ಶಿರಸಿಯ ಒಂದು ನೆಚ್ಚಿನ ವಸತಿ ಗೃಹ |
ನಮಸ್ಕಾರ ಸುಮಾರು ಏಳು ತಿಂಗಳ ನಂತರ ಬಂದಿದ್ದೇನೆ ಕ್ಷಮಿಸಿ, ಅಲ್ಲಾ 2017 ರ ಅಕ್ಟೊಬರ್ 13 ರಂದು ಮೊದಲ ಪ್ರವಾಸದ ಕಂತು ಬರೆದು ಬರ್ತೀನಿ ಕಾಯ್ತಾ ಇರೀ ಅಂತಾ ಹೋದೋನು , ಪತ್ತೇನೆ ಇಲ್ವಲ್ಲಾ ...? ಸ್ವಲ್ಪನಾದರೂ ಜ್ಞಾನ ಬೇಡ್ವಾ ಅಂತಾ ಬಯ್ಕೊಂಡಿರ್ತೀರಿ ಅಂತಾ ಗೊತ್ತು, ನಿಜಾ ನನ್ನ ವೈಯಕ್ತಿಕ ಬದುಕಿನ ಪಯಣದ ಅಡಚಣೆಗಳು, ಜೊತೆಗೆ ಪ್ರವಾಸ ಕಾಲದಲ್ಲಿ ತೆಗೆದಿದ್ದ ಸುಮಾರು ಎಂಟು ಜಿ. ಬಿ . ಯಷ್ಟು ಚಿತ್ರಗಳಿದ್ದ ಮೆಮೊರಿ ಕಾರ್ಡ್ ಕಳುವಾಗಿ ನನ್ನ ಬರಹದ ದಿಕ್ಕನ್ನೇ ಬದಲಾಯಿಸಿ ಬಿಟ್ಟವು. ಇಷ್ಟರ ಜೊತೆಗೆ ನನ್ನ ಸೋಮಾರಿತನ ಸಹ ಸೇರಿಕೊಂಡು ವಿಳಂಭ ಆಯ್ತು. ಇರಲಿ ಇದೆಲ್ಲಾ ಇದ್ದದ್ದೇ ಬನ್ನಿ ಪಯಣ ಮುಂದುವರೆಸೋಣ. ಮೊದಲ ಕಂತಿನ ಲಿಂಕ್ ಇಲ್ಲಿದೆ "ಇತಿಹಾಸದ ಮಡಿಲಲ್ಲಿ ಹೀಗೊಂದು ಪ್ರವಾಸ " ....1 ಬನ್ನಿ ಹೋಗೋಣ ಶಿರಸಿಯತ್ತ ....!
ನಿಮಗೆ ಗೊತ್ತು ಮೊದಲದಿನ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಶಿರಸಿ ತಲುಪಿದ ಪಯಣದ ಬಗ್ಗೆ, ಕಾರ್ ಟೈಯರ್ ಪಂಚರ್ ಆಗಿ ಶಿರಸಿಯಲ್ಲಿ ಉಳಿದದ್ದು , ನಂತರ ? ಎರಡನೇ ದಿನಕ್ಕೆ ಹೋಗೋಣ ಬನ್ನಿ, ಧಣಿದಿದ್ದ ದೇಹಗಳು ವಿಶ್ರಾಂತಿ ಪಡೆದು ಉಲ್ಲಾಸದಿಂದ ಸೊಂದೆಯ ಇತಿಹಾಸ ಸಮ್ಮೇಳನಕ್ಕೆ ತೆರಳಲು ಸಿದ್ದವಾದವು, ಅಂದು ಶನಿವಾರ .
