Sunday, October 30, 2011

ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ !!!!ಈಗ ಇವನ್ಯಾರೆಂದು ನಮಗೆ ಗೊತ್ತೇ ಇಲ್ಲಾ !!!!

ಕನ್ನಡನಾಡಿಗೆ ತಮ್ಮ ವಿಶೇಷ ಕೊಡುಗೆ ನೀಡಿದ ಹಲವಾರು ಮಹನೀಯರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿ ಮರೆಯಾಗಿದ್ದಾರೆ.ಹಾಲಿ ಇವರು ಯಾರು ಎಂಬುದೇ ಬಹಳಷ್ಟು  ಕನ್ನಡಿಗರಿಗೆ ಗೊತ್ತಿಲ್ಲ , ಯಾಕೆಂದ್ರೆ ಇವರ ಹೆಸರಿನಲ್ಲಿ ನಮ್ಮ ನಾಡಿನಲ್ಲಿ ಯಾವುದೇ ರಸ್ತೆ, ಪುತ್ತಳಿ,,ವೃತ್ತ, ಬಡಾವಣೆ, ಇರುವುದಿಲ್ಲ ಹಾಗು ಇವರ ಬಗ್ಗೆ  ಕನಿಷ್ಠ ನೆನಪೂ ಸಹ ಮೂಡಿಸುವ ಮಾಹಿತಿಗಳೂ ಸಹ ಮರೆಯಾಗುತ್ತಿವೆ.ಯಾವುದೇ ಪ್ರದೇಶದ ಭಾಷೆ , ಸಾಹಿತ್ಯ,ಸಂಸ್ಕೃತಿ,ಇತಿಹಾಸಗಳ ಅಧ್ಯಯನಕ್ಕೆ ಶಾಸನಗಳು ಅಮೂಲ್ಯ ಆಕರಗಳು,ಇವು ಒಂದು ಜನಾಂಗದ ಆಸ್ತಿ , ಕನ್ನಡ ನಾಡಿನ ಶಾಸನ ಸಂಪತ್ತು ಹೇರಳವಾಗಿದ್ದರೂ ಅವುಗಳು ಮರೆಯಾಗಿದ್ದಾಗ , ಅವುಗಳನ್ನು ಹುಡುಕಿ  ಸಂಶೋದಿಸಿ ಕನ್ನಡ ನಾಡಿನ ಹಿರಿಮೆ ಸಾರಿದ ಈ ಸಾಹಸಿ ಗೆ ನಮ್ಮ ನಾಡಿನಲ್ಲಿ ಕನ್ನಡಿಗರ ಹೃದಯದಲ್ಲಿ  ಸ್ಥಾನ  ಸಿಗಬೇಕಾದದ್ದು  ನ್ಯಾಯ.. ಕನ್ನಡಿಗರಾದ ನಾವು   ಕನ್ನಡ ರಾಜ್ಯೋತ್ಸವ  ಆಚರಣೆ ಮಾಡುವ ಮೊದಲು  ಕನ್ನಡ ಇತಿಹಾಸಕ್ಕೆ ಕೊಡುಗೆ ನೀಡಿ ,ಕನ್ನಡ ನಾಡಿನಲ್ಲಿ ಹಲವಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮರೆಯಾಗಿಹೋದ ಒಬ್ಬ ಧೀಮಂತ ವ್ಯಕ್ತಿ ಬಗ್ಗೆ  ತಿಳಿಯಬೇಕಾಗಿದೆ ಹಾಗು ಮುಂದಿನ ಪೀಳಿಗೆಗೆ ಇಂತಹ ಮಹನೀಯರ ಬಗ್ಗೆ ತಿಳಿಸಬೇಕಾಗಿದೆ. ಹಾಗಾಗಿ  "ಬೆಂಜಮಿನ್ ಲೆವಿಸ್ ರೈಸ್"  ಬಗ್ಗೆ ತಿಳಿಯೋಣ ಬನ್ನಿ.


