ಶಿರಸಿಯ ಮಾರಿಕಾಂಬ ದೇಗುಲ |
ಅದ್ಯಾಕೋ ಗೊತ್ತಿಲ್ಲ ಶಿರಸಿಗೂ ನನಗೂ ಬಿಡಲಾರದ ನಂಟು........!, ಬಾಲ್ಯದಿಂದಲೂ ನನ್ನ ಕುಟುಂಬದ ಹಲವರು ಈ ಊರಿನಲ್ಲಿ ನೆಲೆಸಿದ್ದರೂ ಯಾವಾಗಲೋ ಅಪರೂಪಕ್ಕೆ ಒಮ್ಮೆ ಬಂದು ಹೋಗುತ್ತಿದ್ದೆ , ನಂತರ ಹೆಮ್ಮೆಯ ಬ್ಲಾಗಿಗರಾದ [ ಸಾಗರದಾಚೆಯ ಇಂಚರ ] ಗುರುಮೂರ್ತಿ ಹೆಗ್ಡೆ ಯವರ ಆಹ್ವಾನದ ಮೇರೆಗೆನಾಲ್ಕು ವರ್ಷಗಳ ಹಿಂದೆ ಶಿರಸಿಗೆ ಮೂವತೈದು ವರ್ಷಗಳ ನಂತರ ಭೇಟಿ ಅಲ್ಲಿಂದ ಬಿಡಲಾರದ ನಂಟು ಈ ಊರಿನ ಜೊತೆಗೆ. ಅಂತೆಯೇ ಶಿರಸಿ ಇತಿಹಾಸದ ಖಣಜ ಅಥವಾ ಶಿರಸಿಯ ಬೆಂಜಮಿನ್ ರೈಸ್ ಶ್ರೀ ಲಕ್ಷ್ಮೀಶ್ ಹೆಗ್ಡೆ ಯವರ ಪರಿಚಯ , ಆತ್ಮೀಯತೆ ಬೆಳೆದು ಇತಿಹಾಸದ ಬಗ್ಗೆ ಇಬ್ಬರಿಗೂ ಇರುವ ಸೆಳೆತ ಗೆಳೆತನ ಮತ್ತಷ್ಟು ಬಲವಾಯ್ತು. ಹೀಗಿರಲು ಕೆಲವು ವಾರಗಳ ಹಿಂದೆ ಮೊಬೈಲ್ ಕರೆ ಮಾಡಿ "ಬಾಲಣ್ಣ ನಿಮ್ಮನ್ನು ಅಂದ್ರೆ ನಿಮ್ಮ ಹೆಸರನ್ನು ಸೋಂದೆ ಇತಿಹಾಸ ಸಮ್ಮೇಳನದಲ್ಲಿ ಒಂದು ಗೋಷ್ಠಿಯಲ್ಲಿ ಭಾಗವಹಿಸಲು ಹಾಕುತ್ತೇನೆ" ಅಂತಾ ಹೇಳಿ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕೆ ಬಿಟ್ರು , ಜೊತೆಗೆ ನನ್ನ ಹೆಸರಿನ ಜೊತೆಗೆ "ಇತಿಹಾಸ ಚಿಂತಕ " ಅನ್ನೋ ಬಿರುದನ್ನೂ ಸಹ ದಯಪಾಲಿಸಿ ಬಿಟ್ರೂ , ....ಎಷ್ಟೇ ಆದರೂ ನರಮನ್ಷಾ ಆಲ್ವಾ ಮನಸು ಜಂಬದಿಂದ ಉಬ್ಬಿತು, ಹೆಂಡ್ತೀ ಹತ್ರಾ ಜಂಬಾ ಕೊಚ್ಚಿ ಕೊಳ್ಳೋಕೆ ತಯಾರಾಗುತ್ತಿದ್ದೆ , ಆದ್ರೆ ಮತ್ತೊಂದು ಯೋಚನೆ ಈ ಉಬ್ಬುವಿಕೆಯನ್ನು ಪಂಚರ್ ಮಾಡಿಬಿಡ್ತೂ .....! "ಅಲ್ಲಾ ಕಣೋ ಮೂರ್ಖಶಿಖಾಮಣಿ ಇತಿಹಾಸ ಚಿಂತಕ ಅನ್ನೋ ಬಿರುದು ಹೊತ್ತು ಮೆರೆಯಬೇಡ ಅತಿಯಾದ ಜಂಭ ಒಳ್ಳೆಯದಲ್ಲಾ , ಮೊದ್ಲು ಮಾತನಾಡ ಬೇಕಾದ ವಿಚಾರದ ಬಗ್ಗೆ ಸಿದ್ದತೆ ಮಾಡಿಕೊ" ಅಂದಿತು, ಹ್ಯಾಪ ಮೊರೆ ಹಾಕಿಕೊಂಡು ಇತಿಹಾಸ ಸಮ್ಮೇಳನದಲ್ಲಿ ನನಗೆ ಮೊದಲೇ ನಿಗದಿಪಡಿಸಿದ್ದ "ಐತಿಹಾಸಿಕ ಪ್ರವಾಸದಲ್ಲಿ ಯೋಚನೆ ಹಾಗು ಯೋಜನೆ" ವಿಚಾರದ ಬಗ್ಗೆ ನನ್ನ ಪ್ರಬಂಧ ತಯಾರಿಗೆ ಪ್ರಾರಂಭಿಸಿದೆ. ಸೋಮಾರೀತನ, ಅಸಡ್ಡೆ , ಎಲ್ಲದರಿಂದ ದಿನಗಳು ಕಳೆದದ್ದು ಗೊತ್ತಾಗಲಿಲ್ಲ, ಅಂತೂ ಇಂತೂ ಕೊನೆಗೂ ನನ್ನ ಪ್ರಬಂಧ ಸಿದ್ದವಾಯ್ತು . ಹೊರಡೋ ದಿನ ಬಂದು ಬಿಡ್ತು.
ಪ್ರೀತಿಯ ಸಹೋದರಿ ರೇಖಾ ರಾಣಿ |
"ಅಣ್ಣಾ ನನಗೂ ಸ್ವಲ್ಪ ಬದಲಾವಣೆ ಬೇಕೂ..... ಸರಿಯಾಗಿ ಎಷ್ಟು ದಿನಾ ಪ್ರವಾಸ ಅಂತಾ ಹೇಳಿ...? ನನ್ನ ಕೆಲಸಗಳನ್ನು ಮುಂದೂಡಿ ನಾನೂ ಬರ್ತೇನೆ ," ಅಂತಾ ಬೆಂಗಳೂರಿಂದ ಸಹೋದರಿ ರೇಖಾ ರಾಣಿ ನನ್ನ ಪ್ರೀತಿಯ ಆಹ್ವಾನಕ್ಕೆ ಒಪ್ಪಿದರು. ನನಗೋ ಒಮ್ಮೆಲೇ ಖುಷಿ ಮತ್ತೊಂದು ಕಡೆ ಸ್ವಲ್ಪ ಆತಂಕ. ಕಳೆದ ಕೆಲವು ವರ್ಷಗಳಿಂದ ಪುಟ್ಟ ಜಗಳದಿಂದ ಫೇಸ್ಬುಕ್ ನಲ್ಲಿ ಪರಿಚಯವಾದ ಅದ್ಭತ ಸಹೋದರಿ ಇವರು. ನಂತರ ಒಂದೆರಡು ಸಾರಿ ಅವರ ಭೇಟಿಮಾಡಿದ್ದೆ , ಪತ್ರಿಕಾರಂಗ [ ಲಂಕೇಶ್ ಬದುಕಿದ್ದಾಗ ಲಂಕೇಶ್ ಪತ್ರಿಯಲ್ಲಿ ವರದಿ ಹಾಗು ಅಂಕಣ ಬರೆಯುತ್ತಾ ಇದ್ದರು ], ಚಲನಚಿತ್ರ ರಂಗ, ಕಿರುತೆರೆ ಎಲ್ಲಾಕಡೆ ಅಪಾರ ಸಾಧನೆ ಮಾಡಿದ ಇವರನ್ನು ಹೇಗಪ್ಪಾ ಈ ಪ್ರವಾಸಕ್ಕೆ ಕರೆದುಕೊಂಡು ಹೋಗೋದು ಅನ್ನೋ ಆತಂಕವನ್ನು ಅವರೇ ದೂರ ಮಾಡಿ "ಅಣ್ಣಾ ನನ್ನ ಬಗ್ಗೆ ಏನು ಯೋಚನೆ ಮಾಡಬೇಡಿ " , "ನನಗೆ ಎಲ್ಲಾ ತರಹದ ಪ್ರವಾಸದ ಅನುಭವ ಆಗಿದೆ ಅದಕ್ಕೆ ಹೊಂದಿಕೊಳ್ಳುತ್ತೇನೆ" "ನಾನು ಪ್ರವಾಸಕ್ಕೆ ಬರುತ್ತೇನೆ " ಅಂದ ತಕ್ಷಣ ನೆಮ್ಮದಿಯ ಉಸಿರು ಬಿಟ್ಟೆ . ಹೊರಡುವ ಹಿಂದಿನ ದಿನ ಅಣ್ಣಾ ನಾನು ರೆಡಿ ಅಂತಾ ಸಿದ್ದವಾಗೆ ಬಿಟ್ರೂ ...!
