Friday, August 12, 2016

ಅಯ್ಯೋ ಗೆಳೆಯ ನೀನೇಕೆ ಅಪರಾಧಿಯಾದೆ ...?


ನ್ಯಾಯಾಧೀಶರು  ಮಿಂಡಿ  ಗ್ಲಜೆರ್  [ ಚಿತ್ರ ಕೃಪೆ  ಅಂತರ್ಜಾಲ ] 
ನಮಸ್ಕಾರ ಬಹಳ ದಿನಗಳ ನಂತರ ನಿಮ್ಮ ಭೇಟಿ ಮತ್ತೊಮ್ಮೆ,  ನೋವಿನಿಂದ   ಬಳಲುತ್ತಾ ಇದ್ದರೂ ನೀನು ಬರೆಯಲೇ ಬೇಕೆಂಬ  ಮನಸಿನ ಒತ್ತಾಯಕ್ಕೆ ಮಣಿದು  ನನ್ನ ಬ್ಲಾಗ್  ಬರಹ  ಪ್ರಾರಂಭ   ಮಾಡುತ್ತಿದ್ದೇನೆ. ಪ್ರತಿನಿತ್ಯ  ನಾವುಗಳು  ಹಲವಾರು ವಿಚಾರಗಳನ್ನು  ಪತ್ರಿಕೆಗಳಲ್ಲಿ,  ಸಾಮಾಜಿಕ ತಾಣಗಳಲ್ಲಿ,  ಲೇಖನಗಳ  ಅಥವಾ ವೀಡಿಯೊ  ಮೂಲಕ   ಗಮನಿಸುತ್ತಾ ಇರುತ್ತೇವೆ, ಬಹಳಷ್ಟು  ವಿಚಾರಗಳು ಅಯ್ಯೋ  ಇವೆಲ್ಲಾ  ಮಾಮೂಲಿ ಬಿಡ್ರೀ  ಅನ್ನಿಸಿ  ಅವುಗಳನ್ನು  ನಾವು  ನಿರ್ಲಕ್ಷ್ಯ  ಮಾಡುತ್ತೇವೆ,  ಆದಾಗ್ಯೂ  ಕೆಲವು  ವಿಚಾರಗಳು,  ಘಟನೆಗಳು  ಮನಸಿನಲ್ಲಿ   ಆಳವಾಗಿ ಬೇರೂರಿ,  ನಮ್ಮನ್ನು ಕಾಡುತ್ತವೆ,

ಇತ್ತೀಚಿಗೆ  ನನ್ನನ್ನು ಬಹಳ ಕಾಡಿದ   ಒಂದು ಘಟನೆ ಇದು,  ಇದು ಯಾವುದೇ ದೇಶದಲ್ಲಿ ನಡೆದಿರಬಹುದಾದ  ಅಥವಾ ನಡೆಯ ಬಹುದಾದ  ಘಟನೆ,  ನ್ಯಾಯಾಂಗ ವ್ಯವಸ್ಥೆಯಲ್ಲಿ  ವಿಶ್ವದ    ಬಹಳಷ್ಟು ದೇಶಗಳು  ತಮ್ಮದೇ ಆದ ವಿಧಿ ವಿಧಾನಗಳನ್ನು  ತಮ್ಮ   ದೇಶದ  ಸಂವಿಧಾನದಂತೆ  ರಚನೆ ಮಾಡಿರುತ್ತವೆ.


ಕೆಲವೊಂದು    ದೇಶದ ನ್ಯಾಯಾಧೀಶರು  ತಮ್ಮ ಮನಸಿನ ಭಾವನೆ ವ್ಯಕ್ತ ಪಡಿಸಲು  ಅಲ್ಲಿನ ಸಂವಿಧಾನ ಅವಕಾಶ ಮಾಡಿಕೊಟ್ಟಿರುತ್ತವೆ. ಹಾಗಾಗಿ  ಆ   ದೇಶದ  ಕಾನೂನಿನ  ರೀತ್ಯ   ಅಲ್ಲಿನ  ನ್ಯಾಯಾಲಯಗಳ ಕಲಾಪ  ಪ್ರತಿಯೊಂದೂ  ಪಾರದರ್ಶಕ  ಆಗಿರುತ್ತದೆ, ಅಲ್ಲಿನ  ನ್ಯಾಯಾಲಯಗಳ  ಪ್ರತಿಯೊಂದೂ ಚಟುವಟಿಕೆ   ವೀಡಿಯೊ ದಲ್ಲಿ ದಾಖಲಾಗುತ್ತದೆ.  ಹಾಗೆ ದಾಖಲಾದ   ವೀಡಿಯೊಗಳಲ್ಲಿ ಸಾರ್ವಜನಿಕರಿಗೆ   ಅನುಕೂಲ ಆಗುವ  ಕೆಲವು ನ್ಯಾಯಾಲಯಗಳ  ಕಲಾಪ  ಅಲ್ಲಿನ  ಮಾಧ್ಯಮಗಳಲ್ಲಿ ಪ್ರಸಾರ  ಆಗುತ್ತದೆ. ಇಂತಹ  ಒಂದು  ನ್ಯಾಯಾಲಯದ  ಕೌತುಕ  ಕಲಾಪದ ಘಟನೆ ಇಲ್ಲಿದೆ. ಇದು ನಡೆದದ್ದು  ದಿನಾಂಖ  27 ನೆ  ಜುಲೈ 2015 ರಲ್ಲಿ  ಅಮೇರಿಕಾದ  ಮಿಯಾಮಿ ಯಲ್ಲಿ ನ  ಒಂದು ನ್ಯಾಯಾಲಯದಲ್ಲಿ. ಬನ್ನಿ ಕಥೆಗೆ  ಹೋಗೋಣ .


