Sunday, May 22, 2016

ಇದು ಹೀಗೆ ಆಗಬಾರದಿತ್ತು ಅಂದ್ರು ಹಲವರು, ಬದುಕಿ ಬಂದು ಥ್ಯಾಂಕ್ಸ್ ಹೇಳಿದ್ದಕ್ಕೆ ಖುಷಿ ಪಟ್ರು ಡಾಕ್ಟ್ರು ......!ನನ್ ಕಥೆ ಭಾಗ ....03

 
ನೊಂದ ಮನಸಿಗೆ  ಒಳ್ಳೆಯ ಮಾತುಗಳು  ಪುಷ್ಪಗುಚ್ಚದಂತೆ  ಮುದನೀಡುತ್ತವೆ 


ಆಸ್ಪತ್ರೆಯಲ್ಲಿ ಚಿಕಿತ್ಸೆ    ಪದೆದದ್ದಾಯಿತು,  ವೈಧ್ಯರು  ಮನೆಯಲ್ಲಿ   ವಿಶ್ರಾಂತಿ ಪಡೆಯಲು  ಸೂಚಿಸಿದ ಮೇರೆಗೆ  ನನ್ನ ವಿಶ್ರಾಂತಿ   ಪರ್ವ ಆರಂಭವಾಯಿತು. ನನಗೆ ಅಪಘಾತ ಆದ ವಿಚಾರ  ನನ್ನ ಗೆಳೆಯರಿಗೆ  ನೆಂಟರಿಗೆ   ತಿಳಿಯಲು  ತಡಾ ಆಗಲಿಲ್ಲ,    ದಾವಿಸಿಬಂದರು ಸಂತೈಸಲು........! ಕಂಬನಿ  ಮಿಡಿದವರು  ಹಲವರು, ಕೆಲವರು ಹಾರೈಸಿದರು  ಮತ್ತೆ ಕೆಲವರು .....? ಪತ್ತೆದಾರರಂತೆ  ......ಪ್ರಶ್ನೆ    ಕೇಳಿ  ಎಡವಟ್ಟು ಮಾಡಿಕೊಂಡರು     ಮುಂದೆ ....?    ಹಾಗೆ  ನಡೆಯಿತು , ಪ್ರತಿನಿತ್ಯ  ಕನಿಷ್ಠ   ಹತ್ತರಿಂದ ಇಪ್ಪತ್ತು ಜನ   ಮನೆಗೆ ಬಂದು  ತಮ್ಮ ಪ್ರೀತಿ ತೋರಿದರು ಬಹಳಷ್ಟು ಮಂದಿ. ಅಚ್ಚರಿ ಅಂದ್ರೆ  ಫೇಸ್ಬುಕ್ ನಲ್ಲಿ   ಪರಿಚಯ  ಆಗಿ ಮುಖವನ್ನೇ ನೋಡದ ಕೆಲವರು  ಅದು ಹೇಗೋ  ನನ್ನ ವಿಳಾಸ  ಪತ್ತೆಮಾಡಿ  ಮನೆಗೆಬಂದು  ತಮ್ಮ ಪ್ರೀತಿ ತೋರಿದರು . ಬಹಳಷ್ಟ್ ಜನ   ಹಣಕಾಸು ಸಹಾಯ   ಮಾಡಲು ಮುಂದೆ ಬಂದರು ,  ಆದರೆ ಅದನ್ನು  