ರಂಗವಲ್ಲಿ ಕೃಪೆ ಸಂಧ್ಯಾ ಭಟ್ |
ನಮಸ್ಕಾರ ಗೆಳೆಯರೇ , ಕಥೆ ಹೆಣೆಯುವ ಕೊಕ್ಕೋ ಆಟದಲ್ಲಿ ನನ್ನದೂ ಒಂದು ಕಥೆ ಇಲ್ಲಿದೆ , ಮೊದಲು ಗೆಳೆಯ ಶ್ರೀ ಪ್ರಕಾಶ್ ಹೆಗ್ಡೆ ಯವರು ಬರೆದ "ಬೇಲಿ' http://ittigecement.blogspot.in/2014/04/blog-post.html ಕಥೆ ಓದಿ ಆಸ್ವಾದಿಸಿ ನಂತರ .......!
ಮತ್ತೊಬ್ಬ ಗೆಳೆಯ ಶ್ರೀ ದಿನಕರ ಮೊಗೆರ ಅವರು ಬರೆದ "ಬೇಲಿ ಮತ್ತು ದಣಪೆ..!!! " http://dinakarmoger.blogspot.in/ ಕಥೆಯನ್ನು ಅನುಭವಿಸಿ ನಂತರ ಬನ್ನಿ ಎರಡೂ ಕಥೆಗಳ ಮುಂದುವರೆದ ಭಾಗ ಇಲ್ಲಿದೆ .
ಬೇಲಿ ಮತ್ತು ದಣಪೆ..!!! ಹಾಗೂ ಎಲ್ಲೆಯ ಮಿಂಚು !!!!
ಹುಚ್ಚುಕೋಡಿ ಮನಸು ಗರಿಗೆದರಿತ್ತು... ಒಮ್ಮೆ ಹದಗೊಂಡ ದೇಹ ಹುರಿಗೊಳ್ಳುತ್ತಿತ್ತು...
ಎದ್ದು ಬೀರುವಿನಲ್ಲಿದ್ದ ಸೀರೆ ಹುಡುಕಿದೆ... ಕೈಗೆ ಅನಾಯಾಸವಾಗಿ ಆತನಿಗಿಷ್ಟವಾದ ಆಕಾಶನೀಲಿ
ಬಣ್ಣದ ಸೀರೆ ಸಿಕ್ಕಿತು... ನೆರಿಗೆ ಹಾಕುವಾಗ ಹೊಕ್ಕಳು ತಾಗಿ ನನ್ನ ಮೈಯಿ ಜುಮ್ಮೆಂದಿತು...
ಯಾವಾಗಲೂ ಬಳಸದ ತುಟಿ ಲಿಪ್ಸ್ಟಿಕ್ ಬೇಡುತ್ತಿತ್ತು.... ರೆಡಿಯಾಗಿ ಒಮ್ಮೆ ಕನ್ನಡಿ ಕಡೆ
ನೋಡಿದೆ... ನನ್ನ ನೋಡಿ ನಾನೇ ನಾಚಿದೆ... ಇದೇ ನಾಚಿಕೆ ಆತನಿಗೆ ಇಷ್ಟವಲ್ಲವಾ..?
