Wednesday, June 20, 2012

ಮೈ ದಿಲ್ಲಿ ಹೂ.....ಪಯಣ 3.... ಕೌತುಕ ಮೂಡಿಸಿದ ಚಾಂದನಿ ಚೌಕ!!! !!!




ದಿಲ್ಲೀ ಯಲ್ಲಿ ಕಂಡ ಬುದ್ದನ  ಕಲಾಕೃತಿ

ಲೇ .ಕರ್ನಲ್ ನಂದಕುಮಾರ್ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಾ  "ಕುತಬ್ ಮಿನಾರ್" ನಿಂದಾ ಹೊರಗೆ ಬಂದು  ಮಾತುಮುಗಿಸಿದೆ ..ನಂತರ  ಕರ್ನಾಟಕ ಭವನದತ್ತಾ  ಮೆಟ್ರೋ ರೈಲು  ಹಿಡಿದು ದಾವಿಸಿ ಬಂದೆವು.ಬಂದ ಸ್ವಲ್ಪ ಸಮಯಕ್ಕೆ ಗೆಳೆಯ ನಂದಕುಮಾರ್ ತನ್ನ ಮಿಲಿಟರಿ ವಾಹನದಲ್ಲಿ ಬಂದು ನಮ್ಮನ್ನು ಕರೆದುಕೊಂಡು ಅವರ ಮನೆಗೆ ಹೊರಟರು ದಾರಿಯಲ್ಲಿ ಉಭಯ ಕುಶಲೋಪರಿ, ನನ್ನ ಜೊತೆಯಲ್ಲಿದ್ದವರ ಪರಿಚಯ ಇತ್ಯಾದಿ ನಡೆಯಿತು. ನನ್ನ ಜೊತೆಯಲ್ಲಿದ್ದವರ  ಹೊಟ್ಟೆ ಹಸಿದು ನನ್ನ ಕಡೆ ಕೆಕ್ಕರಿಸಿಕೊಂಡು ನೋಡುತ್ತಿದ್ದರು..........!.ನನಗೆ ಪೀಕಲಾಟ ಶುರುವಾಗಿ......... ದೇವ್ರೇ ಬೇಗ ಊಟ ಕೊಡಿಸಪ್ಪಾ ಅಂತಾ ಮನದಲ್ಲಿ ಬೇಡಿಕೊಳ್ಳುತ್ತಿದ್ದೆ.......ನಂದಕುಮಾರ್ ಮನೆಗೆ ತಲುಪಿ ಉಸ್ಸಪ್ಪಾ ಅಂತಾ ನಿಟ್ಟುಸಿರು ಬಿಟ್ಟ ನಮಗೆ ತಕ್ಷಣ ಕುಡಿಯಲು ತಣ್ಣನೆ ನೀರು ಬಂತು,   ಆದರೆ ಆ ಬಿಸಿಲ ಜಳಕ್ಕೆ ಎಷ್ಟು ಹೊತ್ತು ತಡೆದೀತು?ಮತ್ತೆ ಸಂಕಟ ಶುರು ಆಗಿ ಗೆಳೆಯನ ಯಾವ ಮಾತುಗಳೂ ಕಿವಿಗೆ ತಲುಪುತ್ತಿರಲಿಲ್ಲ.