ಚಿತ್ರ ಕೃಪೆ ಅಂತರ್ಜಾಲ 




ನಾನು ಲಿಂಡಿ  ಗ್ಲೆಜರ್  ಈ  ನ್ಯಾಯಾಲಯದ  ನ್ಯಾಯಾಧೀಶೆ.........   ಬನ್ನಿ   ಬನ್ನಿ  ಆ ಕಥೆ  ಏನೂ ಅಂತಾ   ಹೇಳ್ತೀನಿ, ಅವತ್ತು  2015 ಜೂನ್  30  , ಎಂದಿನಂತೆ   ನ್ಯಾಯಾಲಯದ   ಕಲಾಪ  ನಡೆಸಲು  ಸಿದ್ದಳಾಗಿದ್ದೆ,   "ಸೈಲೆನ್ಸ್  ಸೈಲೆನ್ಸ್   ನ್ಯಾಯಾಧೀಶರು ಬರ್ತಾ ಇದ್ದಾರೆ,"  ಅಂತಾ ಒಬ್ಬ  ನ್ಯಾಯಾಲಯದ   ನೌಕರ    ಕೂಗಿದ  , ನಾನು ನನ್ನ  ಕೋಣೆಯಿಂದ   ಆಚೆಗೆ ಬಂದೆ   ನ್ಯಾಯಾಲಯ  ಸ್ಥಬ್ಧ  ಆಗಿತ್ತು, , ಅಲ್ಲಿದ್ದವರ  ಎಲ್ಲರ  ಗೌರವ ಮಿಶ್ರಿತ  ಕಣ್ಣುಗಳೂ  ನ್ಯಾಯಾಧೀಶರ  ಆಗಮನದ  ಕಡೆಗೆ ನೆಟ್ಟಿದ್ದವು , ನಿಧಾನವಾಗಿ  ಆಗಮಿಸಿ   ನ್ಯಾಯಾಧೀಶರ   ಆಸನವನ್ನು ಗೌರವ ಪೂರ್ವಕವಾಗಿ  ಏರಿ ಕುಳಿತೆ,