ಹೌದು ಎನಿಸಿ...ಇನ್ನಷ್ಟು ನಾಚಿದೆ... ನನ್ನ ನಾಚಿಕೆಯೇ ನನ್ನ ವ್ಯಕ್ತಿತ್ವ ಎಂಬ ಹೆಮ್ಮೆ ಮೂಡಿತ್ತು, ಹೊರಡಲು ಅನುವಾಗ ತೊಡಗಿದೆ, ಅರೆ ಮಗು , ನನ್ನ ಕಂದಮ್ಮ ......!! ಅಯ್ಯೋ ಎಂತಹ ಮರೆಗುಳಿ ನಾನು ಮೊನ್ನೆ ತಾನೇ ನನ್ನ ಎರಡುವರ್ಷದ ಪಾಪುವನ್ನು ನನ್ನ ತಾಯಿ ಕರೆದುಕೊಂಡು ಹೋಗಿದ್ದು ಮರೆತೇ ಹೋಗಿತ್ತು, ಅವತ್ತು ನನ್ನ ತಾಯಿಯನ್ನು ಕಂಡ ಕಂದಮ್ಮ ನನ್ನ ಅಪ್ಪುಗೆಯನ್ನು ಬಿಡಿಸಿಕೊಂಡು, ನಗು ನಗುತ್ತಾ ಅಜ್ಜಿಯ ಜೊತೆ ಹೊರಟಿತ್ತು , ಹಾಗಾಗಿ ಪತಿ ಇಲ್ಲದ ದೊಡ್ಡ ಮನೆಯಲ್ಲಿ ನಾನೇ ಮಹಾರಾಣಿ .ಯಾಗಿದ್ದೆ , ಸಿದ್ದವಾಗುತ್ತಿದ್ದ ಸಮಯದಲ್ಲಿ "ನಿಲ್ಲು ನಿಲ್ಲೇ ಪತಂಗಾ ಬೇಡ ಬೇಡಾ ಬೆಂಕಿಯ ಸಂಗ" ಎಂಬ ಹಾಡು ಎಫ್.ಎಂ . ನಿಂದ ಬರುತ್ತಿತ್ತು,
ಯಾಕೋ ಕಾಣೆ ಹೋಗುವುದು ಬೇಡಾ ಅಂತಾ ಒಮ್ಮೊಮ್ಮೆ ಅನ್ನಿಸುತ್ತಿತ್ತು
ಆದರೆ ..... ಮನಸು !!!ಹುಚ್ಚು ಕುದುರೆಯ ಬೆನ್ನೇರಿತ್ತು .
ಆದರೆ ಅಷ್ಟರಲ್ಲಿ ಬಂತು ನನ್ನ ಪತಿಯ ಫೋನ್,
ಚಿನ್ನು ಇನ್ನೂ ಹೊರಟಿಲ್ವಾ , ? ಬೇಗ ಹೋಗಮ್ಮಾ ತಡವಾದೀತು . ಎಂಬ ಒತ್ತಾಯದ ಸೂಚನೆ ಅವರಿಂದ ,,ಹೊರಡಲು ಪೂರಕವಾದ ವಾತಾವರಣ ತನ್ನಿಂದ ತಾನೇ ಸೃಷ್ಟಿಯಾಗಿ ಹೊರಡಲು ಪ್ರೇರಣೆ ನೀಡಿತು,
ಹೊರಡುವ ಆತುರದಲ್ಲಿ ಆ ಹಾಡನ್ನು ನಿಲ್ಲಿಸಿ ಮನೆ ಯಿಂದ ಆಚೆ ಹೊರಟೆ .
ದಾರಿಯಲ್ಲಿ ನಾನು ಕಾರ್ ಡ್ರೈವ್ ಮಾಡುತ್ತಾ ಬರುತ್ತಿರಲು , ಹೊಸ ತಂಗಾಳಿ ಬೀಸುತ್ತಿತ್ತು, ಕಾರಿನ ಒಳಗೆ " ನೀ ನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ " ಹಾಡು ಬರುತ್ತಿತ್ತು, ಆ ಸುಂದರ ಹಾಡನ್ನು ಅವನೇ ನನಗಾಗಿ ಹಾಡುತ್ತಿರುವಂತೆ ಕಲ್ಪಿಸಿಕೊಂಡು ಮುಖದಲ್ಲಿ ಮಂದಹಾಸ ಬೀರಿದೆ ....... ಸೂರ್ಯನಿದ್ದ ಆಗಸದಲ್ಲಿ ಯಾಕೋ ಕಪ್ಪು ಮೋಡಗಳು ಗೋಚರಿಸಿ ಮಳೆಯ ಮುನ್ಸೂಚನೆ ನೀಡಿದ್ದವು . ಕೆಲವೇ ನಿಮಿಷಗಳಲ್ಲಿ ಅವನ ಮನೆಯ ಮುಂದೆ ಹಾಜರಾದೆ ನಾನು.
