Sunday, June 14, 2015

ಜನರ ಮುಂದೆ ಮಾತಾಡೋದು ಅಂದ್ರೆ ಉಫ಼್ಫ಼್ ಕಷ್ಟ ಕಷ್ಟಾ .....!

 ಸಾಂದರ್ಭಿಕ  ಚಿತ್ರ  ಕೃಪೆ ಅಂತರ್ಜಾಲ ನಮಸ್ತೆ ಗೆಳೆಯರೇ , ಗೆಳೆಯರು ಒಬ್ಬರು  ಹೇಳ್ತಾ ಇದ್ರೂ .....   ಮೊನ್ನೆ ಮೊನ್ನೆ ವರ್ಗೂ  ಅವನಿಗೆ ನೆಟ್ಟಗೆ ಮಾತಾಡೋಕೆ ಬರ್ತಾ ಇರಲಿಲ್ಲ , ಈಗೆನ್ರೀ  ಅಷ್ಟೊಂದು  ಜನರ ಮುಂದೆ ನಿಂತು   ಯಾವುದೇ ವಿಚಾರದ ಬಗ್ಗೆ ಬೇಕಾದರೂ  ಮಾತಾಡೋ ಧೈರ್ಯ ಬಂದಿದೆ , ಮೊನ್ನೆ ಅವನ ಮಾತು ಕೇಳಿದೆ  ಅಬ್ಬಬ್ಬ   ಏನ್ರೀ ಬಹಳ  ಕಮಾಲ್ ಮಾಡಿದ ಬಿಡ್ರೀ ಅಂತಾ ನನ್ನ ಇನ್ನೊಬ್ಬ ಗೆಳೆಯನೊಬ್ಬನ  ಬಗ್ಗೆ  ಮೆಚ್ಚುಗೆ ವ್ಯಕ್ತ ಪಡಿಸಿದರು .

ಈ ಜನರ ಸಮಾರಂಭ , ಮೈಕು , ವೇದಿಕೆ  ಇತ್ಯಾದಿಗಳು  ಒಂತರಾ  ಆಕರ್ಷಣೆ ಕಣ್ರೀ  ಎಲ್ಲರಿಗೂ ಒಮ್ಮೆಯಾದರೂ ನಾನು ಸಹ  ಒಮ್ಮೆ ಇಂತಹ ವಾತಾವರಣದಲ್ಲಿ  ಮಾತನಾಡಬೇಕು ಅಂತಾ ಖಂಡಿತಾ ಅನ್ಸಿರುತ್ತೆ,  ಆದರೆ ಮನದ  ಒಳಗೆ ಅಡಗಿರುವ ಭಯ, ಸಂಕೋಚ,  ನಾಚಿಕೆ ಇತ್ಯಾದಿಗಳು   ನಮ್ಮನ್ನು  ಇಂತಹ ಅವಕಾಶಗಳಿಂದ  ವಂಚಿತರನ್ನಾಗಿ ಮಾಡಿಬಿಡುತ್ತವೆ . ಆದರೆ ಒಂದು ಮಾತು,   ಯಾರೂ ಸಹ ಒಮ್ಮೆಲೇ  ಧೈರ್ಯವಾಗಿ  ವೇದಿಕೆಯಲ್ಲಿ, ಸಭೆಗಳಲ್ಲಿ,  ಮಾತನಾಡಲು  ಆಗುವುದಿಲ್ಲ,  ಹಲವಾರು ಎಡವಟ್ಟುಗಳು ಘಟಿಸಿದ ನಂತರವೇ   ನಮ್ಮ  ಮಾತನಾಡುವ ಹಾದಿ ಸುಗಮ  ಆಗೋದು  ಎಂಬಂತೂ ಸತ್ಯ .

 ಚಿಕ್ಕವಯಸ್ಸಿನಿಂದ  ತರಗತಿಗಳಲ್ಲಿ ಪಾಠ  ಮಾಡುವ ಶಿಕ್ಷಕರು, ಸಾರ್ವಜನಿಕ ಸಭೆ, ಸಮಾರಂಭ , ತರಬೇತಿ   ಕಾರ್ಯಕ್ರಮಗಳಲ್ಲಿ ಮಾತನಾಡುವ ವ್ಯಕ್ತಿಗಳನ್ನು ನೋಡಿ ನಾನೂ ಸಹ ಹೀಗೆ ಮಾತನಾಡುವ  ಆಸೆ ಆಗ್ತಾ ಇತ್ತು, ಆದರೆ ಮನದಲ್ಲಿನ ಪುಕ್ಕಲುತನ  ಇದಕ್ಕೆ ಅವಕಾಶ  ಕೊಡುತ್ತಿರಲಿಲ್ಲ .   ಬುದ್ದಿ ಬಲಿತ ನಂತರ  ಪುಕ್ಕಲುತನ ಬಿಟ್ಟು  ಅಡ್ಡಾ ದಿಡ್ಡಿಯಾಗಿ  ಎಡವಟ್ಟು ಮಾಡಿಕೊಳ್ಳುತ್ತಾ ಹಾದಿಗೆ  ಬಂದೆ . ಇಂತಹ ಎಡವಟ್ಟುಗಳ  ನೆನಪು  ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ  ಬನ್ನಿ.