ನಯವಾಗಿ ನಿರಾಕರಿಸಿದೆ,  ತೀರಾ ಆತ್ಮೀಯರು  ಕೆಲವರು  ನನ್ನ ಬೆನ್ನ ಹಿಂದೆ ನಿಂತರು , ಪ್ರತಿನಿತ್ಯ   ಆಗಮಿಸುವ  ನೆಂಟರು , ಗೆಳೆಯರುಗಳ ಜೊತೆ ಮಾತು ಕಥೆ  ಇವುಗಳ  ಜೊತೆಗೆ  ದೂರವಾಣಿ  ಕರೆಗಳನ್ನು ಸ್ವೀಕರಿಸುವುದೇ  ನಮ್ಮ ಮನೆಯಲ್ಲಿ  ಒಂದು ಹೊಸ ದಿನಚರಿ ಆಯ್ತು,    ಮೊದಮೊದಲು ನನಗೆ  ಮಾತನಾಡಲು, ಎದ್ದು  ಕುಳಿತು  ಮಾಡುವುದು   ಸಾಧ್ಯವಾಗದ   ಕಾರಣ   ನನ್ನ ಮನೆಯವರುಗಳೇ   ನನ್ನ ಪರವಾಗಿ   ಈ ಕಾರ್ಯವನ್ನು  ಮಾಡಿದರು.    ದೇಹದಲ್ಲಿ ಶಕ್ತಿ ಇಲ್ಲದೆ, ನೋವನ್ನು ಅನುಭವಿಸುತ್ತಾ ,  ಮಾತ್ರೆ, ಔಷಧಿ,  ನಿದ್ದೆ, ಊಟ ,  ಎಲ್ಲಕ್ಕೂ   ಆಸರೆ ಪಡೆಯುತ್ತಾ   ದಿನಗಳನ್ನು  ಕಳೆಯುತ್ತಿದ್ದೆ.  ಒಮ್ಮೊಮ್ಮೆ ನಾನು  ಜೀವವಿರುವ  ಅಸಹಾಯಕ  ದೇಹದ  ಯಜಮಾನ   ಎಂಬ ಭಾವನೆ  ಬರುತ್ತಿತ್ತು. ಓದಲು ಆಗುತ್ತಿರಲಿಲ್ಲ , ಎದ್ದುಕುಳಿತರೆ   ತಲೆ ಚಕ್ಕರ್  ಹೊಡೆಯೋದು, ಟಿ. ವಿ. ನೋಡಲು  ಆಗುತ್ತಿರಲಿಲ್ಲ, ತಲೆ ನೋವು ಬರುತಿತ್ತು,  ಇವುಗಳ ಜೊತೆಗೆ  ಹೆಣಗಾಡುತ್ತಾ  ಕೆಲವು  ವಾರಗಳು ಕಳೆದವು,  ನಿಧಾನವಾಗಿ   ದೇಹಕ್ಕೆ   ಚೈತನ್ಯ   ಬರುತ್ತಿತ್ತು, ಬಂದವರೊಡನೆ  ಮಾತನಾಡುವಷ್ಟು   ಶಕ್ತಿ ಬಂತು.   ಬರುವ ನೆಂಟರು , ಗೆಳೆಯರು  ಬರುತ್ತಲೇ ಇದ್ದರು, ಇಂತಹ ವೇಳೆ ಬಂದರು  ಒಬ್ಬ  ಆತ್ಮೀಯರು .

