Sunday, January 1, 2017

ಹೋಗಿಬಾ ..... 2016 ನಿನಗೆ ಶುಭವಾಗಲಿ, ನಿನಗೆ ಬಯ್ಯಬೇಕೋ ಹೊಗಳಬೇಕೋ ತಿಳಿಯುತ್ತಿಲ್ಲ

ಚಿತ್ರ ಕೃಪೆ ಅಂತರ್ಜಾಲ . 


ನಮಸ್ತೆ  ಬಹಳ ತಿಂಗಳ ನಂತರ  ನಿಮ್ಮ  ಮುಂದೆ  ಹಾಜರಾಗಿದ್ದೇನೆ, ಎಲ್ಲರೂ  ಹೊಸ ಕ್ಯಾಲಂಡರ್ ವರ್ಷವನ್ನು ಸ್ವಾಗತಿಸಿ ಖುಷಿಯಿಂದ ಮೆರೆದಾಡುತ್ತಾರೆ. ಆದರೆ  ತಾವು ಕಳೆದ ವರ್ಷದಲ್ಲಿ  ನಡೆದ  ಘಟನೆಗಳನ್ನು ಮೆಲುಕುಹಾಕಿದಾಗ   ಜೀವನ ದರ್ಶನ ಆಗುತ್ತದೆ.  ನನ್ನ    2016  ರ  ವರ್ಷದ  ಪಯಣದ ಮೆಲುಕು  ನಿಜಕ್ಕೂ  ಏನೋ ಹೊಸ  ಸಂದೇಶ ನೀಡಿ , ಜೀವನ ದರ್ಶನ ಮಾಡಿಸಿ  ಹೊರಟು  ಬಿಟ್ಟಿತು. ನಿನ್ನೆ ಹೊಸ ಕ್ಯಾಲಂಡರ್  ವರ್ಷ  ಬರಮಾಡಿಕೊಳ್ಳುವ  ಯಾವುದೇ ಅವಕಾಶ ನೀಡದೆ  ನಿದ್ರಾದೇವಿ  ನನ್ನನ್ನು  ತನ್ನ  ಮಡಿಲಿಗೆ  ಸೇರಿಸಿಕೊಂಡು ಬಿಟ್ಟಳು , ಯಾವುದೋ ಒಂದು ಹೊತ್ತಿನಲ್ಲಿ  ೨೦೧೬ ರ ವರ್ಷ  ನನ್ನ ಮುಂದೆ ಕುಳಿತು  ಅಣಕಿಸಿ ನಗುತ್ತಾ  ಇತ್ತು.  ನಾನು ಬಹಳ ಸಿಟ್ಟಿನಿಂದಾ   "ಅಂತೂ ಕೊನೆಗೂ ತೊಲಗುತ್ತಿದ್ದೀಯಲ್ಲಾ  ..... .......  ತೊಲಗಪ್ಪಾ..... ಸಾಕು ನಿನ್ನ ಸಹವಾಸ " ಅಂದೇ  .  ನಸುನಕ್ಕ   ೨೦೧೬ "ಯಾಕಯ್ಯ  ಅಷ್ಟೊಂದು ಕೋಪಾನಾ ನನ್ನ ಮೇಲೆ......?"  , "ಒಮ್ಮೆ  ಜನವರಿಯಿಂದ  ಡಿಸೆಂಬರ್  ವರೆಗೆ ನಿನ್ನ  ಜೀವನದ  ಘಟನೆಗಳನ್ನು ನೆನಪು ಮಾಡಿಕೊ  ನಂತರ  ಹೇಳು ನಿನ್ನ  ಮಾತನ್ನು"   ಅಂದಿತು, ನಾನು ನೆನಪಿನ ಲೋಕ ಹೊಕ್ಕಿದೆ .