೧] ನಾನಾಗ  ಆರನೇ ತರಗತಿಯ ವಿದ್ಯಾರ್ಥಿ  ಮಳವಳ್ಳಿ ಸರ್ಕಾರಿ ಪ್ರಾಥಮಿಕ  ಶಾಲೆ ಯಲ್ಲಿ     ಪುಷ್ಪಾವತಮ್ಮ  ಎನ್ನೋ  ಪೂಜ್ಯ ಮುಖ್ಯ ಶಿಕ್ಷಕಿ  ಇದ್ದರು, ಮಕ್ಕಳ ಪ್ರತಿಭೆ ಹೊರತಂದು  ಶಾಲೆಯ ಕೀರ್ತಿ ಬೆಳಗಿಸುವ  ಹಂಬಲ ಅವರದು ,  ಹೇಗಾದರೂ ಮಾಡಿ  ತಮ್ಮ ಶಾಲೆಯ ಮಕ್ಕಳಿಂದ  ಆಕಾಶವಾಣಿಯಲ್ಲಿ  ಕಾರ್ಯಕ್ರಮ ಕೊಡಿಸುವ  ಆಸೆ ಅವರದು,  ಮಕ್ಕಳ ಪ್ರತಿಭೆಯ  ಪರೀಕ್ಷೆ ಮಾಡಲು ಹೊರಟರು ,  ಪ್ರತಿಭಾ ಪರೀಕ್ಷೆಗೆ  ಆಯ್ಕೆಯಾದವರಲ್ಲಿ  ನಾನೂ ಒಬ್ಬ,   ತರಗತಿಯ ಆಯ್ಕೆ ಸುತ್ತಿನಲ್ಲಿ  ಮಿಮಿಕ್ರಿಯಲ್ಲಿ   ಆಯ್ಕೆಯಾಗಿದ್ದೆ  ನಾನು ,   ಮನೆಯಲ್ಲಿ  ಬಹಳ ಜಂಬಾ  ಕೊಚ್ಚಿಕೊಂಡಿದ್ದೆ ,  ಅಮ್ಮನಿಗೂ ತನ್ನ ಮಗ ಜಗವನ್ನೇ ಗೆದ್ದ ಎಂಬ ಖುಷಿ . ಅಂತಿಮ ಸುತ್ತಿನ  ಆಯ್ಕೆ ಇದೇ ಶಾಲೆಯ   ಶಿಕ್ಷಕರ ಹಾಗು ಮಕ್ಕಳ ಎದುರು ಪ್ರದರ್ಶನ ನೀಡಬೇಕು,   ಆ ದಿನ ಬಂದೆ ಬಿಟ್ಟಿತು,  ಕಾರ್ಯಕ್ರಮ ಶುರು ಆಯ್ತು , ಕೆಲ ಮಕ್ಕಳು  ಹೆದರದೆ  ಪ್ರದರ್ಶನ ನೀಡಿ ಚಪ್ಪಾಳೆ ಗಿಟ್ಟಿಸಿದರು , ಆದರೆ ನನ್ನ ಸರದಿ ಬಂತು, ಮೈಕಿನಲ್ಲಿ ನನ್ನ ಹೆಸರನ್ನು  ಕರೆದರೂ , ಏಳಲು ಆಗುತ್ತಿಲ್ಲಾ,   ಆದರೆ ಕುಳಿತಿದ್ದ  ಭೂಮಿ ನನ್ನ ದೇಹವನ್ನು  ಕಚ್ಚಿಕೊಂಡು   ನನ್ನನ್ನು  ಮೇಲೆ ಏಳಲು ಬಿಡಲಿಲ್ಲ,  ಮೈಯೆಲ್ಲಾ ನಡುಕ ಶುರು ಆಗಿ,  ಯೂನಿಫಾರ್ಮ್ ಚಡ್ಡಿ ಒದ್ದೆಯಾಗಿ   ,  ಬಾಯಲ್ಲಿನ  ಜೊಲ್ಲು ರಸ ಬತ್ತಿ ಹೋಗಿ  ಅವಮಾನಿತನಾಗಿ  ಜಾಗ ಖಾಲಿಮಾಡಿದೆ , ನನ್ನ ಹೆಸರನ್ನು ಕರೆದೂ ಕರೆದೂ ಸುಸ್ತಾಗಿ  ಮುಂದಿನ ವಿಧ್ಯಾರ್ಥಿಯನ್ನು  ಕರೆದಿದ್ದರು,  ಮಾರನೆಯ ದಿನ ನನಗೆ  ಬಿಸಿ ಬಿಸಿ ಏಟಿನ  ಕಜ್ಜಾಯ  ಸೇರಿದಂತೆ ಮಾರನವಮಿಯ  ಹಬ್ಬ  ತರಗತಿಯಲ್ಲಿ  .
 ಸಾಂದರ್ಬಿಕ  ಚಿತ್ರ  ಕೃಪೆ ಅಂತರ್ಜಾಲ

