Sunday, May 24, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......17 ಪ್ರವಾಸದ ಅಂತಿಮ ಚರಣದಲ್ಲಿ ಕಾಗಿನೆಲೆ ಕೇಶವನ ಕಂಡು ಧನ್ಯವಾಯಿತು ಜೀವ .

ನಾನು ಹೋದರೆ ಹೋದೇನು




ಹಾವೇರಿಯಲ್ಲಿ ಊಟ ಮಾಡಿ ಕಾಗಿನೆಲೆಯತ್ತ  ಹೊರಟೆವು ನಾವು.  ಕಾಗಿನೆಲೆ ಬಗ್ಗೆ ಕನಕದಾಸರು ಹಾಗು ಅವರ ಪದಗಳಲ್ಲಿ  ಬರುವ "ಕಾಗಿನೆಲೆಯಾದಿ ಕೇಶವ"  ಎಂಬ ನಾಮಾಂಕಿತ ಹೊರತಾಗಿ ನನಗೆ ಈ ಜನುಮದಲ್ಲಿ ಬೇರೇನೂ ಗೊತ್ತಿರಲಿಲ್ಲ, ಭಕ್ತಕನಕದಾಸ ಕನ್ನಡ  ಚಲನಚಿತ್ರ ನೋಡಿದ ಮೇಲೆ  ಬಹುಷಃ ಕನಕದಾಸರು  ಹೀಗೆ ಇದ್ದಿರಬಹುದು ಎಂಬ ಒಂದು ಕಲ್ಪನೆ ಮೂಡಿತ್ತು, ಅವರ ಉಗಾಭೋಗ , ಹಾಡು ಭಕ್ತಿ ಪೂರ್ವಕ ಕೃತಿಗಳನ್ನು ಕೇಳಿದಾಗ  "ಕಾಗಿನೆಲೆಯಾದಿ ಕೇಶವ" ಎಂಬ ಪದ ಬಳಸಿ ಹಾಡನ್ನು ಮುಕ್ತಾಯಗೊಳಿಸುತ್ತಿದುದು   ಗಮನಕ್ಕೆ ಬಂದಿತು, ಹಾಡಿನಲ್ಲಿ "ಕಾಗಿನೆಲೆಯಾದಿಕೇಶವ"  ಎಂಬ ಪದ ಬಂದರೆ ಅದು ಕನಕದಾಸರ ಪದ ಎಂಬ ಅರಿವು ಮೂಡಿತ್ತು, ಆದರೆ  ಕಾಗಿನೆಲೆ ಎಂಬ ಊರಿದೆ  ಅಲ್ಲಿ ಆದಿಕೇಶವ ನೆಲೆಸಿದ್ದಾನೆ  ಯಾವತ್ತಾದರೂ  ಅವನ ದರ್ಶನ ಮಾಡುತ್ತೇನೆ ಎಂಬ  ಆಸೆ ಯಾವತ್ತು ಮನದಲ್ಲಿ ಮೂಡಿರಲಿಲ್ಲ,  ಆದರೆ  ಯಾವ ಜನ್ಮದ ಪುಣ್ಯವೋ  ಕಾಣೆ ಆ ಅವಕಾಶ ಅರಿವಿಲ್ಲದೆ  ಸಿಕ್ಕಿತ್ತು .