ಜನವರಿ ೨೦೧೬  ಹೊಸ ಕ್ಯಾಲಂಡರ್ ವರ್ಷದ  ಶುಭಾಶಯಗಳ  ಮಹಾಪೂರ ಹರಿದು ಬಂತು , ಹೊಸ ವರ್ಷದ ಮುಂದಿನ ದಿನಗಳನ್ನು  ಸಂತಸವಾಗಿ ಕಳೆಯುವ   ಬಗ್ಗೆ  ಯೋಜನೆ ಹಾಕಿಕೊಳ್ಳಲು  ಮನಸು ಮಾಡಿದ್ದೆ, ಜನವರಿ ೪ ರಂದು  ಅಪ್ಪಳಿಸಿತು    ಹರಿಣಿ ಅಮ್ಮನ   ಮರಣದ  ಸುದ್ಧಿ,  ನಿಜಕ್ಕೂ  ಅಲುಗಾಡಿ ಹೋದೆ, ನಾನು ಬಹಳ ಗೌರವಿಸಿದ್ದ , ನನ್ನ ಬಗ್ಗೆ ಬಹಳ ಪ್ರೀತಿ ತೋರಿದ್ದ  ಒಂದು ಹಿರಿಯ ಜೀವ  ತನ್ನ  ಇಹಯಾತ್ರೆ   ಮುಗಿಸಿತ್ತು, ಬೆಂಗಳೂರಿಗೆ  ಓಡಿಬಂದೆ   ಅಂತಿಮ ದರ್ಶನ ಮಾಡಿದೆ , ಆದರೆ  ಈ ಒಂದು  ಹಿರಿಯ ಜೀವದ  ಸಾವು   ಮನಸಿನ ಮೇಲೆ ಪರಿಣಾಮ  ಬೀರಿತ್ತು, ನೋವನ್ನು ಮರೆಯಲು ಬಹಳ  ದಿನಗಳೇ ಬೇಕಾದವು, ೨೦೧೬  ರ ವರ್ಷದ  ಪಯಣದ ಪ್ರಾರಂಭದಲ್ಲಿ  ಈ ಘಟನೆ  ನೋವಿನ,  ಮುನ್ನುಡಿ  ಬರೆಯಿತು.  ಜನವರಿ ೧೫ ರಂದು   ನನ್ನ ತಂದೆಯವರ ವಾರ್ಷಿಕ  ಕಾರ್ಯಕ್ರಮ ನನ್ನ ಬದುಕಿಗೆ ದಾರಿದೀಪವಾದ  ತಂದೆಯವರ ಸ್ಮರಣೆಗೆ  ಕಾರಣವಾಯ್ತು .  ಜನವರಿ  ೧೭ ರಂದು ಪದ ಕಮ್ಮಟದ  ಕಾರ್ಯಕ್ರಮ ನನ್ನ ಮುಖದಲ್ಲಿ  ಸ್ವಲ್ಪ ನಗು ಬರಲು ಕಾರಣ ಆಯ್ತು.   ಈ ನಡುವೆ ಶ್ರೀಕಾಂತ್ ಮಂಜುನಾಥ್  ಜೊತೆಯಲ್ಲಿ   ಬಿಳಿಗಿರಿಗೆ  ಭೇಟಿ  ಸ್ವಲ್ಪ ಮನಸಿಗೆ ಮುದ ನೀಡಿತ್ತು.
   ಫೆಬ್ರವರಿ ೨೦೧೬  ನನ್ನ ಬದುಕಿನ  ಹಾದಿಯನ್ನು  ಬದಲಿಸಿದ ತಿಂಗಳು . ದಿನಾಂಖ ೧೩ , ಎರಡನೇ ಶನಿವಾರ  ಮಾಡದ  ತಪ್ಪಿಗೆ ಬೆಲೆತೆತ್ತ  ದಿನ,  ನಡೆದುಕೊಂಡು ರಸ್ತೆ ದಾಟುತ್ತಿದ್ದ ನನಗೆ ಬೈಕ್ ನಲ್ಲಿ ಅಪರಿಚಿತ  ಗುದ್ದಿ ಮಾಯವಾದ ದಿನ,  ನಾನು  ಸಾವಿನ  ಬಾಗಿಲನ್ನು   ತಟ್ಟಿದ್ದ  ದಿನ,      ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ ದಾಟುತ್ತಿದ್ದೆ,   .............!!!   ಯಾರೋ ಎಳೆದಂತೆ    ಅನ್ನಿಸಿತು, ಕಣ್ಣು  ಮಸುಕು   ಮಸುಕಾಗಿತ್ತು, ಕೊನೆಗೆ ಏನೂ ಕಾಣದಾಗಿತ್ತು .    ಎಲ್ಲೋ ದೂರದಲ್ಲಿ   ಎತ್ತಿ ಹಾಕ್ರೀ   ಬೇಗ  , ಅನ್ನುತ್ತಾ  ಇರುವ ಮಾತುಗಳು  ಕೇಳಿಸಿತು,    ಸ್ವಲ್ಪ ಹೊತ್ತು, ಯಾವುದೋ ವಾಹನದ ಶಬ್ದ   , ದೇಹವೆಲ್ಲಾ    ಭೂಮಿಯಿಂದ   ಎತ್ತರದಲ್ಲಿ    ಹಾರಾಡುತ್ತಿರುವ ಅನುಭವ,   ಎಲ್ಲೋ  ದೂರದಲ್ಲಿ   ಮಾತೊಂದು   ತೇಲಿಬಂತು  " ಎಲ್ಲೋ   ಕುಡಿದು  ಬಿದ್ದಿರಬೇಕು  ಗುರು"  ಅಂತಾ , ನಾನು ನಿಧಾನವಾಗಿ    "ನಾನು ಕುಡಿಯಲ್ಲಾ "  ಅಂದೇ,  ಮತ್ತೆ ನಿಶ್ಯಬ್ಧ, ಯಾವುದೋ  ಯಂತ್ರದ  ಸಪ್ಪಳ ,  "ಏನ್ರೀ  ಹೆಸರು ನಿಮ್ಮದು?"  