ಬೆಂಗಳೂರಿನ ಮಳೆ [ ಸಾಂದರ್ಬಿಕ ಚಿತ್ರ ಗೂಗಲ್ ಕೃಪೆಯಿಂದ ] |
ಮೈಸೂರಿನ ಪ್ರೀತಿಯ ತಮ್ಮ ನವೀನನ ಕಾರಿನಲ್ಲಿ ಜೈ ಅಂತಾ ಬೆಂಗಳೂರಿನತ್ತಾ ಹೊರಟೇಬಿಟ್ಟೆ, ಮದ್ದೂರಿನ ಸಮೀಪ ಇದ್ದಾಗ "ಅಣ್ಣಾ ಮಳೆಯಿದೆ ಹೇಗೆ ಬರ್ತೀರಾ ....? " ಅಂತಾ ಅಕ್ಕನಿಂದ ಕರೆ , ಅದಕ್ಕೆ ಪರಿಹಾರವನ್ನೂ ಸಹ ಅವರೇ ಹೇಳಿ "ಅಣ್ಣಾ ನೈಸ್ ರೋಡ್ನಲ್ಲಿ ಬನ್ನಿ ಕನಕಪುರ ಜಂಕ್ಷನ್ ನಲ್ಲಿ ನಿಮಗೆ ಸಿಗ್ತೇನೆ" ಅಂದರು . ಸರಿಯೆಂದು ಪಯಣ ಮುಂದು ವರೆಸಿದೆ, ದಾರಿಯಲ್ಲಿ ಸಿಕ್ಕ ಇಂದ್ರಪ್ರಸ್ಥ ಹೋಟೆಲ್ ನಲ್ಲಿ ಹೊಟ್ಟೆಗೆ ಉಪಹಾರ ಸ್ವಾಹಾ ಮಾಡಿಸಿ , ನೈಸ್ ರಸ್ತೆಯಲ್ಲಿ ಹೇಳಿದ್ದ ಜಾಗದಲ್ಲಿ ನಿಂತೇ ಸ್ವಲ್ಪ ಸಮಯದಲ್ಲೇ ಸಹೋದರಿಯ ಆಗಮನವಾಯ್ತು. ಇತಿಹಾಸ ದಿಬ್ಬಣದ ಪಯಣ ಆರಂಭವಾಯಿತು. ಯಾವ ಮಾರ್ಗ ಅನ್ನೋ ಚರ್ಚೆ ನಡೆದು ಅಂತಿಮವಾಗಿ ಶಿವಮೊಗ್ಗ ಮೂಲಕ ಹೋಗುವ ತೀರ್ಮಾನವಾಯಿತು. ಈ ಹಂತದಲ್ಲೇ ಪಯಣದಲ್ಲಿ ಒಮ್ಮತ ಮೂಡಿತು. ಬೆಂಗಳೂರಿನಿಂದ ನೆಲಮಂಗಲ, ತುಮಕೂರು ರಿಂಗ್ ರೋಡ್, ಗುಬ್ಬಿ, ತಿಪಟೂರು ದಾಟಿ ಸ್ವಲ್ಪ ಮುಂದೆ ಬಂದ್ವಿ ಅಷ್ಟೇ.......!