ಶಿರಸಿಯ ಹೆಮ್ಮೆ ಮಾರಿಕಾಂಬಾ ದೇವಾಲಯ. |
ಮುಂಜಾನೆ ಎದ್ದು ಸರ ಸರನೆ ಸಿದ್ದವಾಗಿ , ಬೆಳಗಿನ ಉಪಹಾರ ಮುಗಿಸಿ, ಶಿರಸಿಯ ಆದಿದೇವತೆ ಮಾರಿಕಾಂಬೆಯಾ ದರ್ಶನ ಪಡೆದೆವು, ಶಿರಸಿ ಪರಿಚಯದ ಬಗ್ಗೆ ಈಗಾಗಲೇ ನನ್ನ ಬ್ಲಾಗಿನ ಹಿಂದಿನ ಸಂಚಿಕೆಯಲ್ಲಿ ಬರೆದಿರುವ ಕಾರಣ ಲಿಂಕ್ ೧] ಸಿರ್ಸಿಯ[ ಶಿರಸಿಯ ] ಒಡಲಲ್ಲಿ ನಾನು.. ೨}ಶ್ರೀ ಮಾರಿಕಾಂಬಾ ಪ್ರಸೀದತು ....!!! ೩ ] ಶಿರಸಿಯವರೇ ನಿಮ್ಮ ಊರಿನ ಬಗ್ಗೆ ಹೆಮ್ಮೆ ಪಡಿ . ಗಳಲ್ಲಿ ಬರೆದಿರುವ ಕಾರಣ, ಮತ್ತೊಮ್ಮೆಅದನ್ನೇ ಬರೆದು ನಿಮ್ಮನ್ನು ಬೇಸರಗೊಳಿಸಲಾರೆ. ಜೊತೆಗೆ ಇದ್ದ ದೇವಾಲಯಗಳ ,ದರ್ಶನ ಮಾಡಿ ಇತಿಹಾಸ ಸಮ್ಮೇಳನದತ್ತ ಹೊರಟೆವು. ಮಾರಿಕಾಂಬಾ ದೇವಾಲಯದಿಂದ ಸೋಂದಾ ಜೈನ ಮಠಕ್ಕೆ ತೆರಳಲು ಗೂಗಲ್ ಮ್ಯಾಪ್ ಸಹಾಯ ಕೇಳಿದ್ದೆ ಬಂತು , ಅದು ನಮ್ಮನ್ನು ದಿಕ್ಕು ತಪ್ಪಿಸಿ ಅಲ್ಲಲ್ಲೇ ಸುತ್ತಾಡ ತೊಡಗಿಸಿತು, ಇದರ ಮನೆ ಕಾಯ ಅಂತಾ ಬೈದುಕೊಂಡು ಹೊಟ್ಟೆ ಸೇರಿಕೊಂಡಿದ್ದ ಮುಂಜಾವಿನ ಉಪಹಾರದ ಪ್ರಭಾವವೋ ಅನ್ನುವಂತೆ ಜಡ್ಡುಗಟ್ಟಿದ್ದ ನಮ್ಮ ಬುದ್ದಿಯನ್ನು ಸ್ವಲ್ಪ ಹಾದಿಗೆ ತಂದು ಅಲ್ಲಿ ಇಲ್ಲಿ ಜನರನ್ನು ಕೇಳಿ ಸರಿಯಾದ ಹಾದಿಯಲ್ಲಿ ಸಾಗಿ ಇತಿಹಾಸ ಸಮ್ಮೇಳನ ನಡೆಯುವ ಜಾಗವನ್ನು ತಲುಪಿದೆವು. ಅದೇ ಐತಿಹಾಸಿಕ ಸ್ವಾದಿ ಜೈನ ಕ್ಷೇತ್ರ .
ಶಿರಸಿಯ ಇತಿಹಾಸ ಸಮ್ಮೇಳನಕ್ಕೆ ಸಜ್ಜಾಗಿ ನಿಂತಿತ್ತು ಸ್ವಾದಿ ಕ್ಷೇತ್ರ. ಎಲ್ಲೆಲ್ಲೂ ಸಡಗರದ ಜನರ ದರ್ಶನ , ಈ ಇತಿಹಾಸ ಸಮ್ಮೇಳನದ ಹಿಂದೆ ಒಬ್ಬ ಅದ್ಭುತ ವ್ಯಕ್ತಿಯ ಸಾಹಸ ಕಾಣುತ್ತಿತು ಅವರೇ ಶ್ರೀಯುತ ಲಕ್ಷ್ಮೀಶ್ ಹೆಗ್ಡೆ ಸೋಂದ ಅವರನ್ನು ನಾನು ಉತ್ತರಕನ್ನಡದ ಬೆಂಜಮಿನ್ ರೈಸ್ ಎಂದು ಕರೆಯುತ್ತೇನೆ. ಇವರಿಗೆ ಇತಿಹಾಸವೆಂದರೆ ಬಹಳ ಪ್ರೀತಿ, ಅವರ ಪರಿಚಯ ಈ ಹಿಂದೆ ನನ್ನ ಬ್ಲಾಗಿನಲ್ಲಿ ಮಾಡಿದ್ದೇನೆ ಅದರ ಲಿಂಕ್ ಇಲ್ಲಿದೆ "ಶಿರಸಿಯಲ್ಲೊಬ್ಬ ಆಧುನಿಕ ಬಿ.