ಅಂತಾ ಯಾರೋ  ಕೇಳಿದ ಹಾಗೆ ಆಯ್ತು,     ಒಣಗಿದ  ಬಾಯಿಯಲ್ಲಿ  ಮಾತನಾಡಲು   ಆಗಲಿಲ್ಲ , ಸಣ್ಣಗೆ  ತುಟಿ ಅಲ್ಲಾಡಿಸಿದೆ   ಅಷ್ಟೇ......................!  ದೇಹದಲ್ಲಿನ ಚೇತನ   ಯಾವುದೋ ಲೋಕದೆಡೆಗೆ  ಹಾರುತ್ತಿರುವಂತೆ  ಭಾಸವಾಗಿತ್ತು,   ನೋವಿನ  ಸುಳಿವಿಲ್ಲಾ,  ಮನಸು   ಹಗುರವಾದ   ಅನುಭವ,  ಯಾವ ಮಾತುಗಳು ಕೆಳುತ್ತಿಲ್ಲಾ ,  ಹಾಗೆ ನಿದ್ದೆ ಹೋದ ಅನುಭವ .   ಆಮೇಲೆ   ಕಣ್ ತೆರೆದಾಗ   ಸುತ್ತಲೂ    ಬಿಳಿ   ಬಣ್ಣದ ಪರದೆಗಳ   ದರ್ಶನ,   ಏನೋ ಸಪ್ಪಳ ಕೇಳುತ್ತಿತ್ತು,  ಕಣ್ಣು ಬಿಟ್ಟರೆ   ಕಂಡಿದ್ದು,  ನನ್ನ ತಾಯಿ ಹಾಗು ಪತ್ನಿ ಯ ಭಯಗೊಂಡ  ಮುಖಗಳು, ಅರೆ ಇಲ್ಯಾಕೆ ಬಂದ್ರು ಇವರು  ಅಂತಾ   ಎದ್ದೇಳಲು  ಪ್ರಯತ್ನಿಸಿದೆ , ಊ   ಹೂ    ಆಗಲಿಲ್ಲ, ಎಡಗಣ್ಣು ಮಾತ್ರ ಕಾಣುತ್ತಿತ್ತು,   ಬಲ ಕಣ್ಣಿನ ಮೇಲೆ ಬ್ಯಾಂಡೇಜ್  ಕಟ್ಟಿದ್ದರು,  ಯಾಕೋ ಮೈಎಲ್ಲಾ   ನೋವಾದ ಅನುಭವ ,  ಡ್ರಿಪ್ಸ್   ಹಾಕಿದ್ದರು , ಪ್ಲಾಸ್ಟಿಕ್   ನಾಳದಿಂದ  ಔಷಧಿ ಹನಿ ಹನಿಯಾಗಿ ದೇಹ ಸೇರುತ್ತಿತ್ತು.  ಪಕ್ಕದಲ್ಲಿ ಬೆಡ್ ಪ್ಯಾನ್  ಇಟ್ಟಿದ್ದರು, ನರ್ಸ್  ಹೇಳ್ತಾ ಇದ್ರೂ  ಅವರಿಗೆ ಅಗತ್ಯವಾದಾಗ   ಇದನ್ನು ಕೊಡಿ ಅಂತಾ  ಹೇಳ್ತಾ ಇದ್ರೂ , ಯಾವುದೋ ಯಾತನಾ ಮಯ  ನರಕದ ಅನುಭವ , ಅಮ್ಮಾ  ಎಂದು   ಸಣ್ಣಗೆ ಕೀರಲಿದೆ    ನನ್ನ ಅಮ್ಮಾ  ಏನಪ್ಪಾ   ಹೆದರ  ಬೇಡ ಮಗು ಒಳ್ಳೆದಾಗುತ್ತೆ  ಅಂದ್ರು,  ಪಕ್ಕದಲ್ಲಿದ್ದ ಪತ್ನಿ ಹಣೆ ಮುಟ್ಟಿ  ಬಿಕ್ಕಳಿಸಿದಳು .  ಸಧ್ಯ ಇಷ್ಟಕ್ಕೆ ಆಯ್ತು  ಹೆದರ ಬೇಡಿ  ಅಂತಾ  ಒಳಗೆ  ಬಂದರೂ  ಡಾಕ್ಟರ್  , "ನನಗೆ ಏನಾಗಿದೆ   ಡಾಕ್ಟರ್?" ಅಂದೇ   "ನಿಮಗೆ ಆಕ್ಸಿಡೆಂಟ್   ಆಗಿದೆ ಮಾತಾಡ ಬೇಡಿ ರೆಸ್ಟ್   ಮಾಡಿ" ಅಂದ್ರು ..... "   ಅಷ್ಟರಲ್ಲಿ   ಪಾಪ  ಆ ಜಗಧೀಶ್  ಗೆ  ಥ್ಯಾಂಕ್ಸ್ ಹೇಳಬೇಕು ಅನ್ನುತ್ತಾ ಇದ್ದರು ಅಲ್ಲಿ ಕೆಲವರು ,  ಪಾಪ ಆ ಹುಡುಗ ಬಹಳ ಸಹಾಯ ಮಾಡಿ  ಇಲ್ಲಿಗೆ ಕರೆದು ತಂದಾ  ಅನ್ನುವ ಮಾತುಗಳು   ಕೇಳಿಬಂದವು . ಆ   ನನಗೆ   ಆಕ್ಸಿಡೆಂಟ್ ಆಗಿದ್ಯಾ .....? "



ನಿಜಾ ನನಗೆ ಫೆಬ್ರವರಿ ೨೦೧೬  ನೋವಿನ ದಿನಗಳಿಗೆ ಹೆಬ್ಬಾಗಿಲು ತೆರೆದು ಸ್ವಾಗತಿಸಿತ್ತು. ನನ್ನದೇ ಕಲ್ಪನೆಯಲ್ಲಿ, ಪರಿಸರ  ನೋಡುತ್ತಾ, ನಗುನಗುತ್ತಾ    ಎಲ್ಲೆಡೆ  ಓಡಾಡುತ್ತಿದ್ದ  ನನಗೆ  ಸಾಕು ನಿನ್ನ ಮೆರೆದಾಟ  ಅಂತಾ  ಹಾಸಿಗೆಗೆ ಎತ್ತಿ ಬಿಸಾಕಿದ  ತಿಂಗಳು ಫೆಬ್ರವರಿ ೨೦೧೬ . ಜೀವ ಉಳಿಸಿದ   ಜಗದೀಶ್  ನನ್ನ ಬಾಳಿಗೆ ಬೆಳಕಾಗಿ  ಬಂದ ತಿಂಗಳು  ಸಹ ಹೌದು.




ಮಾರ್ಚಿ ೨೦೧೬ ರಿಂದ ಆಗಸ್ಟ್ ೨೦೧೬ ವರೆಗೆ ಹಾಸಿಗೆಯಲ್ಲಿ  ಮಲಗಿ  ಸಾವು ಬದುಕಿನ ನಡುವೆ ನನ್ನ ಹೋರಾಟ , ಮನೆಯವರೆಲ್ಲಾ  ಅಂದ್ರೆ  ನನ್ನ ಪತ್ನಿ, ತಾಯಿ, ಮಗ  ಇವರೆಲ್ಲರೂ ಆತಂಕದಲ್ಲಿ ಕಳೆದ ದಿನಗಳು, ಆಸ್ಪತ್ರೆ, ಮನೆ, ಹಾಸಿಗೆ, ಅಷ್ಟೇ ನನ್ನ ಪ್ರಪಂಚ,  ಓದುವ ಹಾಗಿಲ್ಲ, ಟಿ .ವಿ . ನೋಡುವ ಹಾಗಿಲ್ಲ, ಹೆಚ್ಚು ಹೊತ್ತು ಕೂರಲು ಆಗುತ್ತಿರಲಿಲ್ಲ,  ದೇಹ ದಲ್ಲಿ ಚೈತನ್ಯ ವಿಲ್ಲದೆ ಕುಟುಕು ಜೀವ ಇಟ್ಟುಕೊಂಡು  ಬದುಕು ಸವೆಸಿದ ದಿನಗಳವು,  ಗೆಳೆಯರು  ನೆಂಟರು, ಆಗಮಿಸಿದರು  ಪ್ರೀತಿಯ  ಹೊನಲು ಹರಿಸಿದರು , ನಾನು ಬದುಕಲೇ ಬೇಕೆಂಬ  ಆಸೆ ಹುಟ್ಟಿಸಿ ಚೈತನ್ಯ ನೀಡಿದರು. ಆಗಸ್ಟ್ ೨೦೧೬ ರ ಅಂತ್ಯಕ್ಕೆ   ಸ್ವಲ್ಪ ಚೇತರಿಕೆ ಕಾಣಿಸಿತು, ಬದುಕಿನಲ್ಲಿ ಭರವಸೆ ಹುಟ್ಟಿತ್ತು, ಆದರೆ ಕೆಲವೇ ದಿನಗಳು ಅಷ್ಟೇ .

ಆಗಸ್ಟ್ ೨೦೧೬ ರಿಂದ ನವೆಂಬರ್  ೨೦೧೬ ಮತ್ತೆ ಕೈಕೊಟ್ಟ  ಆರೋಗ್ಯ  , ನನ್ನ  ಕುತ್ತಿಗೆಯ ನರಗಳು, ಎಡಗಾಲಿನ ನರಗಳು ತೊಂದರೆ ಕೊಡಲು ಶುರುಮಾಡಿದವು, ಅಸಾಧ್ಯ ನೋವು, ದೇಹದಲ್ಲಿ  ಸರಿಯಾದ ಚಾಲನೆ ಇಲ್ಲಾ, ನೋವನ್ನು ತಡೆದುಕೊಂಡೆ,  ನೋವಿನಲ್ಲಿ ಜೋರಾಗಿ  ಅತ್ತುಬಿಡೋಣ  ಅಂದ್ರೆ  ಮನೆಯಲ್ಲಿನ  ಎಲ್ಲರೂ  ಹೆದರಿಕೊಳ್ಳುತ್ತಾರೆ,  ಯಾರಿಗೂ ಹೇಳಲಾಗದ ಸಂಕಟ,  ವೈದ್ಯರು  ನೀಡಿದ   ನೋವು  ನಿವಾರಕ ಮಾತ್ರೆಗಳು , ಔಷದಿ , ಚುಚ್ಚುಮದ್ದು  ಪಡೆದು  ದಿನ ದೂಡುತ್ತಿದ್ದೆ,   ಒಮ್ಮೊಮ್ಮೆ ನೋವಿನಿಂದ   ಬೇಸರವಾಗಿ  ಆತ್ಮಹತ್ಯೆ ಮಾಡಿಕೊಳ್ಳುವ ಮನಸಾಗುತ್ತಿತ್ತು, ಆದರೆ   ನನ್ನ ನೋವನ್ನು ನಾನೇ ಅನುಭವಿಸುವ ಅನಿವಾರ್ಯ ನನ್ನದಾಯಿತು. ನೋವು, ಹತಾಶೆ, ನಿರಾಸೆ, ನನ್ನ ಮನದ  ನಗುವನ್ನು ಹತ್ಯೆಮಾಡಿ ಸಮಾಧಿ ಮಾಡಿದ್ದವು. ಆದರೆ ನನ್ನ ಕುಟುಂಬದಲ್ಲಿ  ಎಲ್ಲರೂ  ಮಗುವಿನಂತೆ ನನ್ನನ್ನು ಪೋಷಣೆ ಮಾಡಿದರು . ಬದುಕುವ ಭರವಸೆ ಕಳೆದುಕೊಂಡ ನನಗೆ ಅಮ್ಮನ  ಮಾತುಗಳು ಸಂಜೀವಿನಿ ಆಗಿದ್ದವು. ಹಾಗು ಹೀಗೂ  ನರಳುತ್ತಾ  ಡಿಸೆಂಬರ್ ೨೦೧೬ ಬಂದಿತು.
ಡಿಸೆಂಬರ್ ೨೦೧೬  ರಲ್ಲಿ  ನನ್ನ ದೇಹ ನನ್ನ ಮಾತು ಕೇಳುವ ಹಂತಕ್ಕೆ ಬಂದಿತು, ನರಗಳ ನೋವು ಕಾಲಿನದು ಕಡಿಮೆಯಾಗಿ, ಕುತ್ತಿಗೆಯದು  ಸಹ ನೋವು ತಹಬದಿಗೆ   ಬರಲು ಶುರು ಆಯ್ತು,  ಆದರೂ  ಒಮ್ಮೆ ತಲೆ ನೋವು ಬಂದರೆ  ಕನಿಷ್ಠ  ಮೂರು ನಾಲ್ಕು ದಿನ, ಇರುತ್ತಿತ್ತು,  ಜೀವನ ಸಾಕು ಅನ್ನುವ ಹಂತಕ್ಕೆ  ತಲುಪಿ ಬಿಟ್ಟೆ, ಅಪಘಾತದಲ್ಲಿ  ಬದುಕಲೇ ಬಾರದಿತ್ತು  ಅನ್ನಿಸಿತ್ತು, ಆದರೆ  ಆತ್ಮೀಯ ಕುಟುಂಬ , ಗೆಳೆಯರು , ಪ್ರೀತಿಯಿಂದ  ಸಹಾಯಮಾಡಿ , ಪೋಷಿಸಿ , ಶುಭ ಹಾರೈಸಿ  ೨೦೧೭ ರಲ್ಲಿ  ನನ್ನ ನೋವನ್ನು ಗೆದ್ದು   ಮತ್ತೊಮ್ಮೆ  ನಗು ನಗುತ್ತಾ  ಹಕ್ಕಿಯಂತೆ ಹಾರುವ  ಭರವಸೆ   ಮೂಡಲು ಕಾರಣರಾಗಿದ್ದಾರೆ.