ಅಷ್ಟರಲ್ಲಿ ಊಟಕ್ಕೆ ಏಳಿ ಅಂತಾ ಹೇಳಿದ್ದೆ ತಡಾ ದಡಕ್ಕನೆ ಊಟದ ಟೇಬಲ್ ಮುಂದೆ ಹಪಹಪಿಸಿ ಕುಳಿತೆವು. ಆಗ ಬಂದಿತ್ತು ರುಚಿ ರುಚಿಯಾದ ಬೆಂಗಳೂರಿನ ಊಟ. ಹಸಿದಿದ್ದ ಹೊಟ್ಟೆಗೆ ರುಚಿಯಾದ ಕರ್ನಾಟಕದ ಊಟ ತೃಪ್ತಿ ನೀಡಿತು.ಲೇ ಕರ್ನಲ್ ನಂದಕುಮಾರ್ ಕುಟುಂಬ ನನ್ನ ಪರಿಚಯ ಇದ್ದ ಕಾರಣ ಸ್ವಲ್ಪ ಹೊತ್ತು ಹರಟೆ ಹೊಡೆದು , ಅವರ ಕಾರಿನಲ್ಲಿ ಡೆಲ್ಲಿ ಸುತ್ತಲು ಹೊರಟೆವು.ಕಾರು ಹೊರಟಿತು ಬನ್ನಿ ನಮ್ಮ "ಡಿಫೆನ್ಸ್ ಆಫಿಸರ್ಸ್ ಕ್ಲಬ್ "ನೋಡೋರಂತೆ ಅಂತಾ ಕಾರನ್ನು ಅಲ್ಲಿಗೆ ತಿರುಗಿಸಿದರು.ರಕ್ಷಣಾ ಅಧಿಕಾರಿಗಳು ತಮ್ಮ ಕಷ್ಟದ ಕೆಲಸದ ನಡುವೆ ಮನರಂಜನೆ ಹೊಂದಲು ಇರುವ ಒಂದು ಪ್ರಶಾಂತವಾದ ಸ್ಥಳ. ಬಹಳ ಅಚ್ಚುಕಟ್ಟಾದ ನಿರ್ವಹಣೆಯಿಂದ  ಕಂಗೊಳಿಸಿತ್ತು. ಒಳಗೆ ಅದ್ಭುತವಾದ ಕಲಾಕೃತಿಗಳು ,ಮುಂತಾದವು ಮನಸೂರೆಗೊಂಡವು.{ರಕ್ಷಣಾ ಹಿತದೃಷ್ಟಿಯಿಂದ ಕೆಲವು ಫೋಟೋಗಳನ್ನು ಹಾಕಿಲ್ಲ.}ಎಲ್ಲವನ್ನೂಕಣ್ ತುಂಬಿಕೊಂಡು  ಹೊರಡಲು ಆಚೆ ಬಂದ ನನಗೆ ಕಾಣಿಸಿದ್ದು  ಚೈನಾ ಸರ್ಪ ನೋಡಿದವನೇ ಕ್ಯಾಮರಾದಲ್ಲಿ ಕ್ಲಿಕ್ಕಿಸಿದೆ ಅದರ ಎದುರು ನಗಾರಿ ಭಾರಿಸುತ್ತಿರುವ ಮಾನವನ ಮತ್ತೊಂದು ಆಕೃತಿ ನೋಡಿ ಅದನ್ನೂ ನನ್ನ ಕ್ಯಾಮರಾದಲ್ಲಿ ಹಿಡಿದಿಟ್ಟೆ.
ಚೈನಾ ಸರ್ಪದ ಪ್ರತಿಮೆ 

