Tuesday, October 2, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.3 ಸಹಸ್ರಲಿಂಗ ಸ್ಥಾಪಕರು ಯಾರು ???



ಶಾಲ್ಮಲಾ ನದಿ 

 ಹರ್ಷ ಹೆಗ್ಡೆ  ಯಮಾಹ ಬೈಕು  ಜೋರಾಗಿ  ಮುನ್ನುಗ್ಗುತ್ತಿತ್ತು.........ಅಂಕು ಡೊಂಕು ರಸ್ತೆಯಲ್ಲಿ  ............ಸಿರ್ಸಿಯಿಂದ ಯಲ್ಲಾಪುರ ರಸ್ತೆಯಲ್ಲಿ  ಸುಮಾರು ಹದಿನಾರು ಕಿ.ಮೀ . ದೂರ ಸಾಗಿದ ನಮಗೆ ಸಿಕ್ಕಿದ್ದು , "ಸಹಸ್ರ ಲಿಂಗ  ಕ್ಷೇತ್ರ".  ಶಾಲ್ಮಲಾ ನದಿ   ಒಡಲಲ್ಲಿ  ಅತ್ಯಂತ ರಮಣೀಯವಾಗಿ ಕಾಣುವ ಶಿವ ಲಿಂಗಗಗಳ  ತಾಣ. "ಶಾಲ್ಮಲಾ ನದಿ"  ನಮ್ಮ ಕನ್ನಡ ನಾಡಿನ ಧಾರವಾಡ ಜಿಲ್ಲೆಯ ಸೋಮೇಶ್ವರ ಗುಡಿ ಎಂಬಲ್ಲಿ ಉಗಮವಾಗಿ  ಉತ್ತರ ಕನ್ನಡ ಜಿಲ್ಲೆಗೆ ಬರುತ್ತದೆ  ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿದು ಅರಬ್ಬೀ ಸಮುದ್ರ ಸೇರುತ್ತದೆ. ಇದೆ "ಶಾಲ್ಮಲಾ  ನದಿ " ಸಹಸ್ರಲಿಂಗದ ಕ್ಷೇತ್ರದಲ್ಲಿಯೂ ಸಾಗುತ್ತದೆ.



ಶಿವಲಿಂಗಕ್ಕೆ  ನೆರಳಿನ ಆಸರೆ

ಸಹಸ್ರ ಲಿಂಗ ನೋಡಲು ಬಂದ ನನಗೆ ಮೊದಲು ಕಾಣಿಸಿದ್ದು ಪ್ರಶಾಂತವಾಗಿ ಹರಿಯುತ್ತಿದ್ದ ಶಾಲ್ಮಲಾ ನದಿ .ಬೈಕಿನಿಂದ ಇಳಿದ ನನಗೆ ಹತ್ತಿರದ ಮರದಲ್ಲಿ ಎಲ್ಲೋ ಮರೆಯಾಗಿ  ಕೂಗುತ್ತಿದ್ದ  ಮಂಗಟೆ  ಹಕ್ಕಿಯ  [hornbill bird ] ದ್ವನಿ. ಆದರೆ ಈ ಪಾಪಿ ಕಣ್ಣಿಗೆ ಕಾಣದೆ ದೂರದಲ್ಲಿ ತನ್ನ ಕೂಗುವಿಕೆಯನ್ನು ಮುಂದುವರೆಸಿತ್ತು ಆ ಹಕ್ಕಿ.ಕ್ಯಾಮರಾ ಹಿಡಿದು  ತಲೆ ಮೇಲೆತ್ತಿ ಹುಡುಕಿದ್ದೇ ಬಂತು ಭಾಗ್ಯ  ಕುತ್ತಿಗೆ  ನೋವಾಗಿ  ಸೋತ ಮುಖದೊಡನೆ ಮೆಟ್ಟಿಲು ಇಳಿಯ  ತೊಡಗಿದೆ. ನದಿಯ ನಡುವೆ ಶಿವಲಿಂಗಕ್ಕೆ ಒಬ್ಬ ವ್ಯಕ್ತಿ ನದಿಯ ಜಲದಿಂದ  ಅಭಿಷೇಕ ಮಾಡುತ್ತಿದ್ದರು .


