ತುಂಟ ಮನಸಿನ ಸರದಾರನೊಡನೆ ಐಸ್ ಕ್ಯಾಂಡಿ ತಿನ್ನುವ ಯೋಗ |
ನಮಸ್ಕಾರ ಗೆಳೆಯರೇ ಇತೀಚೆಗೆ ಘಟನೆ ನಡೆಯಿತು, ನಮ್ಮ ಬ್ಲಾಗ್ ಲೋಕದ ಸಹೋದರಿ ಪುಟ್ಟಿ ಒಬ್ಬಳು ಪ್ರೀತಿಯಿಂದ ಮದುವೇ ನಿಶ್ಚಯ ಆಗಿರುವುದಾಗಿ ತಿಳಿಸಿ , ಅಣ್ಣಾ ನೀವು ಮದುವೆಗೆ ಬರಲೇಬೇಕು ಅಂದಳು , ನಿನ್ನ ಮದುವೆ ಯಾವತ್ತು ಪುಟ್ಟಿ ಅಂದೇ , ಅಣ್ಣಾ ಅದು ಮೇ ೧೧ ರಂದು ಬರಲೇಬೇಕು ಒತ್ತಾಯದ ಕರೆ ಬಂತು , ಯೋಚಿಸಿದೆ ಅಲ್ಲಮ್ಮ ಮೇ ೧೧ ಕ್ಕೆ ಬೇರೆ ಕಾರ್ಯಕ್ರಮ ಇದೆ ಬಲವಂತಾ ಮಾಡಬೇಡ , ನಿನ್ನ ಮದುವೆ ನಿಶ್ಚಿತಾರ್ಥಕ್ಕೆ ಬರುತ್ತೇನೆ ಯಾವತ್ತು ಹೇಳು ಅಂದೇ, ಏಪ್ರಿಲ್ ೧೩ ಕ್ಕೆ ಇದೆ ಮಂಜುಗುಣಿ ಹತ್ತಿರ ನಮ್ಮೂರು ಬರಲೇ ಬೇಕು ಅಂದಳು . ಹೀಗೆ ಶುರು ಆಗಿತ್ತು ಮತ್ತೊಂದು ಪ್ರವಾಸದ ಸಿದ್ದತೆ .
ಮುಂದಿನ ಸಿದ್ದತೆ ಯಾರ ಜೊತೆ ಹೊರಡ ಬೇಕೂ ಎನ್ನುವುದು, ಮೊದಲು ಗೆಳೆಯ ಶ್ರೀಕಾಂತ್ ಮಂಜುನಾಥ್ ಅವರ ಜೊತೆ ಹೊರಡಲು ಸಿದ್ದತೆ ನಡೆಯಿತು, ಆದರೆ ಆಕಸ್ಮಿಕವಾಗಿ ಬಂದ ಅವರ ಕಾರ್ಯ ಕ್ಷೇತ್ರದ ಅಡಚಣೆ ಅವರ ಪ್ರವಾಸ ರದ್ದು ಪಡಿಸಿತು, ಇನ್ನು ನಮ್ಮ ಪ್ರಕಾಶಣ್ಣ ಬರುವ ಬಗ್ಗೆ ಫೋನ್ ಮಾಡಿದೆ, ಅಣ್ಣ ಟ್ರೈ ಮಾಡ್ತೀನಿ ಎರಡು ದಿನ ಟೈಮ್ ಕೊಡಿ ಅಂದರು, ನಂತರ ಎರಡು ದಿನ ಬಿಟ್ಟು ಫೋನ್ ಮಾಡಿದ್ರೆ ಸ್ವಲ್ಪ ಅವರ ಕೆಲಸದ ಒತ್ತಡದಲ್ಲಿ ಡೋಲಾಯಮಾನದ ಮನಸ್ಸಿನಿಂದ ಸ್ವಲ್ಪ ತಡಕಾಡಿದರು , ಪ್ರಕಾಶಣ್ಣ ದಾರಿಯಲ್ಲಿ ಹೋಗ್ತಾ ವರದಹಳ್ಳಿ ನೋಡೋ ಆಸೆ ಇದೆ ಅಂತಾ ನನಗೆ ಅರಿವಿಲ್ಲದೆ ಬಾಯಿಂದ ಬಂದಿತ್ತು, ಅರೆ ಅಚ್ಚರಿ ಅಣ್ಣ ಬರುತ್ತೇನೆ ನಡೆಯಿರಿ ಅಂತಾ ಒಪ್ಪಿಗೆ ಕೊಟ್ರು, ಹೊರಡುವ ಹಿಂದಿನ ದಿನ ಅವರ ಮನೆಯಲ್ಲಿ ಆಶಾ ಅತ್ತಿಗೆ ಇಂದ ಒಳ್ಳೆಯ ಊಟ ಹೊಡೆದು , ಮಾತುಕತೆ ಹರಟೆ ಮಾಡಿದೆವು, ಅಯ್ಯೋ ಬಾಲಣ್ಣ ಅವರು ಕಾರ್ ಡ್ರೈವ್ ಮಾಡದೆ ನಿಮ್ಮ ಜೊತೆ ಬರ್ತಾ ಇರೋದೇ ಸೋಜಿಗ ನನಗೆ, ಬಹುಷಃ ಇದೆ ಮೊದಲ ಸಾರಿ ಕಾರ್ ಡ್ರೈವ್ ಮಾಡದೆ ಬೇರೆಯವರು ಡ್ರೈವ್ ಮಾಡುವ ಕಾರಿನಲ್ಲಿ ಊರಿಗೆ ಹೋಗ್ತಾ ಇರೋದು ಎನ್ನುವ ವಿಚಾರ ಬಿಚ್ಚಿಟ್ಟರು ......! ಹರಟೆ ಹೊಡೆದು ನಿದ್ದೆಗೆ ಜಾರಿದೆ,
ಕಟ್ ಮಾಡಿದ್ರೆ ಮುಂಜಾವಿನ ಐದು ಘಂಟೆಗೆ ನಮ್ಮ ಪಯಣ ಆರಂಭ ಅಣ್ಣಾ , ಎನ್. ಹೆಚ್ . ೪ ರಲ್ಲಿ ಹೋಗೋಣ ಬೇಗ ಹೋಗ ಬಹುದು ಅಂತಾ ಸೂಚನೆ ಪ್ರಕಾಶ್ ಹೆಗ್ಡೆ ಯವರಿಂದ ಆದರೆ ಈ ತರಲೆ ಕೇಳಬೇಕಲ್ಲಾ , ಅಣ್ಣಾ ಶಿವಮೊಗ್ಗಾ ಕಡೆಯಿಂದಾ ಹೋಗೋಣ , ಸಕ್ರೆ ಬೈಲು ನೋಡ ಬೇಕು ಅಂತಾ ವರಾತ ನನ್ನಿಂದ ಇಲ್ಲೇ ಮೊದಲ ತುಂಟಾಟ ಶುರು .ಆಗಿತ್ತು, ಆದರೆ ಪ್ರೀತಿಯ ಮನದ ಗೆಳೆಯ ನನ್ನ ಮಾತಿಗೆ ತಲೆ ಆಡಿಸಿ ಜೈ ಅಂದರು, ಬೆಂಗಳೂರಿನಿಂದ , ನೆಲಮಂಗಲ, ತಲುಪುವಷ್ಟರಲ್ಲಿ ಹೊಟ್ಟೆ ಲಾವ್ ಲಾವ್ ಎನ್ನುತ್ತಿತ್ತು, ಆದ್ರೆ ಪ್ರಕಾಶಣ್ಣ ತುಮಕೂರಿನಲ್ಲಿ ಒಳ್ಳೆ ಹೋಟೆಲ್ನಲ್ಲಿ ತಿಂಡಿ ತಿನ್ನೋಣ ಎನ್ನುತ್ತಾ ಮಾತಿನಲ್ಲಿ ತೊಡಗಿದೆವು, ಮಾತನಾಡುತ್ತಾ ತುಮಕೂರು, ತಲುಪಿದೆವು, ನಮ್ಮ ಹೊಟ್ಟೆ ಹಸಿವನ್ನು ನೀಗಿಸಲು ಮುಂಜಾನೆ ಆರು ಘಂಟೆಗೆ ಯಾವ ಹೋಟೆಲ್ಗಳೂ ತೆರೆದಿರಲಿಲ್ಲ, ಸರಿ ಮುಂದೆ ನೋಡೋಣ ಅಂತಾ ಗುಬ್ಬಿ, ಗೆ ಬಂದರೆ ಆಲ್ಲಿಯೂ ಅದೇ ಕಥೆ, ಪಯಣದಲ್ಲಿ ಹೊಟ್ಟೆ ಹಸಿವು ನಮ್ಮ ಮಾತಿಗೆ ಕಡಿವಾಣ ಹಾಕಿತ್ತಾದರೂ , ಹಸಿವನ್ನು ಮರೆಯಲು ಒಂದಷ್ಟು ಜೋಕ್ ಹೇಳಿಕೊಂಡರೂ ಹೊಟ್ಟೆಯಲ್ಲಿನ ಹಸಿವು ನಗಲೂ ತ್ರಾಣ ಇಲ್ಲದಂತೆ ಮಾಡಿತ್ತು . ತಿಪಟೂರು ತಲುಪಷ್ಟರಲ್ಲಿ ಹೈರಾನಾಗಿದ್ದೆವು . ಕೊನೆಗೂ ಕಂಡಿತ್ತು, ತಿಪಟೂರು ಪಟ್ಟಣದಲ್ಲಿ ಪೈ ಹೋಟೆಲ್ . ನೋ ಪಾರ್ಕಿಂಗ್ ಇದ್ದ ಬೋರ್ಡ್ ಬಳಿ ಕಾರುನಿಲ್ಲಿಸಲು ಹೋಟೆಲ್ನವರು , ನೋ ಪಾರ್ಕಿಂಗ್ ಬೋರ್ಡ್ ಅನ್ನೇ ಮುಂದೆ ಸರಿಸಿ ಅನುವು ಮಾಡಿಕೊಟ್ಟರು .
ತಿಪಟೂರಿನ ಪೈ ಹೋಟೆಲ್ ಬಳಿ ತುಂಟ ಪ್ರಕಾಶಣ್ಣ ತೋರಿದ ಭೂತರಾಜ |
ದಡಬಡಾಯಿಸಿ ಕಾರಿನಿಂದ ಇಳಿದು ಬಕಾಸುರನಂತೆ ಹೋಟೆಲ್ ಹೊಕ್ಕೆ, ಹಿಂದೆ ನಗುನಗುತ್ತಾ ತುಂಟ ಪ್ರಕಾಶಣ್ಣ ಬರುತ್ತಿದ್ದರು. ಸಪ್ಲೆಯರ್ ಬಂದ ತಕ್ಷಣ ಅಯ್ಯಾ ಮೊದಲು ಏನಿದೆ ಅಂತಾ ಕೇಳೋದು ಬಿಟ್ಟು, ಇಡ್ಲೀ ವಡೆ ತಗೊಂಡು ಬಾರಪ್ಪಾ ಅಂದೇ . ಪುಣ್ಯಾತ್ಮ ನಮ್ಮ ಹಸಿವಿನ ಹಪ ಹಪಿಯ ಮುಖನೋಡಿ, ಪಾಪ ಎನ್ನಿಸಿರಬೇಕು ತಕ್ಷಣವೇ ಇಡ್ಲೀ ವಡೆ ತಂದಿಟ್ಟ . ಕ್ಷಣಮಾತ್ರದಲ್ಲಿ ಎಲ್ಲವೂ ಗಾಯಬ್, ಮತ್ತೆ ಇನ್ನೊಂದು ಬಗೆಯ ತಿಂಡಿ ತಿಂದು ಕಾಫಿ ಕುಡಿದು ಹಸಿವಿನ ಸಂಕಟದಿಂದ ಪಾರಾದೆವು. ಹೊಟ್ಟೆ ತುಂಬಿದ ನಂತರ ಮತ್ತೆ ತುಂಟತನ ಶುರು ಆಯಿತು. ಹೋಟೆಲ್ ಹೊರಗೆ ಬಂದ ಅಲ್ಲಿನ ಸುತ್ತ ಮುತ್ತಲ ಪರಿಸರ ಅವಲೋಕನ ಮಾಡುತ್ತಿದ್ದೆವು . ಅಷ್ಟರಲ್ಲಿ ಪ್ರಕಾಶಣ್ಣ , ಬಾಲಣ್ಣ ಅಂದ್ರು , ತಿರುಗಿ ನೋಡಿದರೆ ಹಾರಿನ ಹಿಂದೆ ನಿಂತು ಪೋಸ್ ಕೊಡುತ್ತಿದ್ದರು , ಬಲ ಕೈಬೆರಳು ಏನನ್ನೋ ತೋರುತ್ತಿತ್ತು, ನೋಡಿದರೆ ಕಾರಿನ ಹಿಂದೆ ಬರೆದಿದ್ದ "ಭೂತರಾಜ" ಎಂಬ ಪದ ಕಾಣಿಸಿ ಜೋರಾಗಿ ನಗು ಬಂತು, ಸ್ವಲ್ಪ ಸಮಯದ ಮೊದಲು ಹಸಿವಿನಿಂದ ಬಳಲಿ , ಏನು ಸಿಕ್ಕರೂ ತಿನ್ನಲು ಸಿದ್ದರಿದ್ದ ನಾವೂ ಭೂತರಾಜರೆ ಆಗಿದ್ದದ್ದು ನೆನಪಿಗೆ ಬಂತು . ನಮ್ಮ ಪಯಣ ಮುಂದುವರೆಯಿತು ಅರಸೀಕೆರೆ ಕಡೆಗೆ .
ಬತ್ತಿರುವ ಈ ಕೆರೆಯಲ್ಲಿ ಈಜು ಹೊದೆದೀರಿ ಜೋಕೆ |
ಅರಸೀಕೆರೆ ಹತ್ತಿರವಾಗುತ್ತಿದ್ದಂತೆ ಕಂಡಿದ್ದು ಒಂದು ಬತ್ತಿದ ವಿಶಾಲವಾದ ಕೆರೆ ಅಲ್ಲೊಂದು ಬೋರ್ಡು, "ಕೆರೆಯ ಈ ಪ್ರದೇಶದಲ್ಲಿ ಈಜಾಡುವುದನ್ನು ನಿಷೇಧಿಸಲಾಗಿದೆ , ಈಜಾಡುವುದು ಕಂಡುಬಂದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು " ಎಂಬ ಸೂಚನೆ ನೋಡಿ ನಮ್ಮ ತುಂಟ ಪ್ರಕಾಶಣ್ಣ ಈಜಲು ತೆರಳಿದರು , . ಅತ್ತ ಈ ಸೂಚನಾ ಫಲಕ ನೋಡಿ ನಗುತ್ತಾ ಒಂದಷ್ಟು ಸುತ್ತಮುತ್ತಲಿನ ಫೋಟೋ ತೆಗೆದೇ , ಅರಸೀಕೆರೆ ಊರಿಗೆ ಹೆಸರು ಬರಲು ಕಾರಣ ಈ ವಿಶಾಲವಾದ ಕೆರೆ . ಹೊಯ್ಸಳ ಅರಸರ ಕಾಲದಲ್ಲಿ ಒಬ್ಬ ರಾಣಿ ಕಟ್ಟಿಸಿದ ಕೆರೆ ಇದು, ಹಾಗಾಗಿ ಅರಸಿ ಕಟ್ಟಿಸಿದ ಕೆರೆ " ಅರಸೀಕೆರೆ " ಆಯಿತು. ಈ ಊರನ್ನು " ಬಲ್ಲಾಳಪುರ" ಅಂತಾನು ಕರೆಯುತ್ತಿದ್ದರು . ಅರಸಿಕೆರೆಗೆ ಹೆಸರು ಬರಲು ಕಾರಣವಾದ ಹೊಯ್ಸಳರ ಕಾಲದ ಈ ಕೆರೆಯನ್ನು ಸಂರಕ್ಷಿಸಿ ಇತಿಹಾಸವನ್ನು ಕಾಪಾಡಿ ಅಲ್ಲಿನ ಪರಿಸರವನ್ನೂ ಕಾಪಾಡಬೇಕಾದ ಅನಿವಾರ್ಯತೆ ಇಂದು ಆಗ ಬೇಕಾಗಿದೆ .
