|
ಬನ್ನಿ ನಿಮಗೆ ಸ್ವಾಗತ ಎಂದಿತು ಭದ್ರತಾ ಸಿಬ್ಬಂದಿ |
ದೆಹಲಿಯ ಸುಪ್ರೀಂ
ಕೋರ್ಟಿನ ಕೆಲಸವನ್ನು ಆರುದಿನಗಳ ಕಾಲ ಮುಗಿಸಿದ್ದ ನಾವು ವಾಪಸ್ಸು ಹೊರಡುವ ಸಮಯ ಹತ್ತಿರ ಬಂದಿತ್ತು. ಒಂದುವಾರ ಕಾಲ ದೆಹಲಿಯ ಬಿಸಿಲ ಬೇಗೆಯಲ್ಲಿ ಸುಪ್ರೀಂ ಕೋರ್ಟ್ ಸುತ್ತಾಡಿ ಕೆಲಸದ ಒತ್ತಡದಿಂದ ಬಳಲಿದ್ದ ನಾವು ಊರಿಗೆ ಹೊರಡಲು ತಯಾರಿ ನಡೆಸಿದ್ದೆವು. ಆದರೆ ಒಂದು ದಾಖಲೆ ಕೋರ್ಟ್ ನಿಂದ ಪಡೆಯಲು ವಿಳಂಬವಾಗಿ ಮಾರನೆಯ ದಿನ ದೊರಕುವ ಸೂಚನೆ ಬಂದಿತು. ನಮ್ಮ ವಕೀಲರೂ ಸಹ ನಾಳೆ ಬನ್ನಿ ದಾಖಲೆ ತೆಗೆದು ಕೊಡುತ್ತೇನೆ ಅಂದರು. ಹಾಗಿದ್ರೆ ಸಾರ್ ನಾವು ನಾಳೆ "ಅಕ್ಷರಧಾಮ " ಹೋಗಿ ಬರುತ್ತೇವೆ , ಅಂದೆವು ಅವರೂ ಸಹ ಹ ಹ ಹ ಹೋಗಿಬನ್ನಿ ಒಂದುವಾರದಿಂದ ಬರಿ ಕೋರ್ಟ್ ನಲ್ಲೆ ಇದ್ದು ಬೇಜಾರಗಿರುತ್ತೆ ಅಂದರು ಸರಿ ಎಂದು ಹೇಳಿ ಮಾರನೆಯ ದಿನ ಬರುವುದಾಗಿ ಹೇಳಿ ವಾಪಸ್ಸು ನಮ್ಮ ರೂಂ ಗೆ ಬಂದೆವು.
|
ಕೈ ಬೀಸಿ ಕರೆದಿತ್ತು ಅಕ್ಷರ ಧಾಮ |
ಮಾರನೆಯ ದಿನ ಬೆಳಿಗ್ಗೆ "ಅಕ್ಷರಧಾಮ" ನೋಡಲು ಹೊರಟೆವು , ಮನದಲ್ಲಿ ಯಾವುದೋ ಆಹ್ಲಾದಕರ ಸಂತಸ ಮೂಡುತ್ತಿತ್ತು. ನಾವಿದ್ದ ಜಾಗದಿಂದ ಮೆಟ್ರೋ ರೈಲಿನಲ್ಲಿ ತೆರಳಿ " ಅಕ್ಷರಧಾಮ"ತಲುಪಿದೆವು. ಆವರಣ ಪ್ರವೇಶಿಸುತ್ತಿದ್ದಂತೆ ನಮಗೆ ಕಂಡು ಬಂದಿದ್ದು ಯಾವುದೋ ಚಲನ ಚಿತ್ರಕ್ಕೆ ಹಾಕಿದ ಸೆಟ್ ನಂತೆ ಸುಂದರವಾಗಿ ಕಂಗೊಳಿಸುತ್ತಿದ್ದ "ಅಕ್ಷರ ಧಾಮ" ಹೌದು ಅದ್ಭತ ಲೋಕದೊಳಗೆ ಕೈ ಬೀಸಿ ಅಕ್ಷರಧಾಮ ಕರೆದಿತ್ತು. ಪ್ರವೇಶಿಸಲು ಅಳವಡಿಸಲಾಗಿರುವ ರಕ್ಷಣಾ ಪರೀಕ್ಷೆಗಳನ್ನು ಗೆದ್ದು ನಾವು ತಂದಿದ್ದ ಕ್ಯಾಮರಾ , ಮೊಬೈಲ್ , ಮುಂತಾದ ಸಾಮಗ್ರಿಗಳನ್ನು ಅಲ್ಲಿಯೇ ಬಿಟ್ಟು ಅದಕ್ಕೆ ರಶೀದಿ ಪಡೆದು ಹೊರಟೆವು.ಹೌದು ಗುಜರಾತಿನ ಗಾಂಧಿನಗರದಲ್ಲಿರುವ ಮತ್ತೊಂದು ಅಕ್ಷರಧಾಮ ದ ಮೇಲೆ 24 ಸೆಪ್ಟೆಂಬರ್ 2002.ರಂದು ಭಯೋತ್ಪಾದಕರ ದಾಳಿಯ ನಂತರ ಅತ್ಯಂತ ವೈಜ್ಞಾನಿಕವಾಗಿ ಇಲ್ಲಿ ರಕ್ಷಣಾ ತಪಾಸಣೆ ನಡೆಸಲಾಗುತ್ತದೆ. ಎಲ್ಲ ಕಡೆ ಸಿ.ಸಿ ಕ್ಯಾಮರ ಗಳ ಕಣ್ಗಾವಲು ಇದ್ದು ಅದನ್ನು ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ನಾವೂ ಸಹ ಹಿಂದೆ ನಡೆದ ಘಟನೆಗಳನ್ನು ಅರಿತಿದ್ದ ಕಾರಣ ರಕ್ಷಣಾ ತಪಾಸಣೆಗೆ ಒಳಪಟ್ಟೆವು.ಬನ್ನಿ "ಅಕ್ಷರಧಾಮ" ದ ಬಗ್ಗೆ ತಿಳಿಯೋಣ.
