|
"ಗೊಮಟಗಿರಿ ಬೆಟ್ಟ " |
ಕಳೆದ ಶನಿವಾರ ರಜಾದಿನವಾಗಿತ್ತು. ನಮ್ಮ ಸತ್ಯ ರವರು ಫೋನ್ ಮಾಡಿ , ಬಾಲಣ್ಣ ಫ್ರೀ ನಾ , ಅಂದ್ರೂ , ನಾನು ಯಾಕೆ ಸಾರ್?? ಅಂದೆ, ಇನ್ನರ್ಧ ಘಂಟೆಯಲ್ಲಿ ನಿಮ್ಮ ಮನೆಯಲ್ಲಿರುತ್ತೇನೆ ರೆಡಿ ಇರೀ , ಒಳ್ಳೆ ನೀರು ಬಂದಿದ್ಯಂತೆ "ಚುಂಚನಕಟ್ಟೆ" ಗೆ ಹೋಗಿಬರೋಣ ಅಂದ್ರೂ. ಕಟ್ ಮಾಡಿದ್ರೆ ನಾವು ನನ್ನ ಆಕ್ಟಿವಾ ದಲ್ಲಿ ಚುಂಚನಕಟ್ಟೆ ಹಾದಿ ಹಿಡಿದಿದ್ದೆವು. ಮೋಡಗಳ ಮುಸುಕಿನ ವಾತಾವರಣದಲ್ಲಿ ಮಳೆರಾಯನ ಕಣ್ಣಾ ಮುಚ್ಚಾಲೆ , "ಇಲವಾಲ" ಬರುತ್ತಿದಂತೆ ಮಳೆರಾಯನ ಆಗಮನ ವಾಗಿತ್ತು. ಎಂತಾ ಕೆಲ್ಸಾ ಸರ್ ಏನ್ಮಾಡೋದು??? "ನನ್ನ ಬಳಿ ಜಾಕೆಟ್ ಇದೆ ನಿಮ್ಮ ಬಳಿ ಇಲ್ಲ ಮುಂದೆ ಹೋದ್ರೆ ನೀವು ಮಳೆಯಲ್ಲಿ ನೆನೆದು ತೊಪ್ಪೆ ಆಗ್ತೀರಿ" ಅಂದೇ. ಇರಿ ಬಾಲಣ್ಣ ಅಂದಾ ಸತ್ಯ ಇಲ್ಲೇ ಹತ್ತಿರದಲ್ಲಿ ಎಲ್ಲಾದ್ರೂ ನೋಡದೆ ಇರೋಜಾಗಕ್ಕೆ ಹೋಗೋಣ ಅಂದ್ರೂ . ಆಗ ಹೊಳೆದದ್ದು ಹತ್ತಿರದಲ್ಲೇ ಇದ್ದ ಜೈನ ಕ್ಷೇತ್ರ "ಗೊಮಟಗಿರಿ"
|
"ಸುಂದರ ಬಾಹುಬಲಿ ಮೂರ್ತಿ" |
ತುಂತುರು ಮಳೆಯಲ್ಲೇ ಅಲ್ಲಿಗೆ ತಲುಪಿದೆವು. ಕೆಳಗಡೆ ಬೆಟ್ಟದ ತಪ್ಪಲಿನಲ್ಲಿ ನಮ್ಮನ್ನು ಸ್ವಾಗತ ಮಾಡಿದ್ದು ಚಪ್ಪಲಿಗಳ ಸಾಲು ಸಾಲು. ಮಾಮೂಲಿನಂತೆ ಅದೇ ಸಿಟಿ ಹೈಕಳು ಪಿಕ್ನಿಕ್ ಗೆ ಬಂದಿರ್ತವೆ ಅಂತಾ ಅನ್ಕೊಂಡು ಬೆಟ್ಟ ಹತ್ತಲು ಹತ್ತಿರ ಹೋಗುತ್ತಿದ್ದಂತೆ ಶಂಕರ್ ಎನ್ನುವ ಇತಿಹಾಸ ಪ್ರಾಧ್ಯಾಪಕರ ಪರಿಚಯವಾಯಿತು. ಇವರು ಸಹ ಖುಷಿಯಾಗಿ ಪರಿಚಯಮಾಡಿಕೊಂಡು ಮೇಲೆ ಒಳ್ಳೆಯ ಕಾರ್ಯಕ್ರಮ ನಡೀತಿದೆ ಹೋಗಿ ಸಾರ್ ಅನ್ನುತ್ತಾ ಹೊರಟರು . ಬೆಟ್ಟ ಏರಿದ ನಮಗೆ ದರ್ಶನ ನೀಡಿದ ಸುಂದರ ಬಾಹುಬಲಿ ಮೂರ್ತಿಯ ಜೊತೆಗೆ ಒಂದು ಗುಂಪಿಗೆ ಯಾರೋ ಸಾಹಿತ್ಯದ ಪಾಠ ಮಾಡುತ್ತಿರುವ ಹಾಗೆ ಅನ್ನಿಸಿ ಪ್ರವೇಶ ಮಾಡಿದೆವು. ಒಬ್ಬ ಹೆಣ್ಣುಮಗಳು ತನ್ನ ಮುಂದೆ ಕುಳಿತ ಹಲವು ಹುಡುಗ ಹುಡುಗಿಯರಿಗೆ ಏನನ್ನೋ ವರ್ಣಿಸುತಿದ್ದರು. ಹಾಗೆ ಒಳಗಡೆ ಹೋದ ನಾವು ಅಲ್ಲಿ ನಡೆಯುತ್ತಿರುವ ಘಟನೆಯನ್ನು ಮೌನವಾಗಿ ವೀಕ್ಷಿಸಲು ತೊಡಗಿದೆವು. ಅಲ್ಲಿ ಕಂಡಿದ್ದೆ ಇಂದಿನ ಸಂಚಿಕೆಯ ವಿಶೇಷ.