೨೦೧೬ ರ ಕ್ಯಾಲಂಡರ್ ವರ್ಷ  ಜೀವನದಲ್ಲಿ  ಅನುಭವದ  ಸತ್ಯ ದರ್ಶನ ಮಾಡಿಸಿತು. ಅದರ  ವಿವರ ಇಲ್ಲಿದೆ ನೋಡಿ.
 ೧] ಸಾಯುತ್ತಿದ್ದವನನ್ನು  ಅಪರಿಚಿತ  ರಕ್ಷಿಸುತ್ತಾನೆ ಅಂದ್ರೆ  ಅವನು ಖಂಡಿತಾ ನನಗೆ  ಮರುಜನ್ಮ  ನೀಡಿದ  ದೇವರು.ಅನ್ನಿಸಿದ್ದು ನಿಜ. 
೨] ಎಲ್ಲಾ  ವೈದ್ಯರೂ ಕೆಟ್ಟವರಲ್ಲಾ  ಅವರಲ್ಲೂ ಮಾನವೀಯತೆ ಇದೆ, ಕೆಲವು ವೈದ್ಯರು   ಮನೆಗೆ ಬಂದು ನನಗೆ ಚಿಕಿತ್ಸೆ ನೀಡಿ        ಹಣ ನಿರಾಕರಣೆ ಮಾಡಿದ್ದು  ನಿಜಕ್ಕೂ  ಮನತುಂಬಿ ಬಂತು.
೩] ಸಾಮಾಜಿಕ ತಾಣದ ಗೆಳೆತನ  ಅಂದ್ರೆ ಬರೀ  ಓಳು ಗುರು ಅನ್ನೋಮಾತಿಗೆ  ಅಪವಾದವಾಗಿ, ನೂರಾರು ಸಂಖ್ಯೆಯಲ್ಲಿ  ಗೆಳೆಯರು  ಖುದ್ದುಬಂದು ಮಾನಸಿಕ ಸ್ಥೈರ್ಯ ತುಂಬಿದ್ದು, ಜೊತೆಗೆ ನನ್ನ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು  ನನ್ನ ಬಗ್ಗೆ ಕಾಳಜಿ ವಹಿಸಿದ್ದು  ಮರೆಯಲಾಗದ ವಿಚಾರ.
೪] ನನ್ನಿಂದ  ಸಹಾಯ ಪಡೆದಿದ್ದ  ಕೆಲವು ಗೆಳೆಯರು   , ನನ್ನ ಆರೋಗ್ಯದ ಬಗ್ಗೆ ಅಪಹಾಸ್ಯ ಮಾಡುತ್ತಾ , ಏನೂ ಆಗಿಲ್ಲಾ   ರೀ  ಇವನದು ನಾಟಕ  ಅಂದಿದ್ದು  ಗೆಳೆತನದ ಅರ್ಥಕ್ಕೆ ಹೊಸ ಅನರ್ಥ ಬರೆದಿತ್ತು,
೫] ಹತ್ತಿರ ಹೋದರೆ  ನಾವೆಲ್ಲಿ  ಹಣ ಖರ್ಚು ಮಾಡಬೇಕಾಗುತ್ತೋ  ಅಂತಾ  ದೂರದಲ್ಲೇ ಉಳಿದ ಕೆಲವು ನೆಂಟರು. ಹಾಗು ಗೆಳೆಯರು.
೬] ಬೇಡವೆಂದರೂ ಕೇಳದೆ ನೀನು ನಮಗಾಗಿ ಬದುಕ ಬೇಕು  ಅಂತಾ ಹಠ ತೊಟ್ಟು  ಹಲವಾರು ರೀತಿಯ  ಸಹಾಯ ಮಾಡಿದ     ಆತ್ಮೀಯ ಗೆಳೆಯರು .
೭] ನನ್ನ  ಶತ್ರು ಎಂದು ಭಾವಿಸಿದ್ದ ವ್ಯಕ್ತಿ  ಮನೆಗೆ ಬಂದು ನನ್ನನ್ನು ಆಲಂಗಿಸಿ  ನನ್ನ ಬೆನ್ನಿಗೆ ನಿಂತದ್ದು  ಒಂದು ಅಚ್ಚರಿ.
೮] ಅಯ್ಯೋ ಅವನು ಇನ್ನೂ ಸತ್ತಿಲ್ವಾ  , ಹಾಳಾದವನು ಸತ್ತಿದ್ರೆ ಹಾರ ಹಾಕಿ ಮರೆಯಬಹುದಿತ್ತು  ಅಂದಾ  ಕೆಲವು ಹಿತೈಷಿಗಳು, ಹಾಗು ಮಿತ್ರರು , ಬಡ್ಡಿಮಗ  ಮೆರೀತಿದ್ದ ಕಣ್ರೀ   ಹಾಗೆ ಆಗಬೇಕೋ ಅವನಿಗೆ  ಅಂದಾ ಮತ್ತಷ್ಟು ಗೆಳೆಯರು ಹಾಗಿ ಹಿತೈಷಿಗಳು. "ದಿನಾ ಸಾಯೋವ್ರ್ಗೆ ಅಳೋವ್ರ್ಯಾರು  ನಡೀರಿ ಇವೆಂದು ಇದ್ದದ್ದೇ" ಅಂದುಕೊಂಡ ಮಹನೀಯರುಗಳು . ನನ್ನ ಮುಂದೆ  ಅನುಕಂಪದ ನಾಟಕ ಮಾಡಿ  ತಮ್ಮ  ನಿಜ ಬಣ್ಣದ ದರ್ಶನ ಮಾಡಿಸಿದ್ದರು .