ಕಾಗಿನೆಲೆ  ಗ್ರಾಮದ ಒಂದು ಬೀದಿ




೧೫೦೯ ರಿಂದ ೧೬೦೯  ರ ಅವದಿಯಲ್ಲಿ  ಕನಕದಾಸರು  ಜೀವಿಸಿದ್ದರೆಂದು  ಹೇಳುತ್ತಾರೆ  . ಹಾವೇರಿ ಜಿಲ್ಲೆಯ  ಶಿಗ್ಗಾವ್  ತಾಲೂಕಿನ ಬಾಡ  ಗ್ರಾಮ ದಲ್ಲಿ ಜನಿಸಿ  ರಾಜನಂತೆ ಮೆರೆದು  ಜೀವನದ  ಹಲವು ಏಳು ಬೀಳುಗಳನ್ನು ಕಂಡು  ಜೀವನದ ತಿರುವು ಕಂಡು  ಭೋಗ ಜೀವನದಿಂದ  ವೈರಾಗ್ಯ  ಹೊಂದಿ  ಶ್ರೀ ಹರಿಯ ದಾಸನಾಗಿ  ಪುಣ್ಯ ಕ್ಷೇತ್ರಗಳಿಗೆ ಅಲೆದಾಡಿ  ಜ್ಞಾನ ಸಂಪಾದಿಸಿ  ಆದಿ ಕೇಶವ ವಿಗ್ರಹದೊಂದಿಗೆ   ಕನಕದಾಸರು  ನೆಲೆಕಂಡ ,  ಪುಣ್ಯ ಭೂಮಿ  ಈ "ಕಾಗಿನೆಲೆ  ಅಥವಾ ಕಾಗಿನೆಲ್ಲಿ" . ಕಾಗಿನೆಲೆ  ಬ್ಯಾಡಗಿ ತಾಲೂಕಿನ ಒಂದು ಗ್ರಾಮ  ಇಂದು . ತಾಲೂಕು ಕೇಂದ್ರ ಬ್ಯಾಡಗಿ ಇಂದ ೧೯ ಕಿಲೋಮೀಟರು , ಹಾಗು ಜಿಲ್ಲಾ ಕೇಂದ್ರ ಹಾವೇರಿ ಇಂದ ೧೪ ಕಿಲೋಮೀಟರ್ ದೂರದಲ್ಲಿದೆ . ಕಾಗಿನೆಲೆ ಗ್ರಾಮದಲ್ಲಿ ಆದಿಕೇಶವ  ದೇವಾಲಯ , ಸಂಗಮನಾಥ ದೇವಾಲಯ  ಹಾಗು ಕನಕದಾಸ ದೇಗುಲಗಳು ಇವೆ,  ಆದಿಕೇಶವ  ದೇವಾಲಯ ಕನಕದಾಸರು ಸ್ಥಾಪಿಸಿದ ದೇವಾಲಯವೆಂದು ಹೇಳಲಾಗುತ್ತದೆ . ಉಳಿದ ದೇವಾಲಯಗಳ ಬಗ್ಗೆ ಅಷ್ಟು ಮಾಹಿತಿ ತಿಳಿದು ಬರೋದಿಲ್ಲ .




ಕಾಗಿನೆಲೆ  ಗ್ರಾಮದ ಒಂದು ನೋಟ


ದೇಗುಲದ ಮರು ನಿರ್ಮಾಣ ಕಾರ್ಯದ ನೋಟ




ಕನಕದಾಸರ ಕಾಗಿನೆಲೆಯ ಪುಣ್ಯ ಭೂಮಿಯಲ್ಲಿ  ಕಾಲಿಟ್ಟ ನಾವು ಆದಿಕೇಶವ ದೇವಾಲಯ ತಲುಪಿದೆವು,  ಅಚ್ಚರಿಯೆಂದರೆ , ಈ ಐತಿಹಾಸಿಕ ದೇಗುಲಕ್ಕೆ  ತಲುಪಲು  ಒಂದು ರಾಜಮಾರ್ಗವೇ ಇಲ್ಲ , ಸಂದಿ ಗೊಂದಿಗಳ ಪುಟ್ಟ ಗಲ್ಲಿಗಳಲ್ಲಿ  ನಡೆದು  ಕನಕರ ಪ್ರೀತಿಯ  ಆದಿಕೇಶವನ  ದರ್ಶನ ಮಾಡಬೇಕು .  ಅಂದಿನಕಾಲದಲ್ಲಿ  ಅತ್ಯಂತ ವೈಭವಯುತವಾಗಿ ಮೆರೆದ  ಈ ದೇಗುಲ ಇಂದು  ಶಿಥಿಲಾವಸ್ಥೆ  ತಲುಪಿ ಈಗ ದುರಸ್ಥಿ  ಕಾಣುತ್ತಿದೆ.