ಎಲ್. ರೈಸ್..................! ಸದ್ದಿಲ್ಲದೇ ಇತಿಹಾಸದ ಬೆನ್ನು ಹತ್ತಿದ ಸಾಹಸಿ." ಇಂತಹ ವ್ಯಕ್ತಿತ್ವದ ಲಕ್ಷ್ಮೀಶ್ ಹೆಗ್ಡೆ ಸೋಂದ ರವರು ತಮ್ಮ ಇತಿಹಾಸದ ಪ್ರೀತಿಯನ್ನು ಶಿರಸಿ ತಾಲೂಕಿನ ಹಲವಾರು ಮಹನೀಯರಿಗೆ ಹಂಚಿರುವ ಕಾರಣ ಇಂದಿಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಶಿರಸಿ ಇತಿಹಾಸ ಸಮ್ಮೇಳನ ರಾಜ್ಯ ಮಟ್ಟದಲ್ಲಿ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಪ್ರತೀ ಇತಿಹಾಸ ಸಮ್ಮೇಳನದಲ್ಲಿ ಬಹಳಷ್ಟು ಜನರು ಇದು ತಮ್ಮದೇ ಮನೆಯ ಹೆಮ್ಮೆಯ ಹಬ್ಬ ಅನ್ನುವಂತೆ ಪಾಲ್ಗೊಂಡು ಇತಿಹಾಸಕ್ಕೆ ತಮ್ಮ ಕಾಣಿಕೆ ಸಮರ್ಪಣೆ ಮಾಡುತ್ತಿದ್ದಾರೆ. ಅಂದೂ ಸಹ ಸೋಂದೆ ಸುತ್ತ ಮುತ್ತಲಿನ ಮನೆಗಳಲ್ಲಿ ಇತಿಹಾಸದ ದೀಪಗಳು ಬೆಳಗುತ್ತಿದ್ದವು, ಇತಿಹಾಸ ಪ್ರಿಯರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದವು.
ಸ್ವಾದಿ ಜೈನ ಸಂಸ್ಥಾನದ ಸ್ವಸ್ತಿ ಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯವರ್ಯರು ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ ಸಂದರ್ಭ |
ಇತಿಹಾಸ ಸಮ್ಮೇಳನ ನಡೆಯುವ ಸ್ವಾದಿ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ ಸ್ವಾದಿ ನೆಲದಲ್ಲಿ ಜೈನ ಪರಂಪರೆ ಸುಮಾರು 2 ಅಥವಾ 3 ನೆ ಶತಮಾನದಿಂದ ಅಸ್ತಿತ್ವ ಕಂಡಿದೆ. ಪ್ರಶಾಂತವಾದ ಈ ಪರಿಸರದಲ್ಲಿ ಶಾಲ್ಮಲೆಯ ಒಡಲಿನಲ್ಲಿ ತಪಸ್ಸು ಮಾಡಲು ಜೈನ ಮುನಿಗಳು ಇಲ್ಲಿಗೆ ಆಗಮಿಸಿದ್ದಾರೆ. ಕಾಲಾನಂತರ ಇಲ್ಲಿ ಜೈನ ಸಂಸ್ಥಾನ ಮಠ ಅಸ್ತಿತ್ವಕ್ಕೆ ಬಂದಿದೆ . ಈ ಮಠವನ್ನು ಭಟ್ಟಾ ಕಲಂಕಮಠ ವೆಂದು ಕರೆಯಲಾಗುತ್ತಿದೆ. ಇಲ್ಲಿ ಎಂಟನೆ ತೀರ್ಥಂಕರ ರಾದ ಚಂದ್ರಪ್ರಭ ರ ಬಸ್ತಿ ಇದೆ. ಇಲ್ಲಿ ದೊರೆತಿರುವ ತಾಮ್ರ ಶಾಸನಗಳು "ಸ್ವಾದಿ ಭಟ್ಟಾ ಕಲಂಕಮಠ" ಪ್ರಾಚೀನ ಸಾಲಿಗೆ ಸೇರಿದ್ದಾಗಿ ಮಾಹಿತಿ ನೀಡಿವೆ. ಸನಿಹದ ಅರಣ್ಯ ಪ್ರದೇಶದಲ್ಲಿ 1655 ರ ಒಂದು ನಿಶಿದಿ ಕಲ್ಲು ದೊರೆತಿದ್ದು ಅದರಲ್ಲಿ ನ ಶಾಸನದಲ್ಲಿ "ಅಕಳಂಕದೇವ" ಎಂಬ ಉಲ್ಲೇಖ ಕಂಡು ಬಂದಿದೆ. ಈ ಪ್ರದೇಶದಲ್ಲಿ ಕನ್ನಡ ವ್ಯಾಕರಣ ಪಾಂಡಿತ್ಯ ಪಡೆದಿದ್ದ ಜೈನ "ಪಂಡಿತ ಭಟ್ಟಾಕಳಂಕ" ರು ಸಾಧನೆ ಮಾಡಿದ ಪ್ರದೇಶ ಈ ಸ್ವಾದಿ . ಇಲ್ಲಿ ಹಲವಾರು ಶಾಸನಗಳು ಕಂಡು ಬಂದಿದ್ದು ಅವುಗಳ ಕೆಲವು ಮಾಹಿತಿಯನ್ನು ಬ್ರಿಟೀಶ್ ಅಧಿಕಾರಿಗಳು ಕಲ್ಕತ್ತಾ ಗೆ ಕಳುಹಿಸಿದ್ದಾಗಿ ಡಾಕ್ಟರ್ ಫ್ರಾನ್ಸಿಸ್ ಬುಕನನ್ ತನ್ನ ಪ್ರವಾಸದ ವರದಿಯಲ್ಲಿ ದಾಖಲೆ ಮಾಡಿದ್ದಾರೆ. ಈ ಸ್ಥಳ ದಿಗಂಬರ ಜೈನರು ಹಾಗು ಶ್ವೇತಾಂಬರ ಜೈನರು ಇಬ್ಬರಿಗೂ ಪುಣ್ಯ ಕ್ಷೇತ್ರವಾಗಿದೆ. ಹಾಲಿ ಸ್ವಾದಿ ಜೈನ ಸಂಸ್ಥಾನದ ಸ್ವಸ್ತಿ ಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯವರ್ಯರು ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಕನ್ನಡ ನಾಡಿನ ಹೆಮ್ಮೆಯ ಪ್ರದೇಶವನ್ನಾಗಿ ಮಾಡುತ್ತಿದ್ದಾರೆ. ಮೊದಲು ಬಹಳ ಶಿಥಿಲಾವಾಸ್ಥೆ ಯಲ್ಲಿದ್ದ ಬಸ್ತಿಗಳು, ಪೂಜಾ ಸ್ಥಳಗಳು, ಇಂದು ದುರಸ್ಥಿ ಯಾಗಿ, ಜೈನ ಪರಂಪರೆಯನ್ನು ಮೆರೆಸುತ್ತಿವೆ.
ಪುರಾತನ ಗಜಕೆಸರಿ ಪೀಠ |
"ಸ್ವಾದಿ ಭಟ್ಟಾ ಕಲಂಕಮಠ" ದಲ್ಲಿ ಪುರಾತನವಾದ ಗಜಕೆಸರಿ ಪೀಠ ಇಲ್ಲಿನ ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ಇಂತಹ ಪ್ರದೇಶದಲ್ಲಿ ಇತಿಹಾಸ ಸಮ್ಮೇಳನ ನಡೆಸಲು ಹುಮ್ಮಸ್ಸಿನಿಂದ ತಯಾರಾಗಿದ್ದರು ಶಿರಸಿಯ ಇತಿಹಾಸ ಪ್ರಿಯ ಮಹನೀಯರುಗಳು, ಇವರಿಗೆ ಬೆನ್ನೆಲುಬಾಗಿ ನಿಂತವರು "ಸ್ವಾದಿ ಭಟ್ಟಾ ಕಲಂಕಮಠ", "ಸೋಂದ ಸ್ವರ್ಣವಲ್ಲಿ ಮಹಾ ಸಂಸ್ಥಾನ ಮಠ" ಹಾಗು "ಸೋಂದೆ ವಾಧಿರಾಜ ಮಠ" ದ ಮಹಾ ಸ್ವಾಮಿಗಳು. ನಿಜಾ ಎಲ್ಲೆಲ್ಲೂ ತಮ್ಮ ಧರ್ಮವೇ ದೊಡ್ಡದು ಎನ್ನುವ ಮಾತುಬರುತ್ತಿರಲು, ಇಲ್ಲಿ ಮೂರು ಮಠಗಳ ಗುರು ಶ್ರೇಷ್ಟರು ಒಟ್ಟಿಗೆ ನಿಂತು ಪರಸ್ಪರ ಗೌರವ, ಪ್ರೀತಿ ವಿಶ್ವಾಸ ತೋರುತ್ತಾ , ಇತಿಹಾಸ ಸಮ್ಮೇಳನಕ್ಕೆ ಆಗಮಿಸಿದ ಇತಿಹಾಸ ಪ್ರಿಯರಿಗೆ ಎಲ್ಲಾ ರೀತಿಯ ಸೌಕರ್ಯ ನೀಡಿ ಎಲ್ಲರ ಮನದಲ್ಲಿ ಹಸಿರಾಗಿ ನಿಂತರು,
ಜೈನ ಮಠದಲ್ಲಿರುವ ಅಪರೂಪದ ಕಲಾಕೃತಿ. |
ಇಂತಹ ಶುಭ ವಾತಾವರಣದಲ್ಲಿ ಇತಿಹಾಸ ಸಮ್ಮೇಳನ ತನ್ನ ಹಿರಿಮೆಯನ್ನು ಸಾರಲು ಹೊರಟಿತ್ತು. ಶಿರಸಿ ತಾಲೂಕಿನ ಜನ ಬಂದ ಇತಿಹಾಸ ಪ್ರಿಯರಿಗೆ ನಗು ಮುಖದ ಸ್ವಾಗತ ನೀಡಿ ಸತ್ಕಾರ ಮಾಡಲು ಅಣಿಯಾಗುತ್ತಿದ್ದರು. ಸಹೋದರಿ ರೇಖಾ ರಾಣಿ ಯೊಡನೆ ನಾನು ಇತಿಹಾಸ ಸಮ್ಮೇಳನ ನಡೆಯುವ ಪುಣ್ಯ ಸ್ಥಳಕ್ಕೆ ಆಗಮಿಸಿದ್ದೆ. ನೋಡಿದ್ರೆ ಹೆಚ್ಚು ಜನ ಕಾಣಿಸಲಿಲ್ಲ , ಅರೆ ಇದೇನು ದೇವ್ರೇ ...! ಈ ಪ್ರದೇಶಕ್ಕೆ ಬಂದು ಇತಿಹಾಸ ಸಮ್ಮೇಳನ ಮಾಡಲು ಹೊರಟಿದ್ದಾರಲ್ಲಾ ಇಲ್ಲಿಗೆ ಜನ ಬರ್ತಾರಾ ..? ಎಷ್ಟುಜನಕ್ಕೆ ಈ ಪ್ರದೇಶಕ್ಕೆ ಬರೋಕೆ ಗೊತ್ತಾಗುತ್ತೆ...? ನಮ್ಮ ಕೆಂಗೇರಿ ಚಕ್ರಪಾಣಿಯವರ ತಂಡ ಇನ್ನೂ ಯಾಕೆ ಬರಲಿಲ್ಲ ..? ಛಾಯಾಚಿತ್ರ ಪ್ರದರ್ಶನ ಮಾಡಬೇಕು ಹೆಗಪ್ಪಾ ಮಾಡ್ತಾರೆ ..? ಎನ್ನುವ ಪ್ರಶ್ನೆಗಳ ಚಕ್ರವ್ಯೂಹದಲ್ಲಿ ಸಿಲುಕಿ ಮಿಸುಕಾಡುತ್ತಿದ್ದೆ. ದೂರದಲ್ಲೆಲ್ಲೋ ಮಂತ್ರಗಳ ಘೋಷಣೆ ತೇಲಿಬರುತ್ತಿತ್ತು ಆದರೆ ಎಲ್ಲಕ್ಕೂ ಉತ್ತರ .....?
{ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ. }
{ದಯವಿಟ್ಟು ಗಮನಿಸಿ. ಈ ಸಂಚಿಕೆಯಲ್ಲಿನ ಲಿಂಕ್ ಗಳನ್ನು ಓಪನ್ ಮಾಡಿ ಅದರಲ್ಲಿನ ಮಾಹಿತಿಯನ್ನು ಓದಿದರೆ ಇಲ್ಲಿನ ಬರವಣಿಗೆ ನಿಮಗೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ. }