|
ಕಾಫಿ ತೋಟದ ನಡುವೆ ಸಾಗಿದ ರಸ್ತೆ |
ಚಿಕ್ಕಮಗಳೂರಿನಲ್ಲಿ ಈ ಟೌನ್ ಕ್ಯಾಂಟೀನ್ ತನ್ನದೇ ಆದ ಹೆಗ್ಗಳಿಕೆ ಹೊಂದಿದೆ ,
ಇಲ್ಲಿನ ತಿಂಡಿ ತಿನಿಸಿನ ಬಗ್ಗೆ ಅಂತರ್ಜಾಲದಲ್ಲಿ ಬಹಳಷ್ಟು ಜನ ಬರೆದಿದ್ದಾರೆ ,
ಇಲ್ಲಿನ ವಿವಿಧ ಬಗೆಯ ದೊಸೆಗಳಿಗೆ ಬಹಳ ಜನ ಅಭಿಮಾನಿಗಳಿದ್ದಾರೆ, ಆದರೂ ಟೌನ್
ಕ್ಯಾಂಟೀನ್ ತನ್ನದೇ ರೀತಿಯಲ್ಲಿ ಸದ್ದಿಲ್ಲದೇ ಇಲ್ಲಿಗೆ ಬರುವ ಪ್ರವಾಸಿಗಳಿಗೆ
ಒಳ್ಳೆಯ ತಿಂಡಿ ತಿನಿಸು ನೀಡುತ್ತಿದೆ . ನಾನಂತೂ ಚಿಕ್ಕಮಗಳೂರಿಗೆ ಬಂದ್ರೆ ಇಲ್ಲಿಗೆ
ಬರದೆ ಹೋಗೋದಿಲ್ಲ, ಇಲ್ಲಿ ಗೆ ಬಂದ ನಾವು ಹೊಟ್ಟೆ ತುಂಬಾ ಉಪಹಾರ ಮೈಯ್ದು ,
ಪಾರ್ಸೆಲ್ ಮಾಡಿಸಿಕೊಂಡು ಮುಂದಿನ ಪಯಣಕ್ಕೆ ಸಜ್ಜಾದೆವು ... ನಮ್ಮ ಪಯಣ ಸಾಗಿತು
'ಮುಳ್ಳಯ್ಯನ ಗಿರಿ'' ಕಡೆಗೆ . ....!!! ಮತ್ತೊಂದು ವಿಚಾರ ಚಿಕ್ಕಮಗಳೂರಿನಲ್ಲಿ ನಮಗೆ ಪರಿಚಯವಾದ ಚಿನ್ಮಯ್ ಭಟ್ ಗೆಳೆಯ "ದರ್ಶನ್" ನಮ್ಮ ಜೊತೆಗೂಡಿದರು , ಪ್ರವಾಸಕ್ಕೆ ಮತ್ತಷ್ಟು ಕಳೆ ಬಂದಿತು.
|
ಹಸಿರ ಹೊದ್ದ ಭೂರಮೆ |
ಚಿಕ್ಕಮಗಳೂರಿನಿಂದ ಮುಳ್ಳಯ್ಯನ ಗಿರಿಗೆ ೨೨ ಕಿಲೋಮೀಟರ್ ದೂರವಿದೆ, ಕಡೂರು ರಸ್ತೆಯಲ್ಲಿ ಸಾಗಿ ಮುಂದೆ ದೊರೆಯುವ ಒಂದು ಕವಲು ರಸ್ತೆಯಲ್ಲಿ ಎಡಕ್ಕೆ ಚಲಿಸಿದರೆ ಮುಳ್ಳಯ್ಯನ ಗಿರಿಗೆ ಕರೆದೊಯ್ಯುತ್ತದೆ , ಕಿರಿದಾದ ರಸ್ತೆ ಕಾಫಿ ತೋಟದ ನಡುವೆ ಸಾಗುತ್ತದೆ , ಜೊತೆಯಲ್ಲೇ ಸುಂದರ ದೃಶ್ಯಗಳ ಸರಮಾಲೆ ಎಲ್ಲರನ್ನೂ ಸ್ವಾಗತಿಸುತ್ತದೆ .. ನಮ್ಮ ಕ್ಯಾಮರ ಹಸಿದ ಹುಲಿಯಂತೆ ಕಂಡ ಸುಂದರ ದೃಶ್ಯಗಳನ್ನು ಸೆರೆಹಿಡಿತು ಹೊಟ್ಟೆಗೆ ತುಂಬಿಕೊಳ್ಳುತ್ತಿತ್ತು .