೨]  ಅದೊಂದು   ತರಬೇತಿಯ  ಕಾರ್ಯಕ್ರಮ ,  ನನ್ನ ಹಿರಿಯ  ಅಧಿಕಾರಿಗಳು  ತರಬೇತಿ ನೀಡಬೇಕಾಗಿತ್ತು,  ತರಬೇತಿ ಪಡೆಯಲು   ಸುಮಾರು  ೧೦೦ ಕ್ಕೂ  ಹೆಚ್ಚು ಶಿಕ್ಷಕರು, ಹಾಗು ವಿವಿಧ  ಇಲಾಖೆಯ  ಅಧಿಕಾರಿಗಳು  ಆಗಮಿಸಿದ್ದರು .  ತರಬೇತಿ  ಕಾರ್ಯಕ್ರಮ  ಉದ್ಘಾಟನೆ  ಆಯಿತು,   ನಂತರ  ನನ್ನ ಅಧಿಕಾರಿಗಳು  ಅಲ್ಲಿದವರನ್ನು ಉದ್ದೆಶಿಸಿ ,  ಈ  ತರಬೆತಿಗೆ ನೀವೆಲ್ಲಾ ಬಂದಿದ್ದು ಸಂತೋಷ  , ತರಬೇತಿ ಚೆನ್ನಾಗಿ ಪಡೆದು  ಉತ್ತಮವಾಗಿ ಕಾರ್ಯ ನಿರ್ವಹಿಸಿ ಸಮಾಜಕ್ಕೆ    ಒಳ್ಳೆ ಹೆಸರನ್ನು ತನ್ನಿ ಎನ್ನುತ್ತಾ  ಎಲ್ಲರಿಗೂ ವಂದಿಸಿದರು , ನಂತರ ಈಗ ಮುಂದಿನ  ತರಬೇತಿಯನ್ನು ಶ್ರೀ ಬಾಲೂ ನಿಮಗೆ ನೀಡ್ತಾರೆ   ಅಂದು ನನ್ನ ಕಡೆ ನೋಡಿ  ಅನಿರೀಕ್ಷಿತ ಬಾಂಬ್  ಎಸೆದು   ನಡೆದು ಬಿಟ್ಟರು, ನಿರೀಕ್ಷೆ  ಮಾಡದೆ ಇದ್ದ  ಕೆಲ್ಸಾ ಅದು, ಶಾಲೆಯ ಒಂದು   ತರಗತಿಯ  ಕೋಣೆ ಆದ ಕಾರಣ   ಮಕ್ಕಳಿಗೆ  ಪಾಠ  ಮಾಡುವಂತೆ  ಬೋರ್ಡ್  ಬಳಸಿ  ಗಂಟೆ ಗಟ್ಟಲೆ ಪಾಠ  ಮಾಡಬೇಕಾಗಿತ್ತು,  ವಿಚಿತ್ರಾ ಅಂದರೆ ಜೀವನದಲ್ಲಿ ಎಂದೂ  ಹೀಗೆ ತರಬೇತಿ ನೀಡಿದ್ದಾಗಲೀ, ಪಾಠ  ಮಾಡಿದ್ದಾಗಲಿ ಇರಲಿಲ್ಲ,   ಅದೂ ಅಲ್ಲದೆ ವಯಸ್ಸಿನಲ್ಲಿ ನಾನೂ ಅಲ್ಲಿದ್ದ ಎಲ್ಲರಿಗಿಂತಾ  ಬಹಳ ಚಿಕ್ಕವನು ,   ತರಬೇತಿ ಪಡೆಯಲು  ಬಂದವರಲ್ಲಿ ನನಗೆ ಪ್ರಾಥಮಿಕ  ಹಾಗು ಪ್ರೌಡಶಾಲೆಯಲ್ಲಿ  ಪಾಠ  ಮಾಡಿದ್ದ ಸುಮಾರು  ಆರುಜನ  ಗುರುಗಳೂ ಸಹ ಇದ್ದರು,  ಅಯ್ಯೋ ದೇವ್ರೇ   ಅಂತಾ  ಬೆಪ್ಪನಂತೆ   ನಿಂತಿದ್ದೆ , ಭೂಮಿಯೇ ಬಾಯ್ತೆರೆದು   ನನ್ನನ್ನು  ನುಂಗಿ  ಬಿಡಬಾರದೇ  ಅನ್ನಿಸುತ್ತಿತ್ತು,  ಇನ್ನು ಮುಂದಿದ್ದ   ಬಹಳಷ್ಟು ಜನ  ಇದ್ಯಾವ್ದೋ  ಚಿಕ್ಕ ಹುಡುಗನನ್ನು ತಂದು ನಿಲ್ಲಿಸಿ  ತರಬೇತಿ ಕೊಡಿಸೋಕೆ  ಹೊರಟಿದ್ದಾರೆ ನೋಡ್ರೀ ಅಂತಾ ಗೇಲಿಮಾಡಲು  ಶುರು ಮಾಡಿದ್ರು,  ನಾನು ಏನೂ ತಿಳಿಯದೆ  ಕೈ ಕಾಲು ನಡುಗಿಸುತ್ತಾ ನಿಂತಿದ್ದೆ, ನನ್ನ ಸ್ಥಿತಿಯನ್ನು ಗಮನಿಸಿದ  ನನ್ನ ಗುರುಗಳು ಒಬ್ಬರು  ಹತ್ತಿರ ಬಂದು  ಬಾಲೂ  ಹೆದರ ಬೇಡ , ನಾವು ಯಾರೂ ಇಲ್ಲಿ  ಪರಿಪೂರ್ಣರಲ್ಲಾ , ಮುಂದೆ ನಿನಗೆ ಅರ್ಥಾ ಆಗುತ್ತೆ,  ಇವತ್ತು ನಿನಗೆ ತಿಳಿದಷ್ಟನ್ನು ಹೇಳು ನಂತರ  ಮತ್ತೊಮ್ಮೆ ಸಿದ್ದವಾಗಿ ಬಾ ನಾಳೆ  ನಿನಗೆ ಸುಲಭ ಆಗುತ್ತೆ ಅಂತಾ  ಹೇಳಿ, ಅಲ್ಲಿದ್ದವರನ್ನು  ಉದ್ದೇಶಿಸಿ, ನೋಡಿ ಈ ಹುಡುಗ ತರಬೇತಿ  ನೀಡಲು ಅವಕಾಶ ಕೊಡಿ,  ಎಲ್ಲರಿಂದಲೂ ನಾವು ಕಲಿಯುವು ಇದ್ದೆ ಇರುತ್ತೆ,   ಅಂತಾ ತಿಳಿಹೇಳಿ ಗಲಾಟೆಯನ್ನು ತಹಬಂದಿಗೆ ತಂದು ಈಗ ಶುರು ಮಾಡಪ್ಪಾ ಅಂತಾ ಹೇಳಿದರು,  ಈ ಒಂದು ಮಾತು ನನ್ನಲ್ಲಿ ಆತ್ಮ ವಿಶ್ವಾಸ  ಹೆಚ್ಚಿಸಿ,  ಅಂದಿನ ತರಬೇತಿಯನ್ನು  ಶುರು ಮಾಡಿದೆ, ಆದರೆ ಹೇಳಬೇಕಾದ ವಿಚಾರಗಳ ಬಗ್ಗೆ ತಲೆ ಖಾಲಿಯಿತ್ತು,  ಆದರೆ ಸೋಲೊಪ್ಪಿಕೊಳ್ಳುವ ಮನಸಾಗಲಿಲ್ಲ,   ನನಗೆ ನಾನೇ  ಸಂಬಾಳಿಸಿಕೊಂಡು  ಧೈರ್ಯ ತಂದು ಕೊಂಡು,   ತರಬೇತಿಯ ಬಗ್ಗೆ ಮಾತನಾಡಲು ಶುರು ಮಾಡಿದೆ   ಬನ್ನಿ ತರಬೇತಿಗಾಗಿ ನಮಗೆ  ಕೊಟ್ಟಿರುವ ನಮೂನೆಗಳ ಪರಿಚಯ ಮಾಡಿಕೊಳ್ಳೋಣ ಅಂತಾ ಹೇಳಿ  ಉದ್ದೇಶಿತ ಕೆಲಸದಲ್ಲಿ  ನೀಡಿರುವ ವಿವಿಧ ನಮೂನೆಗಳು, ಅವುಗಳನ್ನು ಬಳಸುವ ರೀತಿ ಅದರಲ್ಲಿ  ಮಾಹಿತಿಯನ್ನು ಹೇಗೆ ಭರ್ತಿ ಮಾಡಬೇಕು  ಎಂಬ ರೀತಿ ಇತ್ಯಾದಿಗಳನ್ನು  ತಿಳಿಸಿಕೊಟ್ಟೆ , ಮಾತನಾಡುತ್ತಾ ಮಾತನಾಡುತ್ತಾ, ಉತ್ಸಾಹದ  ಚಿಲುಮೆ ಜಿನುಗಲು ಶುರು  ಆಯ್ತು,  ಮುಂದುವರೆದು  ದಯಮಾಡಿ  ನಿಮಗೆ ಕೊಟ್ಟಿರುವ ಕೈಪಿಡಿಯನ್ನು ಓದಿಕೊಂಡು  ಬನ್ನಿ ಅಂತಾ ಹೇಳಿ  ನಿಗದಿತ  ಸಮಯಕ್ಕಿಂತಾ  ಎರಡು ತಾಸು ಮೊದಲೇ  ತರಬೇತಿ  ಮುಕ್ತಾಯ ಗೊಳಿಸಿದೆ ,  ಅಲ್ಲಿಂದ ಹೊರಟವನೆ   ೧೫೦ ಪುಟಗಳ  ಕೈಪಿಡಿಯನ್ನು  ಸುಮಾರು ಎರಡು ಸಾರಿ ಓದಿ  ಚೆನ್ನಾಗಿ ಮನನ ಮಾಡಿಕೊಂಡು , ಜೊತೆಗೆ  ನನ್ನದೇ ಆದ ಶೈಲಿಯಲ್ಲಿ  ಚಾರ್ಟ್  ತಯಾರಿಸಿಕೊಂಡು  ಮಾರನೆಯ ದಿನದ ಯುದ್ದಕ್ಕೆ ಸಿದ್ದನಾದೆ ,  ಮಾರನೆಯ ದಿನ  ಹೇಳಬೇಕಾದ  ವಿಚಾರಗಳು   ಸುಲಭವಾಗಿ  ನಾಲಿಗೆಯ ಮೇಲೆ  ಕುಣಿದಾಡುತ್ತಾ  ಹೊರಗೆ ಬಂದವು, ತರಬೇತಿ ಪಡೆದ ನುರಿತ ಶಿಕ್ಷಕನಂತೆ  ತರಬೇತಿಯ ವಿಚಾರಗಳನ್ನು  ನನ್ನದೇ ಆದ  ಶೈಲಿಯನ್ನು ಬಳಸಿ , ಬೋರ್ಡ್  ಮೇಲೆ ಬರೆಯುತ್ತಾ , ಚಾರ್ಟ್  ಬಳಸಿ ವಿವರಿಸುತ್ತಾ  ತಿಳಿಸಿದೆ,  ಅಂದು ಸುಮಾರು ಆರು ಗಂಟೆಗಳ ಕಾಲ  ವಿವರ ನೀಡಿದರೂ  ಸಹ  ಮನದಲ್ಲಿ ಹೊಸ ಹೊಸ ವಿಚಾರಗಳು  ಹೊಳೆಯುತ್ತಲೇ ಇದ್ದವು , ಅಂದಿನ ತರಬೇತಿ ಮುಗಿದ ನಂತರ  ಮೊದಲ ದಿನ   ಗೇಲಿ ಮಾಡಿದ್ದ ಶಿಕ್ಷಕರು ಹತ್ತಿರ ಬಂದು  ಅಭಿನಂದಿಸಿ  ಖುಷಿಪಟ್ಟರು,  ಅಂದಿನ ಎಡವಟ್ಟು ಜೀವನದಲ್ಲಿ ಮರೆಯಲಾರದ್ದು ಹಾಗು ಅನುಭವ   ಅಮೂಲ್ಯವಾದದ್ದು  ಇಂದಿಗೂ ಕೂಡ   ಆ ನೆನಪು  ನನಗೆ ಬೆಂಗಾವಲಾಗಿ  ಯಾವುದೇ ವಿಚಾರ  ಅಧ್ಯಯನ  ಮಾಡದೆ , ತಿಳಿಯದೆ ಮಾತನಾಡ ಬಾರದು ಎಂಬ  ಸತ್ಯ ತಿಳಿಸಿದೆ , ಅಂದು ನನ್ನ ಬೆನ್ನು ತಟ್ಟಿದ ನನ್ನ ಗುರುಗಳಿಗೆ  ಈ ಮನಸು ಸದಾ ನಮಿಸುತ್ತದೆ.