ಶೀರ್ಷಿಕೆ ಸೇರಿಸಿಮನೆಗೆ ಬಂದವರೇ   ಬಹಳ ಆತ್ಮೀಯವಾಗಿ   ಹತ್ತಿರ ಬಂದು  ತಲೆ ಸವರಿದರು, ಮನೆಯವರೆಲ್ಲರ  ಜೊತೆ  ಮಾತು ಕಥೆ ಆಯಿತು,  ನಂತರ  ಅಲ್ಲಿದ್ದ ಕೆಲವರಿಗೆ ಇವರನ್ನು   ಸ್ವಲ್ಪ   ಜಾಸ್ತಿ ಹೊಗಳಿ  ಪರಿಚಯ ಮಾಡಿಕೊಟ್ಟೆ . ಅಲ್ಲೇ  ಆಗಿತ್ತು ತಪ್ಪು.  ಅಲ್ಲಿದ್ದವರ ಪರಿಚಯ ಮಾಡಿಕೊಂಡು    ನನ್ನ ಹತ್ತಿರ ಬಂದು ಕುಳಿತರು,  ಮತ್ತೆ ವಿಶೇಷ ಏನಪ್ಪಾ ....?  ಅಪಘಾತ  ಹೇಗೆ  ಆಯ್ತು ....?  ಅಂದರು   ನಾನು ನನಗೆ  ಗೊತ್ತಿದ್ದ ,  ನನಗಾದ  ಅಪಘಾತದ  ವಿಚಾರವನ್ನು   ಅವರಿಗೆ  ಹೇಳಿದೆ.  ನಂತರ   ಶುರು ಆಯ್ತು ಅವರ  ಪ್ರಶ್ನೆಗಳ ಸುರಿಮಳೆ,   ಅಲ್ಲಾ    ಈ ತುದಿಯಿಂದ   ನೀನು ರಸ್ತೆ    ದಾಟುತ್ತಿದ್ದರೆ... ಆ ಬೈಕಿನವರು   ಈ  ಆಂಗಲ್  ನಲ್ಲಿ  ನಿನಗೆ ಗುದ್ದಿರಬೇಕು,    ಹೀಗೆ ಗುದ್ದಿದರೆ  ನಿನಗೆ   ಇಲ್ಲಿ ಪೆಟ್ಟಾಗಿರಬೇಕು ,  ಆದರೆ  ನಿನಗೆ   ಆಗಿರೋದು   ಬೇರೆ ತರಹ  ಇದೆ  ಇದು ಹ್ಯಾಗೆ ಸಾಧ್ಯ  ...?   ಅಂದರು,  ನನಗೆ   ಇನ್ನೂ    ನನ್ನ ಅಪಘಾತದ   ವಿವರ ತಿಳಿದಿರಲಿಲ್ಲ,  ಅಪಘಾತ  ಆದ ತಕ್ಷಣ   ಪ್ರಜ್ಞೆ ಹೋಗಿತ್ತು,  ಹೀಗಿರುವಾಗ   ಇಂತಹ ಪ್ರಶ್ನೆಗಳಿಗೆ ಉತ್ತರ ಎಲ್ಲಿಂದ   ತರಲಿ. ಇರುವ ವಿಚಾರ   ಹೇಳಿದೆ   ಆ ಯಪ್ಪಾ   ಯಾವುದೇ ಕೆಟ್ಟ  ಉದ್ದೇಶ  ಇಲ್ಲದೆ ಇದ್ದರೂ   ಸುಮ್ಮನೆ   ಸುರಿಮಳೆ   ಹಾಕುತ್ತಲೇ ಇದ್ದರು . ಒಂದು ಕಡೆ  ಗಾಯದ ನೋವು,  ತಲೆಯಲ್ಲಾ  ಸುತ್ತುತ್ತಿರುವ  ಅನುಭವ , ದೇಹದಲ್ಲಿ  ತ್ರಾಣವಿಲ್ಲದ   ಅಸಹಾಯಕ ಸ್ಥಿತಿ ,  ಅವರಿಗೆ ತಿಳಿ ಹೇಳಲು  ಹೋದರೆ  