|
ರಸ್ತೆ ತುಂಬಾ ಬರುವ ಇವರನ್ನು ದಾಟುವುದು ಹೇಗೆ |
ಸದ್ದಿಲ್ಲದೇ ನಮ್ಮ ಪಯಣ ಸುಂದರ ಗಿರಿ ಪಂಗ್ತಿಗಳ ನಡುವೆ ಸಾಗಿತ್ತು, ಕಿರಿದಾದ ರಸ್ತೆಯಲ್ಲಿ ಎದುರುಗಡೆ ಭಾರಿವಾಹನ ಬಂದಾಗ ನಮ್ಮ ಕಾರಿನ ಚಾಲಕ ಚಾಕಚಕ್ಯತೆ ಕಾರನ್ನು ಪಕ್ಕಕ್ಕೆ ಸರಿಸಿ ನುಗ್ಗಿಸಿ ಬಿಡುತ್ತಿದ್ದ , ಕೆಲವೊಮ್ಮೆ ಎರಡೂ ವಾಹನಗಳೂ ತಾವೇ ಹಿಂದೆ ತಾವೇ ಮುಂದೆ ಸರಿದು ಅನುಸರಣೆ ಮಾಡಿಕೊಂಡು ಚಲಿಸುತ್ತ ಮುಂದೆ ಹೋಗುತ್ತಿದ್ದವು
|
ಯಾವ ಕಲೆಗಾರನ ಕೈಚಳಕ ಇದು |
|
ಹಸಿರ ಮಡಿಲಲ್ಲಿ ಗಿರೀಶ್ |
ಪಯಣ ಸಾಗುತ್ತಾ ಮುಳ್ಳಯ್ಯನ ಗಿರಿ ಕಾಣುವ ಅಸೆ ಹೆಚ್ಚುತ್ತಿತ್ತು . ನಾವೋ ಒಳ್ಳೆಯ ದೃಶ್ಯ ಕಂಡೊಡನೆ ಕಾರು ನಿಲ್ಲಿಸಿ ಸ್ವಲ್ಪ ಕಣ್ಣು ತಂಪು ಮಾಡಿಕೊಂಡು , ಫೋಟೋ ಕ್ಲಿಕ್ಕಿಸಿ ಮುಂದು ವರೆಯುತ್ತಿದ್ದೆವು,ಕೆಲವೊಮ್ಮೆ ಬಹಳ ಹೊತ್ತು ನಿಲ್ಲುವ ಆಸೆ ಆಗುತ್ತಿತ್ತು, ಆದರೆ ಹಸಿರ ಬೆಟ್ಟಗಳ ಸವರಿಕೊಂಡು ಬರುತ್ತಿದ್ದ ತಣ್ಣನೆ ಗಾಳಿ ಮನಸನ್ನು ಪುಳಕ ಗೊಳಿಸುತ್ತಿತ್ತು, ಶುದ್ದ ಗಾಳಿಯನ್ನು ಸೇರಿಸಿಕೊಂಡ ದೇಹ ಉತ್ಸಾಹದಿಂದ ಪುಟಿಯುತ್ತಿತ್ತು, ಜೊತೆಗೆ ಕುರುಕಲು ತಿಂಡಿಯ ರುಚಿ ನಾಲಿಗೆ ಯ ಮೇಲೆ ನರ್ತನ ಮಾಡುತ್ತಿತ್ತು .