1894 ರ ಮೈಸೂರ ಜಿಲ್ಲೆಯ  ಎಪಿಗ್ರಾಫಿಯಾ
         


        .ಬೆಂಜಮಿನ್ ಲೆವಿಸ್ ರೈಸ್ [1837 -1927 ]ರವರು ಹುಟ್ಟಿದ್ದು 17 ನೆ ಜುಲೈ 1837 ರಲ್ಲಿ  ಇಂಗ್ಲೆಂಡಿನಲ್ಲಿ ವಿಧ್ಯಾಭ್ಯಾಸ ಮುಗಿಸಿ 1860 ರಲ್ಲಿ ಭಾರತಕ್ಕೆ ಕಾಲಿಡುತ್ತಾರೆ.ಅವರಿಗೆ ಮೊದಲು ಸಿಕ್ಕ ಕೆಲಸವೇ ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಹುದ್ದೆ.ನಂತರ 1865  ರಿಂದ   1868  ವರೆಗೆ ಮೈಸೂರು ಹಾಗು ಕೊಡಗು ಪ್ರಾಂತಗಳಲ್ಲಿ ಶಾಲಾ ತನಿಖಾಧಿಕಾರಿ ಹುದ್ದೆ ನಿರ್ವಹಣೆ ಮಾಡಿರುತ್ತಾರೆ..ನಂತರ 1868  ರಲ್ಲಿ ವಿಧ್ಯಾ ಇಲಾಖೆಯ ಮುಖ್ಯಾಧಿಕಾರಿಯಾಗಿ  ಉತ್ತಮ ಸೇವೆ ಸಲ್ಲಿಸಿ ಎಲ್ಲರ ಗಮನ ಸೆಳೆಯುತ್ತಾರೆ.[ನಿಮಗೆ ತಿಳಿದಿರಲಿ ಮೈಸೂರು ಪ್ರಾಂತದಲ್ಲಿ ಇವರು ಜನಗಣತಿ ಆರಂಭಿಸಿ ಮಾಹಿತಿ ಅಂಕಿ ಅಂಶ ಕಲೆ ಹಾಕಿ  ಯೋಜನೆ ತಯಾರಿಕೆಗೆ ಅನುವು  ಮಾಡಿಕೊಟ್ಟಿದ್ದಾರೆ ಹಾಗು ಈ ಜನಗಣತಿ ಭಾರತದ ಮೊದಲ ಜನಗಣತಿ ಎಂದು ಇಂದಿಗೂ ಹೇಳಲಾಗುತ್ತದೆ.ಭಾರತದ ಮೊದಲ ಜನಗಣತಿ ಪ್ರಾರಂಭವಾಗಿದ್ದು ಕನ್ನಡ ನಾಡಿನಲ್ಲಿ ಎಂದರೆ ಪ್ರತಿ ಕನ್ನಡಿಗನೂ ಹೆಮ್ಮೆಪಡಬೇಕು.ಇದೆ ಆಧಾರದ ಮೇಲೆ ಇಂದಿಗೂ  ಸಹ ಭಾರತ ಜನಗಣತಿಯನ್ನು ಪ್ರತಿ ಹತ್ತು ವರ್ಷಕೊಮ್ಮೆ ದೇಶಾಧ್ಯಂತ ನಡೆಸಲಾಗುತ್ತಿದೆ]   ನಂತರ 1882  ರಲ್ಲಿ .ಹಂಟರ್ ವಿಧ್ಯಾ ಸಮಿತಿಯ ಕಾರ್ಯದರ್ಶಿಯಾಗಿ  ಇಲಾಖೆಯ ಜವಾಬ್ಶಾರಿ ನಿರ್ವಹಿಸಿ ಅಂದಿನ ಸರ್ಕಾರದ ಮೆಚ್ಚುಗೆಗೆ ಪಾತ್ರರಾಗುತ್ತಾರೆ.ಇವರ ಕಾರ್ಯಶೀಲತೆ ಗಮನಿಸಿದ ಸರ್ಕಾರ ಇವರನ್ನು 1884 ರಲ್ಲಿ ಹೊಸದಾಗಿ ರಚಿಸಿದ ಪುರಾತತ್ವ ಇಲಾಖೆಯ ನಿರ್ದೇಶಕರನ್ನಾಗಿ ನಿಯೋಜಿಸುತ್ತದೆ.ಹಾಗು 1890 ರಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ನಿಯೋಜನೆ ಮಾಡುತ್ತದೆ. ಈ ಅವಧಿಯಲ್ಲಿ ಬಿ.ಎಲ್.ರೈಸ್ ರವರು ಮಹಾತ್ಸಾಧನೆ ಮಾಡುತ್ತಾರೆ. ಮೊದಲೇ ಉತ್ಸಾಹಿಯಾಗಿದ್ದ  ರೈಸ್ ತಾವು ಕರ್ತವ್ಯ  ನಿರ್ವಹಿಸುವ ಅವಧಿಯಲ್ಲೇ ಹಲವು ಭಾಷೆಯಲ್ಲಿ  ಪಾಂಡಿತ್ಯ ಪಡೆದು,ಕನ್ನಡ ನಾಡನ್ನು, ಜನರನ್ನು ಚೆನ್ನಾಗಿ ಅರಿತಿದ್ದರು.ಪ್ರವಾಸ ಮಾಡುವ ಸಮಯದಲ್ಲಿ ತಮಗೆ ದೊರೆತ ಓಲೆಗರಿಗಳು,ಹಸ್ತ ಪ್ರತಿಗಳು,ಸ್ಥಳ ಪುರಾಣ, ಚರಿತ್ರೆ ಇವುಗಳನ್ನು ಕಲೆ ಹಾಕಿದ್ದರು.ಇವರ ಅವಧಿಯಲ್ಲಿ ಹಲವಾರು ದೇವಾಲಯಗಳಲ್ಲಿದ್ದ , ಪಾಳು ಬಿದ್ದ ದೇವಾಲಯ/ಮಂಟಪ ಗಳ ಬಳಿ ದೊರೆತ , ಹೊಲ ಗದ್ದೆಗಳಲ್ಲಿ ಅನಾಥವಾಗಿಬಿದ್ದಿದ್ದ , ಶಾಸನಗಳು,ಊರ ಒಳಗಡೆ ಕಂಡುಬಂದ , ಬಹಳಷ್ಟು ಶಾಸನಗಳನ್ನು ಪತ್ತೆ ಹಚ್ಚಿ  ಅಭ್ಯಾಸ ಮಾಡಿ ಅವುಗಳಿಂದ ತಿಳಿದುಬರುವ  ಮಾಹಿತಿಯನ್ನು ಕ್ರೂಧೀಕರಿಸಿ ರಾಶಿ ಹಾಕಿದರು.





ಮದ್ದೂರ್ ತಾಲೂಕಿನ ಅಪರೂಪದ ಆತಕೂರ್ ಶಾಸನ



.
ತಲಕಾಡಿನ ಶಾಸನ.  