ಶಿವಲಿಂಗಕ್ಕೆ ಜಲಾಭಿಷೇಕ 


 ಹತ್ತಿರ ಹೋದರೆ ಜೊತೆಯಲ್ಲೇ  ಸುಶ್ರಾವ್ಯವಾಗಿ  ತೇಲಿಬಂತು ಪುರೋಹಿತರ  ಮಂತ್ರ , ನದಿಯ ನಡುವೆ  ಭಕ್ತಿಯ ಪೂಜೆ ಇಲ್ಲಿ ನಡೆದಿತ್ತು.ಶಿವಲಿಂಗಕ್ಕೆ ಅರ್ಪಿಸಿದ್ದ ಹೂಗಳು  ಸಾರ್ಥಕದ  ನಗೆ ಬೀರಿದ್ದವು.ಮುಂದೆ ತೆರಳಿದೆ ಹರ್ಷ ಹಾಗು ನಾನೂ ಸಹ ಇಲ್ಲಿ ಜಲಾಭಿಷೇಕ ಮಾಡಿ ಆಶೀರ್ವಾದ ಪಡೆದೆವು.ಪುರೋಹಿತರು  ಹರ್ಷನಿಗೆ ಪರಿಚಯ ಇದ್ದ ಕಾರಣ , ಹರ್ಷ ನನ್ನನ್ನು ಅವರಿಗೆ ಪರಿಚಯ ಮಾಡಿಕೊಟ್ಟ. ಮೈಸೂರು ಎಂಬ ಪದ ಕೇಳಿ ಅವರ ಮುಖದಲ್ಲಿ ಆತ್ಮೀಯ ಭಾವನೆ ಹೊಮ್ಮಿತು. ಪ್ರೀತಿಯ ನಗೆಯ ಆಶೀರ್ವಾದ ನಮಗೆ ಸಿಕ್ಕಿತು.



ನಮ್ಮನ್ನು ಕಾಯುವವರು ಯಾರು ??


ಹಾಗೆ ಮುಂದುವರೆದೆ ನಾನು ನನ್ನ ಕಣ್ಣುಗಳು ಅಲ್ಲಿ ಕಾಣುವ ವಿಶೇಷತೆಗಳನ್ನು  ಹುಡುಕುತ್ತಿದ್ದವು, ಕ್ಯಾಮಾರ  ಚಿತ್ರಗಳನ್ನು ಸೆರೆಹಿಡಿಯಲು ಹಾತೊರೆಯುತ್ತಿತ್ತು.  ನದಿಯ ನಡುವೆ ಬಹಳಷ್ಟು ಶಿವಲಿಂಗಗಳು  ಶಿಥಿಲವಾಗಿದ್ದವು , ಹತ್ತಿರ ತೆರಳಿದೆ. ಸುಂದರ ನಂದಿ  ವಿಗ್ರಹದ ಸನಿಹ ಭಗ್ನವಾದ ಅಪರೂಪದ ಕಲಾಕೃತಿ ಕಂಡಿತು.ನಂದಿ  ವಿಗ್ರಹ ನೋವಿನಿಂದ ಗತ ಕಾಲದತ್ತ  ಹಿಂತಿರುಗಿ ನೋಡುತ್ತಿದ್ದಂತೆ ಭಾಸವಾಯಿತು.  .



ಶಾಲ್ಮಲೆಯ ಒಡಲಲ್ಲಿ ಶಿವ 




ಸ್ವಲ್ಪ ದೂರ ಹೋದರೆ ಮತ್ತೊಂದು ಶಿವಲಿಂಗ ಹಾಗು ಪುಟ್ಟ ನಂದಿ  ಮನಸೆಳೆಯಿತು  , ಜುಳು ಜುಳು ಹರಿವ ಶಾಲ್ಮಲೆ ಒಡಲಲ್ಲಿ  ಶಿವಲಿಂಗ ಹಾಗು ನಂದಿ ಮೀಯುತ್ತಿದ್ದವು. ನದಿಯ ಒಡಲಲ್ಲಿ ಶಿವಲಿಂಗ ಕೆತ್ತುವ ಆಸೆ ಯಾವ ಶಿಲ್ಪಿಗೆ ಬಂತೋ ಎಂಬ ಪ್ರಶ್ನೆ ಕಾಡಿತು.  ಮತ್ತಷ್ಟು ಹೆಜ್ಜೆ ಹಾಕಿದೆ  ಅನತಿ ದೂರದಲ್ಲಿ  ಮತ್ತೊಂದು ದೃಶ್ಯ ಕಂಡಿತು.