 ಎಂದಿನಂತೆ ಪ್ರಕರಣಗಳ ವಿಚಾರಣೆ  ಶುರು ಆಯ್ತು,  ನಿಜಾ  ಹೇಳಬೇಕೂ  ಅಂದ್ರೆ  ನನ್ನ ನಿತ್ಯದ  ಕಲಾಪಗಳಲ್ಲಿ   ವಾದಿಗಳ  ಪ್ರತಿವಾದಿಗಳ  ಪರ  ವಕೀಲರ  ವಾದ/ ಪ್ರತಿವಾದ   ಕೇಳುವುದು  , ಕಲಾಪದಲ್ಲಿ ನ  ಪ್ರತಿಯೊಂದೂ ಪ್ರಕರಣದಲ್ಲಿ    ವಾದಿಗಳ  ಪ್ರತಿವಾದಿಗಳ ವಿಚಾರಣೆ  ನಡೆಸುವುದು,    ಸಾಕ್ಷಿಗಳ  ಹಾಗು ದಾಖಲೆಗಳ  ಪರಿಶೀಲನೆ,  ಕಾನೂನು  ಪುಸ್ತಕಗಳ  ಪರಿಶೀಲನೆ ,  ಇವೆಲ್ಲಾ  ಮಾಡ ಬೇಕಾಗುತ್ತದೆ, ಕೆಲವೊಮ್ಮೆ  ಮನಸಿಗೆ ಇಷ್ಟಾ ಇರಲಿ ಇಲ್ಲದಿರಲಿ,   ಗಂಟೆಗಟ್ಟಲೆ  ವಾದ   ಪ್ರತಿವಾದಗಳನ್ನು ಕೇಳಬೇಕಾಗುತ್ತದೆ, ಕೆಲವೊಮ್ಮೆ  ಇಂತಹ  ಕಲಾಪಗಳಲ್ಲಿ  ಬಹಳವಾಗಿ ದೇಹ  ಹಾಗು ಮೆದುಳಿಗೆ  ಧಣಿವಾಗುವುದು ಉಂಟು,  ಆದರೆ ಕರ್ತವ್ಯ ....?     ಇವೆಲ್ಲವನ್ನೂ  ಸಹಿಸಿಕೊಂಡು,  ಇದ್ಯಾವುದನ್ನೂ  ಹೊರಗಡೆ  ತೋರಿಸಿಕೊಳ್ಳದೆ    ಕಾರ್ಯ ನಿರ್ವಹಣೆ   ಮಾಡಬೇಕಾಗುತ್ತದೆ,  ಇವೆಲ್ಲವನ್ನೂ ಸಹಿಸಿಕೊಂಡು  ದಿನಪೂರ್ತಿ   ಕಲಾಪ ನಡೆಸಿ   ಕೊನೆಗೆ  ನನ್ನ ಕೋಣೆಗೆ ಬರುವಷ್ಟರಲ್ಲಿ  ಹೈರಾಣಾಗಿರುತ್ತೇನೆ. ಆದಾಗ್ಯೂ   ಕೆಲವೊಮ್ಮೆ  ಕಲಾಪದಲ್ಲಿ   ಹಾಸ್ಯ  ಘಟನೆಗಳು/ ಅಚ್ಚರಿಯ  ಘಟನೆಗಳು  ನಡೆದಾಗ  ಮನಸಿಗೆ  ಖುಷಿಕೊಡುತ್ತದೆ.

ಅಂದೂ ಸಹ  ಹಾಗೆ  ಆಯಿತು,  ಒಂದೆರಡು ಪ್ರಕರಣ ಮುಗಿದ ನಂತರ   ಒಂದು ಪ್ರಕರಣ ಬಂತು  ಅದು ಕಳ್ಳತನದ ಪ್ರಕರಣ   "ಆರ್ಥರ್  ಬೂತ್"  ಎಂಬ   ಹೆಸರನ್ನು ಕೂಗಿದ ತಕ್ಷಣ   ಅಪರಾದಿ   ಬಂದು  ಕಟಕಟೆಯಲ್ಲಿ   ನಿಂತ ,


ಚಿತ್ರ  ಕೃಪೆ   ಅಂತರ್ಜಾಲ 



ವಿಚಾರಣೆ ಪ್ರಾರಂಭ ಆಯ್ತು, "ಏನಪ್ಪಾ ನಿನ್ನ ಹೆಸರು ಅಂದೇ ...? "   "ಅರ್ಥರ್  ಬೂತ್"  ಅಂದಾ   , "ನೀನು ಮಾಡಿದ ತಪ್ಪು  ಗೊತ್ತಾಯ್ತಾ  ...?"   ಅಂದಾಗ    ಅವನ ಮುಖ ಪಾಪ ಪ್ರಜ್ಞೆಯಿಂದ  ಬಾಡಿ ಹೋಯ್ತು ,  ಅವನನ್ನು ನೋಡಿದರೆ  ಎಲ್ಲೋ ನೋಡಿದ ನೆನಪು ಸರಿಯಾಗಿ ಜ್ಞಾಪಕಕ್ಕೆ ಬರಲಿಲ್ಲ ,  ಅವನಿಗೆ ಹಲವಾರು ಪ್ರಶ್ನೆಗಳನ್ನು  ಕೇಳುತ್ತಾ   ವಿವರಗಳನ್ನು ಕೆದಕುತ್ತಾ    ಅವನ ಬಗ್ಗೆ  ಪೋಲಿಸ್  ಇಲಾಖೆಯವರು  ಒದಗಿಸಿದ್ದ    ಮಾಹಿತಿ ಪರಿಶೀಲನೆ ನಡೆಸತೊಡಗಿದೆ,