              
ಈ ರೀತಿ  ಶಾಸನ , ಮಾಹಿತಿ ಸಂಗ್ರಹಿಸಿದ ಬಿ.ಎಲ್.ರೈಸ್ ತಾವೇ ಆಸಕ್ತಿ ಯಿಂದ ಹಲವಾರು ಶಾಸನಗಳನ್ನು ಓದಿ, ಹಿರಿಯರಿಂದ ಮಾಹಿತಿ ಪಡೆದು,ಯಾವುದೇ ಪೂರ್ವಾಗ್ರಹವಿಲ್ಲದೆ ಟಿಪ್ಪಣಿ ಮಾಡಿಕೊಂಡು ಆಸಕ್ತಿ ಪೂರ್ಣ ಕಾರ್ಯ ಮುಂದುವರೆಸಿದರು .1876 ರಲ್ಲಿ ಬರ್ಗೆಸ್ ಎಂಬುವರು ಆರಂಭಿಸಿದ" indian antiquary "  ಪತ್ರಿಕೆಯ ಮೊದಲ ಸಂಚಿಕೆಯಲ್ಲೇ ಮಡಿಕೇರಿ ತಾಮ್ರ ಶಾಸನದ ಬಗ್ಗೆ ಲೇಖನ ಪ್ರಕಟಿಸಿದರು.1879  ರಲ್ಲಿ ಮೈಸೂರು ಹಾಗು ಕೊಡಗಿನ ಸೀಮೆಯಲ್ಲಿ ದೊರೆತ ಶಾಸನಗಳ ಇಂಗ್ಲೀಷ್ ಅನುವಾದದ "ಮೈಸೂರ್ ಇನ್ಸ್ಕ್ರಿಪ್ಶನ್ಸ್" ಗ್ರಂಥ ಪ್ರಕಟ  ಮಾಡಿದರು.ನಂತರ ಎಪಿಗ್ರಾಫಿಯ ಕರ್ನಾಟಕ ಗ್ರಂಥ ಮಾಲೆ ಆರಂಭಿಸಿ  ಕೊಡಗಿನ ಸೀಮೆಯಲ್ಲಿ ಕಂಡುಬಂದ ಶಾಸನಗಳ ಅಪೂರ್ವ ಕ್ರೂಧೀಕರಣ ಮಾಡಿ ಕನ್ನಡ ಹಾಗು ಇಂಗ್ಲೀಷ್ ಭಾಷೆಯಲ್ಲಿ ಅರ್ಥ ನೀಡಿ  1896 ರಲ್ಲಿ "ಕೊಡಗಿನ ಗೆಜೆಟೀರ್" ಅನ್ನು ಎಪಿಗ್ರಾಫಿಯ ಕರ್ನಾಟಕ ಮಾಲೆಯಲ್ಲಿ ಮೊದಲು ಹೊರತಂದು ಇತಿಹಾಸ ನಿರ್ಮಿಸಿದರು.ಇದು ಇಡೀ ದೇಶದಲ್ಲೇ ಪ್ರಥಮವಾಗಿ ಪ್ರಕಟವಾದ  ಶಾಸನಗಳ ಒಂದು ಅಪೂರ್ವ ಗ್ರಂಥವಾಯಿತು.ನಂತರ ಇದನ್ನು ಈಗ ದೇಶಾದ್ಯಂತ ಮಾಡಲಾಗುತ್ತಿದೆ.1889 ರಲ್ಲಿ ಹಾಸನ ಜಿಲ್ಲೆ  ಶ್ರವಣ ಬೆಳಗೊಳದಲ್ಲಿ ದೊರೆತ ಶಾಸನಗಳ ಆಧಾರದ ಮೇಲೆ "ಶ್ರವಣ ಬೆಳಗೊಳದ ಶಾಸನಗಳು '' ಎಂಬ ಎರಡನೇ ಸಂಪುಟ ಹೊರಬಂದಿತು.ಅಧಿಕಾರದಲ್ಲಿದ್ದ ಹದಿನಾರು ವರ್ಷದಲ್ಲಿ  ಎಪಿಗ್ರಾಫಿಯಾ ಕರ್ನಾಟಕದ ಉಳಿದ ಹತ್ತು ಬೃಹದ್ ಸಂಪುಟಗಳನ್ನು ಪ್ರಕಟ ಮಾಡಿ ಜಿಲ್ಲಾ ವಾರು  ಶಾಸನಗಳ  ಮಾಹಿತಿ ಪ್ರಕಟಿಸಿದ್ದಾರೆ.




ಶ್ರೀ ರಂಗ ಪಟ್ಟಣದ ಸಮೀಪ  ಕಬ್ಬಿನ ಗದ್ದೆಯಲ್ಲಿ ಸಿಕ್ಕಿರುವ ಶಾಸನ.


ಬಿ.ಎಲ್. ರೈಸ್ ರವರು ಹನ್ನೆರಡು ಸಂಪುಟಗಳ ಕರ್ನಾಟಕ ಎಪಿಗ್ರಾಫಿಯ ಪ್ರಕಟಿಸಿದ ಬೆನ್ನಹಿಂದೆ ಅದರಲ್ಲಿ 8869 ಶಾಸನಗಳು ಬೆಳಕಿಗೆ ಬಂದಿದ್ದವು.ಅವರ ಕಾರ್ಯಕ್ಕೆ ಹಲವಾರು ಘನ ವಿಧ್ವಾಂಸರು, ಮೇಧಾವಿಗಳು, ಹಿರಿಯರು, ಜೊತೆಗೆ ಹಲವು ಗ್ರಾಮಗಳ ಜನತೆ  ಪ್ರೋತ್ಸಾಹ ನೀಡಿ ಮಾಹಿತಿ ಕಲೆಹಾಕಲು ನೆರವಾಗಿದ್ದರು .ಇದರಿಂದಾಗಿ ಕರ್ನಾಟಕದ ಚರಿತ್ರೆಯನ್ನು ಅರಿಯಲು ಒಂದು ಒಳ್ಳೆಯ ಆಧಾರ ಸಿಕ್ಕಿತು.ಬಿ.ಎಲ್.ರೈಸ್ ಕಂಡು ಹಿಡಿದ ಶಾಸನಗಳು ಕರ್ನಾಟಕದ ಚರಿತ್ರೆಯನ್ನು ಕ್ರಿ.ಪೂ.3  ನೆ ಶತಮಾನಕ್ಕೆ ಕರೆದೊಯ್ದವು. ಈ ಎಲ್ಲಾ ಶಾಸನಗಳಿಂದ ತಿಳಿದು ಬಂದ ರಾಜಕೀಯ ತಿರುಳನ್ನು ಬಿ.ಎಲ್.ರೈಸ್ " ಮೈಸೂರ್ ಅಂಡ್ ಕೂರ್ಗ್ ಫ್ರಂ ಇನ್ಸ್ಕ್ರಿಪ್ಶನ್ಸ್"ಎಂಬ ಗ್ರಂಥದಲ್ಲಿ ಬರೆದಿದ್ದಾರೆ. ಇವರು ಪ್ರಕಟಿಸಿರುವ ಎಪಿಗ್ರಾಫಿಯಾ ಶೇಣಿಯ ಗ್ರಂಥಗಳಲ್ಲಿ ಹಲವು ದೇವಾಲಯಗಳ ನಕ್ಷೆ ಪ್ರಕಟಗೊಂಡಿದ್ದು ಇವರು ಎಷ್ಟು ವೈಜ್ಞಾನಿಕವಾಗಿ ಅವುಗಳ ಅಧ್ಯಯನ ಮಾಡಿದ್ದಾರೆ ಎಂಬುದನ್ನು ತೋರಿಸುತ್ತವೆ.



ಸೋಮನಾಥಪುರದ ದೇವಾಲಯದ ನಕ್ಷೆ


ಇವರು ಸಂಗ್ರಹಿಸಿದ ಓಲೆಗರಿ,ಹಸ್ತಪ್ರತಿ,ಹಾಗು, ಇದೆ ಅವಧಿಯಲ್ಲಿ ಪ್ರಾಚೀನ ಗ್ರಂಥಗಳನ್ನು ಸಂಗ್ರಹಿಸಿ ಅಭ್ಯಾಸಮಾಡಲು ಮೈಸೂರಿನ ಅರಸರ ಕೊಡುಗೆಯಾಗಿ "ಓರಿಯಂಟಲ್ ರೀಸರ್ಚ್  ಸೆಂಟರ್ " ಅಸ್ತಿತ್ವಕ್ಕೆ ಬಂದಿದ್ದು . ಅದರಲ್ಲಿ ಇವರ ಎಷ್ಟೋ ಅಮೂಲ್ಯ ಸಂಗ್ರಹವನ್ನು  ಇಂದಿಗೂ ಕಾಣಬಹುದು.1884  ರಲ್ಲಿ ಬಿ.ಎಲ್.ರೈಸ್ "ಬಿಬ್ಲಿಯೋತಿಕಾ ಕರ್ನಾಟಕ "ಗ್ರಂಥಮಾಲೆ ಆರಂಭಿಸಿ  ಈ ಮಾಲೆಯಲ್ಲಿ "ಕರ್ನಾಟಕ ಭಾಷಾಭೂಷಣ" ,"ಕರ್ನಾಟಕ ಶಬ್ದಾನುಶಾಸನ" "ಪಂಪ ರಾಮಾಯಣ" , "ಪಂಪ ಭಾರತ", "ಕವಿರಾಜ ಮಾರ್ಗ"  ಹಾಗು "ಕಾವ್ಯಾವಲೋಕನ " ಮುಂತಾದ ಪ್ರಾಚೀನ ಗ್ರಂಥಗಳನ್ನು ಪ್ರಕಟಣೆ ಮಾಡುತ್ತಾರೆ. ಕನ್ನಡ ನೆಲದ ಬಗ್ಗೆ ಅತಿಯಾದ ಪ್ರೀತಿ ಇಟ್ಟುಕೊಂಡಿದ್ದ ಇವರು ನಿವೃತ್ತರಾದ ಮೇಲೆ ಬ್ರಿಟನ್ ದೇಶದ ಹ್ಯಾರೋ ನಗರದಲ್ಲಿ  ನೆಲೆಸುತ್ತಾರೆ. ಅಲ್ಲಿದ್ದಾಗಲೂ ಸಹ ಕರ್ನಾಟಕದ ಬಗ್ಗೆ ಇಲ್ಲಿನ ಶಾಸನ ಸಂಪತ್ತಿನ ಬಗ್ಗೆ ಹಲವಾರು  ಲೇಖನ ಬರೆಯುತ್ತಾರೆ.1914 ರಲ್ಲಿ ಭಾರತ ಸರ್ಕಾರದ ಕೋರಿಕೆಯಂತೆ ಎಪಿಗ್ರಾಫಿಯ ಕರ್ನಾಟಕದ ಮೊದಲ ಸಂಪುಟದ ಪರಿಷ್ಕೃತ ಆವೃತ್ತಿಯನ್ನು ಸಿದ್ದ ಪಡಿಸಿ ಕೊಡುತ್ತಾರೆ .ಅವಿಶ್ರಾಂತ ದುಡಿಮೆಯಿಂದ  ಕನ್ನಡ ನೆಲದ ಶಾಸನ ಸಂಪತ್ತನ್ನು ಹೊರತೆಗೆದು  ಕನ್ನಡ ನಾಡಿನ ಹಾಗು ದಕ್ಷಿಣ ಭಾರತದ ಇತಿಹಾಸದ ಮೇಲೆ ಬೆಳಕು ಚೆಲ್ಲಿ  ಇತಿಹಾಸ ಹಾಗು ಸಾಹಿತ್ಯ ಅಭ್ಯಾಸಕ್ಕೆ  ಅನುವುಮಾಡಿಕೊಟ್ಟು  1927  ರ  ಜುಲೈ 10 ರಂದು ತೊಂಬತ್ತರ ವಯಸ್ಸಿನಲ್ಲಿ ಅಸ್ತಂಗತರಾಗಿದ್ದಾರೆ. ಕರ್ನಾಟಕದ ಹೆಮ್ಮೆಯ ದತ್ತು ಪುತ್ರ  ಕನ್ನಡ ತಾಯಿಗೆ  ಇತಿಹಾಸದ , ಕಿರೀಟವನ್ನು ತೊಡಿಸಿ  ಕನ್ನಡ ನಾಡಿನ ಆಗಸದಲ್ಲಿ "ಧ್ರುವ  ನಕ್ಷತ್ರ"  ಆಗಿ ಹೋಗಿದ್ದಾರೆ. ಆದರೆ ಈ ನಕ್ಷತ್ರಕ್ಕೆ ಮೋಡ ಕವಿದಿದ್ದು  ಕನ್ನಡಿಗರು ಮೋಡ ಸರಿಸಿ ನಕ್ಷತ್ರವನ್ನು ನೋಡಿ ಅಭಿನಂದಿಸಬೇಕಾಗಿದೆ. ಕನಿಷ್ಠ ರಾಜ್ಯೋತ್ಸವ ಸಮಯದಲ್ಲಾದರೂ ಇವರನ್ನು ನೆನೆದು ನಮ್ಮ ಕೃತಜ್ಞತೆ ಸಮರ್ಪಿಸೋಣ .ಬನ್ನಿ!!. ತಮಗೆಲ್ಲಾ ಕನ್ನಡರಾಜ್ಯೋತ್ಸವದ ಶುಭಾಶಯಗಳು