|
ಸಹಜಾನಂದ್ ಸ್ವಾಮೀ ಅಥವಾ ಸ್ವಾಮೀ ನಾರಾಯಣ ಸ್ವಾಮೀ. |
|
ದೇವಾಲಯದ ಒಂದು ನೋಟ |
"ಅಕ್ಷರ ಧಾಮ" " ಸ್ವಾಮೀ ನಾರಾಯಣ" ಎಂಬ
ಸ್ವಾಮೀಜಿಗಳ ಆದರ್ಶದ ಹಾಗು ಅವರ ಬೋದನೆಗಳ ಅಂಶಗಳ ಆಧಾರದ ಮೇಲೆ ನಿರ್ಮಿಸಲಾದ ದೇವಾಲಯ. " ಸ್ವಾಮೀ ನಾರಾಯಣ" ರನ್ನು
"ಸಹಜಾನಂದ್ ಸ್ವಾಮೀ " ಎಂದೂ ಸಹ ಉಲ್ಲೇಖಿಸಲಾಗಿದೆ. 1781 ರಿಂದ 1830 ರವರೆಗೆ ಇವರ ಕಾಲಾವಧಿ, ವೈಷ್ಣವ ಪಂಥಕ್ಕೆ ಸೇರಿದ ಇವರು ತಮ್ಮ ಜ್ಞಾನ ಪರ್ಯಟನೆ ಸಮಯದಲ್ಲಿ ಕಂಡ ವಿಚಾರಗಳನ್ನು ಸಂಗ್ರಹಿಸಿ ತನ್ನದೇ ಒಂದು ಪಂಥ ಸ್ಥಾಪಿಸಿ ಮಹಿಮೆ ಸಾರುತ್ತಾರೆ. ಉತ್ತರ ಭಾರತದಲ್ಲಿ ಅವರ ಅನುಯಾಯಿಗಳು ಬಹಳ ಇದ್ದಾರೆ.ಸುಮಾರು ಒಂದು ನೂರು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವನ್ನು ದೆಹಲಿಯಲ್ಲಿ 6 ನವೆಂಬರ್ 2005 ರಲ್ಲಿ ಅನಾವರಣ ಗೊಳಿಸಲಾಯಿತು . ಸುಮಾರು 7000 ಕ್ಕೂ ಮೀರಿದ ಕುಶಲ ಕರ್ಮಿಗಳು ಇಲ್ಲಿ ನಮ್ಮ ಆಲೋಚನೆಗೆ ನಿಲುಕದ ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ .
|
ರಾತ್ರಿವೇಳೆಯಲ್ಲಿ ಕಂಡುಬರುವ ನೋಟ |
|
ದೇವಾಲಯದ ಸುತ್ತ ಇರುವ ಗಜ ಪಡೆಯ ವಿವಿಧ ಶೈಲಿಯ ದರ್ಶನ. |
ಯಮುನಾ ನದಿಯ ದಡದಲ್ಲಿರುವ ಈ ಭವ್ಯ ಸುಂದರ "ಅಕ್ಷರ ಧಾಮ"ದೆಹಲಿಗೆ ಬರುವ ಶೇಕಡಾ 70 ರಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಗುಲಾಬಿ ಕಲ್ಲು , ಅಮೃತ ಶಿಲೆಗಳಿಂದ ಸಿಂಗರಿಸಿದ ವಿಶಿಷ್ಟ ದೇವಾಲಯ ಎಂತಹ ಮನಸನ್ನೂ ಪ್ರಪುಲ್ಲ ಗೊಳಿಸುವ ಮಾಂತ್ರಿಕತೆ ಹೊಂದಿದೆ. .ವಿಶಾಲವಾದ ಆವರಣಗಳು, ನವರಂಗಗಳು ,ದೇವಾಲಯದ ಹೊರಗೆ ಕಾಣುವ ಕುಸುರಿ ಕೆಲಸ , ಅದ್ಭುತವಾಗಿ ನಿಮ್ಮನ್ನು ಮಾಯಾಲೋಕದೊಳಗೆ ಕರೆದೊಯ್ಯುತ್ತದೆ. ದೇವಾಲಯದ ಸುತ್ತ ಗಜ ಪಡೆಯ ವಿವಿಧ ಮೂರ್ತಿಗಳ ಸುಂದರ ಕೆತ್ತನೆಯ ಅನಾವರಣ ಕೆತ್ತಿರುವ ಶಿಲ್ಪಿಗೆ ಆನೆಗಳ ಜೀವನ ಶೈಲಿಯ ಬಗ್ಗೆ ಇರುವ ಅಪಾರ ಅರಿವಿನ ದರ್ಶನ ಮಾಡಿಸಿ ವಿಸ್ಮಯ ಗೊಳಿಸುತ್ತದೆ.
|
ಸುಂದರ ಸ್ವರ್ಣ ಮೂರ್ತಿಗಳು |
|
ದೋಣಿವಿಹಾರದಲ್ಲಿ ಕಂಡು ಬರುವ ದೃಶ್ಯ. |
ಒಳಗಡೆ ದೇವಾಲಯದಲ್ಲಿ ಸ್ವರ್ಣ ಮೂರ್ತಿಗಳ ದರ್ಶನ ಆಗುತ್ತದೆ , ಅಲ್ಲಿಯೂ ಸಹ ಕುಶಲಕರ್ಮಿಗಳು ಮೂಡಿಸಿರುವ ಕಲಾವೈಭವ ದರ್ಶನವಾಗುತ್ತವೆ. ಸೀತಾರಾಮ, ರಾಧಾಕೃಷ್ಣ , ಶಿವ ಪಾರ್ವತಿ, ಲಕ್ಸ್ಮಿನಾರಾಯನ ಮೂರ್ತಿಗಳ ಸೌಂದರ್ಯವನ್ನು ನೋಡಿಯೇ ತೀರಬೇಕು.ನಯನ ಮನೋಹರವಾದ ಮೂರ್ತಿಗಳು ನಮ್ಮಲ್ಲಿ ಅರಿವಿಲ್ಲದೆ ಭಕ್ತಿಭಾವನೆ ಮೂಡಿಸುತ್ತವೆ. ಇನ್ನು ದೇವಾಲಯದ ಹೊರ ಆವರಣದಲ್ಲಿರುವ ದೋಣಿ ವಿಹಾರ, ನಿಮಗೆ ಮತ್ತೊಂದು ಲೋಕದ ದರ್ಶನ ಮಾಡಿಸಿ ಜೀವನ ವಿಧಾನ ತಿಳಿಸುತ್ತದೆ.
|
ಚಿತ್ತಾರದ ಚಿಲುಮೆಗಳು. |
|
ಹೊಸ ಲೋಕ |
|
ರಾತ್ರಿ ವೇಳೆ ಚಿತ್ತಾರ ಬಿಸಿಸುವ ಚಿಲುಮೆಗಳ ಹಗಲಿನ ನೋಟ |
ಮತ್ತೊಂದು ವಿಶೇಷ ಇಲ್ಲಿ ನಿಮಗೆ ನೋಡಲು ಸಿಗುವುದು ಸುಂದರವಾದ ನೀರಿನ ಚಿತ್ತಾರ ಬಿಡಿಸುವ ಚಿಲುಮೆಗಳು ರಾತ್ರಿವೇಳೆ ಇವು ನಿಮಗೆ ಸ್ವರ್ಗ ದರ್ಶನ ಮಾಡಿಸುತ್ತವೆ . ರಾತ್ರಿ ವೇಳೆ ಜಲ ಚಿತ್ತಾರ ಮೂಡಿಸುವ ಚಿಲುಮೆಗಳ ಪ್ರದೇಶ ಹಗಲಿನ ವೇಳೆ ಮತ್ತೊಂದು ರೀತಿಯ ಸುಂದರ ವಿನ್ಯಾಸದ ದರ್ಶನ ಮಾಡಿಸಿತು., ಇಡೀ ದೇವಾಲಯ ನೋಡಲು ನಿಮಗೆ ಕನಿಷ್ಠ ಮೂರು ದಿನಗಳ ಕಾಲಾವಕಾಶ ಬೇಕಾಗುತ್ತದೆ. ನಮಗೆ ಸಿಕ್ಕ ಸಮಯದಲ್ಲಿ ಸಾಧ್ಯವಾದಷ್ಟು ನೋಡಿ ಅಲ್ಲೇ ಇದ್ದ ಉಪಹಾರ ಮಂದಿರದಲ್ಲಿ ಲಘು ಉಪಹಾರ ಸೇವಿಸಿ ಹೊರಬಂದು ಕೌಂಟರ್ ನಲ್ಲಿ ಬಿಟ್ಟಿದ್ದ ನಮ್ಮ ಕ್ಯಾಮರಾ , ಮೊಬೈಲ್ ಮುಂತಾದ ಸಾಮಗ್ರಿಗಳನ್ನು ವಾಪಸ್ಸು ಪಡೆದು ಹೊರನದೆವು.