ಯಾವ ದುಷ್ಟ ಹೀಗೆ ಮಾಡಿದ??


ಮನಸಿಗೆ ಮುದ ನೀಡಿದ ದೃಶ್ಯ

ಅರೆ ಇದೇನು ಸುಂದರ ಶಿವಲಿಂಗದ ಸನಿಹ   ಮುಖ   ಇಲ್ಲದ ನಂದಿ  , ಅಚ್ಚರಿಯಿಂದ ಸನಿಹ ಹೋದರೆ ಯಾರೋ ದುಷ್ಟ ವ್ಯಕ್ತಿಗಳು ಈ ಸುಂದರ ವಿಗ್ರಹವನ್ನು ಭಗ್ನ ಮಾಡಿದ್ದರು, ನೋವಿನ ಚಿತ್ರ ಕ್ಯಾಮರಾದಲ್ಲಿ ಮೂಡಿತು . ಸೌಂದರ್ಯತೆ ಯನ್ನು  ವಿರೂಪಗೊಳಿಸಿ  ಹಾಳುಮಾಡುವ  ಸ್ವಭಾವದ  ವಿಕೃತ ಜನಗಳಿಗೆ ಧಿಕ್ಕಾರ ಕೂಗಿತ್ತು ಮನಸ್ಸು .ಅದರ ಸನಿಹದಲ್ಲೇ ಮತ್ತೊಂದು ದೃಶ್ಯ ನನ್ನ ಮನಸನ್ನು ಸಮಾಧಾನ ಗೊಳಿಸಿತ್ತು. ಒಂದು ಮುದ್ದಾದ ಶಿವಲಿಂಗ ಹಾಗು  ಪುಟಾಣಿ ನಂದಿ  ಕಣ್ಣಿಗೆ ಬಿತ್ತು , ಅದನ್ನು ನನ್ನ ಕ್ಯಾಮರಾ  ಸೆರೆ ಹಿಡಿಯಿತು.



ಕಲ್ಲಿನಲ್ಲಿ ಕಡೆದ  ಊಟದ ತಟ್ಟೆಯೇ ಇದು ??


ಅಲ್ಲಿ ನೋಡಿ ಮತ್ತೊಂದು ದೃಶ್ಯ ಅರೆ ಹೌದಲ್ಲಾ  ಅಲ್ಲೇನೋ  ಕಾಣುತ್ತಿದೆ ಬನ್ನಿ ಹೋಗೋಣ , ಕಲ್ಲಿನಲ್ಲಿ ಕಡೆದ ಊಟದ ತಟ್ಟೆ ಯಂತೆ ಗೋಚರಿಸಿದ  ವೃತ್ತಾಕಾರದ ಕಲಾಕೃತಿ ಕಂಡಿತು.ಕಲ್ಲಿನಲ್ಲಿ ಒಂದು ದೊಡ್ಡ ತಟ್ಟೆಯಂತೆ ಕೊರೆದು, ಅದರ ಸುತ್ತಾ ಒಂದೇ ಅಳತೆಯ ಒಂಭತ್ತು ಸಣ್ಣ ಸಣ್ಣ ಗುಂಡಿಗಳನ್ನು ಕೊರೆಯಲಾಗಿದೆ. ಬಹುಷಃ ಆಹಾರ ಸೇವಿಸಲು ಮಾಡಿದ್ದ ತಟ್ಟೆ ಇರಬಹುದೇ ?ಎಂಬ ಪ್ರಶ್ನೆ ಗೆ ಉತ್ತರ   ಗೊತ್ತಾಗಲಿಲ್ಲ .



ಸಹಸ್ರ ಲಿಂಗ ಸ್ಥಾಪನೆ  ಬಗ್ಗೆ ಶಾಸನ 

ಇದರ ಅರ್ಥ ಏನು ??