|
ಸುಂದರ ಅತೀ ಸುಂದರ |
|
ಒಂದು ಸುಂದರ ನೋಟ |
ಮತ್ತೆ ಮುಂದೆ ಹೋದ ನಮಗೆ ಶಿಖರದ ಮೇಲೆ ಮೇಲೆ ಹೋದಂತೆ ಪ್ರಕೃತಿಯ ಚಿತ್ರ ಬದಲಾಗುತ್ತಿತ್ತು , ಹಸಿರು ಗಿರಿ, ಕೆಂಪು ಮಣ್ಣಿನ ನೋಟ , ಕೆಂಪು ಮಣ್ಣಿನ ರಂಗೋಲಿ, ನೀಲಿಯ ಅಗಸ , ಜೊತೆಗೆ ನಲಿಯುತ್ತ ಸಾಗಿದ್ದ ಕೆಲವು ಪ್ರವಾಸಿಗರು ಇವುಗಳು ಒಳ್ಳೆಯ ದರ್ಶನ ನೀಡಿತು , ಇಂತಹ ಪರಿಸರದಲ್ಲಿ ಯಾರ ಮನಸು ಸಂತಸದಿಂದ ಅರಳೋಲ್ಲ ಹೇಳಿ, ನಾವೂ ಸಹ ನಮ್ಮ ವಯಸನ್ನು ಮರೆತು ನಲಿದಾಡಿದೆವು .
|
ಮುಳ್ಳಯ್ಯನ ಗಿರಿ ದರ್ಶನ |
|
ಮುಳ್ಳಯ್ಯನ ಗಿರಿಯ ಮತ್ತೊಂದು ನೋಟ |
ಅಗೋ ಅಲ್ಲೇ ಕಾಣಿಸಿತು ಮುಳ್ಳಯ್ಯನ ಗಿರಿ , ಹ ..... ಹೌದು ಮುಳ್ಳಯ್ಯನ ಗಿರಿಗೆ ಬಂದೆ ಬಿಟ್ಟೆವು, ಕಾರ್ ಇಳಿದರೆ ದೂರದಿಂದ ಒಳ್ಳೆಯ ನೋಟ ಸಿಕ್ಕಿತು, ಪ್ರವಾಸಕ್ಕೆಂದು ಬಂದ ಜನರು ಇರುವೆಗಳ ಹಾಗೆ ಬೆಟ್ಟವನ್ನು ಹತ್ತುತ್ತಿದ್ದರು, ಕೆಲವರು ಇಳಿಯುತ್ತಿದ್ದರು, ಹಸಿರ ಹೊದ್ದ ಗಿರಿಯ ಮೇಲೆ ಬಣ್ಣ ಬಣ್ಣ ದ ಬಟ್ಟೆ ತೊಟ್ಟ ಜನರು ಬಣ್ಣದ ರಂಗು ಬಳಿದಿದ್ದರು . ಗಿರಿಯ ಮೇಲೆ ಕಲ್ಲಿನಿಂದ ನಿರ್ಮಿತವಾದ ಒಂದು ಕೋಟೆಯ ಗೋಡೆ ಕಾಣುತ್ತಿತ್ತು . ಮೆಟ್ಟಿಲುಗಳನ್ನು ಹತ್ತುವ ಮೊದಲು ಕ್ಯಾಮರ ಲೆನ್ಸ್ ಜೋಪಾನ ಪಡಿಸುತ್ತಾ , ಮೆಟ್ಟಿಲುಗಳ ಬಳಿ ಸಾಗಿದೆವು,
|
ಗಿರಿಯ ಮೇಲೆ ವಿಶ್ರಾಂತಿ ಗೋವುಗಳಿಗೂ ಪ್ರೀತಿ |
|
ನಮ್ಮ ಕರುನಾಡ ಚೆಲುವು |