ಮನೆಯ ಆವರಣ ಹೊಕ್ಕ ನನ್ನನ್ನು ನಗು ನಗುತ್ತಾ ಸ್ವಾಗತಿಸಿದ ಆ ಹುಡುಗ , ಆ ಮನೆಯ ಹೊರ ಆವರಣ ಪ್ರಶಾಂತವಾಗಿತ್ತು, ಬಣ್ಣ ಬಣ್ಣದ ಹೂಗಳು ಅರಳಿ ನಗುತ್ತಿದ್ದವು , ಕಡು ನೀಲಿ ಜೀನ್ಸ್ ಹಾಗೂ ಬಾಟಲ್ ಗ್ರೀನ್ ಶರ್ಟ್ ಹಾಕಿದ್ದ ಅವನನ್ನು ಅಚ್ಚರಿಯಿಂದ ನೋಡುತ್ತಾ ನಿಂತೇ, ಅರೆ ಇದೆ ಡ್ರೆಸ್ ಹಾಕಿಯಲ್ಲವೇ ನನ್ನ ಕಾಲೆಜುದಿನಗಳಲ್ಲಿ ಹೋಗಿದ್ದ ಬೇಕಲ್ ಫೋರ್ಟ್ ಪ್ರವಾಸದಲ್ಲಿ ಇವನು ಇದ್ದದ್ದು, ಅಂದು ಇವನ ಸ್ಮಾರ್ಟ್ ಡ್ರೆಸ್ ನೋಡಿ ಹಲವು ಹುಡುಗಿಯರು ಪ್ರಪೋಸ್ ಮಾಡಿದ್ದು , ಆಗ ನಾನು ಹೊಟ್ಟೆ ಕಿಚ್ಚು ಪಟ್ಟಿದ್ದು .....!! ನೆನಪುಗಳು ಎಲ್ಲವೂ ಕಣ್ಣ ಮುಂದೆ ಮತ್ತೊಮ್ಮೆ ತೆರೆದು ಕೊಂಡವು, ಹಳೆಯ ನೆನಪುಗಳ ಸರದಾರನಾದ ಅವನನ್ನೇ ನೋಡುತ್ತಾ ನಿಂತೇ .
ಅರೆ ಇದೇನು ಹುಡುಗಿ ಹಾಗೆ ನಿಂತೇ , ಹೊಸಬಳಂತೆ , ಬಾ ಒಳಗೆ , ಎಂದು ಕೈ ಹಿಡಿದು ಕೊಂಡು ಒಳಗೆ ಕರೆದು ಕೊಂಡುಹೋದ , ಒಳಗಡೆ ಮೆಲ್ಲಗೆ ಹಿತವಾದ ಸಂಗೀತ ಬರುತ್ತಿತ್ತು, ಒಳಗಡೆ ಮುಜುಗರದಿಂದ ಕುಳಿತು ನನ್ನ ಪತಿ ನೀಡಿದ್ದ ಫೈಲ್ ಅವನಿಗೆ ನೀಡಿದೆ . ತಕ್ಷಣವೇ ಅವನು ಅದಕ್ಕೆ ತನ್ನ ಅನುಮೋದನೆ ನೀಡಿ ನನ್ನ ಪತಿಯ ವ್ಯವಹಾರಕ್ಕೆ ಇದ್ದ ಕಾನೂನು ತೊಡಕನ್ನು ನಿವಾರಿಸಿದ್ದ , ಅವನಿಗೆ ಥ್ಯಾಂಕ್ಸ್ ಹೇಳಿ ಹೊರಡಲು ಸಿದ್ದಳಾದೆ ....... ಆದರೆ ಮನಸು !!!
ಅಷ್ಟರಲ್ಲಿ ನೋಡು ಹುಡುಗಿ ಹೊರಗಡೆ ಜೋರಾಗಿ ಮಳೆ ಬರ್ತಾ ಇದೆ, ಮಳೆ ನಿಂತ ಮೇಲೆ ಹೊರಡಬಹುದು , ಬಹಳ ದಿನಗಳ ನಂತರ ನಾನೂ ಸಹ ಫ್ರೀಯಾಗಿ ಇದ್ದೇನೆ, ಮನೆಯಲ್ಲಿ ಯಾರೂ ಇಲ್ಲಾ ನನಗೂ ಬೋರ್ ಆಗಿದೆ , ಬಾ ಇಬ್ಬರೂ ಫ್ರೀ ಯಾಗಿ ಹರಟೆ ಹೊಡೆಯೋಣ, ಮಳೆ ನಿಂತ ನಂತರ ಇಬ್ಬರೂ ಹೊರಗಡೆ ಊಟ ಮಾಡೋಣ, ಅಲ್ಲಿಯವರೆಗೂ ತಗೋ ಎನ್ನುತ್ತಾ ಕಲ್ಲಂಗಡಿ ಚೂರುಗಳನ್ನು ಹಾಗು ಒಂದು ಲೋಟದಲ್ಲಿ ಶರಬತ್ತು ನೀಡಿದ . ಅದೂ ಇದೂ ಮಾತನಾಡುತ್ತಾ ಸ್ವಲ್ಪ ಸಮಯ ಕಳೆಯಿತು,