ಇದನ್ನು ಕೊರೆದವರು ಯಾರು? ಯಾವ ರಾಜರು ಇದನ್ನು ಪೋಷಿಸಿದರು?  ಎಂಬ ಪ್ರಶ್ನೆ ಕಾಡತೊಡಗಿತು. ನನ್ನ ಹುಡುಕಾಟಕ್ಕೆ ಉತ್ತರ ಎಂಬಂತೆ ಅಲ್ಲೊಂದು "ಶಿಲಾ ಶಾಸನ"  ಕಣ್ಣಿಗೆ ಬಿತ್ತು ,ಹತ್ತಿರ ಹೋಗಿ ನೋಡಲು " ಸದಾಶಿವ ರಾಜೇಂದ್ರ"  ನಿರ್ಮಿತ ಎಂದು ತಿಳಿದು  ಬಂತು. ಸೋಂದೆ ಅರಸರಾಗಿದ್ದ  "ಸದಾಶಿವ ರಾಜೇಂದ್ರ " ಇದರ ಸ್ಥಾಪಕರು. ಇದಕ್ಕೆ ಪುರಾವೆಯಾಗಿ ಈ ಶಾಸನ ಸಾಕ್ಷಿ ಹೇಳುತ್ತಾ ನಿಂತಿದೆ. ಇದನ್ನು ಸಂರಕ್ಷಿಸದೀದರೆ ಈ ಸಾಕ್ಷ್ಯ ಹಾಳಾಗಿ ಈ ಕ್ಷೇತ್ರಕ್ಕೆ  ಮುಂದೊಮ್ಮೆ ಆಧಾರ ವಿಲ್ಲದೆ ಹೋಗುತ್ತದೆ. ಆದರೆ ಸಹಸ್ರ ಲಿಂಗ ಸ್ಥಾಪಕ "ಸದಾಶಿವ ರಾಜೇಂದ್ರ" , ಹದಿನೇಳನೆ ಶತಮಾನದಲ್ಲಿಸಿರಸಿಯ ಮಾರಿಕಾಂಬೆ ದೇವಾಲಯ ನಿರ್ಮಿಸಿದ   "ಸೋಂದಾ ರಾಜ ಇಮ್ಮಡಿ  ಸದಾಶಿವ ರಾವ್ " ಇವರಿಬ್ಬರು ಒಬ್ಬರೇ ಎಂಬ  ಬಗ್ಗೆ ಸಂಶೋಧನೆ ನಡೆದಲ್ಲಿ  ಸಹಸ್ರ ಲಿಂಗ ಸ್ಥಾಪನೆ ಬಗ್ಗೆ ನಿಖರ ಮಾಹಿತಿ ಲಭ್ಯ ಆಗುತ್ತದೆ.



ಶಾಲ್ಮಲೆಯ ಒಡಲು 




ಸಹಸ್ರಲಿಂಗದ  ಗತ ಇತಿಹಾಸದ ಗುಟ್ಟನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು  ಶಾಲ್ಮಲಾ  ನದಿ  ಅಂದಿನಿಂದ ಇಂದಿನ ವರೆಗೂ ನಮ್ಮ ಜ್ಞಾನಕ್ಕೆ ಸವಾಲು ಹಾಕುತ್ತಾ  ಹರಿಯುತ್ತಲೇ ಇದೆ.  ಸುಮಾರು ಒಂದು ಘಂಟೆಗಳ ಕಾಲ  ಇಲ್ಲಿದ್ದ ನಾವು ಮೆಟ್ಟಿಲು ಹತ್ತಿ ಮೇಲೆ ಬಂದೆವು . ಹಲವು ಪ್ರವಾಸಿಗರು  ಪ್ರಕೃತಿಯ ಮಡಿಲಲ್ಲಿ ಲಿಂಗಗಳ ಸನಿಹ ಬಂಡೆಗಳಲ್ಲಿ ತಮ್ಮ  ಕೆತ್ತನೆ ಮಾಡುತ್ತಾ ಅಲ್ಲಿನ ಕಲಾವಂತಿಕೆ ಯನ್ನು ಹಾಳು ಮಾಡುತ್ತಾಇದ್ದರು , ಇನ್ನು   ಕೆಲವರು ಅಟ್ಟಹಾಸ ಮೆರೆದಿದ್ದರು .



ತೂಗು ಸೇತುವೆ ಯಲ್ಲಿ ಹೊರಟಿತ್ತು  ನಮ್ಮ ಸವಾರಿ 

ಪ್ರಕೃತಿಯ ಒಡಲಲ್ಲಿ ತಾಂತ್ರಿಕತೆಯ ಚೆಲುವು.

