|
ಕಾಡಿನ ಆಭರಣಗಳು |
ಅಪ್ಪಚ್ಚಿಯಾದ ಟೈರ್ ಅನ್ನು ಜೀಪಿನಲ್ಲಿ ಹಾಕಿಕೊಂಡು ನಾವಿದ್ದ ಜಾಗದಿಂದ ಕೇರಳದ ಮಾನಂದವಾಡಿಗೆ ಬಂದೆವು.ಒಂದು ಟೈರ್ ಷೋ ರೂಂ ಬಳಿಬಂದು ನಮ್ಮ ಎರಡೂ ಟೈರ್ ಪಂಚರ್ ಕಥೆ ಹೇಳಿದಾಗ ನಮ್ಮನ್ನು ನೀವು ಮನುಷ್ಯರೇ?? ಅನ್ನುವಹಾಗೆ ನೋಡಿ ಅಚ್ಚರಿಪಟ್ಟರು.ಅಲ್ಲಿದ್ದ ಒಬ್ಬರು ಒಂದು ಟೈರ್ ಬಿಚ್ಚಿ ನೋಡಿದರೆ ಒಳಗಿದ್ದ ಟ್ಯೂಬೆ ಮಾಯ !!!ಅವರಿಗೆ ಅಚ್ಚರಿ" ಏನ್ ಸಾರ್ ಇದು ಟ್ಯೂಬು ರವೆ ಆದಂಗೆ ಆಗಿದೆ" ಅಂತಾ ಮಾತಾಡಿ "ಏನ್ ಮಾಡೋದು"?? ಅಂತಾ ನಮ್ಮ ಕಡೆ ನೋಡಿ ಟೈರ್ ನೋಡಿದ್ರೆ ಅದರ ಆಯಸ್ಸೂ ಮುಗಿದೆಹೊಗಿತ್ತು. ಆಗ ವೇಣು" ಹೋಗ್ಲಿ ಹೊಸ ಟೈರ್ ಟ್ಯೂಬು ಸಿಗುತ್ತಾ???" ಅಂತಾ ಕೇಳಿದ್ರೆ ಟೈರ್ ನೋಡಿ "ನಿಮ್ದೂ ಹೊಸ ಅಳತೆಯ ರೇಡಿಯಲ್ ಟೈರು ಇಲ್ಲಿ ಲಭ್ಯವಿಲ್ಲ ,ತಾಳಿ ಬೇರೆಡೆ ವಿಚಾರಿಸುತ್ತೇನೆ "ಅಂತಾ ಹೇಳಿ ಸುಮಾರು ಹತ್ತು ಕಡೆ ಫೋನ್ ಮಾಡಿ ವಿಚಾರಿಸಿ" ಸಾರಿ ಸರ್ ನಿಮಗೆ ಕೇರಳದಲ್ಲಿ ಈಗ ಈ ಹೊಸ ನಮೂನೆ ಟೈರ್ ಟ್ಯೂಬ್ ಸಿಗಲ್ಲಾ ನೀವು ಮೈಸೂರು ಅಥವಾ ಬೆಂಗಳೂರ್ ನಲ್ಲೆ ಪ್ರಯತ್ನಿಸಿ ಅಂದ್ರೂ !!," "ಅದ್ಸರಿಯಪ್ಪಾಈಗೇನು ಮಾಡೋದು"? ಅಂತಾ ಕೈಚೆಲ್ಲಿ ಕುಳಿತಾಗ "ತಾಳಿ ಮತ್ತೊಂದು ಟೈರ್ ನೋಡ್ತೀನಿ" ಅಂತಾ ಹೇಳಿ ಅದನ್ನೂ ಸಹ ಪರೀಕ್ಷಿಸಿ "ಇದನ್ನು ತಾತ್ಕಾಲಿಕವಾಗಿ ರಿಪೇರಿ ಮಾಡ್ತೀನಿ ನಿಧಾನವಾಗಿ ಹೋದ್ರೆ ಮೈಸೂರು ತಲುಪಲು ಆಗುತ್ತೆ" ಅಂತಾ ಹೇಳಿ ಒಂದು ಟೈರ್ ಹಾಗು ಟ್ಯೂಬನ್ನು ಸರಿಪಡಿಸಿಕೊಟ್ಟರು.