ನೀರಿಗಾಗಿ ಬಾಯ್ಬಿಟ್ಟ ಕೆರೆಯ ಅಂಗಳ |
ಬಿಸಿಲಿನ ತಾಪಕ್ಕೆ ಒಣಗಿ ಭೂಮಿ ಬಿರಿದು ಕೆರೆಯ ಅಂಗಳ ಜೀವ ಜಲಕ್ಕಾಗಿ ಬಕಪಕ್ಷಿಯಂತೆ ಕಾದು ಕುಳಿತ್ತಿತ್ತು, ಕೆರೆಯ ಅಕ್ಕಪಕ್ಕ ಹಸು, ಎಮ್ಮೆ , ಹಕ್ಕಿ, ಮುಂತಾದ ಜೀವಿಗಳು ಬತ್ತಿದ ಕೆರೆ ನೋಡಿ ನೀರಡಿಕೆ ತಾಳದೆ ಸಂಕಟ ಪಡುತ್ತಿದ್ದವು. ಒಮ್ಮೆ ಮನಸು ಭಾರವಾಯಿತು,
ತಣ್ಣನೆ ಐಸ್ ಕ್ಯಾಂಡಿ ಕೈಯಲ್ಲಿ ಹಿತವಾದ ಮಾತು ಮೊಬೈಲ್ ನಲ್ಲಿ |
ನೆತ್ತಿಯ ಮೇಲೆ ಸೂರ್ಯ ಕೆಂಡ ಸುರಿಯುತ್ತಿದ್ದ , ಪಯಣ ಮುಂದೆ ಸಾಗಿತು. ಅರಸೀಕೆರೆ ಪಟ್ಟಣ, ಬಾಣಾವರ, ಕಡೂರು, ಬೀರೂರು, ತರೀಕೆರೆ .ದಾಟಿ ಪಯಣ ಸಾಗಿತ್ತು, ಬಿಸಿಲ ತಾಪ ಏರುತ್ತಲೇ ಇತ್ತು, ದಾರಿಯಲ್ಲಿ ಸಿಕ್ಕಿದ ಒಬ್ಬ ಐಸ್ ಕ್ಯಾಂಡಿ ಮಾರುವ ವ್ಯಾಪಾರಿ , ತಕ್ಷಣವೇ ಕಾರನ್ನು ನಿಲ್ಲಿಸಿ, ಹಳ್ಳಿಯಲ್ಲಿ ಕಳೆದ ಬಾಲ್ಯವ ನೆನೆಯುತ್ತಾ ಐಸ್ ಕ್ಯಾಂಡಿ ಚೀಪುತ್ತಾ ರಸ್ತೆ ಬದಿಯಲ್ಲಿ ನಿಂತೆವು . ಕುಳಿತು ಕುಳಿತೂ ಕೈ ಕಾಲು ಸೋಮಾರಿಯಾಗಿದ್ದವು . ಓಡಾಡಿದ ನಂತರ ಸ್ವಲ್ಪ ಆರಾಮು ಅನ್ನಿಸಿತು, ಪಯಣ ಮುಂದುವರೆಯಿತು . ಭದ್ರಾವತಿ,ದಾಟಿ ಶಿವಮೊಗ್ಗ ತಲುಪಿದೆವು.
ಅಭಿವೃದ್ದಿಯ ಹಾದಿಯಲ್ಲಿ ಶಿವಮೊಗ್ಗ |
ಹಿಂದೆ ಬಂದಾಗ ಹೇಗೇಗೋ ಇದ್ದ ಶಿವಮೊಗ್ಗ ಹೊಸ ರೂಪ ದರ್ಶನ ಮಾಡಿಸಿತು . ಅಗಲವಾದ ರಸ್ತೆಗಳು, ಹೊಸ ಹೊಸ ಬಿಲ್ದಿಂಗುಗಳು , ಮಾಲುಗಳ ದರ್ಶನ, ಹೈ ಟೆಕ್ ಬಸ್ ನಿಲ್ದಾಣ , ಮುಂತಾದವು ಕಣ್ಣಿಗೆ ಬಿದ್ದವು. ಸುಂದರ ಶಿವಮೊಗ್ಗ ಶುಚಿಯಾಗಿ ಕಾಣುತ್ತಿತ್ತು . ನಮ್ಮ ಪಯಣ ಮುಂದೆ ಸಾಗುತ್ತಿತ್ತು. ಸಾಗರ ನಮ್ಮನ್ನು ಕೈ ಬೀಸಿ ಕರೆಯುತ್ತಿತ್ತು, ಕಟ್ ಮಾಡಿದ್ರೆ ಸಾಗರದಲ್ಲಿನ ಹೋಟೆಲ್ ನಲ್ಲಿ ಕಾಫಿ ಕುಡಿದು ಹೊರ ಬಂದೆವು . ಮುಂದಿನ ನಮ್ಮ ಪಯಣ ಶ್ರೀಧರ ಸ್ವಾಮಿಗಳ ಸನ್ನಿಧಿ ವರದಹಳ್ಳಿ ಕಡೆ. ಆ ದಾರಿಯಲ್ಲಿ ನಮ್ಮ ಕಾರು ಓಡುತ್ತಿತ್ತು . ಮನದಲ್ಲಿ ಶ್ರೀಧರ ಸ್ವಾಮಿಗಳ ಕಲ್ಪನೆ ಉದ್ಭವವಾಗುತ್ತಿತ್ತು.
6 comments:
ಅರಸೀಕೆರೆಯ ಪ್ರಸಿದ್ಧ ಗಣಪತಿಯನ್ನು ವಿಸರ್ಜಿಸುವ ಕೆರೆ ಅದು. ಕೆರೆ ತುಂಬಿದರೆ ರೈಲ್ವೇ ಹಳಿ ಮುಳುಗುವ ಮಟ್ಟಕ್ಕೂ ಬರುವುದಿದೆ, ಹಾಗಾಗಿ ಈ ಎಚ್ಚರಿಕೆಯ ಫಲಕ.. ಈಗಿರುವ ಸ್ಥಿತಿಯನ್ನು ಗಮನಿಸಿದಾಗ ನಗುವಿನ ಜೊತೆಗೆ ವಿಷಾದವೂ ಆಗತ್ತೆ. ಅಂತೂ ನೀರಿಲ್ಲದ ಕೆರೆ ಕಂಡು ಪರಿಸ್ಥಿತಿಯ ಪರಿಚಯ ಮಾಡಿಸಿ, ಬಿಸಿಲ ಬೇಗೆಯಲ್ಲೂ ಸಂತಸಪಟ್ಟ ನಿಮ್ಮ ಸಮಯಸ್ಫೂರ್ತಿಗೆ ಒಂದು ಸಲಾಂ... :)
ಬಾಲು ಜೀ... ಅದೆಷ್ಟು ಸರಳ ಭಾಷೆಯಲ್ಲಿ ನಮ್ಮ ಮನಸ್ಸನ್ನು ಹೊಕ್ಕುಬಿಡುತ್ತೀರಲ್ಲ ನೀವು... ! ಓದಲು ಕೂತರೆ ಮುಗಿಸಿಯೇ ಏಳಬೇಕು; ಹಾಗಿರುತ್ತದೆ ನಿಮ್ಮ ಬರವಣಿಗೆ. ಮೊದಲೇ ಚಿತ್ರಕ ಶಕ್ತಿಯುಳ್ಳ ಬರವಣಿಗೆ ನಿಮ್ಮದು... ಅದರ ಜೊತೆ ಒಂದಷ್ಟು ಚಿತ್ರಗಳನ್ನೂ ಹಾಕಿರುತ್ತೀರಿ ಕೀರಿನಲ್ಲಿ ಕೇಸರಿ ಬಾದಾಮು ಹಾಕಿದ ಹಾಗೆ... !
ಈ ಯಾತ್ರಾನುಭವದಲ್ಲಿ ನಿಮ್ಮ ಮುಂದಿನ ಪಯಣ? ಕುತೂಹಲಿಯಾಗಿದ್ದೇನೆ.
ನಮ್ಮ ಬ್ಲಾಗೋತ್ತಮ ಪ್ರಕಾಶಣ್ಣನ ಜೊತೆಯ ನಿಮ್ಮ ಯಾನ ರೋಚಕವಾಗಿತ್ತು.