ಬಾರೆ ಹುಡುಗಿ ನಿನಗೆ ನಮ್ಮ ಮನೆ ತೋರುತ್ತೇನೆ ಎಂದು ಕೈ ಹಿಡಿದು ಮನೆಯನ್ನೆಲ್ಲಾ ತೋರಿಸಿದ , ಮನೆಯಲ್ಲಿ ಅವನ ಹವ್ಯಾಸಕ್ಕೆ ತಕ್ಕಂತೆ ವಿವಿಧ ಬಗೆಯ ಪುಸ್ತಕಗಳು, ಅವನೇ ಬಿಡಿಸಿದ ಸುಂದರ ಚಿತ್ರಗಳು, ಅವನು ತೆಗೆದ ಅದ್ಭುತ ಫೋಟೋಗಳು, ಮೂಲೆಯಲ್ಲಿ ಅವನು ಸದಾ ಪ್ರೀತಿಸಿ ನುಡಿಸುವ ಸಿತಾರ್ , ನನಗೆ ಹಾಗು ಅವನಿಗೆ ಇಬ್ಬರಿಗೂ ಇಷ್ಟವಾದ ಸಂಗೀತದ ಸಿ.ಡಿ . ಗಳು , ಜೊತೆಗೆ ಅವನು ಕವಿತೆ ಬರೆಯುತ್ತಿದ್ದ ಪುಸ್ತಕ ನನ್ನ ಗಮನ ಸೆಳೆದವು . ಹೊರಗಡೆ ಮಳೆ ದೋ ಎಂದು ಬರುತ್ತಲೇ ಇತ್ತು, ಸಣ್ಣಗೆ ಬರುತ್ತಿದ್ದ ಹಾಡಿನಲ್ಲಿ, "ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ '' ಎನ್ನುತ್ತಾ ಎಸ್ .ಪಿ. ಬಾಲು ಹಾಡುತ್ತಿದ್ದರು , ಹಿತವಾದ ಸಂಗೀತ ಮನೆಯ ಎಲ್ಲಾ ಕೊಣೆ ಗಳಲ್ಲೂ ಕೇಳುತ್ತಿತ್ತು, ಮನೆಯನ್ನು ಸಂಪೂರ್ಣ ನೋಡಿ ಮತ್ತೆ ಮನೆಯ ಹಾಲ್ ನಲ್ಲಿ ಬಂದು ಕುಳಿತೆವು,
ಅಷ್ಟರಲ್ಲಿ ಅವನಿಗೆ ಫೋನ್ ಬಂತು , ಒಂದು ನಿಮಿಷ ಎಂದು ಹೇಳಿ , ಫೋನ್ ಕೈಯಲ್ಲಿ ಹಿಡಿದು ಆಚೆ ನಡೆದ ಹುಡುಗ , ನಾನು ಅಲ್ಲೇ ಇದ್ದ ಆಲ್ಬಮ್ ನಲ್ಲಿ ಫೋಟೋಗಳನ್ನು ನೋಡುತ್ತಾ ಕುಳಿತೆ, ಆಲ್ಬಮ್ ನಲ್ಲಿದ್ದ ಹಲವಾರು ಫೋಟೋಗಳು , ನಮ್ಮ ಕಾಲೇಜಿನ ದಿನದ್ದಾಗಿದ್ದವು , ಸ್ವಲ್ಪ ಹೊತ್ತು ನೋಡುತ್ತಾ ಅಲ್ಲೇ ಇದ್ದ ಅವನು ಕವಿತೆ ಬರೆದಿದ್ದ ಪುಸ್ತಕ ಓದುತ್ತಿದ್ದೆ , ನಾಚಿಕೆ ಬಗ್ಗೆ ಬರೆದಿದ್ದ ಹಲವು ಕವಿತೆಗಳು ಅಲ್ಲಿದ್ದವು,
"ಹುಣ್ಣಿಮೆಯ ರಾತ್ರಿಯ ಚಂದಿರ
ನನ್ನ ಹುಡುಗಿಯ ನಾಚಿಕೆಯ
ಸುಂದರ ಮೊಗವ ಕಂಡು
ಹೊಟ್ಟೆ ಕಿಚ್ಚು ಪಟ್ಟು
ಆಗಸದಿಂದ ಪೇರಿ ಕಿತ್ತಿದ್ದ "
ಯಾಕೋ ಗೊತ್ತಿಲ್ಲಾ ಆ ಕವಿತೆಯ ಸಾಲುಗಳನ್ನು ನೋಡುತ್ತಾ ಮತ್ತೊಮ್ಮೆ ಕಲ್ಪನಾ ಲೋಕಕ್ಕೆ ಜಾರಿದೆ,
ಅಯ್ಯೋ ಹುಡುಗಿ ವಾಸ್ತವಕ್ಕೆ ಬಾ ನಾನು ಬಂದು ಎಷ್ಟು ಹೊತ್ತಾಯ್ತು, ಅನ್ನುತ್ತಾ ನಗು ನಗುತ್ತಾ ಎದುರು ನಿಂತಿದ್ದ ಹುಡುಗ , ಆ ನಗೆಯಲ್ಲಿ ತುಂಟತನವಿತ್ತು, ಆದರೆ ಕಣ್ಣುಗಳಲ್ಲಿ ...?