ಕೈಬೀಸಿ ಕರೆದ ಕಾಫೀ ಡೇ{ ಸಾಂದರ್ಭಿಕ ಚಿತ್ರ ಕೃಪೆ ಗೂಗಲ್ } |
ಅರಸೀಕೆರೆ ತಾಲೂಕಿನ ಕಲ್ಲನಾಯಕನಹಳ್ಳಿಯಲ್ಲಿ ಕೈ ಬೀಸಿ ಕರೆಯಿತು "ಕಾಫಿ ಡೇ " ಪ್ರೀತಿಯ ಅಕ್ಕ ಮೊದಲ ಟ್ರೀಟ್ ಕೊಡ್ಸೆ ಬಿಟ್ರೂ ಇಲ್ಲಿ , ಸ್ವಲ್ಪ ವಿಶ್ರಾಂತಿ ಪಡೆದು ಅರಸೀಕೆರೆ , ಕಡೂರು ದಾಟಿ ಬೀರೂರು ಬಂದ ತಕ್ಷಣ ಪ್ರೀತಿ ಟಿಫಾನಿಸ್ ನಲ್ಲಿ ದೋಸೆ ತಿನ್ನೋ ಆಸೆಯಾಗಿ ಹೋಟೆಲ್ ಹತ್ತಿರ ಹೋದ್ರೆ "ನೀವ್ ಬಂದ ಹೊತ್ಗೆಲ್ಲಾ ದೋಸೆ ಕೊಡೋಕೆ ಆಗಲ್ಲಾ ಅಂತಾ ಬೋರ್ಡು ಸಮಯ ತೋರಿಸಿ ಅಣಕಿಸಿ ನಕ್ಕಿತ್ತು ", ಪೆಚ್ಚು ಮೊರೆ ಹಾಕಿಕೊಂಡು ಶಿವಮೊಗ್ಗದ ಮೀನಾಕ್ಷಿ ಭವನ್ ನಲ್ಲಿ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದೆವು. ಪಯಣ ಸಾಗಿತು.ಜೊತೆಗೆ ಪ್ರೀತಿಯ ಸಹೋದರಿ ರೇಖಾ ರಾಣಿ ಪಯಣದ ಹಾದಿಯಲ್ಲಿ ಬೇಸರವಾಗದಂತೆ ಹಲವು ವಿಚಾರಗಳನ್ನು ಹೇಳುತ್ತಾ ಹೋದರು. ಆ ವಿಚಾರಗಳನ್ನು ವಿಶ್ಲೇಷಣೆ ಮಾಡುತ್ತಾ ಇಡೀ ದಿನ ದಾರಿ ಸವೆದದ್ದು ತಿಳಿಯಲಿಲ್ಲ,.
ಬೀರೂರು , ತರಿಕೆರೆ , ಭದ್ರಾವತಿ ದಾಟಿ ಶಿವಮೊಗ್ಗಕ್ಕೆ ಬಂದಾಗ ಮೀನಾಕ್ಷಿ ಹೋಟೆಲ್ ಕೈ ಬೀಸಿ ಕರೆದಿತ್ತು. ಒಳಗಡೆ ಹೋಗಿ ಕುಳಿತೊಡನೆ ಅಲ್ಲಿದ್ದ ಒಂದು ಫಲಕ ಕಣ್ಸೆಳೆಯಿತು "ನಾವು ಸೇವಿಸುವ ಆಹಾರ ಬೆಳೆವ ರೈತನಿಗೆ ಧನ್ಯವಾದ ಹೇಳೋಣ " ಎಂಬ ಬರಹ ನೋಡುತ್ತಾ ಹಸಿವಿನಲ್ಲೂ ರೈತನಿಗೆ ಕೃತಜ್ಞತೆ ಅರ್ಪಿಸಿದೆ. ಅಷ್ಟರಲ್ಲಿ ಅಪವಾದವೆನ್ನುವಂತೆ ಹೋಟೆಲ್ ಮಾಣಿ ಮುಂದೆ ಬಂದು ನಿಂತರು ಊಟಕ್ಕೆ ಹೇಳಿ ಕಾಯುತ್ತಾ ಕುಳಿತೆವು ಅಚ್ಚರಿ ಅಂದ್ರೆ ಹೇಳಿದ ಕೆಲವೇ ನಿಮಿಷಗಳಲ್ಲಿ ಕಣ್ಣ ಮುಂದೆ ಊಟ ಹಾಜರ್....!, ಬಹಳಷ್ಟು ಸಾರಿ ಈ ಹಿಂದೆ ಮೀನಾಕ್ಷಿ ಭವನ್ ಹೋಟೆಲ್ಗೆ ಬಂದಾಗ ಒಳಗೆ ಬಂದು ಕುಳಿತ ಎಷ್ಟೋ ಹೊತ್ತಿಗೆ ಮಾಣಿ ಬಂದು ವಿಚಾರಿಸಿ, ನಮಗೆ ಕೊಡಬೇಕಾದ ತಿಂಡಿ ಕೊಡಲು ಬಹಳ ತಡವಾಗುತ್ತಿತ್ತು, ಇದೆ ವಿಚಾರವನ್ನು ನನ್ನ ಫೇಸ್ಬುಕ್ ನಲ್ಲಿಯೂ ಸಹ ಹಿಂದೆ ಪ್ರಸ್ತಾಪ ಮಾಡಿದ್ದೆ. ಆದರೆ ಈ ಸಾರಿ ಅದಕ್ಕೆ ತದ್ವಿರುದ್ಧವಾಗಿ ಬೇಗನೆ ಆಹಾರ ನೀಡಿ ಹಿಂದಿನ ನನ್ನ ಅನುಭವಗಳು ಸುಳ್ಳು ಅನ್ನೋಹಾಗೆ ಮಾಡಿಬಿಟ್ಟರು. ಊಟ ಮುಗಿಸಿ ಹೊರಗೆ ಬಂದು ಸಾಗರದ ಕಡೆ ತೆರಳಲು ಸಿದ್ದವಾದೆವು, ತಕ್ಷಣ ನೆನಪಾದದ್ದು ಪಪ್ಪಾಯಿ ಖರೀದಿಸುವ ವಿಚಾರ, ಶಿರಸಿಯಲ್ಲಿರುವ ನನ್ನ ನೆಂಟಳಿಗೆ ಪಪ್ಪಾಯಿ ತಂದುಕೊಡುವುದಾಗಿ ಮಾತುಕೊಟ್ಟು , ಕೆಲಸದ ಒತ್ತಡದಲ್ಲಿ ಮರೆತಿದ್ದು ಈಗ ಜ್ಞಾಪಕಕ್ಕೆ ಬಂದಿತ್ತು, ಸರಿ ಶಿವಮೊಗ್ಗ ಪಟ್ಟಣದ ಕಾಲೇಜಿನ ಸಮೀಪ ಒಂದು ಬದಿಯಲ್ಲಿ ಕಾರ್ ನಿಲ್ಲಿಸಿ ಮತ್ತೊಂದು ಬದಿಯಲ್ಲಿದ್ದ ಪಪ್ಪಾಯಿ ಮಾರಾಟಗಾರನ ಹತ್ತಿರ ತೆರಳಿದೆ, "ಆಹಾ ನಿಜಕ್ಕೂ ಶಿವಮೊಗ್ಗದ ರಸ್ತೆಗಳನ್ನು ದಾಟಲು ಭಾರೀ ಧೈರ್ಯ ಬೇಕೂ ಕಣ್ರೀ ," ಡಬಲ್ ರಸ್ತೆ ಇದ್ದರೂ ಸಹ ಹೆಚ್ಚಿನ ದ್ವಿಚಕ್ರ ವಾಹನಗಳು ಅಡ್ಡಾ ದಿಡ್ಡಿ ಯಾಗಿ ಸಂಚಾರಿನಿಯಮಗಳನ್ನು ಅಪಹಾಸ್ಯ ಮಾಡುತ್ತಾ ಬಿರುಸಿನಿಂದ ಓಡಾಡುತ್ತಿದ್ದವು, ಇದ್ದ ಒಂದಿಬ್ಬರು ಪೊಲೀಸರು ಇವೆಲ್ಲವನ್ನೂ ಅಸಹಾಯಕರಾಗಿ ನೋಡುತ್ತಾ ನಿಂತಿದ್ದರು. ರಸ್ತೆ ದಾಟುತ್ತಿದ್ದ ನನಗೆ ಮತ್ತೊಮ್ಮೆ ಚನ್ನರಾಯಪಟ್ಟಣದಲ್ಲಿ ನನಗಾದ ಅಪಘಾತದ ನೆನಪು ಮರುಕಳಿಸಿ ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟಿದೆ, ಅಲ್ಲೇ ಇದ್ದ ಪಪ್ಪಾಯಿ ಮಾರಾಟಗಾರ ಹೇಳಿದ ಬೆಲೆಗೆ ಸ್ವಲ್ಪ "ಬಹಳ ಖುಷಿಯಾಯ್ತು ನಿಮ್ಮ ವ್ಯಾಪಾರ ಚೆನ್ನಾಗಿ ಆಗಲಿ ಅಂದೇ ಅಷ್ಟೇ ......!, ಈ ಮಾತು ಕೇಳಿ ಅವನ ಮನಸಿನಲ್ಲಿ ಏನನ್ನಿಸಿತೋ ಕಾಣೆ " ಸಾರ್ ಬನ್ನಿ ಇಲ್ಲಿ ", "ನಿಮ್ಮ ಪ್ರೀತಿ ನನಗೆ ಬಹಳ ಇಷ್ಟಾ ಆಯ್ತು, ಸಾರ್" ಅಂತಾ ಹೇಳಿ "ಸಾರ್ ಇನ್ನೊಂದು ತಗೋಳಿ" ಅಂತಾ ಮೂರನೆಯ ಪಪ್ಪಾಯಿ ಹಣ್ಣು ಕೊಡಲು ಬಂದಾ ... "ಅಯ್ಯೋ ಬೇಡಪ್ಪಾ ಜಾಗ ಇಲ್ಲಾ ಇಷ್ಟೇ ಸಾಕು", ಅಂದು ಇನ್ನೇನು ಹೊರಡಲು ಅನುವಾದೆ, "ಸಾ ಈ ಸಾಬ್ರೂ ಹಂಗೆಲ್ಲಾ ನಿಮ್ಮನ್ನ ಬಿಡೋದಿಲ್ಲಾ " ಅಂತಾ ಹೇಳಿ ಬೇಡಾ ಬೇಡಾ ಅಂದ್ರೂ ಹತ್ತು ರೂಪಾಯಿ ನೀಡಿ "ನಿಮಗೂ ಒಳ್ಳೆದಾಗಲಿ" ಅಂತಾ ಹಾರಿಸಿದ . ಮನಸು ತುಂಬಿ ಬಂತು. ನಮ್ಮ ಪಯಣ ಸಾಗರದತ್ತ ಸಾಗಿತು.