ತುಂಬಿದ ಹೊಟ್ಟೆಯ ಮನಗಳಿಗೆ ಅದ್ಭುತ ಕಲಾಕೃತಿಗಳ ದರ್ಶನ ಭಾಗ್ಯ ಸಿಕ್ಕಿತ್ತು.ಸವಾರಿ ಮುಂದೆ ಹೊರಟಿದ್ದು " ಚಾಂದನಿ ಚೌಕ " ಕಡೆಗೆ.

ದೆಹಲಿಯ ಪುರಾತನ ಚಾಂದನಿ ಚೌಕ ಹೀಗಿತ್ತು.[ಚಿತ್ರ ಕೃಪೆ ಅಂತರ್ಜಾಲ]

ಹೌದು ದೆಹಲಿಯ ಇತಿಹಾಸದಲ್ಲಿ "ಚಾಂದನಿ ಚೌಕ" ವೂ ಕೂಡ ತನ್ನ ಪಾಲು ಪಡೆದಿದೆ.ಈ "ಚಾಂದನಿ ಚೌಕ"  ದೆಹಲಿಯ ಅತ್ಯಂತ ಪುರಾತನ ಮಾರುಕಟ್ಟೆ ಪ್ರದೇಶ , ಹದಿನೇಳನೆ ಶತಮಾನದಲ್ಲಿ ಮೊಗಲ್ ದೊರೆ " ಶಹಜಾನ್" ನಿರ್ಮಿಸಿದ ಈ ಮಾರುಕಟ್ಟೆಯ ವಿನ್ಯಾಸ ಅವನ ಮಗಳು "ಜಹಾನ್ ಅರ '' [ ಆ ಕಾಲಕ್ಕೆ ಅವಳು ಒಬ್ಬ ಅತ್ಯುತ್ತಮ ವಿನ್ಯಾಸಗಾರ್ತಿ ಯಾಗಿದ್ದಳಂತೆ ಅದರಂತೆ ಅತ್ಯಂತ ಮನೋಹರವಾಗಿ ಈ ಮಾರುಕಟ್ಟೆಯನ್ನು ವಿನ್ಯಾಸ ಮಾಡಿದಳೆಂದೂ,ಹೇಳುತ್ತಾರೆ. ಚಾಂದನಿ ಚೌಕದಲ್ಲಿ ಹಲವು ವಿಭಾಗ ಮಾಡಿ ಕೃತಕ ಪುಷ್ಕರಿಣಿ ಹಾಗು ನಾಲೆಗಳನ್ನು ನಿರ್ಮಿಸಿ ಯಮುನಾ ನದಿಯ ನೀರನ್ನು ಹರಿಸಲಾಗುತ್ತಿತ್ತೆಂದೂ  ಹುಣ್ಣಿಮೆಯ ದಿನ ಈ ನಾಲೇಗಳಲ್ಲಿ ಕಾಣುತ್ತಿದ್ದ ಪೂರ್ಣ ಚಂದ್ರನ ಬಿಂಬದಿಂದ ಮಾರುಕಟ್ಟೆ ಪ್ರದೇಶವು ಹೊಸ ರೂಪ ಪಡೆಯುತ್ತಿತ್ತೆಂದೂ ಆ ಕಾರಣದಿಂದ ಇದನ್ನು ಚಾಂದನಿ [ ಚಂದ್ರನ ಬಿಂಬ ] ಚೌಕವೆಂದು ನಾಮಕರಣ ಮಾಡಲಾಗಿದೆಯೆಂದು ಹೇಳುತ್ತಾರೆ. ಅಂದಿನಿಂದ ಈ ಪ್ರದೇಶ ದೆಹಲಿಯ ಅತ್ಯಂತ ಜನಸಾಂದ್ರತೆ ಇರುವ ಮಾರುಕಟ್ಟೆ ಪ್ರದೇಶ .ಈ ಮಾರುಕಟ್ಟೆ ರಸ್ತೆ ದೆಹಲಿಯ ಕೆಂಪು ಕೋಟೆಯ "ಲಾಹೋರಿ ದರವಾಜಾ [ಬಾಗಿಲು] ದಿಂದ "ಫತೆಪುರಿ ಮಸೀದಿ"  ವರೆಗೆ ಸಾಗುತ್ತದೆ.ಮೊದಲಿದ್ದ ನಾಲೆಗಳು ಇತಿಹಾಸದ ಗರ್ಭ ಸೇರಿದ್ದು ನಂತರ ಚಾಂದನಿ ಚೌಕದ ಕೇಂದ್ರ   ಪ್ರದೇಶದಲ್ಲಿ ಇದ್ದ ಪುಷ್ಕರಿಣಿ ಯನ್ನು  ಮುಚ್ಚಿ ಅಲ್ಲಿ  ಒಂದು ಗಡಿಯಾರ ಇರುವ ಗೋಪುರ ನಿರ್ಮಿಸಲಾಯಿತಂತೆ 1965 ರಲ್ಲಿ  ಅದೂ ನಿರ್ನಾಮ ವಾಯಿತಂತೆ . ಹಾಲಿ ಚಾಂದನಿ ಚೌಕತನ್ನ ಗತ  ಇತಿಹಾಸವನ್ನು ಒಡಲಲ್ಲಿ ಇಟ್ಟುಕೊಂಡು ಇಂದಿಗೂ ತನ್ನದೇ ಛಾಪು ಮೂಡಿಸುತ್ತಾ ದೆಹಲಿಯ ಅತ್ಯಂತ ಆಕರ್ಷಕ ಪ್ರದೇಶವಾಗಿ ನಿಂತಿದೆ.ಬನ್ನಿ ಒಮ್ಮೆ ಇಲ್ಲಿ ಸುತ್ತಿ ಬರೋಣ
ಚಾಂದನಿ ಚೌಕದ ಬೂಟು ವ್ಯಾಪಾರಿ