ಅವರಿಗೆಲ್ಲಿ ನೋವು ಆಗುತ್ತದೆಯೋ  ಎಂದು  ನಮ್ಮ ಮನೆಯವರಿಗೆ   ಸಂಕೋಚ ,  ಈ ಪರಿಸ್ಥಿತಿ   ನಿಜಕ್ಕೂ ಬಯಸದೆ ಬಂದ   ನೋವಾಗಿತ್ತು,    ಇದೆಲ್ಲವನ್ನೂ    ನೋಡುತ್ತಾ   ಕುಳಿತಿದ್ದ   ನನ್ನ ಗೆಳೆಯರೊಬ್ಬರ    ಪತ್ನಿ,     ಸಾರ್   ಸುಮ್ಮನಿರಿ,   ಅವರ ಪಾಡಿಗೆ ಅವರು ನೋವು ತಿನ್ನುತ್ತಾ  ನರಳುತ್ತಾ ಇದ್ದಾರೆ , ನೀವು    ಸುಮ್ನೆ ಪ್ರಶ್ನೆ ಹಾಕ್ತಾ   ಅವರ ನೋವನ್ನು ಮತ್ತಷ್ಟು ಜಾಸ್ತಿ ಮಾಡ್ತಾ   ಇದೀರ,  ಅಪಘಾತ  ಆದಾಗ ಅವರಿಗೆ ಜ್ಞಾನ  ಹೋಗಿದ್ದಾಗ  ಹೇಗೆ  ಹೇಳುತ್ತಾರೆ  ಏನು ನಡೆಯಿತೆಂದು , ಅದನ್ನು ಯಾರಾದ್ರೂ  ವೀಡಿಯೊ  ಮಾಡಿದ್ರೆ ನಿಮ್ಮ ಪ್ರಶ್ನೆಗಳಿಗೆ   ಉತ್ತರ ಕೊಡಬಹುದು,  ರೀ ಬಾಲೂ   ಮೊದಲು ರೂಂ  ಒಳಗೆ ಹೋಗಿ, ರೆಸ್ಟ್ ಮಾಡಿ  ಪ್ರತಿನಿತ್ಯ  ಹೀಗೆ ಬಂದವರೆಲ್ಲಾ   ಪ್ರಶ್ನೆ  ಕೇಳಿ  ಹಿಂಸೆ ಮಾಡಿದ್ರೆ   ನಿಮ್ಮ ಆರೋಗ್ಯ  ಸುಧಾರಿಸೋದು ಕಷ್ಟ  ಆಗುತ್ತೆ  , ಅಂತಾ ಹೇಳಿ ಬಲವಂತವಾಗಿ   ಒಳಗೆ  ಕಳುಹಿಸಿದರು,   ಇದನ್ನು ನಿರೀಕ್ಷಿಸದೆ ಇದ್ದ   ಆ ಆತ್ಮೀಯರು ಒಂದು ಕ್ಷಣ   ಅವಕ್ಕಾದರು ....!  ತನ್ನ ತಪ್ಪು ಅರಿವಾಯಿತು ಅನ್ನ್ಸುತ್ತೆ  "ಸಾರಿ ಕಣಯ್ಯ  ಪರಿಸ್ಥಿತಿಯ  ಅರಿವಿಲ್ಲದೆ    ಏನೇನೋ ಪ್ರಶ್ನೆ ಕೇಳಿದೆ"   ಅಂತಾ  ಹೇಳಿ    ಅಲ್ಲಿಂದ ನಿರ್ಗಮಿಸಿದರು .   ನಾವು ಕೆಲವೊಮ್ಮೆ   ರೋಗಿಗಳನ್ನು ಕಾಣಲು ಹೋದಾಗ   ಮಾತನ್ನು  ಎಷ್ಟು ಮಿತವಾಗಿ  ಆಡಬೇಕು,  ಹಾಗು ಅವರ ಮನಸಿಗೆ ಘಾಸಿಯಾಗದಂತೆ  ನಡೆದುಕೊಳ್ಳಬೇಕು  ಎಂಬ   ವಿಚಾರ   ನನ್ನ ಅರಿವಿಗೆ  ವೈಜ್ಞಾನಿಕವಾಗಿ ಅರ್ಥ ಆಯ್ತು.