ಲೇ ಹುಡುಗಿ ನಿನ್ನ ನಾಚಿಕೆಯ ಅಭಿಮಾನಿ ನಾನು , ದಿನಕ್ಕೊಮ್ಮೆಯಾದರೂ ನಿನ್ನ ನಾಚಿಕೆ ನೋಡಬೇಕು.. ಎಂಬ ಹಂಬಲ ನನ್ನದು ಒಮ್ಮೆ ನಾಚಲಾರೆಯ ಎಂಬ ಬೇಡಿಕೆ ಕಾಣುತ್ತಿತ್ತು,
ಏನೇ ಆಗ್ಲಿ ಹುಡುಗಿ ನಿನ್ನ ನಾಚಿಕೆಗೆ ಬೆಲೆ ಕಟ್ಟಲಾರೆ ಎನ್ನುತ್ತಾ ಹತ್ತಿರಬಂದು ಕಿವಿಯಲ್ಲಿ ನಿನ್ನ ನಾಚಿಕೆಯ ಅಭಿಮಾನಿ ನಾನು ಕಣೆ..." ಎಂದವನು ಮುಂದೆ ನಗುತ್ತಾ ನಿಂತಾ .
ಆ ಕಣ್ಣುಗಳನ್ನು ನೋಡುತ್ತಾ ನನಗರಿವಿಲ್ಲದಂತೆ ನಾಚಿಕೆಯಾಯಿತು . ಅದನ್ನು ಕಂಡ ಅವನ ಮುಖ ಭಾವ ಸಂತಸದ ಹೊನಲು ಹರಿಸಿತ್ತು.
ಆದರೆ ಅಷ್ಟರಲ್ಲಿ ಫಳ್ ಫಳ್ ಎಂಬ ಮಿಂಚು , ಮಿಂಚಿತು , ಮನೆಯಲ್ಲಿನ ಕರೆಂಟ್ ಆಫ್ ಆಯಿತು, ಹೆದರ ಬೇಡವೇ ಹುಡುಗಿ ಎನ್ನುತ್ತಾ ಅವನು ಸ್ವಲ್ಪ ದೂರದಲ್ಲಿದ್ದ ಇನ್ವರ್ಟರ್ ಸ್ವಿಚ್ ಆನ್ ಮಾಡಿದ, ಮಂದವಾದ ಹಿತವಾದ ಬೆಳಕು ಮನೆಯನ್ನು ಆವರಿಸಿತು . ಆದರೆ ಮನೆಯಲ್ಲಿ ಕೊಳಲಿನ ಹಿತವಾದ ಮೆಲ್ಲನಯ ಸಂಗೀತ ಹರಿದಾಡುತ್ತಿತ್ತು, ಅದಕ್ಕೆ ಮಳೆಯ ಹನಿಗಳ ತಾಳ ಸಾಥ್ ನೀಡಿತ್ತು, ಮನದಲ್ಲಿ ಮೋಹನ ರಾಗ ಉಗಮವಾಗುತ್ತಿತ್ತು. ಮತ್ತೊಮ್ಮೆ ಫಳ್ ಎಂದ ಮಿಂಚು ,ಹಾಗು ಭೂಮಿಯನ್ನು ಅಲುಗಾಡಿಸುವ ಶಬ್ಧ ಮಾಡುತ್ತಾ ಭಾರೀ ಗುಡುಗು ಅಪ್ಪಳಿಸಿತು ,