  ಅರೆ  ಇವನಾ ....? ಮನಸಿನಲ್ಲಿ   ತಟ್ಟನೆ   ನನ್ನ ಶಾಲಾ ದಿನಗಳ ನೆನಪು ಬಂತು. ನನ್ನ ಪ್ರಾಥಮಿಕ  ಶಾಲೆಯಲ್ಲಿ  "ಅರ್ಥರ್  ಬೂತ್ " ಎಂಬ  ಬುದ್ದಿವಂತ  ಸಹಪಾಟಿ ಯಿದ್ದ , ಬಹಳ ಒಳ್ಳೆಯ ಹುಡುಗ   ಅವನನ್ನು ಕಂಡರೆ   ಶಾಲೆಯಲ್ಲಿ  ಎಲ್ಲರಿಗೂ ಇಷ್ಟ , ತನ್ನ ಒಳ್ಳೆಯ  ಸ್ವಭಾವದಿಂದ  ಎಲ್ಲರ  ಪ್ರೀತಿಗೆ ಪಾತ್ರನಾಗಿದ್ದ,  ಆ ದಿನಗಳಲ್ಲಿ ನನಗೂ ಸಹ   ಇವನ ಗೆಳೆತನ   ಇಷ್ಟಾ ಆಗಿತ್ತು, ಜೊತೆಗೆ ಶಾಲೆಯಲ್ಲಿ ಅವನ ಜೊತೆ ಫುಟ್ ಬಾಲ್ ಆಡಿದ್ದ ನೆನಪು ಬಂತು.  ............. , ಆದರೆ ಅವನೇ ಇವನಾ ...?  ಎಂಬ ಅನುಮಾನ  ಕಾಡತೊಡಗಿತು.


ವಿಚಾರಣೆ ಮುಂದುವರೆಸಿದೆ,  ಏನಪ್ಪಾ  ನೀನು   ಪ್ರಾಥಮಿಕ   ಶಾಲೆ  ಓದಿದ್ದು ಎಲ್ಲಿ,  ...?["Did you go to Nautilus?"]   ಅವನು  ತಾನು ಓದಿದ್ದು ನಟಾಒಲಿಸ್ ನಲ್ಲಿ ಅಂದ ತಕ್ಷಣ   ಇವನು ಅವನೇ ಎಂಬ  ತೀರ್ಮಾನಕ್ಕೆ ಬಂದೆ  ,  ಆ ಕ್ಷಣದಲ್ಲಿ  "oh my goodness"  ಎಂಬ ಮಾತು  ನಮ್ಮಿಬ್ಬರ  ಬಾಯಿಂದ  ಒಟ್ಟಿಗೆ ಹೊರಟಿತ್ತು.   ನಿನಗೆ   ನನ್ನ ನೆನಪಿದೆಯಾ  ಎನ್ನುತ್ತಾ   ಪ್ರಾಥಮಿಕ  ಶಾಲೆಯ  ಕೆಲ ಘಟನೆಗಳನ್ನು ಹೇಳಿದೆ,  ಅವನಿಗೆ ನನ್ನ ಗುರುತು ಸಿಕ್ಕಿತು, ಬಿಕ್ಕಿ ಬಿಕ್ಕಿ ಅಳಲು  ಶುರು ಮಾಡಿದ,  ತನ್ನ ಜೊತೆ ಓದಿದ   ಶಾಲಾ ಗೆಳತಿಯ ಮುಂದೆ    ಅಪರಾಧಿಯಾಗಿ  ನಿಂತಿದ್ದ  ನೋವು  ಅವನ ಮುಖದಲ್ಲಿ  ಮೂಡಿತ್ತು,  ನಾನೇ   ಮುಂದುವರೆಸಿ  "  "ಶಾಲೆ ದಿನಗಳ ನಂತರ  ನೀನು ಏನಾದೆ ...? ಎಂದು ಬಹಳಷ್ಟು   ಸಾರಿ ನಿನ್ನನ್ನು  ನೆನೆಯುತ್ತಿದ್ದೆ,    ಆದರೆ ನೋಡು ನಾವಿಬ್ಬರು  ಇಲ್ಲಿ ಭೇಟಿ ಮಾಡಬೇಕಾಯ್ತು. "  "ನಿಜಕ್ಕೂ ಬೇಸರ  ಆಗ್ತಿದೆ,  ಆದಾಗ್ಯೂ ನನ್ನ ಕೆಲಸ   ಮಾಡಬೇಕಿದೆ " ಎಂದು  ಮುಂದು ವರೆದೆ.