ನಾವು ವಾಪಸ್ಸು ಬಂದು ಸರಿಯಾಗಿದ್ದ ಟೈರನ್ನು ಕಾರಿಗೆ ಹಾಕಿದ್ವಿ.ಮತ್ತೆ ಕಾರನ್ನು ಡಿ.ಬಿ.ಕುಪ್ಪೆಗೆ ತಂದು ನಿಲ್ಲಿಸಿ ಅರಣ್ಯ ಇಲಾಖೆ ಸಿಬ್ಬಂದಿ ಒದಗಿಸಿದ ಬಾಡಿಗೆಯ ಜೀಪ್ನಲ್ಲಿ ಕಾಡಿನಲ್ಲಿ ಸುತ್ತಾಟ ಮಾಡಿದ್ವಿ .ಹಿಂದೆ ಕೈಮರ ನೋಡಿದ್ದ ನಾವು ಈಗ " ಕುದುರೆ ಸತ್ತ ಹಳ್ಳ "
|
ಸುತ್ತಿನ ಹಳ್ಳ ಕ್ಯಾಂಪ್ |
ಕ್ಯಾಂಪ್ ಕಡೆ ಹೊರಟೆವು ಇದೊಂದು ದಟ್ಟ ಅರಣ್ಯದ ಮಧ್ಯೆ ಇರುವ ಕಾಡು ಕಳ್ಳರ ನಿಗ್ರಹ ಕ್ಯಾಂಪ್ ಆಗಿದೆ. ಹಿಂದೊಮ್ಮೆ ಮಹಾರಾಜರು ಈ ಜಾಗಕ್ಕೆ ಬೇಟೆಗಾಗಿ ಬಂದ ಸಮಯದಲ್ಲಿ ಅವರ ಕುದುರೆ ಮರಣ ಹೊಂದಿದ ಕಾರಣ ಈ ಕ್ಯಾಂಪಿಗೆ " ಕುದುರೆ ಸತ್ತ ಹಳ್ಳ " ಕ್ಯಾಂಪ್ ಎಂದು ನಾಮಕರಣ ಮಾಡಲಾಗಿದೆ.ಇಂತಹ ಕ್ಯಾಂಪ್ಗಳಲ್ಲಿ ಅರಣ್ಯ ಇಲಾಖೆಯ " ಫಾರೆಸ್ಟ್ ವಾಚರ್ಸ್ " ಉಳಿದು ಹಗಲುರಾತ್ರಿ ಕರ್ತವ್ಯ ನಿರ್ವಹಿಸುವ ರೀತಿ ಅಚ್ಚರಿ ಹುಟ್ಟಿಸುತ್ತದೆ. ಈ ಕ್ಯಾಂಪುಗಳಲ್ಲಿ ಕುಡಿಯುವ ನೀರಿನ ಸೌಲಭ್ಯ , ವಿಧ್ಯುತ್ ಬೆಳಕಿನ ಸೌಲಭ್ಯ ಇರುವುದಿಲ್ಲ ,ಕುಡಿಯುವ ನೀರನ್ನು ತರಲು ಹಲವು ಕಿ.ಮಿ.ದೂರ ನಡೆದು ತರಬೇಕು. ರಾತ್ರಿವೇಳೆಕಾಡಿನಲ್ಲಿ ಗಸ್ತು ತಿರುಗುವ ಇವರು ಎತ್ತರದ ಮರ ಏರಿ ಕಾಡಿನಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಹಾಗು ಬೇಟೆಗಾರರ ಬಗ್ಗೆ ವೀಕ್ಷಣೆ ನಡೆಸಿ ಇಲಾಖೆಯ ಅಧಿಕಾರಿಗಳಿಗೆ ವೈರ್ ಲೆಸ್ ಮೂಲಕ ವರಧಿ ನೀಡಬೇಕು. ಕತ್ತಲಲ್ಲಿ ಬೆಳಕು ಹರಿಸದೆ ಅರಣ್ಯ ಕಳ್ಳರ ಚಲನ ವಲನ ಗಳ ಮಾಹಿತಿ ತಿಳಿಯುತ್ತಾರೆ. ಬೆಳಕಿದ್ದಾಗಲೇ ಅರಣ್ಯದಲ್ಲಿ ನೆಟ್ಟಗೆ ನಡೆಯಲಾಗದ ನಾವು ಇವರ ಕಾರ್ಯ ಶ್ಲಾಘಿಸಲೇ ಬೇಕು. ಒಮ್ಮೊಮ್ಮೆ ಇವರು ಕಾಡಿನ ಕಳ್ಳರ ಬಂದೂಕದ ಗುಂಡಿನಿಂದ ಗಾಯಗೊಂಡಿದ್ದು ಉಂಟೆಂದು ತಿಳಿದುಬರುತ್ತದೆ ..ಕಾಡು ಪ್ರಾಣಿಗಳ ಮದ್ಯೆ ಧೈರ್ಯದಿಂದ ಕಾಡು ಗಳ್ಳರ ವಿರುದ್ದ ಪ್ರತಿಕ್ಷಣವೂ ಕಾರ್ಯ ನಿರ್ವಹಣೆ ಮಾಡುತ್ತಿರುವ ಇವರು ಯಾವ ಯೋಧನಿಗೂ ಕಮ್ಮಿ ಇಲ್ಲವೆನ್ನಿಸುತ್ತದೆ. ಪಾಪ ನಮ್ಮ ಸಮಾಜ ಇಂತಹ ಸಿಬ್ಬಂದಿ ಗಳನ್ನೂ ಗುರುತಿಸಲು ವಿಫಲವಾಗಿರುವುದು ವಿಷಾದನೀಯ.ನಾವಿದ್ದಾಗ ಒಮ್ಮೆ ವೈರ್ ಲೆಸ್ ಲಿಂಕ್ ಸಿಕ್ತಿಲ್ಲಾ ಅಂತಾ ಒಬ್ಬರು ರಾತ್ರಿವೇಳೆ ಕಗ್ಗತ್ತಲಿನಲ್ಲಿ ಸರ ಸರನೆ ಎತ್ತರದ ಮರ ಏರಿ ವೈರ್ ಲೆಸ್ ಮೂಲಕ ಯಾವುದೇ ತೊಂದರೆ ಇಲ್ಲವೆಂದು ಮಾಹಿತಿ ನೀಡಿದರು.ಅಚ್ಚರಿಯೆಂದರೆ ಆ ಮರ ಸುಮಾರು ಐನೂರು ಅಡಿಗಳಿಗೂ ಮೀರಿದ ಎತ್ತರ ವಾಗಿತ್ತು. ನಾವು ನೋಡಿದ ಈ ಕ್ಯಾಂಪ್ ಕಾಡಿನ ಮಧ್ಯದಲ್ಲಿದ್ದು ಒಂದು ಹಳೆಯ ಅರ.ಸಿ.ಸಿ ಕಟ್ಟಡ ಹೊಂದಿತ್ತು,[ಕೆಲವು ಕ್ಯಾಂಪ್ ಗಳಲ್ಲಿ ಹರಿದ ಟಾರ್ಪಾಲಿನಿಂದ ಮಾಡಿದ ಶೆಡ್ದೆ ಗತಿ !!]ಅದರ ಸುತ್ತಲು ಆನೆಗಳಿಂದ ರಕ್ಷಣೆ ಪಡೆಯಲು ಹಳ್ಳ ತೆಗೆಯಲಾಗಿತ್ತು. ಸನಿಹದಲ್ಲಿ ""ಮಸಾಲೆ ಬೆಟ್ಟ"" ವಿದ್ದು ಅಲ್ಲಿ ಗಂಧದ ಗುಡಿ ಚಿತ್ರದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿರುವುದಾಗಿ ತಿಳಿದು ಬಂತು.ನಾವು ಸಹ ಅಲ್ಲಲ್ಲಿ ಕೆಲವುಜಾಗಗಳ ಬಗ್ಗೆ ತಿಳಿದುಕೊಂಡೆವು ಅರಣ್ಯ ಸಿಬ್ಬಂದಿ ಪ್ರೀತಿಯಿಂದ ಜಾಗಗಳ ಪರಿಚಯ ಮಾಡಿಕೊಟ್ಟರು.