ನಾನು ಬೆಚ್ಚಿಬಿದ್ದು , ಚೀರುತ್ತಾ ನನಗರಿವಿಲ್ಲದೆ ಅವನ ಅಪ್ಪುಗೆಯಲ್ಲಿ ಸೇರಿಕೊಂಡೆ , ಅಯ್ಯೋ ಹುಡುಗಿ ಏಳು ಎದ್ದೇಳು ಇಷ್ಟು ದೊಡ್ದವಳಾದ್ರೂ ಇನ್ನೂ ಹೋಗಿಲ್ವಾ ಗುಡುಗಿನ ಹೆದರಿಕೆ ನಿನಗೆ , ಹೆದರ ಬೇಡ ನಾನಿದ್ದೇನೆ , ಎನ್ನುತ್ತಾ ತಗೋ ತಣ್ಣಗೆ ಶರಬತ್ತು ಕುಡಿ ಎನ್ನುತ್ತಾ ಸನಿಹ ಬಂದು ಸಾಂತ್ವನ ಗೊಳಿಸಿದ . ಅವನು ನೀಡಿದ ಸಾಂತ್ವನದ ಮಾತು ಹಿತವಾಗಿ ಸ್ವಲ್ಪ ಸುಧಾರಿಸಿಕೊಂಡೆ . ನನ್ನಿಂದ ಸ್ವಲ್ಪವೇ ದೂರ ಕುಳಿತು ತನ್ನ ಮಗುವಿನ ಆಟ , ತುಂಟಾಟದ ಬಗ್ಗೆ ಹೇಳುತ್ತಿದ್ದ ,
ಅಷ್ಟರಲ್ಲಿ ಮಳೆಯ ಆರ್ಭಟ ಹೆಚ್ಚಾಗ ತೊಡಗಿತು, ಬಿರುಗಾಳಿ ಅದಕ್ಕೆ ಸಾಥ್ ನೀಡಿತ್ತು, ನಮ್ಮ ಮಾತುಕತೆ, ನಗು , ಸರಾಗವಾಗಿ ಸಾಗಿತ್ತು, ಅಷ್ಟರಲ್ಲಿ ಮತ್ತೊಮ್ಮೆ ಎರಗಿ ಬಂತು ಸಿಡಿಲು
ಫಳ್ , ಫಳ್ ಎಂಬ ಜೊತೆಯಲ್ಲೇ ಭಯಂಕರ ಸಿಡಿಲು ಅಪ್ಪಳಿಸಿತು, ಹೆದರಿದ ನಾನು ಓಡಿಹೋಗಿ ನನಗರಿವಿಲ್ಲದಂತೆ ಅವನನ್ನು ಅಪ್ಪಿಕೊಂಡೆ , ಅವನ ಕೈ ನನ್ನ ತಲೆಯನ್ನು ಮೃದುವಾಗಿ ಸವರುತ್ತಿತ್ತು, .... ಮನಸು ಈ ಸ್ಪರ್ಶ ಸುಖಕ್ಕೆ ಕರಗುತ್ತಿತ್ತು ....... ಅವನ ತುಡಿತ , ಎದೆ ಬಡಿತ ಹೊಸ ರಾಗ ಹಾಡಲು ಸಿದ್ದ ವಾಗುತ್ತಿತ್ತು, ಆದರೆ .......... !
"ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು" ಹಾಡು ನನ್ನ ಮೊಬೈಲ್ ನಿಂದ ಬಂತು, ಆ ಹುಡುಗನ ಅಪ್ಪುಗೆ ಬಿಡಿಸಿಕೊಂಡು , ಮೊಬೈಲ್ ಬಳಿ ಓಡಿ ಬಂದು ನನ್ನ ಪತಿಯ ಕಾಲ್ ರಿಸೀವ್ ಮಾಡಿದೆ, ಹಾಗೆ ಸ್ಪೀಕರ್ ಫೋನ್ ಆನ್ ಮಾಡಿದೆ .