ನಾನೂ ಕನ್ನಡ ತಾಯಿಯ ಮಗನೆ 
.

  

17 comments:

Ittigecement said...

ಬಾಲೂ ಸರ್..

ಅಬ್ಭಾ !!
ನಮ್ಮ ನಾಡು ನುಡಿಗಾಗಿ ಶ್ರೀಯುತ ರೈಸ್ ಅವರು ಎಷ್ಟೊಂದು ಶ್ರಮಿಸಿದ್ದಾರೆ..
ನನಗಂತೂ ಇವರ ಬಗೆಗೆ ಗೊತ್ತೇ ಇರಲಿಲ್ಲ..

ಕನ್ನದ ರಾಜ್ಯೋತ್ಸವದ ಸಂದರ್ಭದಲ್ಲಿ ಅವರನ್ನು ಪರಿಚಯ ಮಾಡಿಸಿಕೊಟ್ಟಿದ್ದು ಖುಷಿಯಾಯಿತು..

ಅಂಥಹ ಮಹನೀಯರುಗಳನ್ನು ನೆನಪಿಟ್ಟುಕೊಳ್ಳುವದಕ್ಕೆ ಏನಾದರೂ ಸ್ಮಾರಕಗಳನ್ನು ಮಾಡಬೇಕು...

ಇತಿಹಾಸ ಕೆದಕಿ ನಮಗೆ ಗೊತ್ತಿಲ್ಲದ ಮಾಹಿತಿ ಕೊಟ್ಟಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು...

Dr.D.T.Krishna Murthy. said...

ಬಾಲೂ ಸರ್;ಉಪಯುಕ್ತ ಮಾಹಿತಿಯುಳ್ಳ ಅದ್ಭುತ ಲೇಖನ.ಕನ್ನಡ ರಾಜ್ಯೋತ್ಸವಕ್ಕೆ ಪೂರ್ವ ಭಾವಿಯಾಗಿ ನಮ್ಮ ನಾಡು ನುಡಿ ಮತ್ತು ಸಂಸ್ಕೃತಿಗಾಗಿ ದುಡಿದ ಮಹನೀಯರ ಬಗ್ಗೆ ಬೆಳಕು ಚೆಲ್ಲುವ ನಿಮ್ಮ ಕೆಲಸ ಶ್ಲಾಘನೀಯ.ಇಂತಹ ಇನ್ನಷ್ಟು ಉತ್ತಮ ಬರಹಗಳು ನಿಮ್ಮಿಂದ ಬರಲಿ.ನಮಸ್ಕಾರ.

Badarinath Palavalli said...

ಮತ್ತೆ ಬಾಲು ಬಂದರು....

ಬೆಂಜಮಿನ್ ಲೆವಿಸ್ ರೈಸ್ ಬಗ್ಗೆ ಇದು ಉತ್ತಮ ಚಿತ್ರ ಲೇಖನ. ಯಾವಾದೋ ತಲೆ ಮಾಸಿದವರ ಹೆಸರನ್ನೆಲ್ಲಾ ರಾಜ ಬೀದಿಗಳಿಗೆ, ಸರ್ಕಾರಿ ಕಟ್ಟಡಗಳಿಗೆ ಇಡುವ ಸರ್ಕಾರ ಮರೆತೇ ಹೋಗಿರುವ ಮಹನೀಯರು ಅನೇಕ!

ಎಲ್ಲಾ ಬ್ರಿಟೀಷರನ್ನು ದುರಹಂಕಾರಿಗಳು, ಪ್ರಜಾ ಪೀಡಕರು ಎಂದು ದಾಖಲಿಸಿರುವ ಕುತ್ಸಿತ ಮನಸ್ಸಿನ ಇತಿಹಾಸಕಾರರಿಗೆ ಛಡಿ ಏಟು ನಿಮ್ಮ ಈ ಬ್ಲಾಗ್ ಬರಹ.

೧. ಮೊದಲ ಜನಗಣತಿಯ ಕಾರಣಕರ್ತ.
೨. ಶಾಸನ ಸಂಗ್ರಹಕಾರ.
೩. ಅದಿಕೃತವಾಗಿ ಶಾಸನ ಪ್ರಕಟಿಸಿದ ಸಾಧಕ.

ಹೀಗೆ ಮಹತ್ ಸಾಧನೆಗೈದ ರುವಾರಿಯನ್ನು ನಾವೆಲ್ಲ ಮರೆತೇಬಿಟ್ಟ ಗಳಿಗೆಯಲ್ಲಿ ನೆನಪು ಮಾಡಿಕೊಟ್ಟಿರಿ.

ಅವರ ಜನ್ಮ ಶತಮಾನೋತ್ಸವಕ್ಕಾದರೂ ಸರ್ಕಾರ ಅವರನ್ನು ನೆನೆಸುತ್ತದೋ ನೋಡಬೇಕಿದೆ.

prabhamani nagaraja said...