ತಾಳಗುಪ್ಪದ ಶುಚಿಯಾದ ಒಂದು ಪುಟ್ಟ ಹೋಟೆಲ್ |
ಸಾಗರ ಬಂತಂದ್ರೆ ನೆನಪಾಗೋದು ಜಿತೇಂದ್ರ ಹಿಂಡುಮನೆ ಸಾರ್, ಅವರನ್ನು ಮಾತನಾಡಿಸಿ , ತಾಳಗುಪ್ಪ ಬರೋವಷ್ಟರಲ್ಲಿ ಬಾಯಿ ಚಪಲ ಏನಾದರೂ ಕುಡಿಯಬೇಕೂ ಅನ್ನಿಸಿತು, ಅಲ್ಲೇ ರಸ್ತೆಯಲ್ಲೇ ವಾಹನ ನಿಲ್ಲಿಸಿ ಹೋಟೆಲ್ ಶ್ರೀ ಗುರುಪ್ರಸಾದ್ ಗೆ ತೆರಳಿ ಕಾಫಿ ಗೆ ಆರ್ಡರ್ ಮಾಡಿದ್ವಿ, ಸ್ವಲ್ಪ ಹೊತ್ತಿನಲ್ಲೇ ಹೋಟೆಲ್ ಮಾಲೀಕರು ಕಾಫಿಯೊಂದಿಗೆ ಪ್ರೀತಿಯನ್ನು ಬೆರೆಸಿ ಬಿಸಿಯಾದ ರುಚಿ ರುಚಿಯಾದ ಕಾಫಿ ನೀಡಿದರು, ಸ್ವಲ್ಪ ಹೊತ್ತು ಮಾತನಾಡಿ ಜೊತೆಗೆ ಸ್ವಲ್ಪ ಕೀಟಲೆ ಮಾಡುತ್ತಾ ಹೋಟೆಲ್ ಮಾಲಿಕರೊಂದಿಗೆ ಹರಟೆ ಹೊಡೆದು ಸಿದ್ದಾಪುರ ದಾಟಿ ದೇವಿಸರದತ್ತ ಹೊರಟೆವು, ಸಿದ್ದಾಪುರ ತಾಲೂಕಿನ ದೇವಿಸರ ಗ್ರಾಮ ನನ್ನ ಪ್ರೀತಿಯ ಗೆಳೆಯರಾದ ಪ್ರಕಾಶ್ ಹೆಗ್ಡೆ ಹುಟ್ಟಿದ ಊರು, ಅವರ ಅಣ್ಣ ನಾಗೇಶ್ ಹೆಗ್ಡೆ ನನಗೆ
ನಾಗೇಶಣ್ಣ , ನಮ್ಮಿಬ್ಬರಿಗೂ ಪರಿಚಯವಾದ ದಿನದಿಂದ ಏನೂ ಒಂಥರಾ ಪರಸ್ಪರ ತುಂಟಾಟ ಮಾಡಿಕೊಳ್ಳುವುದು ವಾಡಿಕೆ , ಅಂತೆಯೇ ಸಾಗುವ ಹಾದಿಯಲ್ಲಿನ ಪರಿಸರ ನೋಡಿ ವಿಸ್ಮಯ ಗೊಂಡ ಸಹೋದರಿ ರೇಖಾ ರಾಣಿ ಅಣ್ಣಾ ಬಿಸಿಲು ಬಿದ್ದ ಹಸಿರು ಗುಡ್ಡದ ಫೋಟೋ ತೆಗೆಯಿರೀ ಅಂತಾ ಕೋರಿದರು, ಆದ್ರೆ ಕೈಯಲ್ಲಿ ಕ್ಯಾಮರ ಇಲ್ಲದೆ ಪೆದ್ದುಪೆದ್ದಾಗಿ ಅವರತ್ತಾ ನಗುತ್ತಾ ಏನೂ ವೇದಾಂತ ಹೇಳಿ ತಪ್ಪಿಸಿಕೊಂಡೆ.ಕೆಲವೊಮ್ಮೆ ಪೆದ್ದುತನವೂ ಅನುಕೂಲಕ್ಕೆ ಬರುತ್ತದೆ ಅನ್ನೋ ಸತ್ಯದ ಅರಿವಾಯ್ತು.