೩] ಅದೊಂದು  ಬೀಳ್ಕೊಡುಗೆ ಸಮಾರಂಭ  , ಕಾವೇರಿಯ ನದಿಯ ದಡದಲ್ಲಿ  ನಡೆದ ಕಾರ್ಯಕ್ರಮ   ಹಲವಾರು ಹಿರಿಯ ಅಧಿಕಾರಿಗಳು ಸೇರಿದ್ದರು,  ಕಾರ್ಯಕ್ರಮದ ನಿರೂಪಣೆ ನನ್ನದೇ ಆಗಿತ್ತು, ಆದರೆ  ಪ್ರಾರ್ಥನೆ  ಮಾಡುವ ಮಹಿಳೆ  ಸಮಯಕ್ಕೆ ಬಾರದೆ ಕೈಕೊಟ್ಟರು,  ಅಲ್ಲೇ ಇದ್ದ  ನನ್ನ  ಸಹೋದ್ಯೋಗಿಗೆ  ಹೇಳುತ್ತಾ ,  ಮೊದಲು ನೀನು ನಿರೂಪಣೆ    ಮಾಡು ಪ್ರಾರ್ಥನೆ  ನಂತರ  ನಾನು ಮುಂದುವರೆಸುತ್ತೇನೆ ಅಂದೇ  ನೋಡು ಕಾರ್ಯಕ್ರಮ ಶುರು ಮಾಡು ಅಂದೇ  ಅವನು   ಹಾವು ತುಳಿದವನಂತೆ   ಅಲ್ಲಿಂದ  ಓಡಿಹೋದ ,  ಕಾರ್ಯಕ್ರಮ ಶುರು ಆಯ್ತು,    ನಾನೇ ನಿರೂಪಕ ,   ಈಗ ಕಾರ್ಯಕ್ರಮ  ಪ್ರಾರಂಭ ಅಂತಾ ಹೇಳುತ್ತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ  ಶುರುಮಾಡೋಣ ,  ಎನ್ನುತ್ತಾ    ...... ಇವರಿಂದಾ    ಪ್ರಾರ್ಥನೆ ಅಂತಾ ಹೇಳಿ    ಸ್ವಲ್ಪ  ಗ್ಯಾಪ್ ಕೊಟ್ಟು, ನಂತರ  ಜ್ಞಾಪಿಸಿಕೊಂಡವನಂತೆ ನಟಿಸಿ   ಅರೆ ಮರ್ತೆಹೊಗಿತ್ತು, ಅಂತಾ ಹೇಳಿ ಪ್ರಾರ್ಥನೆ ನನ್ನದೇ ಅಂತಾ ಘೋಷಿಸಿ   ಪ್ರಾರ್ಥನೆ ಮಾಡಲು ನಿಂತೇ,  ಮೂಷಿಕ ವಾಹನ  ಮೋದಕ ಹಸ್ತಾ  ಅಂತಾ ಹೇಳಿದ್ದೆ ಅಷ್ಟೇ  ಜೀವನದಲ್ಲೇ  ಹಾಡೇ ಹಾಡದಿದ್ದ  ನನ್ನ  ಗಂಟಲಲ್ಲಿ  ಮೋದಕ ಸಿಕ್ಕಿ ಹಾಕಿಕೊಂಡು  ಬಿಟ್ಟಿತು,  ಉಸಿರು ಬಾಯಿಗೆ ಬಂದು    ಕೆಟ್ಟ  ದ್ವನಿಯಲ್ಲಿ ಪ್ರಾರ್ಥನೆ ಮಾಡಿ ಕಾರ್ಯಕ್ರಮ ಕುಲಗೆಡಿಸಿದ್ದೆ ಅಂತಾ , ತಕ್ಷಣ ಗೊತ್ತಾಗಿ ನಾಲ್ಕೇ  ನಾಲ್ಕು ಸಾಲು ಹೇಳಿ ಸುಮ್ಮನಾದೆ .   ಆ  ಮೋದಕ ಪ್ರಿಯ ಗಣಪನಿಗೆ ನನ್ನ ಸುಶ್ರಾವ್ಯವಾದ  ಗಾಯನದ   ಬಗ್ಗೆ  ಅನುಮಾನ ಮೂಡಿ  ನನ್ನ ಗಂಟಲಿಗೆ ಮೋದಕ ತುರುಕಿದ್ದ , ಪ್ರಾರ್ಥನೆಯ ನಂತರ  ನನ್ನ ನಿರೂಪಣೆಯಲ್ಲಿ  ಲಯ ಕಂಡುಕೊಳ್ಳಲು  ಬಹಳ ಸಮಯ ಹಿಡಿಯಿತು,  ಅಂದಿನ ಘಟನೆ ಮತ್ತೊಂದು ವಿಚಾರ ತಿಳಿಸಿತು,  ಗೊತ್ತಿಲ್ಲದ  ವಿಚಾರದಲ್ಲಿ ಮೂಗು ತೂರಿಸಿ   ದೊಡ್ಡ ಮನುಷ್ಯ ಆಗೋದು ಸಾಧ್ಯವಿಲ್ಲಾ  ಅಂತಾ,  ಅಂದಿನಿಂದ ಇಂದಿನ ವರೆಗೆ ಪ್ರಾರ್ಥನೆಗೆ  ನನ್ನದು ದೊಡ್ಡ ಸಲಾಂ .