ಶ್ರೀ ಲಕ್ಷ್ಮಿ ನರಸಿಂಹ  ಸನ್ನಿಧಿ




ಕನಕದಾಸರು ಇಲ್ಲಿಗೆ ಬರುವ ಮೊದಲು  ಈ ಊರು ಕಾಗಿನೆಲ್ಲಿ  ಆಗಿತ್ತೆಂದು ಹಾಗು ಅವರು ಬರುವ ಮೊದಲೇ ಇಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮೀ ದೇಗುಲ ಇತ್ತೆಂದು ಹೇಳುತ್ತಾರೆ, ಈ ಊರಿಗೆ  ಕಾಗಿನೆಲ್ಲಿ ಎಂಬ ಹೆಸರು ಬರಲು  ಒಂದು ಕಥೆ ಹೇಳುತ್ತಾರೆ . ಬಹಳ ಹಿಂದೆ ೬೦೦  ವರ್ಷಗಳಿಗೂ  ಹಿಂದೆ   ಒಂದು ಕಾಗೆ ನೆಲ್ಲಿ ಮರದಲ್ಲಿ  ಕುಳಿತು ನೆಲ್ಲಿ ಕಾಯಿ  ತಿನ್ನುತ್ತಿತ್ತೆಂದೂ , ಆ ನೆಲ್ಲಿಕಾಯಿ ಚಿನ್ನದ ನೆಲ್ಲಿಕಾಯಿಯಂತೆ  ಕಂಡು ಬಂದ  ಕಾರಣ ಅಲ್ಲಿನ ರೈತರು  ಆ ಕಾಗೆಯನ್ನು  ಅಟ್ಟಿಸಿಕೊಂಡು ಹೋಗಲು , ಬೆದರಿದ ಆ ಕಾಗೆ  ನೆಲ್ಲಿಕಾಯಿಯನ್ನು ಒಂದು ಹುತ್ತದೊಳಗೆ ಹಾಕಿ ಹಾರಿಹೊಯಿತೆಂದೂ , ನಂತರ  ಆ ಹುತ್ತವನ್ನು ಅಗೆದಾಗ  ಈ ಲಕ್ಷ್ಮಿ ನರಸಿಂಹ ವಿಗ್ರಹ  ಸಿಕ್ಕಿ  ಒಂದು ದೇಗುಲವನ್ನು ನಿರ್ಮಿಸಲಾಯಿತೆಂದೂ , ಅಂದಿನಿಂದ ಈ ಜಾಗವನ್ನು  ಕಾಗಿ ನೆಲ್ಲಿ ಎಂದು ಕರೆಯಲಾಯಿತೆಂದೂ ಹೇಳುತ್ತಾರೆ . ನಂತರ  ಕನಕದಾಸರು  ಇಲ್ಲಿಗೆ ಬಂದು  ವ್ಯಾಸರಾಜರ  ಸಮ್ಮುಖದಲ್ಲಿ  ಇಲ್ಲಿ ಆದಿ ಕೇಶವ ಪ್ರತಿಷ್ಟಾಪಿಸಿದರೆಂದೂ  ಹೇಳುತ್ತಾರೆ . ಏನೇ ಆದರೂ ಈ ಸ್ಥಳ  ಹಲವುಶತಮಾನಗಳ  ಐತಿಹಾಸಿಕ  ಘಟನೆಗಳಿಗೆ ಸಾಕ್ಷಿ ಯಾಗಿರುವುದಂತೂ ನಿಜ .



ಕನಕದಾಸರು  ಬಳಸಿದ ಶಂಖ ಹಾಗು ಕರಂಡ




ಶ್ರೀ  ಲಕ್ಷ್ಮಿ ನರಸಿಂಹ ದೇಗುಲದಲ್ಲಿ  ದರ್ಶನ ಪಡೆದ ನಮಗೆ ಅಲ್ಲಿನ  ಅರ್ಚಕರು  ನಮಗೆ ದೇಗುಲದ ಬಗ್ಗೆ  ಮಾಹಿತಿ ನೀಡಿ ಕನಕದಾಸರು ಬಳುಸುತ್ತಿದ್ದರೆನ್ನಲಾದ  ಶಂಖ ಹಾಗು  ಕರಂಡ ಗಳನ್ನೂ ದರ್ಶನ ಮಾಡಿಸಿ ಅದನ್ನು ಸ್ಪರ್ಶಿಸಲು ಹಾಗು ನಾವುಗಳೇ   ಶಂಖ ಮುಟ್ಟಿ  ಶಂಖ ನಾಧ  ಮಾಡಲು ಅನುವು ಮಾಡಿಕೊಟ್ಟರು , ಕನಕದಾಸರು ಸ್ಪರ್ಶಿಸಿದ  ಈ ಅಮೂಲ್ಯ  ವಸ್ತುಗಳನ್ನು ಕಂಡು ಸ್ಪರ್ಶಿಸಿ  ಆನಂದಪಟ್ಟೆವು, ನಂತರ  ತೆರಳಿದ್ದು   ಕನಕರ ಪ್ರೀತಿಯ  ಆದಿಕೇಶವನ ಸನ್ನಿಧಿಗೆ