ಶ್ರೀಯುತ ರೈಸ್ ಅವರ ಬಗ್ಗೆ ಸವಿವರವಾಗಿ, ಶಾಸನಗಳ ಚಿತ್ರ ಸಹಿತ ಅವರ ಕಾರ್ಯ ತತ್ಪರತೆಯನ್ನು ಎತ್ತಿ ತೋರಿಸುವ ಲೇಖನವನ್ನು ಬಹಳ ಚೆನ್ನಾಗಿ ಬರೆದಿದ್ದೀರಿ ಸರ್, ಧನ್ಯವಾದಗಳು.

ಮನಮುಕ್ತಾ said...

ಉಪಯುಕ್ತ ಮಾಹಿತಿಗಳ ಸ೦ಗ್ರಹ..
ಧನ್ಯವಾದಗಳು.

ಜಲನಯನ said...

ಬಾಲು ಬಹಳ ಮಾಹಿತಿಪೂರ್ಣ ಮತ್ತು ನಿಜಕ್ಕೂ ನನಗೆ ಅರಿವಿಲ್ಲದ ವಿಷಯ ತಿಳಿಸಿಕೊಟ್ಟಿದ್ದೀರ...ಮಾಹಿತಿಯನ್ನು ಚಿತ್ರ ಆಧಾರದಲ್ಲಿ ವಿವರಿಸಿದ್ದೀರಿ..ಹೌದು ಇಂತಹವರನ್ನು ಕನ್ನಡಿಗರು ಮರೆಯಬಾರದು.

ಸುಬ್ರಮಣ್ಯ said...

ಮಾಹಿತಿಪೂರ್ಣ ಲೇಖನಕ್ಕೆ ಧನ್ಯವಾದ ಬಾಲು ಅಣ್ಣ.

mshebbar said...

ರೈಸ್ ಮೆಮೋರಿಯಲ್ ಬೆಂಗಳೂರಿನ ಅವೆನ್ಯೂ ರೋಡಿನಲ್ಲಿದೆ.
ಮಾಹಿತಿಗೆ ಜೈ -msh

ಹಳ್ಳಿ ಹುಡುಗ ತರುಣ್ said...

tumba mukyavada... artapurna mahitige danyavadagalu sir..

ಗಿರೀಶ್.ಎಸ್ said...

ಬಿ.ಎಲ್.ರೈಸ್ ಅವರ ಬಗ್ಗೆ ಕೇಳಿದ್ದವೇ ಆದರು ಇಷ್ಟೊಂದು ಮಾಹಿತಿ ಗೊತ್ತಿರಲಿಲ್ಲ ಸರ್... ಮಾಹಿತಿದೆ ಧನ್ಯವಾದಗಳು.... ಮಾಹಿತಿ ಪೂರ್ವಕ ಲೇಖನ...

Pradeep Rao said...

ಅಬ್ಬಾ ವಿದೇಶಿಯವರಾದರೂ ಇವರು ನಮ್ಮ ನಾಡಿನ ಶಾಸನಗಳ ಬಗ್ಗೆ ಇಷ್ಟೊಂದು ಅಧ್ಯಯನ ಮಾಡಿದ್ದಾರೆ ಎಂದರೆ ನಂಬಲಸಾಧ್ಯ! ನಿಜವಾಗಿಯೂ ಇಂಥವರು ನಮ್ಮ ನಾಡಿಗೆ ಬೇಕು.

balasubramanya said...

ಲೇಖನ ಓದಿ ತಮ್ಮ ಪ್ರೀತಿಯ ಮಾತುಗಳನ್ನು ಬರೆದು ಅನಿಸಿಕೆ ತಿಳಿಸಿದ ಎಲ್ಲರಿಗೂ ಧನ್ಯವಾದಗಳು.

Manjunatha Kollegala said...

ಇತಿಹಾಸದ ಬಗೆಗಿನ ನಿಮ್ಮ ಉತ್ಸಾಹ ಆಸಕ್ತಿ ಅದ್ಭುತ. ಮರೆತುಹೋದ ಮಹಾನುಭಾವನೊಬ್ಬನನ್ನು ಪುನಃ ಪರಿಚಯಿಸಿದ್ದಕ್ಕಾಗಿ ಧನ್ಯವಾದ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು ತಮಗೆ.

shivu.k said...

ಬಾಲು ಸರ್, ಕರ್ನಾಟಕ ಇತಿಹಾಸದ ನಮಗೆ ಗೊತ್ತಿರದ ಮಾಹಿತಿ, ಮತ್ತು ಅದಕ್ಕಾಗಿ ಶ್ರಮಿಸಿದ ಬೆಂಜಮಿನ್ ಲೆವಿನ್ ರೈಸ್ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

UMESH VASHIST H K. said...

ಕನ್ನಡ ರಾಜ್ಯೋತ್ಸವಕ್ಕೆ ಉತ್ತಮ ಬರವಣಿಗೆ ...... ರೈಸ ರ ಬಗ್ಗೆ ಮಾಹಿತಿ ಚೆನ್ನಾಗಿದೆ .......ಅವರಬಗ್ಗೆ ನನಗೂ ತಿಳಿದಿರಲಿಲ್ಲ ..... ವಂದನೆಗಳು ...

Mohamed Kaleemulla said...