ಚಿತ್ರ ಕೃಪೆ ಅಂತರ್ಜಾಲ 


ವಿಧಿ ಎಷ್ಟು ವಿಚಿತ್ರ ನೋಡ್ರೀ, ಶಾಲೆಯಲ್ಲಿ  ಒಟ್ಟಿಗೆ ಓದಿದ  ಈ ಗೆಳೆಯ  ಹಲವು ದಶಕಗಳ ನಂತರ  ನನ್ನ ಮುಂದೆ ಅಪರಾಧಿಯಾಗಿ ಬಂದು ನಿಂತಿದ್ದ.  ಜೀವನ ಅಂದ್ರೆ ಹೀಗೆ ಆಲ್ವಾ  ಕೆಲವೊಮ್ಮೆ, ನಾವು ನಿರೀಕ್ಷಿಸದ  ಘಟನೆಗಳು ನಡೆದುಬಿಡುತ್ತವೆ.  ಶಾಲೆಯಲ್ಲಿ  ಒಳ್ಳೆಯ ವಿಧ್ಯಾರ್ಥಿ ಯಾಗಿದ್ದ ಈ ಹುಡುಗ , ದೇಶದಲ್ಲಿ  ಒಳ್ಳೆಯ ನಾಗರೀಕ ಆಗಿ  ಒಳ್ಳೆಯ ಸ್ಥಾನ  ಪಡೆಯಬೇಕಿದ್ದ  ಇವನ ಜೀವನದಲ್ಲಿ  ಕೆಟ್ಟ ಬಿರುಗಾಳಿ ಬೀಸಿ , ಇವನ  ಭವಿಷ್ಯವನ್ನು  ಮಣ್ಣುಪಾಲು ಮಾಡಿತ್ತು,  ಕನಸುಗಳು  ಛಿದ್ರವಾಗಿದ್ದವು, ಸಮಾಜದಲ್ಲಿ ಕಳ್ಳನಾಗಿ  ಕೆಟ್ಟ ಹೆಸರು ಪಡೆದು  ಈ ಗೆಳೆಯ    ನ್ಯಾಯಾಧೀಶೆಯಾದ ನನ್ನ ಮುಂದೆ  ನಿಂತಿದ್ದ,


   ನ್ಯಾಯಾಲಯದ ಕಲಾಪದಲ್ಲಿ  ಇವನ ವಿಚಾರಣೆ ನಡೆಸಿ  ಇವನ ಒಳ್ಳೆಯ ತನದ  ಪರಿಚಯ ಮಾಡಿಕೊಡುತ್ತಾ "This was the nicest kid in middle school,"  "He was the best kid in middle school. I used to play football with him, all the kids, and look what has happened."   "What's sad is how old we've become,"  

 ಎಂಬ ಮಾತನ್ನು  ಕಲಾಪದಲ್ಲಿ ಹಾಜರಿದ್ದ ಎಲ್ಲರಿಗೂ  ಹೇಳಿದಾಗ  ಅಲ್ಲಿದ್ದ ಎಲ್ಲರೂ  ಅಚ್ಚರಿಗೊಂಡಿದ್ದರು .  ಮುಂದೇನು ಎಂಬ ಪ್ರಶ್ನೆಯೋಡನೆ  ನ್ಯಾಯಾಧೀಶೆಯಾದ  ನನ್ನನ್ನೂ   ಅಪರಾಧಿಯಾದ   ಅವನನ್ನು  ನೋಡುತ್ತಿದ್ದರು,  ಆದರೆ    ನಾನು  ನನ್ನ ಸ್ಥಾನದ ಗೌರವ  ಉಳಿಸುವ  ಜವಾಬ್ದಾರಿ  ಹೊತ್ತಿದ್ದೆ,  ನನ್ನೆಲ್ಲಾ ಭಾವನೆಗಳನ್ನು  ಹತ್ತಿಕ್ಕಿ ಕರ್ತವ್ಯ  ನಿರ್ವಹಣೆಗೆ  ಮುಂದಾದೆ,    "ನಿನಗೆ ಒಳ್ಳೆಯದಾಗಲಿ ಗೆಳೆಯ  ಮುಂದೆ ಕಾನೂನು ಬದ್ದವಾಗಿ ಜೀವನ ಸಾಗಿಸು"  ಎಂದು ಹೇಳಿ  ಅವನ ಅಪರಾದಕ್ಕೆ  ತಕ್ಕಂತೆ  43000  ಡಾಲರ್  ಬಾಂಡ್  ಹಾಗು  ಹತ್ತು ತಿಂಗಳ  ಜೈಲು ಶಿಕ್ಷೆ  ವಿಧಿಸಿ  ಆದೇಶ ಮಾಡಿ   ಪ್ರಕರಣ ಮುಗಿಸಿದೆ,