೪]  ಕೆಲವೊಮ್ಮೆ   ಬಹಳಷ್ಟು ಕಾರ್ಯಕ್ರಮಗಳಲ್ಲಿ  ಭಾಗವಹಿಸಿ,  ನಿರೂಪಣೆ ಮಾಡಿ,  ಮಾಧ್ಯಮಗಳಲ್ಲಿ ವರದಿಯಾಗಿ  ಪ್ರಚಾರಕ್ಕೆ  ಬಂದಮೇಲೆ  ಜಂಭಬಂದುಬಿಡುತ್ತದೆ ,    ನನಗೂ ಸಹ  ಅಂತಹ ಅಹಂ ಬಂದಿತ್ತು  . ಅಂತಹ  ವರ್ತನೆ ಅದಕ್ಕೆ ತಕ್ಕಂತೆ  ಪಾಠ  ಸಹ ಕಲಿಸುತ್ತದೆ  . ಒಮ್ಮೆ ಹೀಗಾಯ್ತು , ಯಾವುದೋ ಒಂದು ಸಂಸ್ಥೆಯವರು  ನನ್ನನ್ನು ಇತಿಹಾಸಕಾರ ಅಂತಾ ಗುರುತಿಸಿ , ಅತಿಥಿಯನ್ನಾಗಿ  ಆಹ್ವಾನ  ನೀಡಿ ಪತ್ರಿಕೆ  ತಂದುಕೊಟ್ಟರು,  ಇನ್ನೇನು ಜಗವನ್ನೇ ಗೆದ್ದ ನೆಪೋಲಿಯನ್  ನಂತೆ  ಬೀಗಿದೆ,  ಅದರಲ್ಲಿ  ನನ್ನ ಹೆಸರಿನ ಪಕ್ಕದಲ್ಲಿ ಇತಿಹಾಸಕಾರ   ಎಂಬ ಪದ ನನ್ನ ಹಮ್ಮನ್ನು ಇನ್ನೂ ಹೆಚ್ಚಿಸಿತು, ಕಾರ್ಯಕ್ರಮದ ದಿನ ಹೊರಟೇ  ಅಲ್ಲಿಗೆ, ಕಾರ್ಯಕ್ರಮ ಶುರು ಆಯ್ತು ,   ಕಾರ್ಯಕ್ರಮದ  ಅತಿಥಿಯಾಗಿ ನನ್ನ ಭಾಷಣ  ಶುರು ಆಯ್ತು  ಮುಂದೆ ನೋಡಿದೆ ಹಲವಾರು ಶಿಕ್ಷಕರು, ಹಾಗು ಕೆಲವರು ಸಾರ್ವಜನಿಕರು  ಇದ್ದರು, ಇವರಿಗೇನು ಗೊತ್ತು ಅಂತಾ  ಭಾವಿಸಿ  ಅಗತ್ಯಕ್ಕಿಂತ  ಹೆಚ್ಚಾಗಿ ಸ್ಕೊಪ್  ತಗೊಂಡ್  ಇತಿಹಾಸದ   ವಿಚಾರ ತಿಳಿಸುತ್ತಿದ್ದೆ , ನಂತರ ಅದೇ ಸಂವಾದವಾಗಿ  ಬದಲಾಯ್ತು,  ಅಲ್ಲಿದ್ದ  ಪ್ರೇಕ್ಷಕರಲ್ಲಿ  ನನಗಿಂತಾ ಹೆಚ್ಚಿನ ಜ್ಞಾನವಿತ್ತು,  ಇತಿಹಾಸ ಗೌರವಿಸಿ ಹೆಚ್ಚಿನ ವಿಚಾರ ತಿಳಿಯುವ ಹಂಬಲ ಇತ್ತು,  ಅವರು ಕೇಳಿದ ಪ್ರಶ್ನೆಗಳು ನನ್ನ ಜ್ಞಾನದ  ಮಟ್ಟವನ್ನು  ಅಣಕಿಸಿ,  ನನ್ನ ಜಂಭದ  ಗಂಟನ್ನು  ಹೊಸಕಿಹಾಕಿತ್ತು,   ಹೇಗೋ ಅಲ್ಲಿನ ಜನರಿಗೆ ತಿಳಿದ ವಿಚಾರವನ್ನು  ಹೇಳಿ  ಅಲ್ಲಿಂದ  ಬಚಾವಾದೆ  .  ಅವತ್ತಿನಿಂದ  ಯಾವುದೇ  ಸಭೆ ಸಮಾರಂಭದಲ್ಲಿ ವೇದಿಕೆಯ  ಎದುರು ಕುಳಿತ  ಜನರನ್ನು  ಅವರ ಜ್ಞಾನವನ್ನು ಗೌರವಿಸುವುದ ಕಲಿತೆ . ವ್ಯಕ್ತಿಯ ಜ್ಞಾನ  ಸಭ್ಯ ನಡವಳಿಕೆ ಕಲಿಸುತ್ತದೆ ಎಂಬ  ವಿಚಾರ ತಿಳಿಯಿತು . ಸಾಂದರ್ಬಿಕ  ಚಿತ್ರ  ಕೃಪೆ ಅಂತರ್ಜಾಲ 