ಯಾವ ಜನ್ಮದ  ಮೈತ್ರಿ  ಈ ಹುಡುಗನಿಗೆ ಹಾಗು ನನಗೆ ಹೀಗೆ   ಕೆಲವು  ತಿಂಗಳು ಕಳೆದವು   ದೇಹಕ್ಕೆ ಚೈತನ್ಯ   ಬರಲು ಶುರು ಆಯ್ತು,  ಮನಸಿನಲ್ಲಿ  ನನ್ನ ಪ್ರಾಣ ಉಳಿಸಿದ   ಜಗದೀಶ್, ಹಾಗು ವೈಧ್ಯರನ್ನು ಕಾಣುವ ಬಯಕೆ  ಜಾಸ್ತಿಯಾಯ್ತು,  ಸರಿ ಒಂದು ದಿನ  ನನ್ನ  ಹುಡುಗನ ಕಾರಿನಲ್ಲಿ  ಚನ್ನರಾಯಪಟ್ಟಣಕ್ಕೆ  ಹೊರಟೇಬಿಟ್ಟೆ,  ಜಗದೀಶ್  ಸಿಕ್ಕೆಬಿಟ್ಟರು  ಆನಂದಕ್ಕೆ ಪಾರವಿಲ್ಲ,  ಕೃತಜ್ಞತೆ  ತುಂಬಿದ ಮನ  ಆ ತಮ್ಮನಂತಹ  ಹುಡುಗನನ್ನು ತಬ್ಬಿಕೊಳ್ಳಲು  ಹಾತೊರೆಯುತ್ತಿತ್ತು ,  ಜೀವ ಉಳಿಸಿದ  ವ್ಯಕ್ತಿಯನ್ನು ಕಣ್ಣಾರೆ ಕಾಣುವ ಭಾಗ್ಯ  ಒದಗಿ  ಬಂದಿತ್ತು,  ಗೌರವ ಹಾಗು ಪ್ರೀತಿಯಿಂದ ಅಪ್ಪಿಕೊಂಡೆ ,  ಮಾತುಗಳು  ಹೊರಬರಲು ತಿಣುಕಾಡಿದವು ,  ಬಹಳ ಆತ್ಮೀಯವಾಗಿ  ಮಾತನಾಡಿ   ಜಗದೀಶ್  ನಿಮ್ಮ ಈ ಉಪಕಾರಕ್ಕೆ   ಬೆಲೆ ಕಟ್ಟಲಾರೆ   ಎಂದು ಹೇಳುತ್ತಾ   ಸಿಹಿ  ತಿಂಡಿಯ  ಪೊಟ್ಟಣ  ನೀಡಿದೆ,  ಆ ಹುಡುಗನಿಗೂ   ಖುಷಿಯಾಗಿತ್ತು,  ಅಪಘಾತದ    ವಿವರ  ತಿಳಿಸುವಂತೆ  ಕೋರಿದೆ,  ಬನ್ನಿ ಸಾರ್  ಅಂತಾ ಹೇಳಿ ನನಗೆ ಅಪಘಾತ   ಆದ  ವಿವರ   ನೀಡುತ್ತಾ   ಇದೆ ನೋಡಿ ಸಾರ್  ನಿಮಗೆ  ಆಕ್ಸಿಡೆಂಟ್  ಆದ ಜಾಗ  ಅನ್ನುತ್ತಾ    ಜಾಗ ತೋರಿಸಿದರು ,
ಅಪಘಾತ  ಆದ ಸ್ಥಳ 