 ಅವನೂ ಸಹ  ನನ್ನನ್ನು ಭೇಟಿಮಾಡಿದ   ಖುಷಿಯನ್ನು ಅನುಭವಿಸಲಾರದೆ     ಅವಮಾನ ದಿಂದ  ನ್ಯಾಯಾಲಯದ  ಕಟಕಟೆಯಿಂದ   ಇಳಿದು ಹೋದ , ನನ್ನ ಮನಸು  ವಿಶಾದದ  ಮನಸಿನಿಂದ  ಮುದುಡಿ ಹೋಗಿತ್ತು.  ಇಡೀ ನ್ಯಾಯಾಲಯ ದಲ್ಲಿದ್ದ  ಎಲ್ಲರೂ     ನನ್ನನ್ನು ಮೆಚ್ಚುಗೆಯಿಂದ  ನೋಡಿದರು,  ಅವರೆಲ್ಲರ  ಕಣ್ಣುಗಳಲಿ  ನನ್ನ  ಬಗ್ಗೆ  ಸಾಂತ್ವನದ ಮೆಚ್ಚುಗೆ ಕಂಡೆ. ಅಂದಿನ ಕಲಾಪ ಮುಗಿಸಿ  ಮನೆಗೆ ಬಂದು ಅವನಿಗಾಗಿ  ಮರುಗುತ್ತಾ , ಅವನ  ಬಾಲ್ಯದ  ಗೆಳೆತನದ  ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ   ನಿದ್ದೆ ಹೋದೆ. 




ಚಿತ್ರ ಕೃಪೆ ಅಂತರ್ಜಾಲ 




  ಹೀಗೆ  ದಿನಗಳು ಸಾಗಿದವು , ಗೆಳೆಯನ ಬಿಡುಗಡೆ  ದಿನ ಬಂದೆ ಬಿಟ್ಟಿತು,  ಆ ಗೆಳೆಯನ ಭೇಟಿ ಮಾಡಲು  ಮನಸು  ಪೀಡಿಸುತ್ತಾ ಇತ್ತು,  ನ್ಯಾಯಾಲಯಕ್ಕೆ ರಜೆ   ಹಾಕಿ,  ಜೈಲಿನಿಂದ  ಬಿಡುಗಡೆ ಆಗುವ   "ಅರ್ಥರ್  ಬೂತ್"  ಕಾಣಲು ಹೋದೆ,  ಅಲ್ಲಿನವರಿಗೂ ಅಚ್ಚರಿ, ಒಬ್ಬ ಖೈದಿಯನ್ನು ಸ್ವಾಗತಿಸಲು  ನ್ಯಾಯಾಧೀಶರು  ಬಂದಿದ್ದು  ಅವರಿಗೆ ವಿಚಿತ್ರವಾಗಿತ್ತು,


ಆದರೆ ಅವರಿಗೇನು ಗೊತ್ತು,  ನನ್ನ ಬಾಲ್ಯದ  ಗೆಳೆಯನ  ಮಹತ್ವ.   ಜೈಲಿನ   ನಿಯಮಗಳನ್ನು   ಪಾಲಿಸಿದ    ಜೈಲಿನಿಂದ   ಹೊರಬಂದ ಗೆಳಯ , ಮೊದಲು ಅವನ ಕುಟುಂಬದ   ಎಲ್ಲರೂ ಅವನನ್ನು ಅಪ್ಪಿಕೊಂಡು ಸ್ವಾಗತಿಸಿದರು,  ಅವನ ಮುಖದಲ್ಲಿ  ಬಿಡುಗಡೆಯ  ಸಂತೋಷವಿತ್ತು,  ಅವನ ಕುಟುಂಬದ  ನಂತರ  ಅಲ್ಲೇ ಇದ್ದ ನಾನು    ಆರ್ಥರ್    ಅನ್ನುತ್ತಾ  ಅವನ ಮುಂದೆ ಪ್ರತ್ಯಕ್ಷಳಾದೆ ...!  ಅವನಿಗೆ ನಂಬಲು ಆಗಲಿಲ್ಲ,  ಅವನಿಗೆ ಅದು ಕನಸೋ ನನಸೋ ತಿಳಿಯದಾಯಿತು,  ಅಪರಾಧಿಯಾದ  ತನ್ನನ್ನು  ನ್ಯಾಯಾಧೀಶೆ ಯಾದ  ನಾನು  ಭೇಟಿ  ಮಾಡಬಹುದು ಎಂಬ  ಕಲ್ಪನೆ  ಅವನಿಗೆ ಇರಲಿಲ್ಲ,  ಮುಖದಲ್ಲಿ ಸಂತೋಷ ಉಕ್ಕಿತ್ತು,  ಅವನನ್ನು ನಾನು    ಸೋದರ   ವಾತ್ಸಲ್ಯದಿಂದ   ಅಪ್ಪಿಕೊಂಡೆ  , ಅವನ ಕಣ್ಣಲ್ಲಿ  ಧನ್ಯತೆಯ ಮಿಂಚು ಹರಿದಿತ್ತು,




ಅವನ ಕುಟುಂಬವನ್ನು ಪರಿಚಯಿಸಿದ  ಅವನು, ತನ್ನ ತಪ್ಪಿನ  ಅರಿವಾಗಿ  ಹೊಸ    ಜೀವನ ನಡೆಸಲು  ಸಿದ್ದನಾಗಿದ್ದ,  ಬಹಳ ಹೊತ್ತು, ಅವನ ಜೊತೆಯಲ್ಲಿ ಶಾಲಾ ದಿನಗಳ  ನೆನಪುಗಳನ್ನು  ಮೆಲುಕು ಹಾಕಿದೆ,  ಮುಂದೆ ಒಳ್ಳೆಯ ಗೆಳೆಯರಾಗಿ  ಮುಂದುವರೆಯಲು  ಸಂಕಲ್ಪ ಮಾಡಿದೆವು, ಅವನೂ ತಾನು ಇನ್ನುಮುಂದೆ   ನ್ಯಾಯವಾದ  ಜೀವನ ಮಾಡುವುದಾಗಿ   ನನಗೆ ಮಾತುಕೊಟ್ಟ,  ಅವನ ಬಗ್ಗೆ ಗೌರವ    ಮತ್ತಷ್ಟು  ಜಾಸ್ತಿಯಾಯಿತು,  ಒಬ್ಬ  ಗೆಳೆಯ   ನನಗೆ ಹೀಗೆ  ಒಳ್ಳೆಯವನಾಗಿ ಬದಲಾಗಿದ್ದು ಖುಷಿಕೊಟ್ಟಿತು,  ನಗು ನಗುತ್ತಾ ಅವನಿಗೆ ಶುಭ ಹಾರೈಸಿ  ವಿದಾಯ   ಹೇಳಿದೆ.


 ಒಂದು  ವಿನಂತಿ  :-) ಈ  ಲೇಖನದಲ್ಲಿ ಬಳಸಿರುವ    ಎಲ್ಲಾ   ಚಿತ್ರಗಳನ್ನು   ಅಂತರ್ಜಾಲದಿಂದ   ಕೃತಜ್ಞತಾ  ಪೂರ್ವಕವಾಗಿ  ಪಡೆಯಲಾಗಿದೆ. ಓದುಗರೇ ಇದೊಂದು ಅಮೇರಿಕಾದಲ್ಲಿ    ನಡೆದ   ಸತ್ಯ ಘಟನೆ    ಇದಕ್ಕೆ ನನ್ನ ಕಲ್ಪನೆಯನ್ನೂ ಸೇರಿಸಿ  ಒಂದು ಕಥೆಯ ಚೌಕಟ್ಟು  ನೀಡಿದ್ದೇನೆ.  ನಮ್ಮ ದೇಶದ  ಸಂವಿಧಾನದ  ಕಾನೂನಿಗೂ   ಅಮೆರಿಕದೇಶದ   ಸಂವಿಧಾನದ ಕಾನೂನಿಗೂ  ಬಹಳಷ್ಟು ಅಂತರವಿದೆ,  ಆ ದೇಶದ   ಜನರ   ಜೀವನ ಶೈಲಿಗೆ ತಕ್ಕಂತೆ  ಸಂವಿದಾನ  ರಚನೆ ಆಗಿರುತ್ತದೆ,  ಅಲ್ಲಿನ ಕಾನೂನಿಗೂ  ನಮ್ಮ ದೇಶದ ಕಾನೂನಿಗೂ  ಹೋಲಿಕೆ   ಮಾಡಲಾಗದು,  ಹಾಗಾಗಿ ಈ ಅಂಶಗಳನ್ನು  ಗಮನದಲ್ಲಿ ಇಟ್ಟುಕೊಂಡು ನಿಮ್ಮ ಅನಿಸಿಕೆ ಹಾಕಿ,  ಉದ್ವೇಗದಿಂದ  ನಮ್ಮ ದೇಶದ   ಕಾನೂನನ್ನು, ನ್ಯಾಯಾಲಯಗಳನ್ನು , ನ್ಯಾಯಾಂಗ   ವ್ಯವಸ್ಥೆಯನ್ನು, ದೂಷಿಸುವ  ಅನಿಸಿಕೆ    ಹಾಕಬೇಡಿ ದಯವಿಟ್ಟು.

5 comments:

manjunath said...

ಇದು ಅಮೇರಿಕ ದೇಶದ ಪ್ರಬುದ್ದತೆ ಮತ್ತು ಕಾನೂನಿಗೆ ಅವರು ಕೊಡುವ ಕೊಡಲೇಬೇಕಾದ ಗೌರವದ ಮನಸ್ಥಿತಿಯನ್ನು ಸೂಚಿಸುತ್ತದೆ. ಕಾನೂನು ಇರುವುದು ಅಥವಾ ರಚಿಸಿರುವುದೇ ಒಟ್ಟಾರೆ ಸಮಾಜದ ಸಾಮೂಹಿಕ ಹಿತಕ್ಕಾಗಿ ಎನ್ನುವ ಅಂಶ ಇಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. ಸ್ನೇಹ ಸಂಭಂದ ಮೀರಿ ಕರ್ತವ್ಯ ನಿರ್ವಹಣೆ ಮಾಡಬೇಕೆಂಬ ಎಚ್ಚರವನ್ನು ಚೆನ್ನಾಗಿ ಬಿಂಬಿಸಿದ್ದೀರಿ.