ಸಾರ್ ಮುಂದೆ ಹೋಗೋಣವಾ ?? ಅಂತಾ ಹರ್ಷ ಹೆಗ್ಡೆ  ಎಚ್ಚರಿದಾಗ ವಾಸ್ತವಕ್ಕೆ ಬಂದೆ. ಮುಂದೆ ಬನ್ನಿ ಸಾರ್ ಹೋಗೋಣ ಇಲ್ಲೊಂದು ತೂಗು ಸೇತುವೆ ಇದೆ ಅದನ್ನು ದಾಟಬೇಕು  ಎಂದು ತನ್ನ ಬೈಕ್  ನ್ನು  ತೂಗು ಸೇತುವೆಯ ಮೇಲೆ  ತಂದ, ನಾನೂ ಸಹ ಶಾಲ್ಮಲಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸುಂದರ ತೂಗುಸೇತುವೆ  ಮೇಲೆ ನಡೆಯುತ್ತಾ  ಚಿತ್ರ ತೆಗೆಯುತ್ತಾ ಸಾಗಿದೆ.  !!!


ಇದೇನಿದು ??

ಮುಂದೆ  ಸಾಗಿದ   ನಮ್ಮ ಬೈಕ್ ದಾರಿಯಲ್ಲಿ  ಸಾಗುತ್ತಾ  ಪೊದೆಗಳ ನಡುವೆ ಕಂಡ   ಒಂದು  ಪಾಳು  ಕಟ್ಟಡ ಸಮೀಪ ನಿಂತಿತು .ಹರ್ಷಾ ಇದೇನು??  ಅಂದೇ ...... ಇದಾ ಸಾರ್ !!!...............ಬನ್ನಿ ನೋಡೋಣ  ಅಂದಾ!!!!







16 comments:

Srikanth Manjunath said...

ಪ್ರಥಮ ಪೂಜೆ ಗಣನಾಯಕನಿಗೆ..ಇಲ್ಲಿ ದರುಶನ ನೀಡಿದ ಗಣಪನ ಪಿತ ಸಹಸ್ರ ಸಹಸ್ರವಾಗಿ ದರುಶನ ನೀಡಿದ್ದು ಮುದ ನೀಡಿತು..ಸುಂದರ ಚಿತ್ರಗಳು..ಅಪರೂಪದ ಚಿತ್ರಗಳು..ಸುಲಲಿತ ವಿವರಣೆ..ಒಳ್ಳೆಯ ಪತ್ತೇದಾರಿ ಚಿತ್ರದ ಹಾಗೆ..ಒಂದು ವಿಸ್ಮಯವನ್ನು ಒಡಲಲ್ಲಿ ಅರಗಿಸಿಕೊಂಡಿರುವ ಚಿತ್ರದೊಡನೆ ಈ ಕಂತು ನಿಂತಿದೆ..ಮುಂದಿನ ಲೇಖನಕ್ಕೆ ರಹದಾರಿಯನ್ನ ಕಾಯುವ ಹಾಗೆ ಮಾಡಿದೆ..ದೋಸೆ ಬಂತು..ಚಟ್ನಿ ಬಂತು..ಅರೆ ಅರೆ..ಸಾಂಬಾರ್ ಬೇಕು..ಬರಲಿ ಬರಲಿ..

umesh desai said...

ಬಹಳ ಹಿಂದೆ ನೋಡಿದ ಸ್ಥಳ..ನಿಮ್ಮ ಕೆಮರಾದಿಂದ ರಿವೈವ್ ಆತು..
ಅದ್ಭುತ ಜಾಗೆ ಇದು ನವೆಂಬರ್ ಸುಮಾರು ನೀರಿನ ಹರಿವು ಕಮಿ ಇರುತ್ತದೆ..
ಈಸಬಲ್ಲವರು ನೀರಿಗೆ ಇಳೀಬಹುದು..ಹಾಂ ನಾ ಹೋದಾಗ ಹಗ್ಗದ ಸೇತುವೆ ಇರಲಿಲ್ಲ..

ಮನಸು said...