ಚಾಂದನಿ ಚೌಕ ಪ್ರವೇಶ ಮಾಡುತ್ತಿರುವಾಗಲೇ ಕಣ್ಣಿಗೆ ಬಿದ್ದದ್ದು ಒಬ್ಬ ಬೂಟು ವ್ಯಾಪಾರಿ ತಮಾಷೆ ಎಂದರೆ ಅಲ್ಲಿ ಇದ್ದದ್ದು ಬರೀ ಒಂದು ಕಾಲಿನ ಬೂಟುಗಳು ಮಾತ್ರ , ಅಚ್ಚರಿಯಿಂದ ಹತ್ತಿರ ಹೋಗಿ ವಿಚಾರಿಸಿದಾಗ  ನಿಮಗೆ ಬೇಕಾದದ್ದು ಆಯ್ಕೆ ಮಾಡಿ ನಂತರ ಇನ್ನೊಂದು ಕಾಲಿನದನ್ನು ಕೊಡುತ್ತೇನೆ ಅಂದಾ ,  ಹಾಗೆ ಮುಂದಕ್ಕೆ ಹೋದೆವು
ಹೆಚ್ .ಎಂ.ವಿ.ಗ್ರಾಮಾಫೋನ್  ಹೋರ್ಡಿಂಗ್
ಕತ್ತೆತ್ತಿ ನೋಡಿದರೆ ಅಲ್ಲಿ ಹಳೆಯ ಕಾಲದ ಗ್ರಾಮಾಫೋನ್ ಹಾಗು ತಟ್ಟೆಗಳು ಸಿಗುತ್ತವೆ ಎಂಬ ಬಗ್ಗೆ ಒಂದು ಅಂಗಡಿಯ ಹೋರ್ಡಿಂಗ್ ನನ್ನ ಬಾಲ್ಯದ ನೆನಪನ್ನು ಜ್ಞಾಪಿಸಿತು. ಮುಂದೆ ಹೋರಾಟ ನನಗೆ ಒಂದು ಹೋಟೆಲ್ ಮುಂದೆ ಹಾಕಿದ್ದ ಈ ಬೋರ್ಡು ನಗು ತಂದಿತು , ಅಲ್ಲಾ ಜಿಲೇಬಿ ಹಾಗು ಸಮೋಸಾ ಮಾಡೋಕು ಸ್ಪೆಶಲಿಷ್ಟು , ಇನ್ನ್ಯಾವ ವಿಚಿತ್ರವಿದೆಯೋ ಅಂತಾ ಮುಂದೆ ಹೋದೆ

