮ್ಮೆನ ಮತ್ತೆ ತೂಕ ಮಾಡ್ದೆ ಆಗಲೂ ೩೦೦ ಕೆ.ಜಿ. ಬತ್ತು, ಆಮ್ಯಾಕೆ ಒಸಿ ಒತ್ತಾದ್ಮ್ಯಾಕೆ ಎಮ್ಮೆ ಗಂಜ್ಲಾ ಸುರಿಸಿ , ತೊಪ್ಪೆ ಹಾಕ್ತು ಎಲ್ಲಾ ಅಂದಾಜು ಒಂದು ಐದು ಕೆ.ಜಿ ಇರ್ಬೈದು , ತಾಳು ಈಗಲಾದರೂ ತೂಕ ಕಡಿಮೆ ಇದ್ದಾತಾ ಅಂತಾ ತೂಕ ಮಾಡ್ದೆ ಆಗಲೂ ೩೦೦ ಕೆ.ಜಿ.ನೆ ಬತ್ತು ಸಾ ಇದ್ಯಂಗೆ ಅಂತಾ ಗೊತ್ತಾಯ್ತಿಲ್ಲ ಒಸಿ ನೀವೇ ಯೋಳ್ಕೊಡೀ ಸಾ , ಅಂದಾ
ಮುಂದುವರೆದು ಸಾ ನಮ್ಮ ಎಮ್ಮೆ ಅಂಗೆ ಮನ್ಸುರ್ದೂ ಅದೇ ಕಥೆ ಆಲ್ವಾ ಸಾ ಅಂದಾ ............!!! ಯಾಕೋ ಅಂದೇ ನಮ್ಮ ಎಮ್ಮೆ ತೂಕ ಮಾಡಿದಂಗೆ ನನ್ನ ಮ್ಯಾಲೋ ಪ್ರಯೋಗ ಮಾಡ್ಕಂಡೆ ಆಗಲೂ ಎತ್ವಾಸ ಕಾಣಲಿಲ್ಲ ಸಾ, ಮನ್ಸರು ಊಟ ಮಾಡಾಕೆ ಮೊದ್ಲು ಎಷ್ಟು ತೂಕ ಇರ್ತಾರೋ ಹೊಟ್ಟೆ ಒಳಗಿನ ಕಸ ಆಚೆಗೆ ಹೊದ್ಮ್ಯಾಕೆ ತೂಕ ಅಷ್ಟೇ ಯಾಕೆ ಇರ್ತದೆ ಅಂತಾ ಗೊತ್ತಾಯ್ತಿಲ್ಲ ಅಂದಾ .
ಕ್ಲಾಸಿನ ಮಕ್ಕಳು ಗೊಳ್ ಅಂತಾ ನಕ್ಕರು.
ಮಲ್ಲಿಕ್ :- ಲೇ ತಲೆ ಹರಟೆ ಕೂತ್ಕೋ ಸುಮ್ನೆ , ಅಂದವನೇ ಗದರಿದೆ
ಪಾಪದ ಹುಡುಗ ಹೆದರಿಕೊಂಡು ಕುಳಿತ. ಲೇ ಇವತ್ತಿಗೆ ಇಷ್ಟೇ ಸಾಕು, ನಾಳೆಗೆ ಹೋಂ ವರ್ಕ್ ತಗೊಳ್ಳಿ ಅಂತಾ ಸಿಟ್ಟಿನಲ್ಲಿ ಹೊರಲಾರದಷ್ಟು ಹೋಂ ವರ್ಕ್ ನೀಡಿದೆ. ಶಾಲೆ ಮುಗಿಸಿ ಬಸ್ಸಿನಲ್ಲಿ ಕುಳಿತು ಯೋಚಿಸಿದಾಗ ಶಂಭು ಪ್ರಶ್ನೆ ಕಾಡತೊಡಗಿತು. ಹೌದಲ್ವಾ ಆ ಹುಡುಗ ಕೇಳಿದ ಪ್ರಶ್ನೆಯಲ್ಲಿ ತಪ್ಪೇನಿದೆ ? ಈ ಪ್ರಶ್ನೆಯ ಉತ್ತರ ನನಗೂ ಗೊತ್ತಿಲ್ಲ , ಅಂದವನೇ ಅಂತರ್ಜಾಲ ಹುಡುಕಿದೆ ಈ ಪ್ರಶ್ನೆಗೆ ಉತ್ತರ ಸಿಕ್ಕಲಿಲ್ಲ ಅದಕ್ಕೆ ನೀವಾದ್ರೂ ಏನಾದರೂ ಮಾಡ್ರೀ ಅಂದ್ರು.
ಹಳ್ಳಿ ಹೈದ |