ಅಬ್ಬಾ ವಿಸ್ಮಯಗಳ ಬೀಡು ನಮ್ಮ ಕರುನಾಡು... ನನಗೂ ಈ ಸ್ಥಳ ನೋಡಲೇ ಬೇಕು ಎನಿಸಿದೆ..!! ಇಮ್ಮಡಿ ಸದಾಶಿವ ರಾವ್ ಮತ್ತು ಸದಾಶಿವ ರಾಜೇಂದ್ರ ಇವರಿಬ್ಬರೂ ಒಬ್ಬರೇ ಎಂಬುದರ ಬಗ್ಗೆ ಏನಾದ್ರು ಅಧ್ಯಯನಗಳು ನೆಡೆಯುತ್ತಿವೇ ಅಥವಾ ಇಲ್ಲವೋ..ಆದರೆ ತಿಳಿದುಕೊಳ್ಳಲೇ ಬೇಕು ಎನಿಸುತ್ತಿದೆ.
ಆಹಾ ಆ ಶಾಲ್ಮಲಾ ದಡೆಯಲ್ಲಿ ಕಂಡ ಎಲ್ಲವೂ ಸುಂದರವಾಗಿದೆ. ತುಂಬಾ ಚೆನ್ನಾಗಿದೆ ಸರ್ ನಿರೂಪಣೆ, ಪರಿಚಯ ಎಲ್ಲವೂ ನಾನು ಒಮ್ಮೇ ನೋಡಲೇಬೇಕು.

ಸಾಗರದಾಚೆಯ ಇಂಚರ said...

Great Sir,
odoke tumba interesting
last episode odidde adre nammalli google ban agidrinda comment maadoke agirlilla
next episode ge kayta idini

UMESH VASHIST H K. said...

ಅಬ್ಬಾ.......!!! ನಿಜವಾಗಲೂ ಸುಂದರವಾದ ಚಿತ್ರಣ ...... ಆದ್ರೆ ಇದನ್ನ ಉಳಿಸಿ ಕೊಳ್ಳುವ ಮನಸ್ಸು ಯಾರಲ್ಲೂ ಇಲ್ಲ....

ಯಾರದೋ ಮೇಲಿನ ದ್ವೇಷಕ್ಕೆ ಈ ಕೆತ್ತನೆಗಳೆಲ್ಲ ಬಲಿಯಾಗಿವೆ ಅನ್ನಿಸುತ್ತೆ ...... ಪ್ರಕೃತಿಯ ಮಾಡುಲು ತುಂಬಾನೇ

ಸುಂದರವಾಗಿದೆ...... ತುಂಬಾ ತುಂಬಾ ವಂದನೆಗಳು ಬಾಲು ಸಾರ್......

UMESH VASHIST H K. said...

ಅಬ್ಬಾ.......!!! ನಿಜವಾಗಲೂ ಸುಂದರವಾದ ಚಿತ್ರಣ ...... ಆದ್ರೆ ಇದನ್ನ ಉಳಿಸಿ ಕೊಳ್ಳುವ ಮನಸ್ಸು ಯಾರಲ್ಲೂ ಇಲ್ಲ....

ಯಾರದೋ ಮೇಲಿನ ದ್ವೇಷಕ್ಕೆ ಈ ಕೆತ್ತನೆಗಳೆಲ್ಲ ಬಲಿಯಾಗಿವೆ ಅನ್ನಿಸುತ್ತೆ ...... ಪ್ರಕೃತಿಯ ಮಾಡುಲು ತುಂಬಾನೇ

ಸುಂದರವಾಗಿದೆ...... ತುಂಬಾ ತುಂಬಾ ವಂದನೆಗಳು ಬಾಲು ಸಾರ್......

ಶ್ರೀವತ್ಸ ಕಂಚೀಮನೆ. said...

ಮತ್ತೊಮ್ಮೆ ಸಹಸ್ರಲಿಂಗಕ್ಕೆ ಹೋಗಿ ಬಂದಂತಾಯ್ತು...ಶಿವರಾತ್ರಿ ಬಂದರೆ ನಮ್ಮ ಕಡೆಯವರಿಗಿದು ಪ್ರಸಿದ್ಧ ಕ್ಷೇತ್ರ...ಆರಾಮಾಗಿ ಪ್ರಕೃತಿ ಮಡಿಲಲ್ಲಿ ಶಿವನ ಪೂಜಿಸಬಹುದು...
ಚಂದನೆಯ ಪ್ರವಾಸ ಕಥನ...

Sandeep K B said...

very good information sir.. will plan to visit this place when we trip to sirsi

Santosh Hegde Ajjibal said...

tumba channagide sir odi tumba kushi aytu

manju said...

ಬಹು ಬಾರಿ ಶಿರಸಿಗೆ ಹೋಗಿದ್ದೆ, ಆದರೆ ಈ ಜಾಗಕ್ಕೆ ಹೋಗಿರಲಿಲ್ಲ, ಮು೦ದೆ ಹೋದಾಗಲೊಮ್ಮೆ ಖ೦ಡಿತ ಭೇಟಿ ಕೊಡುವೆ, ಸು೦ದರ ಚಿತ್ರಗಳು, ಆಕರ್ಷಕ ನಿರೂಪಣೆ.