|
ಯಾರದು..... ? |
ಸನಿಹದಲ್ಲೇ ಮೇಯುತ್ತಿದ್ದ ಕಾಡೆಮ್ಮೆಯ ಚಿತ್ರ ತೆಗೆದು ಅಲ್ಲಿನವರು ಕಾಡು ಪ್ರಾಣಿಗಳ ಬಗ್ಗೆ ತಮ್ಮ ಅನುಭವ ಹೇಳುವುದನ್ನು ಕೇಳಿದೆವು.ನಮ್ಮ ಪಯಣ ಹಾಗೆ ಸಾಗಿತ್ತು ದಾರಿಯಲ್ಲಿ ನಮಗೆ ಜಿಂಕೆಗಳ
|
ಇಲ್ಲಿ ನಮ್ಮದೇ ದರ್ಭಾರ್ |
ಹಾಗು ಲಾಂಗೂರ್ ಗಳ ದರ್ಶನ ಅಲ್ಲಲ್ಲೇ ಆಗುತ್ತಿತ್ತು.ಮುಂದುವರೆದು ಎಂಟನೆ ಮೈಲಿಕಲ್ಲು ಕ್ಯಾಂಪ್ಗೆ ಬಂದೆವು ಈ ಕ್ಯಾಂಪ್ ವಿಶೇಷವೆಂದರೆ
|
anti poaching camp |
ಇದು ಸಂಪೂರ್ಣ ಮರದ ಅಟ್ಟಣಿಗೆ ಸುತ್ತಲೂ ರಮಣೀಯ ಪ್ರದೇಶದಿಂದ ಕೂಡಿದ್ದು
|
ಕ್ಯಾಂಪಿನ ಒಳಗೆ ನಾವೆಲ್ಲಾ |
ಮೇಲೆ ಹತ್ತಿ ನೋಡಿದರೆ ಸುಂದರ ದೃಶ್ಯಾವಳಿಗಳು ಕಾಣುತ್ತದೆ.ಮುಂದೆ ಸಾಗಿದ ನಾವು ಕಾಡಿನ ಮರಗಳ ಬಗ್ಗೆ ಹಲವು ವಿಚಾರಗಳನ್ನು ಅರಿತು ಕೊಂಡೆವು ನಮ್ಮ ಜೊತೆಯಲ್ಲಿದ್ದವರು ಅಲ್ಲೇ ಇದ್ದ ಒಂದು ಮರವನ್ನೂ ನಾವು ನಾಲ್ಕೂ ಜನರೂ ತಬ್ಬಿಕೊಳ್ಳಲು ಹೇಳಿದರು!! ನಾವು ನೋಡಿದ ಮರ ಸಣ್ಣದಾಗಿ ಕಂಡರೂ ನಾವು ನಾಲ್ಕೂ ಜನ ಕೈಗಳಸರಪಣಿ ನಿರ್ಮಿಸಿ ಆ ಮರವನ್ನು ತಬ್ಬಿದರೂ ಪೂರ್ಣ ಮರವನ್ನು ಬಳಸಲು ನಿಮ್ಮಿಂದ ಆಗಲಿಲ್ಲ .ಮತ್ತೊಂದು ಮರವನ್ನು ತೋರಿಸಿದಾಗ ಆ ಮರದಲ್ಲಿ ಗುಹೆಯಂತೆ ಬಾಗಿಲು ಉಂಟಾಗಿರುವುದನ್ನು ನೋಡಲು ಹತ್ತಿರ ಹೋಗಿ ಕ್ಯಾಮರಾ ಮೂಲಕ ಮರದಲ್ಲಿ ಇಣುಕಿ