ಕನಕದಾಸರ  ಆದಿಕೇಶವ ನೋಡಿ ಇಲ್ಲಿದ್ದಾನೆ

ಕಾಗಿನೆಲೆಯಾದಿ   ಕೇಶವನ ದರ್ಶನ ಮಾಡಿ


 ಕಾಗಿನೆಲೆ  ಆದಿಕೇಶವನ  ದರ್ಶನ ಮಾಡಲು ಮೂರ್ತಿಯ ಮುಂದೆ ನಿಂತ ನಮಗೆ  ಮಾತು ಹೊರಡಲಿಲ್ಲ ,  ಮುದ್ದಾದ  ಆದಿಕೇಶವ  ನಮ್ಮ ಮನದಲ್ಲಿ ಅಚ್ಚಳಿಯದೆ  ಉಳಿಯುವಂತಹ  ದರ್ಶನ ಕರುಣಿಸಿದ್ದ , ಮನದ ತುಂಬಾ ಸಂತಸದ  ಭಾವನೆ ಹೊಮ್ಮಿತು.  ಹನುಮ ಪೀಠದ  ಮೇಲೆ ಗರುಡದೇವನ  ಸಹಿತ ಆದಿಕೇಶವ ನೆಲೆಸಿದ್ದಾನೆ, ಶಂಖ, ಚಕ್ರ , ಗದೆಗಳು ಮೂರು  ಕೈಗಳಲ್ಲಿ  ಮತ್ತೊಂದು ಅಭಯ ಹಸ್ತ  ಈ  ಸುಂದರ ಮೂರ್ತಿಯ ವಿಶೇಷ ,  ಈ ಆದಿಕೇಶವ  ಮೂರ್ತಿಯನ್ನು  ಕನಕದಾಸರ  ಗುರುಗಳಾದ ವ್ಯಾಸರಾಜರು  ಪ್ರತಿಷ್ಟಾಪಿಸಿದರೆಂದು ಹೇಳಲಾಗುತ್ತದೆ ,   ಭಕ್ತಿಯಿಂದ   ಆದಿಕೇಶವನನ್ನು   ಆರಾಧಿಸುತ್ತಾ  ಕನಕದಾಸರು  ಈ ಪವಿತ್ರ  ಸ್ಥಳದಲ್ಲಿ  ನೆಲೆಸಿ  ನಳಚರಿತ್ರೆ , ಹರಿಭಕ್ತಿಸಾರ ,ನೃಸಿಂಹಸ್ತವ , ರಾಮಧಾನ್ಯ ಚರಿತೆ  ಹಾಗು ಉಗಾಭೋಗ  ಮುಂತಾದವುಗಳನ್ನು ರಚಿಸುತ್ತಾರೆ . "ಈಶ ನಿನ್ನ ಚರಣ  ಭಜನೆ " ಎಂಬ ಹಾಡು ಕನಕದಾಸರು  ಅವರ ಜೀವಿತ ಅವದಿಯಲ್ಲಿ ರಚಿಸಿದ ಕೊನೆಯ ಹಾಡು  ಅದರಲ್ಲಿನ ಪಾಂಡಿತ್ಯ ಒಮ್ಮೆ ನೋಡಿದರೆ  ನಿಮಗೆ ಅವರ ಜ್ಞಾನದ ಅರಿವಾಗುತ್ತದೆ https://youtu.be/lUl6VREGTXE  ಈ ಹಾಡಿನಲ್ಲಿ  ಆದಿ ಕೇಶವನನ್ನು  ಹೊಗಳಲು  ಒಮ್ಮೆ ಬಳಸಿದ  ವಿಷ್ಣುವಿನ   ಹೆಸರನ್ನು ಮತ್ತೊಮ್ಮೆ ಬಳಸದೆ  ವಿಷ್ಣುವಿನ  ೨೬  ಹೆಸರುಗಳನ್ನು  ಬಳಸುತ್ತಾ  ತಮ್ಮ ಜ್ಞಾನ ನೈಪುಣ್ಯತೆ ಮೆರೆದಿದ್ದಾರೆ .