೯] ಎಷ್ಟು ಹಣ ಸುರಿದರೂ  ಆಯಸ್ಸು ಇಲ್ಲದಿದ್ರೆ  ಸಾವನ್ನು ಗೆಲ್ಲಲು  ಆಗೋಲ್ಲ  ಅನ್ನುವ ಸತ್ಯ .
೧೦] ಸತ್ತ ಮೇಲೆ ಮನುಷ್ಯ ನಿಗೆ ಆಗುವ ಅನುಭವದ ದರ್ಶನ [ ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ,   .............!!!   ಯಾರೋ ಎಳೆದಂತೆ    ಅನ್ನಿಸಿತು,  ಮಸುಕು ಮಸುಕಾಗಿ   ಒಂದು ಬೈಕ್  ಕಂಡಿತ್ತು,   ಕಣ್ಣು  ಮುಚ್ಚಿತ್ತು,  ಎಲ್ಲೋ ದೂರದಲ್ಲಿ   ಎತ್ತಿ ಹಾಕ್ರೀ   ಬೇಗ  , ಅನ್ನುತ್ತಾ  ಇರುವ ಮಾತುಗಳು  ಕೇಳಿಸಿತು,   ಸ್ವಲ್ಪ ಹೊತ್ತು, ಯಾವುದೋ ವಾಹನದ ಶಬ್ದ   , ದೇಹವೆಲ್ಲಾ    ಭೂಮಿಯಿಂದ   ಎತ್ತರದಲ್ಲಿ    ಹಾರಾಡುತ್ತಿರುವ ಅನುಭವ,   ಎಲ್ಲೋ  ದೂರದಲ್ಲಿ   ಮಾತೊಂದು   ತೇಲಿಬಂತು  " ಎಲ್ಲೋ   ಕುಡಿದು  ಬಿದ್ದಿರಬೇಕು  ಗುರು"  ಅಂತಾ , ನಾನು ನಿಧಾನವಾಗಿ    "ನಾನು ಕುಡಿಯಲ್ಲಾ "  ಅಂದೇ,  ಮತ್ತೆ ನಿಶ್ಯಬ್ಧ, ಯಾವುದೋ  ಯಂತ್ರದ  ಸಪ್ಪಳ ,  "ಏನ್ರೀ  ಹೆಸರು ನಿಮ್ಮದು?"  ಅಂತಾ ಯಾರೋ  ಕೇಳಿದ ಹಾಗೆ ಆಯ್ತು,   ಮಾತನಾಡಲು   ಒಣಗಿದ  ಬಾಯಿಯಲ್ಲಿ  ಆಗಲಿಲ್ಲ , ಸಣ್ಣಗೆ  ತುಟಿ ಅಲ್ಲಾಡಿಸಿದೆ   ಅಷ್ಟೇ......................! ಯಾವುದೋ ಲೋಕದೆಡೆಗೆ  ಹಾರುತ್ತಿರುವಂತೆ  ಭಾಸವಾಗಿತ್ತು,   ನೋವಿನ  ಸುಳಿವಿಲ್ಲಾ,  ಮನಸು   ಹಗುರವಾದ   ಅನುಭವ,  ಯಾವ ಮಾತುಗಳು ಕೆಳುತ್ತಿಲ್ಲಾ ,  ಹಾಗೆ ನಿದ್ದೆ ಹೋದ ಅನುಭವ .}

೧೧]  ನನ್ನ ಒಳಿತಿಗಾಗಿ  ಯಾವ ಯಾವುದೋ ದೇವಾಲಯಗಳಿಗೆ  ತೆರಳಿ ನನ್ನ ಹೆಸರಿನಲ್ಲಿ ಪೂಜೆ ಮಾಡಿಸಿ , ಪ್ರಾರ್ಥನೆ ಮಾಡಿ  ಪ್ರಸಾದ ನೀಡಿದ ಸಾಮಾಜಿಕ ತಾಣದ  ಹಲವಾರು ಗೆಳೆಯರು.  ಗೆಳೆತನಕ್ಕೆ ಹೊಸ ಭಾಷ್ಯ ಬರೆದರು . 