  ರಾಷ್ಟ್ರೀಯ ಹೆದ್ದಾರಿಯಲ್ಲಿ   ನನಗೆ ಅಪಘಾತ ನಡೆದಿತ್ತು,  ಅಂದು ಪುಣ್ಯಕ್ಕೆ  ಯಾವುದೇ  ಹೆಚ್ಚಿನ  ವಾಹನ ಸಂಚಾರ ಇರಲಿಲ್ಲ, ಇಲ್ಲಿಂದಾನೆ ಸಾರ್    ಆಪೆ ಆಟೋದಲ್ಲಿ  ಹಾಕಿಕೊಂಡು  ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು , ಅಂದರು ,  "ಜಗದೀಶ್  ನನಗೆ  ಟ್ರೀಟ್ಮೆಂಟ್  ನೀಡಿದ ಡಾಕ್ಟರ್  ಸಿಗುತ್ತಾರ...?" ಅಂದೇ , ಅದಕ್ಕೇನಂತೆ  ಬನ್ನಿ ಹೋಗೋಣ ಅಂತಾ  ಹೇಳಿ    ಸರ್ಕಾರಿ ಆಸ್ಪತ್ರೆಗೆ    ಕರೆದುಕೊಂಡು   ಹೋದರು,  ನನಗೆ ಪ್ರಾಥಮಿಕ  ಚಿಕಿತ್ಸೆ ನೀಡಿ,  ಮುಖದಲ್ಲಿ  ಮೂರು ಕಡೆ ಹೋಳಿಗೆ ಹಾಕಿ ರಕ್ತಸ್ರಾವ  ನಿಲ್ಲಲು  ಕಾರಣರಾಗಿದ್ದ ವೈಧ್ಯರು ಇವರು ,  ಕೊನೆಗೆ ಅವರನ್ನು  ಹುಡುಕಿ,  ಭೇಟಿಮಾಡಿದೆವು, ,