ಬಾಲು ಸರ್ ಪ್ರಾತಃಸ್ಮರಣೀಯರಾದ ಬಿ.ಎಲ್. ರೈಸ್ ಸಾಹೇಬರನ್ನು ನೆನೆದಿರುವುದಕ್ಕೆ ಧನ್ಯವಾದಗಳು. ಅದೂ ಕನ್ನಡ ನಾಡುನುಡಿಯ ಹಬ್ಬದ ಸಂದರ್ಭದಲ್ಲಿ. ನಾನಂತೂ ನನ್ನ ಉಪನ್ಯಾಸದ ಪ್ರತಿ ಸಂಧರ್ಭದಲ್ಲೂ ಈ ಮಹನೀಯರನ್ನು ನೆನಪಿಸಿಕೊಳ್ಳುತ್ತೇನೆ. ಏಕೆಂದರೆ ನನ್ನಂತಹ ಸಾವಿರಾರು ಇತಿಹಾಸದ ವಿದ್ಯಾರ್ಥಿಗಳು ಇನ್ನೂ ರೈಸ್ ಸಾಹೇಬರ ಹೆಗಲಮೇಲೆ ಕುಳಿತುಕೊಂಡೇ ಹೋಗುತ್ತಿದ್ದೇವೆ. ಇನ್ನೂ ಸ್ವತಂತ್ರವಾಗಿ ನಡೆದಾಡಲು ಬರುತ್ತಿಲ್ಲ.
ಅವರ ಕನ್ನಡ ಪ್ರೀತಿ ಎಷ್ಟೆಂದರೆ ಲಂಡನ್ನಿನಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಭಾರತದ ಮಳಿಗೆ ಮೈಸೂರು ಕೋರ್ಟ್ ಮೈಸೂರಿನ ಉತ್ಪನ್ನಗಳ ಮಾರಾಟ ಮಳಿಗೆ. ಅದನ್ನು ನೋಡಲು ಗಾಲಿ ಕುರ್ಚಿಯಲ್ಲಿ ಬಂದ ರೈಸ್ ಸಾಹೇಬರು ಮಳಿಗೆಯ ಮೇಲ್ವಿಚಾರಕರಾದ ಸ್.ಜಿ.ಶಾಸ್ರಿಯವರು ಆಂಗ್ಲಭಾಷೆಯಲ್ಲಿ ಅವರನ್ನು ಸ್ವಾಗತ ಕೋರಿದರು. ಆಗ ರೈಸ್ ಸಾಹೇಬರು ನೀವು ಮೈಸೂರಿನವರಲ್ಲವೇ? ಕನ್ನಡಬರಬೇಕಲ್ಲಾ? ಆ ಕನ್ನಡದಲ್ಲೇ ಮಾತನಾಡಿ ಎನ್ನುತ್ತಾರೆ.
ಮೇಲುಕೋಟೆಯ ಸಂಸ್ಕೃತ ಪಾಠಶಾಲೆಯು ಅನುದಾನಕ್ಕಾಗಿ ಅರ್ಜಿ ಸಲ್ಲಿಸಿದಾಗ ಪರಿಶೀಲನೆ ಮಾಡಿದ ರೈಸ್ ಸಾಹೇಬರು I have no hesitation in recommending that it should receive a Govt. grant in aid. ಎಂದು ಬರೆದು ಅನುದಾನ ಕೊಡುಸುತ್ತಾರೆ. ಮೇಲುಕೋಟೆಗೂ ಅವರಿಗೂ ತುಂಬ ಹತ್ತಿರದ ಸಂಬಂಧ. ಹೇಗೆಂದರೆ ಶ್ರವಣಬೆಳಗೂಳದ ಹತ್ತಿರ ಇದ್ದ ರೈಸ್ ಸಾಹೇಬರು ನಾಗಮಂಗಲದಲ್ಲಿ ಒಂದು ಶಾಸನದ ಅಧ್ಯಯನ ಮಾಡಬೇಕಾಗಿತ್ತು. ಆ ಶಾಸನ ಓದಿದ ಮೊದಲಿಗನಾಗಬೇಕೆಂದು ಅವರು ಆತುರವಾಗಿ ನಾಗಮಂಗಲಕ್ಕೆ ಹೊರಡುತ್ತಾರೆ. ದಾರಿ ತಪ್ಪುತ್ತಾರೆ. ನನಗೆ ಕನ್ನಡ ಬರುತ್ತಿದ್ದರಿಂದ ನಾನು ಯಾವುದೇ ಅಪಾಯಕ್ಕೆ ಒಳಗಾಗಲಿಲ್ಲ ಎನ್ನುತ್ತಾರೆ. ಅವರು ತಲುಪಿದ್ದು ರಾತ್ರಿ ಎರಡು ಗಂಟೆಗೆ. ನಾನು ಅಲ್ಲಿಯ ದೇವಾಲಯವನ್ನು ತಲುಪಿದೆ. ಅಲ್ಲಿಯ ಬ್ರಾಹ್ಮಣರು ನನಗೆ ಪರಿಚಯವಿದ್ದರಿಂದ ನನಗೆ ಹಾಲು ಹಣ್ಣುಗಳನ್ನು ತಂದುಕೊಟ್ಟರು. ನಾನು ಆ ರಾತ್ರಿ ಆ ದೇವಾಲಯದಲ್ಲೇ ಮಲಗಿಕೊಂಡೆ ಎನ್ನುತ್ತಾರೆ ರೈಸ್ ಸಾಹೇಬರು.
ರೈಸ್ ಸಾಹೇಬರು ಓದಿದ್ದು ಸುಮಾರು 9,000 ಶಾಸನಗಳನ್ನು, ಸಂಪಾದಿಸಿದ ಕೃತಿಗಳು ಅನೇಕ, ಮೊಟ್ಟಮೊದಲ ಬಾರಿಗೆ ಮೈಸೂರು ಪ್ರಾಂತ್ಯದ ಗೆಜಿಟಿಯರ್ ಅನ್ನು ಹೊರತರುತ್ತಾರೆ.
ನಿವೃತ್ತಿಯ ನಂತರ ಇಗ್ಲೆಂಡಿಗೆ ಹೋಗುತ್ತಾರೆ. ಇಲ್ಲಿ ನಿಗದಿಯಾಗಿದ್ದ ನಿವೃತ್ತಿ ವೇತನ ಅಲ್ಲಿ ವಿನಿಮಯಗೊಂಡು ತುಂಬ ಕಡಿಮೆಯಾಗುತ್ತದೆ. ಇದಕ್ಕಾಗಿ ಮೈಸೂರು ಸರ್ಕಾರದೊಡನೆ ಪತ್ರವ್ಯವಹಾರ ಮಾಡುತ್ತಾರೆ. ರೈಸರ ಮನವಿಯನ್ನು ಕೌನ್ಸಲರ್ ಗಳಾದ ಟಿ. ಆನಂದರಾವ್ ಮತ್ತು ಪುಟ್ಟಣ್ಣಚೆಟ್ಟರು ನಾಲ್ವಡಿಯವರಿಗೆ ಮನವರಿಕೆ ಮಾಡಿಕೊಡುತ್ತಾರೆ. ಆಗ ಮಹಾರಾಜರು ಪಿಂಚಣಿ ಹೆಚ್ಚಳಕ್ಕೆ ಆದೇಶಿಸುತ್ತಾರೆ. ಇದರಿಂದ ಬೋರಿಂಗ್ ಸೇರಿದಂತೆ ಅನೇಕ ಬ್ರಿಟೀಷ್ ಅಧಿಕಾರಿಗಳೀಗೆ ಪ್ರಯೋಜನವಾಗುತ್ತದೆ.
ಇಂತಹ ಮಹನೀಯರನ್ನು ನೆನಪಿಸಿಕೊಳ್ಳುವಂತಹ ಒಂದು ಸ್ಮಾರಕ ಮೈಸೂರಿನಲ್ಲಿ ಇರಲೇಬೇಕು. ಮಾನಸ ಗಂಗೋತ್ರಿಯಲ್ಲಾದರೂ ಇವರ ಒಂದು ಬಸ್ಟ್ ಪ್ರತಿಷ್ಟಾಪನೆ ಮಾಡಬೇಕು. ಇದಕ್ಕೆ ಇತಿಹಾಸ ಪ್ರಿಯರು ಹಾಗು ಎಲ್ಲ ಕನ್ನಡ ಪ್ರಿಯರು ಸರ್ಕಾರಕ್ಕೆ ಒತ್ತಾಯ ಮಾಡೋಣ.
ರೈಸ್ ಸಾಹೇಬರ ಮಗನ ನೆನಪಿಗೆ ಚಾಮುಂಡಿಬೆಟ್ಟದ ಸಮೀಪದಲ್ಲಿ ಒಂದು ರಸ್ತೆಗೆ ಆತನ ಹೆಸರು ಇಡಲಾಗಿದೆ. ಡಗ್ಲಸ್ ರೈಸ್ ಚೌಕವೆಂದು. ಇದಕ್ಕೆ ಕಾರಣ ಈತ ಪ್ರಾಂತ್ಯದ ಜಿನಿಯರ್ ಆಗಿದ್ದಾಗ ಬೆಟ್ಟಕ್ಕೆ ಟಾರು ರಸ್ತೆ ಮಾಡಿಸಿದ್ದರು.
ಮೈಸೂರು ಪ್ರಾಂತ್ಯದ ಮೊಟ್ಟ ಮೊದಲ ಅಣೆಕಟ್ಟು ಮಾರಿಕಣಿವೆ ಯೋಜನೆ, ( ವಾಣಿವಿಲಾಸ ಅಣೆಕಟ್ಟು) ಇದರ ಚೀಫ್ ಇಂಜಿನಿಯರ್ ಆಗಿ ಈ ಅಣೆಕಟ್ಟನ್ನು ಕಟ್ಟುತ್ತಾರೆ ಡಗ್ಲಸ್ ರೈಸ್ ಸಾಹೇಬರು.
ಆಧಾರ: ಪುರಾತತ್ವ ಪಿತಾಮಹ ಬಿ.ಎಲ್. ರೈಸ್. ಡಾ. ಎಸ್.ಎಲ್.ಶ್ರೀನಿವಾಸ ಮೂರ್ತಿ.