ಅತ್ತಲಿಂದ ಪತಿ ರಾಯರು " ಚಿನ್ನು ಎಲ್ಲಿದ್ದೀ , ನಮ್ಮೂರಲ್ಲಿ ಭಾರಿ ಬಿರುಗಾಳಿ ಯಿಂದ ಕೂಡಿದ ಮಳೆ, ಎಂದೂ ಸಿಡಿಲಿಗೆ ಒಬ್ಬ ವ್ಯಕ್ತಿ ಬಲಿ ಅಂತಾ ಟಿ .ವಿ . ಯಲ್ಲಿ ಬರ್ತಾ ಇದೆ, ನಿನಗೆ ಮೊದಲೇ ಗುಡುಗು ಎಂದರೆ ಭಯ ಅದಕ್ಕೆ ಎಲ್ಲಿ ಒಬ್ಬಳೇ ಮನೆಯಲ್ಲಿ ಹೆದರಿಕೊಂಡು ಇರ್ತೀಯ ಅಂತಾ ಫೋನ್ ಮಾಡಿದೆ, ನಾನು ನಿನ್ನ ತುಂಬಾ ಮಿಸ್ ಮಾಡ್ಕೋತಾ ಇದ್ದೀನಿ ಕಣೆ , ನಿನ್ನ ನೋಡುವ ಆಸೆ ಆಗ್ತಾ ಇದೆ ಎನ್ನತ್ತಾ ರಮಿಸಿದ ಪತಿರಾಯ.
ನಾನು ಅವರ ಗೆಳೆಯರ ಮನೆಯಲ್ಲಿ ಇರುವುದಾಗಿ ತಿಳಿಸಿ , ಅವರ ಕೆಲಸ ಪೂರ್ಣವಾದ ಬಗ್ಗೆ ತಿಳಿಸಿದೆ, ಅವರು ಸಂತಸಗೊಂಡು , ಹುಡುಗನ ಜೊತೆ ಮಾತನಾಡಿದರು, ಅವನೂ ಸಹ ಅವರ ವ್ಯವಹಾರದ ಬಗ್ಗೆ ಇದ್ದ ಕಾನೂನು ತೊಡಕನ್ನು ನಿವಾರಿಸಿರುವುದಾಗಿ ತಿಳಿಸಿದ .
ನಂತರ ಬಹಳ ಸಂತೋಷದಿಂದ ನನ್ನ ಪತಿ ಮತ್ತೊಮ್ಮೆ ನನ್ನ ಹತ್ತಿರ ಮತ್ತೊಮ್ಮೆ ಮಾತನಾಡುತ್ತಾ , ನೋಡೂ ಚಿನ್ನು, ಮಳೆ ಪೂರ್ಣವಾಗಿ ನಿಲ್ಲುವವರೆಗೂ ನಿನ್ನ ಗೆಳೆಯರ ಮನೆಯಲ್ಲೇ ಇರು, ಬಹಳ ಒಳ್ಳೆಯ ಸಭ್ಯ ವ್ಯಕ್ತಿ ನಿನ್ನ ಗೆಳೆಯರು, ಅಂತಹವರ ಮನೆಯಲ್ಲಿದ್ದರೆ ಯಾವ ಆತಂಕವೂ ಇರೋದಿಲ್ಲಾ, ನಿಮ್ಮಿಬ್ಬರ ಗೆಳೆತನದ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ , ನಿಮ್ಮಿಬ್ಬರ ಗೆಳೆತನ ಹೀಗೆ ಇರಲಿ ನಾನು ನಾಳೆಯೇ ಹೊರಟು ಬರುತ್ತೇನೆ ಅಂತಾ ಹೇಳಿ ಫೋನ್ ಇಟ್ಟರು .
ನನ್ನ ಪತಿಯ ಫೋನ್ ಮಾತುಗಳು ಇಬ್ಬರಿಗೂ ಚಾಟಿ ಬೀಸಿತ್ತು, ಅವರು ಆಡಿದ ಪ್ರತೀ ಮಾತುಗಳು , ಪ್ರತೀ ಪದಗಳು, ನಮ್ಮಿಬ್ಬರ ಸುತ್ತಾ ಗಿರಾಕಿ ಹೊಡೆಯುತ್ತಾ ಗಹಗಹಿಸಿ ನಗುತ್ತಾ ನಮ್ಮಿಬ್ಬರನ್ನು ಅಪಹಾಸ್ಯ ಮಾಡುತ್ತಿರುವಂತೆ ಭಾಸವಾಯಿತು .