ಒಣಗಿದ ಕೆರೆ ಕಂಡು ಮನಸ್ಸು ಭಾರವಾಯಿತು.
ಐಸ್ಕ್ಯಾಂಡಿ ನಮಗಿಲ್ಲವೋ?
ಶ್ರೀಧರ ಸ್ವಾಮಿಗಳು ಪ್ರಕಾಶಣ್ಣನ ಆರಾಧ್ಯ ದೇವ ಅಲ್ಲವೇ ಬಾಲಣ್ಣ.
ಉಳಿದರ್ಧ ಮಾರ್ಕ್ಸು ಚಿತ್ರಗಳಿಗೆ.
khushi aaytu..tumbaa dinadinda kaadidde...
mundina bhaaga bega barali...
ಬಾಲಣ್ಣಾ...
ಮತ್ತೆ ನಮ್ಮ ಪಯಣದ ಸವಿ ನೆನಪುಗಳನ್ನೆಲ್ಲ ಹಸಿರಾಗಿಸಿದಿರಿ....
ನಿಮ್ಮೊಂದಿಗೆ ಕಳೆದ ಕ್ಷಣಗಳು ನಿಜಕ್ಕೂ ಅತ್ಯಮೂಲ್ಯ..
ಮೊನ್ನೆ ಊರಿಗೆ ಹೋದಾಗ ನಮ್ಮಣ್ಣ ನಿಮ್ಮನ್ನು ಬಹಳ ನೆನಪಿಸಿಕೊಂಡರು...
"ಇನ್ನೊಮ್ಮೆ ಅವರನ್ನು ಕರೆದುಕೊಂಡು ಬಾ...
ನಮ್ಮೂರನ್ನು ತೋರಿಸಲಾಗಲಿಲ್ಲ"
ನಿಮ್ಮ ಪ್ರೀತಿಗೆ..
ಸ್ನೇಹಕ್ಕೆ ಶಿರಬಾಗುವೆ.....
ಪ್ರವಾಸ ಪ್ರಯಾಸವಾಗಬಾರದು ಎಂದರೆ ಜೊತೆಗಾರರು ಸೂಪರ್ ಇರಬೇಕು ಎನ್ನುತ್ತದೆ ಪ್ರವಾಸಿ ಸಿದ್ಧಾಂತ.. ಒಬ್ಬರು ಇತಿಹಾಸ ಕೆದಕುವವರು ಇನ್ನೊಬ್ಬರು ಶೂನ್ಯದಲ್ಲೂ ನಗೆ ಬುಗ್ಗೆ ಉಕ್ಕಿಸಬಲ್ಲವರು.. ಈ ಇಬ್ಬರ ಜೋಡಿಯಿದ್ದರೆ.. ಆಹಾ ಹೇಳಲೇ ಬಾರದು ಅನುಭವಿಸಬೇಕು..
ನಿಜಕ್ಕೂ ಬೇಸರವಿದೆ ಈ ಪ್ರವಾಸವನ್ನು ಕಾರಣಾಂತರಗಳಿಂದ ತಪ್ಪಿಸಿಕೊಂಡದ್ದಕ್ಕೆ.. ಆದರೆ ಬಾಲೂ ಸರ್ ಜೊತೆಯಲ್ಲಿ ಕ್ಯಾಮೆರ ಇದ್ದಾಗ ಆ ಬೇಸರಕ್ಕೆ ಒಂದು ಪೂರ್ಣ ವಿರಾಮ..
ಚಿಕ್ಕ ಚಿಕ್ಕ ಸಂಗತಿಗಳಿಗೂ ಇತಿಹಾಸದ ಪೋಷಾಕು ತೊಡಿಸಿ ಓದುಗರಿಗೆ ಭರ್ಜರಿ ವಿಷಯ ತಲುಪಿಸುವುದು ನಿಮ್ಮ ವಿಶೇಷ..
ಸೂಪರ್ ಲೇಖನ ಮಾಲಿಕೆ ಶುರುವಾಗಿದೆ ಮುಂದುವರೆಯಲಿ.. ನಾವು ಬರುತ್ತೇವೆ ಶಿರಬಾಗಿ ನಮಿಸುವ ಸಿರ್ಸಿಗೆ..
ಸೂಪರ್
Post a Comment