Badarinath Palavalli said...

Latest comment:
8869 ಶಾಸನಗಳು ಎಂಬುದು ಕಡಿಮೆ ಸಾಧನೆಯಲ್ಲ ಸಾರ್! ಇಲ್ಲಿ ಕನ್ನಡದವರೇ ಮಿಸುಕಿದರೆ ಎನ್ನಡ ಎನ್ನುತ್ತಾ ಓಲೈಸಲು ಹೊರಡುವಾಗ, ರೈಸರ ಕನ್ನಡ ಪ್ರೀತಿ ಪ್ರಾತಃ ಸ್ಮರಣೀಯ.

ಹಲವು ಗ್ರಂಥಗಳ ಪ್ರಕಟಣೆ, ಜನಗಣತಿಯ ಮೊದಲಿಗ, ಶಿಕ್ಷಣ ಮತ್ತು ಪುರಾತತ್ವ ಇಲಾಖೆಗಳ ಪಟುವಾದ ಇವರ ಮಹಾನ್ ಸಾಧನೆಗಳೇ ಇಂದಿಗೂ ಕನ್ನಡ ನಾಡಿಗೆ ಅಡಿಪಾಯಗಳು.

ಯಾರೋ ಪರಮ ಭ್ರಷ್ಟ ರಾಜಕಾರಣಿಯ ಹೆಸರನ್ನು "ಎಲ್ಲಿ ಸಿಕ್ಕಿದರೆ ಅಲ್ಲಿ" ಇಡುವ, ಮೆರೆಸುವ ಮತ್ತು ಕೊಂಡಾಡುವ ಮೂಢ ಸರ್ಕಾರಗಳಿಗೆ ಇಂತಹ ಕನ್ನಡವನ್ನು‌ ಕಟ್ಟಿ ಬೆಳೆಸಿದ ಮಹಾ ಪುರುಷರ ನೆನಪೇ ಬಾರದಿರುವುದು ನೋವಿನ ಸಂಗತಿ!