|
ವಿಸ್ಮಯದ ಮರ |
ನೋಡಿದರೆ ಕಣ್ಣು ಹಾಯಿಸಿದಷ್ಟೂ ದೂರ ಸುರಂಗ ದಂತೆ ಮರದಲ್ಲಿ ಟೊಳ್ಳು ಇತ್ತು. ಹಲವು ಮರಗಳ ಪರಿಚಯ ಮಾಡಿಕೊಂಡು ಧನ್ಯರಾದ ನಾವು ಡಿ.ಬಿ.ಕುಪ್ಪೆಯ ಮಾರ್ಗ ಹಿಡಿದೆವು. ದಾರಿಯ ನಡುವೆ ಸಿಕ್ಕ ಊರಿನಲ್ಲಿ
|
ಕಾಡಿನಲ್ಲಿ ಬದುಕಲು ಬೇಕಾದ ವಿಧ್ಯೆ |
ಒಬ್ಬ ಗಿರಿಜನ ವ್ಯಕ್ತಿ ಬಿದಿರಿನ ಬೊಂಬು ಕಡಿದು ಏನೋ ಮಾಡುತ್ತಿದ್ದರು ಅಚ್ಚರಿಯೆಂದರೆ ಅವರ ಸಮೀಪ ನಿಂತೊಡನೆ ಕಲಾತ್ಮಕವಾಗಿ ಬಿದಿರಿನ ಬೊಂಬಿನ ಅಂದ ಕೆಡದಂತೆ ಪರಿಸರಕ್ಕೆ ಹಾನಿಯಾಗದ ಒಂದು ಕಲಾತ್ಮಕ ಕುಡಿಕೆ ಮಾಡಿಕೊಟ್ಟರು.
|
ಮಾಡುವ ಕೆಲಸವನ್ನು ನಗು ನಗುತ್ತಾ ಮಾಡಿ |
ಇಂತಹ ಕುಡಿಕೆಗಳನ್ನು ಕಾಡಿನ ಕ್ಯಾಂಪ್ ಗಳಲ್ಲಿ ಧಾನ್ಯ ಸಂರಕ್ಷಣೆಗೆ, ನೀರು ಉಪಯೋಗಿಸಲು ಬಳಸುತ್ತಿದ್ದುದು ಜ್ಞಾಪಕಕ್ಕೆ ಬಂದಿತ್ತು. ಆ ವ್ಯಕ್ತಿಯ ನಗು ಮುಖ ಯಾಕೋ ಕಾಣೆ ನನ್ನನ್ನು ಸೆಳೆದು ಬಿಟ್ಟಿತು.ನಿಷ್ಕಲ್ಮಶ ಪ್ರೀತಿಯಿಂದ ಅವರು ನನಗೆ ನೀಡಿದಕಾಣಿಕೆ ಸುಮಾರು ತಿಂಗಳು ನನ್ನ ಜೊತೆಯಲ್ಲಿದ್ದು ಇವರ ಪ್ರೀತಿಯನ್ನು ಜ್ಞಾಪಿಸುತ್ತಿತ್ತು.!!!!!
|
ಕಾನನದ ನಟ್ಟ ನಡುವಿನ ಹಾದಿ |
ಕಾಡಿನ ಸುಂದರ ದೃಶ್ಯಗಳು ಅಂದಿನ ಕನಸಿನಲ್ಲಿ ಪದೇ ಪದೆ ಬಂದ್ದಿದ್ದವು.