೫]   ಮತ್ತೊಂದು ಘಟನೆ  ಹೀಗಾಯ್ತು , ಅದೊಂದು ಸಂಸ್ಥೆಯ  ಕಾರ್ಯಕ್ರಮ, ನಿರೂಪಣೆ ಹೊಣೆ ನನ್ನದಾಗಿತ್ತು, ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯುತ್ತಿತ್ತು,   ಆ ಸಂಸ್ಥೆಯಲ್ಲಿ  ಜ್ಞಾನ ಪಡೆದ ಹಲವರು ಆ ಸಂಸ್ಥೆಯಬಗ್ಗೆ  ಕೃತಜ್ಞತಾ ಪೂರ್ವಕವಾಗಿ  ಮಾತನಾಡುತಿದ್ದರು , ನಂತರ ಅಲ್ಲಿದ್ದ ಗಣ್ಯರು ಒಬ್ಬರು  ವೇದಿಕೆಯಲ್ಲಿ  ಬಂದು ಮೈಕ್ ಮುಂದೆ ನಿಂತರು ,  ಆದರೆ  ಅವರಿಗೆ ಮಾತನಾಡಲು ಆಗುತ್ತಿಲ್ಲಾ , ಸುಮ್ಮನೆ ಕೈಮುಗಿದು  ಮೌನವಾಗಿ ನಿಂತರು .   ಮಾತನಾಡಲು  ಆಸೆ  ಇದ್ದರೂ ಸಹ ಅಪಾರ ಜನರಿದ್ದ ಆ ಸಭೆಯಲ್ಲಿ  ಅವರಿಗೆ   ಮಾತನಾಡಲು  ಆಗದೆ  ಗಂಟಲು ಒಣಗಿ  ಹೆದರಿ   ಸುಮ್ಮನೆ ನಿಂತುಬಿಟ್ಟರು ನಾನೂ ಸಹ ಎರಡು ಮೂರು ನಿಮಿಷ  ಕಾದೆ, ನಂತರ  ಅಲ್ಲಿದ್ದ ಜನಗಳ ಗದ್ದಲ ಹೆಚ್ಚಾಗುವ   ಲಕ್ಷಣ ಕಂಡು ಬಂದ ಕಾರಣ , ನಾನೇ ಮುಂದೆ ಬಂದು  ಅವರನ್ನು ಸಂತೈಸಿ   ಅವರಿಂದ ಮೈಕ್  ಪಡೆದು  ಸಭೆಯನ್ನು  ಉದ್ದೇಶಿಸಿ , ನೋಡಿ ಸರ್  ನಮ್ಮ ಈ ಗಣ್ಯರು  ಯಾಕೆ ಮೌನವಾಗಿ ಕೈಮುಗಿದು ನಿಂತರು ಗೊತಾಯ್ತಾ  ನಿಮಗೆ ...?  ಯಾರಾದ್ರೂ ಹೇಳ್ತೀರಾ  ಹೇಳೋದಾದ್ರೆ  ಬನ್ನಿ ಯಾಕೆ  ಅಂತಾ ಹೇಳಿ .. ಅಂದೇ , ಗೊತ್ತಿಲ್ಲಾ  ನೀವೇ ಹೇಳಿ ಸಾರ್ ಅಂದ್ರೂ ಸಭೆಗೆ ಬಂದಿದ್ದ  ಜನ ,    ನೋಡಿ ಯಾವುದೇ ಸಂಸ್ಥೆಯ ಅಥವಾ ವ್ಯಕ್ತಿಯ ಬಗ್ಗೆ ಅಪಾರ ಗೌರವ ಇದ್ರೆ  ಹೀಗೆ ಆಗುತ್ತೆ,   ಅವರ ಮೌನ   ಇಲ್ಲಿ  ಲಕ್ಷ  ಲಕ್ಷ  ಕೊಟ್ಟರೂ ಸಿಗದ  ವಿಚಾರವನ್ನು ತಿಳಿಸಿಕೊಟ್ಟಿದೆ,  ಹೇಗೆ ಗೊತ್ತಾ ಅಂದೇ  ಮತ್ತೆ ಸಭೆಯಲ್ಲಿ ಇಲ್ಲಾ  ಅಂತಾ ಉತ್ತರ ಬಂತು,  ನೋಡಿ ತಮಗೆ ಅಪಾರ ಜ್ಞಾನ ಕೊಟ್ಟ ಈ ಸಂಸ್ಥೆಗೆ   ಬರೀ ಮಾತಿನಲ್ಲಿ    ಎಷ್ಟು ಬೆಲೆ ಕಟ್ಟಲು ಸಾಧ್ಯ..? ಆ ಮಾತುಗಳು ಆ ಸಂಸ್ಥೆ ನೀಡಿದ ಜ್ಞಾನಕ್ಕೆ ಸಮನಾಗುವುದೇ  ಎಂಬ ಪ್ರಶ್ನೆ ಅವರನ್ನು ಕಾಡಿ  ಮಾತನಾಡದೆ ಮೌನವಾಗಿ  ಆ ಸಂಸ್ಥೆಯ ಬಗ್ಗೆ ಗೌರವದಿಂದ ಕೈಮುಗಿದು  ಕೃತಜ್ಞತೆ ಸಲ್ಲಿಸಿದ್ದಾರೆ ,  ಜೊತೆಗೆ  ಆ ಸಂಸ್ಥೆಯ ಉದ್ದಾರಕ್ಕಾಗಿ ಕೈಲಾದ   ಆರ್ಥಿಕ ಸಹಾಯ ಮಾಡಲು ಸಹ ನಿರ್ಧಾರ ಮಾಡಿದ್ದಾರೆ  ಬನ್ನಿ ಅವರ ಈ ಒಳ್ಳೆಯ ನಿರ್ಣಯಕ್ಕೆ ಚಪ್ಪಾಳೆ ಮೂಲಕ ಅಭಿನದನೆ ಸಲ್ಲಿಸೋಣ ಅಂದೇ  ಪ್ರೇಕ್ಷಕರಿಂದ ಅಪಾರ ಪ್ರಮಾಣದ ಚಪ್ಪಾಳೆ ಬಂತು  , ಹೆದರಿ ನಡುಗಿದ್ದ ಆ ಅತಿಥಿ ಗಣ್ಯರು ನನ್ನ ಕಡೆ  ಕೃತಜ್ಞತೆ ಯಿಂದ ನೋಡಿದರು .   ಕಾರ್ಯಕ್ರಮ  ನಿರೂಪಣೆ  ಮಾಡುವಾಗ  ಆಕಸ್ಮಿಕವಾಗಿ ಎದುರಾಗುವ ಅನಿರೀಕ್ಷಿತ  ಅಡೆ  ತಡೆಗಳನ್ನು  ಹೇಗೆ ನಿಭಾಯಿಸಬೇಕೆಂಬ  ಬಗ್ಗೆ ಅರಿವು ನನಗೆ  ಮೂಡಿತು.