೧೨] ನಗುವನ್ನು, ಸಂತೋಷವನ್ನು   ಬೇರೆಯವರಿಗೆ ಹಂಚಿಕೊಳ್ಳ ಬಹುದು,  ಆದರೆ  ಸಂಕಟ, ನೋವು, ನರಳಾಟ  ಇವಿಗಳನ್ನು ಯಾರಿಗೂ  ವರ್ಗಾಯಿಸಲು  ಆಗೋಲ್ಲ ಎನ್ನುವ ಸತ್ಯ ದರ್ಶನ . ಹಾಗು  ಅಪರಿಚಿತನಾದ  ನನ್ನನ್ನು ಬದುಕಿಸಿದ  ಚನ್ನರಾಯಪಟ್ಟಣದ  ಜಗದೀಶ್ ಹಾಗು ಅಲ್ಲಿನ ಸರ್ಕಾರಿ ಆಸ್ಪತ್ರೆಯ  ವೈದ್ಯರಾದ  ಶ್ರೀನಿವಾಸ್ ಅವರುಗಳು  ನನ್ನ ಜೀವನದ ಪವಾಡಕ್ಕೆ ಕಾರಣ ಕರ್ತರು . 


ಜೀವನದ  ನೋವಿನ  ಸುಳಿಯ ಬಲೆ  ಹೀಗೆ ಇರುತ್ತದೆ. 


ಎಷ್ಟೆಲ್ಲಾ   ವಿವಿಧ  ಮುಖಗಳ ದರ್ಶನ  ಮಾಡಿದ್ದಾಯ್ತು  ಈ ವರ್ಷದಲ್ಲಿ  ನಿಜಕ್ಕೂ  ನಾನು  ಏನೂ ಅಂತಾ   ನನ್ನಲ್ಲೇ ವಿಮರ್ಶೆ ಮಾಡಿಕೊಳ್ಳೋ  ಒಂದು ಅವಕಾಶ ಸಿಕ್ಕಿದ್ದು ಸುಳ್ಳಲ್ಲ. ಆ ನಿಟ್ಟಿನಲ್ಲಿ  ನಾನು ೨೦೧೬ ರಲ್ಲಿ ಕಳೆದ ಈ ದಿನಗಳು ಒಂದು ವಿಶ್ವವಿದ್ಯಾಲಯದಲ್ಲಿ  ಕಲಿಸಲಾರದ್ದನ್ನು ಕಲಿಸಿತು .೨೦೧೬ ರ ಬಗ್ಗೆ ಈಗ ಬರೆಯುತ್ತಿದ್ದರೂ ಮನಸಿಗೆ ಆಗಿರುವ ಆಘಾತದಿಂದ ಹೊರಬರಲು  ೨೦೧೭ ರ ಹೊಸ ಬೆಳಕು ಕಾಣುತ್ತಿದೆ, ಸುಮಾರು ಹನ್ನೊಂದು ತಿಂಗಳು  ನಾಲ್ಕು ಗೋಡೆಗಳ ನಡುವೆ  ಹಾಸಿಗೆಯಲ್ಲಿನ  ಬದುಕು, ಹಲವಾರು  ವಿಚಾರಗಳನ್ನು  ದರ್ಶನ ಮಾಡಿಸಿದೆ.  ನೋವು ಹತಾಶೆ ಯನ್ನು ಗೆಲ್ಲುವ   ಛಲ  ಮೂಡಿಸಿದೆ. ೨೦೧೬ ಜೀವನದ ಮರೆಯಲಾರದ ಒಂದು ಘಟ್ಟವಾಗಿ ನನ್ನ ಬಾಳಿನ  ಇತಿಹಾಸ ರಚಿಸಿದೆ. 



ಚಿತ್ರ ಕೃಪೆ ಅಂತರ್ಜಾಲ 
                                                 




೨೦೧೭ ಬಾರಯ್ಯ  ಮುಂದೆ ಸಾಗೂ ಅಂತಾ  ನಗು ನಗುತ್ತಾ  ಕರೆಯುತ್ತಿದೆ . ನಾನೂ ಆಸೆಗಣ್ಣಿನಿಂದ ನೋವಿನ  ಮುಖದಲ್ಲಿ ನಗುವ  ಮೂಡಿಸಿಕೊಂಡು  ೨೦೧೭ ಎಂಬ  ಗೆಳೆಯನ ಕೈಹಿಡಿದು ಸಾಗಲು  ಹೆಜ್ಜೆ ಹಾಕುತ್ತಿದ್ದೇನೆ. ಮುಂದಿನದು  ಏನೋ ಗೊತ್ತಿಲ್ಲ.




ಚಿತ್ರ ಕೃಪೆ ಅಂತರ್ಜಾಲ 



ಅಂದ ಹಾಗೆ ನನ್ನ ಬ್ಲಾಗಿಗೆ ೯ ವರ್ಷ ಆಯ್ತು , ಅದಕ್ಕಾಗಿ ಸ್ವಲ್ಪ ಸಂಭ್ರಮ ಪಡುತ್ತೇನೆ. ನಿಮಗೆಲ್ಲಾ  ಹೊಸ ಕ್ಯಾಲಂಡರ್ ವರ್ಷದ   ಶುಭಾಶಯಗಳು , ನಿಮ್ಮ ಎಲ್ಲಾ  ಸುಂದರ ಕನಸುಗಳು ನನಸಾಗಲಿ,  ನಿಮ್ಮೆಲ್ಲರಿಗೆ ಶುಭವಾಗಲಿ.  ಮತ್ತೆ ಸಿಗೋಣ ನಮಸ್ಕಾರ .   