ಚಿಕಿತ್ಸೆ  ನೀಡಿ ಪ್ರಾಣ ಉಳಿಸಿದ  ಸರ್ಕಾರಿ ವೈಧ್ಯರಾದ   ಶ್ರೀನಿವಾಸ್  ಅವರು ಯಾರು ನೀವು ಅಂದರು  ಆ ವೈಧ್ಯರು ...?  ಅಪಘಾತದ   ನೆನಪನ್ನು ಹೇಳಿದಾಗ   ಓ   ಗೊತ್ತಾಯ್ತು ಗೊತ್ತಾಯ್ತು  ಎಂದು ಹೇಳಿ  ಅಂದಿನ ಘಟನೆಯನ್ನು   ಸ್ಮರಿಸಿಕೊಂಡರು . ಅವರಿಗೆ ಕೃತಜ್ಞತೆ  ಅರ್ಪಿಸಿ  ಸಿಹಿಯ ಪ್ಯಾಕೆಟ್   ನೀಡಲು , ಅವರಿಗೆ ಅಚ್ಚರಿಯಾಯ್ತು,  ಅಲ್ಲಾ ಸಾರ್ ನನ್ನ ಕರ್ತವ್ಯ ನಾನು ಮಾಡಿದೆ ಅಷ್ಟೇ  ಅಂದರು.  ಮುಂದುವರೆದು,  ಇಲ್ಲಿ ಅಪಘಾತ ಆಗ್ತಾ  ಇರುತ್ತೆ   ನೂರಾರು ಜನರಿಗೆ ತುರ್ತು  ಚಿಕಿತ್ಸೆ  ನೀಡಿದ್ದೇನೆ ,  ಚಿಕಿತ್ಸೆ  ಪಡೆದವರು  ಒಮ್ಮೆ ಹೋದರೆ ಮತ್ತೆ ಬರುವುದಿಲ್ಲ,  ಅದನ್ನು ನಾವು ನಿರೀಕ್ಷೆನೂ  ಮಾಡೋದಿಲ್ಲ , ಆದರೆ ನನಗೆ ಅಚ್ಚರಿ ಅಂದ್ರೆ  ಅಪಘಾತದ ಬಗ್ಗೆ  ಚಿಕಿತ್ಸೆ ಪಡೆದು   ನಂತರ  ಬಂದು  ನನಗೆ ಕೃತಜ್ಞತೆ  ಹೇಳಿದ ಮೊದಲನೇ  ವ್ಯಕ್ತಿ ನೀವು,  ನನ್ನ  ಹುದ್ದೆಯ ಬಗ್ಗೆ ಹೆಮ್ಮೆ ಪಡುವಂತೆ  ಮಾಡಿದ್ರೀ  ಅನ್ನುತ್ತಾ ಪ್ರೀತಿಯ  ಮಾತನಾಡಿದರು. ಅವರಿಂದ  ಬೀಳ್ಕೊಂಡು  ಜಗದೀಶ್  ಜೊತೆ ಚನ್ನರಾಯಪಟ್ಟಣದಲ್ಲಿ   ಊಟ ಮಾಡಿ  , ವಾಪಸ್ಸು  ಹೊರಡುವ ಮೊದಲು . ಜಗದೀಶ್  ನನ್ನ ಚಿಕಿತ್ಸೆಗೆ   ನೀವು ಖರ್ಚು   ಮಾಡಿದ ಹಣ   ಎಷ್ಟು   ಹೇಳಿ ದಯವಿಟ್ಟು ಅಂದೇ .  ಆದರೆ ಆ ಹುಡುಗ   ಏ  ಎನ್ ಸಾರ್ ನನಗೆ   ದುಡ್ಡುಕೊಟ್ಟು   ಅವಮಾನ ಮಾಡ್ತೀರ  ಅನ್ದುಬಿಡೋದೇ , ನನಗೆ ದಿಕ್ಕು ತೋಚಲಿಲ್ಲ .   ಅವರಿಗೆ ಮತ್ತೊಮ್ಮೆ   ಕೃತಜ್ಞತೆ  ಹೇಳಿ ಮನೆಯ ಹಾದಿ ಹಿಡಿದೇ ,  ದಾರಿಯಲ್ಲಿ   ಹಲವಾರು ಪ್ರಶ್ನೆಗಳು  ಕಾಡತೊಡಗಿದವು. ೧]  ಈ ಹುಡುಗ ಯಾರು,     ೨] ನನ್ನನ್ನು ಉಳಿಸ ಬೇಕು  ಅಂತಾ  ಇವನಿಗೆ  ಯಾಕೆ ಅನ್ನಿಸಿತು, ೩ ] ಈ ಹುಡುಗ ನನ್ನ ನೆಂಟನಲ್ಲ, ಒಡ ಹುಟ್ಟಿದವನಲ್ಲಾ  ಆದರೂ  ಈ ತರಹದ ಪ್ರೀತಿ ಯಾಕೆ ಬಂತು ..?  ನನ್ನಿಂದ   ತಾನು ಖರ್ಚು ಮಾಡಿದ  ಹಣವನ್ನೂ  ಸಹ  ತೆಗೆದುಕೊಳ್ಳಲಿಲ್ಲ   ಯಾಕೆ ..?   ಆ ಸರ್ಕಾರಿ ವೈಧ್ಯರೇಕೆ  ಅಷ್ಟು  ಉತ್ತಮವಾಗಿ  ಪ್ರಥಮ  ಚಿಕಿತ್ಸೆ ನೀಡಿದರು ...?   ಈ  ಅಪರಿಚಿತನಿಗೆ   ಈ ಊರಿನಲ್ಲಿ  ಎಷ್ಟೆಲ್ಲಾ   ಉಪಕಾರ  ಸಿಗಲು  ಹೇಗೆ ಸಾಧ್ಯಾ ...?  ಯಾರ ಶುಭ ಹಾರೈಕೆ  ನನ್ನನ್ನು ಬದುಕಿಸಿತು, ..? ಹೀಗೆ   ಪ್ರಶ್ನೆಗಳ ಪ್ರವಾಹ ಬಂದವು , ಯಾವುದಕ್ಕೂ   ನನ್ನ ಬಳಿ  ಉತ್ತರವಿರಲಿಲ್ಲ,   ಹಾಗೆ ಆಲೋಚಿಸುತ್ತಾ   ನಿದ್ದೆಗೆ ಜಾರಿದೆ,   ಸಾರ್ ಮನೆ ಬಂತು ಇಳಿಯಿರಿ  ಅಂದಾ ನಮ್ಮ ಹುಡುಗ ನವೀನ.