Sitaram Kemmannu said...

ಬಾಲಣ್ಣ ಚೆನ್ನಾಗಿದೆ

Dr.D.T.Krishna Murthy. said...

Super story Balu sir!!!��

Badarinath Palavalli said...

ನಮ್ಮಲ್ಲೂ ನ್ಯಾಯಾಲಯಗಳ ವಿಡಿಯೋ ಸಾರ್ವಜನಿಕರಿಗೆ ಲಭ್ಯವಾದರೆ ಎಷ್ಟು ಚೆನ್ನ!

ಬಾಲ್ಯ ಗೆಳೆಯನಿಗೆ ಉಪಕಾರ ಮಾಡುವ ಉಮ್ಮೇದಿನಲ್ಲಿ ನ್ಯಾಯಾಧೀಶೆ, ಅವನ ಮೇಲಿದ್ದ ದಾವೆಯನ್ನು ಹೊಡೆದು ಹಾಕಬಹುದಿತ್ತು ಅಥವಾ ಶಿಕ್ಷೆ ಕನಿಷ್ಠಕ್ಕೆ ಇಳಿಸಿ favour ಮಾಡಬಹುದಿತ್ತು ಆದರೆ ಆಕೆ ನ್ಯಾಯಬದ್ಧವಾಗಿ ತೀರ್ಪನ್ನಿತ್ತು ನಮ್ಮ ಮೆಚ್ಚುಗೆ ಗಳಿಸಿದರು.

ಆತ ಬಿಡುಗಡೆಯಾದ ದಿನ ಸ್ವತಃ ನ್ಯಾಯಾಧೀಶೆಯೇ ಕಾರಾಗೃಹಕ್ಕೆ ತೆರಳಿದ್ದು ಮತ್ತ್ತು ಆತನಿಂದ ಸಭ್ಯ ಬದುಕನ್ನು ನಡೆಸುವ ಮಾತು ಪಡೆದುಕೊಂಡಿದ್ದು ನಮಗೆ ಆದರ್ಶಪ್ರಾಯವಾಗಿ ಕಾಣಿಸಿತು.

ಮನಸಿಗೆ ನಾಟಿದ ಬರಹ.

ನಂದಕುಮಾರ್ ಪಿ ಗೌತಮ್ said...

ನಮ್ಮ ಭಾರತದ ಸಂವಿಧಾನ ಬಹಳ ಚೆನ್ನಾಗಿದೆ. ಪ್ರತಿಯೊಂದು ಅಂಶವನ್ನೂ ಒಳಗೊಂಡು ಭಾರತಕ್ಕೆ ಒಪ್ಪುವಂತೆ ಇದೆ.ಅದರ ಅದನ್ನ ಪಾಲಿಸಬೇಕಾದವರೇ ಅಪರಾಧಿಗಳನ್ನ ಅದೇ ಸಂವಿಧಾನದ ಅಂಶಗಳನ್ನ ಉಪಯೋಗಿಸಿ ಪಾರುಮಾಡಿ ಹಣ ಮಾಡುತ್ತಿದ್ದಾರೆ.ಸಂವಿಧಾನ ಸರಿಇದೆ ,ಆದರೆ ಅದನ್ನ ಅರ್ಥೈಸಿಕೊಂಡು ಸತ್ಯದ ರೀತಿಯಲ್ಲಿ ಸಮಾನತೆಯೊಂದಿಗೆ ತೀರ್ಪುನೀಡುವ ನ್ಯಾಯಾದೀಶರ ಸಂಖ್ಯೆ ಹೆಚ್ಚಗಾಬೇಕಿದೆ ಹಾಗೂ ಅಪರಾಧಿಗಳನ್ನ ರಕ್ಷಿಸುವ ದುಷ್ಟಮನಸ್ಸಿನ ಹಣದಾಹಿಗಳ ಸಂಖ್ಯೆ ಕ್ಷಿಣಿಸಬೇಕಾಗಿದೆ.ನಮ್ಮ ಭಾರತದ ಅದ್ಬುತ ಸಂವಿಧಾನವನ್ನ ಕೊಟ್ಟ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಚರಣಗಳಿಗೆ ನನ್ನ ನಮನಗಳು.