ನಮ್ಮ ಪ್ರೀತಿಯ ನಾಗೆಶಣ್ಣನ ತುಂಟಾಟ |
ಸಂಜೆಯ ಮಬ್ಬಿನಲ್ಲಿ "ದೇವಿ ಸರ " ಗ್ರಾಮ ನಮ್ಮನ್ನು ಸ್ವಾಗತಿಸಿತು, ಊರಿಗೆ ಪ್ರವೇಶ ಮಾಡುತ್ತಿದ್ದಂತೆ "ದೇವಿ ಸರದ ವೇಣು ಗೋಪಾಲ" ಮೂರ್ತಿಯನ್ನು ಕಾಣುವ ಬಯಕೆ ಆಗಿತ್ತು ಆದ್ರೆ ಸಮಯದ ಅಭಾವ ಅವಕಾಶ ಕೊಡಲಿಲ್ಲ, ಪ್ರಕಾಶ್ ಹೆಗ್ಡೆ ಮನೆಗೆ ಅಧಿಕಾರಯುತವಾಗಿ "ಯಾರಿದ್ದೀರ ....? ಒಳಗೆ " ಅನ್ನುತ್ತಾ ನುಗ್ಗಿದೆ, "ಬಾಲಣ್ಣ....... ಆರಾಮ" ಅಂತಾ ಹೊರಗೆ ಬಂದ್ರು ಅನ್ನಪೂರ್ಣೆಶ್ವರಿ ಅನಿತಾ ಅತ್ತಿಗೆ, ಸ್ವಲ್ಪ ಹೊತ್ತಿಗೆ ನಾಗೇಶಣ್ಣ ಸಹ ಬಂದು ಜೊತೆಗೂಡಿದರು, ಒಂದಷ್ಟು ತಿಂಡಿಯ ಸಮಾರಾಧನೆ ಸಂಕೊಚ ಬಿಟ್ಟು ತಿಂದು ನಾವೆಲ್ಲಾ ಮನೆಯವರಂತೆ ಆಗಿಬಿಟ್ಟೆವು, ನಾಗೇಶಣ್ಣ ತನ್ನ ಅಪಘಾತದ ಕಥೆ, ಅವರು ಅನುಭವಿಸಿದ ನೋವು , ತೆಗೆದುಕೊಂಡ ಔಷಧಿ , ಚಿಕಿತ್ಸೆ , ಎಲ್ಲವನ್ನೂ ಹಾಸ್ಯವಾಗಿ ಹೇಳುತ್ತಿದ್ದರೂ ಸಹ ಮನದಲ್ಲಿ ನೋವಾಗುತ್ತಿತ್ತು. "ದೇವ್ರೇ ಇವರಿಗೆ ಒಳ್ಳೆ ಆರೋಗ್ಯ ಕೊಡಪ್ಪಾ ಅಂತಾ ಮನದಲ್ಲೇ ದೇವರನ್ನು ಬೇಡಿಕೊಂಡೆ." ಹೊಸದಾಗಿ ಬಂದಿದ್ದ ಸಹೋದರಿ ರೇಖಾ ರಾಣಿಯವರಿಗೆ ಇದೆಲ್ಲಾ ಹೊಸ ಅನುಭವ , ಮನೆಯವರ ಆತಿಥ್ಯ ಕಂಡು ಖುಷಿಯಲ್ಲಿ ಮಿಂದೆದ್ದರು. ನಾಗೇಶಣ್ಣನಿಂದ ರೇಗಿಸಿಕೊಂಡು ತುಂಟಾಟ ಮಾಡುತ್ತಾ ಎಲ್ಲರಿಗೂ ಶುಭ ಕೋರಿ , ಶಿರಸಿಯತ್ತ ಪಯಣ ಬೆಳೆಸಿದೆವು, ನಮ್ಮ ಪಯಣದಲ್ಲಿನ ಹುಚ್ಚಾಟ ಕಂಡ ಕಾರು ಸ್ವಲ್ಪ ಕೋಪ ಮಾಡಿಕೊಂಡಿತೂ ಅಂತಾ ಕಾಣುತ್ತೆ, ಶಿರಸಿಯ ಹತ್ತಿರ ಬರುತಿದ್ದಂತೆ ದಾರಿಯ ನಡುವೆ ಮುಂದಿನ ಬಲ ಚಕ್ರ ಪುಸ್ ಅಂತಾ ಪಂಚರ್ ಆಯಿತು, ತಮ್ಮ ನವೀನ ಬೆಳಗ್ಗಿನಿಂದ ಕಾರು ಚಲಾಯಿಸಿ ಧಣಿವಾಗಿದ್ದರೂ ತೋರಿಸಿಕೊಳ್ಳದೆ ಸರ ಸರನೆ ಬದಲಿ ಚಕ್ರ ಹಾಕಿಕೊಂಡ. ಅಲ್ಲಿಂದ ಮುಂದೆ ನೀಲಕೇಣಿಯಲ್ಲಿ ನ ಒಂದು ಅಂಗಡಿಯಲ್ಲಿ ಪಂಚರ್ ಹಾಕಿಸಿಕೊಂಡ , ಅಷ್ಟರಲ್ಲಿ ಶಿರಸಿಯ ನನ್ನ ಪ್ರೀತಿಯ ತಮ್ಮ ಸಚಿನ್ ಗೆ ಪೋನ್ ಮಾಡಿದ್ದ ಕಾರಣ ಅವರೂ ಸಹ ನಾವಿದ್ದಲ್ಲಿಗೆ ಬಂದರು,
ಶಿರಸಿಯ ಒಂದು ಉತ್ತಮ ವಸತಿ ಗೃಹ [ ಚಿತ್ರ ಕೃಪೆ ಗೂಗಲ್ } |
ಅವರ ಸಹಾಯದಿಂದ ಯಲ್ಲಾಪುರ ರಸ್ತೆಯಲ್ಲಿನ ಮಧುವನ ಹೋಟೆಲ್ ತಲುಪಿದೆವು, ವಾರದ ಕೊನೆಯಾದ ಕಾರಣ ರೂಂ ಸಿಗುವುದು ಕಷ್ಟವಿತ್ತು ಆದರೆ ನಮ್ಮ ಪುಣ್ಯಕ್ಕೆ ರೂಂ ಸಿಕ್ಕಿತು, ಬೆಳಗ್ಗಿನಿಂದ ಬಿಡುವಿಲ್ಲದೆ ವಾಹನ ಚಲಾಯಿಸಿದ್ದ ನನ್ನ ತಮ್ಮ ನವೀನನಿಗೆ ವಿಶ್ರಾಂತಿ ನೀಡಿದ ಸಮಾಧಾನ ಸಿಕ್ಕಿತು, ಸ್ವಲ್ಪ ಹೊತ್ತು ನಮ್ಮಗಳ ಜೊತೆ ಮಾತನಾಡಿದ ಸಚಿನ್ ನಾಳೆ ಸೊಂದೆಗೆ ಬಂದು ಸಿಗುವುದಾಗಿ ತಿಳಿಸಿ ಮನೆಗೆ ತೆರಳಿದರು, ನಾವುಗಳು ಇತ್ತ ನಿದ್ರಾ ದೇವಿಯ ಮಡಿಲಲ್ಲಿ ಪವಡಿಸಿದೆವು, ....! ಮುಂದೆ ....?
{ಸ್ವಲ್ಪ ವಿಶ್ರಾಂತಿ ಪಡೆಯಿರಿ ಎರಡನೇ ಕಂತಿನಲ್ಲಿ ಮತ್ತೆ ಸಿಗೋಣ}
1 comment:
ಸೊಗಸಾದ ಆರಂಭ....ಪ್ರತಿ ವಿವರಗಳು ಸೂಪರ್...ಪಯಣದ ಹಾದಿಯ ಘಟನೆಗಳು ಪೂರಕವಾಗಿವೆ.....
Post a Comment