ಜಿಲೇಬಿ ಸಮೋಸ ಮಾಡೋಕು ಸ್ಪೆಶಲಿಷ್ಟು 
ಇಲ್ಲಿ ತಿಂದರೆ ವಾಹ್ ಜಿ ವಾಹ್  ಅಂತೆ
ಯಾವ್ ಬಟ್ಟೆ ಬೇಕೂ ಹೇಳಿ ನಾವ್ ಕೊಡ್ತೀವಿ.
ಮುಂದೆ ಅದೇ ತರಹದ ಮತ್ತೊಂದು ಹೋಟೆಲ್ "ವಾಹ್ ಜಿ ವಾಹ್" ಅಂತಾ ಕೈ ಬೀಸಿ ಕರೆಯುತ್ತಿತ್ತು. ಸ್ವಲ್ಪ ಮುಂದೆ ಬೀದಿಬದಿಯಲ್ಲಿ ಬಟ್ಟೆಗಳ ವ್ಯಾಪಾರ ಜೋರಾಗಿತ್ತು. ದೆಹಲಿಯ ಮಧ್ಯಮ ವರ್ಗಗಳ  ಬಯಕೆ ಪೂರೈಸುವ ಈ ತಾಣ ಪ್ರವಾಸಿಗಳಿಂದಲೂ ತುಂಬಿ ತುಳುಕುತ್ತದೆ.ಇಲ್ಲಿ ನೀವು ಬಯಸುವ ಎಲ್ಲಾ ಪದಾರ್ಥಗಳನ್ನು ನೀವು ಖರೀಧಿಸಬಹುದು. ಆದರೆ ನೆನಪಿರಲಿ ಚೌಕಾಸಿ ಮಾಡದೆ ಹೋದರೆ ನೀವು ಹಳ್ಳಕ್ಕೆ ಬಿದ್ದಂತೆ.
ಚಾಂದನಿ ಚೌಕದ ಮಾರುಕಟ್ಟೆಯ ಒಂದು ಗಲ್ಲಿ
ಚಾಂದನಿ ಚೌಕದ ಆಕರ್ಷಕ ಸ್ಮಾರಖ.

ಹಾಗೆ ನಡೆಯುತ್ತಾ ನಾವು ಚಾಂದನಿ ಚೌಕದ ಅವಲೋಕನ ಮಾಡುತ್ತಾ ಒಂದು ಗಲ್ಲಿ ಹೊಕ್ಕೆವು ಅಚ್ಚರಿ ಆ ಪ್ರದೇಶದಲ್ಲೂ ಹಲವು ವ್ಯಾಪಾರ ವಹಿವಾಟು ನಡೆದಿತ್ತು . ಇಂತಹ ಗಲ್ಲಿಗಳು ಬಹಳಷ್ಟಿದ್ದು ಅಪ್ಪಿತಪ್ಪಿ ತಪ್ಪಿಸಿಕೊಂಡರೆ  ಚಕ್ರವ್ಯೂಹವೇ ಸರಿ ಎನ್ನಿಸಿತು. ಗಲ್ಲಿ ಯಿಂದ ಮುಖ್ಯ ರಸ್ತೆಗೆ ಬಂದ ನಮಗೆ  ಚಾಂದನಿ ಚೌಕದ  ಕೇಂದ್ರ ಪ್ರದೇಶ ಕಂಡಿತು  ಅಬ್ಬಬ್ಬಾ ಎಂತಹ ಸೋಜಿಗದ ಅಂಗಡಿಗಳು ಅಂದುಕೊಂಡು ವಾಪಸ್ಸು ಹೊರಟೆವು
ಇಂದಿನ ಚಾಂದನಿ ಚೌಕ
ಚಾಂದ್ನಿ ಚೌಕದ ರೂಪ ಕಣ್ಣಿಗೆ ಹಬ್ಬ ನೀಡಿತು.ಸಂತಸದಿಂದ   ನಮ್ಮ ನಡಿಗೆ "ಲಾಲ್ ಖಿಲ"[ ಕೆಂಪು ಕೋಟೆ ] ಕಡೆಗೆ ಹೊರಟಿತು ,. ಕಿವಿಯಲ್ಲಿ ಚಾಂದನಿ ಚೌಕ  ಮೈ  ಬಿ  ದಿಲ್ಲೀ ಹೂ !!!ಅಂತಾ ಬೀಳ್ಕೊಟ್ಟಿತು . "ಲಾಲ್ ಖಿಲ" ಕೈಬೀಸಿ ಕರೆದಿತ್ತು.............!!!!ಮೈದಿಲ್ಲೀಹೂ ..................??????

8 comments:

Srikanth Manjunath said...