ದಿಕ್ಕು ತೋಚದೆ ಸುಮ್ಮನೆ ನಿಂತುಬಿಟ್ಟೆ .... ಮನದಲ್ಲಿನ ಹೊಯ್ದಾಟ ನನ್ನ ಉತ್ಸಾಹವನ್ನು ಅಡಗಿಸಿತ್ತು . ಹುಡುಗ ನನ್ನತ್ತ ನೋಡಲಾರದೆ ತಲೆ ತಗ್ಗಿಸಿ, ಮೆದು ಮಾತಿನಲ್ಲಿ ನನ್ನನ್ನು ಕ್ಷಮಿಸು ಹುಡುಗಿ, ನಿನ್ನ ಪತಿಯ ಮನಸು ಇಷ್ಟೊಂದು ವಿಸ್ತಾರವಾದದ್ದು ಎಂದು ತಿಳಿದಿರಲಿಲ್ಲ, ನಮ್ಮಿಬ್ಬರ ಗೆಳೆತನದ ಬಗ್ಗೆ ತಮ್ಮದೇ ಆದ ಸಭ್ಯತೆ ಪ್ರದರ್ಶಿಸಿ ನಮ್ಮ ಗೆಳೆತನಕ್ಕೆ ಅಳಿಸಲಾಗದ ಮಿಂಚಿನ ರೇಖೆ ಹಾಕಿ ಕೊಟ್ಟಿದ್ದಾರೆ, ನಮ್ಮಿಬ್ಬರ ಸಂಬಂಧದ ಎಲ್ಲೇ ನನಗೆ ಅರ್ಥ ಆಯಿತು, ಎಂದು ಗದ್ಗತಿತನಾಗಿ ನನ್ನ ಮುಂದೆ ಮಂಡಿಯೂರಿ ಕುಳಿತ ........!
ಆದರೆ ನನ್ನ ಮನಸು ತಪ್ಪು ನಿನ್ನದೇ ಅಲ್ಲವೋ ಹುಡುಗಾ ನನ್ನದೂ ಕೂಡಾ ಎನ್ನುತ್ತಾ ಸಾರಿ ಸಾರಿ ಹೇಳುತ್ತಿತ್ತು, ಆದರೆ ಹೃದಯದಲ್ಲಿ ಉಳಿದ ಭಾವನೆಗಳು ಮಾತಾಗಿ ಬರಲೇ ಇಲ್ಲಾ, ಕಣ್ಣಿಂದ ಕಣ್ಣೀರ ಹನಿಗಳು ಬಿಸಿ ಹನಿಗಳಾಗಿ ನೆಲಕ್ಕೆ ಉರುಳುತ್ತಿದ್ದವು, ನನಗರಿವಿಲ್ಲದಂತೆ ಅವನ ಕಣ್ಣ ನೋಟದಿಂದ ದೂರ ಸರಿದೆ, ಹೃದಯವೂ ಕೂಡ ಅವನ ಕಣ್ ಸೆಳೆತ ಬಯಸದೆ ಮೌನವಾಗಿ ರೋದಿಸುತ್ತಿತ್ತು, ಹೊರಗಿನ ಮಳೆ ಇಳೆಯ ಬಾಯಾರಿಕೆ ನೀಗಿಸಿ ಶಾಂತವಾಗಿತ್ತು, ಇತ್ತ ನನ್ನ ಬಾಳಿನಲ್ಲಿ ಎರಗಿಬಂದ ಈ ತಿರುವು ಬರ ಸಿಡಿಲಿನಂತೆ ಅಪ್ಪಳಿಸಿತ್ತು .
ಹುಡುಗ ಹೊರಡುವೆ ನಾನು ಎಂದು ಹೊರಟು ನಾಲ್ಕು ಹೆಜ್ಜೆ ಹಾಕಿದೆ ನಾನು, ಅಷ್ಟರಲ್ಲಿ ಹುಡುಗನ ಮೊಬೈಲ್ ನಿಂದ "ಪ್ರ್ರೀತಿನೆ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳಿಗೆ" ಎಂಬ ಹಾಡಿನೊಡನೆ ಕರೆ ಬಂತು,
ಹತ್ತಿರ ಹೋಗಿ ನೋಡಿದೆ ಹುಡುಗನ ಪತ್ನಿ ಕರೆ ಮಾಡುತ್ತಿದ್ದಳು .. .... !!!!!!