ಮೆಟ್ಟಿಲು ಹತ್ತುತ್ತಾ , ಸುಂದರ್ ಪ್ರಕೃತಿಯನ್ನು ಅಸ್ವಾದಿಸುತ್ತಾ , ನಡೆದೆವು ಅಲ್ಲೇ ಸನಿಹದಲ್ಲಿ ಗಿರಿಯ ಮೇಲೆ ಒಂದಷ್ಟು ಹಸುಗಳ ಗುಂಪು ವಿಶ್ರಾಂತಿ ಪಡೆದಿತ್ತು, ಪಕ್ಕದಲ್ಲೇ ಹಸಿರ ಹೊದ್ದ ಬೆಟ್ಟಕ್ಕೆ ನೀಲಿಯ ಅಗಸ ಹಿನ್ನೆಲೆ ನೀಡಿತ್ತು, ಯಾವುದೇ ಕಸ ವಿಲ್ಲದೆ ಶುಭ್ರವಾದ ಪರಿಸರ ಮನ ಸೂರೆಗೊಂಡಿತ್ತು
|
ಮಂಟಪ ದೊಳಗೆ ಕುಳಿತ ಬಸವ |
|
ಗುಹೆಯೊಳಗೆ ಗೆಳೆಯರು |
|
ಗುಹೆಯ ಒಂದು ನೋಟ |
ಮುಳ್ಳಯ್ಯನ ಗಿರಿಯ ತುದಿಯ ತಲುಪಿದ ನಾವು ಅಲ್ಲಿನ ಗದ್ದುಗೆ ಮಂಟಪದಲ್ಲಿನ ಬಸವ , ಗುಹೆ ಇವುಗಳನ್ನು ದರ್ಶನ ಮಾಡಿದೆವು, ಇಲ್ಲಿರುವುದು ಒಂದು ಶೈವ ಸಮುದಾಯಕ್ಕೆ ಸೇರಿದ ಒಂದು ಗದ್ದುಗೆ , ಹೆಚ್ಚಿನ ವಿಚಾರ ಎಲ್ಲಿಯೂ ದಾಖಲಾಗಿಲ್ಲ ಇತಿಹಾಸದ ಪುಟ ತಿರುವಿ ಹಾಕಿದರೂ ಮಹಿತಿ ದೊರಕಲಿಲ್ಲ, ಯಾವುದೇ ಶಾಸನ ದರ್ಶನ್ ಆಗಲಿಲ್ಲ , ಮಂಜಿನ ತೆರೆ ಬಿಸಿಲಿನ ಜೊತೆ ಆಟ ಆಡುತ್ತಿತ್ತು, ಸುಂದರ ಪರಿಸರದಲ್ಲಿ ಎಷ್ಟು ಹೊತ್ತು ಕಳೆದರೂ ತರು ಅಸೆ ಪೂರ್ತಿಯಾಗದು , ಆದ್ರೆ ಮತ್ತಷ್ಟು ನೋಡ್ ಬೇಕಿತ್ತು, ಒಲ್ಲದ ಮನಸಿನಿಂದ ಹೊರಟೆವು
|
ಮುಳ್ಳಯ್ಯನ ಗಿರಿಯಲ್ಲಿ ತೆಗೆದ ಕೊನೆಯ ಚಿತ್ರ |
ಮುಂದಿನ ಪಯಣ ಸೀತಾಳ ಮಲ್ಲಿಕಾರ್ಜುನ ಬೆಟ್ಟಕ್ಕೆ ನಮ್ಮ ತಂಡ ಚಲಿಸಿತು , ಹಾದಿಯುದ್ದಕ್ಕೂ ಮತ್ತೊಮ್ಮೆ ಹಸಿರ ಗಿರಿಯ ಸುಂದರ ದರ್ಶನ , ಮುಳ್ಳಯ್ಯನ ಗಿರಿಯ ನೋಟಗಳ ಚಿತ್ರ ನೆನಪು ಮಾಡಿಕೊಳ್ಳುತ್ತಾ , ಒಬ್ಬರನ್ನು ಒಬ್ಬರು ತಮಾಷೆ ಮಾಡುತ್ತಾ ತೆರಳಿದೆವು , ಸೀತಾಳ ಮಲ್ಲಿಕಾರ್ಜುನ ಸ್ವಾಮೀ ದೇಗುಲದ ಸಮೀಪ ನಮ್ಮ ಕಾರು ನಿಂತಿತು,