ಯತಿಗಳ ವೃಂದಾವನ

ಮಾರುತಿಯ ದರ್ಶನ




ಆದಿಕೇಶವನ ದರ್ಶನ ಪಡೆದು ಪಾವನ ರಾದ ನಾವು  ದೇಗುಲದ ಆವರಣದಲ್ಲೇ ಇದ್ದ  ಶ್ರೀ ರಾಜ ವಂದಿತ ತೀರ್ಥರ ವೃಂದಾವನ, ಹಾಗು ಮಾರುತಿ ದೇವರ ದರ್ಶನ ಪಡೆದೆವು, ಈ ಮಾರುತಿ ದೇಗುಲದಲ್ಲಿ  ಮೂರು ಹನುಮರ ವಿಗ್ರಹ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ, ದೇಗುಲ ನೋಡುತ್ತಾ  ಅಲ್ಲಿನ  ವಾತಾವರಣದಲ್ಲಿ  ಲೀನವಾಗಿದ್ದ ನಮಗೆ  ಊರಿಗೆ ಹೋಗಬೇಕಾದ  ಬಗ್ಗೆ ಮನಸಿನಲ್ಲಿ  ಎಚ್ಚರಿಕೆ ಬಂದೀತು .  ಅಲ್ಲಿಂದ  ವಾಪಸ್ಸು ಹೊರಟು   ಆದಿಕೇಶವನ  ದೇವಾಲಯದ  ಹೊರಗೆ ಬಂದು  ಕಾಗಿನೆಲೆಯ  ನಡು ಬೀದಿಯಲ್ಲಿ ನಡೆದೆವು .




ಕಾಗಿನೆಲೆಯಲ್ಲಿ  ಸಂತೆಯ ದೃಶ್ಯ


ನಾವು ಭೇಟಿ ನೀಡಿದ ದಿನ ಕಾಗಿನೆಲೆಯಲ್ಲಿ ಸಂತೆ ಇತ್ತು,  ಅಲ್ಲಿನ ಸುತ್ತ ಮುತ್ತ ಹಳ್ಳಿಯ ಜನರು  ದವಸ ದಾನ್ಯಗಳ ಖರೀದಿಯಲ್ಲಿ ತೊಡಗಿದ್ದರು , ಹಲವಾರು  ದಶಕಗಳಿಂದ  ನಡೆದು ಬಂದಿರುವ  ಸಂತೆ  ವ್ಯಾಪಾರ  ನಮ್ಮ ಹಳ್ಳಿಗಳಿಗೆ ಸೂಪರ್  ಮಾರ್ಕೆಟ್ ನಂತೆ  ಎಲ್ಲಾ  ಅಗತ್ಯ ವಸ್ತುಗಳು ಒಂದೆಡೆ ಸಿಗುವ  ತಾಣವಾಗಿವೆ . ಅಲ್ಲಿನ ದ್ರುಶ್ಯ ನೋಡುತ್ತಾ  ಮುಂದೆ ಸಾಗಿದೆ , ನಮ್ಮ ಕಾರು ಬೆಂಗಳೂರಿನ ಹಾದಿ ಹಿಡಿಯಿತು ,