ಗಿರೀಶ್.ಎಸ್ said...

ನಮಗೂ ಸಹಸ್ರ ಲಿಂಗ ದರ್ಶನ ಮಾಡಿಸಿದ ಪುಣ್ಯ ನಿಮ್ಮದು... ಇನ್ನೂ ಕುತೂಹಲ ಜಾಸ್ತಿ ಆಗುತ್ತಿದೆ..ಮುಂದೆ ಏನು ಎಂಬುದು... ಯಾವ ಊರಿಗೆ ಹೋದರು ನೀವು ಅಲ್ಲಿನ ಇತಿಹಾಸ ಕೆದಕದೆ ಬಿಡುವುದಿಲ್ಲ ಎಂಬುದಕ್ಕೆ ಇದೂ ಒಂದು ಸಾಕ್ಷಿ...ಸೋಂದೆ ಅರಸರ ಮನೆತನದ ಸದಾಶಿವ ರಾವ್ ಅವರ ಬಗ್ಗೆ ತಿಳಿಸಿದ್ದು ತುಂಬ ಒಳ್ಳೆಯದಾಯಿತು..ಬಹುಪಾಲು ಜನರಿಗೆ ಇದು ಗೊತ್ತಿರಲಿಲ್ಲ ಎಂಬುದು ನನ್ನ ಭಾವನೆ...

ಸಂಧ್ಯಾ ಶ್ರೀಧರ್ ಭಟ್ said...

Chennagide Sahasra Linga Darshana.. Urige hogalebeku anta aase huttisuttiddeeri Baalanna...:)

Badarinath Palavalli said...

ಶಾಲ್ಮಲಾ ನದಿ, ಹೇಸರೇ ಅಮೋಘವಾಗಿದೆ. ಇರಿ ನಾನೂ ಯಾವುದಾದರೂ ಕವನದಲ್ಲಿ ಬಳಸುತ್ತೇನೆ.

ಕಲ್ಲಲ್ಲಿ ಕಟೆದ ಶಿಲ್ಪಗಳು ಮನೋಹರವಾಗಿವೆ. ಕೆಲ ಶಿಲ್ಪಗಳು ಭಿನ್ನವಾಗಿರುವುದು ಕಿಡಿಗೇಡಿಗಳ ಕೃತ್ಯವೇ ಸರಿ.

ಬಯಲ ಲಿಂಗಕ್ಕೆ
ತಡಿಕೆ ಹೊದಿಕೆ,
ನದಿ ನೀರ ಮಜ್ಜನ

ನಿಮ್ಮ ಛಾಯಾಗ್ರಾಹಣ ಅಮೋಘವಾಗಿದೆ.

ಮುಂದುವರಿಯಲಿ,

ಸೀತಾರಾಮ. ಕೆ. / SITARAM.K said...

mudabharita naviru haasyada nirupaneya tamma pravaasa kathana oduvade ondu aneervachaneeya anubhava, iihaasa, vastava aste shradde mattu asaddegala ella maggalugalinda parichayisuva tamma lekhana khushi. sirasi bagge muru lekhana onde gutukige odide.

ಸೀತಾರಾಮ. ಕೆ. / SITARAM.K said...

shalmala nadi ugama thana nanna mechchina vaarantyada pavaasakke hechchina paalu padedittu Dharawadadalliddaagaa...

ಪುಷ್ಪರಾಜ್ ಚೌಟ said...

ಇನ್ನೂ ನಮ್ಮ ಕಣ್ಣಿಗೆ ಬೀಳದ ಅದೆಷ್ಟು ಈ ರೀತಿಯ ವಿಸ್ಮಯ ತಾಣಗಳಿವೆಯೋ ನಮ್ಮ ಕರುನಾಡಿನಲಿ. ಚಿತ್ರಸಮೇತ ಮಾಹಿತಿಪೂರ್ಣ ಲೇಖನಗಳನ್ನು ಪ್ರಸ್ತುತಿ ಪಡಿಸುತ್ತೀರಿ. ಓದುಗರು ನಾವಿಹೆವು ರುಚಿಯುಣಲು, ಆಸ್ವಾದಿಸಲು!