ಸಾಂದರ್ಬಿಕ  ಚಿತ್ರ  ಕೃಪೆ ಅಂತರ್ಜಾಲ


 ಹೀಗೆ  ಜನರ ಮುಂದೆ ಮಾತನಾಡುವ ನನ್ನ ಪಯಣ ಸಾಗಿದ್ದು,  ಪ್ರತೀ ಕಾರ್ಯಕ್ರಮದಲ್ಲಿಯೂ ಸಹ  ಏನಾದರೂ ಕಲಿಯುವ ವಿಚಾರ ಇದ್ದೆ ಇರುತ್ತದೆ,  ತನ್ನ ಜನರೆದುರು ಏನೇ ಜಂಭ ಕೊಚ್ಚಿಕೊಂಡರೂ  ಸಾರ್ವಜನಿಕ ವೇದಿಕೆಯಲ್ಲಿ ಮೈ ಹಿಡಿದು ಮಾತನಾಡುವಾಗ  ಇಂತಹ ಘಟನೆಗಳು ಎಲ್ಲರಿಗೂ  ಆಗುವಂತದು , ಇದೆಲ್ಲವನ್ನು  ಮೀರಿ ಕಲಿಯುತ್ತಾ ಸಾಗಿದರೆ   ನಾವೂ ಕಲಿಯುತ್ತಾ  ಉತ್ತಮ  ಮಾತುಗಾರರಾಗಿ  ಎಲ್ಲರ ಮೆಚ್ಚುಗೆಗೆ  ಖಂಡಿತಾ    ಪಾತ್ರರಾಗುತ್ತೇವೆ  ಆಲ್ವಾ,.   ಅದಕ್ಕೆ ಹೇಳಿದ್ದೂ ಜನರ ಮುಂದೆ ಮಾತಾಡೋದು  ಅಂದ್ರೆ  ಉಫ಼್ಫ಼್  ಕಷ್ಟ ಕಷ್ಟಾ .....!

6 comments:

prashasti said...

ತುಂಬಾ ಚೆನ್ನಾಗಿದೆ ಬಾಲಣ್ಣ. ಶಾಲೆಯ ಪ್ರಸಂಗ, ನಮ್ಮದಲ್ಲದ ಕೆಲಸಕ್ಕೆ ಕೈಹಾಕಬಾರದೆನ್ನೋ ಪ್ರಸಂಗ, ಎಂದೂ ಅಹಂಕಾರ ಸಲ್ಲದೆಂಬ ಮಾತು, ನಿರೂಪಣೆಯಲ್ಲಿರಬೇಕಾದ ಸಮಯಪ್ರಜ್ಞೆಗಳ ಬಗೆಗಿನ ಪ್ರಸಂಗಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ.

Joshi Vanishree said...

ನಿಮ್ಮ ಒಂದೊಂದೇ ಪ್ರಸಂಗಗಳನ್ನು ವಿವರಿಸುತ್ತಾ ನೀವು ಕಲಿತ ಪಾಠ ಹೇಳುತ್ತಾ ನಾವು ಕೂಡ ಕಲಿಯೋದಿದೆ ಎಂದು ಸೂಚಿಸುವ ನಿಮ್ಮ ರಚನೆ ಅದ್ಭುತವಾಗಿದೆ...

Badarinath Palavalli said...

ಮೊದಲನೇ ಪ್ರಸಂಗ ಯಥಾವತ್ ನನಗೂ ಆಗಿತ್ತು!

ಎರಡನೇ ಪ್ರಸಂಗದಲ್ಲಿ ಪೂರ್ವ ತಯಾರಿಯು ಕೊಡುವ ಆತ್ಮ ವಿಶ್ವಾಸವನ್ನು ಬೋಧಿಸಿತು.

ಮೂರನೇ ಪ್ರಸಂಗ ಗೊತ್ತಿಲ್ಲದ ವಿಚಾರದಲ್ಲಿ ಮೂಗು ತೂರಿಸಿ ಮುಖ ಹೇಗೆ ಕೆಡೆಸಿಕೊಳ್ಳಬೇಕಾದೀತು ಎಂದು ಎಚ್ಚರಿಸಿತು.

ನಾಲ್ಕನೇ ಪ್ರಸಂಗದಲ್ಲಿ ಅಚಾತುರ್ಯ ಏನೇ ನಡೆಯಲಿ. ತಾವು ಒಬ್ಬ ಒಳ್ಳೆಯ ಇತಿಹಾಸ ತಜ್ಞ, ಅದರಲ್ಲಿ ಎರಡು ಮಾತಿಲ್ಲ!

ಐದನೇ ಪ್ರಸಂಗವು, ಆಕಸ್ಮಿಕವಾಗಿ ಎದುರಾಗುವ ಅನಿರೀಕ್ಷಿತ ಅಡೆ ತಡೆಗಳನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ಅರಿವು ಮೂಡಿಸಿತು.

ಆದಷ್ಟು ಬೇಗ ತಮ್ಮ ಭಾಷಣ ಕೇಳುವ ಭಾಗ್ಯ ನಮಗೂ ಕರುಣಿಸಿ.

M.D.subramanya Machikoppa said...

ಚನ್ನಾಗಿದೆ ಬರಹಗಳು.

ಶಿವಪ್ರಕಾಶ್ said...

ಭಾಷಣ ಎನ್ನುವುದು ಒಂದು ಕಲೆ. ಅನುಭವ ಮತ್ತು ವಿಷಯದ ಅರಿವಿನಿಂದ ಒಳ್ಳೆಯ ಭಾಷಣ ಹೊಮ್ಮುತ್ತದೆ.
ಭಯ, ಮುನ್ನುಗ್ಗುವಿಕೆ, ವಿಷಯದ ಬಗ್ಗೆ ಪ್ರಾವಿಣ್ಯತೆ, ಹಾಗು ಸಮಯ ಪ್ರಜ್ಞೆಯ ಬಗ್ಗೆ "ಭಾಷಣದ" ವಿಷಯದೊಂದಿಗೆ ಚನ್ನಾಗಿ ವಿವರಿಸಿದ್ದೀರಿ.

Anonymous said...

ಸೂಪರ್ ಬಾಲು ಅಣ್ಣಾ . . . !

- ಭವಾನಿಲೋಕೇಶ್, ಮಂಡ್ಯ