ಹಸಿವ ತಣಿಸಿದ ತಾಣ



ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ  ಹೊರಟ  ನಮಗೆ ಬಿರುಸಾದ ಮಳೆಯ ದರ್ಶನ , ಚಾಲಕರಿಗೆ ದಾರಿ ಕಾಣದಷ್ಟು  ಮಳೆ ದೋ ಎಂದು ಸುರಿಯುತ್ತಿತ್ತು,  ಕಾಗಿನೆಲೆ ಅಲೆದಾಟದಿಂದ  ಹೊಟ್ಟೆ  ಹಸಿದಿತ್ತು,  ಹಾದಿಯಲ್ಲಿ ಸಿಕ್ಕ ಒಂದು ಹೋಟೆಲ್ ಗೆ  ನುಗ್ಗಿ  ಹಸಿದ ಹೊಟ್ಟೆಗೆ  ರುಚಿಯಾದ  ದೋಸೆಗಳನ್ನು  ಬಲಿ ನೀಡಿದೆವು,  ಪ್ರಕಾಶಣ್ಣ  ಬಹಳ ಖುಷಿಯಾಯಿತು ನಿಮ್ಮಜೊತೆ ಕಳೆದ  ಮೂರುದಿನಗಳ  ಯಾತ್ರೆ ಅಂದೇ  , ಅಯ್ಯೋ ಬಾಲಣ್ಣ  ನನಗೂ ಹಾಗೆ ಅನ್ನಿಸಿದೆ,   ನಿಜಕ್ಕೂ  ಈ ಮೂರುದಿನಗಳು  ಮರೆಯಲಾರದ  ಅನುಭವ ಅಂದ್ರೂ . ನಮ್ಮಿಬ್ಬರ ಪೇಚಾಟ ಕೇಳಿ  ನಮ್ಮ  ವಾಹನ ಚಾಲಕ ನಗುತ್ತಿದ್ದ,   ಬೆಂಗಳೂರು ತಲುಪಿ  ಕೀಟಲೆ ಪ್ರಕಾಶಣ್ಣ ನನ್ನು  ಆಶಾ ಅತ್ತಿಗೆ  ವಶಕ್ಕೆ ಒಪ್ಪಿಸಿ  ಮೈಸೂರಿನ ನನ್ನ ಮನೆಗೆ  ನೆಮ್ಮದಿಯಾಗಿ ತಲುಪಿದೆ.





 ಹಸಿದ ಹೊಟ್ಟೆಗೆ  ದೋಸೆಗಳ ಸಾಂತ್ವನ 


ಕಳೆದ ವರ್ಷ ೨೦೧೪ ರ ಮೇ ೨೮ ರಿಂದ  ಇಲ್ಲಿಯವರೆಗೆ  ಸುಮಾರು  ೧೭ ಕಂತಿನ ಈ ಪ್ರವಾಸ ಯಾನದ ಅನುಭವದ  ಮಾಲಿಕೆಯನ್ನು ಬ್ಲಾಗ್ ನಲ್ಲಿ ಓದಿ  ನನ್ನನ್ನು ಪ್ರೀತಿಯ  ಮಾತುಗಳಿಂದ  ಪ್ರೋತ್ಸಾಹಿಸಿ  ಪೊರೆದ  ಎಲ್ಲಾ ಗೆಳೆಯರಿಗೆ   ವಂದಿಸುತ್ತಾ  , ಈ ಪ್ರವಾಸ ಕಥನ ಯಾನವನ್ನು ಮುಗಿಸಿದ್ದೇನೆ .  ನಿಮ್ಮೆಲ್ಲರ ಪ್ರೀತಿಗೆ ನನ್ನ ಸಲಾಂ .

4 comments:

Srikanth Manjunath said...

ಒಂದು ಮಾಹಿತಿ ಪೂರ್ಣತೆ ಕೂಡಿರುವ ಲೇಖನ ಸರಮಾಲೆ ಸಾರ್ಥಕ ಮುಕ್ತಾಯ ಕಂಡಿದೆ. ಕಾಗಿನೆಲೆಯ ಮಾಹಿತಿ ಸುಂದರ ಜಿಜ್ಞಾಸೆ ಏನೇ ಇರಬಹುದು ಆದರೆ ಆ ಕಾಲದ ವಸ್ತುಗಳನ್ನು ನೋಡುವುದು ಮುಟ್ಟುವುದು ಏನೋ ಖುಷಿ ಕೊಡುತ್ತದೆ. ಪ್ರತಿ ಚಿತ್ರಗಳು ಸಂಗ್ರಹ ಯೋಗ್ಯ.
ಸೂಪರ್ ಸರ್

ಮನಸು said...

ತುಂಬಾ ದಿನಗಳ ಆಸೆ ಈ ಸ್ಥಳ ನೋಡಬೇಕು ಎಂದು. ಇಂದು ನಿಮ್ಮ ಬ್ಲಾಗ್ ಮೂಲಕ ನೋಡಿದಂತಾಯಿತು. ಧನ್ಯವಾದಗಳು ಸರ್

bilimugilu said...

Balu sir,
kaaginele chennakeshavana degula noduva bhaagya innu odagalilla. nimma blog moolakave ondu parichayavaaythu. Dhanyavaada hanchikondidakke.

Unknown said...

Thanks Balu, very detail information. Good feeling after reading. Keep providing similar type of information. Have you published book on Sri Ranagapatanna ?