|
ದೇಗುಲ ದರ್ಶನ |
|
ಶ್ರೀ ಸೀತಾಳ ಮಲ್ಲಿಕಾರ್ಜುನ ಸ್ವಾಮಿ |
ಇಲ್ಲಿ ಬೇರೆಯದೇ ಪರಿಸರ ಬೇರೆ ಇತ್ತು, ಮುಳ್ಳಯ್ಯನ ಗಿರಿಗಿಂತ ಕೆಳ ಪ್ರದೇಶದಲ್ಲಿ ಇರುವ ಈ ದೇಗುಲ ನೋಡಲು ಯಾವುದೊ ಯೂರೋಪಿನ ಕಟ್ಟಡದಂತೆ ಕಂಡರೂ ಎರಡು ಗೋಪುರಗಳು ಇದು ದೇವಾಲಯ ಎಂಬುದನ್ನು ಸಾರುತ್ತವೆ . ಸುತ್ತಲಿನ ಹಸಿರ ಗಿರಿಗಳ ಕೋಟೆಯ ನಡುವೆ ಇಲ್ಲಿ ಶ್ರೀ ಸೀತಾಳ ಮಲ್ಲಿಕಾರ್ಜುನ ದೇವಾಲಯವಿದೆ , ದರ್ಶನ ಪಡೆದ ನಾವು ಹೊರಗೆ ಬಂದೆವು, ಹೊಟ್ಟೆ ಚುರುಗುಟ್ಟಿತ್ತು , ನಮ್ಮ ಮಧ್ಯಹ್ನ ದ ಆಹಾರ ಸೇವನೆ ಸನಿಹದಲ್ಲೇ ಇದ್ದ ಒಂದು ಗುಡ್ಡದ ಮೇಲೆ ಆಯಿತು, ಟೌನ್ ಕ್ಯಾಂಟೀನ್ ನಿಂದ ಪಾರ್ಸೆಲ್ ಮಡಿಸಿಕೊಂಡು ತಂದಿದ್ದ ತಿಂಡಿ ತಿಂದು , ಸ್ವಲ್ಪ ವಿಶ್ರಾಂತಿ ಪಡೆದೆವು, .... ಹೊರಡೋಣ ಮುಂದಕ್ಕೆ ಲೇಟ್ ಆಗುತ್ತೆ ಎಂದು ಗಿರೀಶ್ ಹೇಳಿದಾಗ ಗಡಿಬಿಡಿ ಯಿಂದ ಸಿದ್ದರಾಗಿ ಮುಂದೆ ಹೊರಟೆವು,
|
ಹಾದಿಯಲ್ಲಿ ಸಿಕ್ಕ ಸ್ಥಳೀಯ ಜನರು |
ಮುಂದಿನ ಪಯಣಕ್ಕೆ ಶುಭ ಕೋರುವಂತೆ ಸಾಗಿತ್ತು, ಕಾಫಿ ತೋಟದ ಕಾರ್ಮಿಕರ ಒಂದು ಗುಂಪು , ತಮ್ಮದೇ ಲೋಕದಲ್ಲಿ ವಿಹರಿಸುತ್ತಾ ತೆರಳಿದ್ದ ಅ ಜನರ ಗುಂಪು ಚಿಕ್ಕಮಗಳೂರಿನ ಜನರ ದರ್ಶನ ಮಾಡಿಸಿತ್ತು , ನಮ್ಮ ಪಯಣ .... ಹೊನ್ನಮ್ಮನ ಹಳ್ಳದ ಕಡೆಗೆ ಹೊರಟಿತ್ತು . .......... !