6 comments:

Srikanth Manjunath said...

ಜನುಮ ತಾಳಲು ನವ ಮಾಸಗಳು ಬೇಕು
ಬದುಕಲು ಬದುಕಿನಲ್ಲಿ ನವ ಸಂಗತಿಗಳು ಬೇಕು
ನವ ಉತ್ಸಾಹಗಳು ಬೇಕು
ನವ ಚೈತನ್ಯಗಳು ಬೇಕು
ಏರು ದಾರಿಯಲ್ಲಿ ವಾಹನ ಗಕ್ಕನೆ ನಿಂತಾಗ.. ಒಂದು ಬಾರಿ ಹಿಂದಕ್ಕೆ ಚಲಿಸಿ, ವೇಗ ಪಡೆದುಕೊಂಡು ಮತ್ತೆ ಮುನ್ನುಗುತ್ತಾ, ಯಶಸ್ಸಿನ ತುತ್ತ ತುದಿ ತಲುಪುತ್ತದೆ.

ಹಾಗೆ ಅನಾಯಾಸವಾಗಿ ಸಾಗುತ್ತಿದ್ದ ಬಾಳ ಪಥಕ್ಕೆ ಹಂಪುಗಳೆಂಬ ಈ ನೋವುಗಳು ಮತ್ತಷ್ಟು ಉತ್ತೇಜನ ತುಂಬಿ, ಉತ್ಸಾಹ ತುಂಬಿ ಮುನ್ನುಗ್ಗಲು ಕಾರಣವಾಗುತ್ತದೆ.

ಬ್ಲಾಗ್ ಗೆ ನವ ಸಂವತ್ಸರಗಳು ತುಂಬಿದ್ದು, ನಿಮ್ಮಲ್ಲಿ ನವ ಚೈತನ್ಯ ತುಂಬಲು ಕಾರಣವಾಗಿ ನಿಂತಿವೆ. ಸಾಮಾಜಿಕ ತಾಣದಲ್ಲಿ ನೀವು ಕಂಡುಕೊಂಡ ಗೆಳೆಯರು ಸಿಕ್ಕಿದು ಇದೆ ಬ್ಲಾಗಿನ ಮೂಲಕವಲ್ಲವೇ..

ಬನ್ನಿ ಸಾಗೋಣ.. ಹೊಸ ಚೈತನ್ಯ ತುಂಬಿಕೊಂಡು ಹರಿಯೋಣ.
ಹೊಸ ದಿನಸೂಚಿ ವರ್ಷಕ್ಕೆ ಶುಭಾಸ್ವಾಗತ

Subru said...

ಹೊಸ ವರುಶದ ಶುಭಾಶಯಗಳು, ಬಾಲು ಅವರಿಗೆ. ೨೦೧೭ ರಲ್ಲಿ ನಿಮ್ಮ ಆರೋಗ್ಯ ೧೦೦% ಸುಧಾರಿಸಲಿ ಎಂಬ ಪ್ರಾರ್ಥನೆಗಳು.

ಮನದಾಳದಿಂದ............ said...

ಬಾಲಣ್ಣ,
ಓದಿ ಬಹಳ ಬೇಸರವಾಯ್ತು.
ಕ್ಷಮೆ ಇರಲಿ. ೨-೩ ಬಾರಿ ಊರಿಗೆ ಬಂದರೂ ನಿಮ್ಮಲ್ಲಿಗೆ ಬರಲಾಗಲಿಲ್ಲ.
ನಿಮ್ಮ ಅರೋಗ್ಯ ಆದಷ್ಟು ಬೇಗ ಸುಧಾರಿಸಲಿ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು

bilimugilu said...

We want you back with same passion and strength :) Happy Happy New Year Balu Sir.

Badarinath Palavalli said...

ಬದುಕಿನ ಅತ್ಯಂತ ನೋವಿನ ಕಾಲಘಟ್ಟವನ್ನು ಎದೆಗಾರಿಕೆಯಿಂದ ಎದುರಿಸಿ ಮರುಜನ್ಮದ ಹುರುಪಲ್ಲಿದ್ದೀರ ಬಾಲಣ್ಣ.

ಹೊಸ ವರ್ಷವು ನಿಮಗೆ ಬರಿಯ ಹರ್ಷಗಳನ್ನೆ ಹೊತ್ತುತರಲಿ.

ಮತ್ತೆ ಕ್ಯಾಮರಾ ಕುತ್ತಿಗೆಗೆ ಜೋತುಬಿದ್ದು ಊರೂರು ಅಲೆಯುವಂತಹ ಪ್ರವಾಸಗಳು ಸುಖಮಯವಾಗಿ ಒದಗಿಬರಲಿ.

Manjunatha Kollegala said...

ಹಲವು ಸತ್ಯಗಳು ತಥ್ಯಗಳು ಜೀವನದ ಇಂಥ ಕ್ಷಣಗಳಲ್ಲೇ ಎದುರಾಗುವುದು ಬಾಲು. ನಿಮ್ಮನ್ನು ಮೊದಲಿನಂತೆ ನೋಡುವಂತಾಗಿದ್ದು ಸಂತೋಷ. ಹೀಗೇ ನಗುನಗುತ್ತಾ ಇರಿ.