ಸುಂದರ ಮುಂದುವರಿದ ಪಯಣ ಮುದಕೊಡುತ್ತಿದೆ..ಅಭಿಮನ್ಯು ಹೊಟ್ಟೆಯಲ್ಲಿದಾಗಲೇ ಕೃಷ್ಣ ಹೇಳುವ ಕತೆ ಕೇಳಿದಂತೆ..ನಾವೇ ಅಲ್ಲಿದ್ದಿವೇನೋ ಅನ್ನಿಸುವ ನಿಮ್ಮ ಚೆಂದಾದ ನಿರೂಪಣೆಗೆ ನಮಸ್ಕಾರಗಳು..ಸುಂದರ ಚಿತ್ರ..(ಮಾನವ ವಾದ್ಯವನ್ನು ಬಡಿಯುವ ಚಿತ್ರ ಮನಸೆಳೆಯುತ್ತೆ) ಸುಂದರ ವಿವರಣೆ ಚಾಂದಿನಿ ಚೌಕದ ಬಗ್ಗೆ..ಹೀಗೆ ಸಾಗಲಿ ನಿಮ್ಮ ಪ್ರವಾಸ ಕಥಾನಕ

Badarinath Palavalli said...
This comment has been removed by the author.
Badarinath Palavalli said...

ದೆಹಲಿಯ ಮೂರನೇ ಕಂತು ಮಾಹಿತಿಯುಕ್ತವಾಗಿದೆ. ಹೊಸದಾಗಿ ದೆಹಲಿ ನೋಡಲು ಹೋಗುವವರಿಗೂ ಮಾರ್ಗದರ್ಶಿಯಾಗಿದೆ.

ಸಮೋಸ ಮತ್ತು ದೆಹಲಿ ಇದು ನನ್ನ ನೆನಪುಗಳ ಪುಟಗಳು. ಚಾಂದನಿ ಚೌಕದ ಬಗೆಗಿನ ಸವಿಸ್ಥಾರ ಚಿತ್ರಭರಿತ ಲೇಲ್ಕನ ಚೆನ್ನಾಗಿದೆ. ಅಲ್ಲಿ ಹಳೇ ಗ್ರಾಮಾಫೋನ್ ತಟ್ಟೆಗಳು, ಪುರಾತನ ವಸ್ತುಗಳು ಮತ್ತು ಅಪರೂಪದ ಪುಸ್ತಕಗಳು ಸಿಗುತ್ತವೆ.

ಮುಂದಿನ ಭಾಗಕ್ಕಾಗಿ ಕಾತುರತೆಯಿಂದ ಕಾಯುತ್ತಿದ್ದೇನೆ.

ಸುಬ್ರಮಣ್ಯ said...

ಮತ್ತಷ್ಟಕ್ಕಾಗಿ ಕಾಯುತ್ತಿದ್ದೇವೆ ಬಾಲು ಅಣ್ಣ.

ಸೀತಾರಾಮ. ಕೆ. / SITARAM.K said...

Waj -Ji-Wah - ee angadi 100% pure antha board irutte. adare adarallina yavade item tinnuvaaga idu non-veg eno emba samshaya bande bidutte.
he he..

Digwas Bellemane said...

ಓಹ್ ...ನಮ್ಮ್ಮನ್ನೆಲ್ಲ ದಿಲ್ಲಿಲ್ಲಿ ಓಡಾಡ್ಸ್ತಿದೀರ....:-)//ನೈಸ್

Deep said...

ನಮಗೆ ಮತ್ತೆ ದಿಲ್ಲಿಯ ಪ್ರವಾಸದ ಅನುಭವ ಗಳು ಆಯಿತು ಬಾಲಣ್ಣ
ನಾನಂತೂ ಮೆಟ್ರೋ ನೋಡಿ ಕಳೆದು ಹೋಗಿದ್ದೆ..
ಧನ್ಯವಾದ ಗಳು ನೆನಪುಗಳು ಮರಳಿ ಬಂದವು..

ಜಲೇಬಿ .. ಗೋಲ್ ಗುಪ್ಪ ತಿಂದ್ರಾ ?
ಬರಿ ಫೋಟೋ ತನಗೊಂದು ಬಂದ್ರಾ?

balasubramanya said...

ಅನಿಸಿಕೆ ತಿಳಿಸಿದ ಎಲ್ಲರಿಗೂ ಧನ್ಯವಾದಗಳು.