7 comments:

Badarinath Palavalli said...

ಬದುಕಿನ ಒಂದು ಯಾತನಾಮಯ ಅಧ್ಯಾಯದಿಂದ ಇದೀಗ ಮರಳಿ ನೆಮ್ಮದಿಯತ್ತ ವಾಲುತ್ತಾ, ತುಸು ಬ್ಲಾಗನ್ನೂ ಗಮನಿಸಿಕೊಳ್ಳುತ್ತಿರುವ ತಮಗಿದೋ ಶೀಘ್ರ ಚೇತರಿಕೆಯ ಹಾರೈಕೆಗಳು.

ಅಪಘಾತಕ್ಕೀಡಾಗಿ ನೋವು ತಿನ್ನುತ್ತಾ ಕುಳಿತವರಿಗೆ ಹೀಗೆ ಪ್ರಶ್ನಾ ಬಾಣಗಳಿಂದ ಕೆಣಕುವವರ ಮೌಢ್ಯತೆಗೆ ಏನು ಹೇಳಬಲ್ಲೆವು ಬಾಲೂ ಸಾರ್? ಕ್ಷಮಿಸುವುದನು ಬಿಟ್ಟು!

ಆಪತ್ತಿಗಾದ ಜಗದೀಶರಿಗೂ, ಪ್ರತಿಫಲ ಬಯಸದ ಶ್ರೀನಿವಾಸರಿಗೂ ನಾವು ಚಿರ ಋಣಿಗಳು.

Subru said...

ಜನಪ್ರಿಯ ನಿಮ್ಮೊಳಗೊಬ್ಬ ಬಾಲು
ಮುಖ ಪುಸ್ತಕದ ತಂಡದ ಮುಖ್ಯಕೀಲು
ಶುದ್ಧ ಮನಸ್ಸಿನ ಛಾಯಾಚಿತ್ರಗ್ರಾಹಕ
ತೆಗೆದ ಚಿತ್ರಗಳೆಲ್ಲವೂ ತುಂಬಾ ಆಕರ್ಶಕ

ಬಾಲು ಬಿದ್ದ ಚನ್ನರಾಯ ಪಟ್ಟಣದಲ್ಲಿ
ಮುಖದ ಮೇಲೆ ಮೂರು ಗಾಯ ರಕ್ತದಲ್ಲಿ
ಸಾಗಿಸಿದ ಜಗದೀಶ ಶರೀರವ ಆಟೊರಿಕ್ಶಾದಲ್ಲಿ
ಶ್ರೀನಿವಾಸನ ಕೃಪೆ ಸರಕಾರಿ ಆಸ್ಪತ್ರೆಯಲ್ಲಿ

ಬೀಳುವುದು ಕಷ್ಟವಲ್ಲ ಬಿದ್ದವರೆ ನಾವು
ಏಳುವುದು ಅತಿ ಕಷ್ಟ ಇರಬೇಕು ನೆರವು
ಪ್ರೀತಿ ಆತ್ಮೀಯತೆ ಮಾನವನೆಂಬ ಸತ್ಯ
ಪ್ರತಿ ಫಲದ ಆಶೆಇರದೆ ಇರಲಿ ನಮ್ಮಲ್ಲಿ ನಿತ್ಯ

ನಿಮ್ಮ ಪ್ರೀತಿಯ ಗೆಳತಿ said...

1st i tell thank u for Jagadeesh and Dr.Srinivas.............

ನಿಮ್ಮ ಪ್ರೀತಿಯ ಗೆಳತಿ said...

obha manusya obhane help madbeku ha reeti mad eddake thank u jagadeesh .............

Gopakumar said...

Very well written and narrated. Ninne nimmannu bhetiyaagidde, thumba kushi aaithu. Heege bareyuthaliri. Sheegra gunamukharaagi.

ಶಿವಪ್ರಕಾಶ್ said...

ಇಂದು ನಾವೆಲ್ಲಾ ನಮ್ಮ ನಮ್ಮ ಜಗತ್ತಿನಲ್ಲಿ ಕಳೆದು ಹೋಗಿದ್ದೇವೆ. ಸಹಾಯ ಮಾಡಬೇಕು ಅನ್ನುವ ಗುಣ ನಮ್ಮಿಂದ ಮಾಯವಾಗುತ್ತಾ ಇದೆ. ಇಂತಹ ಜಗತ್ತಿನಲ್ಲಿ ಜಗದೀಶ್ ನಂತವರು ಇರುವುದು ನಮ್ಮ ಪುಣ್ಯ. ಸಮಯಕ್ಕೆ ಸರಿಯಾಗಿ ನಿಮಗೆ ಚಿಕಿತ್ಸೆ ಕೊಡಿಸಿ, ಮಾನವೀಯತೆ ಮೆರೆದ ಜಗದೀಶ್ ಅವರಿಗೆ ನಮ್ಮ ಸಲ್ಯೂಟ್... ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ...

Thanks to Jagadeesh and Dr.Srinivas for the timely help. God Bless them.


BALELE SEETHARAMAIAH Gokula said...

Sorry for late response subramanya. Came to know about unfortunate incident and your recovery. Just now my brother informed me. You are a wonderful human hence God is kind with you. Shall meet you shortly. God bless you and wish you speedy recovery.
Colone BS Gokula